082 ಯಯಾತ್ಯುಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಸಂಭವ ಪರ್ವ

ಅಧ್ಯಾಯ 82

ಸಾರ

ಸ್ವರ್ಗದಲ್ಲಿ ಯಯಾತಿಯ ವಾಸ (1-2). ಇಂದ್ರನ ಪ್ರಶ್ನೆಗೆ ಯಯಾತಿಯು ಪೂರುವಿಗೆ ನೀಡಿದ ಉಪದೇಶದ ಮಾತುಗಳನ್ನು ಹೇಳಿದುದು (3-13).

01082001 ವೈಶಂಪಾಯನ ಉವಾಚ।
01082001a ಸ್ವರ್ಗತಃ ಸ ತು ರಾಜೇಂದ್ರೋ ನಿವಸನ್ದೇವಸದ್ಮನಿ।
01082001c ಪೂಜಿತಸ್ತ್ರಿದಶೈಃ ಸಾಧ್ಯೈರ್ಮರುದ್ಭಿರ್ವಸುಭಿಸ್ತಥಾ।।

ವೈಶಂಪಾಯನನು ಹೇಳಿದನು: “ಸ್ವರ್ಗವನ್ನು ಸೇರಿದ ಆ ರಾಜೇಂದ್ರನು ಸಾಧ್ಯ, ಮರುತ್ತರು ಮತ್ತು ವಸುಗಳಿಂದ ಹಾಗೂ ತ್ರಿದಶರಿಂದ ಪೂಜಿತನಾಗಿ ದೇವಸದ್ಮನಿಯಲ್ಲಿ ವಾಸಿಸಿದನು.

01082002a ದೇವಲೋಕಾದ್ಬ್ರಹ್ಮಲೋಕಂ ಸಂಚರನ್ಪುಣ್ಯಕೃದ್ವಶೀ।
01082002c ಅವಸತ್ಪೃಥಿವೀಪಾಲೋ ದೀರ್ಘಕಾಲಮಿತಿ ಶ್ರುತಿಃ।।

ಪುಣ್ಯಕರ್ಮಗಳಿಂದ ಅಧಿಕಾರವನ್ನು ಪಡೆದ ಆ ಪೃಥಿವೀಪಾಲನು ದೇವಲೋಕದಿಂದ ಬ್ರಹ್ಮಲೋಕಕ್ಕೂ ಹೋಗಿ ಅಲ್ಲಿ ದೀರ್ಘಕಾಲ ನೆಲೆಸಿದ್ದನೆಂದೂ ಕೇಳಿದ್ದೇವೆ.

01082003a ಸ ಕದಾ ಚಿನ್ನೃಪಶ್ರೇಷ್ಠೋ ಯಯಾತಿಃ ಶಕ್ರಮಾಗಮತ್।
01082003c ಕಥಾಂತೇ ತತ್ರ ಶಕ್ರೇಣ ಪೃಷ್ಟಃ ಸ ಪೃಥಿವೀಪತಿಃ।।

ಒಮ್ಮೆ ಆ ನೃಪತಿಶ್ರೇಷ್ಠ ಯಯಾತಿಯು ಶಕ್ರನಲ್ಲಿಗೆ ಹೋಗಿ ಮಾತನಾಡುತ್ತಿರಲು ಶಕ್ರನು ಪೃಥಿವೀಪತಿಗೆ ಕೇಳಿದನು.

01082004 ಶಕ್ರ ಉವಾಚ।
01082004a ಯದಾ ಸ ಪೂರುಸ್ತವ ರೂಪೇಣ ರಾಜಂ ಜರಾಂ ಗೃಹೀತ್ವಾ ಪ್ರಚಚಾರ ಭೂಮೌ।
01082004c ತದಾ ರಾಜ್ಯಂ ಸಂಪ್ರದಾಯೈವ ತಸ್ಮೈ ತ್ವಯಾ ಕಿಮುಕ್ತಃ ಕಥಯೇಹ ಸತ್ಯಂ।।

ಶಕ್ರನು ಹೇಳಿದನು: “ರಾಜನ್! ನಿನ್ನ ರೂಪ ಮತ್ತು ಮುಪ್ಪನ್ನು ತೆಗೆದುಕೊಂಡು ಭೂಮಿಯಲ್ಲಿ ಸಂಚರಿಸುತ್ತಿದ್ದ ಪೂರುವಿಗೆ ರಾಜ್ಯವನ್ನು ಕೊಡುವಾಗ ನೀನು ಏನು ಹೇಳಿದೆ? ಸತ್ಯವನ್ನು ಹೇಳು.”

01082005 ಯಯಾತಿರುವಾಚ।
01082005a ಗಂಗಾಯಮುನಯೋರ್ಮಧ್ಯೇ ಕೃತ್ಸ್ನೋಽಯಂ ವಿಷಯಸ್ತವ।
01082005c ಮಧ್ಯೇ ಪೃಥಿವ್ಯಾಸ್ತ್ವಂ ರಾಜಾ ಭ್ರಾತರೋಽಂತ್ಯ್ಯಾಧಿಪಾಸ್ತವ।।

ಯಯಾತಿಯು ಹೇಳಿದನು: “ಗಂಗೆ ಮತ್ತು ಯಮುನೆಯರ ಮಧ್ಯದಲ್ಲಿರುವ ಎಲ್ಲವೂ ನಿನ್ನ ರಾಜ್ಯ. ಈ ಭೂಮಿಯ ಮಧ್ಯೆ ನೀನು ರಾಜನಾಗಿರು. ನಿನ್ನ ಅಣ್ಣಂದಿರು ಆಚೆಯಿರುವವುಗಳನ್ನು ಪಾಲಿಸಲಿ.

01082006a ಅಕ್ರೋಧನಃ ಕ್ರೋಧನೇಭ್ಯೋ ವಿಶಿಷ್ಟಃ ತಥಾ ತಿತಿಕ್ಷುರತಿತಿಕ್ಷೋರ್ವಿಶಿಷ್ಟಃ।
01082006c ಅಮಾನುಷೇಭ್ಯೋ ಮಾನುಷಾಶ್ಚ ಪ್ರಧಾನಾ ವಿದ್ವಾಂಸ್ತಥೈವಾವಿದುಷಃ ಪ್ರಧಾನಃ।।

ಕ್ರೋಧಗೊಳ್ಳದವನು ಕ್ರೋಧಿಗಳನ್ನು, ಹಾಗೆಯೇ ಕ್ಷಮಿಸುವವನು ಕ್ಷಮೆಯಿಲ್ಲದವನನ್ನು ಮೀರಿಸುತ್ತಾನೆ. ಅಮಾನುಷರಲ್ಲಿ ಮನುಷ್ಯನು ಪ್ರಧಾನನು. ಅವಿದುಷರಲ್ಲಿ ವಿದ್ವಾಂಸರು ಪ್ರಧಾನರು.

01082007a ಆಕ್ರುಶ್ಯಮಾನೋ ನಾಕ್ರೋಶೇನ್ಮನ್ಯುರೇವ ತಿತಿಕ್ಷತಃ।
01082007c ಆಕ್ರೋಷ್ಟಾರಂ ನಿರ್ದಹತಿ ಸುಕೃತಂ ಚಾಸ್ಯ ವಿಂದತಿ।।

ಇತರರು ದೂರುವಾಗ ದೂರಬಾರದು. ಕ್ಷಮಾವಂತನ ಸಿಟ್ಟೇ ನಿಂದಿಸುವವನನ್ನು ಸುಟ್ಟುಹಾಕುತ್ತದೆ ಮತ್ತು ಅವನ ಸುಕೃತಗಳನ್ನು ಗಳಿಸುತ್ತಾನೆ.

01082008a ನಾರುಂತುದಃ ಸ್ಯಾನ್ನ ನೃಶಂಸವಾದೀ ನ ಹೀನತಃ ಪರಮಭ್ಯಾದದೀತ।
01082008c ಯಯಾಸ್ಯ ವಾಚಾ ಪರ ಉದ್ವಿಜೇತ ನ ತಾಂ ವದೇದ್ರುಶತೀಂ ಪಾಪಲೋಕ್ಯಾಂ।।

ಇತರರನ್ನು ಅಳಿಸಬೇಡ. ಕ್ರೂರವಾಗಿ ಮಾತನಾಡಬೇಡ. ಕಡುಬಡವನಿಂದ ಅವನ ಕೊನೆಯದನ್ನು ಕಸಿದುಕೊಳ್ಳಬೇಡ. ಗಾಯಗೊಳಿಸುವಂಥ ಮತ್ತು ನರಕವನ್ನು ದೊರಕಿಸುವಂಥ ಮಾತನಾಡಿದರೆ ಇತರರನ್ನು ನೋಯಿಸುವಂಥ ಮಾತುಗಳನ್ನಾಡಬೇಡ.

01082009a ಅರುಂತುದಂ ಪುರುಷಂ ರೂಕ್ಷವಾಚಂ ವಾಕ್ಕಂಟಕೈರ್ವಿತುದಂತಂ ಮನುಷ್ಯಾನ್।
01082009c ವಿದ್ಯಾದಲಕ್ಷ್ಮೀಕತಮಂ ಜನಾನಾಂ ಮುಖೇ ನಿಬದ್ಧಾಂ ನಿರೃತಿಂ ವಹಂತಂ।।

ನೋಯಿಸುವ, ಭಿರುಸಾದ, ಕಟುಮಾತುಗಳನ್ನು ಆಡುವ, ಮಾತಿನ ಮುಳ್ಳಿನಿಂದ ಇತರರನ್ನು ಗಾಯಗೊಳಿಸುವವನು ಜನರಲ್ಲಿ ಅತ್ಯಂತ ಅಲಕ್ಷ್ಮೀವಂತನಾಗಿರುತ್ತಾನೆ. ಬಾಯಿಯಲ್ಲಿ ಪಾಪದ ಕಿಡಿಯನ್ನು ಇಟ್ಟುಕೊಂಡಿರುತ್ತಾನೆ.

01082010a ಸದ್ಭಿಃ ಪುರಸ್ತಾದಭಿಪೂಜಿತಃ ಸ್ಯಾತ್ ಸದ್ಭಿಸ್ತಥಾ ಪೃಷ್ಠತೋ ರಕ್ಷಿತಃ ಸ್ಯಾತ್।
01082010c ಸದಾಸತಾಮತಿವಾದಾಂಸ್ತಿತಿಕ್ಷೇತ್ ಸತಾಂ ವೃತ್ತಂ ಚಾದದೀತಾರ್ಯವೃತ್ತಃ।।

ಎದುರಲ್ಲಿ ಒಳ್ಳೆಯುವರಿಂದ ಪೂಜಿತನಾಗಿರು. ಹಿಂದಿನಿಂದ ಒಳ್ಳೆಯವರ ರಕ್ಷಣೆಯಿರಲಿ. ಕೆಟ್ಟವರ ನಿಂದನೆಯ ಮಾತುಗಳನ್ನು ಸದಾ ಸಹಿಸಿಕೊಂಡಿರು. ಆರ್ಯನು ಸತ್ಯವಂತರ ನಡತೆಯನ್ನೇ ತನ್ನದಾಗಿಸಿಕೊಳ್ಳುತ್ತಾನೆ.

01082011a ವಾಕ್ಸಾಯಕಾ ವದನಾನ್ನಿಷ್ಪತಂತಿ ಯೈರಾಹತಃ ಶೋಚತಿ ರಾತ್ರ್ಯಹಾನಿ।
01082011c ಪರಸ್ಯ ವಾ ಮರ್ಮಸು ಯೇ ಪತಂತಿ ತಾನ್ಪಂಡಿತೋ ನಾವಸೃಜೇತ್ಪರೇಷು।।

ಮಾತುಗಳು ಬಾಯಿಯಿಂದ ಬಾಣಗಳಂತೆ ಹೊರಬೀಳುತ್ತವೆ. ತಾಗಿದವನಿಗೆ ಅವು ಹಗಲು ರಾತ್ರಿ ನೋಯಿಸುತ್ತವೆ. ಇತರರಿಗೆ ತಾಗಿ ನೋಯಿಸುವಂಥವುಗಳನ್ನು ಪಂಡಿತನು ಪರರ ಮೇಲೆ ಪ್ರಯೋಗಿಸುವುದಿಲ್ಲ.

01082012a ನ ಹೀದೃಶಂ ಸಂವನನಂ ತ್ರಿಷು ಲೋಕೇಷು ವಿದ್ಯತೇ।
01082012c ಯಥಾ ಮೈತ್ರೀ ಚ ಭೂತೇಷು ದಾನಂ ಚ ಮಧುರಾ ಚ ವಾಕ್।।

ಸಂವನನ, ಇರುವ ಎಲ್ಲದರೊಂದಿಗೆ ಮೈತ್ರಿ ಮತ್ತು ಮಧುರ ಮಾತು ಇವುಗಳಿಗಿಂತ ಹೆಚ್ಚಿನ ಯಾವುದೂ ಈ ಮೂರು ಲೋಕಗಳಲ್ಲಿಲ್ಲ.

01082013a ತಸ್ಮಾತ್ಸಾಂತ್ವಂ ಸದಾ ವಾಚ್ಯಂ ನ ವಾಚ್ಯಂ ಪರುಷಂ ಕ್ವ ಚಿತ್।
01082013c ಪೂಜ್ಯಾನ್ಸಂಪೂಜಯೇದ್ದದ್ಯಾನ್ನ ಚ ಯಾಚೇತ್ಕದಾ ಚನ।।

ಆದುದರಿಂದ ಸದಾ ಸಾಂತ್ವನದ ಮಾತನ್ನಾಡಬೇಕು. ಎಂದೂ ಕಟುವಾಗಿ ಮಾತನಾಡಬಾರದು. ಪೂಜಿಸಲರ್ಹರಾದವರನ್ನು ಪೂಜಿಸು. ಕೊಡು. ಎಂದೂ ಕೇಳಬೇಡ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಯಯಾತ್ಯುಪಾಖ್ಯಾನೇ ದ್ವ್ಯಶೀತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಯಯಾತಿ-ಉಪಾಖ್ಯಾನದಲ್ಲಿ ಎಂಭತ್ತೆರಡನೆಯ ಅಧ್ಯಾಯವು.