ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಸಂಭವ ಪರ್ವ
ಅಧ್ಯಾಯ 73
ಸಾರ
ಜಗಳದಲ್ಲಿ ಶರ್ಮಿಷ್ಠೆಯು ದೇವಯಾನಿಯನ್ನು ಬಾವಿಗೆ ಬೀಳಿಸಿದುದು (1-15). ಯಯಾತಿಯು ದೇವಯಾನಿಯನ್ನು ಬಾವಿಯಿಂದ ಮೇಲೆತ್ತುವುದು (16-20). ದೇವಯಾನಿಯು ತಂದೆಯಲ್ಲಿ ಶರ್ಮಿಷ್ಠೆಯ ತಪ್ಪಿಗೆ ಸಿಶಿಕ್ಷಿಸಲು ಕೇಳಿಕೊಳ್ಳುವುದು (21-36).
01073001 ವೈಶಂಪಾಯನ ಉವಾಚ।
01073001a ಕೃತವಿದ್ಯೇ ಕಚೇ ಪ್ರಾಪ್ತೇ ಹೃಷ್ಟರೂಪಾ ದಿವೌಕಸಃ।
01073001c ಕಚಾದಧೀತ್ಯ ತಾಂ ವಿದ್ಯಾಂ ಕೃತಾರ್ಥಾ ಭರತರ್ಷಭ।।
ವೈಶಂಪಾಯನನು ಹೇಳಿದನು: “ಭರತರ್ಷಭ! ವಿದ್ಯೆಯನ್ನು ಕಲಿತು ಬಂದ ಕಚನನ್ನು ಪಡೆದು ದಿವೌಕಸರು ಬಹಳ ಸಂತಸಗೊಂಡರು. ಕಚನಿಂದ ಆ ವಿಧ್ಯೆಯನ್ನು ಪಡೆದು ಕೃತಾರ್ಥರಾದರು.
01073002a ಸರ್ವ ಏವ ಸಮಾಗಮ್ಯ ಶತಕ್ರತುಮಥಾಬ್ರುವನ್।
01073002c ಕಾಲಸ್ತೇ ವಿಕ್ರಮಸ್ಯಾದ್ಯ ಜಹಿ ಶತ್ರೂನ್ಪುರಂದರ।।
ಸರ್ವರೂ ಸೇರಿ ಶತಕ್ರತುವಿಗೆ ಹೇಳಿದರು: “ಪುರಂದರ! ಶತ್ರುಗಳನ್ನು ಸಂಹರಿಸಿ ನಿನ್ನ ವಿಕ್ರಮವನ್ನು ಅವರಿಗೆ ತೋರಿಸುವ ಕಾಲ ಬಂದಿದೆ.”
01073003a ಏವಮುಕ್ತಸ್ತು ಸಹಿತೈಸ್ತ್ರಿದಶೈರ್ಮಘವಾಂಸ್ತದಾ।
01073003c ತಥೇತ್ಯುಕ್ತ್ವೋಪಚಕ್ರಾಮ ಸೋಽಪಶ್ಯತ ವನೇ ಸ್ತ್ರಿಯಃ।।
“ಹಾಗೆಯೇ ಆಗಲಿ” ಎಂದು ಹೇಳಿದ ಮಘವತನು ತ್ರಿದಶರೆಲ್ಲರನ್ನೂ ಸೇರಿಕೊಂಡು ಹೊರಟನು. ಅವರು ವನದಲ್ಲಿ ಸ್ತ್ರೀಯರನ್ನು ಕಂಡರು.
01073004a ಕ್ರೀಡಂತೀನಾಂ ತು ಕನ್ಯಾನಾಂ ವನೇ ಚೈತ್ರರಥೋಪಮೇ।
01073004c ವಾಯುಭೂತಃ ಸ ವಸ್ತ್ರಾಣಿ ಸರ್ವಾಣ್ಯೇವ ವ್ಯಮಿಶ್ರಯತ್।।
ಚೈತ್ರರಥನಂತಿರುವ ವನದಲ್ಲಿ ಕನ್ಯೆಯರು ಜಲಕ್ರೀಡೆಯಾಡುತ್ತಿದ್ದರು. ಆಗ ಅವನು ವಾಯು ರೂಪವನ್ನು ತಾಳಿ ಅವರ ವಸ್ತ್ರಗಳನ್ನೆಲ್ಲಾ ಅದಲು ಬದಲು ಮಾಡಿದನು.
01073005a ತತೋ ಜಲಾತ್ಸಮುತ್ತೀರ್ಯ ಕನ್ಯಾಸ್ತಾಃ ಸಹಿತಾಸ್ತದಾ।
01073005c ವಸ್ತ್ರಾಣಿ ಜಗೃಹುಸ್ತಾನಿ ಯಥಾಸನ್ನಾನ್ಯನೇಕಶಃ।।
ಎಲ್ಲರೂ ಒಟ್ಟಿಗೇ ನೀರಿನಿಂದ ಹೊರಬಂದ ಕನ್ಯೆಯರು ಅದಲು ಬದಲಾದ ವಸ್ತ್ರಗಳಲ್ಲಿ ತಮಗೆ ಸಿಕ್ಕ ವಸ್ತ್ರಗಳನ್ನು ಧರಿಸಿಕೊಂಡರು.
01073006a ತತ್ರ ವಾಸೋ ದೇವಯಾನ್ಯಾಃ ಶರ್ಮಿಷ್ಠಾ ಜಗೃಹೇ ತದಾ।
01073006c ವ್ಯತಿಮಿಶ್ರಮಜಾನಂತೀ ದುಹಿತಾ ವೃಷಪರ್ವಣಃ।।
ದೇವಯಾನಿಯ ವಸ್ತ್ರವನ್ನು ವೃಷಪರ್ವಣನ ಮಗಳು ಶರ್ಮಿಷ್ಠೆಯು ಅದು ತನ್ನದಲ್ಲ ಎಂದು ತಿಳಿಯದೇ ಧರಿಸಿಕೊಂಡಳು.
01073007a ತತಸ್ತಯೋರ್ಮಿಥಸ್ತತ್ರ ವಿರೋಧಃ ಸಮಜಾಯತ।
01073007c ದೇವಯಾನ್ಯಾಶ್ಚ ರಾಜೇಂದ್ರ ಶರ್ಮಿಷ್ಠಾಯಾಶ್ಚ ತತ್ಕೃತೇ।।
ರಾಜೇಂದ್ರ! ಈ ರೀತಿ ದೇವಯಾನಿ ಮತ್ತು ಶರ್ಮಿಷ್ಠೆಯರಲ್ಲಿ ಇದೇ ವಿಷಯದ ಕುರಿತು ಮನಸ್ತಾಪ ಮತ್ತು ತಪ್ಪು ತಿಳುವಳಿಕೆಗಳು ಉಂಟಾದವು.
01073008 ದೇವಯಾನ್ಯುವಾಚ।
01073008a ಕಸ್ಮಾದ್ಗೃಹ್ಣಾಸಿ ಮೇ ವಸ್ತ್ರಂ ಶಿಷ್ಯಾ ಭೂತ್ವಾ ಮಮಾಸುರಿ।
01073008c ಸಮುದಾಚಾರಹೀನಾಯಾ ನ ತೇ ಶ್ರೇಯೋ ಭವಿಷ್ಯತಿ।।
ದೇವಯಾನಿಯು ಹೇಳಿದಳು: “ನನ್ನ ಶಿಷ್ಯೆ ಅಸುರಿ ನೀನು ಹೇಗೆ ನನ್ನ ವಸ್ತ್ರವನ್ನು ಧರಿಸಿದ್ದೀಯೆ? ಒಳ್ಳೆಯ ನಡತೆಯನ್ನು ಕಳೆದುಕೊಂಡ ನಿನಗೆ ಎಂದೂ ಶ್ರೇಯಸ್ಸು ಉಂಟಾಗಲಾರದು.”
01073009 ಶರ್ಮಿಷ್ಠೋವಾಚ।
01073009a ಆಸೀನಂ ಚ ಶಯಾನಂ ಚ ಪಿತಾ ತೇ ಪಿತರಂ ಮಮ।
01073009c ಸ್ತೌತಿ ವಂದತಿ ಚಾಭೀಕ್ಷ್ಣಂ ನೀಚೈಃ ಸ್ಥಿತ್ವಾ ವಿನೀತವತ್।।
ಶರ್ಮಿಷ್ಠೆಯು ಹೇಳಿದಳು: “ನನ್ನ ತಂದೆಯು ಕುಳಿತಿರಲಿ ಅಥವಾ ಮಲಗಿರಲಿ, ನಿನ್ನ ತಂದೆಯು ಅವನಿಗಿಂಥ ಕೆಳ ಸ್ಥಾನದಲ್ಲಿ ನಿಂತು ವಿನೀತನಾಗಿ ಶ್ಲಾಘನೀಯವಾಗಿ ಸ್ತುತಿಸುತ್ತಾನೆ.
01073010a ಯಾಚತಸ್ತ್ವಂ ಹಿ ದುಹಿತಾ ಸ್ತುವತಃ ಪ್ರತಿಗೃಹ್ಣತಃ।
01073010c ಸುತಾಹಂ ಸ್ತೂಯಮಾನಸ್ಯ ದದತೋಽಪ್ರತಿಗೃಹ್ಣತಃ।।
ಸ್ತುತಿಸುವ, ಸ್ವೀಕರಿಸುವ, ಬೇಡುವವನ ಮಗಳು ನೀನು. ನಾನು ಸ್ತುತಿಸಲ್ಪಡುವ, ಕೊಡುವ ಮತ್ತು ಏನನ್ನೂ ಸ್ವೀಕರಿಸದೇ ಇರುವವನ ಮಗಳು.
01073011a ಅನಾಯುಧಾ ಸಾಯುಧಾಯಾ ರಿಕ್ತಾ ಕ್ಷುಭ್ಯಸಿ ಭಿಕ್ಷುಕಿ।
01073011c ಲಪ್ಸ್ಯಸೇ ಪ್ರತಿಯೋದ್ಧಾರಂ ನ ಹಿ ತ್ವಾಂ ಗಣಯಾಂಯಹಂ।।
ಭಿಕ್ಷುಕೀ! ಅನಾಯುಧಳಾದ ಮತ್ತು ಯಾರ ಬೆಂಬಲವೂ ಇಲ್ಲದ ನೀನು ನನ್ನ ಮುಂದೆ ಥರಥರಿಸುತ್ತೀಯೆ. ನಿನ್ನ ಸರಿಸಾಟಿಯಾದವಳನ್ನು ಹುಡುಕಿಕೋ. ನಾನು ನಿನ್ನನ್ನು ನನ್ನ ಸರಿಸಾಟಿಯೆಂದು ಪರಿಗಣಿಸುವುದಿಲ್ಲ.””
01073012 ವೈಶಂಪಾಯನ ಉವಾಚ।
01073012a ಸಮುಚ್ಛ್ರಯಂ ದೇವಯಾನೀಂ ಗತಾಂ ಸಕ್ತಾಂ ಚ ವಾಸಸಿ।
01073012c ಶರ್ಮಿಷ್ಠಾ ಪ್ರಾಕ್ಷಿಪತ್ಕೂಪೇ ತತಃ ಸ್ವಪುರಮಾವ್ರಜತ್।।
ವೈಶಂಪಾಯನನು ಹೇಳಿದನು: “ಸಿಟ್ಟಿನಿಂದ ದೇವಯಾನಿಯು ತನ್ನ ಬಟ್ಟೆಗಳನ್ನು ಹರಿಯತೊಡಗಿದಳು. ಶರ್ಮಿಷ್ಠೆಯು ಅವಳನ್ನು ಒಂದು ಬಾವಿಯೊಳಗೆ ದೂಡಿ ತನ್ನ ನಗರಕ್ಕೆ ತೆರಳಿದಳು.
01073013a ಹತೇಯಮಿತಿ ವಿಜ್ಞಾಯ ಶರ್ಮಿಷ್ಠಾ ಪಾಪನಿಶ್ಚಯಾ।
01073013c ಅನವೇಕ್ಷ್ಯ ಯಯೌ ವೇಶ್ಮ ಕ್ರೋಧವೇಗಪರಾಯಣಾ।।
ಪಾಪನಿಶ್ಚಯೆ ಶರ್ಮಿಷ್ಠೆಯು ಅವಳು ತೀರಿಕೊಂಡಳೆಂದು ಯೋಚಿಸುತ್ತಾ, ಕ್ರೋಧವಶಾತ್ ಬಾವಿಯಲ್ಲಿ ಇಣುಕಿ ನೋಡದೇ ತನ್ನ ಮನೆಗೆ ಹೊರಟು ಹೋದಳು.
01073014a ಅಥ ತಂ ದೇಶಮಭ್ಯಾಗಾದ್ಯಯಾತಿರ್ನಹುಷಾತ್ಮಜಃ।
01073014c ಶ್ರಾಂತಯುಗ್ಯಃ ಶ್ರಾಂತಹಯೋ ಮೃಗಲಿಪ್ಸುಃ ಪಿಪಾಸಿತಃ।।
ಇದೇ ಸಮಯದಲ್ಲಿ ನಹುಷಾತ್ಮಜ ಯಯಾತಿಯು ಜಿಂಕೆಯೊಂದನ್ನು ಅರಸುತ್ತಾ ಅಲ್ಲಿಗೆ ಬಂದನು. ಅವನ ಸಾರಥಿಯು ಬಳಲಿದ್ದನು. ಕುದುರೆಗಳು ಬಳಲಿದ್ದವು ಮತ್ತು ಅವನೂ ಕೂಡ ಬಹಳಷ್ಟು ಬಾಯಾರಿದ್ದನು.
01073015a ಸ ನಾಹುಷಃ ಪ್ರೇಕ್ಷಮಾಣ ಉದಪಾನಂ ಗತೋದಕಂ।
01073015c ದದರ್ಶ ಕನ್ಯಾಂ ತಾಂ ತತ್ರ ದೀಪ್ತಾಮಗ್ನಿಶಿಖಾಮಿವ।।
ನಾಹುಷನು ಬತ್ತಿಹೋಗಿದ್ದ ಆ ಬಾವಿಯಲ್ಲಿ ಇಣುಕಿದಾಗ ಅಲ್ಲಿ ಆ ಅಗ್ನಿಶಿಖೆಯಂಥಹ ತೇಜೋಮಯ ಕನ್ಯೆಯನ್ನು ನೋಡಿದನು.
01073016a ತಾಮಪೃಚ್ಛತ್ಸ ದೃಷ್ಟ್ವೈವ ಕನ್ಯಾಮಮರವರ್ಣಿನೀಂ।
01073016c ಸಾಂತ್ವಯಿತ್ವಾ ನೃಪಶ್ರೇಷ್ಠಃ ಸಾಮ್ನಾ ಪರಮವಲ್ಗುನಾ।।
ಆ ದೇವಕನ್ಯೆಯಂಥ ರೂಪವತಿಯನ್ನು ನೋಡಿದ ನೃಪಶ್ರೇಷ್ಠನು ಸಂತಯಿಸುತ್ತಾ, ಅತ್ಯಂತ ಮೃದು ಮಾತುಗಳಿಂದ ಕೇಳಿದನು:
01073017a ಕಾ ತ್ವಂ ತಾಮ್ರನಖೀ ಶ್ಯಾಮಾ ಸುಮೃಷ್ಟಮಣಿಕುಂಡಲಾ।
01073017c ದೀರ್ಘಂ ಧ್ಯಾಯಸಿ ಚಾತ್ಯರ್ಥಂ ಕಸ್ಮಾಚ್ಶ್ವಸಿಷಿ ಚಾತುರಾ।।
“ತಾಮ್ರಬಣ್ಣದ ಉಗುರುಗಳು ಮತ್ತು ಸುಂದರ ಮಣಿಕುಂಡಲಗಳನ್ನು ಹೊಂದಿರುವ ಶ್ಯಾಮ ಸುಂದರಿ ಯಾರು ನೀನು? ಯಾವ ಕಾರಣದಿಂದಾಗಿ ನೀನು ಈ ರೀತಿ ನಿಟ್ಟುಸಿರು ಬಿಡುತ್ತಾ ವ್ಯಾಕುಲಳಾಗಿದ್ದೀಯೆ?
01073018a ಕಥಂ ಚ ಪತಿತಾಸ್ಯಸ್ಮನ್ಕೂಪೇ ವೀರುತ್ತೃಣಾವೃತೇ।
01073018c ದುಹಿತಾ ಚೈವ ಕಸ್ಯ ತ್ವಂ ವದ ಸರ್ವಂ ಸುಮಧ್ಯಮೇ।।
ಹುಲ್ಲು ಗಿಡಗಂಟಿಗಳಿಂದ ತುಂಬಿದ ಈ ಬಾವಿಯಲ್ಲಿ ಹೇಗೆ ಬಿದ್ದೆ? ಸುಮಧ್ಯಮೇ! ನೀನು ಯಾರ ಮಗಳು? ಎಲ್ಲವನ್ನೂ ಸವಿಸ್ತಾರವಾಗಿ ಹೇಳು.”
01073019 ದೇವಯಾನ್ಯುವಾಚ।
01073019a ಯೋಽಸೌ ದೇವೈರ್ಹತಾನ್ದೈತ್ಯಾನುತ್ಥಾಪಯತಿ ವಿದ್ಯಯಾ।
01073019c ತಸ್ಯ ಶುಕ್ರಸ್ಯ ಕನ್ಯಾಹಂ ಸ ಮಾಂ ನೂನಂ ನ ಬುಧ್ಯತೇ।।
ದೇವಯಾನಿಯು ಹೇಳಿದಳು: “ದೇವತೆಗಳಿಂದ ಹತರಾಗಿ ಬಿದ್ದ ದೈತ್ಯರನ್ನು ತನ್ನ ವಿದ್ಯೆಯಿಂದ ಮೇಲೆಬ್ಬಿಸುವ ಶುಕ್ರನ ಮಗಳು ನಾನು. ಆದರೆ ಅವನಿಗೆ ನಾನು ಈ ಸ್ಥಿತಿಯಲ್ಲಿರುವುದು ತಿಳಿದಿಲ್ಲ.
01073020a ಏಷ ಮೇ ದಕ್ಷಿಣೋ ರಾಜನ್ಪಾಣಿಸ್ತಾಮ್ರನಖಾಂಗುಲಿಃ।
01073020c ಸಮುದ್ಧರ ಗೃಹೀತ್ವಾ ಮಾಂ ಕುಲೀನಸ್ತ್ವಂ ಹಿ ಮೇ ಮತಃ।।
ರಾಜನ್! ತಾಮ್ರನಖಾಂಗುಲಿಗಳನ್ನು ಹೊಂದಿದ ಈ ನನ್ನ ಬಲಗೈಯನ್ನು ಹಿಡಿದು ನನ್ನನ್ನು ಮೇಲೆತ್ತು. ನೀನು ಒಳ್ಳೆಯ ಕುಲದವನು ಎಂದು ನನಗೆ ತೋರುತ್ತಿದೆ.
01073021a ಜಾನಾಮಿ ಹಿ ತ್ವಾಂ ಸಂಶಾಂತಂ ವೀರ್ಯವಂತಂ ಯಶಸ್ವಿನಂ।
01073021c ತಸ್ಮಾನ್ಮಾಂ ಪತಿತಾಮಸ್ಮಾತ್ಕೂಪಾದುದ್ಧರ್ತುಮರ್ಹಸಿ।।
ನೀನು ಶಾಂತಸ್ವಭಾವದವನೂ, ವೀರವಂತನೂ, ಯಶಸ್ವಿಯೂ ಎಂದು ತಿಳಿಯುತ್ತೇನೆ. ಈ ಬಾವಿಯಲ್ಲಿ ಬಿದ್ದಿರುವ ನನ್ನನ್ನು ನೀನು ಮೇಲೆತ್ತಬೇಕು.””
01073022 ವೈಶಂಪಾಯನ ಉವಾಚ।
01073022a ತಾಮಥ ಬ್ರಾಹ್ಮಣೀಂ ಸ್ತ್ರೀಂ ಚ ವಿಜ್ಞಾಯ ನಹುಷಾತ್ಮಜಃ।
01073022c ಗೃಹೀತ್ವಾ ದಕ್ಷಿಣೇ ಪಾಣಾವುಜ್ಜಹಾರ ತತೋಽವಟಾತ್।।
ವೈಶಂಪಾಯನನು ಹೇಳಿದನು: “ಅವಳು ಬ್ರಾಹ್ಮಣ ಸ್ತ್ರೀಯೆಂದು ತಿಳಿದ ನಹುಷಾತ್ಮಜನು ಅವಳ ಬಲಗೈಯನ್ನು ಹಿಡಿದು ಅವಳನ್ನು ಆ ಬಾವಿಯಿಂದ ಮೇಲೆತ್ತಿದನು.
01073023a ಉದ್ಧೃತ್ಯ ಚೈನಾಂ ತರಸಾ ತಸ್ಮಾತ್ಕೂಪಾನ್ನರಾಧಿಪಃ।
01073023c ಆಮಂತ್ರಯಿತ್ವಾ ಸುಶ್ರೋಣೀಂ ಯಯಾತಿಃ ಸ್ವಪುರಂ ಯಯೌ।।
ಬೇಗನೆ ಅವಳನ್ನು ಆ ಬಾವಿಯಿಂದ ಮೇಲಕ್ಕೆಳದ ನರಾಧಿಪ ಯಯಾತಿಯು ಆ ಸುಶ್ರೋಣಿಯಿಂದ ಬೀಳ್ಕೊಂಡು ತನ್ನ ನಗರಕ್ಕೆ ತೆರಳಿದನು.
01073024 ದೇವಯಾನ್ಯುವಾಚ।
01073024a ತ್ವರಿತಂ ಘೂರ್ಣಿಕೇ ಗಚ್ಛ ಸರ್ವಮಾಚಕ್ಷ್ವ ಮೇ ಪಿತುಃ।
01073024c ನೇದಾನೀಂ ಹಿ ಪ್ರವೇಕ್ಯಾಮಿ ನಗರಂ ವೃಷಪರ್ವಣಃ।।
ದೇವಯಾನಿಯು ಹೇಳಿದಳು: “ಘೂರ್ಣಿಕೇ! ಬೇಗನೆ ಹೋಗಿ ನನ್ನ ತಂದೆಗೆ ನಡೆದುದೆಲ್ಲವನ್ನೂ ವರದಿಮಾಡು. ಇಂದಿನಿಂದ ನಾನು ವೃಷಪರ್ವನ ನಗರವನ್ನು ಪ್ರವೇಶಿಸಲು ನಿರಾಕರಿಸುತ್ತೇನೆ.””
01073025 ವೈಶಂಪಾಯನ ಉವಾಚ 01073025a ಸಾ ತು ವೈ ತ್ವರಿತಂ ಗತ್ವಾ ಘೂರ್ಣಿಕಾಸುರಮಂದಿರಂ।
01073025c ದೃಷ್ಟ್ವಾ ಕಾವ್ಯಮುವಾಚೇದಂ ಸಂಭ್ರಮಾವಿಷ್ಟಚೇತನಾ।।
ವೈಶಂಪಾಯನನು ಹೇಳಿದನು: “ಘೂರ್ಣಿಕೆಯು ತ್ವರೆಮಾಡಿ ಅಸುರಮಂದಿರವನ್ನು ಪ್ರವೇಶಿಸಿ, ಅಲ್ಲಿ ಕಾವ್ಯನನ್ನು ಕಂಡು, ದುಗುಡದಿಂದ ಈ ರೀತಿ ಹೇಳಿದಳು:
01073026a ಆಚಕ್ಷೇ ತೇ ಮಹಾಪ್ರಾಜ್ಞ ದೇವಯಾನೀ ವನೇ ಹತಾ।
01073026c ಶರ್ಮಿಷ್ಠಯಾ ಮಹಾಭಾಗ ದುಹಿತ್ರಾ ವೃಷಪರ್ವಣಃ।।
“ಮಹಾಪ್ರಾಜ್ನ! ಮಹಾಭಾಗ! ನಾನು ಹೇಳುವುದನ್ನು ಕೇಳು. ವೃಷಪರ್ವನ ಮಗಳು ಶರ್ಮಿಷ್ಠೆಯು ವನದಲ್ಲಿ ದೇವಯಾನಿಯನ್ನು ಹೊಡೆದಳು.”
01073027a ಶ್ರುತ್ವಾ ದುಹಿತರಂ ಕಾವ್ಯಸ್ತತ್ರ ಶರ್ಮಿಷ್ಠಯಾ ಹತಾಂ।
01073027c ತ್ವರಯಾ ನಿರ್ಯಯೌ ದುಃಖಾನ್ಮಾರ್ಗಮಾಣಃ ಸುತಾಂ ವನೇ।।
ತನ್ನ ಮಗಳನ್ನು ಶರ್ಮಿಷ್ಠೆಯು ಹೊಡೆದಳು ಎಂದು ಕೇಳಿ ದುಃಖಿತನಾದ ಕಾವ್ಯನು ತಕ್ಷಣವೇ ಮಗಳನ್ನು ಹುಡುಕುತ್ತಾ ವನಕ್ಕೆ ಹೋದನು.
01073028a ದೃಷ್ಟ್ವಾ ದುಹಿತರಂ ಕಾವ್ಯೋ ದೇವಯಾನೀಂ ತತೋ ವನೇ।
01073028c ಬಾಹುಭ್ಯಾಂ ಸಂಪರಿಷ್ವಜ್ಯ ದುಃಖಿತೋ ವಾಕ್ಯಮಬ್ರವೀತ್।।
ವನದಲ್ಲಿ ಮಗಳು ದೇವಯಾನಿಯನ್ನು ಕಂಡ ಕಾವ್ಯನು ತನ್ನ ಬಾಹುಗಳಿಂದ ಅವಳನ್ನು ಬಿಗಿದಪ್ಪಿ, ದುಃಖಭರಿತನಾಗಿ ಈ ಮಾತುಗಳನ್ನಾಡಿದನು:
01073029a ಆತ್ಮದೋಷೈರ್ನಿಯಚ್ಛಂತಿ ಸರ್ವೇ ದುಃಖಸುಖೇ ಜನಾಃ।
01073029c ಮನ್ಯೇ ದುಶ್ಚರಿತಂ ತೇಽಸ್ತಿ ಯಸ್ಯೇಯಂ ನಿಷ್ಕೃತಿಃ ಕೃತಾ।।
“ತಾವೇ ಮಾಡಿದ ತಪ್ಪುಗಳಿಂದಾಗಿ ಜನರು ಸುಖ-ದುಃಖಗಳೆಲ್ಲವನ್ನೂ ಅನುಭವಿಸುತ್ತಾರೆ. ಈ ಅವಸ್ಥೆಯನ್ನು ಪಡೆದಿರುವ ನೀನೂ ಕೂಡ ಯಾವುದೋ ಪಾಪವನ್ನು ಮಾಡಿರಬೇಕು ಎಂದು ನನಗನ್ನಿಸುತ್ತದೆ.”
01073030 ದೇವಯಾನ್ಯುವಾಚ।
01073030a ನಿಷ್ಕೃತಿರ್ಮೇಽಸ್ತು ವಾ ಮಾಸ್ತು ಶೃಣುಷ್ವಾವಹಿತೋ ಮಮ।
01073030c ಶರ್ಮಿಷ್ಠಯಾ ಯದುಕ್ತಾಸ್ಮಿ ದುಹಿತ್ರಾ ವೃಷಪರ್ವಣಃ।
01073030e ಸತ್ಯಂ ಕಿಲೈತತ್ಸಾ ಪ್ರಾಹ ದೈತ್ಯಾನಾಮಸಿ ಗಾಯನಃ।।
ದೇವಯಾನಿಯು ಹೇಳಿದಳು: “ನನ್ನ ತಪ್ಪಿರಬಹುದು ಅಥವಾ ಇಲ್ಲದಿರಬಹುದು. ನಾನು ಹೇಳುವುದನ್ನು ಗಮನವಿಟ್ಟು ಕೇಳು. ವೃಷಪರ್ವನ ಮಗಳು ಶರ್ಮಿಷ್ಠೆಯು ಸತ್ಯವನ್ನೇ ನುಡಿದಿರಬಹುದು. ನೀನು ದೈತ್ಯರ ಹೊಗಳು ಭಟ್ಟನೆಂದು ಅವಳು ಹೇಳಿದಳು.
01073031a ಏವಂ ಹಿ ಮೇ ಕಥಯತಿ ಶರ್ಮಿಷ್ಠಾ ವಾರ್ಷಪರ್ವಣೀ।
01073031c ವಚನಂ ತೀಕ್ಷ್ಣಪರುಷಂ ಕ್ರೋಧರಕ್ತೇಕ್ಷಣಾ ಭೃಶಂ।।
ವಾರ್ಷಪರ್ವಣೀ ಶರ್ಮಿಷ್ಠೆಯು ಕಣ್ಣುಗಳನ್ನು ಕೆಂಪುಮಾಡಿ ಕ್ರೋಧದಿಂದ ಈ ರೀತಿ ನೋಯಿಸುವ ತೀಕ್ಷ್ಣ ಮಾತುಗಳನ್ನಾಡಿದಳು.
01073032a ಸ್ತುವತೋ ದುಹಿತಾ ಹಿ ತ್ವಂ ಯಾಚತಃ ಪ್ರತಿಗೃಹ್ಣತಃ।
01073032c ಸುತಾಹಂ ಸ್ತೂಯಮಾನಸ್ಯ ದದತೋಽಪ್ರತಿಗೃಹ್ಣತಃ।।
“ಬೇಡುವ ಮತ್ತು ತೆಗೆದುಕೊಳ್ಳುವ ಹೊಗಳು ಭಟ್ಟನ ಮಗಳು ನೀನು. ನಾನಾದರೂ ಹೊಗಳಿಸಿಕೊಳ್ಳುವವನ, ಕೊಡುವವನ ಮತ್ತು ಬೇರೆಯವರಿಂದ ಏನನ್ನೂ ಸ್ವೀಕರಿಸದೇ ಇರುವವನ ಮಗಳು!”
01073033a ಇತಿ ಮಾಮಾಹ ಶರ್ಮಿಷ್ಠಾ ದುಹಿತಾ ವೃಷಪರ್ವಣಃ।
01073033c ಕ್ರೋಧಸಂರಕ್ತನಯನಾ ದರ್ಪಪೂರ್ಣಾ ಪುನಃ ಪುನಃ।।
ವೃಷಪರ್ವನ ಮಗಳು ಶರ್ಮಿಷ್ಠೆಯು ಸಿಟ್ಟಿನಿಂದ ಕಣ್ಣನ್ನು ಕೆಂಪುಮಾಡಿಕೊಂಡು ಸೊಕ್ಕಿನಿಂದ ಉಬ್ಬಿ ಮೇಲಿಂದ ಮೇಲೆ ಇದೇ ಮಾತುಗಳನ್ನಾಡಿದಳು.
01073034a ಯದ್ಯಹಂ ಸ್ತುವತಸ್ತಾತ ದುಹಿತಾ ಪ್ರತಿಗೃಹ್ಣತಃ।
01073034c ಪ್ರಸಾದಯಿಷ್ಯೇ ಶರ್ಮಿಷ್ಠಾಮಿತ್ಯುಕ್ತಾ ಹಿ ಸಖೀ ಮಯಾ।।
ಒಂದುವೇಳೆ ನಾನು ಹೊಗಳುಭಟ್ಟನ, ಬೇಡುವವನ ಮತ್ತು ತೆಗೆದುಕೊಳ್ಳುವನ ಮಗಳೇ ಆಗಿದ್ದರೆ ನಾನು ಅವಳಿಗಿಷ್ಟವಾದುದನ್ನು ಮಾಡುತ್ತೇನೆಂದು ನನ್ನ ಸಖಿ ಶರ್ಮಿಷ್ಠೆಗೆ ಹೇಳಿದ್ದೇನೆ.”
01073035 ಶುಕ್ರ ಉವಾಚ।
01073035a ಸ್ತುವತೋ ದುಹಿತಾ ನ ತ್ವಂ ಭದ್ರೇ ನ ಪ್ರತಿಗೃಹ್ಣತಃ।
01073035c ಅಸ್ತೋತುಃ ಸ್ತೂಯಮಾನಸ್ಯ ದುಹಿತಾ ದೇವಯಾನ್ಯಸಿ।।
ಶುಕ್ರನು ಹೇಳಿದನು: “ಭದ್ರೇ! ದೇವಯಾನಿ! ನೀನು ಹೊಗಳು ಭಟ್ಟನ ಮಗಳಲ್ಲ! ಬೇಡುವವನ ಮತ್ತು ತೆಗೆದುಕೊಳ್ಳುವವನ ಮಗಳೂ ಅಲ್ಲ! ಎಲ್ಲರಿಂದ ಸ್ತುತಿಸಲ್ಪಡುವ ಮತ್ತು ಯಾರ ಸ್ತುತಿಯನ್ನೂ ಮಾಡದವನ ಮಗಳು ನೀನು.
01073036a ವೃಷಪರ್ವೈವ ತದ್ವೇದ ಶಕ್ರೋ ರಾಜಾ ಚ ನಾಹುಷಃ।
01073036c ಅಚಿಂತ್ಯಂ ಬ್ರಹ್ಮ ನಿರ್ದ್ವಂದ್ವಮೈಶ್ವರಂ ಹಿ ಬಲಂ ಮಮ।।
ಅಚಿಂತ್ಯನೂ ನಿರ್ದ್ವಂದ್ಯನೂ ಆದ ಈಶ್ವರ ಬ್ರಹ್ಮನೇ ನನ್ನ ಬಲವೆಂದು ವೃಷಪರ್ವನೂ, ಇಂದ್ರನೂ, ಮತ್ತು ರಾಜ ನಹುಷನೂ ಅರಿತುಕೊಂಡಿದ್ದಾರೆ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಯಯಾತ್ಯುಪಾಖ್ಯಾನೇ ತ್ರಿಸಪ್ತತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಯಯಾತಿ-ಉಪಾಖ್ಯಾನದಲ್ಲಿ ಎಪ್ಪತ್ತ್ಮೂರನೆಯ ಅಧ್ಯಾಯವು.