081 ಯಯಾತ್ಯುಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಸಂಭವ ಪರ್ವ

ಅಧ್ಯಾಯ 81

ಸಾರ

ಯಯಾತಿಯು ಸ್ವರ್ಗದಿಂದ ಬಿದ್ದುದನ್ನು ಹೇಳಲು ಜನಮೇಜಯನು ಉತ್ತರ ಯಯಾತಿ ಚರಿತೆಯನ್ನು ವಿಸ್ತಾರವಾಗಿ ಹೇಳುವಂತೆ ವೈಶಂಪಾಯನನಲ್ಲಿ ಕೇಳಿಕೊಳ್ಳುವುದು (1-9). ಯಯಾತಿಯು ವಾನಪ್ರಸ್ಥದಲ್ಲಿ ಹಲವಾರು ಕಠಿಣ ವ್ರತ ತಪಸ್ಸುಗಳನ್ನು ಕೈಗೊಂಡು ತನ್ನ ಪುಣ್ಯದಿಂದ ಸ್ವರ್ಗವನ್ನೇರಿದುದು (10-16).

01081001 ವೈಶಂಪಾಯನ ಉವಾಚ।
01081001a ಏವಂ ಸ ನಾಹುಷೋ ರಾಜಾ ಯಯಾತಿಃ ಪುತ್ರಮೀಪ್ಸಿತಂ।
01081001c ರಾಜ್ಯೇಽಭಿಷಿಚ್ಯ ಮುದಿತೋ ವಾನಪ್ರಸ್ಥೋಽಭವನ್ಮುನಿಃ।।

ವೈಶಂಪಾಯನನು ಹೇಳಿದನು: “ಈ ರೀತಿ ನಾಹುಷ ರಾಜ ಯಯಾತಿಯು ಪ್ರಿಯಪುತ್ರನಿಗೆ ರಾಜ್ಯಾಭಿಷೇಕ ಮಾಡಿ ಸಂತೋಷದಿಂದ ವಾನಪ್ರಸ್ಥಾಶ್ರಮವನ್ನು ಸ್ವೀಕರಿಸಿ ಮುನಿಯಾದನು.

01081002a ಉಷಿತ್ವಾ ಚ ವನೇ ವಾಸಂ ಬ್ರಾಹ್ಮಣೈಃ ಸಹ ಸಂಶ್ರಿತಃ।
01081002c ಫಲಮೂಲಾಶನೋ ದಾಂತೋ ಯಥಾ ಸ್ವರ್ಗಮಿತೋ ಗತಃ।।

ತನ್ನೊಡನೆ ಬಂದಿದ್ದ ಬ್ರಾಹ್ಮಣರೊಂದಿಗೆ ವನದಲ್ಲಿ ವಾಸಿಸಿ, ಫಲಮೂಲಗಳನ್ನು ತಿನ್ನುತ್ತಾ ಸಂಶ್ರಿತನಾಗಿ ಸ್ವರ್ಗವನ್ನು ಸೇರಿದನು.

01081003a ಸ ಗತಃ ಸುರವಾಸಂ ತಂ ನಿವಸನ್ಮುದಿತಃ ಸುಖಂ।
01081003c ಕಾಲಸ್ಯ ನಾತಿಮಹತಃ ಪುನಃ ಶಕ್ರೇಣ ಪಾತಿತಃ।।

ಅವನು ಸ್ವರ್ಗದಲ್ಲಿ ಸುಖ ಸಂತೋಷಗಳಿಂದ ವಾಸಿಸಿದನು. ಆದರೆ ಇನ್ನೂ ಹೆಚ್ಚು ಸಮಯ ಕಳೆಯುವುದರೊಳಗೇ ಶಕ್ರನಿಂದ ಪುನಃ ಕೆಳಗುರುಳಿಸಲ್ಪಟ್ಟನು.

01081004a ನಿಪತನ್ಪ್ರಚ್ಯುತಃ ಸ್ವರ್ಗಾದಪ್ರಾಪ್ತೋ ಮೇದಿನೀತಲಂ।
01081004c ಸ್ಥಿತ ಆಸೀದಂತರಿಕ್ಷೇ ಸ ತದೇತಿ ಶ್ರುತಂ ಮಯಾ।।

ಅವನು ಸ್ವರ್ಗವನ್ನು ಬಿಟ್ಟು ಕೆಳಗೆ ಬಿದ್ದು ಮೇದಿನಿತಲವು ಸಿಕ್ಕದೇ ಅಂತರಿಕ್ಷದಲ್ಲಿಯೇ ನಿಂತುಬಿಟ್ಟ ಎಂದು ಕೇಳಿದ್ದೇನೆ.

01081005a ತತ ಏವ ಪುನಶ್ಚಾಪಿ ಗತಃ ಸ್ವರ್ಗಮಿತಿ ಶ್ರುತಿಃ।
01081005c ರಾಜ್ಞಾ ವಸುಮತಾ ಸಾರ್ಧಮಷ್ಟಕೇನ ಚ ವೀರ್ಯವಾನ್।
01081005e ಪ್ರತರ್ದನೇನ ಶಿಬಿನಾ ಸಮೇತ್ಯ ಕಿಲ ಸಂಸದಿ।।

ನಂತರ ಪುನಃ ಆ ವೀರ್ಯವಂತನು ವಸುಮತಿ, ಅಷ್ಟಕ, ಶಿಬಿ ಮತ್ತು ಪ್ರತರ್ದನ1 ಮೊದಲಾದ ರಾಜರ ಸಂಘದಿಂದ ಅವರ ಜೊತೆಗೇ ಸ್ವರ್ಗವನ್ನು ಸೇರಿದನು ಎಂದೂ ಕೇಳಿದ್ದೇನೆ.”

01081006 ಜನಮೇಜಯ ಉವಾಚ।
01081006a ಕರ್ಮಣಾ ಕೇನ ಸ ದಿವಂ ಪುನಃ ಪ್ರಾಪ್ತೋ ಮಹೀಪತಿಃ।
01081006c ಸರ್ವಮೇತದಶೇಷೇಣ ಶ್ರೋತುಮಿಚ್ಛಾಮಿ ತತ್ತ್ವತಃ।
01081006e ಕಥ್ಯಮಾನಂ ತ್ವಯಾ ವಿಪ್ರ ವಿಪ್ರರ್ಷಿಗಣಸನ್ನಿಧೌ।।

ಜನಮೇಜಯನು ಹೇಳಿದನು: “ಆ ಮಹೀಪತಿಯು ಯಾವ ಕರ್ಮಗಳಿಂದ ಪುನಃ ಸ್ವರ್ಗವನ್ನು ಪಡೆದನು? ವಿಪ್ರ! ಅವೆಲ್ಲವನ್ನೂ ಸಂಪೂರ್ಣವಾಗಿ ಈ ವಿಪ್ರರ್ಷಿಗಣಸನ್ನಿಧಿಯಲ್ಲಿ ನೀನು ಹೇಳುವುದನ್ನು ಕೇಳಲು ಬಯಸುತ್ತೇನೆ.

01081007a ದೇವರಾಜಸಮೋ ಹ್ಯಾಸೀದ್ಯಯಾತಿಃ ಪೃಥಿವೀಪತಿಃ।
01081007c ವರ್ಧನಃ ಕುರುವಂಶಸ್ಯ ವಿಭಾವಸುಸಮದ್ಯುತಿಃ।।

ಪೃಥಿವೀಪತಿ ಯಯಾತಿಯು ದೇವರಾಜಸಮನಾಗಿದ್ದನು ಮತ್ತು ದ್ಯುತಿಯಲ್ಲಿ ವಿಭಾವಸುವಂತೆ ಕುರುವಂಶವನ್ನು ವರ್ಧಿಸಿದನು.

01081008a ತಸ್ಯ ವಿಸ್ತೀರ್ಣಯಶಸಃ ಸತ್ಯಕೀರ್ತೇರ್ಮಹಾತ್ಮನಃ।
01081008c ಚರಿತಂ ಶ್ರೋತುಮಿಚ್ಛಾಮಿ ದಿವಿ ಚೇಹ ಚ ಸರ್ವಶಃ।।

ಆ ವಿಸ್ತೀರ್ಣಯಶಸ್ವಿ ಸತ್ಯಕೀರ್ತಿ ಮಹಾತ್ಮನ ಇಲ್ಲಿಯ ಮತ್ತು ದಿವಿಯಲ್ಲಿಯ ಚರಿತವೆಲ್ಲವನ್ನೂ ಕೇಳಲು ಬಯಸುತ್ತೇನೆ.”

01081009 ವೈಶಂಪಾಯನ ಉವಾಚ।
01081009a ಹಂತ ತೇ ಕಥಯಿಷ್ಯಾಮಿ ಯಯಾತೇರುತ್ತರಾಂ ಕಥಾಂ।
01081009c ದಿವಿ ಚೇಹ ಚ ಪುಣ್ಯಾರ್ಥಾಂ ಸರ್ವಪಾಪಪ್ರಣಾಶಿನೀಂ।।

ವೈಶಂಪಾಯನನು ಹೇಳಿದನು: “ಹಾಗಿದ್ದರೆ ನಿನಗೆ ಇಲ್ಲಿಯೂ ಮತ್ತು ದಿವಿಯಲ್ಲಿಯೂ ಪುಣ್ಯವನ್ನು ನೀಡುವ, ಸರ್ವಪಾಪವನ್ನೂ ನಾಶಪಡಿಸಬಲ್ಲ ಯಯಾತಿಯ ಉತ್ತರ ಕಥೆಯನ್ನು ಹೇಳುತ್ತೇನೆ.

01081010a ಯಯಾತಿರ್ನಾಹುಷೋ ರಾಜಾ ಪೂರುಂ ಪುತ್ರಂ ಕನೀಯಸಂ।
01081010c ರಾಜ್ಯೇಽಭಿಷಿಚ್ಯ ಮುದಿತಃ ಪ್ರವವ್ರಾಜ ವನಂ ತದಾ।।
01081011a ಅಂತೇಷು ಸ ವಿನಿಕ್ಷಿಪ್ಯ ಪುತ್ರಾನ್ಯದುಪುರೋಗಮಾನ್।

ನಾಹುಷ ರಾಜಾ ಯಯಾತಿಯು ತನ್ನ ಕಿರಿಯ ಮಗ ಪೂರುವಿಗೆ ರಾಜ್ಯಾಭಿಷೇಕವನ್ನು ಮಾಡಿ ಸಂತೋಷಗೊಂಡು ವನಕ್ಕೆ ತೆರಳಿದನು. ಯದುವೇ ಮೊದಲಾದ ಮಕ್ಕಳನ್ನು ಗಡಿಯಿಂದ ಹೊರಹಾಕಿದ್ದನು.

01081011c ಫಲಮೂಲಾಶನೋ ರಾಜಾ ವನೇ ಸನ್ನ್ಯವಸಚ್ಚಿರಂ।।
01081012a ಸಂಶಿತಾತ್ಮಾ ಜಿತಕ್ರೋಧಸ್ತರ್ಪಯನ್ಪಿತೃದೇವತಾಃ।
01081012c ಅಗ್ನೀಂಶ್ಚ ವಿಧಿವಜುಹ್ವವನ್ವಾನಪ್ರಸ್ಥವಿಧಾನತಃ।।

ವನದಲ್ಲಿ ರಾಜನು ವಾನಪ್ರಸ್ಥವಿಧಾನದಂತೆ ಫಲಮೂಲಗಳನ್ನು ಸೇವಿಸುತ್ತಾ, ಸಂಶಿತಾತ್ಮನಾಗಿ, ಜಿತಕ್ರೋಧನಾಗಿ, ಪಿತೃ-ದೇವತೆಗಳನ್ನು ತೃಪ್ತಿಗೊಳಿಸುತ್ತಾ, ವಿಧಿವತ್ತಾಗಿ ಅಗ್ನಿಯಲ್ಲಿ ಹೋಮಮಾಡುತ್ತಾ ಬಹಳ ಸಮಯ ವಾಸಿಸಿದನು.

01081013a ಅತಿಥೀನ್ಪೂಜಯಾಮಾಸ ವನ್ಯೇನ ಹವಿಷಾ ವಿಭುಃ।
01081013c ಶಿಲೋಂಚವೃತ್ತಿಮಾಸ್ಥಾಯ ಶೇಷಾನ್ನಕೃತಭೋಜನಃ।।

ವನ್ಯ ವಸ್ತುಗಳಿಂದ ವಿಭುವು ಅತಿಥಿಗಳನ್ನು ಪೂಜಿಸಿದನು. ಭಿಕ್ಷುಕನ ವೃತ್ತಿಯನ್ನು ಅನುಸರಿಸಿ ಇತರರ ಭೋಜನದಿಂದ ಉಳಿದ ಆಹಾರವನ್ನು ಸೇವಿಸುತ್ತಿದ್ದನು.

01081014a ಪೂರ್ಣಂ ವರ್ಷಸಹಸ್ರಂ ಸ ಏವಂವೃತ್ತಿರಭೂನ್ನೃಪಃ।
01081014c ಅಬ್ಭಕ್ಷಃ ಶರದಸ್ತ್ರಿಂಶದಾಸೀನ್ನಿಯತವಾಙ್ಮನಾಃ।।

ಈ ವೃತ್ತಿಯನ್ನನುಸರಿಸಿ ನೃಪನು ಒಂದು ಸಾವಿರ ವರ್ಷಗಳನ್ನು ಪೂರ್ಣಗೊಳಿಸಿದನು. ಮೂರು ಶರದಗಳನ್ನು ಮಾತು ಮತ್ತು ಮನಸ್ಸುಗಳನ್ನು ನಿಯಂತ್ರಣದಲಿಟ್ಟುಕೊಂಡು ಕೇವಲ ನೀರನ್ನು ಸೇವಿಸಿ ವಾಸಿಸಿದನು.

01081015a ತತಶ್ಚ ವಾಯುಭಕ್ಷೋಽಭೂತ್ಸಂವತ್ಸರಮತಂದ್ರಿತಃ।
01081015c ಪಂಚಾಗ್ನಿಮಧ್ಯೇ ಚ ತಪಸ್ತೇಪೇ ಸಂವತ್ಸರಂ ನೃಪಃ।।

ಆಯಾಸಗೊಳ್ಳದೇ ಅವನು ಒಂದು ವರ್ಷ ಕೇವಲ ವಾಯುಸೇವನೆಯಿಂದ ಜೀವಿಸಿದನು. ಇನ್ನೊಂದು ವರ್ಷ ಆ ನೃಪನು ಪಂಚಾಗ್ನಿಗಳ ಮಧ್ಯೆ ತಪಸ್ಸನ್ನು ತಪಿಸಿದನು.

01081016a ಏಕಪಾದಸ್ಥಿತಶ್ಚಾಸೀತ್ಷಣ್ಮಾಸಾನನಿಲಾಶನಃ।
01081016c ಪುಣ್ಯಕೀರ್ತಿಸ್ತತಃ ಸ್ವರ್ಗಂ ಜಗಾಮಾವೃತ್ಯ ರೋದಸೀ।।

ಆರು ತಿಂಗಳು ಅವನು ವಾಯುವನ್ನು ಸೇವಿಸುತ್ತಾ ಒಂದೇ ಕಾಲಮೇಲೆ ನಿಂತಿದ್ದನು. ಹೀಗೆ ಭೂಮಿ ಸ್ವರ್ಗಗಳನ್ನು ತನ್ನ ಪುಣ್ಯಕೀರ್ತಿಯಿಂದ ತುಂಬಿಸಿ ಅವನು ಸ್ವರ್ಗವನ್ನೇರಿದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಯಯಾತ್ಯುಪಾಖ್ಯಾನೇ ಏಕಾಶೀತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಯಯಾತಿ-ಉಪಾಖ್ಯಾನದಲ್ಲಿ ಎಂಭತ್ತೊಂದನೆಯ ಅಧ್ಯಾಯವು.