ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಸಂಭವ ಪರ್ವ
ಅಧ್ಯಾಯ 75
ಸಾರ
ದೇವಯಾನಿಯು ಶರ್ಮಿಷ್ಠೆಯನ್ನು ದಾಸಿಯನ್ನಾಗಿಸಿಕೊಳ್ಳುವುದು (1-15). ದೇವಯಾನಿಯು ಮದುವೆಯಾಗಿ ಎಲ್ಲಿ ಹೋಗುತ್ತಾಳೋ ಅಲ್ಲಿಗೂ ಬರುವೆನೆಂದು ಶರ್ಮಿಷ್ಠೆಯು ಒಪ್ಪಿಕೊಳ್ಳುವುದು (16-25).
01075001 ವೈಶಂಪಾಯನ ಉವಾಚ।
01075001a ತತಃ ಕಾವ್ಯೋ ಭೃಗುಶ್ರೇಷ್ಠಃ ಸಮನ್ಯುರುಪಗಮ್ಯ ಹ।
01075001c ವೃಷಪರ್ವಾಣಮಾಸೀನಮಿತ್ಯುವಾಚಾವಿಚಾರಯನ್।।
ವೈಶಂಪಾಯನನು ಹೇಳಿದನು: “ಆಗ ಕುಪಿತನಾದ ಭೃಗುಶ್ರೇಷ್ಠ ಕಾವ್ಯನು ಆಸೀನನಾಗಿದ್ದ ವೃಷಪರ್ವನಲ್ಲಿಗೆ ಬಂದು ಏನನ್ನೂ ವಿಚಾರಮಾಡದೆಯೇ ಹೇಳಿದನು:
01075002a ನಾಧರ್ಮಶ್ಚರಿತೋ ರಾಜನ್ಸದ್ಯಃ ಫಲತಿ ಗೌರಿವ।
01075002c ಪುತ್ರೇಷು ವಾ ನಪ್ತೃಷು ವಾ ನ ಚೇದಾತ್ಮನಿ ಪಶ್ಯತಿ।
01075002e ಫಲತ್ಯೇವ ಧ್ರುವಂ ಪಾಪಂ ಗುರುಭುಕ್ತಮಿವೋದರೇ।।
“ರಾಜನ್! ಅಧರ್ಮದ ನಡವಳಿಕೆಯು ಭೂಮಿಯಂತೆ ತಕ್ಷಣವೇ ಫಲವನ್ನೀಡುವುದಿಲ್ಲ. ಅದರ ಫಲವು ಕ್ರಮೇಣವಾಗಿ ತನ್ನಲ್ಲಿ ಅಥವಾ ಪುತ್ರನಲ್ಲಿ ಅಥವಾ ಮೊಮ್ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ. ಒಳ್ಳೆಯದಾಗಿ ತಿಂದ ಊಟವನ್ನು ಹೊಟ್ಟೆಯು ಹೇಗೆ ಜೀರ್ಣಿಸಿಕೊಳ್ಳುತ್ತದೆಯೋ ಹಾಗೆ ಪಾಪದ ಫಲವನ್ನೂ ನಿಶ್ವಯವಾಗಿ ಜೀರ್ಣಿಸಿಕೊಳ್ಳಬೇಕಾಗುತ್ತದೆ.
01075003a ಯದಘಾತಯಥಾ ವಿಪ್ರಂ ಕಚಮಾಂಗಿರಸಂ ತದಾ।
01075003c ಅಪಾಪಶೀಲಂ ಧರ್ಮಜ್ಞಂ ಶುಶ್ರೂಷುಂ ಮದ್ಗೃಹೇ ರತಂ।।
ನನ್ನ ಮನೆಯಲ್ಲಿದ್ದು ನನ್ನ ಶುಷ್ರೂಶೆಯಲ್ಲಿ ನಿರತನಾದ ಅಪಾಪಶೀಲ ಧರ್ಮಜ್ಞ ವಿಪ್ರ ಆಂಗೀರಸ ಕಚನನ್ನು ನೀನು ಕೊಲ್ಲಿಸಿದೆ.
01075004a ವಧಾದನರ್ಹತಸ್ತಸ್ಯ ವಧಾಚ್ಚ ದುಹಿತುರ್ಮಮ।
01075004c ವೃಷಪರ್ವನ್ನಿಬೋಧೇದಂ ತ್ಯಕ್ಷ್ಯಾಮಿ ತ್ವಾಂ ಸಬಾಂಧವಂ।
01075004e ಸ್ಥಾತುಂ ತ್ವದ್ವಿಷಯೇ ರಾಜನ್ನ ಶಕ್ಷ್ಯಾಮಿ ತ್ವಯಾ ಸಹ।।
ವಧಾರ್ಹನಲ್ಲದವನ ವಧೆಗೈದುದಕ್ಕಾಗಿ ಮತ್ತು ನನ್ನ ಮಗಳನ್ನು ನೋಯಿಸಿದುದಕ್ಕಾಗಿ ವೃಷಪರ್ವ! ನಿನ್ನನ್ನು ಮತ್ತು ನಿನ್ನ ಬಂಧುಗಳನ್ನು ನಾನು ತ್ಯಜಿಸುತ್ತೇನೆ. ರಾಜನ್! ಇನ್ನು ನಿನ್ನ ಈ ರಾಜ್ಯದಲ್ಲಿ ಇರಲಾರೆ.
01075005a ಅಹೋ ಮಾಮಭಿಜಾನಾಸಿ ದೈತ್ಯ ಮಿಥ್ಯಾಪ್ರಲಾಪಿನಂ।
01075005c ಯಥೇಮಮಾತ್ಮನೋ ದೋಷಂ ನ ನಿಯಚ್ಛಸ್ಯುಪೇಕ್ಷಸೇ।।
ದೈತ್ಯ! ನಾನು ಸುಳ್ಳು ಪ್ರಲಾಪನೆಮಾಡುತ್ತಿದ್ದೇನೆಂದು ತಿಳಿಯಬೇಡ. ನಿನ್ನ ತಪ್ಪುಗಳನ್ನು ತಡೆ ಹಿಡಿಯುವುದರ ಬದಲು ಮುಂದುವರಿಸಿಕೊಂಡು ಹೋಗುತ್ತಿದ್ದೀಯೆ.”
01075006 ವೃಷಪರ್ವೋವಾಚ।
01075006a ನಾಧರ್ಮಂ ನ ಮೃಷಾವಾದಂ ತ್ವಯಿ ಜಾನಾಮಿ ಭಾರ್ಗವ।
01075006c ತ್ವಯಿ ಧರ್ಮಶ್ಚ ಸತ್ಯಂ ಚ ತತ್ಪ್ರಸೀದತು ನೋ ಭವಾನ್।।
ವೃಷಪರ್ವನು ಹೇಳಿದನು: “ಭಾರ್ಗವ! ನೀನು ಎಂದೂ ಅಧರ್ಮದ ಮತ್ತು ಸುಳ್ಳಿನ ಮಾತನಾಡಿದ್ದುದು ನನಗೆ ಗೊತ್ತಿಲ್ಲ. ನಿನ್ನಲ್ಲಿ ಧರ್ಮ ಮತ್ತು ಸತ್ಯ ಇವೆರಡೂ ಇವೆ. ಭಗವನ್! ನನ್ನ ಮೇಲೆ ಕರುಣೆತೋರು.
01075007a ಯದ್ಯಸ್ಮಾನಪಹಾಯ ತ್ವಮಿತೋ ಗಚ್ಛಸಿ ಭಾರ್ಗವ।
01075007c ಸಮುದ್ರಂ ಸಂಪ್ರವೇಕ್ಷ್ಯಾಮೋ ನಾನ್ಯದಸ್ತಿ ಪರಾಯಣಂ।।
ಭಾರ್ಗವ! ನಿಜವಾಗಿಯೂ ನೀನು ನಮ್ಮನ್ನು ಬಿಟ್ಟು ಹೋದರೆ ನಮಗೆ ಸಮುದ್ರದ ಅಡಿಯನ್ನು ಸೇರುವುದರ ಹೊರತಾದ ಬೇರೆ ಮಾರ್ಗವೇ ಇಲ್ಲ.”
01075008 ಶುಕ್ರ ಉವಾಚ।
01075008a ಸಮುದ್ರಂ ಪ್ರವಿಶಧ್ವಂ ವಾ ದಿಶೋ ವಾ ದ್ರವತಾಸುರಾಃ।
01075008c ದುಹಿತುರ್ನಾಪ್ರಿಯಂ ಸೋದುಂ ಶಕ್ತೋಽಹಂ ದಯಿತಾ ಹಿ ಮೇ।।
ಶುಕ್ರನು ಹೇಳಿದನು: “ಅಸುರರೇ! ಸಮುದ್ರದಲ್ಲಾದರೂ ಮುಳುಗಿ ಅಥವಾ ದಿಕ್ಕಾಪಾಲಾಗಿ ಓಡಿಹೋಗಿ. ನನ್ನ ಪ್ರೀತಿಯ ಮಗಳಿಗಾದ ನಿಂದನೆಯನ್ನು ನನಗೆ ಸಹಿಸಲಾಗುತ್ತಿಲ್ಲ.
01075009a ಪ್ರಸಾದ್ಯತಾಂ ದೇವಯಾನೀ ಜೀವಿತಂ ಹ್ಯತ್ರ ಮೇ ಸ್ಥಿತಂ।
01075009c ಯೋಗಕ್ಷೇಮಕರಸ್ತೇಽಹಮಿಂದ್ರಸ್ಯೇವ ಬೃಹಸ್ಪತಿಃ।।
ದೇವಯಾನಿಯನ್ನು ಸಂತೋಷದಿಂದಿಡುವುದರ ಮೇಲೆಯೇ ನನ್ನ ಜೀವನವು ನಿಂತಿದೆ. ಬೃಹಸ್ಪತಿಯು ಇಂದ್ರನ ಯೋಗಕ್ಷೇಮವನ್ನು ಹೇಗೆ ನೋಡಿಕೊಳ್ಳುತ್ತಾನೋ ಹಾಗೆ ನಾನು ಸದಾ ನನ್ನ ಮಗಳ ಯೋಗಕ್ಷೇಮವನ್ನು ಬಯಸುತ್ತೇನೆ.”
01075010 ವೃಷಪರ್ವೋವಾಚ।
01075010a ಯತ್ಕಿಂ ಚಿದಸುರೇಂದ್ರಾಣಾಂ ವಿದ್ಯತೇ ವಸು ಭಾರ್ಗವ।
01075010c ಭುವಿ ಹಸ್ತಿಗವಾಶ್ವಂ ವಾ ತಸ್ಯ ತ್ವಂ ಮಮ ಚೇಶ್ವರಃ।।
ವೃಷಪರ್ವನು ಹೇಳಿದನು: “ಭಾರ್ಗವ! ಈ ಅಸುರೇಂದ್ರರ ಎಲ್ಲ ಸಂಪತ್ತಿಗೂ - ನನ್ನನ್ನೂ ಸೇರಿ ಈ ಭೂಮಿ, ಆನೆಗಳು, ಕುದುರೆಗಳು, ಗೋವುಗಳೂ - ಎಲ್ಲಕ್ಕೂ ನೀನೇ ಒಡೆಯ.”
01075011 ಶುಕ್ರ ಉವಾಚ।
01075011a ಯತ್ಕಿಂ ಚಿದಸ್ತಿ ದ್ರವಿಣಂ ದೈತ್ಯೇಂದ್ರಾಣಾಂ ಮಹಾಸುರ।
01075011c ತಸ್ಯೇಶ್ವರೋಽಸ್ಮಿ ಯದಿ ತೇ ದೇವಯಾನೀ ಪ್ರಸಾದ್ಯತಾಂ।।
ಶುಕ್ರನು ಹೇಳಿದನು: “ಮಹಾಸುರ! ದೈತ್ಯೇಂದ್ರರ ಎಲ್ಲ ಸಂಪತ್ತಿಗೂ ನಾನು ಒಡೆಯನೆಂದಾದರೆ ದೇವಯಾನಿಯನ್ನು ನೀನು ಸಂತುಷ್ಟಗೊಳಿಸಬೇಕು.”
01075012 ದೇವಯಾನ್ಯುವಾಚ।
01075012a ಯದಿ ತ್ವಮೀಶ್ವರಸ್ತಾತ ರಾಜ್ಞೋ ವಿತ್ತಸ್ಯ ಭಾರ್ಗವ।
01075012c ನಾಭಿಜಾನಾಮಿ ತತ್ತೇಽಹಂ ರಾಜಾ ತು ವದತು ಸ್ವಯಂ।।
ದೇವಯಾನಿಯು ಹೇಳಿದಳು: “ಭಾರ್ಗವ! ತಂದೇ! ಒಂದುವೇಳೆ ನೀನೇ ರಾಜನ ಮತ್ತು ಅವನ ಸರ್ವಸ್ವದ ಒಡೆಯನೆಂದಾದರೆ ಅದನ್ನು ಸ್ವಯಂ ರಾಜನೇ ನನ್ನ ಮುಂದೆ ಬಂದು ಹೇಳಲಿ.”
01075013 ವೃಷಪರ್ವೋವಾಚ।
01075013a ಯಂ ಕಾಮಮಭಿಕಾಮಾಸಿ ದೇವಯಾನಿ ಶುಚಿಸ್ಮಿತೇ।
01075013c ತತ್ತೇಽಹಂ ಸಂಪ್ರದಾಸ್ಯಾಮಿ ಯದಿ ಚೇದಪಿ ದುರ್ಲಭಂ।।
ವೃಶಪರ್ವನು ಹೇಳಿದನು: “ಶುಚಿಸ್ಮಿತೇ! ದೇವಯಾನೀ! ನೀನು ಬಯಸಿದ ಎಲ್ಲ ಬಯಕೆಗಳನ್ನೂ ಅದೆಷ್ಟೇ ದುರ್ಲಭವಾಗಿದ್ದರೂ ನಾನು ಪೂರೈಸುತ್ತೇನೆ.”
01075014 ದೇವಯಾನ್ಯುವಾಚ।
01075014a ದಾಸೀಂ ಕನ್ಯಾಸಹಸ್ರೇಣ ಶರ್ಮಿಷ್ಠಾಮಭಿಕಾಮಯೇ।
01075014c ಅನು ಮಾಂ ತತ್ರ ಗಚ್ಛೇತ್ಸಾ ಯತ್ರ ದಾಸ್ಯತಿ ಮೇ ಪಿತಾ।।
ದೇವಯಾನಿಯು ಹೇಳಿದಳು: “ಒಂದು ಸಾವಿರ ದಾಸಿಯರೊಂದಿಗೆ ಶರ್ಮಿಷ್ಠೆಯೂ ನನ್ನ ದಾಸಿಯಾಗಲೆಂದು ಬಯಸುತ್ತೇನೆ. ನನ್ನ ತಂದೆಯು ನನ್ನನ್ನು ಕೊಟ್ಟಲ್ಲಿಗೂ ಅವಳು ನನ್ನನ್ನು ಅನುಸರಿಸಬೇಕು.”
01075015 ವೃಷಪರ್ವೋವಾಚ।
01075015a ಉತ್ತಿಷ್ಠ ಹೇ ಸಂಗ್ರಹೀತ್ರಿ ಶರ್ಮಿಷ್ಠಾಂ ಶೀಘ್ರಮಾನಯ।
01075015c ಯಂ ಚ ಕಾಮಯತೇ ಕಾಮಂ ದೇವಯಾನೀ ಕರೋತು ತಂ।।
ವೃಷಪರ್ವನು ಹೇಳಿದನು: “ಸಂಗ್ರಹೀತ್ರಿ! ಎದ್ದು ಹೋಗಿ ಶರ್ಮಿಷ್ಠೆಯನ್ನು ಬೇಗನೆ ಕರೆದು ತಾ. ದೇವಯಾನಿಯು ಬಯಸಿದಂತೆ ಅವಳು ನಡೆದುಕೊಳ್ಳಲಿ.””
01075016 ವೈಶಂಪಾಯನ ಉವಾಚ।
01075016a ತತೋ ಧಾತ್ರೀ ತತ್ರ ಗತ್ವಾ ಶರ್ಮಿಷ್ಠಾಂ ವಾಕ್ಯಮಬ್ರವೀತ್।
01075016c ಉತ್ತಿಷ್ಠ ಭದ್ರೇ ಶರ್ಮಿಷ್ಠೇ ಜ್ಞಾತೀನಾಂ ಸುಖಮಾವಹ।।
ವೈಶಂಪಾಯನನು ಹೇಳಿದನು: “ಆಗ ಆ ಧಾತ್ರಿಯು ಶರ್ಮಿಷ್ಠೆಯಲ್ಲಿ ಹೋಗಿ ಹೇಳಿದಳು: “ಭದ್ರೇ ಶರ್ಮಿಷ್ಠೇ! ಎದ್ದೇಳು. ನಿನ್ನವರಿಗೆ ಒಳಿತನ್ನು ಮಾಡು.
01075017a ತ್ಯಜತಿ ಬ್ರಾಹ್ಮಣಃ ಶಿಷ್ಯಾನ್ದೇವಯಾನ್ಯಾ ಪ್ರಚೋದಿತಃ।
01075017c ಸಾ ಯಂ ಕಾಮಯತೇ ಕಾಮಂ ಸ ಕಾರ್ಯೋಽದ್ಯ ತ್ವಯಾನಘೇ।।
ದೇವಯಾನಿಯಿಂದ ಪ್ರಚೋದಿತ ಬ್ರಾಹ್ಮಣನು ತನ್ನ ಶಿಷ್ಯರನ್ನು ಬಿಟ್ಟು ಹೋಗುವುದರಲ್ಲಿದ್ದಾನೆ. ಅನಘೇ! ನೀನು ಅವಳು ಬಯಸಿದ ಹಾಗೆ ನಡೆದುಕೊಳ್ಳಬೇಕಾಗಿದೆ.”
01075018 ಶರ್ಮಿಷ್ಠೋವಾಚ।
01075018a ಸಾ ಯಂ ಕಾಮಯತೇ ಕಾಮಂ ಕರವಾಣ್ಯಹಮದ್ಯ ತಂ।
01075018c ಮಾ ತ್ವೇವಾಪಗಮಚ್ಶುಕ್ರೋ ದೇವಯಾನೀ ಚ ಮತ್ಕೃತೇ।।
ಶರ್ಮಿಷ್ಠೆಯು ಹೇಳಿದಳು: “ಇಂದು ಅವಳು ಏನನ್ನೇ ಬಯಸಿದರೂ ಅದರಂತೆ ನಡೆದುಕೊಳ್ಳಲು ಸಿದ್ಧಳಿದ್ದೇನೆ. ನನ್ನ ಕಾರಣದಿಂದಾಗಿ ಶುಕ್ರ ಮತ್ತು ದೇವಯಾನಿಯರು ಹೊರಟು ಹೋಗಬಾರದು.””
01075019 ವೈಶಂಪಾಯನ ಉವಾಚ।
01075019a ತತಃ ಕನ್ಯಾಸಹಸ್ರೇಣ ವೃತಾ ಶಿಬಿಕಯಾ ತದಾ।
01075019c ಪಿತುರ್ನಿಯೋಗಾತ್ತ್ವರಿತಾ ನಿಶ್ಚಕ್ರಾಮ ಪುರೋತ್ತಮಾತ್।।
ವೈಶಂಪಾಯನನು ಹೇಳಿದನು: “ತಕ್ಷಣವೇ ಅವಳು ತನ್ನ ತಂದೆಯ ಆಜ್ಞೆಯಂತೆ ಸಹಸ್ರ ದಾಸಿಕನ್ಯೆಯರೊಡಗೊಂಡು ಆ ಉತ್ತಮ ಅರಮನೆಯನ್ನು ಬಿಟ್ಟು ಬಂದಳು.”
01075020 ಶರ್ಮಿಷ್ಠೋವಾಚ।
01075020a ಅಹಂ ಕನ್ಯಾಸಹಸ್ರೇಣ ದಾಸೀ ತೇ ಪರಿಚಾರಿಕಾ।
01075020c ಅನು ತ್ವಾಂ ತತ್ರ ಯಾಸ್ಯಾಮಿ ಯತ್ರ ದಾಸ್ಯತಿ ತೇ ಪಿತಾ।।
ಶರ್ಮಿಷ್ಠೆಯು ಹೇಳಿದಳು: “ಈ ಸಹಸ್ರ ದಾಸಿಕನ್ಯೆರೊಡನೆ ನಾನು ನಿನ್ನ ಪರಿಚಾರಿಕೆಯಾಗಿ ನಿನ್ನ ತಂದೆಯು ನಿನ್ನನ್ನು ಎಲ್ಲಿಗೆ ಕೊಡುತ್ತಾನೋ ಅಲ್ಲಿಗೂ ಹಿಂಬಾಲಿಸುತ್ತೇನೆ.”
01075021 ದೇವಯಾನ್ಯುವಾಚ।
01075021a ಸ್ತುವತೋ ದುಹಿತಾ ತೇಽಹಂ ಬಂದಿನಃ ಪ್ರತಿಗೃಹ್ಣತಃ।
01075021c ಸ್ತೂಯಮಾನಸ್ಯ ದುಹಿತಾ ಕಥಂ ದಾಸೀ ಭವಿಷ್ಯಸಿ।।
ದೇವಯಾನಿಯು ಹೇಳಿದಳು: “ಬೇಡುವ, ಸ್ತುತಿಸುವ ಬಂದಿಯ ಮಗಳು ನಾನು. ಸ್ತುತಿಸಲ್ಪಡುವವನ ಮಗಳಾದ ನೀನು ಹೇಗೆ ನನ್ನ ದಾಸಿಯಾಗಬಲ್ಲೆ?”
01075022 ಶರ್ಮಿಷ್ಠೋವಾಚ।
01075022a ಯೇನ ಕೇನ ಚಿದಾರ್ತಾನಾಂ ಜ್ಞಾತೀನಾಂ ಸುಖಮಾವಹೇತ್।
01075022c ಅತಸ್ತ್ವಾಮನುಯಾಸ್ಯಾಮಿ ಯತ್ರ ದಾಸ್ಯತಿ ತೇ ಪಿತಾ।।
ಶರ್ಮಿಷ್ಠೆಯು ಹೇಳಿದಳು: “ಏನಾದರೂ ಮಾಡಿ ಆರ್ತರಾದ ನನ್ನವರಿಗೆ ಸುಖವನ್ನು ತರಲು ಬಯಸುತ್ತೇನೆ. ಆದುದರಿಂದ ನಿನ್ನ ತಂದೆಯು ನಿನ್ನನ್ನು ಎಲ್ಲಿಗೆ ಕೊಡುತ್ತಾನೋ ಅಲ್ಲಿಗೆ ನಾನು ಅನುಸರಿಸುವೆ.””
01075023 ವೈಶಂಪಾಯನ ಉವಾಚ।
01075023a ಪ್ರತಿಶ್ರುತೇ ದಾಸಭಾವೇ ದುಹಿತ್ರಾ ವೃಷಪರ್ವಣಃ।
01075023c ದೇವಯಾನೀ ನೃಪಶ್ರೇಷ್ಠ ಪಿತರಂ ವಾಕ್ಯಮಬ್ರವೀತ್।।
ವೈಶಂಪಾಯನನು ಹೇಳಿದನು: “ನೃಪಶ್ರೇಷ್ಠ! ಈ ರೀತಿ ವೃಷಪರ್ವನ ಮಗಳು ತನ್ನ ದಾಸಿಯಾದ ನಂತರ ದೇವಯಾನಿಯು ತನ್ನ ತಂದೆಗೆ ಹೇಳಿದಳು:
01075024a ಪ್ರವಿಶಾಮಿ ಪುರಂ ತಾತ ತುಷ್ಟಾಸ್ಮಿ ದ್ವಿಜಸತ್ತಮ।
01075024c ಅಮೋಘಂ ತವ ವಿಜ್ಞಾನಮಸ್ತಿ ವಿದ್ಯಾಬಲಂ ಚ ತೇ।।
“ತಂದೆ ದ್ವಿಜಸತ್ತಮ! ನಾನು ಸಂತುಷ್ಠಳಾಗಿ ಪುರವನ್ನು ಪ್ರವೇಶಿಸುತ್ತಿದ್ದೇನೆ. ನಿನ್ನ ವಿದ್ಯಾಬಲ ಮತ್ತು ವಿಜ್ಞಾನವು ಅಮೋಘವೆಂದು ಈಗ ನನಗೆ ತಿಳಿಯಿತು.”
01075025a ಏವಮುಕ್ತೋ ದುಹಿತ್ರಾ ಸ ದ್ವಿಜಶ್ರೇಷ್ಠೋ ಮಹಾಯಶಾಃ।
01075025c ಪ್ರವಿವೇಶ ಪುರಂ ಹೃಷ್ಟಃ ಪೂಜಿತಃ ಸರ್ವದಾನವೈಃ।।
ಮಗಳ ಈ ಮಾತುಗಳನ್ನು ಕೇಳಿ ಸಂತುಷ್ಠನಾದ ಮಹಾಯಶಸ್ವಿ ದ್ವಿಜಶ್ರೇಷ್ಠನು ತನ್ನ ಪುತ್ರಿಯೊಂದಿಗೆ ಸರ್ವ ದಾನವರಿಂದ ಆದರಗೊಂಡು ಪುರವನ್ನು ಪ್ರವೇಶಿಸಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಯಯಾತ್ಯುಪಾಖ್ಯಾನೇ ಪಂಚಸಪ್ತತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಯಯಾತಿ-ಉಪಾಖ್ಯಾನದಲ್ಲಿ ಎಪ್ಪತ್ತೈದನೆಯ ಅಧ್ಯಾಯವು.