ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಸಂಭವ ಪರ್ವ
ಅಧ್ಯಾಯ 89
ಸಾರ
ಜನಮೇಜಯನ ಕೇಳಿಕೆಯಂತೆ ವೈಶಂಪಾಯನನು ಪುರುವಂಶಾವಳಿಯ ಕುರಿತು ಹೇಳಲು ಪ್ರಾರಂಭಿಸುವುದು (1-3). ಪೂರುವಿನಿಂದ ಭರತನವರೆಗಿನ ವಂಶಾವಳಿ (4-16). ಭರತನಿಂದ ಕುರುವಿನವರೆಗಿನ ವಂಶಾವಳಿ (17-42). ಕುರುವಿನಿಂದ ಶಂತನುವರೆಗಿನ ವಂಶಾವಳಿ (43-55).
01089001 ಜನಮೇಜಯ ಉವಾಚ।
01089001a ಭಗವನ್ ಶ್ರೋತುಮಿಚ್ಛಾಮಿ ಪೂರೋರ್ವಂಶಕರಾನ್ನೃಪಾನ್।
01089001c ಯದ್ವೀರ್ಯಾ ಯಾದೃಶಾಶ್ಚೈವ ಯಾವಂತೋ ಯತ್ಪರಾಕ್ರಮಾಃ।।
ಜನಮೇಜಯನು ಹೇಳಿದನು: “ಭಗವನ್! ಪೂರುವಿನ ವಂಶದಲ್ಲಿ ಜನಿಸಿದ ವೀರ್ಯವಂತ, ನೀತಿವಂತ, ಪರಾಕ್ರಮಿ ನೃಪರ ಕುರಿತು ಕೇಳ ಬಯಸುತ್ತೇನೆ.
01089002a ನ ಹ್ಯಸ್ಮಿಂಶೀಲಹೀನೋ ವಾ ನಿರ್ವೀರ್ಯೋ ವಾ ನರಾಧಿಪಃ।
01089002c ಪ್ರಜಾವಿರಹಿತೋ ವಾಪಿ ಭೂತಪೂರ್ವಃ ಕದಾ ಚನ।।
ಈ ಕುಲದಲ್ಲಿ ಹುಟ್ಟಿದ ಯಾವ ನರಾಧಿಪನೂ ಈ ಹಿಂದೆ ಎಂದೂ ಶೀಲಹೀನನಾಗಲೀ, ನಿರ್ವೀರ್ಯನಾಗಲೀ, ಪ್ರಜಾವಿರಹಿಯಾಗಲಿ ಆಗಿರಲಿಲ್ಲ.
01089003a ತೇಷಾಂ ಪ್ರಥಿತವೃತ್ತಾನಾಂ ರಾಜ್ಞಾಂ ವಿಜ್ಞಾನಶಾಲಿನಾಂ।
01089003c ಚರಿತಂ ಶ್ರೋತುಮಿಚ್ಛಾಮಿ ವಿಸ್ತರೇಣ ತಪೋಧನ।।
ತಪೋಧನ! ವಿಜ್ಞಾನಶಾಲಿ, ಪ್ರಶಂಸನೀಯ ಕಾರ್ಯಗಳೆನ್ನೆಸಗಿದ ರಾಜರ ಚರಿತ್ರೆಯನ್ನು ವಿಸ್ತಾರವಾಗಿ ಕೇಳ ಬಯಸುತ್ತೇನೆ.”
01089004 ವೈಶಂಪಾಯನ ಉವಾಚ।
01089004a ಹಂತ ತೇ ಕಥಯಿಷ್ಯಾಮಿ ಯನ್ಮಾಂ ತ್ವಂ ಪರಿಪೃಚ್ಛಸಿ।
01089004c ಪೂರೋರ್ವಂಶಧರಾನ್ವೀರಾನ್ ಶಕ್ರಪ್ರತಿಮತೇಜಸಃ।।
ವೈಶಂಪಾಯನನು ಹೇಳಿದನು: “ನನ್ನಲ್ಲಿ ನೀನು ಕೇಳಿದಂತೆ ವೀರ್ಯ ಮತ್ತು ತೇಜಸ್ಸುಗಳಲ್ಲಿ ಇಂದ್ರನನ್ನೇ ಹೋಲುತ್ತಿದ್ದ ಪುರುವಂಶಧರರ ಕುರಿತು ಹೇಳುತ್ತೇನೆ.
01089005a ಪ್ರವೀರೇಶ್ವರರೌದ್ರಾಶ್ವಾಸ್ತ್ರಯಃ ಪುತ್ರಾ ಮಹಾರಥಾಃ।
01089005c ಪೂರೋಃ ಪೌಷ್ಟ್ಯಾಮಜಾಯಂತ ಪ್ರವೀರಸ್ತತ್ರ ವಂಶಕೃತ್।।
ಪೂರುವು ಪೌಷ್ಟಿಯಲ್ಲಿ ಮೂವರು ಮಹಾರಥಿ ಪುತ್ರರನ್ನು ಪಡೆದನು: ಪ್ರವೀರ, ಈಶ್ವರ, ಮತ್ತು ರೌದ್ರಾಶ್ವ. ಅವರಲ್ಲಿ ಪ್ರವೀರನು ವಂಶವನ್ನು ಮುಂದುವರಿಸಿದನು.
01089006a ಮನಸ್ಯುರಭವತ್ತಸ್ಮಾಚ್ಶೂರಃ ಶ್ಯೇನೀಸುತಃ ಪ್ರಭುಃ।
01089006c ಪೃಥಿವ್ಯಾಶ್ಚತುರಂತಾಯಾ ಗೋಪ್ತಾ ರಾಜೀವಲೋಚನಃ।।
ರಾಜನು ಶೇನಿಯಲ್ಲಿ ಮನಸ್ಯು ಎಂಬ ಶೂರ ಮಗನನ್ನು ಪಡೆದನು. ಆ ರಾಜೀವಲೋಚನನು ಭೂಮಿಯ ನಾಲ್ಕೂ ದಿಕ್ಕುಗಳನ್ನು ಆಳಿದನು.
01089007a ಸುಭ್ರೂಃ ಸಂಹನನೋ ವಾಗ್ಮೀ ಸೌವೀರೀತನಯಾಸ್ತ್ರಯಃ।
01089007c ಮನಸ್ಯೋರಭವನ್ಪುತ್ರಾಃ ಶೂರಾಃ ಸರ್ವೇ ಮಹಾರಥಾಃ।।
ಮನಸ್ಯುವು ಸೌವೀರಿಯಲ್ಲಿ ಮೂರು ಮಕ್ಕಳನ್ನು ಪಡೆದನು: ಸುಭ್ರು, ಸಂಹನನ, ಮತ್ತು ವಾಗ್ಮಿ. ಈ ಎಲ್ಲ ಪುತ್ರರೂ ಮಹಾರಥಿಗಳೂ ಶೂರರೂ ಆಗಿದ್ದರು.
01089008a ರೌದ್ರಾಶ್ವಸ್ಯ ಮಹೇಷ್ವಾಸಾ ದಶಾಪ್ಸರಸಿ ಸೂನವಃ।
01089008c ಯಜ್ವಾನೋ ಜಜ್ಞಿರೇ ಶೂರಾಃ ಪ್ರಜಾವಂತೋ ಬಹುಶ್ರುತಾಃ।
01089008e ಸರ್ವೇ ಸರ್ವಾಸ್ತ್ರವಿದ್ವಾಂಸಃ ಸರ್ವೇ ಧರ್ಮಪರಾಯಣಾಃ।।
01089009a ಋಚೇಪುರಥ ಕಕ್ಷೇಪುಃ ಕೃಕಣೇಪುಶ್ಚ ವೀರ್ಯವಾನ್।
01089009c ಸ್ಥಂಡಿಲೇಪುರ್ವನೇಪುಶ್ಚ ಸ್ಥಲೇಪುಶ್ಚ ಮಹಾರಥಃ।।
01089010a ತೇಜೇಪುರ್ಬಲವಾನ್ಧೀಮಾನ್ಸತ್ಯೇಪುಶ್ಚೇಂದ್ರವಿಕ್ರಮಃ।
01089010c ಧರ್ಮೇಪುಃ ಸಂನತೇಪುಶ್ಚ ದಶಮೋ ದೇವವಿಕ್ರಮಃ।
01089010e ಅನಾಧೃಷ್ಟಿಸುತಾಸ್ತಾತ ರಾಜಸೂಯಾಶ್ವಮೇಧಿನಃ।।
ರೌದ್ರಾಶ್ವನು ಅಪ್ಸರೆಯಿಂದ ಯಜ್ಞಾದಿಗಳನ್ನು ಮಾಡಿದ, ಮಹೇಶ್ವಾಸ, ಶೂರ. ಪ್ರಜಾವಂತ, ಬಹುಶೃತ ಹತ್ತು ಮಕ್ಕಳನ್ನು ಪಡೆದನು. ಸರ್ವರೂ ಸರ್ವಾಸ್ತ್ರವಿದ್ವಾಂಸರಾಗಿದ್ದರು. ಸರ್ವರೂ ಧರ್ಮಪರಾಯಣರಾಗಿದ್ದರು. ಋಚೇಪು, ಕಕ್ಷೇಪು, ವೀರ್ಯವಾನ ಕುಕಣೇಪು, ಸ್ಥಂಡಿಲೇಪು, ವನೇಪು, ಮಹಾರಥಿ ಸ್ಥಲೇಪು, ತೇಜೇಪು, ಬಲವಂತ ಧೀಮಂತ ಸತ್ಯೇಪು, ಇಂದ್ರವಿಕ್ರಮಿ ಧರ್ಮೇಪು, ಮತ್ತು ಹತ್ತನೆಯವನು ದೇವವಿಕ್ರಮಿ ಸಂನತೇಪು. ಅನಾಧೃಷ್ಟಿಯಲ್ಲಿ ಜನಿಸಿದ ಇವರೆಲ್ಲರೂ ರಾಜಸೂಯ-ಅಶ್ವಮೇಧಗಳನ್ನು ನೆರವೇರಿಸಿದರು.
01089011a ಮತಿನಾರಸ್ತತೋ ರಾಜಾ ವಿದ್ವಾಂಶ್ಚರ್ಚೇಪುತೋಽಭವತ್।
01089011c ಮತಿನಾರಸುತಾ ರಾಜಂಶ್ಚತ್ವಾರೋಽಮಿತವಿಕ್ರಮಾಃ।
01089011e ತಂಸುರ್ಮಹಾನತಿರಥೋ ದ್ರುಹ್ಯುಶ್ಚಾಪ್ರತಿಮದ್ಯುತಿಃ।।
ರಾಜ ಋಚೇಪುವು ಮತಿನಾರನೆಂಬ ವಿದ್ವಾಂಸ ಪುತ್ರನನ್ನು ಪಡೆದನು. ರಾಜ ಮತಿನಾರನು ನಾಲ್ಕು ಅಮಿತವಿಕ್ರಮಿ ಪುತ್ರರನ್ನು ಪಡೆದನು: ತಂಸು, ಮಹತ್, ಅತಿರಥ ಮತ್ತು ಅಪ್ರತಿಮಧ್ಯುತಿ ದ್ರುಹ್ಯು.
01089012a ತೇಷಾಂ ತಂಸುರ್ಮಹಾವೀರ್ಯಃ ಪೌರವಂ ವಂಶಮುದ್ವಹನ್।
01089012c ಆಜಹಾರ ಯಶೋ ದೀಪ್ತಂ ಜಿಗಾಯ ಚ ವಸುಂಧರಾಂ।।
ಅವರಲ್ಲಿ ಮಹಾವೀರ ತಂಸುವು ಪೌರವ ವಂಶವನ್ನು ಮುಂದುವರೆಸಿ, ದೇದೀಪ್ಯಮಾನ ಕೀರ್ತಿಯನ್ನು ಹೊಂದಿ ಭೂಮಿಯನ್ನು ಗೆದ್ದನು.
01089013a ಇಲಿನಂ ತು ಸುತಂ ತಂಸುರ್ಜನಯಾಮಾಸ ವೀರ್ಯವಾನ್।
01089013c ಸೋಽಪಿ ಕೃತ್ಸ್ನಾಮಿಮಾಂ ಭೂಮಿಂ ವಿಜಿಗ್ಯೇ ಜಯತಾಂ ವರಃ।।
ತಂಸುವಿಗೆ ಇಲಿನ ಎನ್ನುವ ವೀರ್ಯವಂತ ಮಗನು ಹುಟ್ಟಿದನು. ಆ ವಿಜಯಿಗಳಲ್ಲಿ ಶ್ರೇಷ್ಠನು ಇಡೀ ಭೂಮಿಯ ಮೇಲೆ ವಿಜಯ ಗಳಿಸಿದನು.
01089014a ರಥಂತರ್ಯಾಂ ಸುತಾನ್ಪಂಚ ಪಂಚಭೂತೋಪಮಾಂಸ್ತತಃ।
01089014c ಇಲಿನೋ ಜನಯಾಮಾಸ ದುಃಷಂತಪ್ರಭೃತೀನ್ನೃಪ।।
ನೃಪ ಇಲಿನನು ರಥಂತರಿಯಲ್ಲಿ ಪಂಚಭೂತಗಳಿಗೆ ಸಮ ದುಃಷಂತನೇ ಮೊದಲಾದ ಐದು ಮಕ್ಕಳನ್ನು ಪಡೆದನು:
01089015a ದುಃಷಂತಂ ಶೂರಭೀಮೌ ಚ ಪ್ರಪೂರ್ವಂ ವಸುಮೇವ ಚ।
01089015c ತೇಷಾಂ ಜ್ಯೇಷ್ಠೋಽಭವದ್ರಾಜಾ ದುಃಷಂತೋ ಜನಮೇಜಯ।।
ದುಃಷಂತ, ಶೂರ, ಭೀಮ, ಪ್ರವಸು ಮತ್ತು ವಸು. ಜನಮೇಜಯ! ಅವರಲ್ಲಿ ಹಿರಿಯವನು ರಾಜ ದುಃಷಂತ.
01089016a ದುಃಷಂತಾದ್ಭರತೋ ಜಜ್ಞೇ ವಿದ್ವಾಂಶಾಕುಂತಲೋ ನೃಪಃ।
01089016c ತಸ್ಮಾದ್ಭರತವಂಶಸ್ಯ ವಿಪ್ರತಸ್ಥೇ ಮಹದ್ಯಶಃ।।
ನೃಪ ದುಃಷಂತನಿಂದ ಶಕುಂತಲೆಯಲ್ಲಿ ಭರತನು ಹುಟ್ಟಿದನು. ಅವನಿಂದ ಮಹಾಯಶಸ್ವಿ ಭರತವಂಶವು ಪ್ರಾರಂಭವಾಯಿತು.
01089017a ಭರತಸ್ತಿಸೃಷು ಸ್ತ್ರೀಷು ನವ ಪುತ್ರಾನಜೀಜನತ್।
01089017c ನಾಭ್ಯನಂದಂತ ತಾನ್ರಾಜಾ ನಾನುರೂಪಾ ಮಮೇತ್ಯುತ।।
ಭರತನು ತನ್ನ ಮೂವರು ಪತ್ನಿಯರಲ್ಲಿ ಒಂಭತ್ತು ಪುತ್ರರನ್ನು ಪಡೆದನು. ನನ್ನ ಅನುರೂಪರಾದವರು ಯಾರೂ ಇಲ್ಲ ಎಂದು ಅವರಲ್ಲಿ ಯಾರನ್ನೂ ರಾಜನು ಒಪ್ಪಿಕೊಳ್ಳಲಿಲ್ಲ.
01089018a ತತೋ ಮಹದ್ಭಿಃ ಕ್ರತುಭಿರೀಜಾನೋ ಭರತಸ್ತದಾ।
01089018c ಲೇಭೇ ಪುತ್ರಂ ಭರದ್ವಾಜಾದ್ಭುಮನ್ಯುಂ ನಾಮ ಭಾರತ।।
ಆಗ ಭರತನು ಒಂದು ಮಹಾ ಕ್ರತುವನ್ನು ನಡೆಸಿ ಅದರಲ್ಲಿ ಭರದ್ವಾಜನಿಂದ ಭುಮನ್ಯು ಎಂಬ ಹೆಸರಿನ ಪುತ್ರನನ್ನು ಪಡೆದನು.
01089019a ತತಃ ಪುತ್ರಿಣಮಾತ್ಮಾನಂ ಜ್ಞಾತ್ವಾ ಪೌರವನಂದನಃ।
01089019c ಭುಮನ್ಯುಂ ಭರತಶ್ರೇಷ್ತ ಯೌವರಾಜ್ಯೇಽಭ್ಯಷೇಚಯತ್।।
ಭರತಶ್ರೇಷ್ಠ! ಆ ಪೌರವನಂದನನು ಭುಮನ್ಯುವನ್ನು ತನ್ನ ಪುತ್ರನೆಂದೇ ಸ್ವೀಕರಿಸಿ ಅವನನ್ನು ಯುವರಾಜನನ್ನಾಗಿ ಅಭಿಷೇಕಿಸಿದನು.
01089020a ತತಸ್ತಸ್ಯ ಮಹೀಂದ್ರಸ್ಯ ವಿತಥಃ ಪುತ್ರಕೋಽಭವತ್।
01089020c ತತಃ ಸ ವಿತಥೋ ನಾಮ ಭುಮನ್ಯೋರಭವತ್ಸುತಃ।।
ಆಗ ಆ ಮಹೀಂದ್ರನಿಗೆ ವಿತಥನೆಂಬ ಪುತ್ರನು ಜನಿಸಿದನು. ನಂತರ ಆ ವಿತಥನಿಗೆ ಭುಮನ್ಯು ಎಂಬ ಹೆಸರಿನ ಸುತನು ಜನಿಸಿದನು.
01089021a ಸುಹೋತ್ರಶ್ಚ ಸುಹೋತಾ ಚ ಸುಹವಿಃ ಸುಯಜುಸ್ತಥಾ।
01089021c ಪುಷ್ಕರಿಣ್ಯಾಮೃಚೀಕಸ್ಯ ಭುಮನ್ಯೋರಭವನ್ಸುತಾಃ।।
ಋಚೀಕ ಭುಮನ್ಯುವು ಪುಷ್ಕರಣಿಯಲ್ಲಿ ಸುಹೋತ್ರ, ಸುಹೋತ, ಸುಹವಿ ಮತ್ತು ಸುಯಜು ಎಂಬ ಮಕ್ಕಳನ್ನು ಪಡೆದನು.
01089022a ತೇಷಾಂ ಜ್ಯೇಷ್ಠಃ ಸುಹೋತ್ರಸ್ತು ರಾಜ್ಯಮಾಪ ಮಹೀಕ್ಷಿತಾಂ।
01089022c ರಾಜಸೂಯಾಶ್ವಮೇಧಾದ್ಯೈಃ ಸೋಽಯಜದ್ಬಹುಭಿಃ ಸವೈಃ।।
ಅವರಲ್ಲಿ ಹಿರಿಯವ ಸುಹೋತ್ರನು ಇಡೀ ಭೂಮಿಯನ್ನೇ ರಾಜ್ಯವಾಗಿ ಪಡೆದು, ರಾಜಸೂಯ-ಅಶ್ವಮೇಧ ಯಜ್ಞಗಳಿಂದ ಬಹಳ ರಾಜರನ್ನು ಜಯಿಸಿದನು.
01089023a ಸುಹೋತ್ರಃ ಪೃಥಿವೀಂ ಸರ್ವಾಂ ಬುಭುಜೇ ಸಾಗರಾಂಬರಾಂ।
01089023c ಪೂರ್ಣಾಂ ಹಸ್ತಿಗವಾಶ್ವಸ್ಯ ಬಹುರತ್ನಸಮಾಕುಲಾಂ।।
ಸುಹೋತ್ರನು ಸಾಗರ ಮತ್ತು ಅಂಬರಗಳ ನಡುವಿನ ಈ ಭೂಮಿಯಲ್ಲಿಯ ಆನೆ, ಗೋವು, ಕುದುರೆ ಮತ್ತು ಬಹು ರತ್ನ ಸಮಾಕುಲ ಸರ್ವವನ್ನೂ ಪರಿಪೂರ್ಣವಾಗಿ ಅನುಭವಿಸಿದನು.
01089024a ಮಮಜ್ಜೇವ ಮಹೀ ತಸ್ಯ ಭೂರಿಭಾರಾವಪೀಡಿತಾ।
01089024c ಹಸ್ತ್ಯಶ್ವರಥಸಂಪೂರ್ಣಾ ಮನುಷ್ಯಕಲಿಲಾ ಭೃಶಂ।।
ಅವನು ಹೇರಿಸಿದ ಆನೆಗಳ, ಕುದುರೆಗಳ, ರಥಗಳ ಮತ್ತು ಬಹುಸಂಖ್ಯೆಯ ಜನರ ಭಾರಿ ವಜೆಯಿಂದ ಭೂಮಿಯು ಕೆಳಗೆ ಕುಸಿದಂತೆ ತೋರುತ್ತಿತ್ತು.
01089025a ಸುಹೋತ್ರೇ ರಾಜನಿ ತದಾ ಧರ್ಮತಃ ಶಾಸತಿ ಪ್ರಜಾಃ।
01089025c ಚೈತ್ಯಯೂಪಾಂಕಿತಾ ಚಾಸೀದ್ಭೂಮಿಃ ಶತಸಹಸ್ರಶಃ।
01089025e ಪ್ರವೃದ್ಧಜನಸಸ್ಯಾ ಚ ಸಹದೇವಾ ವ್ಯರೋಚತ।।
ರಾಜ ಸುಹೋತ್ರನು ಧರ್ಮದಲ್ಲಿ ಪ್ರಜೆಗಳನ್ನು ಆಳುತ್ತಿರುವಾಗ ಭೂಮಿಯು ನೂರಾರು ಸಹಸ್ರಾರು ಚೈತ್ಯಗಳಿಂದಲೂ ಯಾಗ ಧ್ವಜಗಳಿಂದಲೂ ತುಂಬಿತ್ತು. ಭೂಮಿಯ ಮೇಲೆ ಫಸಲು ಮತ್ತು ಜನರು ಸಂವೃದ್ಧರಾಗಿದ್ದರು, ಮತ್ತು ದೇವತೆಗಳೊಂದಿಗೆ ಭೂಮಿಯೂ ಸಂತಸಗೊಂಡಿತ್ತು.
01089026a ಐಕ್ಷ್ವಾಕೀ ಜನಯಾಮಾಸ ಸುಹೋತ್ರಾತ್ ಪೃಥಿವೀಪತೇಃ।
01089026c ಅಜಮೀಢಂ ಸುಮೀಢಂ ಚ ಪುರುಮೀಢಂ ಚ ಭಾರತ।।
ಭಾರತ! ಈ ಪೃಥಿವೀಪತಿ ಸುಹೋತ್ರನಿಗೆ ಐಕ್ಷ್ವಾಕಿಯಲ್ಲಿ ಅಜಮೀಢ, ಸುಮೀಢ, ಮತ್ತು ಪುರುಮೀಢ ಎನ್ನುವ ಮಕ್ಕಳು ಜನಿಸಿದರು.
01089027a ಅಜಮೀಢೋ ವರಸ್ತೇಷಾಂ ತಸ್ಮಿನ್ವಂಶಃ ಪ್ರತಿಷ್ಠಿತಃ।
01089027c ಷಟ್ಪುತ್ರಾನ್ಸೋಽಪ್ಯಜನಯತ್ತಿಸೃಷು ಸ್ತ್ರೀಷು ಭಾರತ।।
01089028a ಋಕ್ಷಂ ಧೂಮಿನ್ಯಥೋ ನೀಲೀ ದುಃಷಂತಪರಮೇಷ್ಠಿನೌ।
01089028c ಕೇಶಿನ್ಯಜನಯಜ್ಜಹ್ನುಮುಭೌ ಚ ಜನರೂಪಿಣೌ।।
ಅವರಲ್ಲಿ ಶ್ರೇಷ್ಠ ಅಜಮೀಢನಲ್ಲಿ ವಂಶವು ಮುಂದುವರೆಯಿತು. ಭಾರತ! ಅವನ ಮೂವರು ಪತ್ನಿಯರಲ್ಲಿ ಆರು ಪುತ್ರರು ಜನಿಸಿದರು: ಧೂಮ್ನಿಯಲ್ಲಿ ಋಕ್ಷ, ನೀಲಿಯಲ್ಲಿ ದುಃಷಂತ ಮತ್ತು ಪರಮೇಷ್ಠಿ, ಮತ್ತು ಕೇಶಿನಿಯಲ್ಲಿ ಜಹ್ನು, ಜನ ಮತ್ತು ರೂಪಿನರು ಜನಿಸಿದರು.
01089029a ತಥೇಮೇ ಸರ್ವಪಾಂಚಾಲಾ ದುಃಷಂತಪರಮೇಷ್ಠಿನೋಃ।
01089029c ಅನ್ವಯಾಃ ಕುಶಿಕಾ ರಾಜಂಜಹ್ನೋರಮಿತತೇಜಸಃ।।
ರಾಜನ್! ದುಃಷಂತ ಮತ್ತು ಪರಮೇಷ್ಠಿಯರಿಂದ ಸರ್ವ ಪಾಂಚಾಲರೂ ಮತ್ತು ಅಮಿತತೇಜಸ ಜಹ್ನುವುನಿಂದ ಕುಶಿಕರೂ ಜನಿಸಿದರು.
01089030a ಜನರೂಪಿಣಯೋರ್ಜ್ಯೇಷ್ಠಂ ಋಕ್ಷಮಾಹುರ್ಜನಾಧಿಪಂ।
01089030c ಋಕ್ಷಾತ್ಸಂವರಣೋ ಜಜ್ಞೇ ರಾಜನ್ವಂಶಕರಸ್ತವ।।
ಜನ ಮತ್ತು ರೂಪಿನರಿಗಿಂತಲೂ ಹಿರಿಯವ ಋಕ್ಷನು ರಾಜನಾದನು, ಮತ್ತು ಋಕ್ಷನಿಂದ ಹುಟ್ಟಿದ ಸಂವರಣ2ನಿಂದ ನಿನ್ನ ವಂಶವು ಪ್ರಾರಂಭವಾಯಿತು.
01089031a ಆರ್ಕ್ಷೇ ಸಂವರಣೇ ರಾಜನ್ಪ್ರಶಾಸತಿ ವಸುಂಧರಾಂ।
01089031c ಸಂಕ್ಷಯಃ ಸುಮಹಾನಾಸೀತ್ಪ್ರಜಾನಾಮಿತಿ ಶುಶ್ರುಮಃ।।
ರಾಜನ್! ಆರ್ಕ್ಷ ಸಂವರಣನು ಭೂಮಿಯ ಮೇಲೆ ಪ್ರಶಾಸನ ಮಾಡುತ್ತಿದ್ದಾಗ ಜನರಿಗೆ ಒಂದು ಮಹತ್ತರ ದುಷ್ಕಾಲ ಒದಗಿತೆಂದು ಕೇಳುತ್ತೇವೆ.
01089032a ವ್ಯಶೀರ್ಯತ ತತೋ ರಾಷ್ಟ್ರಂ ಕ್ಷಯೈರ್ನಾನಾವಿಧೈಸ್ತಥಾ।
01089032c ಕ್ಷುನ್ಮೃತ್ಯುಭ್ಯಾಮನಾವೃಷ್ಟ್ಯಾ ವ್ಯಾಧಿಭಿಶ್ಚ ಸಮಾಹತಂ।
01089032e ಅಭ್ಯಘ್ನನ್ಭಾರತಾಂಶ್ಚೈವ ಸಪತ್ನಾನಾಂ ಬಲಾನಿ ಚ।।
01089033a ಚಾಲಯನ್ವಸುಧಾಂ ಚೈವ ಬಲೇನ ಚತುರಂಗಿಣಾ।
01089033c ಅಭ್ಯಯಾತ್ತಂ ಚ ಪಾಂಚಾಲ್ಯೋ ವಿಜಿತ್ಯ ತರಸಾ ಮಹೀಂ।
01089033e ಅಕ್ಷೌಹಿಣೀಭಿರ್ದಶಭಿಃ ಸ ಏನಂ ಸಮರೇಽಜಯತ್।।
ಭಾರತ! ಆಗ ರಾಷ್ಟ್ರವು ನಾನಾ ವಿಧದ ಕ್ಷಯಗಳಿಂದಲೂ, ಅಕಾಲ ಮೃತ್ಯು, ಅನಾವೃಷ್ಠಿ, ವ್ಯಾಧಿಗಳಿಂದ ಪೀಡಿತಗೊಂಡಿತ್ತು. ಪಾಂಚಾಲರು ತಮ್ಮ ಅಕ್ಷೌಹಿಣೀ ಚತುರಂಗ ಬಲದಿಂದ ಭಾರತರನ್ನು ಆಕ್ರಮಿಸಿ, ಇಡೀ ಭೂಮಿಯನ್ನೇ ನಡುಗಿಸುತ್ತಾ ಯುದ್ಧದಲ್ಲಿ ಅವರನ್ನು ಗೆದ್ದರು.
01089034a ತತಃ ಸದಾರಃ ಸಾಮಾತ್ಯಃ ಸಪುತ್ರಃ ಸಸುಹೃಜ್ಜನಃ।
01089034c ರಾಜಾ ಸಂವರಣಸ್ತಸ್ಮಾತ್ಪಲಾಯತ ಮಹಾಭಯಾತ್।।
ಆಗ ರಾಜ ಸಂವರಣನು ತನ್ನ ಪತ್ನಿ, ಅಮಾತ್ಯ, ಪುತ್ರ ಮತ್ತು ಸುಹೃಜ್ಜನರೊಂದಿಗೆ ಮಹಾ ಭಯದಿಂದ ಪಲಾಯನಗೈದನು.
01089035a ಸಿಂಧೋರ್ನದಸ್ಯ ಮಹತೋ ನಿಕುಂಜೇ ನ್ಯವಸತ್ತದಾ।
01089035c ನದೀವಿಷಯಪರ್ಯಂತೇ ಪರ್ವತಸ್ಯ ಸಮೀಪತಃ।
01089035e ತತ್ರಾವಸನ್ಬಹೂನ್ಕಾಲಾನ್ಭಾರತಾ ದುರ್ಗಮಾಶ್ರಿತಾಃ।।
01089036a ತೇಷಾಂ ನಿವಸತಾಂ ತತ್ರ ಸಹಸ್ರಂ ಪರಿವತ್ಸರಾನ್।
ಸಿಂಧೂ ನದಿಯ ತೀರದಲ್ಲಿ ಪರ್ವತದ ಸಮೀಪದಲ್ಲಿಯ ಮಹಾ ನಿಕುಂಜದಲ್ಲಿ ವಾಸಿಸಿದನು. ಕಷ್ಟಕ್ಕೀಡಾದ ಭರತರು ಅಲ್ಲಿ ಬಹಳಕಾಲ ವಾಸಿಸಿದರು - ಅಲ್ಲಿರುವವರಿಗೆ ಒಂದು ಸಹಸ್ರವರ್ಷಗಳೋ ಎಂಬಂತೆ ತೋರಿದವು.
01089036c ಅಥಾಭ್ಯಗಚ್ಛದ್ಭರತಾನ್ವಸಿಷ್ಠೋ ಭಗವಾನೃಷಿಃ।।
01089037a ತಮಾಗತಂ ಪ್ರಯತ್ನೇನ ಪ್ರತ್ಯುದ್ಗಮ್ಯಾಭಿವಾದ್ಯ ಚ।
01089037c ಅರ್ಘ್ಯಮಭ್ಯಾಹರಂಸ್ತಸ್ಮೈ ತೇ ಸರ್ವೇ ಭಾರತಾಸ್ತದಾ।
01089037e ನಿವೇದ್ಯ ಸರ್ವಂ ಋಷಯೇ ಸತ್ಕಾರೇಣ ಸುವರ್ಚಸೇ।।
ಆಗ ಭಗವಾನ್ ವಸಿಷ್ಠ ಋಷಿಯು ಭರತರಲ್ಲಿಗೆ ಬಂದನು. ಅವನು ಬರುತ್ತಿದ್ದಂತೆ ಅವರೆಲ್ಲರೂ ಧಾರ್ಮಿಕವಾಗಿ ಎದ್ದು ನಿಂತು ಅಭಿವಂದಿಸಿ ಸ್ವಾಗತಿಸಿದರು. ಸರ್ವ ಭಾರತರೂ ಅರ್ಘ್ಯ, ಅಭ್ಯಾಹಾರಗಳಿಂದ, ನೈವೇದ್ಯ, ಮತ್ತು ಸರ್ವ ಸತ್ಕಾರಗಳಿಂದ ಆ ಋಷಿಯನ್ನು ಪೂಜಿಸಿದರು.
01089038a ತಂ ಸಮಾಮಷ್ಟಮೀಮುಷ್ಟಂ ರಾಜಾ ವವ್ರೇ ಸ್ವಯಂ ತದಾ।
01089038c ಪುರೋಹಿತೋ ಭವಾನ್ನೋಽಸ್ತು ರಾಜ್ಯಾಯ ಪ್ರಯತಾಮಹೇ।
01089038e ಓಮಿತ್ಯೇವಂ ವಸಿಷ್ಠೋಽಪಿ ಭಾರತಾನ್ಪ್ರತ್ಯಪದ್ಯತ।।
ಅವನು ಅಲ್ಲಿ ಅವರೊಡನೆ ಎಂಟು ವರ್ಷಗಳಿದ್ದನು. ಆಗ ಸ್ವಯಂ ರಾಜನು “ನಮ್ಮ ಪುರೋಹಿತರಾಗಿದ್ದು ನಮಗೆ ನಮ್ಮ ರಾಜ್ಯವನ್ನು ಹಿಂದೆ ದೊರಕಿಸಿಕೊಡಿ!” ಎಂದು ಕೇಳಿದಾಗ, ವಸಿಷ್ಠನು ಓಂ ಎಂದು ಹೇಳಿ ಭಾರತರಿಗೆ ಒಪ್ಪಿಕೊಂಡನು.
01089039a ಅಥಾಭ್ಯಷಿಂಚತ್ಸಾಮ್ರಾಜ್ಯೇ ಸರ್ವಕ್ಷತ್ರಸ್ಯ ಪೌರವಂ।
01089039c ವಿಷಾಣಭೂತಂ ಸರ್ವಸ್ಯಾಂ ಪೃಥಿವ್ಯಾಮಿತಿ ನಃ ಶ್ರುತಂ।।
ಆಗ ಅವನು ಪೌರವನನ್ನು ಸರ್ವಕ್ಷತ್ರಿಯರ ಸಾಮ್ರಾಜ್ಯನೆಂದು ಅಭೀಷೇಕಿಸಿ, ಇಡೀ ಪೃಥ್ವಿಯ ನಾಯಕನಾಗಿ ನಿಯೋಜಿಸಿದನೆಂದು ಕೇಳುತ್ತೇವೆ.
01089040a ಭರತಾಧ್ಯುಷಿತಂ ಪೂರ್ವಂ ಸೋಽಧ್ಯತಿಷ್ತತ್ಪುರೋತ್ತಮಂ।
01089040c ಪುನರ್ಬಲಿಭೃತಶ್ಚೈವ ಚಕ್ರೇ ಸರ್ವಮಹೀಕ್ಷಿತಃ।।
ಹಿಂದೆ ಭರತರು ನೆಲೆಸಿದ್ದ ಉತ್ತಮ ಪುರದಲ್ಲಿ ಪುನಃ ರಾಜನು ನೆಲೆಸಿ, ಸರ್ವ ಮಹೀಕ್ಷಿತರೂ ಕಪ್ಪವನ್ನು ಕೊಡುವಂತೆ ಮಾಡಿಸಿದನು.
01089041a ತತಃ ಸ ಪೃಥಿವೀಂ ಪ್ರಾಪ್ಯ ಪುನರೀಜೇ ಮಹಾಬಲಃ।
01089041c ಆಜಮೀಢೋ ಮಹಾಯಜ್ಞೈರ್ಬಹುಭಿರ್ಭೂರಿದಕ್ಷಿಣೈಃ।।
ಪೃಥ್ವಿಯನ್ನು ಪುನಃ ಪಡೆದ ಮಹಾಬಲಿ ಅಜಮೀಢನು ಭಾರೀ ಭೂರಿದಕ್ಷಿಣೆಗಳನ್ನಿತ್ತು ಮಹಾ ಯಜ್ಞಗಳನ್ನು ನೆರವೇರಿಸಿದನು.
01089042a ತತಃ ಸಂವರಣಾತ್ಸೌರೀ ಸುಷುವೇ ತಪತೀ ಕುರುಂ।
01089042c ರಾಜತ್ವೇ ತಂ ಪ್ರಜಾಃ ಸರ್ವಾ ಧರ್ಮಜ್ಞ ಇತಿ ವವ್ರಿರೇ।।
ನಂತರ ಸಂವರಣನು ಸೂರ್ಯನ ಪುತ್ರಿ ತಪತಿಯಲ್ಲಿ ಕುರುವನ್ನು ಪಡೆದನು. ಅವನು ಧರ್ಮಜ್ಞನೆಂದು ಸರ್ವ ಪ್ರಜೆಗಳೂ ಅವನನ್ನು ರಾಜನನ್ನಾಗಿ ಆರಿಸಿದರು.
01089043a ತಸ್ಯ ನಾಮ್ನಾಭಿವಿಖ್ಯಾತಂ ಪೃಥಿವ್ಯಾಂ ಕುರುಜಾಂಗಲಂ।
01089043c ಕುರುಕ್ಷೇತ್ರಂ ಸ ತಪಸಾ ಪುಣ್ಯಂ ಚಕ್ರೇ ಮಹಾತಪಾಃ।।
ಅವನ ಹೆಸರಿನಿಂದಲೇ ಈ ಕುರುಜಂಗಲವು ಭೂಮಿಯಲ್ಲೆಲ್ಲಾ ವಿಖ್ಯಾತವಾಯಿತು; ಆ ಮಹಾತಪಸ್ವಿಯ ತಪಸ್ಸಿನಿಂದಲೇ ಕುರುಕ್ಷೇತ್ರವು ಪುಣ್ಯಕ್ಷೇತ್ರವಾಯಿತು3.
01089044a ಅಶ್ವವಂತಮಭಿಷ್ವಂತಂ ತಥಾ ಚಿತ್ರರಥಂ ಮುನಿಂ।
01089044c ಜನಮೇಜಯಂ ಚ ವಿಖ್ಯಾತಂ ಪುತ್ರಾಂಶ್ಚಾಸ್ಯಾನುಶುಶ್ರುಮಃ।
01089044e ಪಂಚೈತಾನ್ವಾಹಿನೀ ಪುತ್ರಾನ್ವ್ಯಜಾಯತ ಮನಸ್ವಿನೀ।।
ಅವನಿಗೆ ಅಶ್ವವಂತ, ಅಭಿಶ್ವಂತ, ಚಿತ್ರರಥ, ಮುನಿ ಮತ್ತು ವಿಖ್ಯಾತ ಜನಮೇಜಯ ಈ ಐವರು ಪುತ್ರರು ಮನಸ್ವಿನೀ ವಾಹಿನಿಯಲ್ಲಿ ಜನಿಸಿದರು ಎಂದು ಕೇಳುತ್ತೇವೆ.
01089045a ಅಭಿಷ್ವತಃ ಪರಿಕ್ಷಿತ್ತು ಶಬಲಾಶ್ವಶ್ಚ ವೀರ್ಯವಾನ್।
01089045c ಅಭಿರಾಜೋ ವಿರಾಜಶ್ಚ ಶಲ್ಮಲಶ್ಚ ಮಹಾಬಲಃ।।
01089046a ಉಚ್ಚೈಃಶ್ರವಾ ಭದ್ರಕಾರೋ ಜಿತಾರಿಶ್ಚಾಷ್ಟಮಃ ಸ್ಮೃತಃ।
01089046c ಏತೇಷಾಮನ್ವವಾಯೇ ತು ಖ್ಯಾತಾಸ್ತೇ ಕರ್ಮಜೈರ್ಗುಣೈಃ।।
ಅಭಿಶ್ವಂತನ ಮಕ್ಕಳು ಪರಿಕ್ಷಿತ, ವೀರ್ಯವಾನ್ ಶಬಲಾಶ್ವ, ಅಭಿರಾಜ, ವಿರಾಜ, ಮಹಾಬಲಿ ಶಲ್ಮಲ, ಉಚ್ಛೈಶ್ರವ, ಭದ್ರಕಾರ ಮತ್ತು ಎಂಟನೆಯವನು ಜಿತಾರಿ ಎನ್ನುತ್ತಾರೆ. ಇವರೆಲ್ಲರೂ ತಮ್ಮ ತಮ್ಮ ಕರ್ಮ ಗುಣಗಳಿಂದ ವಿಖ್ಯಾತರಾಗಿದ್ದರು.
01089047a ಜನಮೇಜಯಾದಯಃ ಸಪ್ತ ತಥೈವಾನ್ಯೇ ಮಹಾಬಲಾಃ।
01089047c ಪರಿಕ್ಷಿತೋಽಭವನ್ಪುತ್ರಾಃ ಸರ್ವೇ ಧರ್ಮಾರ್ಥಕೋವಿದಾಃ।।
01089048a ಕಕ್ಷಸೇನೋಗ್ರಸೇನೌ ಚ ಚಿತ್ರಸೇನಶ್ಚ ವೀರ್ಯವಾನ್।
01089048c ಇಂದ್ರಸೇನಃ ಸುಷೇಣಶ್ಚ ಭೀಮಸೇನಶ್ಚ ನಾಮತಃ।।
ಅವರ ವಂಶದಲ್ಲಿ ಜನಮೇಜಯನೇ ಮೊದಲಾದ ಇನ್ನೂ ಏಳು ಬಲಶಾಲಿ ಪುತ್ರರು ಆದರು. ಕಕ್ಷಸೇನ, ಉಗ್ರಸೇನ, ವೀರ್ಯವಾನ್ ಚಿತ್ರಸೇನ, ಇಂದ್ರಸೇನ, ಸುಷೇಣ, ಮತ್ತು ಭೀಮಸೇನ ಎಂಬ ಹೆಸರಿನ ಪರಿಕ್ಷಿತನ ಪುತ್ರರೆಲ್ಲರೂ ಧರ್ಮಾರ್ಥಕೋವಿದರಾಗಿದ್ದರು.
01089049a ಜನಮೇಜಯಸ್ಯ ತನಯಾ ಭುವಿ ಖ್ಯಾತಾ ಮಹಾಬಲಾಃ।
01089049c ಧೃತರಾಷ್ಟ್ರಃ ಪ್ರಥಮಜಃ ಪಾಂಡುರ್ಬಾಹ್ಲೀಕ ಏವ ಚ।।
01089050a ನಿಷಧಶ್ಚ ಮಹಾತೇಜಾಸ್ತಥಾ ಜಾಂಬೂನದೋ ಬಲೀ।
01089050c ಕುಂಡೋದರಃ ಪದಾತಿಶ್ಚ ವಸಾತಿಶ್ಚಾಷ್ಟಮಃ ಸ್ಮೃತಃ।
01089050e ಸರ್ವೇ ಧರ್ಮಾರ್ಥಕುಶಲಾಃ ಸರ್ವೇ ಭೂತಹಿತೇ ರತಾಃ।।
ಜನಮೇಜಯನ ಮಹಾಬಲಶಾಲಿ ಪುತ್ರರು ಭೂಮಿಯಲ್ಲಿ ವಿಖ್ಯಾತರಾದರು - ಹಿರಿಯವನು ಧೃತರಾಷ್ಟ್ರ, ಪಾಂಡು, ಬಾಹ್ಲೀಕ, ಮಹಾತೇಜಸ್ವಿ ನಿಷಧ, ಬಲಶಾಲಿ ಜಾಂಬೂನದ, ಕುಂಡೋದರ, ಪದಾತಿ, ಮತ್ತು ಎಂಟನೆಯವನು ವಸಾತಿ. ಇವರೆಲ್ಲರೂ ಧರ್ಮಾರ್ಥಕುಶಲರಾಗಿ ಸರ್ವ ಭೂತಹಿತದಲ್ಲಿ ನಿರತರಾಗಿದ್ದರು.
01089051a ಧೃತರಾಷ್ಟ್ರೋಽಥ ರಾಜಾಸೀತ್ತಸ್ಯ ಪುತ್ರೋಽಥ ಕುಂಡಿಕಃ।
01089051c ಹಸ್ತೀ ವಿತರ್ಕಃ ಕ್ರಾಥಶ್ಚ ಕುಂಡಲಶ್ಚಾಪಿ ಪಂಚಮಃ।
01089051e ಹವಿಃಶ್ರವಾಸ್ತಥೇಂದ್ರಾಭಃ ಸುಮನ್ಯುಶ್ಚಾಪರಾಜಿತಃ।।
ಧೃತರಾಷ್ಟ್ರನು ರಾಜನಾದನು. ಅವನ ಪುತ್ರರು ಕುಂಡಿಕ, ಹಸ್ತಿ, ವಿತರ್ಕ, ಕ್ರಾಥ, ಐದನೆಯವನು ಕುಂಡಲ, ಹವಿಃಶ್ರವ, ಇಂದ್ರಾಭ ಮತ್ತು ಅಪರಾಜಿತ ಸುಮನ್ಯು.
01089052a ಪ್ರತೀಪಸ್ಯ ತ್ರಯಃ ಪುತ್ರಾ ಜಜ್ಞಿರೇ ಭರತರ್ಷಭ।
01089052c ದೇವಾಪಿಃ ಶಂತನುಶ್ಚೈವ ಬಾಹ್ಲೀಕಶ್ಚ ಮಹಾರಥಃ।।
ಭರತರ್ಷಭ! ಪ್ರತೀಪನು ಮೂರು ಮಕ್ಕಳನ್ನು ಪಡೆದನು: ದೇವಾಪಿ, ಶಂತನು, ಮತ್ತು ಮಹಾರಥಿ ಬಾಹ್ಲೀಕ.
01089053a ದೇವಾಪಿಸ್ತು ಪ್ರವವ್ರಾಜ ತೇಷಾಂ ಧರ್ಮಪರೀಪ್ಸಯಾ।
01089053c ಶಂತನುಶ್ಚ ಮಹೀಂ ಲೇಭೇ ಬಾಹ್ಲೀಕಶ್ಚ ಮಹಾರಥಃ।।
ಧರ್ಮಮಾರ್ಗವನ್ನು ಅರಸಿ ದೇವಾಪಿಯು ಪರಿವ್ರಾಜನಾದನು. ಮಹಾರಥಿ ಬಾಹ್ಲೀಕ ಮತ್ತು ಶಂತನು ರಾಜ್ಯವನ್ನು ಪಡೆದರು.
01089054a ಭರತಸ್ಯಾನ್ವಯೇ ಜಾತಾಃ ಸತ್ತ್ವವಂತೋ ಮಹಾರಥಾಃ।
01089054c ದೇವರ್ಷಿಕಲ್ಪಾ ನೃಪತೇ ಬಹವೋ ರಾಜಸತ್ತಮಾಃ।।
01089055a ಏವಂವಿಧಾಶ್ಚಾಪ್ಯಪರೇ ದೇವಕಲ್ಪಾ ಮಹಾರಥಾಃ।
01089055c ಜಾತಾ ಮನೋರನ್ವವಾಯೇ ಐಲವಂಶವಿವರ್ಧನಾಃ।।
ಭರತಾನ್ವಯದಲ್ಲಿ ಇನ್ನೂ ಅನೇಕ ಸತ್ವವಂತರೂ, ಮಹಾರಥಿಗಳು, ದೇವರ್ಷಿಸಮಾನರೂ ಆದ ಬಹಳಷ್ಟು ರಾಜಸತ್ತಮರು ಜನಿಸಿದರು. ಇದೇ ರೀತಿಯಲ್ಲಿ ಮನುವಿನ ಅನ್ವಯದಲ್ಲಿ ಇತರ ದೇವಕಲ್ಪ ಮಹಾರಥಿಗಳು ಹುಟ್ಟಿ ಇಲನಿಂದ ಪ್ರಾರಂಭವಾದ ವಂಶವನ್ನು ಮುಂದುವರೆಸಿದರು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಪುರೂವಂಶಾನುಕೀರ್ತನೇ ಏಕೋನನವತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಪುರುವಂಶಾನುಕೀರ್ತನದಲ್ಲಿ ಎಂಭತ್ತೊಂಭತ್ತನೆಯ ಅಧ್ಯಾಯವು.