ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಸಂಭವ ಪರ್ವ
ಅಧ್ಯಾಯ 83
ಸಾರ
ತಪಸ್ಸಿನಲ್ಲಿ ತನ್ನ ಸರಿಸಮಾನರಾದವರು ಯಾರೂ ಇಲ್ಲವೆಂದು ಹೇಳಿದ ಯಯಾತಿಯನ್ನು ದೇವ-ಗಂಧರ್ವ-ಋಷಿಗಳನ್ನು ಅವಮಾನಿಸಿ, ಕ್ಷೀಣಪುಣ್ಯನಾದನೆಂದು ಇಂದ್ರನು ಅವನನ್ನು ಸ್ವರ್ಗದಿಂದ ಬೀಳಿಸುವಾಗ ಸತ್ಯವಂತರ ಮಧ್ಯೆ ಬೀಳಿಸಬೇಕೆಂದು ಯಯಾತಿಯು ಕೇಳಿಕೊಳ್ಳುವುದು (1-6). ಬೀಳುತ್ತಿರುವ ಯಯಾತಿಯನ್ನು ನೋಡಿದ ಅಷ್ಟಕನು ಪ್ರಶ್ನಿಸುವುದು (6-13).
01083001 ಇಂದ್ರ ಉವಾಚ।
01083001a ಸರ್ವಾಣಿ ಕರ್ಮಾಣಿ ಸಮಾಪ್ಯ ರಾಜನ್ ಗೃಹಾನ್ಪರಿತ್ಯಜ್ಯ ವನಂ ಗತೋಽಸಿ।
01083001c ತತ್ತ್ವಾಂ ಪೃಚ್ಛಾಮಿ ನಹುಷಸ್ಯ ಪುತ್ರ ಕೇನಾಸಿ ತುಲ್ಯಸ್ತಪಸಾ ಯಯಾತೇ।।
ಇಂದ್ರನು ಹೇಳಿದನು: “ರಾಜನ್! ಸರ್ವಕರ್ಮಗಳನ್ನು ಪೂರೈಸಿ ಮನೆಯನ್ನು ತ್ಯಜಿಸಿ ವನಕ್ಕೆ ಹೋದೆ. ನಹುಷಪುತ್ರ! ಈಗ ನಿನ್ನನ್ನು ಕೇಳುತ್ತಿದ್ದೇನೆ. ತಪಸ್ಸಿನಲ್ಲಿ ಯಯಾತಿಯ ಸಮನಾದವರು ಯಾರಿದ್ದಾರೆ?”
01083002 ಯಯಾತಿರುವಾಚ।
01083002a ನಾಹಂ ದೇವಮನುಷ್ಯೇಷು ನ ಗಂಧರ್ವಮಹರ್ಷಿಷು।
01083002c ಆತ್ಮನಸ್ತಪಸಾ ತುಲ್ಯಂ ಕಂ ಚಿತ್ಪಶ್ಯಾಮಿ ವಾಸವ।।
ಯಯಾತಿಯು ಹೇಳಿದನು: “ವಾಸವ! ತಪಸ್ಸಿನಲ್ಲಿ ನನ್ನ ಸರಿಸಮನಾದವರನ್ನು ನಾನು ದೇವ-ಮನುಷ್ಯರಲ್ಲಿ, ಗಂಧರ್ವ-ಮಹರ್ಷಿಗಳಲ್ಲಿ ಯಾರನ್ನೂ ಕಾಣುತ್ತಿಲ್ಲ.”
01083003 ಇಂದ್ರ ಉವಾಚ।
01083003a ಯದಾವಮಂಸ್ಥಾಃ ಸದೃಶಃ ಶ್ರೇಯಸಶ್ಚ ಪಾಪೀಯಸಶ್ಚಾವಿದಿತಪ್ರಭಾವಃ।
01083003c ತಸ್ಮಾಲ್ಲೋಕಾ ಅಂತವಂತಸ್ತವೇಮೇ ಕ್ಷೀಣೇ ಪುಣ್ಯೇ ಪತಿತಾಸ್ಯದ್ಯ ರಾಜನ್।।
ಇಂದ್ರನು ಹೇಳಿದನು: “ರಾಜನ್! ನಿನ್ನ ಸದೃಶರಾಗಿರುವವರನ್ನು, ನಿನಗಿಂತಲೂ ಹೆಚ್ಚಿನವರನ್ನು ಮತ್ತು ಕೀಳಾದವರನ್ನು ಅವರ ಪ್ರಭಾವಗಳನ್ನು ತಿಳಿದುಕೊಳ್ಳದೇ ಅಪಮಾನಿಸಿದುದಕ್ಕಾಗಿ ಈ ಲೋಕಗಳು ನಿನಗೆ ಕೊನೆಗೊಳ್ಳುತ್ತವೆ. ಕ್ಷೀಣಪುಣ್ಯನಾಗಿ ಇಂದು ಬೀಳುತ್ತೀಯೆ!”
01083004 ಯಯಾತಿರುವಾಚ।
01083004a ಸುರರ್ಷಿಗಂಧರ್ವನರಾವಮಾನಾತ್ ಕ್ಷಯಂ ಗತಾ ಮೇ ಯದಿ ಶಕ್ರ ಲೋಕಾಃ।
01083004c ಇಚ್ಛೇಯಂ ವೈ ಸುರಲೋಕಾದ್ವಿಹೀನಃ ಸತಾಂ ಮಧ್ಯೇ ಪತಿತುಂ ದೇವರಾಜ।।
ಯಯಾತಿಯು ಹೇಳಿದನು: “ಶಕ್ರ! ದೇವರಾಜ! ಸುರ-ಋಷಿ-ಗಂಧರ್ವರನ್ನು ಅಪಮಾನಿಸಿದುದಕ್ಕಾಗಿ ನನಗೆ ಲೋಕಗಳು ಕೊನೆಯಾಗುವವೆಂದಾದರೆ ಸುರಲೋಕದಿಂದ ವಿಹೀನಾಗಿ ಸತ್ಯವಂತರ ಮಧ್ಯೆ ಬೀಳಲು ಬಯಸುತ್ತೇನೆ.”
01083005 ಇಂದ್ರ ಉವಾಚ।
01083005a ಸತಾಂ ಸಕಾಶೇ ಪತಿತಾಸಿ ರಾಜನ್ ಚ್ಯುತಃ ಪ್ರತಿಷ್ಠಾಂ ಯತ್ರ ಲಬ್ಧಾಸಿ ಭೂಯಃ।
01083005c ಏವಂ ವಿದಿತ್ವಾ ತು ಪುನರ್ಯಯಾತೇ ನ ತೇಽವಮಾನ್ಯಾಃ ಸದೃಶಃ ಶ್ರೇಯಸಶ್ಚ।।
ಇಂದ್ರನು ಹೇಳಿದನು: “ರಾಜನ್! ಚ್ಯುತನಾಗಿ ಸತ್ಯವಂತರ ಸಮೀಪದಲ್ಲಿಯೇ ಬೀಳುತ್ತೀಯೆ. ಅಲ್ಲಿ ಪುನಃ ಪ್ರತಿಷ್ಠೆಯನ್ನು ಪಡೆಯುತ್ತೀಯೆ. ಯುಯಾತಿ! ಇದನ್ನು ತಿಳಿದ ನೀನು ಪುನಃ ನಿನ್ನ ಸದೃಶ ಶ್ರೇಯಸ್ಕರರನ್ನು ಅವಮಾಸಿಸುವುದಿಲ್ಲ.”
01083006 ವೈಶಂಪಾಯನ ಉವಾಚ।
01083006a ತತಃ ಪ್ರಹಾಯಾಮರರಾಜಜುಷ್ಟಾನ್ ಪುಣ್ಯಾಽಲ್ಲೋಕಾನ್ಪತಮಾನಂ ಯಯಾತಿಂ।।
01083006c ಸಂಪ್ರೇಕ್ಷ್ಯ ರಾಜರ್ಷಿವರೋಽಷ್ಟಕಸ್ತಂ ಉವಾಚ ಸದ್ಧರ್ಮವಿಧಾನಗೋಪ್ತಾ।
ವೈಶಂಪಾಯನನು ಹೇಳಿದನು: “ಅಮರರಾಜನು ಆಳುವ ಪುಣ್ಯಲೋಕಗಳನ್ನು ತೊರೆದು ಬೀಳುತ್ತಿರುವ ಯಯಾತಿಯನ್ನು ನೋಡಿ ರಾಜರ್ಷಿಶ್ರೇಷ್ಠ, ಸದ್ಧರ್ಮವಿಧಾನಗೋಪ್ತ ಅಷ್ಟಕನು ಹೇಳಿದನು:
01083007a ಕಸ್ತ್ವಂ ಯುವಾ ವಾಸವತುಲ್ಯರೂಪಃ ಸ್ವತೇಜಸಾ ದೀಪ್ಯಮಾನೋ ಯಥಾಗ್ನಿಃ।।
01083007c ಪತಸ್ಯುದೀರ್ಣಾಂಬುಧರಾಂಧಕಾರಾತ್ ಖಾತ್ಖೇಚರಾಣಾಂ ಪ್ರವರೋ ಯಥಾರ್ಕಃ।
“ರೂಪದಲ್ಲಿ ವಾಸವನಂತಿರುವ ಯುವಕನೇ! ನೀನು ಯಾರು? ನಿನ್ನದೇ ತೇಜಸ್ಸಿನಿಂದ ಅಗ್ನಿಯಂತೆ ಬೆಳಗುತ್ತಿದ್ದೀಯೆ! ಆಕಾಶದಲ್ಲಿ ಮೋಡಕವಿದ ಕತ್ತಲೆಯಿಂದ ಹೊರಬರುವ ಖೇಚರಗಳ ಪ್ರವರ ಸೂರ್ಯನಂತೆ ಹೊರಬೀಳುತ್ತಿದ್ದೀಯೆ!
01083008a ದೃಷ್ಟ್ವಾ ಚ ತ್ವಾಂ ಸೂರ್ಯಪಥಾತ್ಪತಂತಂ ವೈಶ್ವಾನರಾರ್ಕದ್ಯುತಿಮಪ್ರಮೇಯಂ।।
01083008c ಕಿಂ ನು ಸ್ವಿದೇತತ್ಪತತೀತಿ ಸರ್ವೇ ವಿತರ್ಕಯಂತಃ ಪರಿಮೋಹಿತಾಃ ಸ್ಮಃ।।
ಅಪ್ರಮೇಯವಾದ ಅಗ್ನಿ-ಸೂರ್ಯರ ಪ್ರಕಾಶದೊಂದಿಗೆ ಸೂರ್ಯಪಥದಿಂದ ಬೀಳುತ್ತಿರುವ ನಿನ್ನನ್ನು ನೋಡಿ ಹೀಗೆ ಬೀಳುತ್ತಿರುವವನು ಯಾರೆಂದು ನಾವೆಲ್ಲರೂ ಪರಿಮೋಹಿತರಾಗಿ ತರ್ಕಿಸುತ್ತಿದ್ದೇವೆ!
01083009a ದೃಷ್ಟ್ವಾ ಚ ತ್ವಾಂ ವಿಷ್ಠಿತಂ ದೇವಮಾರ್ಗೇ ಶಕ್ರಾರ್ಕವಿಷ್ಣುಪ್ರತಿಮಪ್ರಭಾವಂ।
01083009c ಅಭ್ಯುದ್ಗತಾಸ್ತ್ವಾಂ ವಯಮದ್ಯ ಸರ್ವೇ ತತ್ತ್ವಂ ಪಾತೇ ತವ ಜಿಜ್ಞಾಸಮಾನಾಃ।।
ಶಕ್ರ, ಅರ್ಕ, ವಿಷ್ಣುಗಳ ಅಪ್ರತಿಮ ಪ್ರಭಾವದೊಂದಿಗೆ ದೇವಮಾರ್ಗವನ್ನು ಬಳಸಿದ ನಿನ್ನನ್ನು ಎದಿರುಗೊಂಡು ನಿನ್ನ ಪತನಕ್ಕೆ ಕಾರಣವೇನೆಂದು ಕೇಳಲು ನಾವೆಲ್ಲರೂ ಎದ್ದು ನಿಂತಿದ್ದೇವೆ.
01083010a ನ ಚಾಪಿ ತ್ವಾಂ ಧೃಷ್ಣುಮಃ ಪ್ರಷ್ಟುಮಗ್ರೇ ನ ಚ ತ್ವಮಸ್ಮಾನ್ಪೃಚ್ಛಸಿ ಯೇ ವಯಂ ಸ್ಮಃ।
01083010c ತತ್ತ್ವಾಂ ಪೃಚ್ಛಾಮಃ ಸ್ಪೃಹಣೀಯರೂಪಂ ಕಸ್ಯ ತ್ವಂ ವಾ ಕಿಂನಿಮಿತ್ತಂ ತ್ವಮಾಗಾಃ।।
ನಮ್ಮ ಕುರಿತು ನೀನೇ ಮೊದಲು ಕೇಳಲಿಲ್ಲವಾದುದರಿಂದ ನಾವು ನಿನ್ನನ್ನು ಪ್ರಶ್ನಿಸುವ ಸಾಹಸವನ್ನು ಮಾಡಿದ್ದೇವೆ. ಸ್ಪೃಹಣೀಯರೂಪೀ! ನಿನ್ನನ್ನು ಕೇಳುತ್ತಿದ್ದೇವೆ - ನೀನು ಯಾರವನು? ಯಾವ ಕಾರಣದಿಂದ ನೀನು ಇಲ್ಲಿಗೆ ಆಗಮಿಸಿರುವೆ?
01083011a ಭಯಂ ತು ತೇ ವ್ಯೇತು ವಿಷಾದಮೋಹೌ ತ್ಯಜಾಶು ದೇವೇಂದ್ರಸಮಾನರೂಪ।
01083011c ತ್ವಾಂ ವರ್ತಮಾನಂ ಹಿ ಸತಾಂ ಸಕಾಶೇ ನಾಲಂ ಪ್ರಸೋದುಂ ಬಲಹಾಪಿ ಶಕ್ರಃ।।
ದೇವೇಂದ್ರಸಮಾನ ರೂಪಿಯೇ! ಭಯ, ವಿಷಾದ, ಮೋಹಗಳನ್ನು ನೀನು ತೊರೆಯುಬೇಕು. ಏಕೆಂದರೆ ವರ್ತಮಾನದಲ್ಲಿ ನೀನು ಸತ್ಯವಂತರ ಬಳಿ ಇದ್ದೀಯೆ. ಬಲಹ ಶಕ್ರನೂ ಇಲ್ಲಿ ನಿನ್ನನ್ನು ಪೀಡಿಸಲಾರ.
01083012a ಸಂತಃ ಪ್ರತಿಷ್ಠಾ ಹಿ ಸುಖಚ್ಯುತಾನಾಂ ಸತಾಂ ಸದೈವಾಮರರಾಜಕಲ್ಪ।
01083012c ತೇ ಸಂಗತಾಃ ಸ್ಥಾವರಜಂಗಮೇಶಾಃ ಪ್ರತಿಷ್ಠಿತಸ್ತ್ವಂ ಸದೃಶೇಷು ಸತ್ಸು।।
ಅಮರರಾಜಕಲ್ಪ! ಸುಖದಿಂದ ಚ್ಯುತರಾದ ಸತ್ಯವಂತರಿಗೆ ಸತ್ಯವಂತರೇ ಪ್ರತಿಷ್ಠೆ. ನಿನ್ನ ಜೊತೆಯಿರುವವರು ಸ್ಥಾವರಜಂಗಮಗಳಿಗೆ ಒಡೆಯರು. ನಿನ್ನ ಸದೃಶರಾದ ಸತ್ಯವಂತರಲ್ಲಿ ನೀನು ಪ್ರತಿಷ್ಠೆಯನ್ನು ಕಾಣುತ್ತೀಯೆ.
01083013a ಪ್ರಭುರಗ್ನಿಃ ಪ್ರತಪನೇ ಭೂಮಿರಾವಪನೇ ಪ್ರಭುಃ।
01083013c ಪ್ರಭುಃ ಸೂರ್ಯಃ ಪ್ರಕಾಶಿತ್ವೇ ಸತಾಂ ಚಾಭ್ಯಾಗತಃ ಪ್ರಭುಃ।।
ಸುಡುವುದರಲ್ಲಿ ಅಗ್ನಿಯು ಪ್ರಭುವು. ಬಿತ್ತುವುದರಲ್ಲಿ ಭೂಮಿಯು ಪ್ರಭುವು. ಪ್ರಕಾಶಿಸುವುದರಲ್ಲಿ ಸೂರ್ಯನು ಪ್ರಭುವು. ಸತ್ಯವಂತರಲ್ಲಿ ಅಭ್ಯಾಗತನು ಪ್ರಭುವು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಯಯಾತ್ಯುಪಾಖ್ಯಾನೇ ತ್ರ್ಯಶೀತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಯಯಾತಿ-ಉಪಾಖ್ಯಾನದಲ್ಲಿ ಎಂಭತ್ತಮೂರನೆಯ ಅಧ್ಯಾಯವು.