ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಸಂಭವ ಪರ್ವ
ಅಧ್ಯಾಯ 80
ಸಾರ
ಸಾವಿರ ವರ್ಷಗಳ ನಂತರ ಯಯಾತಿಯು ಯೌವನವನ್ನು ಮಗ ಪೂರುವಿಗೆ ಹಿಂದಿರುಗಿಸಿ ರಾಜ್ಯವನ್ನು ಕೊಡಲು ನಿಶ್ಚಯಿಸುವುದು (1-12). ಪೌರರು ರಾಜನನ್ನು ಪ್ರಶ್ನಿಸಲು ಯಯಾತಿಯ ಉತ್ತರ (12-23). ಪೂರುವಿಗೆ ಪಟ್ಟಾಭಿಷೇಕ ಮಾಡಿ ಯಯಾತಿಯು ವನಕ್ಕೆ ತೆರಳಿದುದು (24-27).
01080001 ವೈಶಂಪಾಯನ ಉವಾಚ।
01080001a ಪೌರವೇಣಾಥ ವಯಸಾ ಯಯಾತಿರ್ನಹುಷಾತ್ಮಜಃ।
01080001c ಪ್ರೀತಿಯುಕ್ತೋ ನೃಪಶ್ರೇಷ್ಠಶ್ಚಚಾರ ವಿಷಯಾನ್ಪ್ರಿಯಾನ್।।
01080002a ಯಥಾಕಾಮಂ ಯಥೋತ್ಸಾಹಂ ಯಥಾಕಾಲಂ ಯಥಾಸುಖಂ।
01080002c ಧರ್ಮಾವಿರುದ್ಧಾನ್ರಾಜೇಂದ್ರೋ ಯಥಾರ್ಹತಿ ಸ ಏವ ಹಿ।।
ವೈಶಂಪಾಯನನು ಹೇಳಿದನು: “ರಾಜೇಂದ್ರ! ನೃಪಶ್ರೇಷ್ಠ ನಹುಷಾತ್ಮಜ ಯಯಾತಿಯು ಪೌರವನ ಯೌವನದ ಮೂಲಕ ತನಗೆ ಇಷ್ಟವಾದಂತೆ, ಉತ್ಸಾಹವಿದ್ದಷ್ಟು, ಸಮಯವಿದ್ದಷ್ಟೂ, ಸುಖವೆನಿಸುವಷ್ಟು, ಧರ್ಮಕ್ಕೆ ವಿರುದ್ಧವಾಗದ ರೀತಿಯಲ್ಲಿ, ಅವನಿಗೆ ತಕ್ಕುದಾದ ರೀತಿಯಲ್ಲಿ, ಕಾಮನಿರತನಾಗಿ ವಿಷಯ ಸುಖವನ್ನು ಅನುಭವಿಸಿದನು.
01080003a ದೇವಾನತರ್ಪಯದ್ಯಜ್ಞೈಃ ಶ್ರಾದ್ಧೈಸ್ತದ್ವತ್ಪಿತೄನಪಿ।
01080003c ದೀನಾನನುಗ್ರಹೈರಿಷ್ಟೈಃ ಕಾಮೈಶ್ಚ ದ್ವಿಜಸತ್ತಮಾನ್।।
01080004a ಅತಿಥೀನನ್ನಪಾನೈಶ್ಚ ವಿಶಶ್ಚ ಪರಿಪಾಲನೈಃ।
01080004c ಆನೃಶಂಸ್ಯೇನ ಶೂದ್ರಾಂಶ್ಚ ದಸ್ಯೂನ್ಸನ್ನಿಗ್ರಹೇಣ ಚ।।
ದೇವತೆಗಳನ್ನು ಯಜ್ಞಗಳಿಂದಲೂ, ಪಿತೃಗಳನ್ನು ಶ್ರಾದ್ಧಗಳಿಂದಲೂ, ದೀನರನ್ನು ಅವರಿಗಿಷ್ಟವಾದುದನ್ನು ನೀಡುವುದರಿಂದಲೂ, ದ್ವಿಜಸತ್ತಮರನ್ನು ಉಡುಗೊರೆಗಳಿಂದಲೂ, ಅತಿಥಿಗಳನ್ನು ಅನ್ನ-ಪಾನೀಯಗಳಿಂದಲೂ, ಪ್ರಜೆಗಳನ್ನು ಪರಿಪಾಲನೆಯಿಂದಲೂ, ಶೂದ್ರರನ್ನು ಅನುಕಂಪದಿಂದಲೂ, ದಸ್ಯುಗಳನ್ನು ನಿಗ್ರಹದಿಂದಲೂ ತೃಪ್ತಿಪಡಿಸಿದನು.
01080005a ಧರ್ಮೇಣ ಚ ಪ್ರಜಾಃ ಸರ್ವಾ ಯಥಾವದನುರಂಜಯನ್।
01080005c ಯಯಾತಿಃ ಪಾಲಯಾಮಾಸ ಸಾಕ್ಷಾದಿಂದ್ರ ಇವಾಪರಃ।।
ಸಾಕ್ಷಾತ್ ಇನ್ನೊಬ್ಬ ಇಂದ್ರನೋ ಎಂಬಂತೆ ಯಯಾತಿಯು ಸರ್ವ ಪ್ರಜೆಗಳನ್ನೂ ಧರ್ಮದಿಂದ ಅನುರಂಜಿಸುತ್ತಾ ಪಾಲಿಸಿದನು.
01080006a ಸ ರಾಜಾ ಸಿಂಹವಿಕ್ರಾಂತೋ ಯುವಾ ವಿಷಯಗೋಚರಃ।
01080006c ಅವಿರೋಧೇನ ಧರ್ಮಸ್ಯ ಚಚಾರ ಸುಖಮುತ್ತಮಂ।।
ಆ ಸಿಂಹವಿಕ್ರಾಂತ ಯುವರಾಜನು ವಿಷಯಗೋಚರನಾಗಿದ್ದು ಧರ್ಮಕ್ಕೆ ವಿರೋಧಬಾರದಂತೆ ಉತ್ತಮ ಸುಖವನ್ನು ಹೊಂದಿದನು.
01080007a ಸ ಸಂಪ್ರಾಪ್ಯ ಶುಭಾನ್ಕಾಮಾಂಸ್ತೃಪ್ತಃ ಖಿನ್ನಶ್ಚ ಪಾರ್ಥಿವಃ।
01080007c ಕಾಲಂ ವರ್ಷಸಹಸ್ರಾಂತಂ ಸಸ್ಮಾರ ಮನುಜಾಧಿಪಃ।।
ಎಲ್ಲ ಕಾಮಸುಖಗಳನ್ನೂ ಹೊಂದಿ ತೃಪ್ತನಾದ ಪಾರ್ಥಿವ ಮನುಜಾಧಿಪನು ಒಂದು ಸಾವಿರ ವರ್ಷಗಳ ಅವಧಿಯು ಮುಗಿದಿದ್ದುದನ್ನು ನೆನಪಿಸಿಕೊಂಡು ಖಿನ್ನನಾದನು.
01080008a ಪರಿಸಂಖ್ಯಾಯ ಕಾಲಜ್ಞಃ ಕಲಾಃ ಕಾಷ್ಠಾಶ್ಚ ವೀರ್ಯವಾನ್।
01080008c ಪೂರ್ಣಂ ಮತ್ವಾ ತತಃ ಕಾಲಂ ಪೂರುಂ ಪುತ್ರಮುವಾಚ ಹ।।
ದಿನಗಳು ಮತ್ತು ಘಂಟೆಗಳನ್ನು ಲೆಕ್ಕಹಾಕುತ್ತಾ ಬಂದಿದ್ದ ಆ ಕಾಲಜ್ಞ ವೀರನು ತನ್ನ ಸಮಯವು ಮುಗಿಯಿತೆಂದು ತಿಳಿದು ಪುತ್ರ ಪೂರುವನ್ನು ಕರೆದು ಹೇಳಿದನು:
01080009a ಯಥಾಕಾಮಂ ಯಥೋತ್ಸಾಹಂ ಯಥಾಕಾಲಮರಿಂದಮ।
01080009c ಸೇವಿತಾ ವಿಷಯಾಃ ಪುತ್ರ ಯೌವನೇನ ಮಯಾ ತವ।।
“ಅರಿಂದಮ! ನಿನ್ನ ಈ ಯೌವನದಿಂದ ನಾನು ಯಥೇಚ್ಛವಾಗಿ, ಉತ್ಸಾಹವಿದ್ದಷ್ಟು, ಸಮಯ ಸಿಕ್ಕಿದಷ್ಟು, ವಿಷಯ ಸುಖವನ್ನು ಸೇವಿಸಿದೆ.
01080010a ಪೂರೋ ಪ್ರೀತೋಽಸ್ಮಿ ಭದ್ರಂ ತೇ ಗೃಹಾಣೇದಂ ಸ್ವಯೌವನಂ।
01080010c ರಾಜ್ಯಂ ಚೈವ ಗೃಹಾಣೇದಂ ತ್ವಂ ಹಿ ಮೇ ಪ್ರಿಯಕೃತ್ಸುತಃ।।
ಪೂರು! ನಿನಗೆ ಮಂಗಳವಾಗಲಿ. ನಾನು ನಿನ್ನಿಂದ ಬಹಳ ಸಂತೋಷಗೊಂಡಿದ್ದೇನೆ. ನಿನ್ನ ಯೌವನವನ್ನು ಹಿಂತೆಗೆದುಕೋ. ನನಗೆ ಪ್ರಿಯವಾದುದನ್ನೆಸಗಿದ ಮಗನಾದ ನೀನು ಈ ರಾಜ್ಯವನ್ನೂ ತೆಗೆದುಕೋ.”
01080011 ವೈಶಂಪಾಯನ ಉವಾಚ।
01080011a ಪ್ರತಿಪೇದೇ ಜರಾಂ ರಾಜಾ ಯಯಾತಿರ್ನಾಹುಷಸ್ತದಾ।
01080011c ಯೌವನಂ ಪ್ರತಿಪೇದೇ ಚ ಪೂರುಃ ಸ್ವಂ ಪುನರಾತ್ಮನಃ।।
ವೈಶಂಪಾಯನನು ಹೇಳಿದನು: “ನಾಹುಷ ಯಯಾತಿ ರಾಜನು ವೃದ್ಧಾಪ್ಯವನ್ನು ಹಿಂತೆಗೆದುಕೊಂಡನು ಮತ್ತು ಪೂರುವು ತನ್ನ ಯೌವನವನ್ನು ಪುನಃ ಹಿಂತೆಗೆದುಕೊಂಡನು.
01080012a ಅಭಿಷೇಕ್ತುಕಾಮಂ ನೃಪತಿಂ ಪೂರುಂ ಪುತ್ರಂ ಕನೀಯಸಂ।
01080012c ಬ್ರಾಹ್ಮಣಪ್ರಮುಖಾ ವರ್ಣಾ ಇದಂ ವಚನಮಬ್ರುವನ್।।
ನೃಪತಿಯು ತನ್ನ ಕಿರಿಯ ಮಗ ಪೂರುವಿಗೆ ರಾಜ್ಯಾಭಿಷೇಕವನ್ನು ಮಾಡಲು ಬಯಸಿದನು. ಆದರೆ, ಬ್ರಾಹ್ಮಣರ ನಾಯಕತ್ವದಲ್ಲಿ ನಾಲ್ಕೂ ವರ್ಣದವರು ಬಂದು ಈ ಮಾತುಗಳನ್ನು ಹೇಳಿದರು:
01080013a ಕಥಂ ಶುಕ್ರಸ್ಯ ನಪ್ತಾರಂ ದೇವಯಾನ್ಯಾಃ ಸುತಂ ಪ್ರಭೋ।
01080013c ಜ್ಯೇಷ್ಠಂ ಯದುಮತಿಕ್ರಮ್ಯ ರಾಜ್ಯಂ ಪೂರೋಃ ಪ್ರದಾಸ್ಯಸಿ।।
“ಪ್ರಭೋ! ಶುಕ್ರನ ಮೊಮ್ಮಗನೂ ದೇವಯಾನಿಯ ಮಗನೂ ನಿನ್ನ ಜ್ಯೇಷ್ಠ ಪುತ್ರನೂ ಆದ ಯದುವನ್ನು ಬಿಟ್ಟು ಪೂರುವಿಗೆ ಏಕೆ ರಾಜ್ಯವನ್ನು ಕೊಡುತ್ತಿರುವೆ?
01080014a ಯದುರ್ಜ್ಯೇಷ್ಠಸ್ತವ ಸುತೋ ಜಾತಸ್ತಮನು ತುರ್ವಸುಃ।
01080014c ಶರ್ಮಿಷ್ಠಾಯಾಃ ಸುತೋ ದ್ರುಹ್ಯುಸ್ತತೋಽನುಃ ಪೂರುರೇವ ಚ।।
ಯದುವು ನಿನ್ನ ಜ್ಯೇಷ್ಠ ಪುತ್ರ. ನಂತರ ಹುಟ್ಟಿದವನು ತುರ್ವಸು. ಶರ್ಮಿಷ್ಠೆಯ ಮಕ್ಕಳಲ್ಲಿ ದ್ರುಹು, ನಂತರ ಅನು ಮತ್ತು ಕೊನೆಯವನು ಪೂರು.
01080015a ಕಥಂ ಜ್ಯೇಷ್ಠಾನತಿಕ್ರಮ್ಯ ಕನೀಯಾನ್ರಾಜ್ಯಮರ್ಹತಿ।
01080015c ಏತತ್ಸಂಬೋಧಯಾಮಸ್ತ್ವಾಂ ಧರ್ಮಂ ತ್ವಮನುಪಾಲಯ।।
ಹಿರಿಯವನನ್ನು ಅತಿಕ್ರಮಿಸಿ ಕಿರಿಯವನು ಹೇಗೆ ರಾಜ್ಯಕ್ಕೆ ಹಕ್ಕುದಾರನಾಗುತ್ತಾನೆ? ಇದನ್ನು ನೀನು ಸಂಬೋಧಿಸಬೇಕು. ಧರ್ಮವನ್ನು ಅನುಸರಿಸಬೇಕು.”
01080016 ಯಯಾತಿರುವಾಚ।
01080016a ಬ್ರಾಹ್ಮಣಪ್ರಮುಖಾ ವರ್ಣಾಃ ಸರ್ವೇ ಶೃಣ್ವಂತು ಮೇ ವಚಃ।
01080016c ಜ್ಯೇಷ್ಠಂ ಪ್ರತಿ ಯಥಾ ರಾಜ್ಯಂ ನ ದೇಯಂ ಮೇ ಕಥಂ ಚನ।।
ಯಯಾತಿಯು ಹೇಳಿದನು: “ಬ್ರಾಹ್ಮಣರನ್ನು ಮುಂದಿಟ್ಟುಕೊಂಡು ಬಂದ ಸರ್ವ ವರ್ಣದವರೇ! ನಾನು ಏಕೆ ಜ್ಯೇಷ್ಠ ಪುತ್ರನಿಗೆ ರಾಜ್ಯವನ್ನು ಕೊಡುವುದಿಲ್ಲ ಎನ್ನುವುದಕ್ಕೆ ನನ್ನ ಮಾತುಗಳನ್ನು ಕೇಳಿ.
01080017a ಮಮ ಜ್ಯೇಷ್ಠೇನ ಯದುನಾ ನಿಯೋಗೋ ನಾನುಪಾಲಿತಃ।
01080017c ಪ್ರತಿಕೂಲಃ ಪಿತುರ್ಯಶ್ಚ ನ ಸ ಪುತ್ರಃ ಸತಾಂ ಮತಃ।।
ನನ್ನ ಜ್ಯೇಷ್ಠ ಪುತ್ರ ಯದುವು ನನ್ನ ನಿಯೋಗವನ್ನು ಪರಿಪಾಲಿಸಲಿಲ್ಲ. ತಂದೆಯ ಪ್ರತಿಕೂಲನಾದವನನ್ನು ಪುತ್ರನೆಂದು ಸಂತರು ಪರಿಗಣಿಸುವುದಿಲ್ಲ.
01080018a ಮಾತಾಪಿತ್ರೋರ್ವಚನಕೃದ್ಧಿತಃ ಪಥ್ಯಶ್ಚ ಯಃ ಸುತಃ।
01080018c ಸ ಪುತ್ರಃ ಪುತ್ರವದ್ಯಶ್ಚ ವರ್ತತೇ ಪಿತೃಮಾತೃಷು।।
ತಂದೆ ತಾಯಿಗಳ ಮಾತಿನಂತೆ ಯಾರು ನಡೆಯುತ್ತಾನೋ ಅವನೇ ಮಗನೆನಿಸಿಕೊಳ್ಳುತ್ತಾನೆ. ತಂದೆ ತಾಯಿಯರ ಒಳಿತು ಯಾರ ಹೃದಯದಲ್ಲಿರುತ್ತದೆಯೋ ಅವನೇ ಪುತ್ರನೆನಿಸಿಕೊಳ್ಳುತ್ತಾನೆ.
01080019a ಯದುನಾಹಮವಜ್ಞಾತಸ್ತಥಾ ತುರ್ವಸುನಾಪಿ ಚ।
01080019c ದ್ರುಹ್ಯುನಾ ಚಾನುನಾ ಚೈವ ಮಯ್ಯವಜ್ಞಾ ಕೃತಾ ಭೃಶಂ।।
ಯದುವು ನನ್ನನ್ನು ಕಡೆಗಣಿಸಿದನು. ಹಾಗೆಯೇ ತುರ್ವಸು, ದ್ರುಹ್ಯು, ಮತ್ತು ಅನು ಎಲ್ಲರೂ ನನ್ನ ಕುರಿತು ಅತೀವ ತಿರಸ್ಕಾರವನ್ನು ತೋರಿಸಿದರು.
01080020a ಪೂರುಣಾ ಮೇ ಕೃತಂ ವಾಕ್ಯಂ ಮಾನಿತಶ್ಚ ವಿಶೇಷತಃ।
01080020c ಕನೀಯಾನ್ಮಮ ದಾಯಾದೋ ಜರಾ ಯೇನ ಧೃತಾ ಮಮ।
01080020e ಮಮ ಕಾಮಃ ಸ ಚ ಕೃತಃ ಪೂರುಣಾ ಪುತ್ರರೂಪಿಣಾ।।
ನನ್ನ ಮಾತನ್ನು ಪರಿಪಾಲಿಸಿದ ಪೂರುವು ಕಿರಿಯವನಾಗಿದ್ದರೂ ನನ್ನ ವಿಶೇಷಗೌರವವನ್ನು ಹೊಂದಿದ್ದಾನೆ. ಆ ನನ್ನ ಮಗ ಪೂರುವು ನನ್ನ ವೃದ್ಧಾಪ್ಯವನ್ನು ಧರಿಸಿ ನಿಜವಾದ ಪುತ್ರನಂತೆ ನನ್ನ ಆಸೆಯನ್ನು ನೆರವೇರಿಸಿಕೊಟ್ಟನು.
01080021a ಶುಕ್ರೇಣ ಚ ವರೋ ದತ್ತಃ ಕಾವ್ಯೇನೋಶನಸಾ ಸ್ವಯಂ।
01080021c ಪುತ್ರೋ ಯಸ್ತ್ವಾನುವರ್ತೇತ ಸ ರಾಜಾ ಪೃಥಿವೀಪತಿಃ।
01080021e ಭವತೋಽನುನಯಾಂಯೇವಂ ಪೂರೂ ರಾಜ್ಯೇಽಭಿಷಿಚ್ಯತಾಂ।।
ಇದೂ ಅಲ್ಲದೇ ಸ್ವಯಂ ಕಾವ್ಯ ಉಸನಸ ಶುಕ್ರನೇ ಇತ್ತ ವರದಂತೆ ನನಗೆ ವಿಧೇಯನಾದ ಮಗನು ರಾಜ ಪೃಥ್ವೀಪತಿಯಾಗುತ್ತಾನೆ. ಆದುದರಿಂದ ಪೂರುವಿಗೆ ರಾಜ್ಯಾಭಿಷೇಕವನ್ನು ಮಾಡುತ್ತಿದ್ದೇನೆ.”
01080022 ಪ್ರಕೃತಯ ಊಚುಃ।
01080022a ಯಃ ಪುತ್ರೋ ಗುಣಸಂಪನ್ನೋ ಮಾತಾಪಿತ್ರೋರ್ಹಿತಃ ಸದಾ।
01080022c ಸರ್ವಮರ್ಹತಿ ಕಲ್ಯಾಣಂ ಕನೀಯಾನಪಿ ಸ ಪ್ರಭೋ।।
ಪ್ರಜೆಗಳು ಹೇಳಿದರು: “ಪ್ರಭೋ! ಯಾವ ಮಗನು ಗುಣಸಂಪನ್ನನಾಗಿದ್ದು ತಂದೆ ತಾಯಿಗಳ ಹಿತವನ್ನು ಸದಾ ಯೋಚಿಸುತ್ತಿರುತ್ತಾನೋ ಅವನು ಕಿರಿಯವನಾಗಿದ್ದರೂ ಒಳ್ಳೆಯದೆಲ್ಲವುದಕ್ಕೂ ಅರ್ಹನಾಗುತ್ತಾನೆ.
01080023a ಅರ್ಹಃ ಪೂರುರಿದಂ ರಾಜ್ಯಂ ಯಃ ಸುತಃ ಪ್ರಿಯಕೃತ್ತವ।
01080023c ವರದಾನೇನ ಶುಕ್ರಸ್ಯ ನ ಶಕ್ಯಂ ವಕ್ತುಮುತ್ತರಂ।।
ನಿನಗೆ ಪ್ರಿಯವಾದುದನ್ನು ಮಾಡಿದ ಸುತ ಪೂರುವು ಈ ರಾಜ್ಯಕ್ಕೆ ಅರ್ಹನಾಗಿದ್ದಾನೆ. ಶುಕ್ರನಿಂದಲೂ ಈ ರೀತಿಯ ವರದಾನವಾಗಿದೆಯೆಂದರೆ ಇನ್ನು ಮುಂದೆ ಹೇಳುವುದಕ್ಕೇ ಸಾಧ್ಯವಿಲ್ಲ.””
01080024 ವೈಶಂಪಾಯನ ಉವಾಚ।
01080024a ಪೌರಜಾನಪದೈಸ್ತುಷ್ಟೈರಿತ್ಯುಕ್ತೋ ನಾಹುಷಸ್ತದಾ।
01080024c ಅಭ್ಯಷಿಂಚತ್ತತಃ ಪೂರುಂ ರಾಜ್ಯೇ ಸ್ವೇ ಸುತಮಾತ್ಮಜಂ।।
ವೈಶಂಪಾಯನನು ಹೇಳಿದನು: “ಪೌರಜನ ಪದಜನರು ಈ ರೀತಿ ಹೇಳಿದ ನಂತರ ನಾಹುಷನು ತನ್ನ ಸುತ ಪೂರುವಿಗೆ ಸ್ವಯಂ ಅಭೀಷೇಕವನ್ನು ಮಾಡಿದನು.
01080025a ದತ್ತ್ವಾ ಚ ಪೂರವೇ ರಾಜ್ಯಂ ವನವಾಸಾಯ ದೀಕ್ಷಿತಃ।
01080025c ಪುರಾತ್ಸ ನಿರ್ಯಯೌ ರಾಜಾ ಬ್ರಾಹ್ಮಣೈಸ್ತಾಪಸೈಃ ಸಹ।।
ರಾಜ್ಯವನ್ನು ಪೂರುವಿಗಿತ್ತು, ವನವಾಸ ದೀಕ್ಷೆಯನ್ನು ಕೈಗೊಂಡು, ಬ್ರಾಹ್ಮಣ- ತಾಪಸರನ್ನೊಡಗೂಡಿ ಪುರದಿಂದ ಹೊರ ಹೊರಟನು.
01080026a ಯದೋಸ್ತು ಯಾದವಾ ಜಾತಾಸ್ತುರ್ವಸೋರ್ಯವನಾಃ ಸುತಾಃ।
01080026c ದ್ರುಹ್ಯೋರಪಿ ಸುತಾ ಭೋಜಾ ಅನೋಸ್ತು ಮ್ಲೇಚ್ಛಜಾತಯಃ।।
ಯದುವಿನಿಂದ ಯಾದವರು ಹುಟ್ಟಿದರು. ತುರ್ವಾಸುವಿನ ಮಕ್ಕಳು ಯವನರು. ದ್ರುಹ್ಯುವಿನ ಮಕ್ಕಳು ಭೋಜರು. ಮತ್ತು ಅನುವಿನ ಮಕ್ಕಳು ಮ್ಲೇಚ್ಛರು.
01080027a ಪೂರೋಸ್ತು ಪೌರವೋ ವಂಶೋ ಯತ್ರ ಜಾತೋಽಸಿ ಪಾರ್ಥಿವ।
01080027c ಇದಂ ವರ್ಷಸಹಸ್ರಾಯ ರಾಜ್ಯಂ ಕಾರಯಿತುಂ ವಶೀ।।
ಪಾರ್ಥಿವ! ಪೂರುವಿನ ವಂಶದಲ್ಲಿ ಹುಟ್ಟಿದ ಪೌರವರು ಸಹಸ್ರಾರು ವರ್ಷಗಳು ಈ ರಾಜ್ಯವನ್ನು ಆಳಿದರು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಯಯಾತ್ಯುಪಾಖ್ಯಾನೇ ಅಶೀತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಯಯಾತಿ-ಉಪಾಖ್ಯಾನದಲ್ಲಿ ಎಂಭತ್ತನೆಯ ಅಧ್ಯಾಯವು.