092 ಶಾಂತನೂಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಸಂಭವ ಪರ್ವ

ಅಧ್ಯಾಯ 92

ಸಾರ

ತನ್ನನ್ನು ಸೊಸೆಯಾಗಿ ಸ್ವೀಕರಿಸಬೇಕೆಂದು ಗಂಗೆಯು ಪ್ರತೀಪನಲ್ಲಿ ಕೇಳಿಕೊಳ್ಳುವುದು (1-15). ಗಂಗೆಗೆ ಮಾತುಕೊಟ್ಟಂತೆ ಪುತ್ರಕಾಮಿಯಾಗಿ ಸ್ತ್ರೀಯು ಬಂದರೆ ಅವಳು ಯಾರೆಂದು ಕೇಳದೇ ವಿವಾಹವಾಗಲು ಪ್ರತೀಪನು ಮಗ ಶಂತನುವಿಗೆ ಹೇಳುವುದು (16-23). ಶಂತನುವು ಪ್ರಶ್ನಿಸಬಾರದೆಂದು ಅವಳುಹಾಕಿದ ನಿಬಂಧನೆಯ ಮೇರೆಗೆ ಗಂಗೆಯನ್ನು ವಿವಾಹವಾಗುವುದು (24-43). ಗಂಗೆಯು ಹುಟ್ಟಿದ ಏಳು ಮಕ್ಕಳನ್ನು ಹುಟ್ಟಿದಾಗಲೇ ನೀರಿಗೆ ಹಾಕುವುದು (44-45). ಎಂಟನೆಯವನನ್ನು ನೀರಿಗೆ ಹಾಕಲು ಹೋಗುವಾಗ ತಡೆಯಲು ಗಂಗೆಯು ತನ್ನ ಮತ್ತು ಹುಟ್ಟಿದ ಮಕ್ಕಳ ಪರಿಚಯ ಹೇಳಿ ಕೊನೆಯವನನ್ನು ಉಳಿಸುವೆನೆಂದೂ ಆದರೆ ಹೊರಟುಹೋಗುವಳೆಂದೂ ನುಡಿದುದು (46-55).

01092001 ವೈಶಂಪಾಯನ ಉವಾಚ।
01092001a ತತಃ ಪ್ರತೀಪೋ ರಾಜಾ ಸ ಸರ್ವಭೂತಹಿತೇ ರತಃ।
01092001c ನಿಷಸಾದ ಸಮಾ ಬಹ್ವೀರ್ಗಂಗಾತೀರಗತೋ ಜಪನ್।।

ವೈಶಂಪಾಯನನು ಹೇಳಿದನು: “ಸರ್ವಭೂತಹಿತರತ ಪ್ರತೀಪನೆಂಬ ರಾಜನು ಗಂಗಾನದೀತೀರದಲ್ಲಿ ಅಸಾದ್ಯ ವರ್ಷಗಳ ಪರ್ಯಂತ ಜಪಿಸುತ್ತಿದ್ದನು.

01092002a ತಸ್ಯ ರೂಪಗುಣೋಪೇತಾ ಗಂಗಾ ಶ್ರೀರಿವ ರೂಪಿಣೀ।
01092002c ಉತ್ತೀರ್ಯ ಸಲಿಲಾತ್ತಸ್ಮಾಲ್ಲೋಭನೀಯತಮಾಕೃತಿಃ।।

ಆಗ ಶ್ರೀಯಂತೆ ರೂಪಿಣಿ ಗುಣೋಪೇತ ಗಂಗೆಯು ಅವನ ಮನಸೆಳೆಯುವ ರೂಪವನ್ನು ಧರಿಸಿ ನೀರಿನಿಂದ ಮೇಲೆದ್ದಳು.

01092003a ಅಧೀಯಾನಸ್ಯ ರಾಜರ್ಷೇರ್ದಿವ್ಯರೂಪಾ ಮನಸ್ವಿನೀ।
01092003c ದಕ್ಷಿಣಂ ಶಾಲಸಂಕಾಶಮೂರುಂ ಭೇಜೇ ಶುಭಾನನಾ।।

ಆ ದಿವ್ಯರೂಪಿ ಮನಸ್ವಿನಿ ಶುಭಾನನೆಯು ಅಧ್ಯಯನ ಮಾಡುತ್ತಿದ್ದ ರಾಜರ್ಷಿಯ ಶಾಲದ ರೆಂಬೆಯಂತಿದ್ದ ಬಲ ತೊಡೆಯಮೇಲೆ ಕುಳಿತುಕೊಂಡಳು.

01092004a ಪ್ರತೀಪಸ್ತು ಮಹೀಪಾಲಸ್ತಾಮುವಾಚ ಮನಸ್ವಿನೀಂ।
01092004c ಕರವಾಣಿ ಕಿಂ ತೇ ಕಲ್ಯಾಣಿ ಪ್ರಿಯಂ ಯತ್ತೇಽಭಿಕಾಂಕ್ಷಿತಂ।।

ಮಹೀಪಾಲ ಪ್ರತೀಪನು ಆ ಮನಸ್ವಿನಿಯನ್ನುದ್ದೇಶಿಸಿ ಹೇಳಿದನು: “ಕಲ್ಯಾಣಿ! ನಿನಗಾಗಿ ನಾನು ಏನು ಮಾಡಲಿ? ನಿನ್ನ ಆಕಾಂಕ್ಷೆಯಂತೆ ಯಾವ ಪ್ರಿಯ ಕಾರ್ಯವನ್ನು ಮಾಡಲಿ?”

01092005 ಸ್ತ್ರೀ ಉವಾಚ।
01092005a ತ್ವಾಮಹಂ ಕಾಮಯೇ ರಾಜನ್ಕುರುಶ್ರೇಷ್ಠ ಭಜಸ್ವ ಮಾಂ।
01092005c ತ್ಯಾಗಃ ಕಾಮವತೀನಾಂ ಹಿ ಸ್ತ್ರೀಣಾಂ ಸದ್ಭಿರ್ವಿಗರ್ಹಿತಃ।।

ಸ್ತ್ರೀಯು ಹೇಳಿದಳು: “ರಾಜನ್! ಕುರುಶ್ರೇಷ್ಠ! ನೀನು ನನ್ನನ್ನು ಕಾಮಿಸಬೇಕೆಂಬುದೇ ನನ್ನ ಬಯಕೆ. ಕಾಮವತಿ ಸ್ತ್ರೀಯನ್ನು ತಿರಸ್ಕರಿಸುವುದು ಸರಿಯಲ್ಲ.”

01092006 ಪ್ರತೀಪ ಉವಾಚ।
01092006a ನಾಹಂ ಪರಸ್ತ್ರಿಯಂ ಕಾಮಾದ್ಗಚ್ಛೇಯಂ ವರವರ್ಣಿನಿ।
01092006c ನ ಚಾಸವರ್ಣಾಂ ಕಲ್ಯಾಣಿ ಧರ್ಮ್ಯಂ ತದ್ವಿದ್ಧಿ ಮೇ ವ್ರತಂ।।

ಪ್ರತೀಪನು ಹೇಳಿದನು: “ವರವರ್ಣಿನೀ! ಕಲ್ಯಾಣಿ! ನಾನು ಜಾತಿಯವಳಲ್ಲದ ಪರಸ್ತ್ರೀಯನ್ನು ಕಾಮದಲ್ಲಿ ಹೊಂದುವುದಿಲ್ಲ ಎನ್ನುವ ವ್ರತವನ್ನು ಧರ್ಮವಿಧಿವತ್ತಾಗಿ ಆಚರಿಸುತ್ತಿದ್ದೇನೆ ಎನ್ನುವುದು ನಿನಗೆ ತಿಳಿದಿಲ್ಲವೇ?””

01092007 ಸ್ತ್ರೀ ಉವಾಚ।
01092007a ನಾಶ್ರೇಯಸ್ಯಸ್ಮಿ ನಾಗಮ್ಯಾ ನ ವಕ್ತವ್ಯಾ ಚ ಕರ್ಹಿ ಚಿತ್।
01092007c ಭಜ ಮಾಂ ಭಜಮಾನಾಂ ತ್ವಂ ರಾಜನ್ಕನ್ಯಾಂ ವರಸ್ತ್ರಿಯಂ।।

ಸ್ತ್ರೀಯು ಹೇಳಿದಳು: “ರಾಜ! ನಾನೇನು ಅಶ್ರೇಯಸ್ಸಳಲ್ಲ. ಹೊಂದಬಾರದಂಥವಳೂ ಅಲ್ಲ. ಅಥವಾ ಕುಪ್ರಸಿದ್ಧಳೂ ಅಲ್ಲ. ವರಸ್ತ್ರೀ ಕನ್ಯೆ ನಾನು ನಿನ್ನನ್ನು ಕಾಮಿಸುವಂತೆ ನೀನೂ ನನ್ನನ್ನು ಕಾಮಿಸು.”

01092008 ಪ್ರತೀಪ ಉವಾಚ।
01092008a ಮಯಾತಿವೃತ್ತಮೇತತ್ತೇ ಯನ್ಮಾಂ ಚೋದಯಸಿ ಪ್ರಿಯಂ।
01092008c ಅನ್ಯಥಾ ಪ್ರತಿಪನ್ನಂ ಮಾಂ ನಾಶಯೇದ್ಧರ್ಮವಿಪ್ಲವಃ।।

ಪ್ರತೀಪನು ಹೇಳಿದನು: “ನಿನಗೆ ಪ್ರಿಯವಾದುದನ್ನು ನಾನು ಮಾಡಬೇಕೆಂಬ ಈ ನಿನ್ನ ಒತ್ತಾಯವನ್ನು ನಿರಾಕರಿಸುತ್ತೇನೆ. ಇಲ್ಲವಾದರೆ ಈ ಅಧರ್ಮವು ನನ್ನನ್ನು ನಾಶಮಾಡಿಬಿಡುತ್ತದೆ.

01092009a ಪ್ರಾಪ್ಯ ದಕ್ಷಿಣಮೂರುಂ ಮೇ ತ್ವಮಾಶ್ಲಿಷ್ಟಾ ವರಾಂಗನೇ।
01092009c ಅಪತ್ಯಾನಾಂ ಸ್ನುಷಾಣಾಂ ಚ ಭೀರು ವಿದ್ಧ್ಯೇತದಾಸನಂ।।

ವರಾಂಗನೇ! ನೀನು ನನ್ನ ಬಲ ತೊಡೆಯ ಮೇಲೆ ಕುಳಿತು ನನ್ನನ್ನು ವರಿಸಿದ್ದೀಯೆ. ಭೀರು! ಈ ಸ್ಥಳವು ಮಕ್ಕಳು ಅಥವಾ ಸೊಸೆಯಂದಿರು ಕುಳಿತುಕೊಳ್ಳುವ ಸ್ಥಳ.

01092010a ಸವ್ಯತಃ ಕಾಮಿನೀಭಾಗಸ್ತ್ವಯಾ ಸ ಚ ವಿವರ್ಜಿತಃ।
01092010c ತಸ್ಮಾದಹಂ ನಾಚರಿಷ್ಯೇ ತ್ವಯಿ ಕಾಮಂ ವರಾಂಗನೇ।।

ಎಡಗಡೆಯದ್ದು ಕಾಮಿನಿಯ ಜಾಗ. ಆದರೆ ನೀನು ಅದನ್ನು ತಿರಸ್ಕರಿಸಿದ್ದೀಯೆ. ವರಾಂಗನೆ! ಆದುದರಿಂದ ನಾನು ನಿನ್ನಲ್ಲಿ ಕಾಮಿಯ ಹಾಗೆ ವರ್ತಿಸುವುದಿಲ್ಲ.

01092011a ಸ್ನುಷಾ ಮೇ ಭವ ಕಲ್ಯಾಣಿ ಪುತ್ರಾರ್ಥೇ ತ್ವಾಂ ವೃಣೋಮ್ಯಹಂ।
01092011c ಸ್ನುಷಾಪಕ್ಷಂ ಹಿ ವಾಮೋರು ತ್ವಮಾಗಮ್ಯ ಸಮಾಶ್ರಿತಾ।।

ಕಲ್ಯಾಣಿ! ನನ್ನ ಸೊಸೆಯಾಗು. ನಿನ್ನನ್ನು ನನ್ನ ಮಗನಿಗೆ ಆರಿಸುವೆ. ನೀನಾದರೂ ಸೊಸೆಯ ಸ್ಥಳವನ್ನೇ ಆರಿಸಿಕೊಂಡಿದ್ದೀಯೆ.”

01092012 ಸ್ತ್ರೀ ಉವಾಚ।
01092012a ಏವಮಪ್ಯಸ್ತು ಧರ್ಮಜ್ಞ ಸಂಯುಜ್ಯೇಯಂ ಸುತೇನ ತೇ।
01092012c ತ್ವದ್ಭಕ್ತ್ಯೈವ ಭಜಿಷ್ಯಾಮಿ ಪ್ರಖ್ಯಾತಂ ಭಾರತಂ ಕುಲಂ।।

ಸ್ತ್ರೀಯು ಹೇಳಿದಳು: “ಧರ್ಮಜ್ಞ! ಹಾಗೆಯೇ ಆಗಲಿ. ನಿನ್ನ ಮಗನನ್ನು ಕೂಡುವೆ. ಆದರೆ ನನಗೆ ನಿನ್ನ ಮೇಲಿರುವ ಪ್ರೀತಿಯಿಂದಾಗಿಯೇ ನಾನು ಪ್ರಖ್ಯಾತ ಭರತಕುಲವನ್ನು ಪ್ರೀತಿಸುತ್ತೇನೆ.

01092013a ಪೃಥಿವ್ಯಾಂ ಪಾರ್ಥಿವಾ ಯೇ ಚ ತೇಷಾಂ ಯೂಯಂ ಪರಾಯಣಂ।
01092013c ಗುಣಾ ನ ಹಿ ಮಯಾ ಶಕ್ಯಾ ವಕ್ತುಂ ವರ್ಷಶತೈರಪಿ।
01092013e ಕುಲಸ್ಯ ಯೇ ವಃ ಪ್ರಸ್ಥಿತಾಸ್ತತ್ಸಾಧುತ್ವಮನುತ್ತಮಂ।।

ಈ ಪೃಥ್ವಿಯಲ್ಲಿ ಎಷ್ಟು ಮಂದಿ ಪಾರ್ಥಿವರಿದ್ದರೂ ನಿನ್ನ ವಂಶವು ಪರಾಯಣೀಯವಾದದ್ದು. ನಿನ್ನ ಈ ಅನುತ್ತಮ, ಸಾಧು, ಮತ್ತು ಪ್ರಸಿದ್ಧ ಕುಲದ ಗುಣಗಳನ್ನು ಸಾರಲು ನನಗೆ ನೂರು ವರ್ಷಗಳೂ ಸಾಲದು.

01092014a ಸ ಮೇ ನಾಭಿಜನಜ್ಞಃ ಸ್ಯಾದಾಚರೇಯಂ ಚ ಯದ್ವಿಭೋ।
01092014c ತತ್ಸರ್ವಮೇವ ಪುತ್ರಸ್ತೇ ನ ಮೀಮಾಂಸೇತ ಕರ್ಹಿ ಚಿತ್।।

ವಿಭೋ! ನಾನು ಉಚ್ಛ ಜನ್ಮದವಳೆಂದು ಅವನಿಗೆ ಗೊತ್ತಿರಬಾರದು ಮತ್ತು ನಾನು ಮಾಡಿದ ಯಾವ ಕಾರ್ಯವನ್ನೂ ನಿನ್ನ ಮಗನು ಪ್ರಶ್ನಿಸಬಾರದು.

01092015a ಏವಂ ವಸಂತೀ ಪುತ್ರೇ ತೇ ವರ್ಧಯಿಷ್ಯಾಮ್ಯಹಂ ಪ್ರಿಯಂ।
01092015c ಪುತ್ರೈಃ ಪುಣ್ಯೈಃ ಪ್ರಿಯೈಶ್ಚಾಪಿ ಸ್ವರ್ಗಂ ಪ್ರಾಪ್ಸ್ಯತಿ ತೇ ಸುತಃ।।

ಈ ರೀತಿ ನಿನ್ನ ಪುತ್ರನೊಂದಿಗೆ ವಾಸಿಸುತ್ತಾ ಅವನ ಸಂತಸವನ್ನು ವರ್ಧಿಸುವೆ ಮತ್ತು ಪ್ರಿಯ ಪುತ್ರರ ಪುಣ್ಯಗಳಿಂದ ನಿನ್ನ ಮಗನು ಸ್ವರ್ಗವನ್ನು ಹೊಂದುವನು.””

01092016 ವೈಶಂಪಾಯನ ಉವಾಚ।
01092016a ತಥೇತ್ಯುಕ್ತ್ವಾ ತು ಸಾ ರಾಜಂಸ್ತತ್ರೈವಾಂತರಧೀಯತ।
01092016c ಪುತ್ರಜನ್ಮ ಪ್ರತೀಕ್ಷಂಸ್ತು ಸ ರಾಜಾ ತದಧಾರಯತ್।।

ವೈಶಂಪಾಯನನು ಹೇಳಿದನು: ““ಹಾಗೆಯೇ ಆಗಲಿ” ಎಂದು ರಾಜನು ಹೇಳಿದಾಗ ಅವಳು ಅಂತರ್ಧಾನಳಾದಳು. ಪುತ್ರನ ಜನ್ಮವನ್ನು ಪ್ರತೀಕ್ಷೆ ಮಾಡುತ್ತಾ ರಾಜನು ಆ ವಿಷಯವನ್ನು ನೆನಪಿನಲ್ಲಿಟ್ಟುಕೊಂಡಿದ್ದನು.

01092017a ಏತಸ್ಮಿನ್ನೇವ ಕಾಲೇ ತು ಪ್ರತೀಪಃ ಕ್ಷತ್ರಿಯರ್ಷಭಃ।
01092017c ತಪಸ್ತೇಪೇ ಸುತಸ್ಯಾರ್ಥೇ ಸಭಾರ್ಯಃ ಕುರುನಂದನ।।
01092018a ತಯೋಃ ಸಮಭವತ್ಪುತ್ರೋ ವೃದ್ಧಯೋಃ ಸ ಮಹಾಭಿಷಃ।
01092018c ಶಾಂತಸ್ಯ ಜಜ್ಞೇ ಸಂತಾನಸ್ತಸ್ಮಾದಾಸೀತ್ಸ ಶಂತನುಃ।।

ಕುರುನಂದನ! ಇದೇ ಸಮಯದಲ್ಲಿ ಕ್ಷತ್ರಿಯರ್ಷಭ ಪ್ರತೀಪನು ಪುತ್ರನಿಗೋಸ್ಕರ ಭಾರ್ಯೆಯ ಸಹಿತ ತಪಸ್ಸನ್ನು ಮಾಡುತ್ತಿದ್ದನು. ವೃದ್ಧರಾಗಿದ್ದರೂ ಕೂಡ ಅವರಲ್ಲಿ ಮಹಾಭಿಷನು ಪುತ್ರನಾಗಿ ಜನಿಸಿದನು. ಹುಟ್ಟಿನಿಂದಲೇ ಶಾಂತ ಸ್ವಭಾವನಾಗಿದ್ದ ಅವನಿಗೆ ಶಂತನುವೆಂಬ ಹೆಸರಾಯಿತು.

01092019a ಸಂಸ್ಮರಂಶ್ಚಾಕ್ಷಯಾಽಲ್ಲೋಕಾನ್ವಿಜಿತಾನ್ಸ್ವೇನ ಕರ್ಮಣಾ।
01092019c ಪುಣ್ಯಕರ್ಮಕೃದೇವಾಸೀತ್ ಶಂತನುಃ ಕುರುಸತ್ತಮ।।

ಸ್ವಂತ ಕರ್ಮಗಳಿಂದ ಅಕ್ಷಯ ಲೋಕಗಳನ್ನು ಜಯಿಸಿದ್ದುದರ ಸಂಸ್ಕರಣದಿಂದಾಗಿ ಆ ಕುರುಸತ್ತಮ ಶಂತನುವು ಪುಣ್ಯಕರ್ಮಿಯಾಗಿಯೇ ಬೆಳೆದನು.

01092020a ಪ್ರತೀಪಃ ಶಂತನುಂ ಪುತ್ರಂ ಯೌವನಸ್ಥಂ ತತೋಽನ್ವಶಾತ್।
01092020c ಪುರಾ ಮಾಂ ಸ್ತ್ರೀ ಸಮಭ್ಯಾಗಾಚ್ಶಂತನೋ ಭೂತಯೇ ತವ।।

ಪುತ್ರ ಶಂತನುವು ಯೌವನಾವಸ್ಥೆಯನ್ನು ಹೊಂದಿದಾಗ ಪ್ರತೀಪನು ಒಂದು ನಿರ್ದೇಶನವನ್ನಿತ್ತನು: “ಶಂತನು! ಹಿಂದೆ ಓರ್ವ ಸ್ತ್ರೀಯು ನಿನಗೋಸ್ಕರ ನನ್ನ ಬಳಿ ಬಂದಿದ್ದಳು.

01092021a ತ್ವಾಮಾವ್ರಜೇದ್ಯದಿ ರಹಃ ಸಾ ಪುತ್ರ ವರವರ್ಣಿನೀ।
01092021c ಕಾಮಯಾನಾಭಿರೂಪಾದ್ಯಾ ದಿವ್ಯಾ ಸ್ತ್ರೀ ಪುತ್ರಕಾಮ್ಯಯಾ।
01092021e ಸಾ ತ್ವಯಾ ನಾನುಯೋಕ್ತವ್ಯಾ ಕಾಸಿ ಕಸ್ಯಾಸಿ ವಾಂಗನೇ।।
01092022a ಯಚ್ಚ ಕುರ್ಯಾನ್ನ ತತ್ಕಾರ್ಯಂ ಪ್ರಷ್ಟವ್ಯಾ ಸಾ ತ್ವಯಾನಘ।
01092022c ಮನ್ನಿಯೋಗಾದ್ಭಜಂತೀಂ ತಾಂ ಭಜೇಥಾ ಇತ್ಯುವಾಚ ತಂ।।

ಪುತ್ರ! ಒಂದು ವೇಳೆ ಕಾಮವನ್ನು ಹುಟ್ಟಿಸುವ ವರವರ್ಣಿನಿ ಆ ದೇವ ಸ್ತ್ರೀಯು ಪುತ್ರಕಾಮಿಯಾಗಿ ಗುಪ್ತವಾಗಿ ನಿನ್ನ ಬಳಿ ಬಂದರೆ ನೀನು ಅವಳು ಯಾರು ಅಥವಾ ಯಾರವಳು ಎಂದು ಪ್ರಶ್ನಿಸಬಾರದು. ಅನಘ! ಅವಳು ಏನು ಕಾರ್ಯವನ್ನೆಸಗಿದರೂ ನೀನು ಅವಳನ್ನು ಪ್ರಶ್ನಿಸಬಾರದು. ಅವಳು ನಿನ್ನನ್ನು ಹೇಗೆ ಬಯಸುತ್ತಾಳೋ ಹಾಗೆ ನೀನು ಅವಳನ್ನು ಪ್ರೀತಿಸು. ಇದು ನನ್ನ ಕೇಳಿಕೆ.”

01092023a ಏವಂ ಸಂದಿಶ್ಯ ತನಯಂ ಪ್ರತೀಪಃ ಶಂತನುಂ ತದಾ।
01092023c ಸ್ವೇ ಚ ರಾಜ್ಯೇಽಭಿಷಿಚ್ಯೈನಂ ವನಂ ರಾಜಾ ವಿವೇಶ ಹ।।

ಈ ರೀತಿ ಸಂದೇಶವನ್ನಿತ್ತು ಪ್ರತೀಪನು ತನಯ ಶಂತನುವಿಗೆ ತನ್ನ ರಾಜ್ಯದ ರಾಜಾಭಿಷೇಕವನ್ನು ಮಾಡಿ ವನವನ್ನು ಸೇರಿದನು.

01092024a ಸ ರಾಜಾ ಶಂತನುರ್ಧೀಮಾನ್ಖ್ಯಾತಃ ಪೃಥ್ವ್ಯಾಂ ಧನುರ್ಧರಃ।
01092024c ಬಭೂವ ಮೃಗಯಾಶೀಲಃ ಸತತಂ ವನಗೋಚರಃ।।

ಈ ಧೀಮಂತ ರಾಜ ಶಂತನುವು ಧನುರ್ಧರನಾಗಿ ಪೃಥ್ವಿಯಲ್ಲಿಯೇ ಖ್ಯಾತನಾದನು ಮತ್ತು ಮೃಗಯಾಶೀಲನಾಗಿ ಸತತ ವನಗಳಲ್ಲಿ ಅಲೆಯುತ್ತಿದ್ದನು.

01092025a ಸ ಮೃಗಾನ್ಮಹಿಷಾಂಶ್ಚೈವ ವಿನಿಘ್ನನ್ರಾಜಸತ್ತಮಃ।
01092025c ಗಂಗಾಮನುಚಚಾರೈಕಃ ಸಿದ್ಧಚಾರಣಸೇವಿತಾಂ।।

ಒಮ್ಮೆ ಜಿಂಕೆ ಮತ್ತು ಕಾಡೆಮ್ಮೆಗಳನ್ನು ಕೆಳಗುರುಳಿಸಿದ ರಾಜ ಸತ್ತಮನು ಒಬ್ಬನೇ ಸಿದ್ಧ ಚಾರಣರಿಂದ ಸೇವಿಸಲ್ಪಟ್ಟ ಗಂಗೆಯನ್ನು ಅನುಸರಿಸುತ್ತಾ ಹೊರಟನು.

01092026a ಸ ಕದಾ ಚಿನ್ಮಹಾರಾಜ ದದರ್ಶ ಪರಮಸ್ತ್ರಿಯಂ।
01092026c ಜಾಜ್ವಲ್ಯಮಾನಾಂ ವಪುಷಾ ಸಾಕ್ಷಾತ್ಪದ್ಮಾಮಿವ ಶ್ರಿಯಂ।।

ಅಲ್ಲಿ ಮಹಾರಾಜನು ಸಾಕ್ಷಾತ್ ಪದ್ಮಿನಿ ಲಕ್ಷ್ಮಿಯಂತೆ ರೂಪದಲ್ಲಿ ಪ್ರಜ್ವಲಿಸುತ್ತಿರುವ ಪರಮ ಸ್ತ್ರೀ ಓರ್ವಳನ್ನು ಕಂಡನು.

01092027a ಸರ್ವಾನವದ್ಯಾಂ ಸುದತೀಂ ದಿವ್ಯಾಭರಣಭೂಷಿತಾಂ।
01092027c ಸೂಕ್ಷ್ಮಾಂಬರಧರಾಮೇಕಾಂ ಪದ್ಮೋದರಸಮಪ್ರಭಾಂ।।

ಸರ್ವಾನವಧ್ಯ, ಸುದಂತಿ, ಸರ್ವಾಭರಣ ಭೂಷಿತೆ, ಕಮಲದ ಒಡಲಿನಂತೆ ಕಾಂತಿಯುಕ್ತೆ, ತೆಳು ವಸ್ತ್ರವನ್ನು ಧರಿಸಿದ್ದ ಅವಳು ಏಕಾಂಗಿಯಾಗಿದ್ದಳು.

01092028a ತಾಂ ದೃಷ್ಟ್ವಾ ಹೃಷ್ಟರೋಮಾಭೂದ್ವಿಸ್ಮಿತೋ ರೂಪಸಂಪದಾ।
01092028c ಪಿಬನ್ನಿವ ಚ ನೇತ್ರಾಭ್ಯಾಂ ನಾತೃಪ್ಯತ ನರಾಧಿಪಃ।।

ಆ ರೂಪಸಂಪದವನ್ನು ನೋಡಿದ ನರಾಧಿಪನು ವಿಸ್ಮಿತನೂ ರೋಮಹರ್ಷಿತನೂ ಆಗಿ ಒಂದೇ ಸಮನೆ ಅವಳನ್ನು ಕಣ್ಣುಗಳಿಂದಲೇ ಕುಡಿಯ ತೊಡಗಿದನು.

01092029a ಸಾ ಚ ದೃಷ್ಟ್ವೈವ ರಾಜಾನಂ ವಿಚರಂತಂ ಮಹಾದ್ಯುತಿಂ।
01092029c ಸ್ನೇಹಾದಾಗತಸೌಹಾರ್ದಾ ನಾತೃಪ್ಯತ ವಿಲಾಸಿನೀ।।

ಆ ವಿಲಾಸಿನಿಯಾದರೂ ಸ್ನೇಹದಿಂದ ಅವಳಲ್ಲುಂಟಾದ ಸೌಹಾರ್ದತೆಯಿಂದ ಸಂಚರಿಸುತ್ತಿರುವ ಆ ಮಹಾದ್ಯುತಿ ರಾಜನನ್ನು ಎಷ್ಟು ನೋಡಿದರೂ ಅತೃಪ್ತಳಾಗೇ ಇದ್ದಳು.

01092030a ತಾಮುವಾಚ ತತೋ ರಾಜಾ ಸಾಂತ್ವಯಂಶ್ಲಕ್ಷ್ಣಯಾ ಗಿರಾ।
01092030c ದೇವೀ ವಾ ದಾನವೀ ವಾ ತ್ವಂ ಗಂಧರ್ವೀ ಯದಿ ವಾಪ್ಸರಾಃ।।

ಆಗ ಆ ರಾಜನು ಸಾಂತ್ವನ ಶ್ಲಾಘನೀಯ ಮಾತುಗಳಿಂದ ಅವಳನ್ನುದ್ದೇಶಿಸಿ ಹೇಳಿದನು: “ನೀನು ಓರ್ವ ದೇವಿಯೋ, ದಾನವಿಯೋ, ಗಂಧರ್ವಿಯೋ ಅಥವಾ ಅಪ್ಸರೆಯೋ?

01092031a ಯಕ್ಷೀ ವಾ ಪನ್ನಗೀ ವಾಪಿ ಮಾನುಷೀ ವಾ ಸುಮಧ್ಯಮೇ।
01092031c ಯಾ ವಾ ತ್ವಂ ಸುರಗರ್ಭಾಭೇ ಭಾರ್ಯಾ ಮೇ ಭವ ಶೋಭನೇ।।

ಸುಮಧ್ಯಮೇ! ನೀನು ಯಕ್ಷಿಯೋ ಅಥವಾ ಪನ್ನಗಿಯೋ ಅಥವಾ ಮಾನುಷಿಯೋ? ಶೋಭನೇ! ನೀನು ಯಾರೇ ಆಗಿರಲಿ, ಸುರಕನ್ಯೆಯಂತಿರುವ ನೀನು ನನ್ನ ಪತ್ನಿಯಾಗು.”

01092032a ಏತಚ್ಛೃತ್ವಾ ವಚೋ ರಾಜ್ಞಃ ಸಸ್ಮಿತಂ ಮೃದು ವಲ್ಗು ಚ।
01092032c ವಸೂನಾಂ ಸಮಯಂ ಸ್ಮೃತ್ವಾ ಅಭ್ಯಗಚ್ಛದನಿಂದಿತಾ।।

ಮುಗುಳ್ನಗೆಯಂತೆ ಮೃದುಸಿಹಿಯಾದ ರಾಜನ ಈ ಮಾತುಗಳನ್ನು ಕೇಳಿದ ಆ ಅನಿಂದಿತೆಯು ವಸುಗಳೊಂದಿಗೆ ಮಾಡಿಕೊಂಡಿದ್ದ ಒಪ್ಪಂದವನ್ನು ನೆನಪಿಸಿಕೊಂಡು ಅವನ ಬಳಿ ಬಂದಳು.

01092033a ಉವಾಚ ಚೈವ ರಾಜ್ಞಃ ಸಾ ಹ್ಲಾದಯಂತೀ ಮನೋ ಗಿರಾ।
01092033c ಭವಿಷ್ಯಾಮಿ ಮಹೀಪಾಲ ಮಹಿಷೀ ತೇ ವಶಾನುಗಾ।।

ರಾಜನ ಮನಸ್ಸನ್ನು ಆಹ್ಲಾದಿಸುತ್ತಿರುವ ಮಾತುಗಳಿಂದ ಹೇಳಿದಳು: “ಮಹೀಪಾಲ! ನಿನ್ನ ವಶದಲ್ಲಿಯೇ ಇರುವ ನಿನ್ನ ಮಹಿಷಿಯಾಗುತ್ತೇನೆ.

01092034a ಯತ್ತು ಕುರ್ಯಾಮಹಂ ರಾಜಂಶುಭಂ ವಾ ಯದಿ ವಾಶುಭಂ।
01092034c ನ ತದ್ವಾರಯಿತವ್ಯಾಸ್ಮಿ ನ ವಕ್ತವ್ಯಾ ತಥಾಪ್ರಿಯಂ।।

ರಾಜನ್! ಆದರೆ ನನ್ನಿಂದ ಯಾವುದೇ ಶುಭ ಅಥವಾ ಅಶುಭ ಕಾರ್ಯವಾದರೂ ಕೂಡ ನನ್ನನ್ನು ತಡೆಯಬಾರದು ಮತ್ತು ನನ್ನಲ್ಲಿ ಅಪ್ರಿಯ ಮಾತುಗಳನ್ನಾಡಬಾರದು.

01092035a ಏವಂ ಹಿ ವರ್ತಮಾನೇಽಹಂ ತ್ವಯಿ ವತ್ಸ್ಯಾಮಿ ಪಾರ್ಥಿವ।
01092035c ವಾರಿತಾ ವಿಪ್ರಿಯಂ ಚೋಕ್ತಾ ತ್ಯಜೇಯಂ ತ್ವಾಮಸಂಶಯಂ।।

ಪಾರ್ಥಿವ! ನೀನು ಈ ರೀತಿ ವರ್ತಿಸುವೆಯಾದರೆ ನಾನು ನಿನ್ನೊಡನೆ ವಾಸಿಸಬಲ್ಲೆ. ಆದರೆ ನೀನು ನನ್ನನ್ನು ತಡೆದರೆ ಅಥವಾ ನನ್ನೊಡನೆ ಅಪ್ರಿಯ ಮಾತುಗಳನ್ನಾಡಿದರೆ ನಿಸ್ಸಂಶಯವಾಗಿಯೂ ನಾನು ನಿನ್ನನ್ನು ತ್ಯಜಿಸುತ್ತೇನೆ.”

01092036a ತಥೇತಿ ರಾಜ್ಞಾ ಸಾ ತೂಕ್ತಾ ತದಾ ಭರತಸತ್ತಮ।
01092036c ಪ್ರಹರ್ಷಮತುಲಂ ಲೇಭೇ ಪ್ರಾಪ್ಯ ತಂ ಪಾರ್ಥಿವೋತ್ತಮಂ।।

ಆ ರಾಜ ಭರತಸತ್ತಮನು “ಹಾಗೆಯೇ ಆಗಲಿ” ಎಂದು ಹೇಳಿದನು. ಅವಳನ್ನು ಪಡೆದ ಆ ಪಾರ್ಥಿವೋತ್ತಮನು ಅತುಲ ಹರ್ಷವನ್ನು ಹೊಂದಿದನು.

01092037a ಆಸಾದ್ಯ ಶಂತನುಸ್ತಾಂ ಚ ಬುಭುಜೇ ಕಾಮತೋ ವಶೀ।
01092037c ನ ಪ್ರಷ್ಟವ್ಯೇತಿ ಮನ್ವಾನೋ ನ ಸ ತಾಂ ಕಿಂ ಚಿದೂಚಿವಾನ್।।

ಅವಳನ್ನು ಪಡೆದ ಶಂತನುವು ಮನ ಬಂದಂತೆ ಅವಳನ್ನು ಕಾಮಿಸಿದನು. ಆದರೆ ಅವಳನ್ನು ಪ್ರಶ್ನಿಸಬಾರದೆಂಬುದನ್ನು ನೆನಪಿನಲ್ಲಿಟ್ಟುಕೊಂಡಿದ್ದನು.

01092038a ಸ ತಸ್ಯಾಃ ಶೀಲವೃತ್ತೇನ ರೂಪೌದಾರ್ಯಗುಣೇನ ಚ।
01092038c ಉಪಚಾರೇಣ ಚ ರಹಸ್ತುತೋಷ ಜಗತೀಪತಿಃ।।

ಅವಳ ಶೀಲವೃತ್ತಿ, ರೂಪ, ಔದಾರ್ಯಗುಣ, ಉಪಚಾರ, ಮತ್ತು ರಹಸ್ಯಗಳಿಂದ ಆ ಜಗತ್ಪತಿಯು ಸಂತುಷ್ಠನಾಗಿದ್ದನು.

01092039a ದಿವ್ಯರೂಪಾ ಹಿ ಸಾ ದೇವೀ ಗಂಗಾ ತ್ರಿಪಥಗಾ ನದೀ।
01092039c ಮಾನುಷಂ ವಿಗ್ರಹಂ ಶ್ರೀಮತ್ಕೃತ್ವಾ ಸಾ ವರವರ್ಣಿನೀ।।
01092040a ಭಾಗ್ಯೋಪನತಕಾಮಸ್ಯ ಭಾರ್ಯೇವೋಪಸ್ಥಿತಾಭವತ್।
01092040c ಶಂತನೋ ರಾಜಸಿಂಹಸ್ಯ ದೇವರಾಜಸಮದ್ಯುತೇಃ।।

ದಿವ್ಯರೂಪಿ, ತ್ರಿಪತಗೆ, ದೇವಿ ಗಂಗಾ ನದಿಯು ವರವರ್ಣಿನಿ ಶ್ರೀಯಂತೆ ಮನುಷ್ಯರೂಪವನ್ನು ತಾಳಿ, ದೇವರಾಜಸಮದ್ಯುತಿ, ರಾಜಸಿಂಹ ಶಂತನುವಿನ ಭಾರ್ಯೆಯಾಗಿ ಅವನ ಭಾಗ್ಯ ಮತ್ತು ಕಾಮಗಳೆರಡನ್ನೂ ವೃದ್ಧಿಸಿದಳು.

01092041a ಸಂಭೋಗಸ್ನೇಹಚಾತುರ್ಯೈರ್ಹಾವಲಾಸ್ಯೈರ್ಮನೋಹರೈಃ।
01092041c ರಾಜಾನಂ ರಮಯಾಮಾಸ ಯಥಾ ರೇಮೇ ತಥೈವ ಸಃ।।

ಸಂಭೋಗ ಸ್ನೇಹ ಚಾತುರ್ಯದಿಂದ ಮತ್ತು ಮನೋಹರ ಹಾವ ಲಾಸ್ಯಗಳಿಂದ ರಾಜನು ತನ್ನನ್ನು ರಮಿಸುವಂತೆ ಮಾಡಿದಳು ಮತ್ತು ಅವನೂ ಸಹ ಅವಳನ್ನು ರಮಿಸಿದನು.

01092042a ಸ ರಾಜಾ ರತಿಸಕ್ತತ್ವಾದುತ್ತಮಸ್ತ್ರೀಗುಣೈರ್ಹೃತಃ।
01092042c ಸಂವತ್ಸರಾನೃತೂನ್ಮಾಸಾನ್ನ ಬುಬೋಧ ಬಹೂನ್ಗತಾನ್।।

ಆ ಉತ್ತಮ ಸ್ತ್ರೀಯ ಗುಣಗಳಿಂದ ಅಪಹರಿಸಲ್ಪಟ್ಟು ಅವಳಲ್ಲಿಯೇ ರತಿಸಕ್ತನಾದ ರಾಜನಿಗೆ ಎಷ್ಟು ಸಂವತ್ಸರಗಳು, ಋತುಗಳು ಮತ್ತು ಮಾಸಗಳು ಕಳೆದವು ಎಂದೇ ತಿಳಿಯಲಿಲ್ಲ.

01092043a ರಮಮಾಣಸ್ತಯಾ ಸಾರ್ಧಂ ಯಥಾಕಾಮಂ ಜನೇಶ್ವರಃ।
01092043c ಅಷ್ಟಾವಜನಯತ್ಪುತ್ರಾಂಸ್ತಸ್ಯಾಮಮರವರ್ಣಿನಃ।।

ಆ ಜನೇಶ್ವರನು ಅವಳನ್ನು ಈ ರೀತಿ ಕಾಮಿಸುತ್ತಿರುವಾಗ ಆ ಅಮರವರ್ಣಿನಿಯಿಂದ ಎಂಟು ಪುತ್ರರನ್ನು ಪಡೆದನು.

01092044a ಜಾತಂ ಜಾತಂ ಚ ಸಾ ಪುತ್ರಂ ಕ್ಷಿಪತ್ಯಂಭಸಿ ಭಾರತ।
01092044c ಪ್ರೀಣಾಮಿ ತ್ವಾಹಮಿತ್ಯುಕ್ತ್ವಾ ಗಂಗಾಸ್ರೋತಸ್ಯಮಜ್ಜಯತ್।।

ಭಾರತ! ಪುತ್ರರು ಹುಟ್ಟುತ್ತಿದ್ದ ಹಾಗೆಯೇ ಅವಳು ಅವರನ್ನು “ನಿಮಗೆ ಒಳ್ಳೆಯದನ್ನೇ ಮಾಡುತ್ತಿದ್ದೇನೆ!” ಎಂದು ಹೇಳುತ್ತಾ ಗಂಗಾನದಿಯಲ್ಲಿ ಹಾಕಿ ಅವರನ್ನು ಮುಳುಗಿಸುತ್ತಿದ್ದಳು.

01092045a ತಸ್ಯ ತನ್ನ ಪ್ರಿಯಂ ರಾಜ್ಞಃ ಶಂತನೋರಭವತ್ತದಾ।
01092045c ನ ಚ ತಾಂ ಕಿಂ ಚನೋವಾಚ ತ್ಯಾಗಾದ್ಭೀತೋ ಮಹೀಪತಿಃ।।

ಅವಳ ಈ ಕಾರ್ಯವು ರಾಜ ಶಂತನುವಿಗೆ ಇಷ್ಟವಾಗಲಿಲ್ಲ. ಆದರೂ ಅವಳು ತನ್ನನ್ನು ಬಿಟ್ಟು ಹೋಗುತ್ತಾಳೆ ಎಂಬ ಭೀತಿಯಿಂದ ಮಹೀಪಾಲನು ಅವಳಿಗೆ ಏನನ್ನೂ ಹೇಳಲಿಲ್ಲ.

01092046a ಅಥ ತಾಮಷ್ಟಮೇ ಪುತ್ರೇ ಜಾತೇ ಪ್ರಹಸಿತಾಮಿವ।
01092046c ಉವಾಚ ರಾಜಾ ದುಃಖಾರ್ತಃ ಪರೀಪ್ಸನ್ಪುತ್ರಮಾತ್ಮನಃ।।

ಎಂಟನೆಯ ಪುತ್ರನು ಜನಿಸಿದಾಗ ಅವಳು ಮುಗುಳ್ನಗುತ್ತಿರುವುದನ್ನು ಕಂಡು ತನ್ನ ಪುತ್ರನಿಗೋಸ್ಕರ ಹಂಬಲಿಸುತ್ತಾ ದುಃಖಾರ್ತನಾಗಿ ಹೇಳಿದನು:

01092047a ಮಾ ವಧೀಃ ಕಾಸಿ ಕಸ್ಯಾಸಿ ಕಿಂ ಹಿಂಸಸಿ ಸುತಾನಿತಿ।
01092047c ಪುತ್ರಘ್ನಿ ಸುಮಹತ್ಪಾಪಂ ಮಾ ಪ್ರಾಪಸ್ತಿಷ್ತ ಗರ್ಹಿತೇ।।

“ಇವನನ್ನು ಕೊಲ್ಲಬೇಡ! ನೀನು ಯಾರು ಮತ್ತು ಯಾರವಳು? ಈ ರೀತಿ ನನ್ನ ಮಕ್ಕಳನ್ನು ಏಕೆ ಕೊಲ್ಲುತ್ತಿರುವೆ? ಪುತ್ರಹತ್ಯೆಯ ಮಹತ್ತರ ಪಾಪ ಮಾಡಬೇಡ. ಗರ್ವಿತೇ! ನಿಲ್ಲು!”

01092048 ಸ್ತ್ರೀ ಉವಾಚ।
01092048a ಪುತ್ರಕಾಮ ನ ತೇ ಹನ್ಮಿ ಪುತ್ರಂ ಪುತ್ರವತಾಂ ವರ।
01092048c ಜೀರ್ಣಸ್ತು ಮಮ ವಾಸೋಽಯಂ ಯಥಾ ಸ ಸಮಯಃ ಕೃತಃ।।

ಸ್ತ್ರೀ ಹೇಳಿದಳು: “ಪುತ್ರವಂತರಲ್ಲಿ ಶ್ರೇಷ್ಠ! ಪುತ್ರನನ್ನು ಬಯಸುತ್ತಿರುವವನೇ! ನಿನ್ನ ಈ ಪುತ್ರನನ್ನು ಕೊಲ್ಲುವುದಿಲ್ಲ. ಆದರೆ ನಾವು ಮಾಡಿಕೊಂಡ ಒಪ್ಪಂದದಂತೆ ನಿನ್ನೊಡನೆ ನನ್ನ ವಾಸವು ಕೊನೆಯಾಯಿತು.

01092049a ಅಹಂ ಗಂಗಾ ಜಹ್ನುಸುತಾ ಮಹರ್ಷಿಗಣಸೇವಿತಾ।
01092049c ದೇವಕಾರ್ಯಾರ್ಥಸಿದ್ಧ್ಯರ್ಥಮುಷಿತಾಹಂ ತ್ವಯಾ ಸಹ।।

ನಾನು ಮಹರ್ಷಿಗಣಸೇವಿತೆ ಜಹ್ನುಸುತೆ ಗಂಗೆ. ದೇವಕಾರ್ಯವೊಂದನ್ನು ಸಿದ್ಧಿಗೊಳಿಸಲು ನಿನ್ನೊಡನೆ ಬಾಳ್ವೆ ಮಾಡಿದೆ.

01092050a ಅಷ್ಟೇಮೇ ವಸವೋ ದೇವಾ ಮಹಾಭಾಗಾ ಮಹೌಜಸಃ।
01092050c ವಸಿಷ್ಠಶಾಪದೋಷೇಣ ಮಾನುಷತ್ವಮುಪಾಗತಾಃ।।

ಮಹಾಭಾಗ! ಅವರು ಎಂಟು ಮಹೌಜಸ ವಸುದೇವತೆಗಳು. ವಸಿಷ್ಠನ ಶಾಪದೋಶದಿಂದಾಗಿ ಮನುಷ್ಯತ್ವವನ್ನು ಪಡೆದಿದ್ದರು.

01092051a ತೇಷಾಂ ಜನಯಿತಾ ನಾನ್ಯಸ್ತ್ವದೃತೇ ಭುವಿ ವಿದ್ಯತೇ।
01092051c ಮದ್ವಿಧಾ ಮಾನುಷೀ ಧಾತ್ರೀ ನ ಚೈವಾಸ್ತೀಹ ಕಾ ಚನ।।
01092052a ತಸ್ಮಾತ್ತಜ್ಜನನೀಹೇತೋರ್ಮಾನುಷತ್ವಮುಪಾಗತಾ।
01092052c ಜನಯಿತ್ವಾ ವಸೂನಷ್ಟೌ ಜಿತಾ ಲೋಕಾಸ್ತ್ವಯಾಕ್ಷಯಾಃ।।

ಈ ಭುವಿಯಲ್ಲಿ ಅವರನ್ನು ಹುಟ್ಟಿಸುವವರು ನಿನ್ನ ಹೊರತು ಯಾರೂ ಇಲ್ಲ ಮತ್ತು ನನ್ನಂಥಹ ಮಾನುಷಿಯು ಈ ಧರಿತ್ರಿಯಲ್ಲಿಯೇ ಇಲ್ಲ. ಆದುದರಿಂದ ಅವರ ಜನನಿಯಾಗಲೋಸುಗವೇ ನಾನು ಮಾನುಷಿಯಾಗಿ ಬಂದಿದ್ದೇನೆ. ಈ ಎಂಟು ವಸುಗಳ ಜನ್ಮವಿತ್ತು ನೀನು ಅಕ್ಷಯ ಲೋಕಗಳನ್ನು ಗೆದ್ದಿದ್ದೀಯೆ.

01092053a ದೇವಾನಾಂ ಸಮಯಸ್ತ್ವೇಷ ವಸೂನಾಂ ಸಂಶ್ರುತೋ ಮಯಾ।
01092053c ಜಾತಂ ಜಾತಂ ಮೋಕ್ಷಯಿಷ್ಯೇ ಜನ್ಮತೋ ಮಾನುಷಾದಿತಿ।।

ಪ್ರತಿಯೊಬ್ಬರನ್ನೂ ಹುಟ್ಟುತ್ತಿದ್ದಾಗಲೇ ಮಾನುಷ ಜನ್ಮದಿಂದ ಬಿಡುಗಡೆ ಮಾಡಬೇಕೆಂದು ನನ್ನ ಮತ್ತು ಈ ವಸುದೇವತೆಗಳ ನಡುವಿನ ಒಪ್ಪಂದವಾಗಿತ್ತು.

01092054a ತತ್ತೇ ಶಾಪಾದ್ವಿನಿರ್ಮುಕ್ತಾ ಆಪವಸ್ಯ ಮಹಾತ್ಮನಃ।
01092054c ಸ್ವಸ್ತಿ ತೇಽಸ್ತು ಗಮಿಷ್ಯಾಮಿ ಪುತ್ರಂ ಪಾಹಿ ಮಹಾವ್ರತಂ।।
01092055a ಏಷ ಪರ್ಯಾಯವಾಸೋ ಮೇ ವಸೂನಾಂ ಸನ್ನಿಧೌ ಕೃತಃ।
01092055c ಮತ್ಪ್ರಸೂತಂ ವಿಜಾನೀಹಿ ಗಂಗಾದತ್ತಮಿಮಂ ಸುತಂ।।

ಈ ರೀತಿ ಅವರು ಮಹಾತ್ಮ ಆಪವನ ಶಾಪದಿಂದ ವಿಮುಕ್ತರಾಗಿದ್ದಾರೆ. ನಿನಗೆ ಮಂಗಳವಾಗಲಿ. ನಾನು ಹೋಗುತ್ತಿದ್ದೇನೆ. ಈ ಮಹಾವ್ರತ ಪುತ್ರನನ್ನು ಪಾಲಿಸು. ವಸುಗಳ ಸನ್ನಿಧಿಯಲ್ಲಿ ಮಾಡಿದ ನನ್ನ ಈ ವಾಸವು ತಾತ್ಕಾಲಿಕವಾದದ್ದು. ನನ್ನ ಈ ಮಗನನ್ನು ಗಂಗಾದತ್ತನೆಂದು ತಿಳಿ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಶಾಂತನೂಪಾಖ್ಯಾನೇ ದ್ವಿನವತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಶಾಂತನೂಪಾಖ್ಯಾನದಲ್ಲಿ ತೊಂಭತ್ತೆರಡನೆಯ ಅಧ್ಯಾಯವು.