ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಸಂಭವ ಪರ್ವ
ಅಧ್ಯಾಯ 78
ಸಾರ
ದೇವಯಾನಿಯು ಅವಳ ಮಕ್ಕಳ ತಂದೆಯ ಕುರಿತು ಪ್ರಶ್ನಿಸಲು ಶರ್ಮಿಷ್ಠೆಯು ಸುಳ್ಳುಹೇಳುವುದು (1-10). ದೇವಯಾನಿಯು ಸತ್ಯವನ್ನು ತಿಳಿದು ಶರ್ಮಿಷ್ಠೆಯನ್ನು ನಿಂದಿಸುವುದು (11-20). ಯಯಾತಿಗೆ ಶುಕ್ರನಿಂದ ಶಾಪ ಮತ್ತು ಅದಕ್ಕೆ ಪರಿಹಾರದ ಸೂಚನೆ (21-41).
01078001 ವೈಶಂಪಾಯನ ಉವಾಚ।
01078001a ಶ್ರುತ್ವಾ ಕುಮಾರಂ ಜಾತಂ ತು ದೇವಯಾನೀ ಶುಚಿಸ್ಮಿತಾ।
01078001c ಚಿಂತಯಾಮಾಸ ದುಃಖಾರ್ತಾ ಶರ್ಮಿಷ್ಠಾಂ ಪ್ರತಿ ಭಾರತ।।
ವೈಶಂಪಾಯನನು ಹೇಳಿದನು: “ಭಾರತ! ಕುಮಾರನ ಜನನದ ಕುರಿತು ಕೇಳಿದ ಶುಚಿಸ್ಮಿತೆ ದೇವಯಾನಿಯು ದುಃಖಾರ್ತಳಾಗಿ ಶರ್ಮಿಷ್ಠೆಯ ಕುರಿತು ಚಿಂತಿಸತೊಡಗಿದಳು.
01078002a ಅಭಿಗಮ್ಯ ಚ ಶರ್ಮಿಷ್ಠಾಂ ದೇವಯಾನ್ಯಬ್ರವೀದಿದಂ।
01078002c ಕಿಮಿದಂ ವೃಜಿನಂ ಸುಭ್ರು ಕೃತಂ ತೇ ಕಾಮಲುಬ್ಧಯಾ।।
ಶರ್ಮಿಷ್ಠೆಯ ಬಳಿಹೋಗಿ ದೇವಯಾನಿಯು ಕೇಳಿದಳು: “ಸುಂದರ ಹುಬ್ಬಿನವಳೇ! ಕಾಮಲುಬ್ಧಳಾಗಿ ಇದೇನು ಮಾಡಿಬಿಟ್ಟೆ?”
01078003 ಶರ್ಮಿಷ್ಠೋವಾಚ।
01078003a ಋಷಿರಭ್ಯಾಗತಃ ಕಶ್ಚಿದ್ಧರ್ಮಾತ್ಮಾ ವೇದಪಾರಗಃ।
01078003c ಸ ಮಯಾ ವರದಃ ಕಾಮಂ ಯಾಚಿತೋ ಧರ್ಮಸಂಹಿತಂ।।
ಶರ್ಮಿಷ್ಠೆಯು ಹೇಳಿದಳು: “ಧರ್ಮಾತ್ಮನೂ ವೇದಪಾರಂಗತನೂ ಆದ ಓರ್ವ ಋಷಿಯು ಬಂದಾಗ ಧರ್ಮಸಂಹಿತವಾಗಿ ಕೇಳಿಕೊಂಡಾಗ ಅವನು ನನಗೆ ನನ್ನ ಆಸೆಯನ್ನು ನೆರವೇರಿಸಿಕೊಟ್ಟನು.
01078004a ನಾಹಮನ್ಯಾಯತಃ ಕಾಮಮಾಚರಾಮಿ ಶುಚಿಸ್ಮಿತೇ।
01078004c ತಸ್ಮಾದೃಷೇರ್ಮಮಾಪತ್ಯಮಿತಿ ಸತ್ಯಂ ಬ್ರವೀಮಿ ತೇ।।
ಶುಚಿಸ್ಮಿತೇ! ನಾನು ಅನ್ಯಾಯದಿಂದ ಕಾಮವನ್ನು ಆಚರಿಸಲಿಲ್ಲ. ಸತ್ಯವನ್ನು ಹೇಳುತ್ತಿದ್ದೇನೆ. ಆ ಋಷಿಯಿಂದಲೇ ನಾನು ಈ ಮಗುವನ್ನು ಪಡೆದೆ.”
01078005 ದೇವಯಾನ್ಯುವಾಚ।
01078005a ಶೋಭನಂ ಭೀರು ಸತ್ಯಂ ಚೇದಥ ಸ ಜ್ಞಾಯತೇ ದ್ವಿಜಃ।
01078005c ಗೋತ್ರನಾಮಾಭಿಜನತೋ ವೇತ್ತುಮಿಚ್ಛಾಮಿ ತಂ ದ್ವಿಜಂ।।
ದೇವಯಾನಿಯು ಹೇಳಿದಳು: “ಸುಂದರಿ! ಇದು ಸತ್ಯವೆಂದಾದರೆ ನಾನೇನೂ ಹೇಳಲಾರೆ. ನಿನಗೆ ಆ ದ್ವಿಜನ ಕುರಿತು ತಿಳಿದಿರಬಹುದು. ಆ ದ್ವಿಜನ ಗೋತ್ರ ಮತ್ತು ಹೆಸರನ್ನು ತಿಳಿಯ ಬಯಸುತ್ತೇನೆ.”
01078006 ಶರ್ಮಿಷ್ಠೋವಾಚ।
01078006a ಓಜಸಾ ತೇಜಸಾ ಚೈವ ದೀಪ್ಯಮಾನಂ ರವಿಂ ಯಥಾ।
01078006c ತಂ ದೃಷ್ಟ್ವಾ ಮಮ ಸಂಪ್ರಷ್ಟುಂ ಶಕ್ತಿರ್ನಾಸೀಚ್ಶುಚಿಸ್ಮಿತೇ।।
ಶರ್ಮಿಷ್ಠೆಯು ಹೇಳಿದಳು: “ಶುಚಿಸ್ಮಿತೇ! ಓಜಸ್ಸು ಮತ್ತು ತೇಜಸ್ಸಿನಲ್ಲಿ ರವಿಯಂತೆ ಬೆಳಗುತ್ತಿದ್ದ ಅವನನ್ನು ನೋಡಿದ ನನಗೆ ಇದನ್ನೆಲ್ಲಾ ಕೇಳಿ ತಿಳಿಯುವ ಶಕ್ತಿಯೇ ಇರಲಿಲ್ಲ.”
01078007 ದೇವಯಾನ್ಯುವಾಚ।
01078007a ಯದ್ಯೇತದೇವಂ ಶರ್ಮಿಷ್ಠೇ ನ ಮನ್ಯುರ್ವಿದ್ಯತೇ ಮಮ।
01078007c ಅಪತ್ಯಂ ಯದಿ ತೇ ಲಬ್ಧಂ ಜ್ಯೇಷ್ಠಾತ್ ಶ್ರೇಷ್ಟಾಚ್ಚ ವೈ ದ್ವಿಜಾತ್।।
ದೇವಯಾನಿಯು ಹೇಳಿದಳು: “ಶರ್ಮಿಷ್ಠೇ! ಸತ್ಯವಾಗಿ ನಿನ್ನ ಮಗುವನ್ನು ಜ್ಯೇಷ್ಠ ಮತ್ತು ಶ್ರೇಷ್ಠ ದ್ವಿಜನೋರ್ವನಿಂದ ಪಡೆದಿದ್ದೀಯೆ ಎಂದಾದರೆ ನಾನು ಸಿಟ್ಟಿಗೇಳುವ ಕಾರಣವೇ ಇಲ್ಲ.””
01078008 ವೈಶಂಪಾಯನ ಉವಾಚ।
01078008a ಅನ್ಯೋನ್ಯಮೇವಮುಕ್ತ್ವಾ ಚ ಸಂಪ್ರಹಸ್ಯ ಚ ತೇ ಮಿಥಃ।
01078008c ಜಗಾಮ ಭಾರ್ಗವೀ ವೇಶ್ಮ ತಥ್ಯಮಿತ್ಯೇವ ಜಜ್ಞುಷೀ।।
ವೈಶಂಪಾಯನನು ಹೇಳಿದನು: “ಈ ರೀತಿ ಅನ್ಯೋನ್ಯರಲ್ಲಿ ಮಾತನಾಡಿ, ಹಾಸ್ಯಗೇಲಿಯಲ್ಲಿ ನಕ್ಕರು. ತಾನು ಕೇಳಿದ ಸುಳ್ಳನ್ನು ಸತ್ಯವೆಂದೇ ನಂಬಿ, ಭಾರ್ಗವಿಯು ತನ್ನ ಮನೆ ಸೇರಿದಳು.
01078009a ಯಯಾತಿರ್ದೇವಯಾನ್ಯಾಂ ತು ಪುತ್ರಾವಜನಯನ್ನೃಪಃ।
01078009c ಯದುಂ ಚ ತುರ್ವಸುಂ ಚೈವ ಶಕ್ರವಿಷ್ಣೂಇವಾಪರೌ।।
ನೃಪ ಯಯಾತಿಯು ದೇವಯಾನಿಯಲ್ಲಿ ಇಂದ್ರ-ವಿಷ್ಣುವಿನಂತಿರುವ ಯದು ಮತ್ತು ತುರ್ವಸುವೆಂಬ ಇನ್ನೂ ಎರಡು ಪುತ್ರರನ್ನು ಪಡೆದನು.
01078010a ತಸ್ಮಾದೇವ ತು ರಾಜರ್ಷೇಃ ಶರ್ಮಿಷ್ಠಾ ವಾರ್ಷಪರ್ವಣೀ।
01078010c ದ್ರುಹ್ಯುಂ ಚಾನುಂ ಚ ಪೂರುಂ ಚ ತ್ರೀನ್ಕುಮಾರಾನಜೀಜನತ್।।
ಅದೇ ರಾಜರ್ಷಿಯಲ್ಲಿ ವಾರ್ಷಪರ್ವಣೀ ಶರ್ಮಿಷ್ಠೆಯು ದ್ರುಹ್ಯು, ಅನು ಮತ್ತು ಪೂರು ಎನ್ನುವ ಮೂರು ಕುಮಾರರಿಗೆ ಜನ್ಮವಿತ್ತಳು.
01078011a ತತಃ ಕಾಲೇ ತು ಕಸ್ಮಿಂಶ್ಚಿದ್ದೇವಯಾನೀ ಶುಚಿಸ್ಮಿತಾ।
01078011c ಯಯಾತಿಸಹಿತಾ ರಾಜನ್ನಿರ್ಜಗಾಮ ಮಹಾವನಂ।।
ಒಮ್ಮೆ ಶುಚಿಸ್ಮಿತೆ ದೇವಯಾನಿಯು ರಾಜ ಯಯಾತಿಯ ಸಹಿತ ಆ ಮಹಾವನಕ್ಕೆ ಬಂದಳು.
01078012a ದದರ್ಶ ಚ ತದಾ ತತ್ರ ಕುಮಾರಾನ್ದೇವರೂಪಿಣಃ।
01078012c ಕ್ರೀಡಮಾನಾನ್ಸುವಿಶ್ರಬ್ಧಾನ್ವಿಸ್ಮಿತಾ ಚೇದಮಬ್ರವೀತ್।।
ಅಲ್ಲಿ ಸ್ವಚ್ಛಂದವಾಗಿ ಆಡುತ್ತಿರುವ ಮೂರು ದೇವರೂಪಿ ಕುಮಾರರನ್ನು ಕಂಡು ಅವಳು ಕೇಳಿದಳು:
01078013a ಕಸ್ಯೈತೇ ದಾರಕಾ ರಾಜನ್ದೇವಪುತ್ರೋಪಮಾಃ ಶುಭಾಃ।
01078013c ವರ್ಚಸಾ ರೂಪತಶ್ಚೈವ ಸದೃಶಾ ಮೇ ಮತಾಸ್ತವ।।
“ರಾಜನ್! ದೇವಪುತ್ರರಂತಿರುವ ಈ ಸುಂದರ ಮಕ್ಕಳು ಯಾರದ್ದಿರಬಹುದು? ವರ್ಚಸ್ಸು ಮತ್ತು ರೂಪದಲ್ಲಿ ನಿನ್ನ ಹಾಗೆಯೇ ಇದ್ದಾರೆಂದು ನನಗನ್ನಿಸುತ್ತಿದೆ!”
01078014a ಏವಂ ಪೃಷ್ಟ್ವಾ ತು ರಾಜಾನಂ ಕುಮಾರಾನ್ಪರ್ಯಪೃಚ್ಛತ।
01078014c ಕಿಮ್ನಾಮಧೇಯಗೋತ್ರೋ ವಃ ಪುತ್ರಕಾ ಬ್ರಾಹ್ಮಣಃ ಪಿತಾ।
01078014e ವಿಬ್ರೂತ ಮೇ ಯಥಾತಥ್ಯಂ ಶ್ರೋತುಮಿಚ್ಛಾಮಿ ತಂ ಹ್ಯಹಂ।।
ಈ ರೀತಿ ರಾಜನನ್ನು ಪ್ರಶ್ನಿಸಿದ ಅವಳು ಪುನಃ ಕುಮಾರರನ್ನೇ ಕೇಳಿದಳು: “ಮಕ್ಕಳೇ! ನಿಮ್ಮ ಬ್ರಾಹ್ಮಣ ತಂದೆಯ ಹೆಸರು ಮತ್ತು ಗೋತ್ರವೇನು? ತಿಳಿಯ ಬಯಸುವ ನನಗೆ ನಿಜವನ್ನು ಹೇಳಿ.”
01078015a ತೇಽದರ್ಶಯನ್ಪ್ರದೇಶಿನ್ಯಾ ತಮೇವ ನೃಪಸತ್ತಮಂ।
01078015c ಶರ್ಮಿಷ್ಠಾಂ ಮಾತರಂ ಚೈವ ತಸ್ಯಾಚಖ್ಯುಶ್ಚ ದಾರಕಾಃ।।
ಆ ಮಕ್ಕಳು ತಮ್ಮ ಕೈಬೆರಳಿನಿಂದ ಅದೇ ನೃಪಸತ್ತಮನನ್ನು ತೋರಿಸಿ, ತಾಯಿಯು ಶರ್ಮಿಷ್ಠೆಯೆಂದು ಹೇಳಿದರು.
01078016a ಇತ್ಯುಕ್ತ್ವಾ ಸಹಿತಾಸ್ತೇ ತು ರಾಜಾನಮುಪಚಕ್ರಮುಃ।
01078016c ನಾಭ್ಯನಂದತ ತಾನ್ರಾಜಾ ದೇವಯಾನ್ಯಾಸ್ತದಾಂತಿಕೇ।
01078016e ರುದಂತಸ್ತೇಽಥ ಶರ್ಮಿಷ್ಠಾಮಭ್ಯಯುರ್ಬಾಲಕಾಸ್ತತಃ।।
ಹೀಗೆ ಹೇಳಿ ಅವರೆಲ್ಲರೂ ರಾಜನೆಡೆಗೆ ಹೋದರು. ಆದರೆ ರಾಜನು ಹತ್ತಿರದಲ್ಲಿದ್ದ ದೇವಯಾನಿಯನ್ನು ನೋಡಿ ಅವರನ್ನು ಅಭಿನಂದಿಸಲಿಲ್ಲ. ಆಗ ಆ ಬಾಲಕರು ಅಳುತ್ತಾ ಶರ್ಮಿಷ್ಠೆಯಿದ್ದಲ್ಲಿಗೆ ಹೋದರು.
01078017a ದೃಷ್ಟ್ವಾ ತು ತೇಷಾಂ ಬಾಲಾನಾಂ ಪ್ರಣಯಂ ಪಾರ್ಥಿವಂ ಪ್ರತಿ।
01078017c ಬುದ್ಧ್ವಾ ಚ ತತ್ತ್ವತೋ ದೇವೀ ಶರ್ಮಿಷ್ಠಾಮಿದಮಬ್ರವೀತ್।।
ಆ ಬಾಲಕರು ರಾಜನೊಂದಿಗೆ ಈ ರೀತಿ ಪ್ರೀತಿಯಲ್ಲಿ ವರ್ತಿಸಿದ್ದುದನ್ನು ನೋಡಿದ ಆ ದೇವಿಯು ಸತ್ಯವೇನೆಂದು ಊಹಿಸಿ, ಶರ್ಮಿಷ್ಠೆಯನ್ನು ಉದ್ದೇಶಿಸಿ ಹೇಳಿದಳು:
01078018a ಮದಧೀನಾ ಸತೀ ಕಸ್ಮಾದಕಾರ್ಷೀರ್ವಿಪ್ರಿಯಂ ಮಮ।
01078018c ತಮೇವಾಸುರಧರ್ಮಂ ತ್ವಮಾಸ್ಥಿತಾ ನ ಬಿಭೇಷಿ ಕಿಂ।।
“ನನ್ನ ಅಧೀನಳಾಗಿದ್ದುಕೊಂಡು ನನ್ನನ್ನೇ ಕಡೆಮಾಡುವ ಸಾಹಸವನ್ನು ಹೇಗೆ ಮಾಡಿದೆ? ಈ ರೀತಿ ನಿನ್ನ ಅಸುರಧರ್ಮಕ್ಕೇ ಹಿಂದಿರುಗಿದ್ದೀಯೆ. ಭಯವೇ ಆಗಲಿಲ್ಲವೇ ನಿನಗೆ?”
01078019 ಶರ್ಮಿಷ್ಠೋವಾಚ।
01078019a ಯದುಕ್ತಂ ಋಷಿರಿತ್ಯೇವ ತತ್ಸತ್ಯಂ ಚಾರುಹಾಸಿನಿ।
01078019c ನ್ಯಾಯತೋ ಧರ್ಮತಶ್ಚೈವ ಚರಂತೀ ನ ಬಿಭೇಮಿ ತೇ।।
ಶರ್ಮಿಷ್ಠೆಯು ಹೇಳಿದಳು: “ಚಾರುಹಾಸಿನೀ! ಅವನು ಓರ್ವ ಋಷಿಯೆಂದು ಹೇಳಿದಾಗ ನಾನು ನಿನಗೆ ಸತ್ಯವನ್ನೇ ಹೇಳಿದೆ. ನ್ಯಾಯ ಮತ್ತು ಧರ್ಮಕ್ಕನುಗುಣವಾಗಿಯೇ ನಡೆದುಕೊಂಡಿದ್ದೇನೆ. ಆದುದರಿಂದ ನನಗೆ ನಿನ್ನ ಮೇಲಿನ ಭಯವಾದರೂ ಏಕೆ?
01078020a ಯದಾ ತ್ವಯಾ ವೃತೋ ರಾಜಾ ವೃತ ಏವ ತದಾ ಮಯಾ।
01078020c ಸಖೀಭರ್ತಾ ಹಿ ಧರ್ಮೇಣ ಭರ್ತಾ ಭವತಿ ಶೋಭನೇ।।
ಎಂದು ನೀನು ರಾಜನನ್ನು ವರಿಸಿದೆಯೋ ಅಂದೇ ನಾನೂ ಕೂಡ ಅವನನ್ನು ವರಿಸಿದೆ. ಶೋಭನೇ! ಧರ್ಮದ ಪ್ರಕಾರ, ಸಖಿಯ ಪತಿಯು ನಿನ್ನ ಪತಿಯೂ ಆಗಬಲ್ಲ.
01078021a ಪೂಜ್ಯಾಸಿ ಮಮ ಮಾನ್ಯಾ ಚ ಜ್ಯೇಷ್ಠಾ ಶ್ರೇಷ್ಠಾ ಚ ಬ್ರಾಹ್ಮಣೀ।
01078021c ತ್ವತ್ತೋಽಪಿ ಮೇ ಪೂಜ್ಯತಮೋ ರಾಜರ್ಷಿಃ ಕಿಂ ನ ವೇತ್ಥ ತತ್।।
ನನ್ನ ಜ್ಯೇಷ್ಠ ಮತ್ತು ಶ್ರೇಷ್ಠ ಬ್ರಾಹ್ಮಣಿ! ನೀನು ನನ್ನ ಪೂಜನೀಯಳು. ಆದರೆ ನನಗೆ ಈ ರಾಜರ್ಷಿಯು ನಿನಗಿಂತ ಹೆಚ್ಚು ಪೂಜನೀಯ ಎಂದು ನಿನಗನಿಸುವುದಿಲ್ಲವೇ?””
01078022 ವೈಶಂಪಾಯನ ಉವಾಚ।
01078022a ಶ್ರುತ್ವಾ ತಸ್ಯಾಸ್ತತೋ ವಾಕ್ಯಂ ದೇವಯಾನ್ಯಬ್ರವೀದಿದಂ।
01078022c ರಾಜನ್ನಾದ್ಯೇಹ ವತ್ಸ್ಯಾಮಿ ವಿಪ್ರಿಯಂ ಮೇ ಕೃತಂ ತ್ವಯಾ।।
ವೈಶಂಪಾಯನನು ಹೇಳಿದನು: “ಈ ಮಾತುಗಳನ್ನು ಕೇಳಿದ ದೇವಯಾನಿಯು ಹೇಳಿದಳು: “ರಾಜನ್! ನೀನು ನನ್ನ ಮೇಲೆ ತಪ್ಪನ್ನೆಸಗಿದ್ದೀಯೆ. ಇಂದಿನಿಂದ ನಾನು ಇಲ್ಲಿ ಇರಲಾರೆ.”
01078023a ಸಹಸೋತ್ಪತಿತಾಂ ಶ್ಯಾಮಾಂ ದೃಷ್ಟ್ವಾ ತಾಂ ಸಾಶ್ರುಲೋಚನಾಂ।
01078023c ತ್ವರಿತಂ ಸಕಾಶಂ ಕಾವ್ಯಸ್ಯ ಪ್ರಸ್ಥಿತಾಂ ವ್ಯಥಿತಸ್ತದಾ।।
ಹೀಗೆ ಹೇಳಿ ತಕ್ಷಣವೇ ಕಣ್ಣಿನಲ್ಲಿ ನೀರು ತುಂಬಿಸಿಕೊಂಡು ಕಾವ್ಯನ ಬಳಿ ಹೋಗಲು ಮೇಲೆದ್ದ ಅವಳನ್ನು ನೋಡಿ ರಾಜನು ದುಃಖಿತನಾದನು.
01078024a ಅನುವವ್ರಾಜ ಸಂಭ್ರಾಂತಃ ಪೃಷ್ಠತಃ ಸಾಂತ್ವಯನ್ನೃಪಃ।
01078024c ನ್ಯವರ್ತತ ನ ಚೈವ ಸ್ಮ ಕ್ರೋಧಸಂರಕ್ತಲೋಚನಾ।।
ಸಂಭ್ರಾಂತ ನೃಪನು ಅವಳ ಹಿಂದೆಯೇ ಹೋಗಿ ಅವಳನ್ನು ತಡೆಹಿಡಿದು ಸಂತವಿಸಲು ಪ್ರಯತ್ನಿಸಿದನು. ಆದರೆ ಕ್ರೋಧದಿಂದ ರಕ್ತಲೋಚನಳಾದ ಅವಳು ಹಿಂದಿರುಗಲಿಲ್ಲ.
01078025a ಅವಿಬ್ರುವಂತೀ ಕಿಂ ಚಿತ್ತು ರಾಜಾನಂ ಚಾರುಲೋಚನಾ।
01078025c ಅಚಿರಾದಿವ ಸಂಪ್ರಾಪ್ತಾ ಕಾವ್ಯಸ್ಯೋಶನಸೋಽಂತಿಕಂ।।
ಆ ಚಾರುಲೋಚನಳು ರಾಜನಿಗೆ ಏನನ್ನೂ ಹೇಳದೇ ತಕ್ಷಣವೇ ಕಾವ್ಯ ಉಶನಸನ ಬಳಿ ತಲುಪಿದಳು.
01078026a ಸಾ ತು ದೃಷ್ಟ್ವೈವ ಪಿತರಮಭಿವಾದ್ಯಾಗ್ರತಃ ಸ್ಥಿತಾ।
01078026c ಅನಂತರಂ ಯಯಾತಿಸ್ತು ಪೂಜಯಾಮಾಸ ಭಾರ್ಗವಂ।।
ತಂದೆಯನ್ನು ನೋಡಿದಾಕ್ಷಣವೇ ಅವಳು ಅವನಿಗೆ ನಮಸ್ಕರಿಸಿ ಎದಿರು ನಿಂತುಕೊಂಡಳು. ಅನಂತರ ಯಯಾತಿಯೂ ಅಲ್ಲಿಗೆ ಬಂದು ಭಾರ್ಗವನಿಗೆ ನಮಸ್ಕರಿಸಿದನು.
01078027 ದೇವಯಾನ್ಯುವಾಚ।
01078027a ಅಧರ್ಮೇಣ ಜಿತೋ ಧರ್ಮಃ ಪ್ರವೃತ್ತಮಧರೋತ್ತರಂ।
01078027c ಶರ್ಮಿಷ್ಠಯಾತಿವೃತ್ತಾಸ್ಮಿ ದುಹಿತ್ರಾ ವೃಷಪರ್ವಣಃ।।
ದೇವಯಾನಿಯು ಹೇಳಿದಳು: “ಧರ್ಮದ ಮೇಲೆ ಅಧರ್ಮದ ವಿಜಯವಾಯಿತು. ಎಲ್ಲವೂ ತಲೆಕೆಳಗಾದವು. ವೃಷಪರ್ವನ ಮಗಳು ಶರ್ಮಿಷ್ಠೆಯು ನನ್ನನ್ನು ಹಿಂದೆ ಹಾಕಿದಳು.
01078028a ತ್ರಯೋಽಸ್ಯಾಂ ಜನಿತಾಃ ಪುತ್ರಾ ರಾಜ್ಞಾನೇನ ಯಯಾತಿನಾ।
01078028c ದುರ್ಭಗಾಯಾ ಮಮ ದ್ವೌ ತು ಪುತ್ರೌ ತಾತ ಬ್ರವೀಮಿ ತೇ।।
ರಾಜ ಯಯಾತಿಯಿಂದ ದುರ್ಭಾಗ್ಯಳಾದ ಅವಳಲ್ಲಿ ಮೂರು ಪುತ್ರರು ಜನಿಸಿದ್ದಾರೆ. ಆದರೆ ನನ್ನಲ್ಲಿ ಎರಡೇ ಪುತ್ರರು ಜನಿಸಿದ್ದಾರೆ.
01078029a ಧರ್ಮಜ್ಞ ಇತಿ ವಿಖ್ಯಾತ ಏಷ ರಾಜಾ ಭೃಗೂದ್ವಹ।
01078029c ಅತಿಕ್ರಾಂತಶ್ಚ ಮರ್ಯಾದಾಂ ಕಾವ್ಯೈತತ್ಕಥಯಾಮಿ ತೇ।।
ಕಾವ್ಯ! ಧರ್ಮಜ್ಞನೆಂದು ವಿಖ್ಯಾತ ಈ ರಾಜನು ಎಲ್ಲ ಮರ್ಯಾದೆಗಳನ್ನೂ ಅತಿಕ್ರಮಿಸಿದ್ದಾನೆ ಎಂದು ನಾನು ಹೇಳುತ್ತಿದ್ದೇನೆ.”
01078030 ಶುಕ್ರ ಉವಾಚ।
01078030a ಧರ್ಮಜ್ಞಃ ಸನ್ಮಹಾರಾಜ ಯೋಽಧರ್ಮಮಕೃಥಾಃ ಪ್ರಿಯಂ।
01078030c ತಸ್ಮಾಜ್ಜರಾ ತ್ವಾಮಚಿರಾದ್ಧರ್ಷಯಿಷ್ಯತಿ ದುರ್ಜಯಾ।।
ಶುಕ್ರನು ಹೇಳಿದನು: “ಮಹಾರಾಜ! ಧರ್ಮಜ್ಞನಾಗಿದ್ದರೂ ಕಾಮಕ್ಕಾಗಿ ಅಧರ್ಮವನ್ನೆಸಗಿದುದಕ್ಕಾಗಿ ಜಯಿಸಲಸಾದ್ಯ ವೃದ್ಧಾಪ್ಯವು ಈ ಕ್ಷಣದಲ್ಲಿಯೇ ನಿನ್ನನ್ನು ಕಾಡುತ್ತದೆ.”
01078031 ಯಯಾತಿರುವಾಚ।
01078031a ಋತುಂ ವೈ ಯಾಚಮಾನಾಯಾ ಭಗವನ್ನಾನ್ಯಚೇತಸಾ।
01078031c ದುಹಿತುರ್ದಾನವೇಂದ್ರಸ್ಯ ಧರ್ಮ್ಯಮೇತತ್ಕೃತಂ ಮಯಾ।।
ಯಯಾತಿಯು ಹೇಳಿದನು: “ಭಗವನ್! ದಾನವೇಂದ್ರನ ಈ ಅಚೇತಸ ಮಗಳು ತನ್ನ ಋತುವಿಗೋಸ್ಕರ ನನ್ನನ್ನು ಯಾಚಿಸಿದಾಗ ಅದು ಧರ್ಮವೆಂದೇ ತಿಳಿದು ನಾನು ಈ ರೀತಿ ಮಾಡಿದೆ.
01078032a ಋತುಂ ವೈ ಯಾಚಮಾನಾಯಾ ನ ದದಾತಿ ಪುಮಾನ್ವೃತಃ।
01078032c ಭ್ರೂಣಹೇತ್ಯುಚ್ಯತೇ ಬ್ರಹ್ಮನ್ಸ ಇಹ ಬ್ರಹ್ಮವಾದಿಭಿಃ।।
ಬ್ರಹ್ಮನ್! ಋತುಕಾಲದಲ್ಲಿದ್ದವಳು ವರಿಸಿ ಯಾಚಿಸಿದಾಗ ತನ್ನನ್ನು ತಾನು ಅವಳಿಗೆ ಸಮರ್ಪಿಸದಿದ್ದರೆ ಅಂಥವನನ್ನು ಭ್ರೂಣಹತ್ಯೆ ಮಾಡಿದವನು ಎಂದು ಬ್ರಹ್ಮವಾದಿಗಳು ಹೇಳುತ್ತಾರೆ.
01078033a ಅಭಿಕಾಮಾಂ ಸ್ತ್ರಿಯಂ ಯಸ್ತು ಗಮ್ಯಾಂ ರಹಸಿ ಯಾಚಿತಃ।
01078033c ನೋಪೈತಿ ಸ ಚ ಧರ್ಮೇಷು ಭ್ರೂಣಹೇತ್ಯುಚ್ಯತೇ ಬುಧೈಃ।।
ಅಭಿಕಾಮಿ ಸ್ತ್ರೀಯು ರಹಸ್ಯದಲ್ಲಿ ಅವನನ್ನು ಕರೆದಾಗ ಧರ್ಮದ ಪ್ರಕಾರ ಅವಳೊಡನೆ ಮಲಗದೇ ಇದ್ದವನನ್ನು ಭ್ರೂಣಹತ್ಯೆ ಮಾಡಿದವನು ಎಂದು ತಿಳಿದವರು ಕರೆಯುತ್ತಾರೆ.
01078034a ಇತ್ಯೇತಾನಿ ಸಮೀಕ್ಷ್ಯಾಹಂ ಕಾರಣಾನಿ ಭೃಗೂದ್ವಹ।
01078034c ಅಧರ್ಮಭಯಸಂವಿಗ್ನಃ ಶರ್ಮಿಷ್ಠಾಮುಪಜಗ್ಮಿವಾನ್।।
ಈ ಎಲ್ಲ ಕಾರಣಗಳನ್ನೂ ಸಮೀಕ್ಷಿಸಿ, ಅಧರ್ಮದ ಭಯಸಂವಿಗ್ನನಾಗಿ ಶರ್ಮಿಷ್ಠೆಯೊಡನೆ ಕೂಡಿದೆನು.”
01078035 ಶುಕ್ರ ಉವಾಚ।
01078035a ನನ್ವಹಂ ಪ್ರತ್ಯವೇಕ್ಷ್ಯಸ್ತೇ ಮದಧೀನೋಽಸಿ ಪಾರ್ಥಿವ।
01078035c ಮಿಥ್ಯಾಚಾರಸ್ಯ ಧರ್ಮೇಷು ಚೌರ್ಯಂ ಭವತಿ ನಾಹುಷ।।
ಶುಕ್ರನು ಹೇಳಿದನು: “ಪಾರ್ಥಿವ! ನೀನು ನನ್ನ ಸಲಹೆಯನ್ನು ಕೇಳಬಹುದಾಗಿತ್ತು. ನಾಹುಷ! ಧರ್ಮದ ಹೆಸರಿನಲ್ಲಿ ಮಿಥ್ಯಾಚಾರವನ್ನೆಸಗಿದ ನೀನು ಕಳ್ಳತನವನ್ನು ಮಾಡಿದ್ದೀಯೆ.””
01078036 ವೈಶಂಪಾಯನ ಉವಾಚ।
01078036a ಕ್ರುದ್ಧೇನೋಶನಸಾ ಶಪ್ತೋ ಯಯಾತಿರ್ನಾಹುಷಸ್ತದಾ।
01078036c ಪೂರ್ವಂ ವಯಃ ಪರಿತ್ಯಜ್ಯ ಜರಾಂ ಸದ್ಯೋಽನ್ವಪದ್ಯತ।।
ವೈಶಂಪಾಯನನು ಹೇಳಿದನು: “ಈ ರೀತಿ ನಾಹುಷ ಯಯಾತಿಯು ಕೃದ್ಧ ಉಶನನಿಂದ ಶಪಿಸಲ್ಪಟ್ಟು ಕ್ಷಣಮಾತ್ರದಲ್ಲಿ ತನ್ನ ಹಿಂದಿನ ಯೌವನವನ್ನು ಕಳೆದುಕೊಂಡು ವೃದ್ಧಾಪ್ಯವನ್ನು ಹೊಂದಿದನು.
01078037 ಯಯಾತಿರುವಾಚ।
01078037a ಅತೃಪ್ತೋ ಯೌವನಸ್ಯಾಹಂ ದೇವಯಾನ್ಯಾಂ ಭೃಗೂದ್ವಹ।
01078037c ಪ್ರಸಾದಂ ಕುರು ಮೇ ಬ್ರಹ್ಮಂಜರೇಯಂ ಮಾ ವಿಶೇತ ಮಾಂ।।
ಯಯಾತಿಯು ಹೇಳಿದನು: “ಭೃಗೂದ್ವಹ! ಇನ್ನೂ ಕೂಡ ನಾನು ದೇವಯಾನಿಯೊಂದಿಗೆ ಯೌವನ ಸುಖದಲ್ಲಿ ಅತೃಪ್ತನಾಗಿದ್ದೇನೆ. ಬ್ರಾಹ್ಮಣ! ಈ ವೃದ್ಧಾಪ್ಯವು ನನ್ನನ್ನು ಆವರಿಸದಹಾಗೆ ಕರುಣಿಸು.”
01078038 ಶುಕ್ರ ಉವಾಚ।
01078038a ನಾಹಂ ಮೃಷಾ ಬ್ರವೀಂಯೇತಜ್ಜರಾಂ ಪ್ರಾಪ್ತೋಽಸಿ ಭೂಮಿಪ।
01078038c ಜರಾಂ ತ್ವೇತಾಂ ತ್ವಮನ್ಯಸ್ಮೈ ಸಂಕ್ರಾಮಯ ಯದೀಚ್ಛಸಿ।।
ಶುಕ್ರನು ಹೇಳಿದನು: “ಭೂಮಿಪ! ನಾನು ಈ ಮಾತುಗಳನ್ನು ಸುಮ್ಮನೇ ಹೇಳಿಲ್ಲ. ವೃದ್ಧಾಪ್ಯವು ನಿನ್ನನ್ನು ಹಿಡಿದಿದೆ. ಆದರೆ ನೀನು ಇಚ್ಛಿಸಿದರೆ ನಿನ್ನ ಈ ವೃದ್ಧಾಪ್ಯವನ್ನು ಇನ್ನೊಬ್ಬನಿಗೆ ಕೊಡಬಹುದು.”
01078039 ಯಯಾತಿರುವಾಚ।
01078039a ರಾಜ್ಯಭಾಕ್ಸ ಭವೇದ್ಬ್ರಹ್ಮನ್ಪುಣ್ಯಭಾಕ್ಕೀರ್ತಿಭಾಕ್ತಥಾ।
01078039c ಯೋ ಮೇ ದದ್ಯಾದ್ವಯಃ ಪುತ್ರಸ್ತದ್ಭವಾನನುಮನ್ಯತಾಂ।।
ಯಯಾತಿಯು ಹೇಳಿದನು: “ಬ್ರಾಹ್ಮಣ! ತನ್ನ ಯೌವನವನ್ನು ನನಗೆ ಕೊಡುವ ಮಗನು ನನ್ನ ರಾಜ್ಯ, ಪುಣ್ಯ ಮತ್ತು ಕೀರ್ತಿಗಳಿಗೆ ಪಾತ್ರನಾಗಲಿ ಎಂದು ಅನುಮತಿಯನ್ನು ನೀಡು.”
01078040 ಶುಕ್ರ ಉವಾಚ।
01078040a ಸಂಕ್ರಾಮಯಿಷ್ಯಸಿ ಜರಾಂ ಯಥೇಷ್ಟಂ ನಹುಷಾತ್ಮಜ।
01078040c ಮಾಮನುಧ್ಯಾಯ ಭಾವೇನ ನ ಚ ಪಾಪಮವಾಪ್ಸ್ಯಸಿ।।
ಶುಕ್ರನು ಹೇಳಿದನು: “ನಹುಷಾತ್ಮಜ! ನೀನು ನನ್ನನ್ನು ಮನಸ್ಸಿನಲ್ಲಿ ನೆನೆಸಿಕೊಂಡು ನಿನಗಿಷ್ಟವಿದ್ದವನಿಗೆ ನಿನ್ನ ವೃದ್ಧಾಪ್ಯವನ್ನು ಕೊಡಬಲ್ಲೆ. ಈ ರೀತಿ ನೀನು ಯಾವ ಪಾಪವನ್ನೂ ಹೊಂದುವುದಿಲ್ಲ.
01078041a ವಯೋ ದಾಸ್ಯತಿ ತೇ ಪುತ್ರೋ ಯಃ ಸ ರಾಜಾ ಭವಿಷ್ಯತಿ।
01078041c ಆಯುಷ್ಮಾನ್ಕೀರ್ತಿಮಾಂಶ್ಚೈವ ಬಹ್ವಪತ್ಯಸ್ತಥೈವ ಚ।।
ತನ್ನ ಯೌವನವನ್ನು ನಿನಗಿತ್ತ ಮಗನು ರಾಜನಾಗುತ್ತಾನೆ, ಆಯುಷ್ಮಂತನಾಗುತ್ತಾನೆ. ಕೀರ್ತಿವಂತನಾಗುತ್ತಾನೆ ಮತ್ತು ಬಹಳ ಪುತ್ರರನ್ನು ಪಡೆಯುತ್ತಾನೆ.””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಯಯಾತ್ಯುಪಾಖ್ಯಾನೇ ಅಷ್ಟಸಪ್ತತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಯಯಾತಿ-ಉಪಾಖ್ಯಾನದಲ್ಲಿ ಎಪ್ಪತ್ತೆಂಟನೆಯ ಅಧ್ಯಾಯವು.