ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಸಂಭವ ಪರ್ವ
ಅಧ್ಯಾಯ 91
ಸಾರ
ಸ್ವರ್ಗವನ್ನು ಸೇರಿದ್ದ ಇಕ್ಷ್ವಾಕುವಂಶದ ಮಹಾಭಿಷನು ಗಂಗೆಯನ್ನು ಮೋಹಿಸಿದುದಕ್ಕಾಗಿ ಪಿತಾಮಹನಿಂದ ಶಪಿಸಲ್ಪಟ್ಟು ಕುರುವಂಶದಲ್ಲಿ ಪ್ರತೀಪನ ಮಗ ಶಂತನುವಾಗಿ ಜನಿಸಿದುದು (1-7). ವಸಿಷ್ಠನಿಂದ ಭೂಮಿಯಲ್ಲಿ ಜನ್ಮತಾಳಿ ಎಂದು ಶಾಪಗ್ರಸ್ಥರಾದ ಅಷ್ಟವಸುಗಳು ಮನುಷ್ಯ ಯೋನಿಯನ್ನು ತಿರಸ್ಕರಿಸಿ ತಮ್ಮ ತಾಯಿಯಾಗಬೇಕೆಂದು ಗಂಗೆಯಲ್ಲಿ ಕೇಳಿಕೊಳ್ಳುವುದು, ಶಂತನುವನ್ನು ಕರ್ತನನ್ನಾಗಿ ಆರಿಸಿಕೊಳ್ಳುವುದು (8-17). ಹುಟ್ಟಿದ ಕೂಡಲೇ ಅವರಿಗೆ ಮನುಷ್ಯ ಜೀವದಿಂದ ಮುಕ್ತಗೊಳಿಸಬೇಕೆಂದು ವಸುಗಳು ಕೇಳಲು, ಶಂತನುವಿಗೋಸ್ಕರ ಎಂಟರಲ್ಲಿ ಒಬ್ಬನನ್ನು ಉಳಿಸುವೆನೆಂದು ಗಂಗೆಯು ಒಪ್ಪಿಕೊಳ್ಳುವುದು (18-22).
01091001 ವೈಶಂಪಾಯನ ಉವಾಚ।
01091001a ಇಕ್ಷ್ವಾಕುವಂಶಪ್ರಭವೋ ರಾಜಾಸೀತ್ಪೃಥಿವೀಪತಿಃ।
01091001c ಮಹಾಭಿಷ ಇತಿ ಖ್ಯಾತಃ ಸತ್ಯವಾಕ್ಸತ್ಯವಿಕ್ರಮಃ।।
ವೈಶಂಪಾಯನನು ಹೇಳಿದನು: “ಇಕ್ಷ್ವಾಕು ವಂಶದಲ್ಲಿ ಹುಟ್ಟಿದ ಮಹಾಭಿಷನೆಂದು ಖ್ಯಾತ ಸತ್ಯವಿಕ್ರಮಿ, ಸತ್ಯವಾಕ್ಯ ಪೃಥ್ವೀಪತಿ ರಾಜನಿದ್ದನು.
01091002a ಸೋಽಶ್ವಮೇಧಸಹಸ್ರೇಣ ವಾಜಪೇಯಶತೇನ ಚ।
01091002c ತೋಷಯಾಮಾಸ ದೇವೇಂದ್ರಂ ಸ್ವರ್ಗಂ ಲೇಭೇ ತತಃ ಪ್ರಭುಃ।।
ಸಾವಿರ ಅಶ್ವಮೇಧ ಮತ್ತು ನೂರು ವಾಜಪೇಯಗಳಿಂದ ಪ್ರಭು ದೇವೇಂದ್ರನನ್ನು ತೃಪ್ತಿಗೊಳಿಸಿ ಅವನು ಸ್ವರ್ಗವನ್ನು ಸೇರಿದನು.
01091003a ತತಃ ಕದಾ ಚಿದ್ಬ್ರಹ್ಮಾಣಮುಪಾಸಾಂ ಚಕ್ರಿರೇ ಸುರಾಃ।
01091003c ತತ್ರ ರಾಜರ್ಷಯೋ ಆಸನ್ಸ ಚ ರಾಜಾ ಮಹಾಭಿಷಃ।।
ಅಲ್ಲಿ ಒಮ್ಮೆ ಸುರರೆಲ್ಲರೂ ಬ್ರಹ್ಮನ ಉಪಾಸನೆಯಲ್ಲಿ ತೊಡಗಿದ್ದಾಗ ರಾಜರ್ಷಿಗಳೊಡನೆ ಮಹಾಭಿಷನೂ ಆಸೀನರಾಗಿದ್ದನು.
01091004a ಅಥ ಗಂಗಾ ಸರಿಚ್ಛ್ರೇಷ್ಠಾ ಸಮುಪಾಯಾತ್ಪಿತಾಮಹಂ।
01091004c ತಸ್ಯಾ ವಾಸಃ ಸಮುದ್ಧೂತಂ ಮಾರುತೇನ ಶಶಿಪ್ರಭಂ।।
01091005a ತತೋಽಭವನ್ಸುರಗಣಾಃ ಸಹಸಾವಾಙ್ಮುಖಾಸ್ತದಾ।
01091005c ಮಹಾಭಿಷಸ್ತು ರಾಜರ್ಷಿರಶಂಕೋ ದೃಷ್ಟವಾನ್ನದೀಂ।।
ಆಗ ನದಿಗಳಲ್ಲೆಲ್ಲ ಶ್ರೇಷ್ಠ ಗಂಗೆಯು ಪಿತಾಮಹನಿಗೆ ಗೌರವಿಸಲು ಬಂದಳು. ಶಶಿಪ್ರಭೆಯ ಅವಳ ವಸ್ತ್ರವು ಗಾಳಿಯಲ್ಲಿ ಹಾರಿಹೋಯಿತು. ಅಲ್ಲಿ ನೆರೆದಿದ್ದ ಸುರಗಣವು ತಕ್ಷಣವೇ ಮುಖಗಳನ್ನು ಕೆಳಗೆ ಮಾಡಿತು. ಆದರೆ ರಾಜರ್ಷಿ ಮಹಾಭಿಷನು ನಿಃಶಂಕೆಯಿಂದ ಅವಳನ್ನೇ ನೋಡುತ್ತಿದ್ದನು.
01091006a ಅಪಧ್ಯಾತೋ ಭಗವತಾ ಬ್ರಹ್ಮಣಾ ಸ ಮಹಾಭಿಷಃ।
01091006c ಉಕ್ತಶ್ಚ ಜಾತೋ ಮರ್ತ್ಯೇಷು ಪುನರ್ಲೋಕಾನವಾಪ್ಸ್ಯಸಿ।।
ಭಗವಾನ್ ಬ್ರಹ್ಮನು ಮಹಾಭಿಷನನ್ನು ಅವಹೇಳನ ಮಾಡುತ್ತಾ “ಮರ್ತ್ಯನಾಗಿ ಹುಟ್ಟಿ ಪುನಃ ಲೋಕಗಳನ್ನು ಹೊಂದುತ್ತೀಯೆ!” ಎಂದನು.
01091007a ಸ ಚಿಂತಯಿತ್ವಾ ನೃಪತಿರ್ನೃಪಾನ್ಸರ್ವಾಂಸ್ತಪೋಧನಾನ್।
01091007c ಪ್ರತೀಪಂ ರೋಚಯಾಮಾಸ ಪಿತರಂ ಭೂರಿವರ್ಚಸಂ।।
ಆ ನೃಪತಿಯು ಎಲ್ಲಾ ರಾಜರು ಮತ್ತು ತಪೋಧನರನ್ನು ಯೋಚಿಸಿ ಭೂರಿವರ್ಚಸ ಪ್ರತೀಪನನ್ನು ತಂದೆಯನ್ನಾಗಿ ಆರಿಸಿಕೊಂಡನು.
01091008a ಮಹಾಭಿಷಂ ತು ತಂ ದೃಷ್ಟ್ವಾ ನದೀ ಧೈರ್ಯಾಚ್ಚ್ಯುತಂ ನೃಪಂ।
01091008c ತಮೇವ ಮನಸಾಧ್ಯಾಯಮುಪಾವರ್ತತ್ಸರಿದ್ವರಾ।।
ಮಹಾಭಿಷನು ಈ ರೀತಿ ಧೈರ್ಯವನ್ನು ಕಳೆದುಕೊಂಡಿದ್ದುದನ್ನು ನೋಡಿ ಸರಿದ್ವರೆ ನದಿಯು ಆ ನೃಪನನ್ನೇ ಮನಸ್ಸಿನಲ್ಲಿ ನೆನೆಯುತ್ತಾ ಹೋದಳು.
01091009a ಸಾ ತು ವಿಧ್ವಸ್ತವಪುಷಃ ಕಶ್ಮಲಾಭಿಹತೌಜಸಃ।
01091009c ದದರ್ಶ ಪಥಿ ಗಚ್ಛಂತೀ ವಸೂನ್ದೇವಾನ್ದಿವೌಕಸಃ।।
ಹೋಗುತ್ತಿರುವ ದಾರಿಯಲ್ಲಿ ಅವಳು ತಮ್ಮ ಮುಖಗಳ ಕಾಂತಿಯನ್ನು ಕಳೆದುಕೊಂಡು ದುಃಖಿಸುತ್ತಿರುವ ದಿವೌಕಸ ವಸು ದೇವತೆಗಳನ್ನು ಕಂಡಳು.
01091010a ತಥಾರೂಪಾಂಶ್ಚ ತಾನ್ದೃಷ್ಟ್ವಾ ಪಪ್ರಚ್ಛ ಸರಿತಾಂ ವರಾ।
01091010c ಕಿಮಿದಂ ನಷ್ಟರೂಪಾಃ ಸ್ಥ ಕಚ್ಚಿತ್ಕ್ಷೇಮಂ ದಿವೌಕಸಾಂ।।
ಆ ಪರಿಸ್ಥಿತಿಯಲ್ಲಿ ಅವರನ್ನು ನೋಡಿದ ಗಂಗೆಯು ಕೇಳಿದಳು: “ಹೀಗೇಕೆ ಏನನ್ನೋ ಕಳೆದುಕೊಂಡವರಂತೆ ಕಾಣುತ್ತಿದ್ದೀರಿ? ದಿವೌಕಸರಿಗೆ ಕ್ಷೇಮವಿಲ್ಲವೇ?”
01091011a ತಾಮೂಚುರ್ವಸವೋ ದೇವಾಃ ಶಪ್ತಾಃ ಸ್ಮೋ ವೈ ಮಹಾನದಿ।
01091011c ಅಲ್ಪೇಽಪರಾಧೇ ಸಂರಂಭಾದ್ವಸಿಷ್ಠೇನ ಮಹಾತ್ಮನಾ।।
01091012a ವಿಮೂದಾ ಹಿ ವಯಂ ಸರ್ವೇ ಪ್ರಚ್ಛನ್ನಂ ಋಷಿಸತ್ತಮಂ।
01091012c ಸಂಧ್ಯಾಂ ವಸಿಷ್ಠಮಾಸೀನಂ ತಮತ್ಯಭಿಸೃತಾಃ ಪುರಾ।।
ಆಗ ವಸು ದೇವತೆಗಳು ಹೇಳಿದರು: “ಮಹಾನದೀ! ನಮ್ಮ ಒಂದು ಸಣ್ಣ ಅಪರಾಧಕ್ಕಾಗಿ ನಾವು ಮಹಾತ್ಮ ವಸಿಷ್ಠನಿಂದ ಶಪ್ತರಾಗಿದ್ದೇವೆ. ನಾವೆಲ್ಲ ವಿಮೂಢರೂ ಸಂಧ್ಯಾವಂದನೆಗೆಂದು ಕುಳಿತಿದ್ದ ಋಷಿಸತ್ತಮ ವಸಿಷ್ಠನನ್ನು ನೋಡದೆಯೇ ಅವನನ್ನು ಉಲ್ಲಂಘಿಸಿದೆವು.
01091013a ತೇನ ಕೋಪಾದ್ವಯಂ ಶಪ್ತಾ ಯೋನೌ ಸಂಭವತೇತಿ ಹ।
01091013c ನ ಶಕ್ಯಮನ್ಯಥಾ ಕರ್ತುಂ ಯದುಕ್ತಂ ಬ್ರಹ್ಮವಾದಿನಾ।।
ಅದರಿಂದ ಕೋಪಗೊಂಡ ಅವನು “ಯೋನಿಯಲ್ಲಿ ಹುಟ್ಟಿರಿ!” ಎಂದು ಶಾಪವನ್ನಿತ್ತನು. ಬ್ರಹ್ಮವಾದಿಯ ಮಾತನ್ನು ಬದಲಾಯಿಸಲು ಸಾದ್ಯವಿಲ್ಲ.
01091014a ತ್ವಂ ತಸ್ಮಾನ್ಮಾನುಷೀ ಭೂತ್ವಾ ಸೂಷ್ವ ಪುತ್ರಾನ್ವಸೂನ್ಭುವಿ।
01091014c ನ ಮಾನುಷೀಣಾಂ ಜಠರಂ ಪ್ರವಿಶೇಮಾಶುಭಂ ವಯಂ।।
ಆದುದರಿಂದ ನೀನು ಮಾನುಷಿಯಾಗಿ ಭೂಮಿಯಲ್ಲಿ ವಸುಗಳನ್ನು ಪುತ್ರರನ್ನಾಗಿ ಜನಿಸು. ಮಾನುಷಿಯ ಜಠರವನ್ನು ಪ್ರವೇಶಿಸುವುದು ನಮಗೆ ಅಶುಭ.”
01091015a ಇತ್ಯುಕ್ತಾ ತಾನ್ವಸೂನ್ಗಂಗಾ ತಥೇತ್ಯುಕ್ತ್ವಾಬ್ರವೀದಿದಂ।
01091015c ಮರ್ತ್ಯೇಷು ಪುರುಷಶ್ರೇಷ್ಠಃ ಕೋ ವಃ ಕರ್ತಾ ಭವಿಷ್ಯತಿ।।
“ಹಾಗೆಯೇ ಆಗಲಿ!” ಎಂದು ವಚನವನ್ನಿತ್ತ ಗಂಗೆಯು ಆ ವಸುಗಳನ್ನುದ್ದೇಶಿಸಿ ಹೇಳಿದಳು: “ಮರ್ತ್ಯರಲ್ಲಿ ಯಾವ ಪುರುಷಶ್ರೇಷ್ಠನು ನಿಮ್ಮ ಕರ್ತನಾಗುತ್ತಾನೆ?”
01091016 ವಸವ ಊಚುಃ 01091016a ಪ್ರತೀಪಸ್ಯ ಸುತೋ ರಾಜಾ ಶಂತನುರ್ನಾಮ ಧಾರ್ಮಿಕಃ।
01091016c ಭವಿತಾ ಮಾನುಷೇ ಲೋಕೇ ಸ ನಃ ಕರ್ತಾ ಭವಿಷ್ಯತಿ।।
ವಸುಗಳು ಹೇಳಿದರು: “ಶಾಂತನು ಎಂಬ ಹೆಸರಿನ ಧಾರ್ಮಿಕ ರಾಜನೊಬ್ಬನು ಪ್ರತೀಪನ ಮಗನಾಗಿ ಮನುಷ್ಯ ಲೋಕದಲ್ಲಿ ಜನ್ಮವೆತ್ತಲಿದ್ದಾನೆ. ಅವನೇ ನಮ್ಮ ಕರ್ತನಾಗುತ್ತಾನೆ.””
01091017 ಗಂಗೋವಾಚ 01091017a ಮಮಾಪ್ಯೇವಂ ಮತಂ ದೇವಾ ಯಥಾವದತ ಮಾನಘಾಃ।
01091017c ಪ್ರಿಯಂ ತಸ್ಯ ಕರಿಷ್ಯಾಮಿ ಯುಷ್ಮಾಕಂ ಚೈತದೀಪ್ಶಿತಂ।।
ಗಂಗೆಯು ಹೇಳಿದಳು: “ಮಾನಘ ದೇವತೆಗಳೇ! ನನ್ನ ಮನಸ್ಸಿನಲ್ಲಿಯೂ ನೀವು ಹೇಳಿದ ಮಾತೇ ಇತ್ತು. ಅವನಿಗೆ ಪ್ರಿಯವಾದುದನ್ನು ಮಾಡುವುದರ ಜೊತೆಗೆ ನಿಮ್ಮ ಇಚ್ಛೆಯನ್ನೂ ನೆರವೇರಿಸುತ್ತೇನೆ.”
01091018 ವಸವ ಊಚುಃ।
01091018a ಜಾತಾನ್ಕುಮಾರಾನ್ಸ್ವಾನಪ್ಸು ಪ್ರಕ್ಷೇಪ್ತುಂ ವೈ ತ್ವಮರ್ಹಸಿ।
01091018c ಯಥಾ ನಚಿರಕಾಲಂ ನೋ ನಿಷ್ಕೃತಿಃ ಸ್ಯಾತ್ತ್ರಿಲೋಕಗೇ।।
ವಸುಗಳು ಹೇಳಿದರು: “ತ್ರಿಲೋಕಸಂಚಾರಿಣೀ! ಈ ನಿಷ್ಕೃತಿಯನ್ನು ದೀರ್ಘಕಾಲ ಅನುಭವಿಸಲು ಅವಕಾಶಕೊಡದ ರೀತಿಯಲ್ಲಿ ಹುಟ್ಟಿದ ಕೂಡಲೇ ಮಕ್ಕಳನ್ನು ನೀರಿನಲ್ಲಿ ಹಾಕಿಬಿಡು.”
01091019 ಗಂಗೋವಾಚ।
01091019a ಏವಮೇತತ್ಕರಿಷ್ಯಾಮಿ ಪುತ್ರಸ್ತಸ್ಯ ವಿಧೀಯತಾಂ।
01091019c ನಾಸ್ಯ ಮೋಘಃ ಸಂಗಮಃ ಸ್ಯಾತ್ಪುತ್ರಹೇತೋರ್ಮಯಾ ಸಹ।।
ಗಂಗೆಯು ಹೇಳಿದಳು: “ಹಾಗೆಯೇ ಮಾಡುತ್ತೇನೆ. ಆದರೆ ಪುತ್ರಾಕಾಂಕ್ಷಿಯಾಗಿ ನನ್ನೊಡನೆ ಸೇರುವ ಅವನ ಯತ್ನವು ನಿಷ್ಪಲವಾಗದ ಹಾಗೆ ಅವನಿಗೆ ಒಬ್ಬನಾದರೂ ಮಗನನ್ನು ಕೊಡಬೇಕು.”
01091020 ವಸವ ಊಚುಃ।
01091020a ತುರೀಯಾರ್ಧಂ ಪ್ರದಾಸ್ಯಾಮೋ ವೀರ್ಯಸ್ಯೈಕೈಕಶೋ ವಯಂ।
01091020c ತೇನ ವೀರ್ಯೇಣ ಪುತ್ರಸ್ತೇ ಭವಿತಾ ತಸ್ಯ ಚೇಪ್ಸಿತಃ।।
ವಸುಗಳು ಹೇಳಿದರು: “ನಾವು ಪ್ರತಿಯೊಬ್ಬರೂ ನಮ್ಮ ನಮ್ಮ ವೀರ್ಯಗಳ ಎಂಟರಲ್ಲಿ ಒಂದು ಅಂಶವನ್ನು ಬಿಟ್ಟುಕೊಡುತ್ತೇವೆ. ಆ ವೀರ್ಯದಿಂದ ನಿನಗೆ ಮತ್ತು ಅವನಿಗೆ ಇಷ್ಟವಾದ ಮಗನು ಜನಿಸುತ್ತಾನೆ.
01091021a ನ ಸಂಪತ್ಸ್ಯತಿ ಮರ್ತ್ಯೇಷು ಪುನಸ್ತಸ್ಯ ತು ಸಂತತಿಃ।
01091021c ತಸ್ಮಾದಪುತ್ರಃ ಪುತ್ರಸ್ತೇ ಭವಿಷ್ಯತಿ ಸ ವೀರ್ಯವಾನ್।।
ಆದರೆ ಅವನು ಮರ್ತ್ಯರಲ್ಲಿ ಪುನಃ ಯಾವ ಸಂತತಿಯನ್ನೂ ಪಡೆಯಲಾರ. ಹೀಗೆ ನಿನ್ನ ವೀರ್ಯವಾನ್ ಪುತ್ರನು ಅಪುತ್ರನಾಗಿಯೇ ಇರುತ್ತಾನೆ.””
01091022 ವೈಶಂಪಾಯನ ಉವಾಚ।
01091022a ಏವಂ ತೇ ಸಮಯಂ ಕೃತ್ವಾ ಗಂಗಯಾ ವಸವಃ ಸಹ।
01091022c ಜಗ್ಮುಃ ಪ್ರಹೃಷ್ಟಮನಸೋ ಯಥಾಸಂಕಲ್ಪಮಂಜಸಾ।।
ವೈಶಂಪಾಯನನು ಹೇಳಿದನು: “ಈ ರೀತಿ ಗಂಗೆಯೊಡನೆ ಒಪ್ಪಂದ ಮಾಡಿಕೊಂಡ ವಸುಗಳು ಸಂತುಷ್ಟರಾಗಿ ತಮಗಿಷ್ಟಬಂದಲ್ಲಿ ತೆರಳಿದರು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಮಹಾಭಿಷೋಪಾಖ್ಯಾನೇ ಏಕನವತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಮಹಾಭಿಷೋಪಾಖ್ಯಾನದಲ್ಲಿ ತೊಂಭತ್ತೊಂದನೆಯ ಅಧ್ಯಾಯವು.