071 ಯಯಾತ್ಯುಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಸಂಭವ ಪರ್ವ

ಅಧ್ಯಾಯ 54

ಸಾರ

ದೇವತೆಗಳು ಕಚನನ್ನು ಶುಕ್ರನಲ್ಲಿಗೆ ಸಂಜೀವನಿ ವಿದ್ಯೆಯನ್ನು ಕಲಿಯಲು ಕಳುಹಿಸುವುದು (1-15). ಅಸುರರು ಕಚನನ್ನು ಕೊಲ್ಲಲು, ದೇವಯಾನಿಯ ಮಾತಿನಂತೆ ಶಕ್ರನು ಅವನನ್ನು ಬದುಕಿಸುವುದು (16-30). ಅಸುರರು ಎರಡನೆ ಬಾರಿ ಕಚನನ್ನು ಕೊಂದು, ಸುಟ್ಟು ಭಸ್ಮವನ್ನು ಶುಕ್ರನಿಗೆ ಕುಡಿಯಲಿಕ್ಕೆ ಕೊಡಲು, ಮಗಳ ಮಾತಿನಂತೆ ಪುನಃ ಕಚನನ್ನು ಬದುಕಿಸಲು ಅವನಿಗೆ ಸಂಜೀವನಿ ಮಂತ್ರವನ್ನು ಹೇಳಿಕೊಡುವುದು (31-58).

01071001 ಜನಮೇಜಯ ಉವಾಚ।
01071001a ಯಯಾತಿಃ ಪೂರ್ವಕೋಽಸ್ಮಾಕಂ ದಶಮೋ ಯಃ ಪ್ರಜಾಪತೇಃ।
01071001c ಕಥಂ ಸ ಶುಕ್ರತನಯಾಂ ಲೇಭೇ ಪರಮದುರ್ಲಭಾಂ।।

ಜನಮೇಜಯನು ಹೇಳಿದನು: “ಪ್ರಜಾಪತಿಯಿಂದ ಹತ್ತನೆಯವನಾದ ನನ್ನ ಪೂರ್ವಜ ಯಯಾತಿಯು ಪರಮದುರ್ಲಭೆ ಶುಕ್ರತನಯೆಯನ್ನು ಹೇಗೆ ಪಡೆದನು?

01071002a ಏತದಿಚ್ಛಾಮ್ಯಹಂ ಶ್ರೋತುಂ ವಿಸ್ತರೇಣ ದ್ವಿಜೋತ್ತಮ।
01071002c ಆನುಪೂರ್ವ್ಯಾ ಚ ಮೇ ಶಂಸ ಪೂರೋರ್ವಂಶಕರಾನ್ ಪೃಥಕ್।।

ದ್ವಿಜೋತ್ತಮ! ಇದನ್ನು ನಾನು ವಿಸ್ತಾರವಾಗಿ ಕೇಳಲು ಬಯಸುತ್ತೇನೆ. ಪುರುವಂಶವನ್ನು ಪ್ರಾರಂಭಿಸಿದವರ ಕುರಿತು ಪುನಃ ಮೊದಲಿನಿಂದ ಹೇಳು.”

01071003 ವೈಶಂಪಾಯನ ಉವಾಚ।
01071003a ಯಯಾತಿರಾಸೀದ್ರಾಜರ್ಷಿರ್ದೇವರಾಜಸಮದ್ಯುತಿಃ।
01071003c ತಂ ಶುಕ್ರವೃಷಪರ್ವಾಣೌ ವವ್ರಾತೇ ವೈ ಯಥಾ ಪುರಾ।।
01071004a ತತ್ತೇಽಹಂ ಸಂಪ್ರವಕ್ಷ್ಯಾಮಿ ಪೃಚ್ಛತೋ ಜನಮೇಜಯ।
01071004c ದೇವಯಾನ್ಯಾಶ್ಚ ಸಂಯೋಗಂ ಯಯಾತೇರ್ನಾಹುಷಸ್ಯ ಚ।।

ವೈಶಂಪಾಯನನು ಹೇಳಿದನು: “ಯಯಾತಿಯು ದೇವರಾಜ ಸಮದ್ಯುತಿ ಮತ್ತು ರಾಜರ್ಷಿಯಾಗಿದ್ದನು. ಜನಮೇಜಯ! ನೀನು ಕೇಳಿಕೊಂಡಂತೆ ಶುಕ್ರ ಮತ್ತು ವೃಷಪರ್ವರು ಯಯಾತಿಗೆ ತಮ್ಮ ಪುತ್ರಿಯರನ್ನು ಹೇಗೆ ಕೊಟ್ಟರು, ನಾಹುಷ ಯಯಾತಿ ಮತ್ತು ದೇವಯಾನಿಯರ ಸಂಬಂಧ ಹೇಗೆ ಪ್ರಾರಂಭವಾಯಿತು ಎನ್ನುವುದನ್ನು ಹೇಳುತ್ತೇನೆ.

01071005a ಸುರಾಣಾಮಸುರಾಣಾಂ ಚ ಸಮಜಾಯತ ವೈ ಮಿಥಃ।
01071005c ಐಶ್ವರ್ಯಂ ಪ್ರತಿ ಸಂಘರ್ಷಸ್ತ್ರೈಲೋಕ್ಯೇ ಸಚರಾಚರೇ।।

ಸಚರಾಚರ ತ್ರೈಲೋಕ್ಯದ ಐಶ್ವರ್ಯಕ್ಕಾಗಿ ಸುರಾಸುರರ ನಡುವೆ ಅತೀ ದೊಡ್ಡ ಹೋರಾಟವು ನಡೆಯಿತು.

01071006a ಜಿಗೀಷಯಾ ತತೋ ದೇವಾ ವವ್ರಿರೇಽಂಗಿರಸಂ ಮುನಿಂ।
01071006c ಪೌರೋಹಿತ್ಯೇನ ಯಾಜ್ಯಾರ್ಥೇ ಕಾವ್ಯಂ ತೂಶನಸಂ ಪರೇ।
01071006e ಬ್ರಾಹ್ಮಣೌ ತಾವುಭೌ ನಿತ್ಯಮನ್ಯೋನ್ಯಸ್ಪರ್ಧಿನೌ ಭೃಶಂ।।

ವಿಜಯಪ್ರಾಪ್ತಿಗಾಗಿ ದೇವತೆಗಳು ಮುನಿ ಅಂಗಿರಸ ಪುತ್ರನನ್ನು ಮತ್ತು ಪರಪಕ್ಷದವರು ಉಶಾನಸ ಕಾವ್ಯನನ್ನು ಯಜ್ಞಾದಿಗಳ ಪುರೋಹಿತರನ್ನಾಗಿ ನಿಯೋಜಿಸಿಕೊಂಡರು. ಆ ಈರ್ವರು ಬ್ರಾಹ್ಮಣರೂ ಸದಾ ಪರಸ್ಪರರ ಕಡು ಸ್ಪರ್ಧಿಗಳಾಗಿದ್ದರು.

01071007a ತತ್ರ ದೇವಾ ನಿಜಘ್ನುರ್ಯಾನ್ದಾನವಾನ್ಯುಧಿ ಸಂಗತಾನ್।
01071007c ತಾನ್ಪುನರ್ಜೀವಯಾಮಾಸ ಕಾವ್ಯೋ ವಿದ್ಯಾಬಲಾಶ್ರಯಾತ್।
01071007e ತತಸ್ತೇ ಪುನರುತ್ಥಾಯ ಯೋಧಯಾಂ ಚಕ್ರಿರೇ ಸುರಾನ್।।

ಯುದ್ಧದಲ್ಲಿ ಸೇರಿದ್ದ ದಾನವರನ್ನು ದೇವತೆಗಳು ಸಂಹರಿಸುತ್ತಿದ್ದರು. ಆದರೆ ಕಾವ್ಯನು ತನ್ನ ವಿದ್ಯಾಬಲದಿಂದ ಅವರನ್ನು ಪುನರ್ಜೀವಿಸುತ್ತಿದ್ದನು, ಮತ್ತು ಅವರು ಪುನಃ ಸುರರೊಂದಿಗೆ ಯುದ್ಧಕ್ಕೆ ತೊಡಗುತ್ತಿದ್ದರು.

01071008a ಅಸುರಾಸ್ತು ನಿಜಘ್ನುರ್ಯಾನ್ಸುರಾನ್ಸಮರಮೂರ್ಧನಿ।
01071008c ನ ತಾನ್ಸಂಜೀವಯಾಮಾಸ ಬೃಹಸ್ಪತಿರುದಾರಧೀಃ।।

ಸಮರ ಮಧ್ಯದಲ್ಲಿ ಅಸುರರು ಬಹಳಷ್ಟು ಸುರರನ್ನು ಸಂಹರಿಸುತ್ತಿದ್ದರು. ಆದರೆ ಬೃಹಸ್ಪತಿಯು ಅವರನ್ನು ಪುನಃ ಬದುಕಿಸಲು ಅಸಮರ್ಥನಾಗಿದ್ದನು.

01071009a ನ ಹಿ ವೇದ ಸ ತಾಂ ವಿದ್ಯಾಂ ಯಾಂ ಕಾವ್ಯೋ ವೇದ ವೀರ್ಯವಾನ್।
01071009c ಸಂಜೀವನೀಂ ತತೋ ದೇವಾ ವಿಷಾದಮಗಮನ್ಪರಂ।।

ವೀರ್ಯವಂತ ಶುಕ್ರನು ತಿಳಿದಿದ್ದ ಸಂಜೀವಿನೀ ವಿದ್ಯೆಯು ಅವನಿಗೆ ತಿಳಿದಿರಲಿಲ್ಲ. ಇದರಿಂದಾಗಿ ದೇವತೆಗಳು ಪರಮ ದುಃಖವನ್ನು ಅನುಭವಿಸಿದರು.

01071010a ತೇ ತು ದೇವಾ ಭಯೋದ್ವಿಗ್ನಾಃ ಕಾವ್ಯಾದುಶನಸಸ್ತದಾ।
01071010c ಊಚುಃ ಕಚಮುಪಾಗಮ್ಯ ಜ್ಯೇಷ್ಠಂ ಪುತ್ರಂ ಬೃಹಸ್ಪತೇಃ।।

ಉಶಾನಸ ಕಾವ್ಯನಿಂದ ಭಯೋದ್ವಿಗ್ನರಾದ ದೇವತೆಗಳು ಬೃಹಸ್ಪತಿಯ ಜ್ಯೇಷ್ಠ ಪುತ್ರ ಕಚನ ಬಳಿ ಬಂದು ಕೇಳಿಕೊಂಡರು:

01071011a ಭಜಮಾನಾನ್ಭಜಸ್ವಾಸ್ಮಾನ್ಕುರು ನಃ ಸಾಹ್ಯಮುತ್ತಮಂ।
01071011c ಯಾಸೌ ವಿದ್ಯಾ ನಿವಸತಿ ಬ್ರಾಹ್ಮಣೇಽಮಿತತೇಜಸಿ।
01071011e ಶುಕ್ರೇ ತಾಮಾಹರ ಕ್ಷಿಪ್ರಂ ಭಾಗಭಾಘ್ನೋ ಭವಿಷ್ಯಸಿ।।

“ಭಜಿಸುತ್ತಿರುವ ನಮ್ಮನ್ನು ರಕ್ಷಿಸು ಮತ್ತು ನಮಗೆ ನೆರವನ್ನು ನೀಡು. ಅಮಿತತೇಜಸ್ವಿ ಬ್ರಾಹ್ಮಣ ಶುಕ್ರನಲ್ಲಿರುವ ವಿದ್ಯೆಯನ್ನು ಕ್ಷಿಪ್ರವಾಗಿ ಪಡೆದು ತಾ. ನಮ್ಮ (ಯಜ್ಞ) ಭಾಗಗಳ ಭಾಗಿಯಾಗುತ್ತೀಯೆ.

01071012a ವೃಷಪರ್ವಸಮೀಪೇ ಸ ಶಕ್ಯೋ ದ್ರಷ್ಟುಂ ತ್ವಯಾ ದ್ವಿಜಃ।
01071012c ರಕ್ಷತೇ ದಾನವಾಂಸ್ತತ್ರ ನ ಸ ರಕ್ಷತ್ಯದಾನವಾನ್।।

ಆ ದ್ವಿಜನನ್ನು ನೀನು ವೃಷಪರ್ವನ ಬಳಿ ಕಾಣಬಲ್ಲೆ. ಅಲ್ಲಿ ಅವನು ದಾನವರನ್ನು ರಕ್ಷಿಸುತ್ತಿದ್ದಾನೆ. ಅದಾನವರ್ಯಾರನ್ನೂ ಅವನು ರಕ್ಷಿಸುವುದಿಲ್ಲ.

01071013a ತಮಾರಾಧಯಿತುಂ ಶಕ್ತೋ ಭವಾನ್ಪೂರ್ವವಯಾಃ ಕವಿಂ।
01071013c ದೇವಯಾನೀಂ ಚ ದಯಿತಾಂ ಸುತಾಂ ತಸ್ಯ ಮಹಾತ್ಮನಃ।।

ವಯಸ್ಸಿನಲ್ಲಿ ನೀನು ಇನ್ನೂ ಚಿಕ್ಕವನು, ಆದುದರಿಂದ ನೀನು ಆ ಮಹಾತ್ಮ ಕವಿಯನ್ನು ಮತ್ತು ಅವನ ಪ್ರಿಯ ಸುತೆ ದೇವಯಾನಿಯನ್ನೂ ಆರಾಧಿಸಬಲ್ಲೆ.

01071014a ತ್ವಮಾರಾಧಯಿತುಂ ಶಕ್ತೋ ನಾನ್ಯಃ ಕಶ್ಚನ ವಿದ್ಯತೇ।
01071014c ಶೀಲದಾಕ್ಷಿಣ್ಯಮಾಧುರ್ಯೈರಾಚಾರೇಣ ದಮೇನ ಚ।
01071014e ದೇವಯಾನ್ಯಾಂ ಹಿ ತುಷ್ಟಾಯಾಂ ವಿದ್ಯಾಂ ತಾಂ ಪ್ರಾಪ್ಸ್ಯಸಿ ಧ್ರುವಂ।।

ನೀನು ಮಾತ್ರ ಅವನನ್ನು ಆರಾಧಿಸಬಲ್ಲೆ, ಬೇರೆ ಯಾರೂ ಇಲ್ಲ. ನಿನ್ನ ಶೀಲ, ದಾಕ್ಷಿಣ್ಯ, ಮಾಧುರ್ಯ, ನಡವಳಿಕೆ, ಮತ್ತು ದಮಗಳಿಂದ ನೀನು ದೇವಯಾನಿಯನ್ನು ತೃಪ್ತಿಗೊಳಿಸಬಲ್ಲೆ ಮತ್ತು ಖಂಡಿತವಾಗಿಯೂ ಆ ವಿದ್ಯೆಯನ್ನು ಪ್ರಾಪ್ತಗೊಳಿಸಬಲ್ಲೆ.”

01071015a ತಥೇತ್ಯುಕ್ತ್ವಾ ತತಃ ಪ್ರಾಯಾದ್ಬೃಹಸ್ಪತಿಸುತಃ ಕಚಃ।
01071015c ತದಾಭಿಪೂಜಿತೋ ದೇವೈಃ ಸಮೀಪಂ ವೃಷಪರ್ವಣಃ।।

“ಹಾಗೆಯೇ ಆಗಲಿ” ಎಂದು ಉತ್ತರಿಸಿದ ಬೃಹಸ್ಪತಿಸುತ ಕಚನು ದೇವತೆಗಳಿಂದ ಗೌರವಿಸಲ್ಪಟ್ಟು ವೃಷಪರ್ವನ ಬಳಿ ಹೋದನು.

01071016a ಸ ಗತ್ವಾ ತ್ವರಿತೋ ರಾಜನ್ದೇವೈಃ ಸಂಪ್ರೇಷಿತಃ ಕಚಃ।
01071016c ಅಸುರೇಂದ್ರಪುರೇ ಶುಕ್ರಂ ದೃಷ್ಟ್ವಾ ವಾಕ್ಯಮುವಾಚ ಹ।।

ರಾಜನ್! ಈ ರೀತಿ ದೇವತೆಗಳಿಂದ ಕಳುಹಿಸಲ್ಪಟ್ಟ ಕಚನು ಸಮಯ ವ್ಯರ್ಥ ಮಾಡದೇ ಅಸುರೇಂದ್ರನ ಪುರವನ್ನು ತಲುಪಿ ಅಲ್ಲಿ ಶುಕ್ರನನ್ನು ಕಂಡು ಹೇಳಿದನು:

01071017a ಋಷೇರಂಗಿರಸಃ ಪೌತ್ರಂ ಪುತ್ರಂ ಸಾಕ್ಷಾದ್ಬೃಹಸ್ಪತೇಃ।
01071017c ನಾಮ್ನಾ ಕಚ ಇತಿ ಖ್ಯಾತಂ ಶಿಷ್ಯಂ ಗೃಹ್ಣಾತು ಮಾಂ ಭವಾನ್।।

“ಭಗವನ್! ನನ್ನನ್ನು ನಿಮ್ಮ ಶಿಷ್ಯನನ್ನಾಗಿ ಸ್ವೀಕರಿಸಿ. ನಾನು ಅಂಗಿರಸನ ಮೊಮ್ಮಗ ಸಾಕ್ಷಾತ್ ಬೃಹಸ್ಪತಿಯ ಪುತ್ರ. ನನ್ನನ್ನು ಕಚ ಎಂಬ ಹೆಸರಿನಿಂದ ಕರೆಯುತ್ತಾರೆ.

01071018a ಬ್ರಹ್ಮಚರ್ಯಂ ಚರಿಷ್ಯಾಮಿ ತ್ವಯ್ಯಹಂ ಪರಮಂ ಗುರೌ।
01071018c ಅನುಮನ್ಯಸ್ವ ಮಾಂ ಬ್ರಹ್ಮನ್ಸಹಸ್ರಂ ಪರಿವತ್ಸರಾನ್।।

ನಿಮ್ಮನ್ನು ನನ್ನ ಪರಮ ಗುರುವೆಂದು ಸ್ವೀಕರಿಸಿ ನಾನು ಸಾವಿರ ವರ್ಷಗಳ ಪರ್ಯಂತ ಬ್ರಹ್ಮಚರ್ಯವನ್ನು ಪಾಲಿಸುತ್ತೇನೆ. ನನಗೆ ಅನುಮತಿಯನ್ನು ನೀಡಿ.”

01071019 ಶುಕ್ರ ಉವಾಚ।
01071019a ಕಚ ಸುಸ್ವಾಗತಂ ತೇಽಸ್ತು ಪ್ರತಿಗೃಹ್ಣಾಮಿ ತೇ ವಚಃ।
01071019c ಅರ್ಚಯಿಷ್ಯೇಽಹಮರ್ಚ್ಯಂ ತ್ವಾಮರ್ಚಿತೋಽಸ್ತು ಬೃಹಸ್ಪತಿಃ।।

ಶುಕ್ರನು ಹೇಳಿದನು: “ಕಚ! ನಿನಗೆ ಸುಸ್ವಾಗತ. ನಿನ್ನ ಮಾತುಗಳನ್ನು ನಾನು ಸ್ವೀಕರಿಸುತ್ತೇನೆ. ಗೌರವಕ್ಕೆ ಅರ್ಹನಾದ ನಿನ್ನನ್ನು ನಾನು ಗೌರವಿಸುತ್ತೇನೆ. ಇದರಿಂದ ಬೃಹಸ್ಪತಿಯನ್ನೂ ಗೌರವಿಸಿದಂತಾಗುತ್ತದೆ.”

01071020 ವೈಶಂಪಾಯನ ಉವಾಚ।
01071020a ಕಚಸ್ತು ತಂ ತಥೇತ್ಯುಕ್ತ್ವಾ ಪ್ರತಿಜಗ್ರಾಹ ತದ್ವ್ರತಂ।
01071020c ಆದಿಷ್ಟಂ ಕವಿಪುತ್ರೇಣ ಶುಕ್ರೇಣೋಶನಸಾ ಸ್ವಯಂ।।

ವೈಶಂಪಾಯನನು ಹೇಳಿದನು: “ಹಾಗೆಯೇ ಆಗಲಿ” ಎಂದು ಹೇಳಿದ ಕಚನು ಸ್ವಯಂ ಕವಿಪುತ್ರ ಶುಕ್ರ ಉಶನಸನ ಆದೇಶದಂತೆ ವ್ರತದೀಕ್ಷೆಯನ್ನು ಪಡೆದನು.

01071021a ವ್ರತಸ್ಯ ವ್ರತಕಾಲಂ ಸ ಯಥೋಕ್ತಂ ಪ್ರತ್ಯಗೃಹ್ಣತ।
01071021c ಆರಾಧಯನ್ನುಪಾಧ್ಯಾಯಂ ದೇವಯಾನೀಂ ಚ ಭಾರತ।।

ಭಾರತ! ಹೇಳಿಕೆಯ ಪ್ರಕಾರ ಸರಿಯಾದ ವ್ರತಕಾಲದಲ್ಲಿ ವ್ರತವನ್ನು ಪ್ರಾರಂಭಿಸಿದ ಅವನು ತನ್ನ ಉಪಾಧ್ಯಾಯ ಮತ್ತು ದೇವಯಾನಿಯನ್ನು ಆರಾಧಿಸತೊಡಗಿದನು.

01071022a ನಿತ್ಯಮಾರಾಧಯಿಷ್ಯಂಸ್ತಾಂ ಯುವಾ ಯೌವನಗೋಽಮುಖೇ।
01071022c ಗಾಯನ್ನೃತ್ಯನ್ವಾದಯಂಶ್ಚ ದೇವಯಾನೀಮತೋಷಯತ್।।

ಆ ಯುವಕನು ಯುವತಿ ದೇವಯಾನಿಯನ್ನು ಗಾನ, ನೃತ್ಯ ಮತ್ತು ವಾದ್ಯಗಳಿಂದ ನಿತ್ಯವೂ ಸಂತುಷ್ಟಗೊಳಿಸುತ್ತಿದ್ದನು.

01071023a ಸಂಶೀಲಯನ್ದೇವಯಾನೀಂ ಕನ್ಯಾಂ ಸಂಪ್ರಾಪ್ತಯೌವನಾಂ।
01071023c ಪುಷ್ಪೈಃ ಫಲೈಃ ಪ್ರೇಷಣೈಶ್ಚ ತೋಷಯಾಮಾಸ ಭಾರತ।।

ಭಾರತ! ಯೌವನವನ್ನು ಪಡೆದಿದ್ದ ಕನ್ಯೆ ದೇವಯಾನಿಯನ್ನು ಪುಷ್ಪ ಮತ್ತು ಫಲಗಳನ್ನು ನೀಡುತ್ತಾ, ಅವಳೊಡನೆ ಪ್ರೀತಿಪೂರ್ವಕ ನಡೆನುಡಿಯುತ್ತಾ ಸಂತೃಪ್ತಿಗೊಳಿಸಿದನು.

01071024a ದೇವಯಾನ್ಯಪಿ ತಂ ವಿಪ್ರಂ ನಿಯಮವ್ರತಚಾರಿಣಂ।
01071024c ಅನುಗಾಯಮಾನಾ ಲಲನಾ ರಹಃ ಪರ್ಯಚರತ್ತದಾ।।

ದೇವಯಾನಿಯೂ ಕೂಡ ಆ ನಿಯಮ ವ್ರತಚಾರಿಣಿ ವಿಪ್ರನೊಡನೆ ಏಕಾಂತದಲ್ಲಿ ಹಾಡುತ್ತಿದ್ದಳು, ಮತ್ತು ಅವನ ಸುತ್ತ ಸಂತೋಷದಿಂದ ಸುಳಿದಾಡುತ್ತಿದ್ದಳು.

01071025a ಪಂಚ ವರ್ಷಶತಾನ್ಯೇವಂ ಕಚಸ್ಯ ಚರತೋ ವ್ರತಂ।
01071025c ತತ್ರಾತೀಯುರಥೋ ಬುದ್ಧ್ವಾ ದಾನವಾಸ್ತಂ ತತಃ ಕಚಂ।।

ಹೀಗೆ ಕಚನ ವ್ರತದ ಐದು ನೂರು ವರ್ಷಗಳು ಕಳೆಯುತ್ತಾ ಬಂದಾಗ ದಾನವರು ಕಚನ ಉದ್ದೇಶವನ್ನು ತಿಳಿದುಕೊಂಡರು.

01071026a ಗಾ ರಕ್ಷಂತಂ ವನೇ ದೃಷ್ಟ್ವಾ ರಹಸ್ಯೇಕಮಮರ್ಷಿತಾಃ।
01071026c ಜಘ್ನುರ್ಬೃಹಸ್ಪತೇರ್ದ್ವೇಷಾದ್ವಿದ್ಯಾರಕ್ಷಾರ್ಥಮೇವ ಚ।
01071026e ಹತ್ವಾ ಶಾಲಾವೃಕೇಭ್ಯಶ್ಚ ಪ್ರಾಯಚ್ಛಂಸ್ತಿಲಶಃ ಕೃತಂ।।

ವನದಲ್ಲಿ ಗೋವುಗಳನ್ನು ಕಾಯುತ್ತಿದ್ದ ಒಂಟಿ ಕಚನನ್ನು ಕಂಡ ಅವರು ಬೃಹಸ್ಪತಿಯೊಡನಿದ್ದ ದ್ವೇಶದಿಂದ ಮತ್ತು ಆ ವಿದ್ಯೆಯನ್ನು ರಕ್ಷಿಸಲೋಸುಗ ಅವನನ್ನು ಕೊಂದು, ಸಾಸಿವೆಕಾಳಿನ ಗಾತ್ರದಲ್ಲಿ ತುಂಡು ತುಂಡುಮಾಡಿ ಅಲ್ಲಿರುವ ತೋಳಗಳಿಗೆ ತಿನ್ನಿಸಿದರು.

01071027a ತತೋ ಗಾವೋ ನಿವೃತ್ತಾಸ್ತಾ ಅಗೋಪಾಃ ಸ್ವಂ ನಿವೇಶನಂ।
01071027c ತಾ ದೃಷ್ಟ್ವಾ ರಹಿತಾ ಗಾಸ್ತು ಕಚೇನಾಭ್ಯಾಗತಾ ವನಾತ್।
01071027e ಉವಾಚ ವಚನಂ ಕಾಲೇ ದೇವಯಾನ್ಯಥ ಭಾರತ।।

ಗೋವುಗಳು ಗೋಪನಿಲ್ಲದೇ ತಾವೇ ತಮ್ಮ ನಿವೇಶನಕ್ಕೆ ಹಿಂದಿರುಗಿದವು. ಭಾರತ! ಕಚನ ಜೊತೆಯಿಲ್ಲದೇ ಗೋವುಗಳು ಹಿಂದಿರುಗಿದುದನ್ನು ನೋಡಿದ ದೇವಯಾನಿಯು ತನ್ನ ತಂದೆಗೆ ಇಂತೆಂದಳು:

01071028a ಅಹುತಂ ಚಾಗ್ನಿಹೋತ್ರಂ ತೇ ಸೂರ್ಯಶ್ಚಾಸ್ತಂ ಗತಃ ಪ್ರಭೋ।
01071028c ಅಗೋಪಾಶ್ಚಾಗತಾ ಗಾವಃ ಕಚಸ್ತಾತ ನ ದೃಶ್ಯತೇ।।

“ಪ್ರಭು! ಅಗ್ನಿಹೋತ್ರವನ್ನು ಉರಿಸಿಯಾಗಿದೆ, ಸೂರ್ಯಾಸ್ತವೂ ಆಗಿದೆ. ಗೋಪನಿಲ್ಲದೇ ಗೋವುಗಳು ಹಿಂದಿರುಗಿವೆ. ಅಪ್ಪಾ! ಅದರೆ ಕಚನು ಇನ್ನೂ ಕಾಣುತ್ತಿಲ್ಲ.

01071029a ವ್ಯಕ್ತಂ ಹತೋ ಮೃತೋ ವಾಪಿ ಕಚಸ್ತಾತ ಭವಿಷ್ಯತಿ।
01071029c ತಂ ವಿನಾ ನ ಚ ಜೀವೇಯಂ ಕಚಂ ಸತ್ಯಂ ಬ್ರವೀಮಿ ತೇ।।

ತಂದೆ! ಕಚನು ಸತ್ತಿರಬಹುದು ಅಥವಾ ಅವನನ್ನು ಕೊಂದಿರಬಹುದು. ಅವನಿಲ್ಲದೇ ನಾನು ನಿಜವಾಗಿಯೂ ಬದುಕಲಾರೆ.”

01071030 ಶುಕ್ರ ಉವಾಚ।
01071030a ಅಯಮೇಹೀತಿ ಶಬ್ಧೇನ ಮೃತಂ ಸಂಜೀವಯಾಮ್ಯಹಂ।।

ಶುಕ್ರನು ಹೇಳಿದನು: “ಇಲ್ಲಿ ಬಾ ಎಂದು ಹೇಳಿ ಮೃತನನ್ನು ಬದುಕಿಸುತ್ತೇನೆ.””

01071031 ವೈಶಂಪಾಯನ ಉವಾಚ।
01071031a ತತಃ ಸಂಜೀವನೀಂ ವಿದ್ಯಾಂ ಪ್ರಯುಜ್ಯ ಕಚಮಾಹ್ವಯತ್।
01071031c ಆಹೂತಃ ಪ್ರಾದುರಭವತ್ಕಚೋಽರಿಷ್ಟೋಽಥ ವಿದ್ಯಯಾ।
01071031e ಹತೋಽಹಮಿತಿ ಚಾಚಖ್ಯೌ ಪೃಷ್ಠೋ ಬ್ರಾಹ್ಮಣಕನ್ಯಯಾ।।

ವೈಶಂಪಾಯನನು ಹೇಳಿದನು: “ನಂತರ ಸಂಜೀವಿನೀ ವಿದ್ಯೆಯಿಂದ ಕಚನನ್ನು ಆಹ್ವಾನಿಸಿದನು. ಹಾಗೆ ಕರೆಯಲ್ಪಟ್ಟಾಗ, ಕಚನು ಸಂತೋಷದಿಂದ ಕಾಣಿಸಿಕೊಂಡನು. “ನನ್ನನ್ನು ಕೊಲೆಮಾಡಲಾಗಿತ್ತು” ಎಂದು ಬ್ರಾಹ್ಮಣ ಕನ್ಯೆಯ ಪ್ರಶ್ನೆಗಳಿಗೆ ಉತ್ತರಿಸಿದನು.

01071032a ಸ ಪುನರ್ದೇವಯಾನ್ಯೋಕ್ತಃ ಪುಷ್ಪಾಹಾರೋ ಯದೃಚ್ಛಯಾ।
01071032c ವನಂ ಯಯೌ ತತೋ ವಿಪ್ರೋ ದದೃಶುರ್ದಾನವಾಶ್ಚ ತಂ।।

ಪುನಃ ಇನ್ನೊಂದು ದಿನ ದೇವಯಾನಿಗೆ ಪುಷ್ಪಗಳನ್ನು ತೆಗೆದುಕೊಂಡು ಬರಲು ಕಚನು ವನಕ್ಕೆ ಹೋದಾಗ ದಾನವರು ಆ ವಿಪ್ರನನ್ನು ನೋಡಿದರು.

01071033a ತತೋ ದ್ವಿತೀಯಂ ಹತ್ವಾ ತಂ ದಗ್ಧ್ವಾ ಕೃತ್ವಾ ಚ ಚೂರ್ಣಶಃ।
01071033c ಪ್ರಾಯಚ್ಛನ್ಬ್ರಾಹ್ಮಣಾಯೈವ ಸುರಾಯಾಮಸುರಾಸ್ತದಾ।।

ಎರಡನೆಯ ಬಾರಿ ಅವರು ಅವನನ್ನು ಕೊಂದು, ಸುಟ್ಟು, ಭಸ್ಮದ ಚೂರ್ಣವನ್ನು ಮಾಡಿ, ಮದ್ಯದಲ್ಲಿ ಸೇರಿಸಿ ಬ್ರಾಹ್ಮಣನಿಗೆ ಕುಡಿಯಲು ಕೊಟ್ಟರು.

01071034a ದೇವಯಾನ್ಯಥ ಭೂಯೋಽಪಿ ವಾಕ್ಯಂ ಪಿತರಮಬ್ರವೀತ್।
01071034c ಪುಷ್ಪಾಹಾರಃ ಪ್ರೇಷಣಕೃತ್ಕಚಸ್ತಾತ ನ ದೃಶ್ಯತೇ।।

ಪುನಃ ದೇವಯಾನಿಯು ತನ್ನ ತಂದೆಯಲ್ಲಿ ಹೇಳಿಕೊಂಡಳು: “ಪುಷ್ಪಗಳನ್ನು ತರಲೆಂದು ಹೋದ ಕಚನು ಕಾಣುತ್ತಿಲ್ಲ.”

01071035 ಶುಕ್ರ ಉವಾಚ।
01071035a ಬೃಹಸ್ಪತೇಃ ಸುತಃ ಪುತ್ರಿ ಕಚಃ ಪ್ರೇತಗತಿಂ ಗತಃ।
01071035c ವಿದ್ಯಯಾ ಜೀವಿತೋಽಪ್ಯೇವಂ ಹನ್ಯತೇ ಕರವಾಣಿ ಕಿಂ।।

ಶುಕ್ರನು ಹೇಳಿದನು: “ಪುತ್ರಿ! ಬೃಹಸ್ಪತಿಯ ಸುತ ಕಚನು ಪ್ರೇತಲೋಕವನ್ನು ಸೇರಿದ್ದಾನೆ. ನನ್ನ ವಿದ್ಯೆಯಿಂದ ಅವನನ್ನು ಬದುಕಿಸಿದರೂ ಪುನಃ ಅವನನ್ನು ಕೊಂದು ಹಾಕಿದ್ದಾರೆ. ನಾನೇನು ಮಾಡಲಿ?

01071036a ಮೈವಂ ಶುಚೋ ಮಾ ರುದ ದೇವಯಾನಿ ನ ತ್ವಾದೃಶೀ ಮರ್ತ್ಯಮನುಪ್ರಶೋಚೇತ್।
01071036c ಸುರಾಶ್ಚ ವಿಶ್ವೇ ಚ ಜಗಚ್ಚ ಸರ್ವಂ ಉಪಸ್ಥಿತಾಂ ವೈಕೃತಿಮಾನಮಂತಿ।।

ದೇವಯಾನಿ! ಅವನಿಗಾಗಿ ಶೋಕಿಸಬೇಡ, ರೋದಿಸಬೇಡ. ನಿನ್ನಂಥವರು ಮಾನವನಿಗಾಗಿ ಅಳುವುದಿಲ್ಲ. ನಡೆಯುವ ಬದಲಾವಣೆಗಳಿಗೆ ಸುರರೂ, ವಿಶ್ವವೂ, ಜಗತ್ತೂ ಮತ್ತು ಸರ್ವವೂ ತಲೆಬಾಗಿಸಲೇಬೇಕು.”

01071037 ದೇವಯಾನ್ಯುವಾಚ।
01071037a ಯಸ್ಯಾಂಗಿರಾ ವೃದ್ಧತಮಃ ಪಿತಾಮಹೋ ಬೃಹಸ್ಪತಿಶ್ಚಾಪಿ ಪಿತಾ ತಪೋಧನಃ।
01071037c ಋಷೇಃ ಪುತ್ರಂ ತಮಥೋ ವಾಪಿ ಪೌತ್ರಂ ಕಥಂ ನ ಶೋಚೇಯಮಹಂ ನ ರುದ್ಯಾಂ।।

ದೇವಯಾನಿಯು ಹೇಳಿದಳು: “ಯಾರ ಪಿತಾಮಹನು ವೃದ್ಧ ಅಂಗಿರಸನೋ, ಯಾರ ತಂದೆಯು ತಪೋಧನ ಬೃಹಸ್ಪತಿಯೋ, ಯಾರು ಋಷಿಯ ಪುತ್ರನೂ ಪೌತ್ರನೂ ಆಗಿದ್ದಾನೋ ಅಂಥವನ ಕುರಿತು ನಾನು ಹೇಗೆ ಶೋಕಿಸದಿರಲಿ ಅಥವಾ ರೋದಿಸದೇ ಇರಲಿ?

01071038a ಸ ಬ್ರಹ್ಮಚಾರೀ ಚ ತಪೋಧನಶ್ಚ ಸದೋತ್ಥಿತಃ ಕರ್ಮಸು ಚೈವ ದಕ್ಷಃ।
01071038c ಕಚಸ್ಯ ಮಾರ್ಗಂ ಪ್ರತಿಪತ್ಸ್ಯೇ ನ ಭೋಕ್ಷ್ಯೇ ಪ್ರಿಯೋ ಹಿ ಮೇ ತಾತ ಕಚೋಽಭಿರೂಪಃ।।

ಸ್ವಯಂ ಬ್ರಹ್ಮಚಾರಿಯೂ ತಪೋಧನನೂ ಆದ, ಕೆಲಸಗಳಲ್ಲಿ ಸದಾ ದಕ್ಷ ಆ ಕಚನ ದಾರಿಯಲ್ಲಿಯೇ ನಾನೂ ಹೋಗುತ್ತೇನೆ ತಂದೆ! ನನಗೆ ಊಟವೂ ಬೇಡ. ಸುಂದರ ಕಚನು ನನ್ನ ಪ್ರಿಯಕರ.”

01071039 ಶುಕ್ರ ಉವಾಚ।
01071039a ಅಸಂಶಯಂ ಮಾಮಸುರಾ ದ್ವಿಷಂತಿ ಯೇ ಮೇ ಶಿಷ್ಯಂ ನಾಗಸಂ ಸೂದಯಂತಿ।
01071039c ಅಬ್ರಾಹ್ಮಣಂ ಕರ್ತುಮಿಚ್ಛಂತಿ ರೌದ್ರಾಃ ತೇ ಮಾಂ ಯಥಾ ಪ್ರಸ್ತುತಂ ದಾನವೈರ್ಹಿ।
01071039e ಅಪ್ಯಸ್ಯ ಪಾಪಸ್ಯ ಭವೇದಿಹಾಂತಃ ಕಂ ಬ್ರಹ್ಮಹತ್ಯಾ ನ ದಹೇದಪೀಂದ್ರಂ।।

ಶುಕ್ರನು ಹೇಳಿದನು: “ನನ್ನ ಜೊತೆಯಲ್ಲಿಯೇ ವಾಸಿಸುವ ನನ್ನ ಶಿಷ್ಯನನ್ನು ಕೊಂದು ಅಸುರರು ನನಗೆ ಕೆಟ್ಟದ್ದನ್ನೇ ಮಾಡಿದ್ದಾರೆ. ಬ್ರಾಹ್ಮಣ ಹತ್ಯೆಯಲ್ಲಿ ನನ್ನನ್ನೂ ಸೇರಿಸಿ ನನ್ನನ್ನು ಅಬ್ರಾಹ್ಮಣನನ್ನಾಗಿ ಮಾಡಲು ಈ ಅಸುರರು ಪ್ರಯತ್ನಿಸುತ್ತಿದ್ದಾರೆ. ಈ ಪಾಪದ ಅಂತ್ಯವು ಈಗಲೇ ಆಗಲಿ. ಯಾಕೆಂದರೆ ಬ್ರಹ್ಮಹತ್ಯೆಯು ಇಂದ್ರನನ್ನೂ ಸುಡುವುದಿಲ್ಲವೇ?””

01071040 ವೈಶಂಪಾಯನ ಉವಾಚ।
01071040a ಸಂಚೋದಿತೋ ದೇವಯಾನ್ಯಾ ಮಹರ್ಷಿಃ ಪುನರಾಹ್ವಯತ್।
01071040c ಸಂರಂಭೇಣೈವ ಕಾವ್ಯೋ ಹಿ ಬೃಹಸ್ಪತಿಸುತಂ ಕಚಂ।।

ವೈಶಂಪಾಯನನು ಹೇಳಿದನು: “ದೇವಯಾನಿಯ ಒತ್ತಾಯದಂತೆ ಮಹರ್ಷಿ ಕಾವ್ಯನು ಪುನಃ ಬೃಹಸ್ಪತಿಸುತ ಕಚನನ್ನು ಜೋರಾಗಿ ಕೂಗಿ ಕರೆದನು.

01071041a ಗುರೋರ್ಭೀತೋ ವಿದ್ಯಯಾ ಚೋಪಹೂತಃ ಶನೈರ್ವಾಚಂ ಜತರೇ ವ್ಯಾಜಹಾರ।
01071041c ತಮಬ್ರವೀತ್ಕೇನ ಪಥೋಪನೀತೋ ಮಮೋದರೇ ತಿಷ್ಠಸಿ ಬ್ರೂಹಿ ವಿಪ್ರ।।

ವಿದ್ಯೆಯಿಂದ ಕರೆಯಲ್ಪಟ್ಟಾಗ, ಗುರುವಿಗೆ ಹೆದರಿ ಅವನ ಹೊಟ್ಟೆಯ ಒಳಗಿಂದಲೇ ಕಚನು ಸಣ್ಣಸ್ವರದಲ್ಲಿ ಉತ್ತರಿಸಿದನು. ಆಗ ಮುನಿಯು ಅವನನ್ನು ಕೇಳಿದನು: “ವಿಪ್ರ! ನೀನು ಯಾವ ಮಾರ್ಗದಿಂದ ನನ್ನ ಹೊಟ್ಟೆಯನ್ನು ಸೇರಿದ್ದೀಯೆ ಹೇಳು!”

01071042 ಕಚ ಉವಾಚ।
01071042a ಭವತ್ಪ್ರಸಾದಾನ್ನ ಜಹಾತಿ ಮಾಂ ಸ್ಮೃತಿಃ ಸ್ಮರೇ ಚ ಸರ್ವಂ ಯಚ್ಚ ಯಥಾ ಚ ವೃತ್ತಂ।
01071042c ನ ತ್ವೇವಂ ಸ್ಯಾತ್ತಪಸೋ ವ್ಯಯೋ ಮೇ ತತಃ ಕ್ಲೇಶಂ ಘೋರಮಿಮಂ ಸಹಾಮಿ।।

ಕಚನು ಹೇಳಿದನು: “ನಿಮ್ಮ ಅನುಗ್ರಹದಿಂದ ನನ್ನ ನೆನಪು ಉಳಿದಿದೆ. ನನಗೆ ಆದ ಪ್ರತಿಯೊಂದು ವಿಷಯವೂ ಯಥಾವತ್ತಾಗಿ ನೆನಪಿದೆ. ನನ್ನ ತಪಸ್ಸಿನ ಶಕ್ತಿಯನ್ನೂ ಕಳೆದುಕೊಂಡಿಲ್ಲ. ಇದರಿಂದಾಗಿ ನಾನು ಈ ಘೋರ ಕ್ಲೇಶವನ್ನು ಸಹಿಸಬಲ್ಲವನಾಗಿದ್ದೇನೆ.

01071043a ಅಸುರೈಃ ಸುರಾಯಾಂ ಭವತೋಽಸ್ಮಿ ದತ್ತೋ ಹತ್ವಾ ದಗ್ಧ್ವಾ ಚೂರ್ಣಯಿತ್ವಾ ಚ ಕಾವ್ಯ।
01071043c ಬ್ರಾಹ್ಮೀಂ ಮಾಯಾಮಾಸುರೀ ಚೈವ ಮಾಯಾ ತ್ವಯಿ ಸ್ಥಿತೇ ಕಥಮೇವಾತಿವರ್ತೇತ್।।

ಕಾವ್ಯ! ಅಸುರರು ನನ್ನನ್ನು ಕೊಂದು, ಸುಟ್ಟು, ಚೂರ್ಣವನ್ನಾಗಿ ಮಾಡಿ ಮದ್ಯದಲ್ಲಿ ಸೇರಿಸಿ ನಿನಗೆ ಕೊಟ್ಟರು. ಆದರೆ ಬ್ರಾಹ್ಮೀ ಮಾಯೆಯನ್ನು ಹೊಂದಿರುವ ನೀನಿರುವಾಗ ಅಸುರೀ ಮಾಯೆಯು ಏನು ತಾನೇ ಮಾಡಬಲ್ಲದು?”

01071044 ಶುಕ್ರ ಉವಾಚ।
01071044a ಕಿಂ ತೇ ಪ್ರಿಯಂ ಕರವಾಣ್ಯದ್ಯ ವತ್ಸೇ ವಧೇನ ಮೇ ಜೀವಿತಂ ಸ್ಯಾತ್ ಕಚಸ್ಯ।
01071044c ನಾನ್ಯತ್ರ ಕುಕ್ಷೇರ್ಮಮ ಭೇದನೇನ ದೃಶ್ಯೇತ್ಕಚೋ ಮದ್ಗತೋ ದೇವಯಾನಿ।।

ಶುಕ್ರನು ಹೇಳಿದನು: “ವತ್ಸೇ! ಈಗ ನಾನು ಹೇಗೆ ತಾನೆ ನೀನು ಕೇಳಿದ್ದುದನ್ನು ಮಾಡಬಲ್ಲೆ? ನನ್ನ ಮರಣದಿಂದಲೇ ಕಚನು ಜೀವಿತನಾಗಬಲ್ಲ. ದೇವಯಾನಿ! ನನ್ನ ಹೊಟ್ಟೆಯನ್ನು ಸೀಳಿ ಹೊರಬರುವುದರ ಹೊರತು ಬೇರೆ ಯಾವ ಮಾರ್ಗವೂ ಕಚನಿಗೆ ತೋರುವುದಿಲ್ಲ.”

01071045 ದೇವಯಾನ್ಯುವಾಚ।
01071045a ದ್ವೌ ಮಾಂ ಶೋಕಾವಗ್ನಿಕಲ್ಪೌ ದಹೇತಾಂ ಕಚಸ್ಯ ನಾಶಸ್ತವ ಚೈವೋಪಘಾತಃ।
01071045c ಕಚಸ್ಯ ನಾಶೇ ಮಮ ನಾಸ್ತಿ ಶರ್ಮ ತವೋಪಘಾತೇ ಜೀವಿತುಂ ನಾಸ್ಮಿ ಶಕ್ತಾ।।

ದೇವಯಾನಿಯು ಹೇಳಿದಳು: “ಇವೆರಡು ಶೋಕಗಳೂ ನನ್ನನ್ನು ಅಗ್ನಿಯಂತೆ ಸುಡುತ್ತವೆ. ಕಚನ ಮತ್ತು ನಿನ್ನ ನಾಶ ಇವೆರಡೂ ನನಗೆ ಒಂದೇ. ಕಚನ ನಾಶದಿಂದ ನನಗೆ ಎಲ್ಲಿಯೂ ನೆರಳಿಲ್ಲ; ನೀನಿಲ್ಲದೇ ನಾನು ಜೀವಿಸುವಿದೇ ಅಶಕ್ಯ.”

01071046 ಶುಕ್ರ ಉವಾಚ।
01071046a ಸಂಸಿದ್ಧರೂಪೋಽಸಿ ಬೃಹಸ್ಪತೇಃ ಸುತ ಯತ್ತ್ವಾಂ ಭಕ್ತಂ ಭಜತೇ ದೇವಯಾನೀ।
01071046c ವಿದ್ಯಾಮಿಮಾಂ ಪ್ರಾಪ್ನುಹಿ ಜೀವನೀಂ ತ್ವಂ ನ ಚೇದಿಂದ್ರಃ ಕಚರೂಪೀ ತ್ವಮದ್ಯ।।

ಶುಕ್ರನು ಹೇಳಿದನು: “ಬೃಹಸ್ಪತಿಯ ಮಗನೇ! ದೇವಯಾನಿಯ ಪ್ರೀತಿ ಪಾತ್ರನಾದ ನೀನು ಸಂಸಿದ್ಧರೂಪನಾಗಿದ್ದೀಯೆ. ನೀನು ಕಚರೂಪದಲ್ಲಿದ್ದ ಇಂದ್ರನಲ್ಲದಿದ್ದರೆ ನಾನು ನಿನಗೆ ಈಗ ಸಂಜೀವಿನೀ ವಿದ್ಯೆಯನ್ನು ನೀಡುತ್ತೇನೆ.

01071047a ನ ನಿವರ್ತೇತ್ಪುನರ್ಜೀವನ್ಕಶ್ಚಿದನ್ಯೋ ಮಮೋದರಾತ್।
01071047c ಬ್ರಾಹ್ಮಣಂ ವರ್ಜಯಿತ್ವೈಕಂ ತಸ್ಮಾದ್ವಿದ್ಯಾಮವಾಪ್ನುಹಿ।।

ನನ್ನ ಉದರದಿಂದ ಬೇರೆ ಯಾರೂ ಜೀವಂತ ಹೊರಗೆ ಬರಲು ಸಾಧ್ಯವಿಲ್ಲ. ಆದರೆ ಬ್ರಾಹ್ಮಣನನ್ನು ಎಂದೂ ಕೊಲ್ಲಬಾರದು. ಆದ್ದರಿಂದ ನಾನು ನಿನಗೆ ಹೇಳಿಕೊಡುವ ಈ ವಿಧ್ಯೆಯನ್ನು ಸ್ವೀಕರಿಸು.

01071048a ಪುತ್ರೋ ಭೂತ್ವಾ ಭಾವಯ ಭಾವಿತೋ ಮಾಂ ಅಸ್ಮಾದ್ದೇಹಾದುಪನಿಷ್ಕ್ರಮ್ಯ ತಾತ।
01071048c ಸಮೀಕ್ಷೇಥಾ ಧರ್ಮವತೀಮವೇಕ್ಷಾಂ ಗುರೋಃ ಸಕಾಶಾತ್ಪ್ರಾಪ್ಯ ವಿದ್ಯಾಂ ಸವಿದ್ಯಃ।।

ಮಗುವೇ! ನೀನು ನನ್ನ ಪುತ್ರನಾಗಿ ಈ ದೇಹದಿಂದ ಹೊರಗೆ ಬಾ. ಗುರುವಿನಿಂದ ಈ ಸವಿದ್ಯೆಯನ್ನು ಪಡೆದ ನೀನು ಈ ವಿದ್ಯೆಯನ್ನು ಜಾಗರೂಕತೆಯಿಂದ, ಧರ್ಮಪ್ರಕಾರವಾಗಿ ಬಳಸು.””

01071049 ವೈಶಂಪಾಯನ ಉವಾಚ।
01071049a ಗುರೋಃ ಸಕಾಶಾತ್ಸಮವಾಪ್ಯ ವಿದ್ಯಾಂ ಭಿತ್ತ್ವಾ ಕುಕ್ಷಿಂ ನಿರ್ವಿಚಕ್ರಾಮ ವಿಪ್ರಃ।
01071049c ಕಚೋಽಭಿರೂಪೋ ದಕ್ಷಿಣಂ ಬ್ರಾಹ್ಮಣಸ್ಯ ಶುಕ್ಲಾತ್ಯಯೇ ಪೌರ್ಣಮಾಸ್ಯಾಮಿವೇಂದುಃ।।

ವೈಶಂಪಾಯನನು ಹೇಳಿದನು: “ಗುರುವಿನ ಸಾಕ್ಷಾತ್ಕಾರದಲ್ಲಿ ವಿದ್ಯೆಯನ್ನು ಪಡೆದ ವಿಪ್ರನು ಅವನ ಹೊಟ್ಟೆಯನ್ನು ಸೀಳಿ ಹೊರಬಂದನು. ಶುಕ್ಲಪಕ್ಷದ ಪೂರ್ಣಿಮೆಯಂದು ಚಂದ್ರನು ಹೊರಬರುವಂತೆ ಸುಂದರ ಕಚನು ಬ್ರಾಹ್ಮಣನ ಬಲಭಾಗದಿಂದ ಹೊರಬಂದನು.

01071050a ದೃಷ್ಟ್ವಾ ಚ ತಂ ಪತಿತಂ ಬ್ರಹ್ಮರಾಶಿಂ ಉತ್ಥಾಪಯಾಮಾಸ ಮೃತಂ ಕಚೋಽಪಿ।
01071050c ವಿದ್ಯಾಂ ಸಿದ್ಧಾಂ ತಾಮವಾಪ್ಯಾಭಿವಾದ್ಯ ತತಃ ಕಚಸ್ತಂ ಗುರುಮಿತ್ಯುವಾಚ।।

ಕೆಳಗೆ ಬಿದ್ದಿದ್ದ ಆ ಬ್ರಹ್ಮರಾಶಿಯನ್ನು ನೋಡಿ ಕಚನು ತಾನು ಆಗಲೇ ಪಡೆದಿದ್ದ ವಿದ್ಯಸಿದ್ಧಿಯನ್ನು ಬಳಸಿ ಮೃತನನ್ನು ಪುನಃ ಎಬ್ಬಿಸಿದನು. ಆಗ ಕಚನು ಗುರುವನ್ನು ನಮಸ್ಕರಿಸಿ ಹೇಳಿದನು:

01071051a ಋತಸ್ಯ ದಾತಾರಮನುತ್ತಮಸ್ಯ ನಿಧಿಂ ನಿಧೀನಾಂ ಚತುರನ್ವಯಾನಾಂ।
01071051c ಯೇ ನಾದ್ರಿಯಂತೇ ಗುರುಮರ್ಚನೀಯಂ ಪಾಪಾಽಲ್ಲೋಕಾಂಸ್ತೇ ವ್ರಜಂತ್ಯಪ್ರತಿಷ್ಠಾನ್।।

“ಅನುತ್ತಮ ಜ್ಞಾನವನ್ನು ನೀಡುವ, ಚತುರಾನ್ವಯ ನಿಧಿಗಳ ನಿಧಿ, ಅರ್ಚನೀಯ ಗುರುವನ್ನು ನಿಂದಿಸುವವನು ನಿಜವಾಗಿಯೂ ಪಾಪಲೋಕವನ್ನು ಪಡೆಯುತ್ತಾನೆ.””

01071052 ವೈಶಂಪಾಯನ ಉವಾಚ।
01071052a ಸುರಾಪಾನಾದ್ವಂಚನಾಂ ಪ್ರಾಪಯಿತ್ವಾ ಸಂಜ್ಞಾನಾಶಂ ಚೈವ ತಥಾತಿಘೋರಂ।
01071052c ದೃಷ್ಟ್ವಾ ಕಚಂ ಚಾಪಿ ತಥಾಭಿರೂಪಂ ಪೀತಂ ತದಾ ಸುರಯಾ ಮೋಹಿತೇನ।।
01071053a ಸಮನ್ಯುರುತ್ಥಾಯ ಮಹಾನುಭಾವಃ ತದೋಶನಾ ವಿಪ್ರಹಿತಂ ಚಿಕೀರ್ಷುಃ।
01071053c ಕಾವ್ಯಃ ಸ್ವಯಂ ವಾಕ್ಯಮಿದಂ ಜಗಾದ ಸುರಾಪಾನಂ ಪ್ರತಿ ವೈ ಜಾತಶಂಕಃ।।

ವೈಶಂಪಾಯನನು ಹೇಳಿದನು: “ಸುರಾಪಾನದಿಂದ ವಂಚಿತನಾದ, ಅದರಿಂದಾದ ಘೋರ ಪರಿಣಾಮಗಳನ್ನೂ ಪ್ರಜ್ಞಾಹರಣವನ್ನೂ ನೋಡಿದ, ತನ್ನ ಸುಂದರ ದೇಹವನ್ನು ಹೊತ್ತು ಹೊರಬಂದ ಕಚನನ್ನು ನೋಡಿ, ಅವನನ್ನು ಮದ್ಯದ ನಶೆಯಲ್ಲಿ ತಿಳಿಯದೇ ಕುಡಿದಿದ್ದುದನ್ನು ನೋಡಿ, ಆ ಮಹಾನುಭಾವನು ಕೋಪಗೊಂಡು, ವಿಪ್ರರ ಹಿತಕ್ಕಾಗಿ ಸ್ವಯಂ ಕಾವ್ಯನು ಜಗತ್ತಿಗೇ ಸುರಾಪಾನದ ವಿರುದ್ಧ ಉದ್ಗರಿಸಿ ಹೇಳಿದನು.

01071054a ಯೋ ಬ್ರಾಹ್ಮಣೋಽದ್ಯ ಪ್ರಭೃತೀಹ ಕಶ್ಚಿನ್ ಮೋಹಾತ್ಸುರಾಂ ಪಾಸ್ಯತಿ ಮಂದಬುದ್ಧಿಃ।
01071054c ಅಪೇತಧರ್ಮೋ ಬ್ರಹ್ಮಹಾ ಚೈವ ಸ ಸ್ಯಾದ್ ಅಸ್ಮಿಽಲ್ಲೋಕೇ ಗರ್ಹಿತಃ ಸ್ಯಾತ್ಪರೇ ಚ।।

“ಇಂದಿನಿಂದ ಯಾವ ಬ್ರಾಹ್ಮಣನು ಆಸೆಯಿಂದ ಬುದ್ಧಿಯಿಲ್ಲದೇ ಮದ್ಯವನ್ನು ಸೇವಿಸುತ್ತಾನೋ ಅವನು ಬ್ರಹ್ಮಹತ್ಯೆಯ ಪಾಪವನ್ನು ಪಡೆದು ಈ ಲೋಕದಲ್ಲಿ ಮತ್ತು ಪರಲೋಕದಲ್ಲಿ ತಿರಸ್ಕರಿಸಲ್ಪಡುತ್ತಾನೆ.

01071055a ಮಯಾ ಚೇಮಾಂ ವಿಪ್ರಧರ್ಮೋಕ್ತಿಸೀಮಾಂ ಮರ್ಯಾದಾಂ ವೈ ಸ್ಥಾಪಿತಾಂ ಸರ್ವಲೋಕೇ।
01071055c ಸಂತೋ ವಿಪ್ರಾಃ ಶುಶ್ರುವಾಂಸೋ ಗುರೂಣಾಂ ದೇವಾ ಲೋಕಾಶ್ಚೋಪಶೃಣ್ವಂತು ಸರ್ವೇ।।

ಈ ರೀತಿ ನಾನು ವಿಪ್ರಧರ್ಮದ ಸೀಮಾರೇಖೆಯನ್ನು ಎಳೆಯುತ್ತಿದ್ದೇನೆ. ಈ ಮರ್ಯಾದೆಯು ಸರ್ವಲೋಕದಲ್ಲಿಯೂ ಸ್ಥಾಪಿತಗೊಳ್ಳಲಿ. ಸಂತ ಬ್ರಾಹ್ಮಣರು, ಗುರುಗಳ ಸೇವೆಮಾಡುವವರು, ದೇವತೆಗಳು ಮತ್ತು ಲೋಕದಲ್ಲಿ ಎಲ್ಲರೂ ಇದನ್ನು ಕೇಳಲಿ.”

01071056a ಇತೀದಮುಕ್ತ್ವಾ ಸ ಮಹಾನುಭಾವಃ ತಪೋನಿಧೀನಾಂ ನಿಧಿರಪ್ರಮೇಯಃ।
01071056c ತಾನ್ದಾನವಾನ್ದೈವವಿಮೂದಬುದ್ಧೀನ್ ಇದಂ ಸಮಾಹೂಯ ವಚೋಽಭ್ಯುವಾಚ।।

ಈ ರೀತಿ ಹೇಳಿದ ಆ ತಪೋನಿಧಿಗಳ ಅಪ್ರಮೇಯ ನಿಧಿ ಮಹಾನುಭಾವನು ದೈವಕಾರಣದಿಂದ ವಿಮೂಢರಾಗಿದ್ದ ದಾನವರನ್ನು ತನ್ನಲ್ಲಿಗೆ ಕರೆಯಿಸಿ ಈ ಮಾತುಗಳನ್ನಾಡಿದನು:

01071057a ಆಚಕ್ಷೇ ವೋ ದಾನವಾ ಬಾಲಿಶಾಃ ಸ್ಥ ಸಿದ್ಧಃ ಕಚೋ ವತ್ಸ್ಯತಿ ಮತ್ಸಕಾಶೇ।
01071057c ಸಂಜೀವನೀಂ ಪ್ರಾಪ್ಯ ವಿದ್ಯಾಂ ಮಹಾರ್ಥಾಂ ತುಲ್ಯಪ್ರಭಾವೋ ಬ್ರಹ್ಮಣಾ ಬ್ರಹ್ಮಭೂತಃ।।

“ಬಾಲಿಶರಂತೆ ನಿಂತಿರುವ ದಾನವರೇ! ಕೇಳಿ. ಕಚನು ನನ್ನ ಮಗನಾಗಿ ನನ್ನ ಬಳಿಯಲ್ಲಿಯೇ ಇರುವುದು ಸಿದ್ಧ. ನನ್ನಿಂದ ಸಂಜೀವಿನೀ ವಿದ್ಯೆಯನ್ನು ಪಡೆದು ಈ ಬ್ರಾಹ್ಮಣನು ತನ್ನ ಪ್ರಭಾವದಲ್ಲಿ ಬ್ರಹ್ಮನ ಸರಿಸಾಟಿಯಾಗಿದ್ದಾನೆ.”

01071058a ಗುರೋರುಷ್ಯ ಸಕಾಶೇ ತು ದಶ ವರ್ಷಶತಾನಿ ಸಃ।
01071058c ಅನುಜ್ಞಾತಃ ಕಚೋ ಗಂತುಮಿಯೇಷ ತ್ರಿದಶಾಲಯಂ।।

ಒಂದು ಸಾವಿರ ವರುಷಗಳ ಕಾಲ ತನ್ನ ಗುರುವಿನಲ್ಲಿಯೇ ಇದ್ದ ಕಚನು ಗುರುವಿನ ಅನುಜ್ಞೆಯನ್ನು ಪಡೆದು ಸ್ವರ್ಗಲೋಕಕ್ಕೆ ಹೋಗಲು ಸಿದ್ಧತೆಗಳನ್ನು ಮಾಡಿದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಯಯಾತ್ಯುಪಾಖ್ಯಾನೇ ಏಕಸಪ್ತತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಯಯಾತಿ-ಉಪಾಖ್ಯಾನದಲ್ಲಿ ಎಪ್ಪತ್ತೊಂದನೆಯ ಅಧ್ಯಾಯವು.