079 ಯಯಾತ್ಯುಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಸಂಭವ ಪರ್ವ

ಅಧ್ಯಾಯ 79

ಸಾರ

ಯಯಾತಿಯು ತನ್ನ ಮುಪ್ಪನ್ನು ಕೊಟ್ಟು ಮಕ್ಕಳ ಯೌವನವನ್ನು ಪಡೆಯಲು ಪ್ರಯತ್ನಿಸಲು, ಪೂರುವು ಅದಕ್ಕೆ ಒಪ್ಪಿಕೊಂಡಿದುದು (1-30).

01079001 ವೈಶಂಪಾಯನ ಉವಾಚ।
01079001a ಜರಾಂ ಪ್ರಾಪ್ಯ ಯಯಾತಿಸ್ತು ಸ್ವಪುರಂ ಪ್ರಾಪ್ಯ ಚೈವ ಹ।
01079001c ಪುತ್ರಂ ಜ್ಯೇಷ್ಠಂ ವರಿಷ್ಠಂ ಚ ಯದುಮಿತ್ಯಬ್ರವೀದ್ವಚಃ।।

ವೈಶಂಪಾಯನನು ಹೇಳಿದನು: “ವೃದ್ಧಾಪ್ಯವನ್ನು ಪಡೆದ ಯಯಾತಿಯು ತನ್ನ ನಗರವನ್ನು ಸೇರಿ ಜ್ರೇಷ್ಠನೂ ವರಿಷ್ಠನೂ ಆದ ಯದುವನ್ನು ಕರೆದು ಹೇಳಿದನು:

01079002a ಜರಾ ವಲೀ ಚ ಮಾಂ ತಾತ ಪಲಿತಾನಿ ಚ ಪರ್ಯಗುಃ।
01079002c ಕಾವ್ಯಸ್ಯೋಶನಸಃ ಶಾಪಾನ್ನ ಚ ತೃಪ್ತೋಽಸ್ಮಿ ಯೌವನೇ।।

“ಮಗನೇ! ಉಶನಸ ಕಾವ್ಯನ ಶಾಪದಿಂದ ವೃದ್ಧಾಪ್ಯವು ನನ್ನನ್ನು ಆವರಿಸಿಬಿಟ್ಟಿದೆ - ಕೂದಲು ನೆರೆತಿದೆ ಮತ್ತು ಚರ್ಮವು ನೆರೆಕಟ್ಟಿದೆ. ಆದರೆ ಯೌವನದ ಸುಖಗಳಿಂದ ನಾನಿನ್ನೂ ತೃಪ್ತನಾಗಿಲ್ಲ.

01079003a ತ್ವಂ ಯದೋ ಪ್ರತಿಪದ್ಯಸ್ವ ಪಾಪ್ಮಾನಂ ಜರಯಾ ಸಹ।
01079003c ಯೌವನೇನ ತ್ವದೀಯೇನ ಚರೇಯಂ ವಿಷಯಾನಹಂ।।

ಯದು! ನೀನು ನನ್ನ ಪಾಪದ ಜೊತೆ ಈ ವೃದ್ಧಾಪ್ಯವನ್ನು ಸ್ವೀಕರಿಸು. ನಿನ್ನ ಈ ಯೌವನದಿಂದ ನಾನು ವಿಷಯಸುಖವನ್ನು ಅನುಭವಿಸುತ್ತೇನೆ.

01079004a ಪೂರ್ಣೇ ವರ್ಷಸಹಸ್ರೇ ತು ಪುನಸ್ತೇ ಯೌವನಂ ತ್ವಹಂ।
01079004c ದತ್ತ್ವಾ ಸ್ವಂ ಪ್ರತಿಪತ್ಸ್ಯಾಮಿ ಪಾಪ್ಮಾನಂ ಜರಯಾ ಸಹ।।

ಒಂದು ಸಹಸ್ರ ವರ್ಷಗಳು ತುಂಬಿದ ನಂತರ ನಿನ್ನ ಯೌವನವನ್ನು ನಿನಗೆ ಹಿಂದಿರುಗಿಸಿ, ನನ್ನ ಪಾಪ-ವೃದ್ಧಾಪ್ಯಗಳನ್ನು ಹಿಂದೆ ತೆಗೆದುಕೊಳ್ಳುತ್ತೇನೆ.”

01079005 ಯದುರುವಾಚ।
01079005a ಸಿತಶ್ಮಶ್ರುಶಿರಾ ದೀನೋ ಜರಯಾ ಶಿಥಿಲೀಕೃತಃ।
01079005c ವಲೀಸಂತತಗಾತ್ರಶ್ಚ ದುರ್ದರ್ಶೋ ದುರ್ಬಲಃ ಕೃಶಃ।।
01079006a ಅಶಕ್ತಃ ಕಾರ್ಯಕರಣೇ ಪರಿಭೂತಃ ಸ ಯೌವನೈಃ।
01079006c ಸಹೋಪಜೀವಿಭಿಶ್ಚೈವ ತಾಂ ಜರಾಂ ನಾಭಿಕಾಮಯೇ।।

ಯದುವು ಹೇಳಿದನು: “ಗಡ್ಡ-ತಲೆಕೂದಲುಗಳು ಬಿಳಿಯಾಗಿ, ದೀನನಾಗಿ, ವೃದ್ಧಾಪ್ಯದಿಂದ ಶಿಥಿಲೀಕೃತನಾಗಿ, ದೇಹವು ನೆರೆಹಿಡಿದು, ದುರ್ದರ್ಶ, ದುರ್ಬಲ ಮತ್ತು ಕೃಶನಾಗಿ, ಯಾವ ಕೆಲಸವನ್ನು ಮಾಡಲೂ ಅಶಕ್ತನಾದವನನ್ನು ಯುವಕರು ಮತ್ತು ಸಹೋಪಜೀವಿಗಳು ಯಾರೂ ಗೌರವಿಸುವುದಿಲ್ಲ. ಅಂಥಹ ವೃದ್ಧಾಪ್ಯವನ್ನು ನಾನು ಬಯಸುವುದಿಲ್ಲ.”

01079007 ಯಯಾತಿರುವಾಚ।
01079007a ಯತ್ತ್ವಂ ಮೇ ಹೃದಯಾಜ್ಜಾತೋ ವಯಃ ಸ್ವಂ ನ ಪ್ರಯಚ್ಛಸಿ।
01079007c ತಸ್ಮಾದರಾಜ್ಯಭಾಕ್ತಾತ ಪ್ರಜಾ ತೇ ವೈ ಭವಿಷ್ಯತಿ।।

ಯಯಾತಿಯು ಹೇಳಿದನು: “ನನ್ನ ಹೃದಯದಿಂದ ಜನಿಸಿದೆಯಾದರೂ ನೀನು ನಿನ್ನ ಯೌವನವನ್ನು ನನಗೆ ಕೊಡುತ್ತಿಲ್ಲ. ಆದುದರಿಂದ, ಮಗನೇ! ನಿನ್ನ ಸಂತತಿಯು ರಾಜ್ಯವಿಹೀನವಾಗುತ್ತದೆ.

01079008a ತುರ್ವಸೋ ಪ್ರತಿಪದ್ಯಸ್ವ ಪಾಪ್ಮಾನಂ ಜರಯಾ ಸಹ।
01079008c ಯೌವನೇನ ಚರೇಯಂ ವೈ ವಿಷಯಾಂಸ್ತವ ಪುತ್ರಕ।।

ತುರ್ವಸು! ಈ ವೃದ್ಧಾಪ್ಯದ ಜೊತೆ ನನ್ನ ಪಾಪವನ್ನೂ ಸ್ವೀಕರಿಸು. ನಿನ್ನ ಯೌವನದಿಂದ ನಾನು ವಿಷಯಸುಖವನ್ನು ಅನುಭವಿಸುತ್ತೇನೆ.

01079009a ಪೂರ್ಣೇ ವರ್ಷಸಹಸ್ರೇ ತು ಪುನರ್ದಾಸ್ಯಾಮಿ ಯೌವನಂ।
01079009c ಸ್ವಂ ಚೈವ ಪ್ರತಿಪತ್ಸ್ಯಾಮಿ ಪಾಪ್ಮಾನಂ ಜರಯಾ ಸಹ।।

ಒಂದು ಸಹಸ್ರ ವರ್ಷಗಳು ತುಂಬಿದ ನಂತರ ನಿನ್ನ ಯೌವನವನ್ನು ನಿನಗೆ ಹಿಂದಿರುಗಿಸಿ, ನನ್ನ ಪಾಪ-ವೃದ್ಧಾಪ್ಯಗಳನ್ನು ಹಿಂದೆ ತೆಗೆದುಕೊಳ್ಳುತ್ತೇನೆ.”

01079010 ತುರ್ವಸುರುವಾಚ।
01079010a ನ ಕಾಮಯೇ ಜರಾಂ ತಾತ ಕಾಮಭೋಗಪ್ರಣಾಶಿನೀಂ।
01079010c ಬಲರೂಪಾಂತಕರಣೀಂ ಬುದ್ಧಿಪ್ರಾಣವಿನಾಶಿನೀಂ।।

ತುರ್ವಸುವು ಹೇಳಿದನು: “ಕಾಮಭೋಗಗಳನ್ನು ನಾಶಪಡಿಸುವ, ಬಲ ಮತ್ತು ರೂಪವನ್ನು ಅಂತ್ಯಗೊಳಿಸುವ, ಬುದ್ಧಿ-ಪ್ರಾಣಗಳನ್ನು ವಿನಾಶಮಾಡುವ ವೃದ್ಧಾಪ್ಯವು ನನಗೆ ಬೇಡ ತಂದೇ!”

01079011 ಯಯಾತಿರುವಾಚ।
01079011a ಯತ್ತ್ವಂ ಮೇ ಹೃದಯಾಜ್ಜಾತೋ ವಯಃ ಸ್ವಂ ನ ಪ್ರಯಚ್ಛಸಿ।
01079011c ತಸ್ಮಾತ್ಪ್ರಜಾ ಸಮುಚ್ಛೇದಂ ತುರ್ವಸೋ ತವ ಯಾಸ್ಯತಿ।।

ಯಯಾತಿಯು ಹೇಳಿದನು: “ನನ್ನ ಹೃದಯದಿಂದ ಜನಿಸಿದೆಯಾದರೂ ನೀನು ನಿನ್ನ ಯೌವನವನ್ನು ನನಗೆ ಕೊಡುತ್ತಿಲ್ಲ. ಆದುದರಿಂದ, ತುರ್ವಸು, ನಿನ್ನ ಸಂತಾನವು ಕ್ಷೀಣವಾಗುತ್ತದೆ.

01079012a ಸಂಕೀರ್ಣಾಚಾರಧರ್ಮೇಷು ಪ್ರತಿಲೋಮಚರೇಷು ಚ।
01079012c ಪಿಶಿತಾಶಿಷು ಚಾಂತ್ಯೇಷು ಮೂಢ ರಾಜಾ ಭವಿಷ್ಯಸಿ।।

ನೀನು ಸಂಕೀರ್ಣ ಆಚಾರಧರ್ಮಗಳನ್ನುಳ್ಳ, ಶಿಷ್ಟಾಚಾರಗಳನ್ನು ಬಿಟ್ಟ, ಮಾಂಸವನ್ನೇ ತಿನ್ನುವ ಕೀಳು ಜನಾಂಗದ ರಾಜನಾಗುತ್ತೀಯೆ.

01079013a ಗುರುದಾರಪ್ರಸಕ್ತೇಷು ತಿರ್ಯಗ್ಯೋನಿಗತೇಷು ಚ।
01079013c ಪಶುಧರ್ಮಿಷು ಪಾಪೇಷು ಮ್ಲೇಚ್ಛೇಷು ಪ್ರಭವಿಷ್ಯಸಿ।।

ನೀನು ಆಳುವ ಮ್ಲೇಚ್ಛರು ಗುರುಪತ್ನಿಯರಲ್ಲಿ ಆಸಕ್ತರಾಗಿರುತ್ತಾರೆ, ಅತ್ಯಂತ ಕೀಳು ಯೋನಿಗಳೊಡನೆ ಸಂಭೋಗಿಸುತ್ತಾರೆ, ಪಶುಧರ್ಮಿಗಳಾಗಿದ್ದು ಪಾಪಕೃತ್ಯಗಳಲ್ಲಿ ತೊಡಗಿರುತ್ತಾರೆ.””

01079014 ವೈಶಂಪಾಯನ ಉವಾಚ।
01079014a ಏವಂ ಸ ತುರ್ವಸುಂ ಶಪ್ತ್ವಾ ಯಯಾತಿಃ ಸುತಮಾತ್ಮನಃ।
01079014c ಶರ್ಮಿಷ್ಠಾಯಾಃ ಸುತಂ ದುಹ್ಯುಮಿದಂ ವಚನಮಬ್ರವೀತ್।।

ವೈಶಂಪಾಯನನು ಹೇಳಿದನು: “ತನ್ನದೇ ಮಗ ತುರ್ವಸುವಿಗೆ ಯಯಾತಿಯು ಈ ರೀತಿ ಶಪಿಸಿ, ಶರ್ಮಿಷ್ಠೆಯ ಮಗ ದ್ರುಹ್ಯುವನ್ನು ಕರೆದು ಹೇಳಿದನು:

01079015a ದ್ರುಹ್ಯೋ ತ್ವಂ ಪ್ರತಿಪದ್ಯಸ್ವ ವರ್ಣರೂಪವಿನಾಶಿನೀಂ।
01079015c ಜರಾಂ ವರ್ಷಸಹಸ್ರಂ ಮೇ ಯೌವನಂ ಸ್ವಂ ದದಸ್ವ ಚ।।

“ದ್ರುಹ್ಯು! ಬಣ್ಣ ಮತ್ತು ರೂಪಗಳನ್ನು ನಾಶಪಡಿಸುವ ನನ್ನ ಈ ವೃದ್ಧಾಪ್ಯವನ್ನು ಒಂದು ಸಾವಿರ ವರ್ಷಗಳವರೆಗೆ ತೆಗೆದುಕೊಂಡು, ನನಗೆ ನಿನ್ನ ಯೌವನವನ್ನು ಕೊಡು.

01079016a ಪೂರ್ಣೇ ವರ್ಷಸಹಸ್ರೇ ತು ಪ್ರತಿದಾಸ್ಯಾಮಿ ಯೌವನಂ।
01079016c ಸ್ವಂ ಚಾದಾಸ್ಯಾಮಿ ಭೂಯೋಽಹಂ ಪಾಪ್ಮಾನಂ ಜರಯಾ ಸಹ।।

ಒಂದು ಸಾವಿರ ವರ್ಷಗಳು ತುಂಬಿದ ನಂತರ ಯೌವನವನ್ನು ಹಿಂದಿರುಗಿಸುತ್ತೇನೆ, ಮತ್ತು ನನ್ನ ಈ ಪಾಪದ ಜೊತೆಗೆ ವೃದ್ಧಾಪ್ಯವನ್ನೂ ಹಿಂದೆ ತೆಗೆದುಕೊಳ್ಳುತ್ತೇನೆ.”

01079017 ದ್ರುಹ್ಯುರುವಾಚ।
01079017a ನ ಗಜಂ ನ ರಥಂ ನಾಶ್ವಂ ಜೀರ್ಣೋ ಭುಂಕ್ತೇ ನ ಚ ಸ್ತ್ರಿಯಂ।
01079017c ವಾಗ್ಭಂಗಶ್ಚಾಸ್ಯ ಭವತಿ ತಜ್ಜರಾಂ ನಾಭಿಕಾಮಯೇ।।

ದ್ರುಹ್ಯುವು ಹೇಳಿದನು: “ವೃದ್ಧನು ಗಜ, ರಥ, ಅಶ್ವ, ಆಹಾರ, ಮತ್ತು ಸ್ತ್ರೀಯರನ್ನು ಅನುಭವಿಸಲು ಶಕ್ಯನಾಗಿರುವುದಿಲ್ಲ ಮತ್ತು ಸರಿಯಾಗಿ ಮಾತನಾಡಲೂ ಆಗುವುದಿಲ್ಲ. ಅಂಥಹ ವೃದ್ಧಾಪ್ಯವು ನನಗೆ ಬೇಡ.”

01079018 ಯಯಾತಿರುವಾಚ।
01079018a ಯತ್ತ್ವಂ ಮೇ ಹೃದಯಾಜ್ಜಾತೋ ವಯಃ ಸ್ವಂ ನ ಪ್ರಯಚ್ಛಸಿ।
01079018c ತಸ್ಮಾದ್ದ್ರುಹ್ಯೋ ಪ್ರಿಯಃ ಕಾಮೋ ನ ತೇ ಸಂಪತ್ಸ್ಯತೇ ಕ್ವ ಚಿತ್।।

ಯಯಾತಿಯು ಹೇಳಿದನು: “ನನ್ನ ಹೃದಯದಿಂದ ಜನಿಸಿದೆಯಾದರೂ ನೀನು ನಿನ್ನ ಯೌವನವನ್ನು ನನಗೆ ಕೊಡುತ್ತಿಲ್ಲ. ಆದುದರಿಂದ ನಿನ್ನ ಪ್ರಿಯ ಆಸೆಯು ಎಂದೂ ಪೂರೈಸಲ್ಪಡುವುದಿಲ್ಲ.

01079019a ಉಡುಪಪ್ಲವಸಂತಾರೋ ಯತ್ರ ನಿತ್ಯಂ ಭವಿಷ್ಯತಿ।
01079019c ಅರಾಜಾ ಭೋಜಶಬ್ಧಂ ತ್ವಂ ತತ್ರಾವಾಪ್ಸ್ಯಸಿ ಸಾನ್ವಯಃ।।

ಎಲ್ಲಿ ದೋಣಿ-ತೆಪ್ಪಗಳನ್ನು ಮಾತ್ರ ಬಳಸಿ ತಿರುಗಾಡಬಹುದೋ ಅಂತಹ ಸ್ಥಳದಲ್ಲಿ ವಾಸಿಸಿ, ಭೋಜನಾಗಿ ರಾಜನೆಂದು ಕರೆಯಿಸಿ ಕೊಳ್ಳುವುದಿಲ್ಲ.

01079020a ಅನೋ ತ್ವಂ ಪ್ರತಿಪದ್ಯಸ್ವ ಪಾಪ್ಮಾನಂ ಜರಯಾ ಸಹ।
01079020c ಏಕಂ ವರ್ಷಸಹಸ್ರಂ ತು ಚರೇಯಂ ಯೌವನೇನ ತೇ।।

ಅನು! ನೀನು ನನ್ನ ಪಾಪದ ಜೊತೆಗೆ ಈ ವೃದ್ಧಾಪ್ಯವನ್ನೂ ಸ್ವೀಕರಿಸು. ಒಂದು ಸಾವಿರವರ್ಷಗಳ ಪರ್ಯಂತ ನಾನು ನಿನ್ನ ಯೌವನವನ್ನು ಜೀವಿಸುತ್ತೇನೆ.”

01079021 ಅನುರುವಾಚ।
01079021a ಜೀರ್ಣಃ ಶಿಶುವದಾದತ್ತೇಽಕಾಲೇಽನ್ನಮಶುಚಿರ್ಯಥಾ।
01079021c ನ ಜುಹೋತಿ ಚ ಕಾಲೇಽಗ್ನಿಂ ತಾಂ ಜರಾಂ ನಾಭಿಕಾಮಯೇ।।

ಅನುವು ಹೇಳಿದನು: “ವೃದ್ಧನು ಒಂದು ಮಗುವಿನಂತೆ ದಿನದ ಯಾವ ಸಮಯದಲ್ಲಿಯೂ ಜೊಲ್ಲುಸುರಿಸುತ್ತಾ, ಸ್ವಚ್ಛವಾಗಿರದೇ ತಿನ್ನುತ್ತಾನೆ. ಮತ್ತು ಅವನು ಎಂದೂ ಸಕಾಲದಲ್ಲಿ ಅಗ್ನಿಕಾರ್ಯವನ್ನು ಮಾಡಲಾರ. ಅಂತಹ ವೃದ್ಧಾಪ್ಯವು ನನಗೆ ಬೇಡ.”

01079022 ಯಯಾತಿರುವಾಚ।
01079022a ಯತ್ತ್ವಂ ಮೇ ಹೃದಯಾಜ್ಜಾತೋ ವಯಃ ಸ್ವಂ ನ ಪ್ರಯಚ್ಛಸಿ।
01079022c ಜರಾದೋಷಸ್ತ್ವಯೋಕ್ತೋಽಯಂ ತಸ್ಮಾತ್ತ್ವಂ ಪ್ರತಿಪತ್ಸ್ಯಸೇ।।

ಯಯಾತಿಯು ಹೇಳಿದನು: “ನನ್ನ ಹೃದಯದಿಂದ ಜನಿಸಿದೆಯಾದರೂ ನೀನು ನಿನ್ನ ಯೌವನವನ್ನು ನನಗೆ ಕೊಡುತ್ತಿಲ್ಲ. ಆದುದರಿಂದ ನೀನು ಹೇಳಿದ ವೃದ್ಧಾಪ್ಯದ ದೋಷಗಳನ್ನು ನೀನೇ ಪಡೆಯುತ್ತೀಯೆ.

01079023a ಪ್ರಜಾಶ್ಚ ಯೌವನಪ್ರಾಪ್ತಾ ವಿನಶಿಷ್ಯಂತ್ಯನೋ ತವ।
01079023c ಅಗ್ನಿಪ್ರಸ್ಕಂದನಪರಸ್ತ್ವಂ ಚಾಪ್ಯೇವಂ ಭವಿಷ್ಯಸಿ।।

ನಿನ್ನ ಜೊತೆ ನಿನ್ನ ಸಂತಾನವೂ ಯೌವನ ಪ್ರಾಪ್ತಿಯಾಗುತ್ತಿದ್ದಂತೇ ವಿನಾಶವನ್ನು ಹೊಂದುತ್ತದೆ. ನೀನೇ ಅಗ್ನಿಕಾರ್ಯವನ್ನು ಸರಿಯಾದ ರೀತಿಯಲ್ಲಿ ಮಾಡದವನಾಗುತ್ತೀಯೆ.

01079024a ಪೂರೋ ತ್ವಂ ಮೇ ಪ್ರಿಯಃ ಪುತ್ರಸ್ತ್ವಂ ವರೀಯಾನ್ಭವಿಷ್ಯಸಿ।
01079024c ಜರಾ ವಲೀ ಚ ಮೇ ತಾತ ಪಲಿತಾನಿ ಚ ಪರ್ಯಗುಃ।
01079024e ಕಾವ್ಯಸ್ಯೋಶನಸಃ ಶಾಪಾನ್ನ ಚ ತೃಪ್ತೋಽಸ್ಮಿ ಯೌವನೇ।।

ಪೂರು! ನೀನು ನನ್ನ ಪ್ರೀತಿಯ ಮಗ. ನೀನು ಶ್ರೇಷ್ಠ. ಮಗನೇ! ಉಶನಸ ಕಾವ್ಯನ ಶಾಪದಿಂದ ವೃದ್ಧಾಪ್ಯವು ನನ್ನನ್ನು ಆವರಿಸಿಬಿಟ್ಟಿದೆ. ಕೂದಲು ನೆರೆತಿದೆ ಮತ್ತು ಚರ್ಮವು ನೆರೆಕಟ್ಟಿದೆ. ಆದರೆ ಯೌವನದ ಸುಖಗಳಿಂದ ನಾನಿನ್ನೂ ತೃಪ್ತನಾಗಿಲ್ಲ.

01079025a ಪೂರೋ ತ್ವಂ ಪ್ರತಿಪದ್ಯಸ್ವ ಪಾಪ್ಮಾನಂ ಜರಯಾ ಸಹ।
01079025c ಕಂ ಚಿತ್ಕಾಲಂ ಚರೇಯಂ ವೈ ವಿಷಯಾನ್ವಯಸಾ ತವ।।

ಪೂರು! ನನ್ನ ಈ ಪಾಪದ ಜೊತೆ ವೃದ್ಧಾಪ್ಯವನ್ನೂ ಸ್ವೀಕರಿಸು. ನಿನ್ನ ಯೌವನವನ್ನು ಪಡೆದು ಕೆಲವು ಕಾಲ ನಾನು ವಿಷಯಸುಖವನ್ನು ಅನುಭವಿಸುತ್ತೇನೆ.

01079026a ಪೂರ್ಣೇ ವರ್ಷಸಹಸ್ರೇ ತು ಪ್ರತಿದಾಸ್ಯಾಮಿ ಯೌವನಂ।
01079026c ಸ್ವಂ ಚೈವ ಪ್ರತಿಪತ್ಸ್ಯಾಮಿ ಪಾಪ್ಮಾನಂ ಜರಯಾ ಸಹ।।

ಒಂದು ಸಹಸ್ರ ವರ್ಷಗಳು ತುಂಬಿದ ನಂತರ ನಿನ್ನ ಯೌವನವನ್ನು ನಿನಗೆ ಹಿಂದಿರುಗಿಸಿ, ನನ್ನ ಪಾಪ ಮತ್ತು ವೃದ್ಧಾಪ್ಯಗಳನ್ನು ಹಿಂದೆ ತೆಗೆದುಕೊಳ್ಳುತ್ತೇನೆ.””

01079027 ವೈಶಂಪಾಯನ ಉವಾಚ।
01079027a ಏವಮುಕ್ತಃ ಪ್ರತ್ಯುವಾಚ ಪೂರುಃ ಪಿತರಮಂಜಸಾ।
01079027c ಯಥಾತ್ಥ ಮಾಂ ಮಹಾರಾಜ ತತ್ಕರಿಷ್ಯಾಮಿ ತೇ ವಚಃ।।

ವೈಶಂಪಾಯನನು ಹೇಳಿದನು: “ತಂದೆಯ ಈ ಮಾತುಗಳಿಗೆ ತಕ್ಷಣವೇ ಪೂರುವು ಉತ್ತರಿಸಿದನು: “ಮಹಾರಾಜ! ನೀನು ಹೇಳಿದಂತೆಯೇ ಮಾಡುತ್ತೇನೆ.

01079028a ಪ್ರತಿಪತ್ಸ್ಯಾಮಿ ತೇ ರಾಜನ್ಪಾಪ್ಮಾನಂ ಜರಯಾ ಸಹ।
01079028c ಗೃಹಾಣ ಯೌವನಂ ಮತ್ತಶ್ಚರ ಕಾಮಾನ್ಯಥೇಪ್ಸಿತಾನ್।।

ರಾಜನ್! ವೃದ್ಧಾಪ್ಯದ ಜೊತೆ ನಿನ್ನ ಪಾಪವನ್ನೂ ಸ್ವೀಕರಿಸುತ್ತೇನೆ. ನನ್ನ ಈ ಯೌವನವನ್ನು ಪಡೆದು ಯಥೇಚ್ಛವಾಗಿ ನಿನ್ನ ಆಸೆಗಳನ್ನು ಪೂರೈಸಿಕೋ.

01079029a ಜರಯಾಹಂ ಪ್ರತಿಚ್ಛನ್ನೋ ವಯೋರೂಪಧರಸ್ತವ।
01079029c ಯೌವನಂ ಭವತೇ ದತ್ತ್ವಾ ಚರಿಷ್ಯಾಮಿ ಯಥಾತ್ಥ ಮಾಂ।।

ನಿನ್ನ ವಯೋರೂಪವನ್ನು ತಾಳಿ ವೃದ್ಧಾಪ್ಯವನ್ನು ಹೊದ್ದುಕೊಳ್ಳುತ್ತೇನೆ. ನನ್ನ ಯೌವನವನ್ನು ನಿನಗಿತ್ತು ನೀನು ಹೇಳಿದಹಾಗೆ ಜೀವಿಸುತ್ತೇನೆ.”

01079030 ಯಯಾತಿರುವಾಚ।
01079030a ಪೂರೋ ಪ್ರೀತೋಽಸ್ಮಿ ತೇ ವತ್ಸ ಪ್ರೀತಶ್ಚೇದಂ ದದಾಮಿ ತೇ।
01079030c ಸರ್ವಕಾಮಸಮೃದ್ಧಾ ತೇ ಪ್ರಜಾ ರಾಜ್ಯೇ ಭವಿಷ್ಯತಿ।।

ಯಯಾತಿಯು ಹೇಳಿದನು: “ಪೂರು! ನನ್ನ ಮಗನೇ! ನಿನ್ನಿಂದ ನಾನು ಬಹಳ ಪ್ರೀತನಾಗಿದ್ದೇನೆ. ಪ್ರೀತಿಯಿಂದ ನಿನಗೆ ಇದನ್ನು ಕೊಡುತ್ತಿದ್ದೇನೆ. ನಿನ್ನ ಸಂತತಿಯು ಸರ್ವಕಾಮಗಳಲ್ಲಿ ಸಮೃದ್ಧರಾಗಿ ರಾಜ್ಯವನ್ನಾಳುತ್ತಾರೆ.””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಯಯಾತ್ಯುಪಾಖ್ಯಾನೇ ಏಕೋನಾಶೀತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಯಯಾತಿ-ಉಪಾಖ್ಯಾನದಲ್ಲಿ ಎಪ್ಪತ್ತೊಂಭತ್ತನೆಯ ಅಧ್ಯಾಯವು.