077 ಯಯಾತ್ಯುಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಸಂಭವ ಪರ್ವ

ಅಧ್ಯಾಯ 77

ಸಾರ

ಶರ್ಮಿಷ್ಠೆಯು ಯುಯಾತಿಯಿಂದ ಸಂತಾನವನ್ನು ಪಡೆಯಲು ನಿರ್ಧರಿಸಿ (1-10) ಅವನಿಂದ ಮಗನನ್ನು ಪಡೆದುದು (11-27).

01077001 ವೈಶಂಪಾಯನ ಉವಾಚ।
01077001a ಯಯಾತಿಃ ಸ್ವಪುರಂ ಪ್ರಾಪ್ಯ ಮಹೇಂದ್ರಪುರಸನ್ನಿಭಂ।
01077001c ಪ್ರವಿಶ್ಯಾಂತಃಪುರಂ ತತ್ರ ದೇವಯಾನೀಂ ನ್ಯವೇಶಯತ್।।

ವೈಶಂಪಾಯನನು ಹೇಳಿದನು: “ಯಯಾತಿಯು ಮಹೇಂದ್ರಪುರಸನ್ನಿಭ ತನ್ನ ಪುರವನ್ನು ಸೇರಿ ಅಂತಃಪುರವನ್ನು ಪ್ರವೇಶಿಸಿ ಅಲ್ಲಿ ದೇವಯಾನಿಯನ್ನಿರಿಸಿದನು.

01077002a ದೇವಯಾನ್ಯಾಶ್ಚಾನುಮತೇ ತಾಂ ಸುತಾಂ ವೃಷಪರ್ವಣಃ।
01077002c ಅಶೋಕವನಿಕಾಭ್ಯಾಶೇ ಗೃಹಂ ಕೃತ್ವಾ ನ್ಯವೇಶಯತ್।।

ದೇವಯಾನಿಯ ಹೇಳಿಕೆಯಂತೆ ವೃಷಪರ್ವನ ಮಗಳನ್ನು ಅಶೋಕವನದ ಬಳಿ ಒಂದು ಮನೆಯನ್ನು ನಿರ್ಮಿಸಿ ಅಲ್ಲಿ ಇರಿಸಿದನು.

01077003a ವೃತಾಂ ದಾಸೀಸಹಸ್ರೇಣ ಶರ್ಮಿಷ್ಠಾಮಾಸುರಾಯಣೀಂ।
01077003c ವಾಸೋಭಿರನ್ನಪಾನೈಶ್ಚ ಸಂವಿಭಜ್ಯ ಸುಸತ್ಕೃತಾಂ।।

ಸಹಸ್ರ ದಾಸಿಯರಿಂದ ಆವೃತಳಾದ ಅಸುರಾಯಿಣೀ ಶರ್ಮಿಷ್ಠೆಗೆ ಸುಸಜ್ಜಿತ ಅನ್ನ, ಪಾನೀಯ ಮತ್ತು ವಸ್ತ್ರಗಳ ವ್ಯವಸ್ಥೆಯನ್ನು ಮಾಡಿದನು.

01077004a ದೇವಯಾನ್ಯಾ ತು ಸಹಿತಃ ಸ ನೃಪೋ ನಹುಷಾತ್ಮಜಃ।
01077004c ವಿಜಹಾರ ಬಹೂನಬ್ದಾನ್ದೇವವನ್ಮುದಿತೋ ಭೃಶಂ।।

ಆ ನೃಪ ನಹುಷಾತ್ಮಜನು ದೇವಯಾನಿಯ ಸಹಿತ ದೇವತೆಯಂತೆ ಬಹಳ ವರ್ಷಗಳ ಕಾಲ ವಿಹರಿಸುತ್ತಾ ಅತ್ಯಂತ ಸಂತೋಷವನ್ನು ಹೊಂದಿದನು.

01077005a ಋತುಕಾಲೇ ತು ಸಂಪ್ರಾಪ್ತೇ ದೇವಯಾನೀ ವರಾಂಗನಾ।
01077005c ಲೇಭೇ ಗರ್ಭಂ ಪ್ರಥಮತಃ ಕುಮಾರಂ ಚ ವ್ಯಜಾಯತ।।

ಋತುಕಾಲ ಸಂಪ್ರಾಪ್ತವಾದಾಗ ವರಾಂಗನೆ ದೇವಯಾನಿಯು ಗರ್ಭವನ್ನು ಧರಿಸಿ ಮೊದಲನೆಯ ಕುಮಾರನಿಗೆ ಜನ್ಮವಿತ್ತಳು.

01077006a ಗತೇ ವರ್ಷಸಹಸ್ರೇ ತು ಶರ್ಮಿಷ್ಠಾ ವಾರ್ಷಪರ್ವಣೀ।
01077006c ದದರ್ಶ ಯೌವನಂ ಪ್ರಾಪ್ತಾ ಋತುಂ ಸಾ ಚಾನ್ವಚಿಂತಯತ್।।

ಈ ರೀತಿ ಒಂದು ಸಾವಿರ ವರ್ಷಗಳು ಕಳೆಯುತ್ತಿದ್ದಂತೆ ವಾರ್ಷಪರ್ವಣೀ ಶರ್ಮಿಷ್ಠೆಯು ಯೌವನವನ್ನು ಹೊಂದಿ ತನ್ನ ಋತುವು ಪ್ರಯೋಜನಕ್ಕೆ ಬಾರದೆ ಇರುವುದನ್ನು ಕಂಡು ಯೋಚಿಸತೊಡಗಿದಳು.

01077007a ಋತುಕಾಲಶ್ಚ ಸಂಪ್ರಾಪ್ತೋ ನ ಚ ಮೇಽಸ್ತಿ ಪತಿರ್ವೃತಃ।
01077007c ಕಿಂ ಪ್ರಾಪ್ತಂ ಕಿಂ ನು ಕರ್ತವ್ಯಂ ಕಿಂ ವಾ ಕೃತ್ವಾ ಕೃತಂ ಭವೇತ್।।

“ಋತುಕಾಲವನ್ನು ಪಡೆದಿದ್ದೇನೆ. ಆದರೆ ಇದೂವರೆಗೂ ನಾನು ಯಾರನ್ನೂ ಪತಿಯನ್ನಾಗಿ ವರಿಸಿಲ್ಲ. ಇದೇನಾಯಿತು? ಏನು ಮಾಡಲಿ? ಆಗಬೇಕಾದುದನ್ನು ಹೇಗೆ ಮಾಡಲಿ?

01077008a ದೇವಯಾನೀ ಪ್ರಜಾತಾಸೌ ವೃಥಾಹಂ ಪ್ರಾಪ್ತಯೌವನಾ।
01077008c ಯಥಾ ತಯಾ ವೃತೋ ಭರ್ತಾ ತಥೈವಾಹಂ ವೃಣೋಮಿ ತಂ।।

ದೇವಯಾನಿಯು ಮಕ್ಕಳಿಗೆ ಜನ್ಮವಿತ್ತಿದ್ದಾಳೆ. ನನ್ನ ಯೌವನವು ವ್ಯರ್ಥವಾಗುತ್ತಿದೆ. ಅವಳು ಯಾರನ್ನು ತನ್ನ ಪತಿಯನ್ನಾಗಿ ವರಿಸಿದ್ದಾಳೆಯೋ ಅವನನ್ನೇ ನನ್ನ ಪತಿಯನ್ನಾಗಿ ವರಿಸುತ್ತೇನೆ.

01077009a ರಾಜ್ಞಾ ಪುತ್ರಫಲಂ ದೇಯಮಿತಿ ಮೇ ನಿಶ್ಚಿತಾ ಮತಿಃ।
01077009c ಅಪೀದಾನೀಂ ಸ ಧರ್ಮಾತ್ಮಾ ಇಯಾನ್ಮೇ ದರ್ಶನಂ ರಹಃ।।

ರಾಜನು ನನಗೆ ಪುತ್ರಫಲ ನೀಡಬೇಕೆಂದು ನನ್ನ ಬುದ್ಧಿ ನಿಶ್ಚಯಿಸಿದೆ. ಆದರೆ ಆ ಧರ್ಮಾತ್ಮನು ಇಲ್ಲಿ ನನಗೆ ಏಕಾಂತದಲ್ಲಿ ಕಾಣಲು ದೊರಕುತ್ತಾನೆಯೇ?”

01077010a ಅಥ ನಿಷ್ಕ್ರಮ್ಯ ರಾಜಾಸೌ ತಸ್ಮಿನ್ಕಾಲೇ ಯದೃಚ್ಛಯಾ।
01077010c ಅಶೋಕವನಿಕಾಭ್ಯಾಶೇ ಶರ್ಮಿಷ್ಠಾಂ ಪ್ರಾಪ್ಯ ವಿಷ್ಠಿತಃ।।

ಅದೇ ವೇಳೆಯಲ್ಲಿ ರಾಜನು ಹಾಗೆಯೇ ಹೊರಬಂದು ಅಶೋಕವನದ ಬಳಿ ಶರ್ಮಿಷ್ಠೆಯನ್ನು ಕಂಡು ಅವಳ ಎದುರೇ ನಿಂತನು.

01077011a ತಮೇಕಂ ರಹಿತೇ ದೃಷ್ಟ್ವಾ ಶರ್ಮಿಷ್ಠಾ ಚಾರುಹಾಸಿನೀ।
01077011c ಪ್ರತ್ಯುದ್ಗಮ್ಯಾಂಜಲಿಂ ಕೃತ್ವಾ ರಾಜಾನಂ ವಾಕ್ಯಮಬ್ರವೀತ್।।

ಅವನೊಬ್ಬನೇ ಇರುವುದನ್ನು ನೋಡಿದ ಚಾರುಹಾಸಿನಿ ಶರ್ಮಿಷ್ಠೆಯು ಕೈಜೋಡಿಸಿ ವಂದಿಸಿ ರಾಜನಲ್ಲಿ ಕೇಳಿಕೊಂಡಳು:

01077012a ಸೋಮಸ್ಯೇಂದ್ರಸ್ಯ ವಿಷ್ಣೋರ್ವಾ ಯಮಸ್ಯ ವರುಣಸ್ಯ ವಾ।
01077012c ತವ ವಾ ನಾಹುಷ ಕುಲೇ ಕಃ ಸ್ತ್ರಿಯಂ ಸ್ಪ್ರಷ್ಟುಮರ್ಹತಿ।।

“ನಾಹುಷ! ಸೋಮ, ಇಂದ್ರ, ವಿಷ್ಣು, ಯಮ, ವರುಣ ಮತ್ತು ನಿನ್ನ ಮನೆಯಲ್ಲಿರುವ ಸ್ತ್ರೀಯರನ್ನು ಯಾರುತಾನೆ ಮುಟ್ಟಲು ಪ್ರಯತ್ನಿಸುತ್ತಾರೆ?

01077013a ರೂಪಾಭಿಜನಶೀಲೈರ್ಹಿ ತ್ವಂ ರಾಜನ್ವೇತ್ಥ ಮಾಂ ಸದಾ।
01077013c ಸಾ ತ್ವಾಂ ಯಾಚೇ ಪ್ರಸಾದ್ಯಾಹಮೃತುಂ ದೇಹಿ ನರಾಧಿಪ।।

ರಾಜನ್! ನೀನು ನನ್ನ ರೂಪ, ಜನ್ಮ ಮತ್ತು ನಡತೆಯ ಕುರಿತು ಸದಾ ತಿಳಿದಿದ್ದೀಯೆ. ಆದುದರಿಂದ ನರಾಧಿಪ! ನನ್ನ ಈ ಋತುವು ನಿಷ್ಫಲವಾಗದಂತೆ ಅನುಗ್ರಹಿಸು ಎಂದು ನಿನ್ನಲ್ಲಿ ಕೇಳಿಕೊಳ್ಳುತ್ತೇನೆ.”

01077014 ಯಯಾತಿರುವಾಚ।
01077014a ವೇದ್ಮಿ ತ್ವಾಂ ಶೀಲಸಂಪನ್ನಾಂ ದೈತ್ಯಕನ್ಯಾಮನಿಂದಿತಾಂ।
01077014c ರೂಪೇ ಚ ತೇ ನ ಪಶ್ಯಾಮಿ ಸೂಚ್ಯಗ್ರಮಪಿ ನಿಂದಿತಂ।।

ಯಯಾತಿಯು ಹೇಳಿದನು: “ನೀನು ಶೀಲಸಂಪನ್ನಳೂ, ಅನಿಂದಿತೆಯೂ ಆದ ದೈತ್ಯಕನ್ಯೆಯೆಂದು ನನಗೆ ತಿಳಿದಿದೆ. ನಿನ್ನ ರೂಪದಲ್ಲಿ ಒಂದು ಸೂಜಿಯ ಮೊನೆಯಷ್ಟು ದೋಷವನ್ನೂ ನಾನು ಕಾಣುತ್ತಿಲ್ಲ.

01077015a ಅಬ್ರವೀದುಶನಾ ಕಾವ್ಯೋ ದೇವಯಾನೀಂ ಯದಾವಹಂ।
01077015c ನೇಯಮಾಹ್ವಯಿತವ್ಯಾ ತೇ ಶಯನೇ ವಾರ್ಷಪರ್ವಣೀ।।

ಆದರೆ ದೇವಯಾನಿಯನ್ನು ವಿವಾಹವಾದ ಸಮಯದಲ್ಲಿ ಉಶನ ಕಾವ್ಯನು ವಾರ್ಷಪರ್ವಣಿಯನ್ನು ನಿನ್ನ ಹಾಸಿಗೆಯ ಮೇಲೆ ಕರೆದುಕೊಳ್ಳಬೇಡ ಎಂಬ ನಿಯಮವನ್ನು ಹಾಕಿದ್ದನು.”

01077016 ಶರ್ಮಿಷ್ಠೋವಾಚ।
01077016a ನ ನರ್ಮಯುಕ್ತಂ ವಚನಂ ಹಿನಸ್ತಿ ನ ಸ್ತ್ರೀಷು ರಾಜನ್ನ ವಿವಾಹಕಾಲೇ।
01077016c ಪ್ರಾಣಾತ್ಯಯೇ ಸರ್ವಧನಾಪಹಾರೇ ಪಂಚಾನೃತಾನ್ಯಾಹುರಪಾತಕಾನಿ।।

ಶರ್ಮಿಷ್ಠೆಯು ಹೇಳಿದಳು: “ರಾಜನ್! ಐದು ಪರಿಸ್ಥಿತಿಗಳಲ್ಲಿ - ಹಾಸ್ಯ, ಸ್ತ್ರೀ, ವಿವಾಹಕಾಲ, ಪ್ರಾಣಾಪತ್ತು ಮತ್ತು ಸರ್ವ ಧನವನ್ನೂ ಕಳೆದುಕೊಂಡ ಸಮಯ - ಹೇಳಿದ ಸುಳ್ಳು ಪಾಪವಲ್ಲ.

01077017a ಪೃಷ್ಟಂ ತು ಸಾಕ್ಷ್ಯೇ ಪ್ರವದಂತಮನ್ಯಥಾ ವದಂತಿ ಮಿಥ್ಯೋಪಹಿತಂ ನರೇಂದ್ರ।
01077017c ಏಕಾರ್ಥತಾಯಾಂ ತು ಸಮಾಹಿತಾಯಾಂ ಮಿಥ್ಯಾ ವದಂತಮನೃತಂ ಹಿನಸ್ತಿ।।

ನರೇಂದ್ರ! ಸಾಕ್ಷಿಯನ್ನು ಕೇಳಿದಾಗ ಸುಳ್ಳುಹೇಳುವವನನ್ನು ನಿಜವಾದ ಸುಳ್ಳುಗಾರನೆಂದು ಹೇಳುತ್ತಾರೆ. ಒಂದೇ ಉದ್ದೇಶವನ್ನು ನೆರವೇರಿಸಲೋಸುಗ ಹೇಳುವ ಸುಳ್ಳು ನಿಜವಾದ ಸುಳ್ಳು.”

01077018 ಯಯಾತಿರುವಾಚ।
01077018a ರಾಜಾ ಪ್ರಮಾಣಂ ಭೂತಾನಾಂ ಸ ನಶ್ಯೇತ ಮೃಷಾ ವದನ್।
01077018c ಅರ್ಥಕೃಚ್ಛ್ರಮಪಿ ಪ್ರಾಪ್ಯ ನ ಮಿಥ್ಯಾ ಕರ್ತುಮುತ್ಸಹೇ।।

ಯಯಾತಿಯು ಹೇಳಿದನು: “ರಾಜನು ಪ್ರಜೆಗಳಿಗೆ ಪ್ರಮಾಣವಿದ್ದಂತೆ. ಅವನೇ ಸುಳ್ಳು ಹೇಳಿದರೆ ಎಲ್ಲವನ್ನೂ ಕಳೆದುಕೊಂಡಹಾಗೆ. ಬಹಳಷ್ಟು ಅನಿಷ್ಟವಾಗುತ್ತದೆ ಎಂದು ನಾನು ಸುಳ್ಳನ್ನು ಹೇಳ ಬಯಸುವುದಿಲ್ಲ.”

01077019 ಶರ್ಮಿಷ್ಠೋವಾಚ।
01077019a ಸಮಾವೇತೌ ಮತೌ ರಾಜನ್ಪತಿಃ ಸಖ್ಯಾಶ್ಚ ಯಃ ಪತಿಃ।
01077019c ಸಮಂ ವಿವಾಹಮಿತ್ಯಾಹುಃ ಸಖ್ಯಾ ಮೇಽಸಿ ಪತಿರ್ವೃತಃ।।

ಶರ್ಮಿಷ್ಠೆಯು ಹೇಳಿದಳು: “ಸಖಿಯ ಪತಿ ಮತ್ತು ತನ್ನ ಪತಿ ಇವರೀರ್ವರಿಗೂ ಗಾಢ ಸಂಬಂಧವಿದೆ ಎಂದು ಹೇಳುತ್ತಾರೆ. ಸಖಿಯ ವಿವಾಹವೂ ತನ್ನ ವಿವಾಹವಿದ್ದಂತೆ ಎಂದೂ ಹೇಳುತ್ತಾರೆ. ನನ್ನ ಸಖಿಯ ಪತಿ ನಿನ್ನನ್ನು ನನ್ನ ಪತಿಯನ್ನಾಗಿ ವರಿಸಿದ್ದೇನೆ.”

01077020 ಯಯಾತಿರುವಾಚ।
01077020a ದಾತವ್ಯಂ ಯಾಚಮಾನೇಭ್ಯ ಇತಿ ಮೇ ವ್ರತಮಾಹಿತಂ।
01077020c ತ್ವಂ ಚ ಯಾಚಸಿ ಮಾಂ ಕಾಮಂ ಬ್ರೂಹಿ ಕಿಂ ಕರವಾಣಿ ತೇ।।

ಯಯಾತಿಯು ಹೇಳಿದನು: “ಯಾಚಿಸಿದ್ದುದನ್ನು ಕೊಟ್ಟುಬಿಡಬೇಕು ಎನ್ನುವುದು ನಾನು ಪಾಲಿಸಿಕೊಂಡು ಬಂದ ವ್ರತ. ನನ್ನ ಪ್ರೀತಿಯನ್ನು ನೀನು ಯಾಚಿಸುತ್ತಿದ್ದೀಯೆ. ನಾನೇನು ಮಾಡಲಿ ಹೇಳು.”

01077021 ಶರ್ಮಿಷ್ಠೋವಾಚ।
01077021a ಅಧರ್ಮಾತ್ತ್ರಾಹಿ ಮಾಂ ರಾಜನ್ಧರ್ಮಂ ಚ ಪ್ರತಿಪಾದಯ।
01077021c ತ್ವತ್ತೋಽಪತ್ಯವತೀ ಲೋಕೇ ಚರೇಯಂ ಧರ್ಮಮುತ್ತಮಂ।।

ಶರ್ಮಿಷ್ಠೆಯು ಹೇಳಿದಳು: “ರಾಜನ್! ಅಧರ್ಮದಿಂದ ನನ್ನನ್ನು ಉದ್ಧರಿಸು ಮತ್ತು ಧರ್ಮದಲ್ಲಿ ನಡೆಯುವಹಾಗೆ ಮಾಡು. ನಿನ್ನಿಂದ ಒಂದು ಮಗುವಿನ ತಾಯಿಯಾದರೆ ನಾನು ಈ ಲೋಕದಲ್ಲಿ ಉತ್ತಮ ಧರ್ಮವನ್ನು ಪರಿಪಾಲಿಸಿದಂತಾಗುತ್ತದೆ.

01077022a ತ್ರಯ ಏವಾಧನಾ ರಾಜನ್ಭಾರ್ಯಾ ದಾಸಸ್ತಥಾ ಸುತಃ।
01077022c ಯತ್ತೇ ಸಮಧಿಗಚ್ಛಂತಿ ಯಸ್ಯ ತೇ ತಸ್ಯ ತದ್ಧನಂ।।

ರಾಜನ್! ಭಾರ್ಯೆ, ದಾಸಿ ಮತ್ತು ಸುತ ಈ ಮೂವರೂ ಅಧನರೆಂದು ಹೇಳಬಹುದು. ಅವರು ಗಳಿಸಿದ ಸಂಪತ್ತೆಲ್ಲವೂ ಅವರ ಒಡೆಯನಿಗೇ ಸೇರುತ್ತವೆ.

01077023a ದೇವಯಾನ್ಯಾ ಭುಜಿಷ್ಯಾಸ್ಮಿ ವಶ್ಯಾ ಚ ತವ ಭಾರ್ಗವೀ।
01077023c ಸಾ ಚಾಹಂ ಚ ತ್ವಯಾ ರಾಜನ್ಭರಣೀಯೇ ಭಜಸ್ವ ಮಾಂ।।

ನಾನು ದೇವಯಾನಿಯ ದಾಸಿಯಾದರೆ ಭಾರ್ಗವಿಯು ನಿನ್ನ ವಶದಲ್ಲಿದ್ದಾಳೆ. ಅವಳು ಮತ್ತು ನಾನು ಇಬ್ಬರೂ ನಿನ್ನನ್ನೇ ಅವಲಂಬಿಸಿದ್ದೇವೆ. ರಾಜನ್! ನನ್ನನ್ನು ತೃಪ್ತಿಗೊಳಿಸು.””

01077024 ವೈಶಂಪಾಯನ ಉವಾಚ।
01077024a ಏವಮುಕ್ತಸ್ತು ರಾಜಾ ಸ ತಥ್ಯಮಿತ್ಯೇವ ಜಜ್ಞಿವಾನ್।
01077024c ಪೂಜಯಾಮಾಸ ಶರ್ಮಿಷ್ಠಾಂ ಧರ್ಮಂ ಚ ಪ್ರತ್ಯಪಾದಯತ್।।

ವೈಶಂಪಾಯನನು ಹೇಳಿದನು: “ಅವಳು ಹೀಗೆ ಹೇಳಿದಾಗ ರಾಜನು ಅವಳಲ್ಲಿರುವ ಸತ್ಯವನ್ನು ತಿಳಿದನು. ಶರ್ಮಿಷ್ಠೆಯನ್ನು ಗೌರವದಿಂದ ಸ್ವೀಕರಿಸಿ, ಅವಳಿಗೆ ಧರ್ಮ ಮಾರ್ಗವನ್ನು ತೋರಿಸಿದನು.

01077025a ಸಮಾಗಮ್ಯ ಚ ಶರ್ಮಿಷ್ಠಾಂ ಯಥಾಕಾಮಮವಾಪ್ಯ ಚ।
01077025c ಅನ್ಯೋನ್ಯಮಭಿಸಂಪೂಜ್ಯ ಜಗ್ಮತುಸ್ತೌ ಯಥಾಗತಂ।।

ಶರ್ಮಿಷ್ಠೆಯನ್ನು ಒಂದುಗೂಡಿ ಸುಖವನ್ನು ಪಡೆದನು. ನಂತರ ಪರಸ್ಪರರನ್ನು ಬೀಳ್ಕೊಂಡು ತಮ್ಮ ತಮ್ಮ ದಾರಿಯನ್ನು ಕೂಡಿದರು.

01077026a ತಸ್ಮಿನ್ಸಮಾಗಮೇ ಸುಭ್ರೂಃ ಶರ್ಮಿಷ್ಠಾ ಚಾರುಹಾಸಿನೀ।
01077026c ಲೇಭೇ ಗರ್ಭಂ ಪ್ರಥಮತಸ್ತಸ್ಮಾನ್ನೃಪತಿಸತ್ತಮಾತ್।।

ಆ ಸಮಾಗಮದಿಂದ ಸುಭ್ರು, ಚಾರುಹಾಸಿನಿ ಶರ್ಮಿಷ್ಠೆಯು ನೃಪತಿ ಸತ್ತಮನಿಂದ ಪ್ರಥಮ ಗರ್ಭವನ್ನು ಧರಿಸಿದಳು.

01077027a ಪ್ರಜಜ್ಞೇ ಚ ತತಃ ಕಾಲೇ ರಾಜನ್ರಾಜೀವಲೋಚನಾ।
01077027c ಕುಮಾರಂ ದೇವಗರ್ಭಾಭಂ ರಾಜೀವನಿಭಲೋಚನಂ।।

ಕಾಲಪ್ರಾಪ್ತವಾದಾಗ ಆ ರಾಜೀವಲೋಚನೆಯು ದೇವಗರ್ಭ ಕಾಂತಿಯನ್ನು ಹೊಂದಿದ ರಾಜೀವಲೋಚನ ಕುಮಾರನಿಗೆ ಜನ್ಮವಿತ್ತಳು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಯಯಾತ್ಯುಪಾಖ್ಯಾನೇ ಸಪ್ತಸಪ್ತತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಯಯಾತಿ-ಉಪಾಖ್ಯಾನದಲ್ಲಿ ಎಪ್ಪತ್ತೇಳನೆಯ ಅಧ್ಯಾಯವು.