ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಸಂಭವ ಪರ್ವ
ಅಧ್ಯಾಯ 74
ಸಾರ
ಶಕ್ರನು ದೇವಯಾನಿಗೆ ಸಹನೆಯನ್ನು ಸೂಚಿಸಿದರೂ ಅವಳು ಸೇಡನ್ನು ತೀರಿಸಿಕೊಳ್ಳಲು ಒತ್ತಾಯಿಸುವುದು (1-12).
01074001 ಶುಕ್ರ ಉವಾಚ।
01074001a ಯಃ ಪರೇಷಾಂ ನರೋ ನಿತ್ಯಮತಿವಾದಾಂಸ್ತಿತಿಕ್ಷತಿ।
01074001c ದೇವಯಾನಿ ವಿಜಾನೀಹಿ ತೇನ ಸರ್ವಮಿದಂ ಜಿತಂ।।
ಶುಕ್ರನು ಹೇಳಿದನು: “ಇನ್ನೊಬ್ಬರ ನಿಂದನೆಯ ಮಾತುಗಳನ್ನು ಸಹಿಸಿಕೊಳ್ಳುವವನು ಸರ್ವವನ್ನೂ ಜಯಿಸಿದಂತೆ ಎನ್ನುವುದನ್ನು ತಿಳಿದುಕೋ, ದೇವಯಾನಿ!
01074002a ಯಃ ಸಮುತ್ಪತಿತಂ ಕ್ರೋಧಂ ನಿಗೃಹ್ಣಾತಿ ಹಯಂ ಯಥಾ।
01074002c ಸ ಯಂತೇತ್ಯುಚ್ಯತೇ ಸದ್ಭಿರ್ನ ಯೋ ರಶ್ಮಿಷು ಲಂಬತೇ।।
ಹಗ್ಗಗಳನ್ನು ಹಿಡೆದೆಳೆದು ಕುದುರೆಗಳನ್ನು ಹೇಗೋ ಹಾಗೆ ಏರುತ್ತಿರುವ ಕೋಪವನ್ನು ಹಿಡಿತದಲ್ಲಿ ತೆಗೆದುಕೊಳ್ಳುವವನೇ ನಿಜವಾದ ಸಾರಥಿ.
01074003a ಯಃ ಸಮುತ್ಪತಿತಂ ಕ್ರೋಧಮಕ್ರೋಧೇನ ನಿರಸ್ಯತಿ।
01074003c ದೇವಯಾನಿ ವಿಜಾನೀಹಿ ತೇನ ಸರ್ವಮಿದಂ ಜಿತಂ।।
ದೇವಯಾನಿ! ಕ್ರೋಧವನ್ನು ಅಕ್ರೋಧದಿಂದ ಶಾಂತಗೊಳಿಸವವನು ಸರ್ವವನ್ನೂ ಗೆದ್ದವನು ಎಂದು ತಿಳಿ.
01074004a ಯಃ ಸಮುತ್ಪತಿತಂ ಕ್ರೋಧಂ ಕ್ಷಮಯೇಹ ನಿರಸ್ಯತಿ।
01074004c ಯಥೋರಗಸ್ತ್ವಚಂ ಜೀರ್ಣಾಂ ಸ ವೈ ಪುರುಷ ಉಚ್ಯತೇ।।
ಏರುತ್ತಿರುವ ಕ್ರೋಧವನ್ನು ಕ್ಷಮೆಯಿಂದ ಯಾರು ಶಾಂತಗೊಳಿಸುತ್ತಾರೋ ಅಂಥಹ ಪುರುಷರನ್ನು ಪೊರೆಬಿಡುವ ಹಾವಿಗೆ ಹೋಲಿಸುತ್ತಾರೆ.
01074005a ಯಃ ಸಂಧಾರಯತೇ ಮನ್ಯುಂ ಯೋಽತಿವಾದಾಂಸ್ತಿತಿಕ್ಷತಿ।
01074005c ಯಶ್ಚ ತಪ್ತೋ ನ ತಪತಿ ದೃದಂ ಸೋಽರ್ಥಸ್ಯ ಭಾಜನಂ।।
ಸಿಟ್ಟನ್ನು ಹಿಡಿತದಲ್ಲಿಟ್ಟುಕೊಂಡು, ನಿಂದನೆಯ ಮಾತುಗಳನ್ನು ಸಹಿಸಿ, ತಾನು ನೊಂದರೂ ಇತರರನ್ನು ನೋಯಿಸದವನು ನಿಶ್ಚಯವಾಗಿಯೂ ಸಂಪತ್ತಿನ ಕೊಪ್ಪರಿಗೆಯೇ ಸರಿ.
01074006a ಯೋ ಯಜೇದಪರಿಶ್ರಾಂತೋ ಮಾಸಿ ಮಾಸಿ ಶತಂ ಸಮಾಃ।
01074006c ನ ಕ್ರುಧ್ಯೇದ್ಯಶ್ಚ ಸರ್ವಸ್ಯ ತಯೋರಕ್ರೋಧನೋಽಧಿಕಃ।।
ಒಂದು ನೂರು ವರ್ಷಗಳವರೆಗೆ ಪ್ರತಿ ತಿಂಗಳೂ ಯಜ್ಞಮಾಡುವವನು ಮತ್ತು ಯಾರ ಮೇಲೂ ಸಿಟ್ಟಾಗದೇ ಇರುವವನು ಈ ಈರ್ವರಲ್ಲಿ ಸಿಟ್ಟಾಗದೇ ಇರುವವನೇ ಶ್ರೇಷ್ಠನು.
01074007a ಯತ್ಕುಮಾರಾಃ ಕುಮಾರ್ಯಶ್ಚ ವೈರಂ ಕುರ್ಯುರಚೇತಸಃ।
01074007c ನ ತತ್ಪ್ರಾಜ್ಞೋಽನುಕುರ್ವೀತ ವಿದುಸ್ತೇ ನ ಬಲಾಬಲಂ।।
ಬುದ್ಧಿಯಿಲ್ಲದ ಮಕ್ಕಳು ಮಕ್ಕಳಲ್ಲೇ ಜಗಳವಾಗುತ್ತದೆ. ಆದರೆ ಅದನ್ನು ಪ್ರಾಜ್ಞರು ಅನುಸರಿಸುವುದಿಲ್ಲ. ಯಾಕೆಂದರೆ ಅವರಿಗೆ ಬಲ ಮತ್ತು ದುರ್ಬಲಗಳೇನು ಎಂದು ತಿಳಿದಿರುವುದಿಲ್ಲ.”
01074008 ದೇವಯಾನ್ಯುವಾಚ।
01074008a ವೇದಾಹಂ ತಾತ ಬಾಲಾಪಿ ಧರ್ಮಾಣಾಂ ಯದಿಹಾಂತರಂ।
01074008c ಅಕ್ರೋಧೇ ಚಾತಿವಾದೇ ಚ ವೇದ ಚಾಪಿ ಬಲಾಬಲಂ।।
ದೇವಯಾನಿಯು ಹೇಳಿದಳು: “ತಂದೇ! ಬಾಲಕಿಯಾದರೂ ನಾನು ಧರ್ಮಗಳ ಕುರಿತು ತಿಳಿದಿದ್ದೇನೆ. ಕ್ರೋಧ-ಅಕ್ರೋಧಗಳ ಅಂತರವನ್ನೂ ತಿಳಿದಿದ್ದೇನೆ. ಬಲಾಬಲಗಳನ್ನು ಅರಿತಿದ್ದೇನೆ.
01074009a ಶಿಷ್ಯಸ್ಯಾಶಿಷ್ಯವೃತ್ತೇರ್ಹಿ ನ ಕ್ಷಂತವ್ಯಂ ಬುಭೂಷತಾ।
01074009c ತಸ್ಮಾತ್ಸಂಕೀರ್ಣವೃತ್ತೇಷು ವಾಸೋ ಮಮ ನ ರೋಚತೇ।।
ಆದರೆ ಯಾವ ಗುರುವೂ ಅಶಿಷ್ಯರಾಗಿ ವರ್ತಿಸುವ ತಮ್ಮ ಶಿಷ್ಯರನ್ನು ಕ್ಷಮಿಸಬಾರದು. ಕೆಟ್ಟದಾಗಿ ನಡೆದುಕೊಂಡಿರುವವರ ಮಧ್ಯೆ ವಾಸಿಸಲು ನನಗಿಷ್ಟವಿಲ್ಲ.
01074010a ಪುಮಾಂಸೋ ಯೇ ಹಿ ನಿಂದಂತಿ ವೃತ್ತೇನಾಭಿಜನೇನ ಚ।
01074010c ನ ತೇಷು ನಿವಸೇತ್ಪ್ರಾಜ್ಞಃ ಶ್ರೇಯೋರ್ಥೀ ಪಾಪಬುದ್ಧಿಷು।।
ಶ್ರೇಯೋರ್ಥಿಯಾದ ಯಾರೂ ತನ್ನ ಕುಲ ಮತ್ತು ನಡತೆಯನ್ನು ನಿಂದಿಸುವ ಪಾಪಬುದ್ಧಿಗಳೊಡನೆ ವಾಸಿಸಬಾರದು.
01074011a ಯೇ ತ್ವೇನಮಭಿಜಾನಂತಿ ವೃತ್ತೇನಾಭಿಜನೇನ ಚ।
01074011c ತೇಷು ಸಾಧುಷು ವಸ್ತವ್ಯಂ ಸ ವಾಸಃ ಶ್ರೇಷ್ಠ ಉಚ್ಯತೇ।।
ಉತ್ತಮ ಕುಲ ಮತ್ತು ನಡತೆಯನ್ನು ತಿಳಿದು ಗೌರವಿಸುವವರ ಜೊತೆ ವಾಸಿಸುವುದು ಶ್ರೇಷ್ಠವೆಂದು ಹೇಳುತ್ತಾರೆ. ಅಂಥವರಲ್ಲಿಯೇ ನಾವು ವಾಸಿಸೋಣ.
01074012a ವಾಗ್ದುರುಕ್ತಂ ಮಹಾಘೋರಂ ದುಹಿತುರ್ವೃಷಪರ್ವಣಃ।
01074012c ನ ಹ್ಯತೋ ದುಷ್ಕರತರಂ ಮನ್ಯೇ ಲೋಕೇಷ್ವಪಿ ತ್ರಿಷು।
01074012e ಯಃ ಸಪತ್ನಶ್ರಿಯಂ ದೀಪ್ತಾಂ ಹೀನಶ್ರೀಃ ಪರ್ಯುಪಾಸತೇ।।
ವೃಷಪರ್ವನ ಮಗಳ ಮಹಾ ಘೋರ ಮತ್ತು ಕ್ರೂರ ಮಾತುಗಳಷ್ಟು ದುಷ್ಕರತರವಾದದ್ದು ಈ ಮೂರೂ ಲೋಕಗಳಲ್ಲಿಯೇ ಇಲ್ಲವೆಂದು ನನ್ನ ಅನಿಸಿಕೆ. ತನ್ನ ಪ್ರತಿದ್ವಂಧಿಯ ಉಜ್ವಲ ಕೀರ್ತಿಯನ್ನು ನೋಡಿ ಸಂತೋಷಪಡುವವನು ಸೋತವನೇ ಸರಿ.””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಯಯಾತ್ಯುಪಾಖ್ಯಾನೇ ಚತುಃಸಪ್ತತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಯಯಾತಿ-ಉಪಾಖ್ಯಾನದಲ್ಲಿ ಎಪ್ಪತ್ತ್ನಾಲ್ಕನೆಯ ಅಧ್ಯಾಯವು.