072 ಯಯಾತ್ಯುಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಸಂಭವ ಪರ್ವ

ಅಧ್ಯಾಯ 72

ಸಾರ

ದೇವಯಾನಿಯು ಕಚನನ್ನು ಮದುವೆಯಾಗಲು ಕೇಳಿಕೊಳ್ಳಲು ಕಚನು ನಿರಾಕರಿಸುವುದು (1-15). ದೇವಯಾನಿಯು ಕಚನಿಗೆ ಶಾಪವನ್ನಿತ್ತುದುದು, ಕಚನು ಮರುಶಾಪವನ್ನಿತ್ತಿದುದು (16-23).

01072001 ವೈಶಂಪಾಯನ ಉವಾಚ।
01072001a ಸಮಾವೃತ್ತವ್ರತಂ ತಂ ತು ವಿಸೃಷ್ಟಂ ಗುರುಣಾ ತದಾ।
01072001c ಪ್ರಸ್ಥಿತಂ ತ್ರಿದಶಾವಾಸಂ ದೇವಯಾನ್ಯಬ್ರವೀದಿದಂ।।

ವೈಶಂಪಾಯನನು ಹೇಳಿದನು: “ವ್ರತದ ಅವಧಿಯು ಮುಗಿದು, ಗುರುವಿನಿಂದ ಅಪ್ಪಣೆಯನ್ನು ಪಡೆದು ಅವನು ಸ್ವರ್ಗಲೋಕಕ್ಕೆ ಹೊರಡುವಾಗ ದೇವಯಾನಿಯು ಹೇಳಿದಳು:

01072002a ಋಷೇರಂಗಿರಸಃ ಪೌತ್ರ ವೃತ್ತೇನಾಭಿಜನೇನ ಚ।
01072002c ಭ್ರಾಜಸೇ ವಿದ್ಯಯಾ ಚೈವ ತಪಸಾ ಚ ದಮೇನ ಚ।।

“ಋಷಿ ಅಂಗಿರಸನ ಮೊಮ್ಮಗನೇ! ನೀನು ನಿನ್ನ ನಡವಳಿಕೆಯಲ್ಲಿ, ವಿದ್ಯೆಯಲ್ಲಿ, ತಪಸ್ಸಿನಲ್ಲಿ, ದಮದಲ್ಲಿ ಎಲ್ಲರಿಗಿಂತ ಹೆಚ್ಚು ಬೆಳಗುತ್ತಿದ್ದೀಯೆ.

01072003a ಋಷಿರ್ಯಥಾಂಗಿರಾ ಮಾನ್ಯಃ ಪಿತುರ್ಮಮ ಮಹಾಯಶಾಃ।
01072003c ತಥಾ ಮಾನ್ಯಶ್ಚ ಪೂಜ್ಯಶ್ಚ ಭೂಯೋ ಮಮ ಬೃಹಸ್ಪತಿಃ।।

ನನ್ನ ತಂದೆಯು ಮಹಾಯಶ ಋಷಿ ಅಂಗಿರಸನನ್ನು ಹೇಗೆ ಗೌರವಿಸುತ್ತಾನೋ ಹಾಗೆ ನಾನೂ ಕೂಡ ಬೃಹಸ್ಪತಿಯನ್ನು ಗೌರವಿಸುತ್ತೇನೆ ಮತ್ತು ಪೂಜಿಸುತ್ತೇನೆ.

01072004a ಏವಂ ಜ್ಞಾತ್ವಾ ವಿಜಾನೀಹಿ ಯದ್ಬ್ರವೀಮಿ ತಪೋಧನ।
01072004c ವ್ರತಸ್ಥೇ ನಿಯಮೋಪೇತೇ ಯಥಾ ವರ್ತಾಮ್ಯಹಂ ತ್ವಯಿ।।

ತಪೋಧನ! ಇದನ್ನು ತಿಳಿದ ನೀನು ನಾನು ಈಗ ಹೇಳುವುದನ್ನು ಕೇಳು. ನೀನು ವ್ರತನಿಯಮಗಳಲ್ಲಿರುವಾಗ ನಾನು ನಿನ್ನೊಂದಿಗೆ ಹೇಗೆ ವರ್ತಿಸುತ್ತಿದ್ದೆ ಎನ್ನುವುದು ನಿನಗೆ ತಿಳಿದೇ ಇದೆ.

01072005a ಸ ಸಮಾವೃತ್ತವಿದ್ಯೋ ಮಾಂ ಭಕ್ತಾಂ ಭಜಿತುಮರ್ಹಸಿ।
01072005c ಗೃಹಾಣ ಪಾಣಿಂ ವಿಧಿವನ್ಮಮ ಮಂತ್ರಪುರಸ್ಕೃತಂ।।

ಈಗ ನಿನ್ನ ಕಲಿಕೆಯು ಮುಗಿದಿದೆ. ಆದರಿಂದ ನಾನು ನಿನ್ನನ್ನು ಪ್ರೀತಿಸುವ ಹಾಗೆ ನೀನೂ ನನ್ನನ್ನು ಪ್ರೀತಿಸು. ಮಂತ್ರ ಪುರಸ್ಕರವಾಗಿ ವಿಧಿವತ್ತಾಗಿ ನನ್ನ ಪಾಣಿಗ್ರಹಣ ಮಾಡು.”

01072006 ಕಚ ಉವಾಚ।
01072006a ಪೂಜ್ಯೋ ಮಾನ್ಯಶ್ಚ ಭಗವಾನ್ಯಥಾ ತವ ಪಿತಾ ಮಮ।
01072006c ತಥಾ ತ್ವಮನವದ್ಯಾಂಗಿ ಪೂಜನೀಯತರಾ ಮಮ।।

ಕಚನು ಹೇಳಿದನು: “ನಿನ್ನ ತಂದೆಯು ಹೇಗೋ ಹಾಗೆ ನೀನೂ ಕೂಡ ನನ್ನ ಪೂಜೆ ಮತ್ತು ಗೌರವಕ್ಕೆ ಪಾತ್ರಳು. ಅನವದ್ಯಾಂಗೀ! ನೀನು ನನಗೆ ಇನ್ನೂ ಹೆಚ್ಚು ಪೂಜನೀಯಳಾಗಿದ್ದೀಯೆ.

01072007a ಆತ್ಮಪ್ರಾಣೈಃ ಪ್ರಿಯತಮಾ ಭಾರ್ಗವಸ್ಯ ಮಹಾತ್ಮನಃ।
01072007c ತ್ವಂ ಭದ್ರೇ ಧರ್ಮತಃ ಪೂಜ್ಯಾ ಗುರುಪುತ್ರೀ ಸದಾ ಮಮ।।

ನೀನು ಮಹಾತ್ಮ ಭಾರ್ಗವನಿಗೆ ಅವನ ಪ್ರಾಣಕ್ಕಿಂತಲೂ ಪ್ರಿಯೆಯಾಗಿದ್ದೀಯೆ. ಭದ್ರೇ! ಧರ್ಮದ ಪ್ರಕಾರ ನಾನು ಗುರುಪುತ್ರಿಯಾದ ನಿನ್ನನ್ನು ಸದಾ ಪೂಜಿಸಬೇಕು.

01072008a ಯಥಾ ಮಮ ಗುರುರ್ನಿತ್ಯಂ ಮಾನ್ಯಃ ಶುಕ್ರಃ ಪಿತಾ ತವ।
01072008c ದೇವಯಾನಿ ತಥೈವ ತ್ವಂ ನೈವಂ ಮಾಂ ವಕ್ತುಮರ್ಹಸಿ।।

ನಿನ್ನ ತಂದೆ ಮತ್ತು ನನ್ನ ಗುರು ಶುಕ್ರನನ್ನು ನಾನು ಹೇಗೆ ನಿತ್ಯವೂ ಗೌರವಿಸುತ್ತೇನೋ ಅದೇರೀತಿ ನೀನೂ ಇರುವೆ. ಆದ್ದರಿಂದ, ದೇವಯಾನಿ! ಈ ತರಹದ ಮಾತುಗಳನ್ನು ನೀನು ನನ್ನಲ್ಲಿ ಹೇಳುವುದು ಸರಿಯಲ್ಲ.”

01072009 ದೇವಯಾನ್ಯುವಾಚ।
01072009a ಗುರುಪುತ್ರಸ್ಯ ಪುತ್ರೋ ವೈ ನ ತು ತ್ವಮಸಿ ಮೇ ಪಿತುಃ।
01072009c ತಸ್ಮಾನ್ಮಾನ್ಯಶ್ಚ ಪೂಜ್ಯಶ್ಚ ಮಮಾಪಿ ತ್ವಂ ದ್ವಿಜೋತ್ತಮ।।

ದೇವಯಾನಿಯು ಹೇಳಿದಳು: “ನೀನು ನನ್ನ ತಂದೆಯ ಗುರುಪುತ್ರನ ಮಗನೇ ಹೊರತು ಅವನ ಮಗನಲ್ಲ. ಹೀಗಾಗಿ, ದ್ವಿಜೋತ್ತಮ! ನಾನೂ ಕೂಡ ನಿನ್ನನ್ನು ಗೌರವಿಸಬೇಕು, ಪೂಜಿಸಬೇಕು.

01072010a ಅಸುರೈರ್ಹನ್ಯಮಾನೇ ಚ ಕಚ ತ್ವಯಿ ಪುನಃ ಪುನಃ।
01072010c ತದಾ ಪ್ರಭೃತಿ ಯಾ ಪ್ರೀತಿಸ್ತಾಂ ತ್ವಮೇವ ಸ್ಮರಸ್ವ ಮೇ।।

ನಿನ್ನನ್ನು ದಾನವರು ಪುನಃ ಪುನಃ ಕೊಲ್ಲುತ್ತಿದ್ದಾಗ ನಿನ್ನಮೇಲೆ ನಾನು ತೋರಿಸಿದ ಮತ್ತು ಎಂದೂ ತೋರಿಸುತ್ತಿದ್ದ ಪ್ರೀತಿಯನ್ನು ನೆನಪಿಸಿಕೋ.

01072011a ಸೌಹಾರ್ದೇ ಚಾನುರಾಗೇ ಚ ವೇತ್ಥ ಮೇ ಭಕ್ತಿಮುತ್ತಮಾಂ।
01072011c ನ ಮಾಮರ್ಹಸಿ ಧರ್ಮಜ್ಞ ತ್ಯಕ್ತುಂ ಭಕ್ತಾಮನಾಗಸಂ।।

ಧರ್ಮಜ್ಞ! ಸೌಹಾರ್ದತೆಯಿಂದ, ಅನುರಾಗದಿಂದ ಅನುತ್ತಮ ಭಕ್ತಿಯಿಂದ ನಿನ್ನನ್ನು ಪ್ರೀತಿಸುವ ನನ್ನನ್ನು ತ್ಯಜಿಸುವುದು ಸರಿಯಲ್ಲ.”

01072012 ಕಚ ಉವಾಚ।
01072012a ಅನಿಯೋಜ್ಯೇ ನಿಯೋಗೇ ಮಾಂ ನಿಯುನಕ್ಷಿ ಶುಭವ್ರತೇ।
01072012c ಪ್ರಸೀದ ಸುಭ್ರು ತ್ವಂ ಮಹ್ಯಂ ಗುರೋರ್ಗುರುತರೀ ಶುಭೇ।।

ಕಚನು ಹೇಳಿದನು: “ಶುಭವ್ರತೇ! ಸುಭ್ರು! ಶುಭೇ! ಒತ್ತಾಯ ಮಾಡಬಾರದುದಕ್ಕೆ ಒತ್ತಾಯ ಪಡಿಸಬೇಡ. ಕರುಣೆ ತೋರು. ನೀನು ನನಗೆ ನನ್ನ ಗುರುವಿಗಿಂತಲೂ ಹೆಚ್ಚು.

01072013a ಯತ್ರೋಷಿತಂ ವಿಶಾಲಾಕ್ಷಿ ತ್ವಯಾ ಚಂದ್ರನಿಭಾನನೇ।
01072013c ತತ್ರಾಹಮುಷಿತೋ ಭದ್ರೇ ಕುಕ್ಷೌ ಕಾವ್ಯಸ್ಯ ಭಾಮಿನಿ।।

ವಿಶಾಲಾಕ್ಷೀ! ಚಂದ್ರನಿಭಾನನೇ! ಭಾಮಿನೀ! ಭದ್ರೇ! ನೀನು ವಾಸಿಸುತ್ತಿದ್ದ ಕಾವ್ಯನ ಹೊಟ್ಟೆಯಲ್ಲಿ ನಾನೂ ಕೂಡ ವಾಸಿಸಿದ್ದೆ.

01072014a ಭಗಿನೀ ಧರ್ಮತೋ ಮೇ ತ್ವಂ ಮೈವಂ ವೋಚಃ ಶುಭಾನನೇ।
01072014c ಸುಖಮಸ್ಮ್ಯುಷಿತೋ ಭದ್ರೇ ನ ಮನ್ಯುರ್ವಿದ್ಯತೇ ಮಮ।।

ಧಾರ್ಮಿಕವಾಗಿ ನೀನು ನನ್ನ ಸಹೋದರಿ. ಶುಭಾನನೇ! ಈ ರೀತಿ ಹೇಳಬೇಡ. ನಾನು ಇಲ್ಲಿ ಸಂತೋಷದಿಂದ ಉಳಿದೆ. ಇಲ್ಲಿ ನಾನು ಸಮಯವನ್ನು ಅತ್ಯಂತ ಸುಖದಿಂದ ಕಳೆದೆ. ನನಗೆ ನಿನ್ನಲ್ಲಿ ಯಾವುದೇ ರೀತಿಯ ಮನಸ್ತಾಪವಿಲ್ಲ.

01072015a ಆಪೃಚ್ಛೇ ತ್ವಾಂ ಗಮಿಷ್ಯಾಮಿ ಶಿವಮಾಶಂಸ ಮೇ ಪಥಿ।
01072015c ಅವಿರೋಧೇನ ಧರ್ಮಸ್ಯ ಸ್ಮರ್ತವ್ಯೋಽಸ್ಮಿ ಕಥಾಂತರೇ।
01072015e ಅಪ್ರಮತ್ತೋತ್ಥಿತಾ ನಿತ್ಯಮಾರಾಧಯ ಗುರುಂ ಮಮ।।

ನನ್ನ ದಾರಿಯು ಮಂಗಳಕರವಾಗಿರಲಿ ಎಂದು ನಿನ್ನಿಂದ ಬೀಳ್ಕೊಡುಗೆಯನ್ನು ಕೇಳುತ್ತಿದ್ದೇನೆ. ಧರ್ಮಕ್ಕೆ ಚ್ಯುತಿ ಬಾರದ ಹಾಗೆ ನಡೆದುಕೊಂಡ ನನ್ನನ್ನು ಯಾವಾಗಲಾದರೊಮ್ಮೆ ನೆನಪಿಸಿಕೊಳ್ಳುತ್ತಿರು. ನಿತ್ಯವೂ ನನ್ನ ಗುರುವನ್ನು ಆರಾಧಿಸುತ್ತಿರು.”

01072016 ದೇವಯಾನ್ಯುವಾಚ।
01072016a ಯದಿ ಮಾಂ ಧರ್ಮಕಾಮಾರ್ಥೇ ಪ್ರತ್ಯಾಖ್ಯಾಸ್ಯಸಿ ಚೋದಿತಃ।
01072016c ತತಃ ಕಚ ನ ತೇ ವಿದ್ಯಾ ಸಿದ್ಧಿಮೇಷಾ ಗಮಿಷ್ಯತಿ।।

ದೇವಯಾನಿಯು ಹೇಳಿದಳು: “ನಾನು ಕೇಳಿಕೊಂಡಂತೆ ನೀನು ನನ್ನನ್ನು ನಿನ್ನ ಭಾರ್ಯೆಯನ್ನಾಗಿ ಮಾಡಿಕೊಳ್ಳದಿದ್ದರೆ ಕಚ! ನಿನಗೆ ಈ ವಿದ್ಯೆಯು ಸಿದ್ಧಿಯಾಗಲಾರದು!”

01072017 ಕಚ ಉವಾಚ।
01072017a ಗುರುಪುತ್ರೀತಿ ಕೃತ್ವಾಹಂ ಪ್ರತ್ಯಾಚಕ್ಷೇ ನ ದೋಷತಃ।
01072017c ಗುರುಣಾ ಚಾಭ್ಯನುಜ್ಞಾತಃ ಕಾಮಮೇವಂ ಶಪಸ್ವ ಮಾಂ।।

ಕಚನು ಹೇಳಿದನು: “ನೀನು ಗುರುಪುತ್ರಿಯೆಂದು ಮಾತ್ರ ನಾನು ನಿನ್ನ ಬೇಡಿಕೆಯನ್ನು ಪೂರೈಸುತ್ತಿಲ್ಲ. ನಿನ್ನಲ್ಲಿದ್ದ ಯಾವ ದೋಷದ ಕಾರಣದಿಂದಲ್ಲ. ಗುರುವಿನಿಂದಲೂ ನನಗೆ ಈ ರೀತಿಯ ಅನುಜ್ಞೆಯಾಗಲಿಲ್ಲ. ನಿನಗೆ ಬೇಕೆನಿಸಿದರೆ ನನ್ನನ್ನು ಶಪಿಸು.

01072018a ಆರ್ಷಂ ಧರ್ಮಂ ಬ್ರುವಾಣೋಽಹಂ ದೇವಯಾನಿ ಯಥಾ ತ್ವಯಾ।
01072018c ಶಪ್ತೋ ನಾರ್ಹೋಽಸ್ಮಿ ಶಾಪಸ್ಯ ಕಾಮತೋಽದ್ಯ ನ ಧರ್ಮತಃ।।

ದೇವಯಾನಿ! ನೀನು ಋಷಿಧರ್ಮವನ್ನು ಪಾಲಿಸಬೇಕೆಂದು ನಾನು ನಿನಗೆ ಹೇಳಿದ್ದೇನೆ. ನಿನ್ನ ಈ ಶಾಪಕ್ಕೆ ನಾನು ಅರ್ಹನಲ್ಲ. ನೀನು ಧರ್ಮದಿಂದಲ್ಲ, ಕಾಮದಿಂದ ನನಗೆ ಶಾಪವನ್ನಿತ್ತಿದ್ದೀಯೆ.

01072019a ತಸ್ಮಾದ್ಭವತ್ಯಾ ಯಃ ಕಾಮೋ ನ ತಥಾ ಸ ಭವಿಷ್ಯತಿ।
01072019c ಋಷಿಪುತ್ರೋ ನ ತೇ ಕಶ್ಚಿಜ್ಜಾತು ಪಾಣಿಂ ಗ್ರಹೀಷ್ಯತಿ।।

ಆದರೆ ನಿನ್ನ ಈ ಆಸೆಯು ಎಂದೂ ಪೂರೈಸುವುದಿಲ್ಲ. ಯಾವ ಋಷಿಪುತ್ರನೂ ನಿನ್ನ ಪಾಣಿಗ್ರಹಣ ಮಾಡಿಕೊಳ್ಳುವುದಿಲ್ಲ.

01072020a ಫಲಿಷ್ಯತಿ ನ ತೇ ವಿದ್ಯಾ ಯತ್ತ್ವಂ ಮಾಮಾತ್ಥ ತತ್ತಥಾ।
01072020c ಅಧ್ಯಾಪಯಿಷ್ಯಾಮಿ ತು ಯಂ ತಸ್ಯ ವಿದ್ಯಾ ಫಲಿಷ್ಯತಿ।।

ನೀನು ಹೇಳಿದಹಾಗೆ ನನ್ನ ಈ ವಿಧ್ಯೆಯು ಫಲಿಸದೇ ಇರಬಹುದು. ಆದರೆ ನಾನು ಇದನ್ನು ಹೇಳಿಕೊಟ್ಟವನಲ್ಲಿಯಾದರೂ ಇದು ಫಲಿಸುತ್ತದೆ.”

01072021 ವೈಶಂಪಾಯನ ಉವಾಚ।
01072021a ಏವಮುಕ್ತ್ವಾ ದ್ವಿಜಶ್ರೇಷ್ಠೋ ದೇವಯಾನೀಂ ಕಚಸ್ತದಾ।
01072021c ತ್ರಿದಶೇಶಾಲಯಂ ಶೀಘ್ರಂ ಜಗಾಮ ದ್ವಿಜಸತ್ತಮಃ।।

ವೈಶಂಪಾಯನನು ಹೇಳಿದನು: “ಈ ರೀತಿ ದೇವಯಾನಿಗೆ ಹೇಳಿ ದ್ವಿಜಶ್ರೇಷ್ಠ ದ್ವಿಜಸತ್ತಮ ಕಚನು ಶೀಘ್ರವಾಗಿ ದೇವಲೋಕವನ್ನು ಸೇರಿದನು.

01072022a ತಮಾಗತಮಭಿಪ್ರೇಕ್ಷ್ಯ ದೇವಾ ಇಂದ್ರಪುರೋಗಮಾಃ।
01072022c ಬೃಹಸ್ಪತಿಂ ಸಭಾಜ್ಯೇದಂ ಕಚಮಾಹುರ್ಮುದಾನ್ವಿತಾಃ।।

ಅವನು ಬಂದಿರುವುದನ್ನು ಕಂಡ ಇಂದ್ರನೇ ಮೊದಲಾದ ದೇವತೆಗಳು ಸಂತೋಷದಿಂದ ಬೃಹಸ್ಪತಿಯನ್ನು ನೋಡುತ್ತಾ ಕಚನಿಗೆ ಹೇಳಿದರು:

01072023a ಯತ್ತ್ವಮಸ್ಮದ್ಧಿತಂ ಕರ್ಮ ಚಕರ್ಥ ಪರಮಾದ್ಭುತಂ।
01072023c ನ ತೇ ಯಶಃ ಪ್ರಣಶಿತಾ ಭಾಗಭಾಫ್ನೋ ನೋ ಭವಿಷ್ಯಸಿ।।

“ನಮಗೆ ಅತ್ಯಂತ ಉತ್ತಮ ಪರಮಾದ್ಭುತ ಕಾರ್ಯವನ್ನು ಮಾಡಿದ್ದೀಯೆ. ನಿನ್ನ ಕೀರ್ತಿಯು ಎಂದೂ ಅಳಿಯುವುದಿಲ್ಲ. ನಮ್ಮ ಹವಿಸ್ಸುಗಳ ಪಾಲುದಾರನಾಗುತ್ತೀಯೆ.””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಯಯಾತ್ಯುಪಾಖ್ಯಾನೇ ದ್ವಿಸಪ್ತತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಯಯಾತಿ-ಉಪಾಖ್ಯಾನದಲ್ಲಿ ಎಪ್ಪತ್ತೆರಡನೆಯ ಅಧ್ಯಾಯವು.