076 ಯಯಾತ್ಯುಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಸಂಭವ ಪರ್ವ

ಅಧ್ಯಾಯ 76

ಸಾರ

ದೇವಯಾನಿಯು ಯಯಾತಿಯಲ್ಲಿ ಮದುವೆಯಾಗಲು ಕೇಳಿಕೊಳ್ಳುವುದು (1-15). ಯಯಾತಿಯು ತಾನು ಬ್ರಾಹ್ಮಣನಲ್ಲವೆಂದು ಮದುವೆಗೆ ಒಪ್ಪದಿರುವುದು (16-25). ದೇವಯಾನಿಯು ಹಠ ಹಿಡಿದು ತಂದೆಯು ತನ್ನನ್ನು ಯಯಾತಿಗೆ ಮದುವೆಯಲ್ಲಿ ಕೊಡುವಂತೆ ಮಾಡುವುದು, ಶರ್ಮಿಷ್ಠೆಯು ದೇವಯಾನಿಯುನ್ನು ಹಿಂಬಾಲಿಸಿ ಹೋಗುವುದು (26-35).

01076001 ವೈಶಂಪಾಯನ ಉವಾಚ।
01076001a ಅಥ ದೀರ್ಘಸ್ಯ ಕಾಲಸ್ಯ ದೇವಯಾನೀ ನೃಪೋತ್ತಮ।
01076001c ವನಂ ತದೇವ ನಿರ್ಯಾತಾ ಕ್ರೀಡಾರ್ಥಂ ವರವರ್ಣಿನೀ।।

ವೈಶಂಪಾಯನನು ಹೇಳಿದನು: “ನೃಪೋತ್ತಮ! ದೀರ್ಘಕಾಲದ ನಂತರ ವರವರ್ಣಿನಿ ದೇವಯಾನಿಯು ಕ್ರೀಡಾರ್ಥವಾಗಿ ವನವನ್ನು ಸೇರಿದಳು.

01076002a ತೇನ ದಾಸೀಸಹಸ್ರೇಣ ಸಾರ್ಧಂ ಶರ್ಮಿಷ್ಠಯಾ ತದಾ।
01076002c ತಮೇವ ದೇಶಂ ಸಂಪ್ರಾಪ್ತಾ ಯಥಾಕಾಮಂ ಚಚಾರ ಸಾ।
01076002e ತಾಭಿಃ ಸಖೀಭಿಃ ಸಹಿತಾ ಸರ್ವಾಭಿರ್ಮುದಿತಾ ಭೃಶಂ।।

ಶರ್ಮಿಷ್ಠೆಯನ್ನೂ ಒಳಗೊಂಡ ತನ್ನ ಸಾವಿರ ದಾಸಿಯರೊಂದಿಗೆ ಅದೇ ಸ್ಥಳವನ್ನು ಸೇರಿ ಅಲ್ಲಿ ತನಗಿಷ್ಟವಾದ ರೀತಿಯಲ್ಲಿ ತಿರುಗಾಡಿದಳು. ಸರ್ವ ಸಖಿಯರಿಂದ ಸೇವಿಸಲ್ಪಟ್ಟ ಅವಳು ಅತೀವ ಸಂತೋಷದಿಂದಿದ್ದಳು.

01076003a ಕ್ರೀಡಂತ್ಯೋಽಭಿರತಾಃ ಸರ್ವಾಃ ಪಿಬಂತ್ಯೋ ಮಧುಮಾಧವೀಂ।
01076003c ಖಾದಂತ್ಯೋ ವಿವಿಧಾನ್ ಭಕ್ಷ್ಯಾನ್ವಿದಶಂತ್ಯಃ ಫಲಾನಿ ಚ।।

ಹೂವಿನ ಮಕರಂದವನ್ನು ಸವಿಯುತ್ತಾ, ಹಣ್ಣುಗಳನ್ನು ಕಚ್ಚಿ ತಿನ್ನುತ್ತಾ, ವಿವಿಧ ಭಕ್ಷ್ಯಗಳನ್ನು ಸೇವಿಸುತ್ತಾ ಅವರೆಲ್ಲರೂ ಆಡುತ್ತಿದ್ದರು.

01076004a ಪುನಶ್ಚ ನಾಹುಷೋ ರಾಜಾ ಮೃಗಲಿಪ್ಸುರ್ಯದೃಚ್ಛಯಾ।
01076004c ತಮೇವ ದೇಶಂ ಸಂಪ್ರಾಪ್ತೋ ಜಲಾರ್ಥೀ ಶ್ರಮಕರ್ಶಿತಃ।।

ಪುನಃ ಬೇಟೆಯಾಡಲು ಜಿಂಕೆಗಳನ್ನು ಅರಸುತ್ತಿದ್ದ ರಾಜ ನಾಹುಷನು ಆಯಾಸಗೊಂಡು ಬಾಯಾರಿ ನೀರನ್ನು ಹುಡುಕುತ್ತಾ ಅದೇ ಸ್ಥಳಕ್ಕೆ ಬಂದನು.

01076005a ದದೃಶೇ ದೇವಯಾನೀಂ ಚ ಶರ್ಮಿಷ್ಠಾಂ ತಾಶ್ಚ ಯೋಷಿತಃ।
01076005c ಪಿಬಂತೀರ್ಲಲಮಾನಾಶ್ಚ ದಿವ್ಯಾಭರಣಭೂಷಿತಾಃ।।

ಅಲ್ಲಿ ಅವನು ಕುಡಿದು ಆಡುತ್ತಿದ್ದ ದಿವ್ಯಾಭರಣಭೂಷಿತೆ ದೇವಯಾನಿ-ಶರ್ಮಿಷ್ಠೆಯರನ್ನೂ ಮತ್ತು ಇತರ ಸ್ತ್ರೀಯರನ್ನೂ ಕಂಡನು.

01076006a ಉಪವಿಷ್ಟಾಂ ಚ ದದೃಶೇ ದೇವಯಾನೀಂ ಶುಚಿಸ್ಮಿತಾಂ।
01076006c ರೂಪೇಣಾಪ್ರತಿಮಾಂ ತಾಸಾಂ ಸ್ತ್ರೀಣಾಂ ಮಧ್ಯೇ ವರಾಂಗನಾಂ।
01076006e ಶರ್ಮಿಷ್ಠಯಾ ಸೇವ್ಯಮಾನಾಂ ಪಾದಸಂವಾಹನಾದಿಭಿಃ।।

ಆ ಎಲ್ಲ ವರಾಂಗನೆ ಸ್ತ್ರೀಯರ ಮಧ್ಯದಲ್ಲಿ, ಶರ್ಮಿಷ್ಠೆಯಿಂದ ಕಾಲುಗಳನ್ನು ಒತ್ತಿಸಿ ಸೇವೆ ಮಾಡಿಸಿಕೊಳ್ಳುತ್ತಾ ಕುಳಿತಿದ್ದ ಅಪ್ರತಿಮ ರೂಪಿಣಿ ಶುಚಿಸ್ಮಿತೆ ದೇವಯಾನಿಯನ್ನು ಅವನು ಕಂಡನು.

01076007 ಯಯಾತಿರುವಾಚ।
01076007a ದ್ವಾಭ್ಯಾಂ ಕನ್ಯಾಸಹಸ್ರಾಭ್ಯಾಂ ದ್ವೇ ಕನ್ಯೇ ಪರಿವಾರಿತೇ।
01076007c ಗೋತ್ರೇ ಚ ನಾಮನೀ ಚೈವ ದ್ವಯೋಃ ಪೃಚ್ಛಾಮಿ ವಾಮಹಂ।।

ಯಯಾತಿಯು ಹೇಳಿದನು: “ಎರಡು ಸಾವಿರ ಕನ್ಯೆಯರಿಂದ ಸುತ್ತುವರೆಯಲ್ಪಟ್ಟಿರುವ ನೀವಿಬ್ಬರು ಕನ್ಯೆಯರ ಗೋತ್ರ ಮತ್ತು ಹೆಸರುಗಳೇನೆಂದು ಕೇಳಬಹುದೇ?”

01076008 ದೇವಯಾನ್ಯುವಾಚ 01076008a ಆಖ್ಯಾಸ್ಯಾಮ್ಯಹಮಾದತ್ಸ್ವ ವಚನಂ ಮೇ ನರಾಧಿಪ।
01076008c ಶುಕ್ರೋ ನಾಮಾಸುರಗುರುಃ ಸುತಾಂ ಜಾನೀಹಿ ತಸ್ಯ ಮಾಂ।।

ದೇವಯಾನಿಯು ಹೇಳಿದಳು: “ನರಾಧಿಪ! ನಾನು ಹೇಳುವ ಮಾತುಗಳನ್ನು ಕೇಳು. ನಾನು ಶುಕ್ರ ಎಂಬ ಹೆಸರಿನ ಅಸುರಗುರುವಿನ ಮಗಳು.

01076009a ಇಯಂ ಚ ಮೇ ಸಖೀ ದಾಸೀ ಯತ್ರಾಹಂ ತತ್ರ ಗಾಮಿನೀ।
01076009c ದುಹಿತಾ ದಾನವೇಂದ್ರಸ್ಯ ಶರ್ಮಿಷ್ಠಾ ವೃಷಪರ್ವಣಃ।।

ನಾನೆಲ್ಲಿದ್ದರೂ ಅಲ್ಲಿಗೆ ಬರುವ ಈ ಸಖಿಯು ನನ್ನ ದಾಸಿ; ದಾನವೇಂದ್ರ ವೃಷಪರ್ವನ ಮಗಳು ಶರ್ಮಿಷ್ಠಾ.”

01076010 ಯಯಾತಿರುವಾಚ।
01076010a ಕಥಂ ನು ತೇ ಸಖೀ ದಾಸೀ ಕನ್ಯೇಯಂ ವರವರ್ಣಿನೀ।
01076010c ಅಸುರೇಂದ್ರಸುತಾ ಸುಭ್ರು ಪರಂ ಕೌತೂಹಲಂ ಹಿ ಮೇ।।

ಯಯಾತಿಯು ಹೇಳಿದನು: “ಅಸುರೇಂದ್ರನ ಮಗಳು, ಸುಂದರ ಹುಬ್ಬಿನ ವರವರ್ಣಿನಿ ಈ ಕನ್ಯೆಯು ನಿನಗೆ ಸಖೀ ದಾಸಿ ಹೇಗಾದಳು ಎನ್ನುವುದೇ ನನಗೆ ಪರಮ ಕುತೂಹಲವೆನಿಸುತ್ತದೆ.”

01076011 ದೇವಯಾನ್ಯುವಾಚ।
01076011a ಸರ್ವ ಏವ ನರವ್ಯಾಘ್ರ ವಿಧಾನಮನುವರ್ತತೇ।
01076011c ವಿಧಾನವಿಹಿತಂ ಮತ್ವಾ ಮಾ ವಿಚಿತ್ರಾಃ ಕಥಾಃ ಕೃಥಾಃ।।

ದೇವಯಾನಿಯು ಹೇಳಿದಳು: “ನರವ್ಯಾಘ್ರ! ಸರ್ವವೂ ವಿಧಿಯನ್ನು ಅನುಸರಿಸಿಯೇ ನಡೆಯುತ್ತದೆ. ಇದೂ ಕೂಡ ವಿಧಿವಿಹಿತವೆಂದು ಸ್ವೀಕರಿಸಿ, ವಿಚಿತ್ರ ಪ್ರಶ್ನೆಗಳನ್ನು ಕೇಳುವುದನ್ನು ನಿಲ್ಲಿಸು.

01076012a ರಾಜವದ್ರೂಪವೇಷೌ ತೇ ಬ್ರಾಹ್ಮೀಂ ವಾಚಂ ಬಿಭರ್ಷಿ ಚ।
01076012c ಕಿಮ್ನಾಮಾ ತ್ವಂ ಕುತಶ್ಚಾಸಿ ಕಸ್ಯ ಪುತ್ರಶ್ಚ ಶಂಸ ಮೇ।।

ರೂಪವೇಷದಲ್ಲಿ ನೀನು ರಾಜನಂತಿದ್ದೀಯೆ; ನಿನ್ನ ಮಾತುಗಳು ವೇದವಾಖ್ಯಗಳಂತಿವೆ. ನಿನ್ನ ಹೆಸರೇನು, ನೀನು ಎಲ್ಲಿಯವನು ಮತ್ತು ಯಾರ ಮಗನೆಂದು ಹೇಳು.”

01076013 ಯಯಾತಿರುವಾಚ।
01076013a ಬ್ರಹ್ಮಚರ್ಯೇಣ ಕೃತ್ಸ್ನೋ ಮೇ ವೇದಃ ಶ್ರುತಿಪಥಂ ಗತಃ।
01076013c ರಾಜಾಹಂ ರಾಜಪುತ್ರಶ್ಚ ಯಯಾತಿರಿತಿ ವಿಶ್ರುತಃ।।

ಯಯಾತಿಯು ಹೇಳಿದನು: “ಬ್ರಹ್ಮಚರ್ಯದ ದಿನಗಳಲ್ಲಿ ವೇದವು ನನ್ನ ಕಿವಿಗಳನ್ನು ಹೊಕ್ಕವು. ರಾಜಪುತ್ರನಾದ ನಾನೊಬ್ಬ ರಾಜ. ಯಾಯಾತಿಯೆಂದು ಕರೆಯುತ್ತಾರೆ.”

01076014 ದೇವಯಾನ್ಯುವಾಚ।
01076014a ಕೇನಾಸ್ಯರ್ಥೇನ ನೃಪತೇ ಇಮಂ ದೇಶಮುಪಾಗತಃ।
01076014c ಜಿಘೃಕ್ಷುರ್ವಾರಿಜಂ ಕಿಂ ಚಿದಥ ವಾ ಮೃಗಲಿಪ್ಸಯಾ।।

ದೇವಯಾನಿಯು ಹೇಳಿದಳು: “ನೃಪ! ನೀನು ಯಾವ ಕಾರಣಕ್ಕಾಗಿ ಈ ಸ್ಥಳಕ್ಕೆ ಬಂದಿದ್ದೀಯೆ - ಕಮಲಗಳನ್ನು ಕೊಯ್ಯಲೋ ಅಥವಾ ಮೃಗಗಳ ಬೇಟೆಗೆಂದೋ?”

01076015 ಯಯಾತಿರುವಾಚ।
01076015a ಮೃಗಲಿಪ್ಸುರಹಂ ಭದ್ರೇ ಪಾನೀಯಾರ್ಥಮುಪಾಗತಃ।
01076015c ಬಹು ಚಾಪ್ಯನುಯುಕ್ತೋಽಸ್ಮಿ ತನ್ಮಾನುಜ್ಞಾತುಮರ್ಹಸಿ।।

ಯಯಾತಿಯು ಹೇಳಿದನು: “ಭದ್ರೇ! ಬೇಟೆಯಾಡಲು ಬಂದ ನಾನು ಕುಡಿಯುವ ನೀರಿಗಾಗಿ ಇಲ್ಲಿಗೆ ಬಂದಿದ್ದೇನೆ. ನೀನು ಬಹಳಷ್ಟು ಪ್ರಶ್ನೆಗಳನ್ನು ಕೇಳುತ್ತಿದ್ದೀಯೆ. ನನಗೆ ಹಿಂದಿರುಗಲು ಅಪ್ಪಣೆ ಕೊಡು.”

01076016 ದೇವಯಾನ್ಯುವಾಚ।
01076016a ದ್ವಾಭ್ಯಾಂ ಕನ್ಯಾಸಹಸ್ರಾಭ್ಯಾಂ ದಾಸ್ಯಾ ಶರ್ಮಿಷ್ಠಯಾ ಸಹ।
01076016c ತ್ವದಧೀನಾಸ್ಮಿ ಭದ್ರಂ ತೇ ಸಖಾ ಭರ್ತಾ ಚ ಮೇ ಭವ।।

ದೇವಯಾನಿಯು ಹೇಳಿದಳು: “ಈ ನನ್ನ ದಾಸಿ ಶರ್ಮಿಷ್ಠೆ ಮತ್ತು ಈ ಸಹಸ್ರ ಕನ್ಯೆಯರೊಡನೆ ನಾನೂ ಕೂಡ ನಿನ್ನ ಅಧೀನಳಾಗಿದ್ದೇನೆ. ನಿನಗೆ ಮಂಗಳವಾಗಲಿ. ನನ್ನ ಸಖ ಮತ್ತು ಪತಿಯಾಗು.”

01076017 ಯಯಾತಿರುವಾಚ।
01076017a ವಿದ್ಧ್ಯೌಶನಸಿ ಭದ್ರಂ ತೇ ನ ತ್ವಾಮರ್ಹೋಽಸ್ಮಿ ಭಾಮಿನಿ।
01076017c ಅವಿವಾಹ್ಯಾ ಹಿ ರಾಜಾನೋ ದೇವಯಾನಿ ಪಿತುಸ್ತವ।।

ಯಯಾತಿಯು ಹೇಳಿದನು: “ಉಶನನ ಮಗಳೇ! ಭಾಮಿನೀ! ನಿನಗೆ ಮಂಗಳವಾಗಲಿ. ನಾನು ನಿನ್ನ ಅರ್ಹನಲ್ಲ. ದೇವಯಾನಿ! ನಿನ್ನ ತಂದೆಯು ನಿನ್ನನ್ನು ರಾಜನಿಗೆ ವಿವಾಹ ಮಾಡಿಸುವುದಿಲ್ಲ.”

01076018 ದೇವಯಾನ್ಯುವಾಚ।
01076018a ಸಂಸೃಷ್ಟಂ ಬ್ರಹ್ಮಣಾ ಕ್ಷತ್ರಂ ಕ್ಷತ್ರಂ ಚ ಬ್ರಹ್ಮಸಂಹಿತಂ।
01076018c ಋಷಿಶ್ಚ ಋಷಿಪುತ್ರಶ್ಚ ನಾಹುಷಾಂಗ ವಹಸ್ವ ಮಾಂ।।

ದೇವಯಾನಿಯು ಹೇಳಿದಳು: “ಈ ಮೊದಲೂ ಕೂಡ ಬ್ರಾಹ್ಮಣರು ಕ್ಷತ್ರಿಯರನ್ನೂ ಕ್ರತ್ರಿಯರು ಬ್ರಾಹ್ಮಣರನ್ನೂ ಸೇರಿದ್ದಿದೆ. ಋಷಿಪುತ್ರನಾದ ನೀನೂ ಕೂಡ ಓರ್ವ ಋಷಿಯೇ. ನಾಹುಷ! ನನ್ನನ್ನು ವರಿಸು.”

01076019 ಯಯಾತಿರುವಾಚ।
01076019a ಏಕದೇಹೋದ್ಭವಾ ವರ್ಣಾಶ್ಚತ್ವಾರೋಽಪಿ ವರಾಂಗನೇ।
01076019c ಪೃಥಗ್ಧರ್ಮಾಃ ಪೃಥಕ್ಶೌಚಾಸ್ತೇಷಾಂ ತು ಬ್ರಾಹ್ಮಣೋ ವರಃ।।

ಯಯಾತಿಯು ಹೇಳಿದನು: “ವರಾಂಗನೇ! ನಾಲ್ಕು ವರ್ಣಗಳೂ ಒಂದೇ ದೇಹದಿಂದ ಉದ್ಭವವಾಗಿದ್ದರೂ ಅವರ ಧರ್ಮಗಳು ಬೇರೆ ಮತ್ತು ಅವರ ಶುದ್ಧತೆ ಬೇರೆ. ಅವರೆಲ್ಲರಲ್ಲಿ ಬ್ರಾಹ್ಮಣನೇ ಶ್ರೇಷ್ಠ.”

01076020 ದೇವಯಾನ್ಯುವಾಚ।
01076020a ಪಾಣಿಧರ್ಮೋ ನಾಹುಷಾಯಂ ನ ಪುಂಭಿಃ ಸೇವಿತಃ ಪುರಾ।
01076020c ತಂ ಮೇ ತ್ವಮಗ್ರಹೀರಗ್ರೇ ವೃಣೋಮಿ ತ್ವಾಮಹಂ ತತಃ।।

ದೇವಯಾನಿಯು ಹೇಳಿದನು: “ನಾಹುಷ! ಈ ನನ್ನ ಕೈಗಳನ್ನು ಮೊದಲು ಬೇರೆ ಯಾರೂ ಮುಟ್ಟಿರಲಿಲ್ಲ. ಮೊದಲಬಾರಿ ನನ್ನ ಕೈ ಹಿಡಿದವನು ನೀನೇ. ಆದುದರಿಂದ ನಿನ್ನನ್ನು ನಾನು ವರಿಸುತ್ತೇನೆ.

01076021a ಕಥಂ ನು ಮೇ ಮನಸ್ವಿನ್ಯಾಃ ಪಾಣಿಮನ್ಯಃ ಪುಮಾನ್ಸ್ಪೃಶೇತ್।
01076021c ಗೃಹೀತಂ ಋಷಿಪುತ್ರೇಣ ಸ್ವಯಂ ವಾಪ್ಯೃಷಿಣಾ ತ್ವಯಾ।।

ಸ್ವಾಭಿಮಾನಿ ನಾನು ಋಷಿಪುತ್ರನೂ ಸ್ವಯಂ ಋಷಿಯೂ ಆದ ನೀನು ಹಿಡಿದ ಈ ಕೈಯನ್ನು ಬೇರೆಯವರು ಹಿಡಿಯುವುದನ್ನು ಹೇಗೆ ತಾನೆ ಸಹಿಸಲಿ?”

01076022 ಯಯಾತಿರುವಾಚ।
01076022a ಕ್ರುದ್ಧಾದಾಶೀವಿಷಾತ್ಸರ್ಪಾಜ್ಜ್ವಲನಾತ್ಸರ್ವತೋಮುಖಾತ್।
01076022c ದುರಾಧರ್ಷತರೋ ವಿಪ್ರಃ ಪುರುಷೇಣ ವಿಜಾನತಾ।।

ಯಯಾತಿಯು ಹೇಳಿದನು: “ಘೋರವಿಷ ಸರ್ಪ ಮತ್ತು ಎಲ್ಲಕಡೆ ಉರಿಯುತ್ತಿರುವ ಬೆಂಕಿಗಿಂತಲೂ ಬ್ರಾಹ್ಮಣರಿಂದ ದೂರವಿರುವುದು ಹೆಚ್ಚು ಒಳ್ಳೆಯದು ಎಂದು ತಿಳಿದವರು ಹೇಳುತ್ತಾರೆ.”

01076023 ದೇವಯಾನ್ಯುವಾಚ।
01076023a ಕಥಮಾಶೀವಿಷಾತ್ಸರ್ಪಾಜ್ಜ್ವಲನಾತ್ಸರ್ವತೋಮುಖಾತ್।
01076023c ದುರಾಧರ್ಷತರೋ ವಿಪ್ರ ಇತ್ಯಾತ್ಥ ಪುರುಷರ್ಷಭ।।

ದೇವಯಾನಿಯು ಹೇಳಿದನು: “ಪುರುಷರ್ಷಭ! ವಿಷಸರ್ಪ ಮತ್ತು ಸರ್ವತೋಮುಖ ಅಗ್ನಿಗಿಂತ ವಿಪ್ರರಿಂದ ದೂರವಿರುವುದು ಒಳ್ಳೆಯದೆಂದು ಏಕೆ ಹೇಳುತ್ತಿದ್ದೀಯೆ?”

01076024 ಯಯಾತಿರುವಾಚ।
01076024a ಏಕಮಾಶೀವಿಷೋ ಹಂತಿ ಶಸ್ತ್ರೇಣೈಕಶ್ಚ ವಧ್ಯತೇ।
01076024c ಹಂತಿ ವಿಪ್ರಃ ಸರಾಷ್ಟ್ರಾಣಿ ಪುರಾಣ್ಯಪಿ ಹಿ ಕೋಪಿತಃ।।

ಯಯಾತಿಯು ಹೇಳಿದನು: “ವಿಷಸರ್ಪವೂ ಒಬ್ಬನನ್ನೇ ಕೊಲ್ಲುತ್ತದೆ, ಖಡ್ಗವೂ ಒಬ್ಬನನ್ನೇ ಕೊಲ್ಲುತ್ತದೆ. ಆದರೆ ಕೋಪಿತ ಬ್ರಾಹ್ಮಣನು ಇಡೀ ರಾಷ್ಟ್ರ ಅಥವಾ ಪುರವನ್ನೇ ನಾಶಪಡಿಸಬಲ್ಲ.

01076025a ದುರಾಧರ್ಷತರೋ ವಿಪ್ರಸ್ತಸ್ಮಾದ್ಭೀರು ಮತೋ ಮಮ।
01076025c ಅತೋಽದತ್ತಾಂ ಚ ಪಿತ್ರಾ ತ್ವಾಂ ಭದ್ರೇ ನ ವಿವಹಾಮ್ಯಹಂ।।

ಆದುದರಿಂದ ಸುಂದರಿ! ವಿಪ್ರನನ್ನು ಎದುರಿಸುವುದು ಬಹಳ ಕಷ್ಟವೆಂದು ನನ್ನ ಅನಿಸಿಕೆ. ಭದ್ರೇ! ನಿನ್ನ ತಂದೆಯು ನಿನ್ನನ್ನು ನನಗೆ ಕೊಡದೇ ನಾನು ನಿನ್ನನ್ನು ಮದುವೆಯಾಗಲಾರೆ.”

01076026 ದೇವಯಾನ್ಯುವಾಚ।
01076026a ದತ್ತಾಂ ವಹಸ್ವ ಪಿತ್ರಾ ಮಾಂ ತ್ವಂ ಹಿ ರಾಜನ್ವೃತೋ ಮಯಾ।
01076026c ಅಯಾಚತೋ ಭಯಂ ನಾಸ್ತಿ ದತ್ತಾಂ ಚ ಪ್ರತಿಗೃಹ್ಣತಃ।।

ದೇವಯಾನಿಯು ಹೇಳಿದಳು: “ತಂದೆಯು ನನ್ನನ್ನು ನಿನಗೆ ಕೊಟ್ಟಾಗಲೇ ವರಿಸು. ರಾಜನ್! ನಾನು ಈಗಾಗಲೇ ನಿನ್ನನ್ನು ವರಿಸಿಯಾಗಿದೆ. ಕೇಳದೇ ಇದ್ದುದನ್ನು ಕೊಟ್ಟಾಗ ಸ್ವೀಕರಿಸುವುದರಲ್ಲಿ ಯಾವ ಭಯವೂ ಇಲ್ಲ.””

01076027 ವೈಶಂಪಾಯನ ಉವಾಚ।
01076027a ತ್ವರಿತಂ ದೇವಯಾನ್ಯಾಥ ಪ್ರೇಷಿತಂ ಪಿತುರಾತ್ಮನಃ।
01076027c ಶ್ರುತ್ವೈವ ಚ ಸ ರಾಜಾನಂ ದರ್ಶಯಾಮಾಸ ಭಾರ್ಗವಃ।।

ವೈಶಂಪಾಯನನು ಹೇಳಿದನು: “ತಕ್ಷಣವೇ ದೇವಯಾನಿಯು ತನ್ನ ತಂದೆಗೆ ವಿಷಯವನ್ನು ಹೇಳಿ ಕಳುಹಿಸಿದಳು. ವಿಷಯ ತಿಳಿದ ಭಾರ್ಗವನು ರಾಜನನ್ನು ಕಾಣಲು ಬಂದನು.

01076028a ದೃಷ್ಟ್ವೈವ ಚಾಗತಂ ಶುಕ್ರಂ ಯಯಾತಿಃ ಪೃಥಿವೀಪತಿಃ।
01076028c ವವಂದೇ ಬ್ರಾಹ್ಮಣಂ ಕಾವ್ಯಂ ಪ್ರಾಂಜಲಿಃ ಪ್ರಣತಃ ಸ್ಥಿತಃ।।

ಪೃಥಿವೀಪತಿ ಯಯಾತಿಯು ಆಗಮಿಸಿದ ಬ್ರಾಹ್ಮಣ ಕಾವ್ಯ ಶುಕ್ರನನ್ನು ಕಂಡು ಅಂಜಲೀ ಬದ್ಧನಾಗಿ ನಮಸ್ಕರಿಸಿ, ಪ್ರಣೀತನಾಗಿ ನಿಂತುಕೊಂಡನು.

01076029 ದೇವಯಾನ್ಯುವಾಚ।
01076029a ರಾಜಾಯಂ ನಾಹುಷಸ್ತಾತ ದುರ್ಗೇ ಮೇ ಪಾಣಿಮಗ್ರಹೀತ್।
01076029c ನಮಸ್ತೇ ದೇಹಿ ಮಾಮಸ್ಮೈ ನಾನ್ಯಂ ಲೋಕೇ ಪತಿಂ ವೃಣೇ।।

ದೇವಯಾನಿಯು ಹೇಳಿದಳು: “ತಂದೇ! ನಾನು ದುಃಖದಲ್ಲಿದ್ದಾಗ ನನ್ನ ಕೈಹಿಡಿದ ಇವನು ರಾಜ ನಹುಷನ ಪುತ್ರ. ಇವನಿಗೇ ನನ್ನನ್ನು ಕೊಡು. ಈ ಲೋಕಗಳಲ್ಲಿ ಬೇರೆ ಯಾರನ್ನೂ ನನ್ನ ಪತಿಯನ್ನಾಗಿ ವರಿಸುವುದಿಲ್ಲ.””

01076030 ಶುಕ್ರ ಉವಾಚ।
01076030a ವೃತೋಽನಯಾ ಪತಿರ್ವೀರ ಸುತಯಾ ತ್ವಂ ಮಮೇಷ್ಟಯಾ।
01076030c ಗೃಹಾಣೇಮಾಂ ಮಯಾ ದತ್ತಾಂ ಮಹಿಷೀಂ ನಹುಷಾತ್ಮಜ।।

ಶುಕ್ರನು ಹೇಳಿದನು: “ವೀರ! ನನ್ನ ಪ್ರೀತಿಯ ಮಗಳು ನಿನ್ನನ್ನು ಪತಿಯನ್ನಾಗಿ ವರಿಸಿದ್ದಾಳೆ. ನಹುಷಾತ್ಮಜ! ನಾನು ನಿನಗೆ ನೀಡುತ್ತಿರುವ ಇವಳನ್ನು ನಿನ್ನ ರಾಣಿಯನ್ನಾಗಿ ಸ್ವೀಕರಿಸು.”

01076031 ಯಯಾತಿರುವಾಚ।
01076031a ಅಧರ್ಮೋ ನ ಸ್ಪೃಶೇದೇವಂ ಮಹಾನ್ಮಾಮಿಹ ಭಾರ್ಗವ।
01076031c ವರ್ಣಸಂಕರಜೋ ಬ್ರಹ್ಮನ್ನಿತಿ ತ್ವಾಂ ಪ್ರವೃಣೋಮ್ಯಹಂ।।

ಯಯಾತಿಯು ಹೇಳಿದನು: “ಭಾರ್ಗವ! ಬ್ರಹ್ಮನ್! ವರ್ಣಸಂಕರ ಪಾಪವು ನನ್ನನ್ನು ಮುಟ್ಟದಿರಲಿ ಎನ್ನುವ ವರವನ್ನು ನನಗೆ ಅನುಗ್ರಹಿಸು.”

01076032 ಶುಕ್ರ ಉವಾಚ।
01076032a ಅಧರ್ಮಾತ್ತ್ವಾಂ ವಿಮುಂಚಾಮಿ ವರಯಸ್ವ ಯಥೇಪ್ಷಿತಂ।
01076032c ಅಸ್ಮಿನ್ವಿವಾಹೇ ಮಾ ಗ್ಲಾಸೀರಹಂ ಪಾಪಂ ನುದಾಮಿ ತೇ।।

ಶುಕ್ರನು ಹೇಳಿದನು: “ಅಧರ್ಮದಿಂದ ನಿನ್ನನ್ನು ವಿಮೋಚಿಸುತ್ತೇನೆ. ನಿನಗಿಷ್ಟವಾದಂತೆ ಅವಳನ್ನು ವರಿಸು. ಈ ವಿವಾಹದಿಂದ ಹಿಂಜರಿಯಬೇಡ. ನಿನ್ನನ್ನು ಪಾಪಗಳಿಂದ ವಿಮುಕ್ತನನ್ನಾಗಿ ಮಾಡುತ್ತೇನೆ.

01076033a ವಹಸ್ವ ಭಾರ್ಯಾಂ ಧರ್ಮೇಣ ದೇವಯಾನೀಂ ಸುಮಧ್ಯಮಾಂ।
01076033c ಅನಯಾ ಸಹ ಸಂಪ್ರೀತಿಮತುಲಾಂ ಸಮವಾಪ್ಸ್ಯಸಿ।।

ನಿನ್ನ ಹೆಂಡತಿ ಸುಮಧ್ಯಮೆ ದೇವಯಾನಿಯನ್ನು ಧರ್ಮದಿಂದ ನೋಡಿಕೋ. ಇವಳ ಜೊತೆಗೂಡಿ ನೀನು ಅತುಲ ಸಂತೋಷವನ್ನು ಹೊಂದುತ್ತೀಯೆ.

01076034a ಇಯಂ ಚಾಪಿ ಕುಮಾರೀ ತೇ ಶರ್ಮಿಷ್ಠಾ ವಾರ್ಷಪರ್ವಣೀ।
01076034c ಸಂಪೂಜ್ಯಾ ಸತತಂ ರಾಜನ್ಮಾ ಚೈನಾಂ ಶಯನೇ ಹ್ವಯೇಃ।।

ರಾಜನ್! ವಾರ್ಷಪರ್ವಣೀ ಕುಮಾರಿ ಶರ್ಮಿಷ್ಠೆಯನ್ನೂ ಸತತ ಗೌರವದಿಂದ ಕಾಣು. ಅವಳನ್ನು ಎಂದೂ ನಿನ್ನ ಹಾಸಿಗೆಯ ಮೇಲೆ ಕರೆದುಕೊಳ್ಳಬೇಡ.””

01076035 ವೈಶಂಪಾಯನ ಉವಾಚ।
01076035a ಏವಮುಕ್ತೋ ಯಯಾತಿಸ್ತು ಶುಕ್ರಂ ಕೃತ್ವಾ ಪ್ರದಕ್ಷಿಣಂ।
01076035c ಜಗಾಮ ಸ್ವಪುರಂ ಹೃಷ್ಟೋ ಅನುಜ್ಞಾತೋ ಮಹಾತ್ಮನಾ।।

ವೈಶಂಪಾಯನನು ಹೇಳಿದನು: “ಇದನ್ನು ಕೇಳಿದ ಯಯಾತಿಯು ಮಹಾತ್ಮ ಶುಕ್ರನಿಗೆ ಪ್ರದಕ್ಷಿಣೆ ಮಾಡಿ, ಅಪ್ಪಣೆಯನ್ನು ಪಡೆದು ಸಂತೋಷದಿಂದ ತನ್ನ ಪುರಕ್ಕೆ ತೆರಳಿದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಯಯಾತ್ಯುಪಾಖ್ಯಾನೇ ಷಟ್‌ಸಪ್ತತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಯಯಾತಿ-ಉಪಾಖ್ಯಾನದಲ್ಲಿ ಎಪ್ಪತ್ತಾರನೆಯ ಅಧ್ಯಾಯವು.