069 ಶಕುಂತಲೋಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಸಂಭವ ಪರ್ವ

ಅಧ್ಯಾಯ 69

ಸಾರ

ಶಕುಂತಲೆಯು ದುಃಷಂತನನ್ನು ನಿಂದಿಸುವುದು (1-25). ದುಃಷಂತನು ಶಕುಂತಲೆ-ಸರ್ವದಮನರನ್ನು ಸ್ವೀಕರಿಸಿ, ಮಗನಿಗೆ ಭರತನೆಂಬ ಹೆಸರನ್ನು ಕೊಡುವುದು (26-40). ಭರತನ ರಾಜ್ಯಭಾರ (41-51).

01069001 ಶಕುಂತಲೋವಾಚ।
01069001a ರಾಜನ್ಸರ್ಷಪಮಾತ್ರಾಣಿ ಪರಚ್ಛಿದ್ರಾಣಿ ಪಶ್ಯಸಿ।
01069001c ಆತ್ಮನೋ ಬಿಲ್ವಮಾತ್ರಾಣಿ ಪಶ್ಯನ್ನಪಿ ನ ಪಶ್ಯಸಿ।।

ಶಕುಂತಲೆಯು ಹೇಳಿದಳು: “ರಾಜನ್! ನೀನು ಇನ್ನೊಬ್ಬರ ತಪ್ಪು ಸಾಸಿವೆ ಕಾಳಿನಷ್ಟು ಸಣ್ಣದಾಗಿದ್ದರೂ ಗಮನಿಸುತ್ತೀಯೆ. ಆದರೆ ನಿನ್ನ ತಪ್ಪು ಬಿಲ್ವದಷ್ಟು ದೊಡ್ಡದಾಗಿದ್ದರೂ ನೋಡಿದರೂ ನೋಡದಂತೆ ಇದ್ದೀಯೆ.

01069002a ಮೇನಕಾ ತ್ರಿದಶೇಷ್ವೇವ ತ್ರಿದಶಾಶ್ಚಾನು ಮೇನಕಾಂ।
01069002c ಮಮೈವೋದ್ರಿಚ್ಯತೇ ಜನ್ಮ ದುಃಷಂತ ತವ ಜನ್ಮತಃ।।

ಮೇನಕೆಯು ದೇವಲೋಕದವಳು ಮತ್ತು ದೇವತೆಗಳಲ್ಲೇ ಶ್ರೇಷ್ಠಳೆಂದೆನಿಸಿಕೊಂಡವಳು. ದುಃಷಂತ! ಹೀಗೆ ನನ್ನ ಜನ್ಮವು ನಿನ್ನ ಜನ್ಮಕ್ಕಿಂತಲೂ ಶ್ರೇಷ್ಠವಾದದ್ದು.

01069003a ಕ್ಷಿತಾವಟಸಿ ರಾಜಂಸ್ತ್ವಮಂತರಿಕ್ಷೇ ಚರಾಮ್ಯಹಂ।
01069003c ಆವಯೋರಂತರಂ ಪಶ್ಯ ಮೇರುಸರ್ಷಪಯೋರಿವ।।

ರಾಜನ್! ನೀನು ಭೂಮಿಯ ಮೇಲೆ ನಡೆಯುತ್ತೀಯೆ. ನಾನು ಅಂತರಿಕ್ಷದಲ್ಲಿ ಸಂಚರಿಸುತ್ತೇನೆ. ನನ್ನ ಮತ್ತು ನಿನ್ನ ನಡುವಿನ ಅಂತರ ಮೇರು ಮತ್ತು ಸಾಸಿವೆ ಕಾಳುಗಳ ನಡುವಿರುವ ಅಂತರವೆಂದು ತಿಳಿ.

01069004a ಮಹೇಂದ್ರಸ್ಯ ಕುಬೇರಸ್ಯ ಯಮಸ್ಯ ವರುಣಸ್ಯ ಚ।
01069004c ಭವನಾನ್ಯನುಸಂಯಾಮಿ ಪ್ರಭಾವಂ ಪಶ್ಯ ಮೇ ನೃಪ।।

ನೃಪ! ನನ್ನ ಪ್ರಭಾವವನ್ನು ನೋಡು. ನಾನು ಮಹೇಂದ್ರ, ಕುಬೇರ, ಯಮ, ಮತ್ತು ವರುಣರ ಭವನಗಳಿಗೆ ಹೋಗಬಲ್ಲೆ.

01069005a ಸತ್ಯಶ್ಚಾಪಿ ಪ್ರವಾದೋಽಯಂ ಯಂ ಪ್ರವಕ್ಷ್ಯಾಮಿ ತೇಽನಘ।
01069005c ನಿದರ್ಶನಾರ್ಥಂ ನ ದ್ವೇಷಾತ್ತಚ್ಶ್ರುತ್ವಾ ಕ್ಷಂತುಮರ್ಹಸಿ।।

ಅನಘ! ಸತ್ಯವನ್ನು ತೋರಿಸಬಲ್ಲ ಒಂದು ಗಾದೆಯನ್ನು ಹೇಳುತ್ತೇನೆ ಕೇಳು. ಇದನ್ನು ದ್ವೇಷದಿಂದ ಹೇಳುತ್ತಿಲ್ಲ. ಒಂದು ನಿದರ್ಶನದ ರೂಪದಲ್ಲಿ ಹೇಳುತ್ತಿದ್ದೇನೆ. ಇದನ್ನು ಕೇಳಿ ನನ್ನನ್ನು ಕ್ಷಮಿಸಬೇಕು.

01069006a ವಿರೂಪೋ ಯಾವದಾದರ್ಶೇ ನಾತ್ಮನಃ ಪಶ್ಯತೇ ಮುಖಂ।
01069006c ಮನ್ಯತೇ ತಾವದಾತ್ಮಾನಮನ್ಯೇಭ್ಯೋ ರೂಪವತ್ತರಂ।।

ವಿರೂಪನು ಕನ್ನಡಿಯಲ್ಲಿ ತನ್ನ ಮುಖವನ್ನು ನೋಡುವವರೆಗೆ ಎಲ್ಲರಿಗಿಂತ ತಾನೇ ರೂಪವಂತನೆಂದು ತಿಳಿದುಕೊಂಡಿರುತ್ತಾನೆ.

01069007a ಯದಾ ತು ಮುಖಮಾದರ್ಶೇ ವಿಕೃತಂ ಸೋಽಭಿವೀಕ್ಷತೇ।
01069007c ತದೇತರಂ ವಿಜಾನಾತಿ ಆತ್ಮಾನಂ ನೇತರಂ ಜನಂ।।

ತನ್ನ ವಿಕೃತ ಮುಖವನ್ನು ಕನ್ನಡಿಯಲ್ಲಿ ನೋಡಿದಾಗಲೇ ಅವನಿಗೆ ತನ್ನ ಮತ್ತು ಇತರರ ನಡುವಿನ ವ್ಯತ್ಯಾಸ ಅರಿವಾಗುತ್ತದೆ.

01069008a ಅತೀವ ರೂಪಸಂಪನ್ನೋ ನ ಕಿಂ ಚಿದವಮನ್ಯತೇ।
01069008c ಅತೀವ ಜಲ್ಪಂದುರ್ವಾಚೋ ಭವತೀಹ ವಿಹೇತಕಃ।।

ಅತೀವ ರೂಪಸಂಪನ್ನನು ಇತರರನ್ನು ಎಂದೂ ಅವಹೇಳನ ಮಾಡುವುದಿಲ್ಲ. ಅನ್ಯರನ್ನು ಅತೀವವಾಗಿ ಅವಹೇಳನ ಮಾಡುವವನು ವಿಹಟಕನೆಂದು ಅನ್ನಿಸಿಕೊಳ್ಳುತ್ತಾನೆ.

01069009a ಮೂರ್ಖೋ ಹಿ ಜಲ್ಪತಾಂ ಪುಂಸಾಂ ಶ್ರುತ್ವಾ ವಾಚಃ ಶುಭಾಶುಭಾಃ।
01069009c ಅಶುಭಂ ವಾಕ್ಯಮಾದತ್ತೇ ಪುರೀಷಮಿವ ಸೂಕರಃ।।

ಹಂದಿಯು ಹೇಗೆ ಹೂವಿನ ತೋಟದಿಂದಲೂ ಹೊಲಸನ್ನೇ ಹೆಕ್ಕುತ್ತದೆಯೋ ಹಾಗೆ ಮೂರ್ಖನೂ ಕೂಡ ಶುಭಾಶುಭಮಾತುಗಳಲ್ಲಿ ಅಶುಭ ಮಾತುಗಳನ್ನೇ ಆರಿಸುತ್ತಾನೆ.

01069010a ಪ್ರಾಜ್ಞಸ್ತು ಜಲ್ಪತಾಂ ಪುಂಸಾಂ ಶ್ರುತ್ವಾ ವಾಚಃ ಶುಭಾಶುಭಾಃ।
01069010c ಗುಣವದ್ವಾಕ್ಯಮಾದತ್ತೇ ಹಂಸಃ ಕ್ಷೀರಮಿವಾಂಭಸಃ।।

ನೀರಿನಿಂದ ಕೂಡಿದ ಕ್ಷೀರದಿಂದ ಹಂಸವು ಕ್ಷೀರವನ್ನೇ ಹೇಗೆ ಆರಿಸುತ್ತದೆಯೋ ಹಾಗೆ ಪ್ರಾಜ್ಞರೂ ಕೂಡ ಶುಭಾಶುಭ ವಚನಗಳಿಂದ ಶುಭಮಾತುಗಳನ್ನೇ ಕೇಳುತ್ತಾರೆ.

01069011a ಅನ್ಯಾನ್ಪರಿವದನ್ಸಾಧುರ್ಯಥಾ ಹಿ ಪರಿತಪ್ಯತೇ।
01069011c ತಥಾ ಪರಿವದನ್ನನ್ಯಾಂಸ್ತುಷ್ಟೋ ಭವತಿ ದುರ್ಜನಃ।।

ಸಾಧು ಜನರು ಅನ್ಯರ ಕುರಿತು ಕೀಳು ಮಾತನ್ನಾಡುವಾಗ ಬಹಳಷ್ಟು ವೇದನೆಗೊಳಗಾಗುತ್ತಾರೆ. ಆದರೆ ದುರ್ಜನರು ಅನ್ಯರ ನಿಂದನೆಗೈಯುವುದರಲ್ಲಿಯೇ ಸಂತುಷ್ಟರಾಗುತ್ತಾರೆ.

01069012a ಅಭಿವಾದ್ಯ ಯಥಾ ವೃದ್ಧಾನ್ಸಂತೋ ಗಚ್ಛಂತಿ ನಿರ್ವೃತಿಂ।
01069012c ಏವಂ ಸಜ್ಜನಮಾಕ್ರುಶ್ಯ ಮೂರ್ಖೋ ಭವತಿ ನಿರ್ವೃತಃ।।

ಸಂತರು ವೃದ್ಧರನ್ನು ಗೌರವಿಸುವುದರಲ್ಲಿ ಸಂತೋಷ ಹೊಂದುತ್ತಾರೆ. ಆದರೆ ಮೂರ್ಖ ಜನರು ಸಜ್ಜನರನ್ನು ಅವಹೇಳನ ಮಾಡುವುದರಲ್ಲಿ ಸಂತೋಷ ಹೊಂದುತ್ತಾರೆ.

01069013a ಸುಖಂ ಜೀವಂತ್ಯದೋಷಜ್ಞಾ ಮೂರ್ಖಾ ದೋಷಾನುದರ್ಶಿನಃ।
01069013c ಯತ್ರ ವಾಚ್ಯಾಃ ಪರೈಃ ಸಂತಃ ಪರಾನಾಹುಸ್ತಥಾವಿಧಾನ್।।

ಸಂತರು ಇನ್ನೊಬ್ಬರಲ್ಲಿ ದೋಷವನ್ನು ಕಾಣದೆಯೇ ಸುಖದಿಂದಿರುವರು; ಮೂರ್ಖರು ದೋಷವನ್ನು ಹುಡುಕುವುದರಲ್ಲಿಯೇ ಸುಖವನ್ನು ಹೊಂದುವರು.

01069014a ಅತೋ ಹಾಸ್ಯತರಂ ಲೋಕೇ ಕಿಂ ಚಿದನ್ಯನ್ನ ವಿದ್ಯತೇ।
01069014c ಯತ್ರ ದುರ್ಜನ ಇತ್ಯಾಹ ದುರ್ಜನಃ ಸಜ್ಜನಂ ಸ್ವಯಂ।।

ಈ ಲೋಕದಲ್ಲಿ ಇದಕ್ಕಿಂತ ಬೇರೆ ಹಾಸ್ಯದ ವಿಷಯವಾದರೂ ಏನಿದೆ? ಇಲ್ಲಿ ಸಜ್ಜನರನ್ನು ಸ್ವಯಂ ದುರ್ಜನರೇ ದುರ್ಜನರೆಂದು ಕರೆಯುತ್ತಿರುವರಲ್ಲ?

01069015a ಸತ್ಯಧರ್ಮಚ್ಯುತಾತ್ಪುಂಸಃ ಕ್ರುದ್ಧಾದಾಶೀವಿಷಾದಿವ।
01069015c ಅನಾಸ್ತಿಕೋಽಪ್ಯುದ್ವಿಜತೇ ಜನಃ ಕಿಂ ಪುನರಾಸ್ತಿಕಃ।।

ನಾಸ್ತಿಕರೂ ಕೂಡ ಸತ್ಯಧರ್ಮದಿಂದ ಚ್ಯುತರಾದವರನ್ನು ಕಂಡರೆ ಘೋರ ವಿಷಸರ್ಪವನ್ನು ಕಂಡಂತೆ ಭಯಪಡುತ್ತಾರೆ. ನನ್ನಂಥಹ ಆಸ್ತೀಕರ ಗತಿಯೇನು?

01069016a ಸ್ವಯಮುತ್ಪಾದ್ಯ ವೈ ಪುತ್ರಂ ಸದೃಶಂ ಯೋಽವಮನ್ಯತೇ।
01069016c ತಸ್ಯ ದೇವಾಃ ಶ್ರಿಯಂ ಘ್ನಂತಿ ನ ಚ ಲೋಕಾನುಪಾಶ್ನುತೇ।।

ಸದೃಶ ಪುತ್ರನನ್ನು ಸ್ವಯಂ ಹುಟ್ಟಿಸಿ ಅವನನ್ನು ಸ್ವೀಕರಿಸದಿರುವವನ ಶ್ರಿಯನ್ನು ದೇವತೆಗಳು ನಾಶಪಡಿಸುತ್ತಾರೆ ಮತ್ತು ಅವನಿಗೆ ಉತ್ತಮ ಲೋಕವು ದೊರೆಯುವುದಿಲ್ಲ.

01069017a ಕುಲವಂಶಪ್ರತಿಷ್ಠಾಂ ಹಿ ಪಿತರಃ ಪುತ್ರಮಬ್ರುವನ್।
01069017c ಉತ್ತಮಂ ಸರ್ವಧರ್ಮಾಣಾಂ ತಸ್ಮಾತ್ಪುತ್ರಂ ನ ಸಂತ್ಯಜೇತ್।।

ಪುತ್ರನು ಕುಲವಂಶ ಪ್ರತಿಷ್ಠನೆಂದು ಪಿತೃಗಳು ಹೇಳುತ್ತಾರೆ. ಪುತ್ರನಿಗೆ ಜನ್ಮ ನೀಡುವುದು ಸರ್ವಧರ್ಮಗಳಲ್ಲಿ ಉತ್ತಮವೆಂದು ಹೇಳುತ್ತಾರೆ. ಆದುದರಿಂದ ಪುತ್ರನನ್ನು ತ್ಯಜಿಸಬಾರದು.

01069018a ಸ್ವಪತ್ನೀಪ್ರಭವಾನ್ಪಂಚ ಲಬ್ಧಾನ್ ಕ್ರೀತಾನ್ವಿವರ್ಧಿತಾನ್।
01069018c ಕೃತಾನನ್ಯಾಸು ಚೋತ್ಪನ್ನಾನ್ಪುತ್ರಾನ್ವೈ ಮನುರಬ್ರವೀತ್।।

ಸ್ವಪತ್ನಿಯಲ್ಲಿ ಪಡೆದವನು, ಬೇರೆಯವರಿಂದ ಪಡೆದವನು, ಖರೀದಿಸಿಕೊಂಡವನು, ವಾತ್ಸಲ್ಯದಿಂದ ಬೆಳೆಸಲ್ಪಟ್ಟವನು, ಮತ್ತು ಅಪತ್ನಿಯಿಂದ ಜನಿಸಿದವನು ಹೀಗೆ ಐದು ತರಹದ ಪುತ್ರರ ಕುರಿತು ಮನುವು ಹೇಳುತ್ತಾನೆ.

01069019a ಧರ್ಮಕೀರ್ತ್ಯಾವಹಾ ನೄಣಾಂ ಮನಸಃ ಪ್ರೀತಿವರ್ಧನಾಃ।
01069019c ತ್ರಾಯಂತೇ ನರಕಾಜ್ಜಾತಾಃ ಪುತ್ರಾ ಧರ್ಮಪ್ಲವಾಃ ಪಿತೄನ್।।

ಪುತ್ರರು ನರನ ಧರ್ಮ ಕೀರ್ತಿಯನ್ನು ವೃದ್ಧಿಸುತ್ತಾರೆ. ಮನಸ್ಸಿನ ಸಂತೋಷವನ್ನು ವರ್ಧಿಸುತ್ತಾರೆ. ನರಕಕ್ಕೆ ಹೋಗಬಹುದಾದವರನ್ನು ಬಿಡುಗಡೆಗೊಳಿಸುತ್ತಾರೆ.

01069020a ಸ ತ್ವಂ ನೃಪತಿಶಾರ್ದೂಲ ನ ಪುತ್ರಂ ತ್ಯಕ್ತುಮರ್ಹಸಿ।
01069020c ಆತ್ಮಾನಂ ಸತ್ಯಧರ್ಮೌ ಚ ಪಾಲಯಾನೋ ಮಹೀಪತೇ।
01069020e ನರೇಂದ್ರಸಿಂಹ ಕಪಟಂ ನ ವೋದುಂ ತ್ವಮಿಹಾರ್ಹಸಿ।।

ನೃಪತಿಶಾರ್ದೂಲ! ಆದುದರಿಂದ ನಿನ್ನ ಪುತ್ರನನ್ನು ತ್ಯಜಿಸುವುದು ಸರಿಯಲ್ಲ. ಮಹೀಪತೇ! ನಿನ್ನ ಸತ್ಯ-ಧರ್ಮವನ್ನು ಪರಿಪಾಲಿಸು. ನರೇಂದ್ರಸಿಂಹ! ನಿನ್ನಂಥವನಿಗೆ ಈ ವಿಷಯದಲ್ಲಿ ಕಪಟನಾಗುವುದು ಸರಿಯಲ್ಲ.

01069021a ವರಂ ಕೂಪಶತಾದ್ವಾಪೀ ವರಂ ವಾಪೀಶತಾತ್ಕ್ರತುಃ।
01069021c ವರಂ ಕ್ರತುಶತಾತ್ಪುತ್ರಃ ಸತ್ಯಂ ಪುತ್ರಶತಾದ್ವರಂ।।

ನೂರು ಯಾಗಗಳನ್ನು ಮಾಡುವುದಕ್ಕಿಂತ ನೂರು ಬಾವಿಗಳನ್ನು ತೋಡುವುದೇ ಶ್ರೇಷ್ಠ; ನೂರು ಯಾಗಗಳನ್ನು ಮಾಡುವುದಕ್ಕಿಂಥ ಒಂದು ಪುತ್ರನನ್ನು ಪಡೆಯುವುದು ಶ್ರೇಷ್ಠ; ಆದರೆ ನೂರು ಪುತ್ರರಿಗಿಂತಲೂ ಶ್ರೇಷ್ಠವಾದದ್ದು ಸತ್ಯ.

01069022a ಅಶ್ವಮೇಧಸಹಸ್ರಂ ಚ ಸತ್ಯಂ ಚ ತುಲಯಾ ಧೃತಂ।
01069022c ಅಶ್ವಮೇಧಸಹಸ್ರಾದ್ಧಿ ಸತ್ಯಮೇವ ವಿಶಿಷ್ಯತೇ।।

ಸಹಸ್ರ ಅಶ್ವಮೇಧಗಳನ್ನು ಮತ್ತು ಸತ್ಯವನ್ನೂ ತುಲನೆ ಮಾಡಿದರೆ, ಸಹಸ್ರ ಅಶ್ವಮೇಧಗಳಿಗಿಂತಲೂ ಸತ್ಯವೇ ವಿಶೇಷವಾಗುತ್ತದೆ.

01069023a ಸರ್ವವೇದಾಧಿಗಮನಂ ಸರ್ವತೀರ್ಥಾವಗಾಹನಂ।
01069023c ಸತ್ಯಂ ಚ ವದತೋ ರಾಜನ್ಸಮಂ ವಾ ಸ್ಯಾನ್ನ ವಾ ಸಮಂ।।

ರಾಜನ್! ಸತ್ಯವು ಸರ್ವವೇದಗಳ ಪಾಂಡಿತ್ಯ ಮತ್ತು ಸರ್ವ ತೀರ್ಥಗಳ ಯಾತ್ರೆಗೆ ಸಮವೆಂದು ಹೇಳುತ್ತಾರೆ. ಇದಕ್ಕೆ ಸರಿಯಾದುದು ಇನ್ನು ಯಾವುದೂ ಇಲ್ಲ.

01069024a ನಾಸ್ತಿ ಸತ್ಯಾತ್ಪರೋ ಧರ್ಮೋ ನ ಸತ್ಯಾದ್ವಿದ್ಯತೇ ಪರಂ।
01069024c ನ ಹಿ ತೀವ್ರತರಂ ಕಿಂ ಚಿದನೃತಾದಿಹ ವಿದ್ಯತೇ।।

ಸತ್ಯಕ್ಕಿಂತಲೂ ಶ್ರೇಷ್ಠವಾದ ಧರ್ಮವಿಲ್ಲ, ಸತ್ಯಕ್ಕಿಂತಲೂ ಶ್ರೇಷ್ಠವಾದದ್ದು ಯಾವುದೂ ಇಲ್ಲ. ಅನೃತಕ್ಕಿಂತಲೂ ತೀವ್ರತರ ಪಾಪವಾದರೂ ಏನು?

01069025a ರಾಜನ್ಸತ್ಯಂ ಪರಂ ಬ್ರಹ್ಮ ಸತ್ಯಂ ಚ ಸಮಯಃ ಪರಃ।
01069025c ಮಾ ತ್ಯಾಕ್ಷೀಃ ಸಮಯಂ ರಾಜನ್ಸತ್ಯಂ ಸಂಗತಮಸ್ತು ತೇ।।

ರಾಜನ್! ಸತ್ಯವೇ ಪರಬ್ರಹ್ಮ, ಸತ್ಯವೇ ಪರಮ ತಪಸ್ಸು. ನಿನ್ನ ವಚನವನ್ನು ತೊರೆಯಬೇಡ ರಾಜನ್! ನೀನು ಸತ್ಯದಲ್ಲಿ ಒಂದಾಗು.

01069026a ಅನೃತೇ ಚೇತ್ಪ್ರಸಂಗಸ್ತೇ ಶ್ರದ್ದಧಾಸಿ ನ ಚೇತ್ಸ್ವಯಂ।
01069026c ಆತ್ಮನೋ ಹಂತ ಗಚ್ಛಾಮಿ ತ್ವಾದೃಶೇ ನಾಸ್ತಿ ಸಂಗತಂ।।

ಸುಳ್ಳು ನಿನ್ನನ್ನು ಬಿಡದಿದ್ದರೆ ಅಥವಾ ನನ್ನಲ್ಲಿ ನಿನಗೆ ವಿಶ್ವಾಸವಿಲ್ಲದಿದ್ದರೆ ನಾನೇ ಇಲ್ಲಿಂದ ಹೊರಟು ಹೋಗುತ್ತೇನೆ. ನನಗೆ ನಿನ್ನ ಜೊತೆ ಇರುವುದು ಬೇಡ.

01069027a ಋತೇಽಪಿ ತ್ವಯಿ ದುಃಷಂತ ಶೈಲರಾಜಾವತಂಸಕಾಂ।
01069027c ಚತುರಂತಾಮಿಮಾಮುರ್ವೀಂ ಪುತ್ರೋ ಮೇ ಪಾಲಯಿಷ್ಯತಿ।।

ದುಃಷಂತ! ನಿನ್ನ ನಂತರ ನಾಲ್ಕೂ ಎಡೆಯಲ್ಲಿ ಸಮುದ್ರದಿಂದ ಕೂಡಿದ ಈ ಶೈಲರಾಜವತಂಸಕ ಭೂಮಿಯನ್ನು ನನ್ನ ಈ ಪುತ್ರನು ಆಳುವನು.””

01069028 ವೈಶಂಪಾಯನ ಉವಾಚ।
01069028a ಏತಾವದುಕ್ತ್ವಾ ವಚನಂ ಪ್ರಾತಿಷ್ಠತ ಶಕುಂತಲಾ।
01069028c ಅಥಾಂತರಿಕ್ಷೇ ದುಃಷಂತಂ ವಾಗುವಾಚಾಶರೀರಿಣೀ।
01069028e ಋತ್ವಿಕ್ಪುರೋಹಿತಾಚಾರ್ಯೈರ್ಮಂತ್ರಿಭಿಶ್ಚಾವೃತಂ ತದಾ।।

ವೈಶಂಪಾಯನನು ಹೇಳಿದನು: “ಈ ಮಾತುಗಳನ್ನಾಡಿದ ಶಕುಂತಲೆಯು ಹಿಂದಿರುಗುತ್ತಿದ್ದಂತೆಯೇ ಋತ್ವಿಜರು, ಪುರೋಹಿತರು, ಆಚಾರ್ಯರು ಮತ್ತು ಮಂತ್ರಿಗಳಿಂದ ಸುತ್ತುವರೆಯಲ್ಪಟ್ಟಿದ್ದ ದುಃಷಂತನನ್ನುದ್ದೇಶಿಸಿ ಅಂತರಿಕ್ಷದಿಂದ ಅಶರೀರವಾಣಿಯೊಂದು ಕೇಳಿಬಂದಿತು.

01069029a ಭಸ್ತ್ರಾ ಮಾತಾ ಪಿತುಃ ಪುತ್ರೋ ಯೇನ ಜಾತಃ ಸ ಏವ ಸಃ।
01069029c ಭರಸ್ವ ಪುತ್ರಂ ದುಃಷಂತ ಮಾವಮಂಸ್ಥಾಃ ಶಕುಂತಲಾಂ।।

“ದುಃಷಂತ! ತಾಯಿಯು ಮಗನ ಮಾಂಸ ಮತ್ತು ಚರ್ಮ. ಆದರೆ ತಂದೆಯು ಅವನ ಆತ್ಮ. ಆದುದರಿಂದ ನಿನ್ನ ಈ ಮಗನನ್ನು ಸ್ವೀಕರಿಸು. ಶಕುಂತಲೆಯನ್ನು ಅವಮಾನಿಸಬೇಡ.

01069030a ರೇತೋಧಾಃ ಪುತ್ರ ಉನ್ನಯತಿ ನರದೇವ ಯಮಕ್ಷಯಾತ್।
01069030c ತ್ವಂ ಚಾಸ್ಯ ಧಾತಾ ಗರ್ಭಸ್ಯ ಸತ್ಯಮಾಹ ಶಕುಂತಲಾ।।

ತನ್ನ ರೇತದಿಂದ ಪಡೆದ ಮಗನು ನರನನ್ನು ಯಮಕ್ಷಯದಿಂದ ರಕ್ಷಿಸುತ್ತಾನೆ. ನೀನೇ ಈ ಗರ್ಭವನ್ನಿತ್ತವನು. ಶಕುಂತಲೆಯು ಸತ್ಯವನ್ನು ನುಡಿದಿದ್ದಾಳೆ.

01069031a ಜಾಯಾ ಜನಯತೇ ಪುತ್ರಮಾತ್ಮನೋಽಂಗಂ ದ್ವಿಧಾ ಕೃತಂ।
01069031c ತಸ್ಮಾದ್ಭರಸ್ವ ದುಃಷಂತ ಪುತ್ರಂ ಶಾಕುಂತಲಂ ನೃಪ।।

ನರನು ತನ್ನನ್ನು ಎರಡು ಭಾಗಗಳನ್ನಾಗಿ ಮಾಡಿಕೊಂಡು ಪತ್ನಿಯಲ್ಲಿ ಹುಟ್ಟುತ್ತಾನೆ. ಆದುದರಿಂದ ನೃಪ ದುಃಷಂತ! ಶಕುಂತಲೆಯಲ್ಲಿ ಜನಿಸಿದ ನಿನ್ನ ಈ ಪುತ್ರನನ್ನು ಸ್ವೀಕರಿಸು.

01069032a ಅಭೂತಿರೇಷಾ ಕಸ್ತ್ಯಜ್ಯಾಜ್ಜೀವಂಜೀವಂತಮಾತ್ಮಜಂ।
01069032c ಶಾಕುಂತಲಂ ಮಹಾತ್ಮಾನಂ ದೌಃಷಂತಿಂ ಭರ ಪೌರವ।।

ತನ್ನ ಮಗನನ್ನು ಪರಿತ್ಯಜಿಸಿ ಜೀವಿಸುವುದು ಅತಿ ದುರಾದೃಷ್ಟ ವಿಷಯ. ಪೌರವ! ಮಹಾತ್ಮ! ದೌಃಷಂತ ಮತ್ತು ಶಕುಂತಲೆಯನ್ನು ಪಾಲಿಸು.

01069033a ಭರ್ತವ್ಯೋಽಯಂ ತ್ವಯಾ ಯಸ್ಮಾದಸ್ಮಾಕಂ ವಚನಾದಪಿ।
01069033c ತಸ್ಮಾದ್ಭವತ್ವಯಂ ನಾಮ್ನಾ ಭರತೋ ನಾಮ ತೇ ಸುತಃ।।

ನಮ್ಮ ಈ ಮಾತುಗಳ ಆಧಾರದ ಮೇಲೆ ನೀನು ಇವನನ್ನು ಪಾಲಿಸುವುದರಿಂದ ಇಂದಿನಿಂದ ನಿನ್ನ ಈ ಮಗನ ಹೆಸರು ಭರತ ಎಂದಾಗಲಿ.”

01069034a ತತ್‌ಶ್ರುತ್ವಾ ಪೌರವೋ ರಾಜಾ ವ್ಯಾಹೃತಂ ವೈ ದಿವೌಕಸಾಂ।
01069034c ಪುರೋಹಿತಮಮಾತ್ಯಾಂಶ್ಚ ಸಂಪ್ರಹೃಷ್ಟೋಽಬ್ರವೀದಿದಂ।।

ದಿವೌಕಸರ ಈ ಮಾತುಗಳನ್ನು ಕೇಳಿದ ರಾಜ ಪೌರವನು ಸಂಪ್ರಹೃಷ್ಟನಾಗಿ ತನ್ನ ಪುರೋಹಿತರು ಮತ್ತು ಅಮಾತ್ಯರನ್ನುದ್ದೇಶಿಸಿ ಹೇಳಿದನು:

01069035a ಶೃಣ್ವಂತ್ವೇತದ್ಭವಂತೋಽಸ್ಯ ದೇವದೂತಸ್ಯ ಭಾಷಿತಂ।
01069035c ಅಹಮಪ್ಯೇವಮೇವೈನಂ ಜಾನಾಮಿ ಸ್ವಯಮಾತ್ಮಜಂ।।

“ದೇವದೂತನಾಡಿದ ಈ ಮಾತುಗಳನ್ನು ಕೇಳಿ. ಇವನು ನನ್ನ ಮಗನೇ ಎಂದು ನನಗೂ ತಿಳಿದಿತ್ತು.

01069036a ಯದ್ಯಹಂ ವಚನಾದೇವ ಗೃಹ್ಣೀಯಾಮಿಮಮಾತ್ಮಜಂ।
01069036c ಭವೇದ್ಧಿ ಶಂಕಾ ಲೋಕಸ್ಯ ನೈವಂ ಶುದ್ಧೋ ಭವೇದಯಂ।।

ಕೇವಲ ಇವಳ ಮಾತಿನ ಆಧಾರದ ಮೇಲೆ ಇವನನ್ನು ನಾನು ಸ್ವೀಕರಿಸಿದ್ದರೆ ಲೋಕದ ಜನರು ಶಂಕಿತರಾಗುತ್ತಿದ್ದರು, ಮತ್ತು ಇವನನ್ನು ಪರಿಶುದ್ಧನೆಂದು ಪರಿಗಣಿಸುತ್ತಿರಲಿಲ್ಲ.”

01069037a ತಂ ವಿಶೋಧ್ಯ ತದಾ ರಾಜಾ ದೇವದೂತೇನ ಭಾರತ।
01069037c ಹೃಷ್ಟಃ ಪ್ರಮುದಿತಶ್ಚಾಪಿ ಪ್ರತಿಜಗ್ರಾಹ ತಂ ಸುತಂ।।

ಭಾರತ! ತನ್ನ ಮಗನ ಜನ್ಮದ ಪವಿತ್ರತೆಯು ತಿಳಿದಾದ ನಂತರ ರಾಜನು ತುಂಬಾ ಸಂತೋಷಗೊಂಡನು.

01069038a ಮೂರ್ಧ್ನಿ ಚೈನಮುಪಾಘ್ರಾಯ ಸಸ್ನೇಹಂ ಪರಿಷಸ್ವಜೇ।
01069038c ಸಭಾಜ್ಯಮಾನೋ ವಿಪ್ರೈಶ್ಚ ಸ್ತೂಯಮಾನಶ್ಚ ಬಂದಿಭಿಃ।
01069038e ಸ ಮುದಂ ಪರಮಾಂ ಲೇಭೇ ಪುತ್ರಸಂಸ್ಪರ್ಶಜಾಂ ನೃಪಃ।।

ತನ್ನ ಮಗನ ನೆತ್ತಿಯನ್ನು ಆಘ್ರಾಣಿಸಿ ಸ್ನೇಹದಿಂದ ಅಪ್ಪಿಕೊಂಡನು. ಸಭೆಯಲ್ಲಿದ್ದ ವಿಪ್ರರೆಲ್ಲರೂ ಆಶೀರ್ವದಿಸಿದರು. ಸೂತರು ಹೊಗಳಿದರು. ರಾಜನು ತನ್ನ ಮಗುವಿನ ಸ್ಪರ್ಷದ ಪರಮ ಸಂತಸವನ್ನು ಅನುಭವಿಸಿದನು.

01069039a ತಾಂ ಚೈವ ಭಾರ್ಯಾಂ ಧರ್ಮಜ್ಞಃ ಪೂಜಯಾಮಾಸ ಧರ್ಮತಃ।
01069039c ಅಬ್ರವೀಚ್ಚೈವ ತಾಂ ರಾಜಾ ಸಾಂತ್ವಪೂರ್ವಮಿದಂ ವಚಃ।।

ಧರ್ಮಜ್ಞ ರಾಜನು ತನ್ನ ಭಾರ್ಯೆಯನ್ನೂ ಧಾರ್ಮಿಕವಾಗಿ ಗೌರವಿಸಿದನು ಮತ್ತು ಅವಳಿಗೆ ಸಾಂತ್ವನದ ಈ ಮಾತುಗಳನ್ನು ನುಡಿದನು:

01069040a ಕೃತೋ ಲೋಕಪರೋಕ್ಷೋಽಯಂ ಸಂಬಂಧೋ ವೈ ತ್ವಯಾ ಸಹ।
01069040c ತಸ್ಮಾದೇತನ್ಮಯಾ ದೇವಿ ತ್ವಚ್ಛುದ್ಧ್ಯರ್ಥಂ ವಿಚಾರಿತಂ।।
01069041a ಮನ್ಯತೇ ಚೈವ ಲೋಕಸ್ತೇ ಸ್ತ್ರೀಭಾವಾನ್ಮಯಿ ಸಂಗತಂ।
01069041c ಪುತ್ರಶ್ಚಾಯಂ ವೃತೋ ರಾಜ್ಯೇ ಮಯಾ ತಸ್ಮಾದ್ವಿಚಾರಿತಂ।।

“ದೇವಿ! ನಿನ್ನೊಡನೆ ನನ್ನ ಸಂಬಂಧವು ಲೋಕ ಪರೋಕ್ಷವಾಗಿ ನಡೆಯಿತು. ಆದುದರಿಂದ ನಿನ್ನ ಶುದ್ಧತೆಯನ್ನು ಪ್ರತಿಪಾದಿಸುವುದು ಹೇಗೆಂದು ವಿಚಾರಿಸುತ್ತಿದ್ದೆ. ಇಲ್ಲದಿದ್ದರೆ ಲೋಕದ ಜನರು ನಿನ್ನ ಮತ್ತು ನನ್ನ ಸಂಗಮವು ಕೇವಲ ಕಾಮದಿಂದಾಯಿತೆಂದು ತಿಳಿದಾರು. ಮತ್ತು ನನ್ನ ರಾಜ್ಯದ ಒಡೆಯನಾಗುವ ನನ್ನ ಈ ಮಗನನ್ನು ಅನೈತಿಕವಾಗಿ ಹುಟ್ಟಿದವನೆಂದು ತಿಳಿಯುತ್ತಾರೆ.

01069042a ಯಚ್ಚ ಕೋಪಿತಯಾತ್ಯರ್ಥಂ ತ್ವಯೋಕ್ತೋಽಸ್ಮ್ಯಪ್ರಿಯಂ ಪ್ರಿಯೇ।
01069042c ಪ್ರಣಯಿನ್ಯಾ ವಿಶಾಲಾಕ್ಷಿ ತತ್ಕ್ಷಾಂತಂ ತೇ ಮಯಾ ಶುಭೇ।।

ಪ್ರಿಯೇ! ವಿಶಾಲಾಕ್ಷಿ! ಕೋಪದಲ್ಲಿ ನೀನು ನನಗೆ ಹೇಳಿದ ಎಲ್ಲ ಅಪ್ರಿಯ ಮಾತುಗಳನ್ನೂ ಕ್ಷಮಿಸಿದ್ದೇನೆ. ನೀನು ನನ್ನ ಪ್ರಿಯೆ ಶುಭೇ!”

01069043a ತಾಮೇವಮುಕ್ತ್ವಾ ರಾಜರ್ಷಿರ್ದುಃಷಂತೋ ಮಹಿಷೀಂ ಪ್ರಿಯಾಂ।
01069043c ವಾಸೋಭಿರನ್ನಪಾನೈಶ್ಚ ಪೂಜಯಾಮಾಸ ಭಾರತ।।

ಭಾರತ! ರಾಜರ್ಷಿ ದುಃಷಂತನು ತನ್ನ ಪ್ರಿಯ ಮಹಿಷಿಗೆ ಈ ರೀತಿ ಹೇಳಿ ಅವಳನ್ನು ವಸ್ತ್ರ, ಆಹಾರ ಮತ್ತು ಪಾನೀಯಗಳನ್ನಿತ್ತು ಸತ್ಕರಿಸಿದನು.

01069044a ದುಃಷಂತಶ್ಚ ತತೋ ರಾಜಾ ಪುತ್ರಂ ಶಾಕುಂತಲಂ ತದಾ।
01069044c ಭರತಂ ನಾಮತಃ ಕೃತ್ವಾ ಯೌವರಾಜ್ಯೇಽಭ್ಯಷೇಚಯತ್।।

ನಂತರ, ರಾಜ ದುಃಷಂತನು ಶಕುಂತಲೆಯ ಪುತ್ರನಿಗೆ ಭರತನೆಂಬ ಹೆಸರಿನಲ್ಲಿ ಯುವರಾಜ್ಯಾಭಿಷೇಕವನ್ನು ನಡೆಸಿದನು.

01069045a ತಸ್ಯ ತತ್ಪ್ರಥಿತಂ ಚಕ್ರಂ ಪ್ರಾವರ್ತತ ಮಹಾತ್ಮನಃ।
01069045c ಭಾಸ್ವರಂ ದಿವ್ಯಮಜಿತಂ ಲೋಕಸನ್ನಾದನಂ ಮಹತ್।।

ಅಂದಿನ ನಂತರ ದೇವತೆಗಳ ರಥದಂತಿರುವ ಆ ಮಹಾತ್ಮನ ರಥದ ಹೊಳೆಯುತ್ತಿರುವ ಚಕ್ರಗಳು ತಮ್ಮ ಧ್ವನಿಯನ್ನು ಲೋಕದಲ್ಲೆಲ್ಲ ತುಂಬಿಸುತ್ತಾ ಇಡೀ ಭೂಮಿಯನ್ನೇ ತಿರುಗಿದವು.

01069046a ಸ ವಿಜಿತ್ಯ ಮಹೀಪಾಲಾಂಶ್ಚಕಾರ ವಶವರ್ತಿನಃ।
01069046c ಚಚಾರ ಚ ಸತಾಂ ಧರ್ಮಂ ಪ್ರಾಪ ಚಾನುತ್ತಮಂ ಯಶಃ।।

ಎಲ್ಲ ಮಹೀಪಾಲರನ್ನೂ ಗೆದ್ದು ಧರ್ಮದಿಂದ ಪ್ರಜೆಗಳನ್ನು ಪಾಲಿಸುತ್ತಾ ಅನುತ್ತಮ ಯಶಸ್ಸನ್ನು ಗಳಿಸಿದನು.

01069047a ಸ ರಾಜಾ ಚಕ್ರವರ್ತ್ಯಾಸೀತ್ಸಾರ್ವಭೌಮಃ ಪ್ರತಾಪವಾನ್।
01069047c ಈಜೇ ಚ ಬಹುಭಿರ್ಯಜ್ಞೈರ್ಯಥಾ ಶಕ್ರೋ ಮರುತ್ಪತಿಃ।।

ಆ ಪ್ರತಾಪಿ ರಾಜನು ಚಕ್ರವರ್ತಿ ಸಾರ್ವಭೌಮನೆಂದು ಕರೆಯಲ್ಪಟ್ಟನು. ಮರುತ್ಪತಿ ಇಂದ್ರನಂತೆ ಅವನು ಹಲವಾರು ಯಜ್ಞಗಳನ್ನು ನಡೆಸಿದನು.

01069048a ಯಾಜಯಾಮಾಸ ತಂ ಕಣ್ವೋ ದಕ್ಷವದ್ಭೂರಿದಕ್ಷಿಣಂ।
01069048c ಶ್ರೀಮಾನ್ಗೋವಿತತಂ ನಾಮ ವಾಜಿಮೇಧಮವಾಪ ಸಃ।
01069048e ಯಸ್ಮಿನ್ಸಹಸ್ರಂ ಪದ್ಮಾನಾಂ ಕಣ್ವಾಯ ಭರತೋ ದದೌ।।

ಕಣ್ವನು ಈ ಯಜ್ಞಗಳಲ್ಲಿ ಪುರೋಹಿತನಾಗಿದ್ದನು, ಮತ್ತು ಬ್ರಾಹ್ಮಣರಿಗೆ ಸಾಕಷ್ಟು ದಕ್ಷಿಣೆಗಳನ್ನು ನೀಡಲಾಯಿತು. ಆ ಶ್ರೀಮಂತನು ಗೋಮೇಧ-ಅಶ್ವಮೇಧಗಳೆರಡನ್ನೂ ನೆರವೇರಿಸಿದನು. ಭರತನು ಕಣ್ವನಿಗೆ ಸಹಸ್ರ ಚಿನ್ನದ ನಾಣ್ಯಗಳನ್ನು ದಕ್ಷಿಣೆಯನ್ನಾಗಿ ಇತ್ತನು.

01069049a ಭರತಾದ್ಭಾರತೀ ಕೀರ್ತಿರ್ಯೇನೇದಂ ಭಾರತಂ ಕುಲಂ।
01069049c ಅಪರೇ ಯೇ ಚ ಪೂರ್ವೇ ಚ ಭಾರತಾ ಇತಿ ವಿಶ್ರುತಾಃ।।

ಭರತನಿಂದ ಭಾರತ ಕುಲವು ಹುಟ್ಟಿತು, ಅವನ ನಂತರ ಹುಟ್ಟಿದ ರಾಜರು ಭಾರತರೆಂದು ವಿಶ್ರುತರಾದರು.

01069050a ಭರತಸ್ಯಾನ್ವವಾಯೇ ಹಿ ದೇವಕಲ್ಪಾ ಮಹೌಜಸಃ।
01069050c ಬಭೂವುರ್ಬ್ರಹ್ಮಕಲ್ಪಾಶ್ಚ ಬಹವೋ ರಾಜಸತ್ತಮಾಃ।।

ಭರತನ ಕುಲದಲ್ಲಿ ಹಲವಾರು ದೇವಕಲ್ಪ-ಬ್ರಹ್ಮಕಲ್ಪ ಮಹೌಜಸ ರಾಜಸತ್ತಮರು ಜನಿಸಿದರು.

01069051a ಯೇಷಾಮಪರಿಮೇಯಾನಿ ನಾಮಧೇಯಾನಿ ಸರ್ವಶಃ।
01069051c ತೇಷಾಂ ತು ತೇ ಯಥಾಮುಖ್ಯಂ ಕೀರ್ತಯಿಷ್ಯಾಮಿ ಭಾರತ।
01069051e ಮಹಾಭಾಗಾನ್ದೇವಕಲ್ಪಾನ್ಸತ್ಯಾರ್ಜವಪರಾಯಣಾನ್।।

ಭಾರತ! ಇವರೆಲ್ಲರ ಹೆಸರುಗಳು ಅಪರಿಮಿತ. ಆದುದರಿಂದ ಅವರಲ್ಲಿ ಮುಖ್ಯರಾದ, ಮಹಾಭಾಗ, ದೇವಕಲ್ಪರ, ಸತ್ಯಾರ್ಜವ ಪರಾಯಣರ ಹೆಸರುಗಳನ್ನು ಹೇಳುತ್ತೇನೆ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಶಕುಂತಲೋಪಾಖ್ಯಾನೇ ಏಕೋನಸಪ್ತತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಶಕುಂತಲೋಪಾಖ್ಯಾನದಲ್ಲಿ ಅರವತ್ತೊಂಭತ್ತನೆಯ ಅಧ್ಯಾಯವು.