068 ಶಕುಂತಲೋಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಸಂಭವ ಪರ್ವ

ಅಧ್ಯಾಯ 68

ಸಾರ

ಶಕುಂತಲೆಯಲ್ಲಿ ಸರ್ವದಮನನ ಜನನ (1-10). ಶಕುಂತಲೆಯು ಮಗನನ್ನು ದುಃಷಂತನಿಗೆ ಒಪ್ಪಿಸುವುದು; ದುಃಷಂತನು ಮರೆಯದಿದ್ದರೂ ನೆನಪಿಲ್ಲವೆಂದು ಹೇಳುವುದು (11-15). ಶಕುಂತಲೆಯು ರಾಜನಿಗೆ ತಿಳಿಸಿ ಹೇಳಲು ಪ್ರಯತ್ನಿಸುವುದು (16-80).

01068001 ವೈಶಂಪಾಯನ ಉವಾಚ।
01068001a ಪ್ರತಿಜ್ಞಾಯ ತು ದುಃಷಂತೇ ಪ್ರತಿಯಾತೇ ಶಕುಂತಲಾ।
01068001c ಗರ್ಭಂ ಸುಷಾವ ವಾಮೋರುಃ ಕುಮಾರಮಮಿತೌಜಸಂ।।

ವೈಶಂಪಾಯನನು ಹೇಳಿದನು: ““ಹಿಂದಿರುಗುತ್ತೇನೆ” ಎಂದು ಪ್ರತಿಜ್ಞೆ ಮಾಡಿ ದುಃಷಂತನು ಹೊರಟು ಹೋದ ನಂತರ ಆ ವಾಮೋರು ಶಕುಂತಲೆಯು ಅಮಿತೌಜಸ ಕುಮಾರನಿಗೆ ಜನ್ಮವನ್ನಿತ್ತಳು.

01068002a ತ್ರಿಷು ವರ್ಷೇಷು ಪೂರ್ಣೇಷು ದಿಪ್ತಾನಲಸಮದ್ಯುತಿಂ।
01068002c ರೂಪೌದಾರ್ಯಗುಣೋಪೇತಂ ದೌಃಷಂತಿಂ ಜನಮೇಜಯ।।

ಜನಮೇಜಯ! ಮೂರು ವರ್ಷಗಳು ತುಂಬಿದಾಗಲೇ ದುಃಷಂತನ ಆ ಮಗನು ಅಗ್ನಿಯ ತೇಜಸ್ಸಿನಲ್ಲಿ ಬೆಳಗುತ್ತಿದ್ದನು ಮತ್ತು ರೂಪ ಔದಾರ್ಯ ಗುಣಗಳಿಂದ ತುಂಬಿದ್ದನು.

01068003a ಜಾತಕರ್ಮಾದಿಸಂಸ್ಕಾರಂ ಕಣ್ವಃ ಪುಣ್ಯಕೃತಾಂ ವರಃ।
01068003c ತಸ್ಯಾಥ ಕಾರಯಾಮಾಸ ವರ್ಧಮಾನಸ್ಯ ಧೀಮತಃ।।

ಪುಣ್ಯಕೃತರಲ್ಲಿ ಶ್ರೇಷ್ಠ ಕಣ್ವನು ಬೆಳೆಯುತ್ತಿರುವ ಆ ಧೀಮಂತನಿಗೆ ಜಾತಕರ್ಮ ಮೊದಲಾದ ಸಂಸ್ಕಾರಗಳನ್ನು ನಡೆಯಿಸಿದನು.

01068004a ದಂತೈಃ ಶುಕ್ಲೈಃ ಶಿಖರಿಭಿಃ ಸಿಂಹಸಂಹನನೋ ಯುವಾ।
01068004c ಚಕ್ರಾಂಕಿತಕರಃ ಶ್ರೀಮಾನ್ಮಹಾಮೂರ್ಧಾ ಮಹಾಬಲಃ।
01068004e ಕುಮಾರೋ ದೇವಗರ್ಭಾಭಃ ಸ ತತ್ರಾಶು ವ್ಯವರ್ಧತ।।

ಅವನ ಹಲ್ಲುಗಳು ಬಿಳಿಯಾಗಿದ್ದವು, ಸಿಂಹವನ್ನೂ ಕೊಲ್ಲಬಲ್ಲ ಶಕ್ತಿಯನ್ನು ಹೊಂದಿದ್ದನು, ಚಕ್ರದ ಗುರುತನ್ನು ಹೊಂದಿದ್ದನು, ಶ್ರೀಮಾನ್ ಕುಮಾರನು ಅಗಲವಾದ ಹಣೆ, ಮಹಾಬಲಶಾಲಿ, ದೇವಗರ್ಭದಲ್ಲಿ ಜನಿಸಿದನೋ ಅನ್ನುವ ಹಾಗೆ ಕಾಂತಿಯಿಂದ ಅಲ್ಲಿ ಬೆಳೆದನು.

01068005a ಷಡ್ವರ್ಷ ಏವ ಬಾಲಃ ಸ ಕಣ್ವಾಶ್ರಮಪದಂ ಪ್ರತಿ।
01068005c ವ್ಯಾಘ್ರಾನ್ಸಿಂಹಾನ್ವರಾಹಾಂಶ್ಚ ಗಜಾಂಶ್ಚ ಮಹಿಷಾಂಸ್ತಥಾ।।
01068006a ಬದ್ಧ್ವಾ ವೃಕ್ಷೇಷು ಬಲವಾನಾಶ್ರಮಸ್ಯ ಸಮಂತತಃ।
01068006c ಆರೋಹನ್ದಮಯಂಶ್ಚೈವ ಕ್ರೀಡಂಶ್ಚ ಪರಿಧಾವತಿ।।

ಆರುವರ್ಷದವನಾಗ ಆ ಬಾಲಕನು ಕಣ್ವಾಶ್ರಮದ ಬಳಿಯಲ್ಲಿ ಹುಲಿ, ಸಿಂಹ, ವರಾಹ, ಆನೆ, ಮತ್ತು ಕಾಡೆಮ್ಮೆಗಳನ್ನು ಮರಗಳಿಗೆ ಕಟ್ಟಿ ಅವುಗಳ ಮೇಲೆ ಸವಾರಿ ಮಾಡುತ್ತಿದ್ದನು ಅಥವಾ ಹೊಡೆದು ಓಡಿಸಿ ಆಟವಾಡುತ್ತಿದ್ದನು.

01068007a ತತೋಽಸ್ಯ ನಾಮ ಚಕ್ರುಸ್ತೇ ಕಣ್ವಾಶ್ರಮನಿವಾಸಿನಃ।
01068007c ಅಸ್ತ್ವಯಂ ಸರ್ವದಮನಃ ಸರ್ವಂ ಹಿ ದಮಯತ್ಯಯಂ।।

ಸರ್ವ ಪ್ರಾಣಿಗಳನ್ನೂ ಹತೋಟಿಯಲ್ಲಿಡುತ್ತಿದ್ದುದರಿಂದ “ಅವನು ಸರ್ವದಮನ” ಎಂದು ಕಣ್ವಾಶ್ರಮವಾಸಿಗಳು ಅವನಿಗೆ ಹೆಸರನ್ನಿತ್ತರು.

01068008a ಸ ಸರ್ವದಮನೋ ನಾಮ ಕುಮಾರಃ ಸಮಪದ್ಯತ।
01068008c ವಿಕ್ರಮೇಣೌಜಸಾ ಚೈವ ಬಲೇನ ಚ ಸಮನ್ವಿತಃ।।

ಹೀಗೆ ವಿಕ್ರಮ, ತೇಜಸ್ಸು ಮತ್ತು ಬಲಗಳಿಂದೊಡಗೂಡಿದ ಆ ಕುಮಾರನು ‘ಸರ್ವದಮನ’ ಎಂಬ ಹೆಸರಿನಿಂದ ಕರೆಯಲ್ಪಟ್ಟನು.

01068009a ತಂ ಕುಮಾರಮೃಷಿರ್ದೃಷ್ಟ್ವಾ ಕರ್ಮ ಚಾಸ್ಯಾತಿಮಾನುಷಂ।
01068009c ಸಮಯೋ ಯೌವರಾಜ್ಯಾಯೇತ್ಯಬ್ರವೀಚ್ಚ ಶಕುಂತಲಾಂ।।

ಅವನ ಅಮಾನುಷ ಕೃತ್ಯಗಳನ್ನು ನೋಡಿದ ಋಷಿಯು “ಇವನು ಯುವರಾಜನಾಗುವ ಸಮಯ ಬಂದಿದೆ” ಎಂದು ಶಕುಂತಲೆಗೆ ಹೇಳಿದನು.

01068010a ತಸ್ಯ ತದ್ಬಲಮಾಜ್ಞಾಯ ಕಣ್ವಃ ಶಿಷ್ಯಾನುವಾಚ ಹ।
01068010c ಶಕುಂತಲಾಮಿಮಾಂ ಶೀಘ್ರಂ ಸಹಪುತ್ರಾಮಿತೋಽಶ್ರಮಾತ್।
01068010e ಭರ್ತ್ರೇ ಪ್ರಾಪಯತಾದ್ಯೈವ ಸರ್ವಲಕ್ಷಣಪೂಜಿತಾಂ।।

ತನ್ನ ಶಿಷ್ಯಬಲವನ್ನು ಕರೆದು ಕಣ್ವನು ಹೇಳಿದನು: “ಈ ಸರ್ವ ಲಕ್ಷಣ ಪೂಜಿತ ಶಕುಂತಲೆಯನ್ನು ಅವಳ ಪುತ್ರನೊಂದಿಗೆ ಶೀಘ್ರದಲ್ಲಿ ಆಶ್ರಮದಿಂದ ಅವಳ ಪತಿಯ ಮನೆಗೆ ಕರೆದೊಯ್ಯಿರಿ.

01068011a ನಾರೀಣಾಂ ಚಿರವಾಸೋ ಹಿ ಬಾಂಧವೇಷು ನ ರೋಚತೇ।
01068011c ಕೀರ್ತಿಚಾರಿತ್ರಧರ್ಮಘ್ನಸ್ತಸ್ಮಾನ್ನಯತ ಮಾಚಿರಂ।।

ತನ್ನ ಬಾಂಧವರಲ್ಲಿಯೇ ಸದಾ ವಾಸಿಸಿರುವುದು ನಾರಿಗೆ ಒಳ್ಳೆಯದಲ್ಲ. ಹೀಗೆ ಇರುವುದರಿಂದ ಅವಳ ಕೀರ್ತಿ, ಚಾರಿತ್ರ ಮತ್ತು ಧರ್ಮಕ್ಕೆ ಧಕ್ಕೆಯುಂಟಾಗುತ್ತದೆ. ಆದುದರಿಂದ ಅವಳನ್ನು ಶೀಘ್ರದಲ್ಲಿಯೇ ಕರೆದೊಯ್ಯಿರಿ.”

01068012a ತಥೇತ್ಯುಕ್ತ್ವಾ ತು ತೇ ಸರ್ವೇ ಪ್ರಾತಿಷ್ಠಂತಾಮಿತೌಜಸಃ।
01068012c ಶಕುಂತಲಾಂ ಪುರಸ್ಕೃತ್ಯ ಸಪುತ್ರಾಂ ಗಜಸಾಹ್ವಯಂ।।

ಅವನು ಹೀಗೆ ಹೇಳಿದ ಬಳಿಕ ಸರ್ವ ಅಮಿತೌಜಸ ಶಿಷ್ಯರೂ ಶಕುಂತಲೆಯನ್ನು ಅವಳ ಪುತ್ರನ ಸಹಿತ ಕರೆದುಕೊಂಡು ಗಜಸಾಹ್ವಯಕ್ಕೆ ಹೊರಟರು.

01068013a ಗೃಹೀತ್ವಾಮರಗರ್ಭಾಭಂ ಪುತ್ರಂ ಕಮಲಲೋಚನಂ।
01068013c ಆಜಗಾಮ ತತಃ ಶುಭ್ರಾ ದುಃಷಂತವಿದಿತಾದ್ವನಾತ್।।

ಕಮಲಲೋಚನೆ ಶುಭ್ರೆಯು ಅಮರಗರ್ಭದ ಕಾಂತಿಯುಳ್ಳ ತನ್ನ ಪುತ್ರನನ್ನು ಕರೆದುಕೊಂಡು ದುಃಷಂತನನ್ನು ಮೊದಲಬಾರಿ ಭೆಟ್ಟಿಯಾದ ಆ ವನವನ್ನು ಬಿಟ್ಟು ಹೊರಟಳು.

01068014a ಅಭಿಸೃತ್ಯ ಚ ರಾಜಾನಂ ವಿದಿತಾ ಸಾ ಪ್ರವೇಶಿತಾ।
01068014c ಸಹ ತೇನೈವ ಪುತ್ರೇಣ ತರುಣಾದಿತ್ಯವರ್ಚಸಾ।।

ರಾಜನಿಗೆ ವಾರ್ತೆಯನ್ನು ಕಳುಹಿಸಿ ಅವಳು ತನ್ನ ಆದಿತ್ಯವರ್ಚಸ ಪುತ್ರನೊಂದಿಗೆ ಪ್ರವೇಶಿಸಿದಳು.

01068015a ಪೂಜಯಿತ್ವಾ ಯಥಾನ್ಯಾಯಮಬ್ರವೀತ್ತಂ ಶಕುಂತಲಾ।
01068015c ಅಯಂ ಪುತ್ರಸ್ತ್ವಯಾ ರಾಜನ್ಯೌವರಾಜ್ಯೇಽಭಿಷಿಚ್ಯತಾಂ।।

ಯಥಾವತ್ತಾಗಿ ಅವನನ್ನು ಪೂಜಿಸಿ ಶಕುಂತಲೆಯು “ರಾಜನ್! ಇವನು ನಿನ್ನ ಪುತ್ರ. ಇವನಿಗೆ ಯುವರಾಜ್ಯಾಭಿಷೇಕವನ್ನು ಮಾಡು” ಎಂದಳು.

01068016a ತ್ವಯಾ ಹ್ಯಯಂ ಸುತೋ ರಾಜನ್ಮಯ್ಯುತ್ಪನ್ನಃ ಸುರೋಪಮಃ।
01068016c ಯಥಾಸಮಯಮೇತಸ್ಮಿನ್ವರ್ತಸ್ವ ಪುರುಷೋತ್ತಮ।।

“ರಾಜನ್! ಈ ಸುರೋಪಮನು ನನ್ನಲ್ಲಿ ಹುಟ್ಟಿದ ನಿನ್ನ ಸುತ. ಪುರುಷೋತ್ತಮ! ನೀನು ವಚನವಿತ್ತಿದ್ದಹಾಗೆ ನಡೆದುಕೋ.

01068017a ಯಥಾ ಸಮಾಗಮೇ ಪೂರ್ವಂ ಕೃತಃ ಸ ಸಮಯಸ್ತ್ವಯಾ।
01068017c ತಂ ಸ್ಮರಸ್ವ ಮಹಾಭಾಗ ಕಣ್ವಾಶ್ರಮಪದಂ ಪ್ರತಿ।।

ಮಹಾಭಾಗ! ಹಿಂದೆ ಕಣ್ವಾಶ್ರಮದಲ್ಲಿ ನಮ್ಮ ಸಮಾಗಮದ ಸಮಯದಲ್ಲಿ ನೀನು ಕೊಟ್ಟಿದ್ದ ವಚನವನ್ನು ನೆನಪಿಸಿಕೋ.”

01068018a ಸೋಽಥ ಶ್ರುತ್ವೈವ ತದ್ವಾಕ್ಯಂ ತಸ್ಯಾ ರಾಜಾ ಸ್ಮರನ್ನಪಿ।
01068018c ಅಬ್ರವೀನ್ನ ಸ್ಮರಾಮೀತಿ ಕಸ್ಯ ತ್ವಂ ದುಷ್ಟತಾಪಸಿ।।

ಅವಳ ಈ ಮಾತುಗಳನ್ನು ಕೇಳಿದ ರಾಜನು ಎಲ್ಲ ನೆನಪಿಸಿಕೊಂಡರೂ ಮರೆತುಹೋದವನ ಹಾಗೆ ಹೇಳಿದನು: “ದುಷ್ಟ ತಾಪಸಿ! ನೀನು ಯಾರವಳು?

01068019a ಧರ್ಮಕಾಮಾರ್ಥಸಂಬಂಧಂ ನ ಸ್ಮರಾಮಿ ತ್ವಯಾ ಸಹ।
01068019c ಗಚ್ಛ ವಾ ತಿಷ್ಠ ವಾ ಕಾಮಂ ಯದ್ವಾಪೀಚ್ಛಸಿ ತತ್ಕುರು।।

ನಿನ್ನೊಂದಿಗೆ ಧರ್ಮ, ಅರ್ಥ ಅಥವಾ ಕಾಮದಲ್ಲಿ ಯಾವುದೇ ರೀತಿಯ ಸಂಬಂಧವನ್ನಿಟ್ಟಿದ್ದುದೂ ನನಗೆ ನೆನಪಿಲ್ಲ. ಹೊರಟು ಹೋಗು ಅಥವಾ ಇಲ್ಲಿಯೇ ಇರು ಅಥವಾ ನಿನಗಿಷ್ಟವಾದ ಹಾಗೆ ಮಾಡು.”

01068020a ಸೈವಮುಕ್ತಾ ವರಾರೋಹಾ ವ್ರೀಡಿತೇವ ಮನಸ್ವಿನೀ।
01068020c ವಿಸಂಜ್ಞೇವ ಚ ದುಃಖೇನ ತಸ್ಥೌ ಸ್ಥಾಣುರಿವಾಚಲಾ।।

ಇದನ್ನು ಕೇಳಿದ ಆ ವರಾರೋಹೆ ಮನಸ್ವಿನಿಯು ನಾಚಿಕೆ-ದುಃಖಗಳಿಂದ ಮೂರ್ಛೆಗೊಂಡವಳ ಹಾಗೆ ಮರದ ಕಂಭದಂತೆ ಅಚಲಳಾಗಿ ಅಲ್ಲಿಯೇ ನಿಂತಳು.

01068021a ಸಂರಂಭಾಮರ್ಷತಾಮ್ರಾಕ್ಷೀ ಸ್ಫುರಮಾಣೋಷ್ಠಸಂಪುಟಾ।
01068021c ಕಟಾಕ್ಷೈರ್ನಿರ್ದಹಂತೀವ ತಿರ್ಯಗ್ರಾಜಾನಮೈಕ್ಷತ।।

ತಕ್ಷಣವೇ ಆ ಸುಂದರಿಯ ಕಣ್ಣುಗಳು ಕೆಂಪಾದವು, ತುಟಿಗಳು ಕಂಪಿಸತೊಡಗಿದವು, ಮತ್ತು ರಾಜನನ್ನು ಸುಟ್ಟುಬಿಡುತ್ತಾಳೋ ಎನ್ನುವಂತೆ ಅವನ ಕಡೆ ನೋಡಿದಳು.

01068022a ಆಕಾರಂ ಗೂಹಮಾನಾ ಚ ಮನ್ಯುನಾಭಿಸಮೀರಿತಾ।
01068022c ತಪಸಾ ಸಂಭೃತಂ ತೇಜೋ ಧಾರಯಾಮಾಸ ವೈ ತದಾ।।

ಅವಳು ತನ್ನ ತಪೋ ಬಲದಿಂದ ಏರುತ್ತಿರುವ ಸಿಟ್ಟಿನ ತೇಜಸ್ಸನ್ನು ತಡೆಹಿಡಿಯಲು ಪ್ರಯತ್ನಿಸಿದಳು.

01068023a ಸಾ ಮುಹೂರ್ತಮಿವ ಧ್ಯಾತ್ವಾ ದುಃಖಾಮರ್ಷಸಮನ್ವಿತಾ।
01068023c ಭರ್ತಾರಮಭಿಸಂಪ್ರೇಕ್ಷ್ಯ ಕ್ರುದ್ಧಾ ವಚನಮಬ್ರವೀತ್।।

ಸ್ವಲ್ಪ ಹೊತ್ತು ಯೋಚಿಸಿ ದುಃಖ ಮತ್ತು ಕೋಪಸಮನ್ವಿತಳಾಗಿ ಸಿಟ್ಟಿನಿಂದ ತನ್ನ ಪತಿಯನ್ನು ನೇರವಾಗಿ ನೋಡುತ್ತಾ ಹೇಳಿದಳು:

01068024a ಜಾನನ್ನಪಿ ಮಹಾರಾಜ ಕಸ್ಮಾದೇವಂ ಪ್ರಭಾಷಸೇ।
01068024c ನ ಜಾನಾಮೀತಿ ನಿಃಸಂಗಂ ಯಥಾನ್ಯಃ ಪ್ರಾಕೃತಸ್ತಥಾ।।

“ಮಹಾರಾಜ! ಎಲ್ಲವನ್ನು ತಿಳಿದಿದ್ದರೂ ಏನೂ ತಿಳಿಯದಿರುವನ ಹಾಗೆ ಒಬ್ಬ ಕೀಳು ಮನುಷ್ಯನಂತೆ ಹೇಗೆ ಈ ರೀತಿ ಮಾತನಾಡುತ್ತಿರುವೆ?

01068025a ಅತ್ರ ತೇ ಹೃದಯಂ ವೇದ ಸತ್ಯಸ್ಯೈವಾನೃತಸ್ಯ ಚ।
01068025c ಕಲ್ಯಾಣ ಬತ ಸಾಕ್ಷೀ ತ್ವಂ ಮಾತ್ಮಾನಮವಮನ್ಯಥಾಃ।।

ನನ್ನ ಈ ಮಾತುಗಳ ಸತ್ಯ-ಅಸತ್ಯತೆಯ ಕುರಿತು ನಿನ್ನ ಹೃದಯವೇ ತಿಳಿದಿದೆ. ಆದುದರಿಂದ ಸತ್ಯವನ್ನು ಹೇಳು. ನಿನ್ನನ್ನು ನೀನೇ ಅಪಮಾನಿಸಬೇಡ.

01068026a ಯೋಽನ್ಯಥಾ ಸಂತಮಾತ್ಮಾನಮನ್ಯಥಾ ಪ್ರತಿಪದ್ಯತೇ।
01068026c ಕಿಂ ತೇನ ನ ಕೃತಂ ಪಾಪಂ ಚೋರೇಣಾತ್ಮಾಪಹಾರಿಣಾ।।

ಮನಸ್ಸಿನಲ್ಲಿ ಒಂದನ್ನು ಯೋಚಿಸಿ ಇತರರಿಗೆ ಬೇರೆಯದನ್ನೇ ತೋರಿಸುವವನು ತನ್ನ ಆತ್ಮವನ್ನೇ ಅಪಹರಿಸುವ ಕಳ್ಳನಲ್ಲವೇ? ಅವನು ಪಾಪ ಮಾಡಿದ ಹಾಗಲ್ಲವೇ?

01068027a ಏಕೋಽಹಮಸ್ಮೀತಿ ಚ ಮನ್ಯಸೇ ತ್ವಂ ನ ಹೃಚ್ಛಯಂ ವೇತ್ಸಿ ಮುನಿಂ ಪುರಾಣಂ।
01068027c ಯೋ ವೇದಿತಾ ಕರ್ಮಣಃ ಪಾಪಕಸ್ಯ ತಸ್ಯಾಂತಿಕೇ ತ್ವಂ ವೃಜಿನಂ ಕರೋಷಿ।।

ನೀನೊಬ್ಬನೇ ಮಾಡಿದ್ದುದು ನಿನಗೊಬ್ಬನಿಗೇ ಗೊತ್ತು ಎಂದು ತಿಳಿಯಬೇಡ. ನಿನ್ನ ಹೃದಯದಲ್ಲಿ ವಾಸಿಸುವ ಅವನಿಗೆ ಎಲ್ಲವೂ ತಿಳಿದಿದೆ. ಎಲ್ಲ ಪಾಪಗಳನ್ನೂ ನೋಡುವ ಅವನ ಎದುರಿನಲ್ಲಿಯೇ ನೀನು ಹೇಗೆ ಪಾಪವನ್ನೆಸಗುತ್ತಿರುವೆ?

01068028a ಮನ್ಯತೇ ಪಾಪಕಂ ಕೃತ್ವಾ ನ ಕಶ್ಚಿದ್ವೇತ್ತಿ ಮಾಮಿತಿ।
01068028c ವಿದಂತಿ ಚೈನಂ ದೇವಾಶ್ಚ ಸ್ವಶ್ಚೈವಾಂತರಪೂರುಷಃ।।

ಪಾಪಿಯು ಪಾಪವನ್ನೆಸಗಿ ಇದು ಬೇರೆ ಯಾರಿಗೂ ತಿಳಿಯುವುದಿಲ್ಲ ಎಂದು ಭಾವಿಸುತ್ತಾನೆ. ಆದರೆ ದೇವತೆಗಳು ಮತ್ತು ತನ್ನಲ್ಲಿಯೇ ಇರುವ ಪುರುಷನು ನೋಡುತ್ತಿದ್ದಾನೆ ಎಂದು ತಿಳಿಯುವುದಿಲ್ಲ.

01068029a ಆದಿತ್ಯಚಂದ್ರಾವನಿಲಾನಲೌ ಚ ದ್ಯೌರ್ಭೂಮಿರಾಪೋ ಹೃದಯಂ ಯಮಶ್ಚ।
01068029c ಅಹಶ್ಚ ರಾತ್ರಿಶ್ಚ ಉಭೇ ಚ ಸಂಧ್ಯೇ ಧರ್ಮಶ್ಚ ಜಾನಾತಿ ನರಸ್ಯ ವೃತ್ತಂ।।

ಆದಿತ್ಯ, ಚಂದ್ರ, ಅನಿಲ, ಅನಲ, ಆಕಾಶ, ಭೂಮಿ, ಆಪ, ಹೃದಯ, ಯಮ, ಹಗಲು, ರಾತ್ರಿ, ಸಂಧ್ಯಾ, ಧರ್ಮ ಇವೆಲ್ಲವೂ ನರನ ಪ್ರತಿಯೊಂದು ಕಾರ್ಯವನ್ನೂ ತಿಳಿದಿರುತ್ತವೆ.

01068030a ಯಮೋ ವೈವಸ್ವತಸ್ತಸ್ಯ ನಿರ್ಯಾತಯತಿ ದುಷ್ಕೃತಂ।
01068030c ಹೃದಿ ಸ್ಥಿತಃ ಕರ್ಮಸಾಕ್ಷೀ ಕ್ಷೇತ್ರಜ್ಞೋ ಯಸ್ಯ ತುಷ್ಯತಿ।।

ಹೃದಯಸ್ಥಿತ ಕರ್ಮಸಾಕ್ಷೀ ಕೇತ್ರಜ್ಞನನ್ನು ಸಂತುಷ್ಟಗೊಳಿಸುವವನ ದುಷ್ಕೃತವನ್ನು ವೈವಸ್ವತ ಯಮನೂ ಸಹ ಗಣನೆಗೆ ತೆಗೆದುಕೊಳ್ಳುವುದಿಲ್ಲ.

01068031a ನ ತು ತುಷ್ಯತಿ ಯಸ್ಯೈಷ ಪುರುಷಸ್ಯ ದುರಾತ್ಮನಃ।
01068031c ತಂ ಯಮಃ ಪಾಪಕರ್ಮಾಣಂ ನಿರ್ಯಾತಯತಿ ದುಷ್ಕೃತಂ।।

ಆದರೆ ಆ ಪುರುಷನನ್ನು ತೃಪ್ತಿಗೊಳಿಸದ ದುರಾತ್ಮನ ಪಾಪ ಕರ್ಮಗಳನ್ನು ಯಮನು ದುಷ್ಕೃತವೆಂದು ಪರಿಗಣಿಸುತ್ತಾನೆ.

01068032a ಅವಮನ್ಯಾತ್ಮನಾತ್ಮಾನಮನ್ಯಥಾ ಪ್ರತಿಪದ್ಯತೇ।
01068032c ದೇವಾ ನ ತಸ್ಯ ಶ್ರೇಯಾಂಸೋ ಯಸ್ಯಾತ್ಮಾಪಿ ನ ಕಾರಣಂ।।

ತನ್ನ ಆತ್ಮವನ್ನು ಅನಾದರಣಿಸಿ, ತನ್ನನ್ನು ಅನ್ಯಥಾ ಪ್ರತಿಪಾದಿಸುವವನಿಗೆ ದೇವತೆಗಳು ಶ್ರೇಯಸ್ಸನ್ನು ನೀಡುವುದಿಲ್ಲ. ಅವನ ಸ್ವಂತ ಆತ್ಮವೂ ಕೂಡ ಅವನಿಗೆ ಶ್ರೇಯಸ್ಸನ್ನು ನೀಡುವುದಿಲ್ಲ.

01068033a ಸ್ವಯಂ ಪ್ರಾಪ್ತೇತಿ ಮಾಮೇವಂ ಮಾವಮಂಸ್ಥಾಃ ಪತಿವ್ರತಾಂ।
01068033c ಅರ್ಘ್ಯಾರ್ಹಾಂ ನಾರ್ಚಯಸಿ ಮಾಂ ಸ್ವಯಂ ಭಾರ್ಯಾಮುಪಸ್ಥಿತಾಂ।।

ಸ್ವಯಂ ತಾನಾಗಿಯೇ ಇಲ್ಲಿಗೆ ಬಂದಿರುವ ಪತಿವ್ರತೆಯನ್ನು ಅಪಮಾನಿಸಬೇಡ. ಅರ್ಘ್ಯಾರ್ಹ ನನ್ನನ್ನು ನಿನ್ನ ಭಾರ್ಯೆಯನ್ನು ಸತ್ಕರಿಸದೇ ಅವಹೇಳನಮಾಡಬೇಡ.

01068034a ಕಿಮರ್ಥಂ ಮಾಂ ಪ್ರಾಕೃತವದುಪಪ್ರೇಕ್ಷಸಿ ಸಂಸದಿ।
01068034c ನ ಖಲ್ವಹಮಿದಂ ಶೂನ್ಯೇ ರೌಮಿ ಕಿಂ ನ ಶೃಣೋಷಿ ಮೇ।।

ಈ ಸಂಸತ್ತಿನಲ್ಲಿ ನನ್ನನ್ನು ಏಕೆ ಓರ್ವ ಸಾಮಾನ್ಯ ಸ್ತ್ರೀಯಂತೆ ಕಾಣುತ್ತಿರುವೆ? ನಾನು ಸುಮ್ಮನೇ ಇಲ್ಲಿ ರೋದಿಸುತ್ತಿಲ್ಲವಲ್ಲ! ನನ್ನ ಮಾತುಗಳನ್ನು ನೀನು ಏಕೆ ಕೇಳುತ್ತಿಲ್ಲ?

01068035a ಯದಿ ಮೇ ಯಾಚಮಾನಾಯಾ ವಚನಂ ನ ಕರಿಷ್ಯಸಿ।
01068035c ದುಃಷಂತ ಶತಧಾ ಮೂರ್ಧಾ ತತಸ್ತೇಽದ್ಯ ಫಲಿಷ್ಯತಿ।।

ದುಃಷಂತ! ಯಾಚಿಸುತ್ತಿರುವ ನನ್ನ ಮಾತಿನಂತೆ ನಡೆದುಕೊಳ್ಳದಿದ್ದರೆ ನಿನ್ನ ತಲೆಯು ನೂರಾರು ಚೂರುಗಳಾಗಿ ಒಡೆದುಹೋಗುತ್ತದೆ.

01068036a ಭಾರ್ಯಾಂ ಪತಿಃ ಸಂಪ್ರವಿಶ್ಯ ಸ ಯಸ್ಮಾಜ್ಜಾಯತೇ ಪುನಃ।
01068036c ಜಾಯಾಯಾ ಇತಿ ಜಾಯಾತ್ವಂ ಪುರಾಣಾಃ ಕವಯೋ ವಿದುಃ।।

ಪತಿಯು ತನ್ನ ಭಾರ್ಯೆಯನ್ನು ಪ್ರವೇಶಿಸಿ ಪುನಃ ಹುಟ್ಟಿಬರುವುದರಿಂದ ಭಾರ್ಯೆಯನ್ನು ಜಾಯಾ ಎಂದು ಪುರಾಣಗಳು, ಕವಿಗಳು ಮತ್ತು ವಿದ್ವಾಂಸರು ಕರೆಯುತ್ತಾರೆ.

01068037a ಯದಾಗಮವತಃ ಪುಂಸಸ್ತದಪತ್ಯಂ ಪ್ರಜಾಯತೇ।
01068037c ತತ್ತಾರಯತಿ ಸಂತತ್ಯಾ ಪೂರ್ವಪ್ರೇತಾನ್ಪಿತಾಮಹಾನ್।।

ಒಳ್ಳೆಯವನು ತನ್ನ ಪತ್ನಿಯಲ್ಲಿ ಮಗನನ್ನು ಪಡೆಯುತ್ತಾನೆ ಮತ್ತು ಆ ಸಂತತಿಯಿಂದ ತನ್ನ ಪೂರ್ವ ಪಿತಾಮಹರ ಪ್ರೇತಾತ್ಮಗಳನ್ನು ಕಾಪಾಡುತ್ತಾನೆ.

01068038a ಪುನ್ನಾಮ್ನೋ ನರಕಾದ್ಯಸ್ಮಾತ್ಪಿತರಂ ತ್ರಾಯತೇ ಸುತಃ।
01068038c ತಸ್ಮಾತ್ಪುತ್ರ ಇತಿ ಪ್ರೋಕ್ತಃ ಸ್ವಯಮೇವ ಸ್ವಯಂಭುವಾ।।

ಸುತನು ಪು ಎಂಬ ಹೆಸರಿನ ನರಕದಿಂದ ತನ್ನ ಪಿತೃಗಳನ್ನು ದಾಟಿಸುವುದರಿಂದ ಸ್ವಯಂ ಸ್ವಯಂಭುವೇ ಅವನನ್ನು ಪುತ್ರ ಎಂದು ಕರೆದಿದ್ದಾನೆ.

01068039a ಸಾ ಭಾರ್ಯಾ ಯಾ ಗೃಹೇ ದಕ್ಷಾ ಸಾ ಭಾರ್ಯಾ ಯಾ ಪ್ರಜಾವತೀ।
01068039c ಸಾ ಭಾರ್ಯಾ ಯಾ ಪತಿಪ್ರಾಣಾ ಸಾ ಭಾರ್ಯಾ ಯಾ ಪತಿವ್ರತಾ।।

ಗೃಹವನ್ನು ದಕ್ಷತೆಯಿಂದ ನಡೆಸಿಕೊಂಡು ಹೋಗುವವಳೇ ಭಾರ್ಯೆ. ಮಕ್ಕಳಿಗೆ ತಾಯಿಯಾಗುವವಳೇ ಭಾರ್ಯೆ. ಪತಿಯಲ್ಲಿಯೇ ಪ್ರಾಣವನ್ನಿಟ್ಟವಳು ಭಾರ್ಯೆ. ಮತ್ತು ಪತಿವ್ರತೆಯಾದವಳೇ ಭಾರ್ಯೆ.

01068040a ಅರ್ಧಂ ಭಾರ್ಯಾ ಮನುಷ್ಯಸ್ಯ ಭಾರ್ಯಾ ಶ್ರೇಷ್ಠತಮಃ ಸಖಾ।
01068040c ಭಾರ್ಯಾ ಮೂಲಂ ತ್ರಿವರ್ಗಸ್ಯ ಭಾರ್ಯಾ ಮಿತ್ರಂ ಮರಿಷ್ಯತಃ।।

ಮನುಷ್ಯನ ಅರ್ಧವೇ ಭಾರ್ಯೆ. ಭಾರ್ಯೆಯೇ ಅವನ ಶ್ರೇಷ್ಠತಮ ಸಖಿ. ಭಾರ್ಯೆಯು ತ್ರಿವರ್ಗಗಳ (ಧರ್ಮ, ಅರ್ಥ ಮತ್ತು ಕಾಮ) ಮೂಲ. ಮತ್ತು ಭಾರ್ಯೆಯೇ ಮನುಷ್ಯನ ಮಿತ್ರೆ.

01068041a ಭಾರ್ಯಾವಂತಃ ಕ್ರಿಯಾವಂತಃ ಸಭಾರ್ಯಾ ಗೃಹಮೇಧಿನಃ।
01068041c ಭಾರ್ಯಾವಂತಃ ಪ್ರಮೋದಂತೇ ಭಾರ್ಯಾವಂತಃ ಶ್ರಿಯಾನ್ವಿತಾಃ।।

ಭಾರ್ಯೆಯನ್ನು ಪಡೆದವನು ಕ್ರಿಯೆಗಳನ್ನು ಮಾಡಬಹುದು. ಭಾರ್ಯೆಯನ್ನು ಹೊಂದಿದವನು ಗೃಹಸ್ಥಾಶ್ರಮವನ್ನು ನಡೆಸಬಹುದು. ಭಾರ್ಯೆಯನ್ನು ಹೊಂದಿದವರು ಸಂತೋಷದಿಂದಿರುವರು. ಮತ್ತು ಭಾರ್ಯೆಯನ್ನು ಹೊಂದಿದವರು ಧನವನ್ನೂ ಹೊಂದುವರು.

01068042a ಸಖಾಯಃ ಪ್ರವಿವಿಕ್ತೇಷು ಭವಂತ್ಯೇತಾಃ ಪ್ರಿಯಂವದಾಃ।
01068042c ಪಿತರೋ ಧರ್ಮಕಾರ್ಯೇಷು ಭವಂತ್ಯಾರ್ತಸ್ಯ ಮಾತರಃ।।

ಅವಳು ಎಕಾಂತದಲ್ಲಿ ಸಖನಂತೆ ಪ್ರೀತಿಯ ಮಾತುಗಳನ್ನಾಡುತ್ತಾಳೆ, ಧರ್ಮಕಾರ್ಯಗಳಲ್ಲಿ ತಂದೆಯಂತಿರುತ್ತಾಳೆ ಮತ್ತು ಆರ್ತ ಸಮಯದಲ್ಲಿ ತಾಯಿಯಂತಿರುತ್ತಾಳೆ.

01068043a ಕಾಂತಾರೇಷ್ವಪಿ ವಿಶ್ರಾಮೋ ನರಸ್ಯಾಧ್ವನಿಕಸ್ಯ ವೈ।
01068043c ಯಃ ಸದಾರಃ ಸ ವಿಶ್ವಾಸ್ಯಸ್ತಸ್ಮಾದ್ದಾರಾಃ ಪರಾ ಗತಿಃ।।

ಕಾನನದಲ್ಲಿ ಅಲೆಯುತ್ತಿರುವವನಿಗೆ ಕೂಡ ಅವಳು ವಿಶ್ರಾಮವಿದ್ದಂತೆ. ಪತ್ನಿಸಹಿತನಾದವನನ್ನು ಎಲ್ಲರೂ ವಿಶ್ವಾಸದಿಂದ ಕಾಣುತ್ತಾರೆ. ಆದುದರಿಂದ ಪತ್ನಿಯು ಪರಮ ಗತಿಯನ್ನು ನೀಡುತ್ತಾಳೆ.

01068044a ಸಂಸರಂತಮಪಿ ಪ್ರೇತಂ ವಿಷಮೇಷ್ವೇಕಪಾತಿನಂ।
01068044c ಭಾರ್ಯೈವಾನ್ವೇತಿ ಭರ್ತಾರಂ ಸತತಂ ಯಾ ಪತಿವ್ರತಾ।।

ಪತಿಯು ಯಮಲೋಕಕ್ಕೆ ಹೋದಾಗ ಅವನನ್ನು ಹಿಂಬಾಲಿಸುವವಳು ಅವನ ಪತಿವ್ರತೆ ಪತ್ನಿಯೇ!

01068045a ಪ್ರಥಮಂ ಸಂಸ್ಥಿತಾ ಭಾರ್ಯಾ ಪತಿಂ ಪ್ರೇತ್ಯ ಪ್ರತೀಕ್ಷತೇ।
01068045c ಪೂರ್ವಂ ಮೃತಂ ಚ ಭರ್ತಾರಂ ಪಶ್ಚಾತ್ಸಾಧ್ವ್ಯನುಗಚ್ಛತಿ।।

ಒಂದುವೇಳೆ ಭಾರ್ಯೆಯೇ ಮೊದಲು ತೀರಿಕೊಂಡರೆ ಅವಳು ತನ್ನ ಪತಿಗಾಗಿ ಅಲ್ಲಿ ಕಾಯುತ್ತಾಳೆ. ಗಂಡನೇ ಮೊದಲು ತೀರಿಕೊಂಡರೆ, ಆ ಸಾಧ್ವಿಯು ಅವನನ್ನು ಅನುಸರಿಸುತ್ತಾಳೆ.

01068046a ಏತಸ್ಮಾತ್ಕಾರಣಾದ್ರಾಜನ್ಪಾಣಿಗ್ರಹಣಮಿಷ್ಯತೇ।
01068046c ಯದಾಪ್ನೋತಿ ಪತಿರ್ಭಾರ್ಯಾಮಿಹ ಲೋಕೇ ಪರತ್ರ ಚ।।

ರಾಜನ್! ಈ ಎಲ್ಲ ಕಾರಣಗಳಿಂದ ಪಾಣಿಗ್ರಹಣವಿದೆ. ಪತಿಯು ತನ್ನ ಭಾರ್ಯೆಯನ್ನು ಈ ಲೋಕದಲ್ಲಿಯೂ ಪರಲೋಕದಲ್ಲಿಯೂ ಅನುಭವಿಸುತ್ತಾನೆ.

01068047a ಆತ್ಮಾತ್ಮನೈವ ಜನಿತಃ ಪುತ್ರ ಇತ್ಯುಚ್ಯತೇ ಬುಧೈಃ।
01068047c ತಸ್ಮಾದ್ಭಾರ್ಯಾಂ ನರಃ ಪಶ್ಯೇನ್ಮಾತೃವತ್ಪುತ್ರಮಾತರಂ।।

ತಾನೇ ತನ್ನ ಪುತ್ರನಾಗಿ ಜನಿಸುತ್ತಾನೆ ಎಂದು ತಿಳಿದವರು ಹೇಳುತ್ತಾರೆ. ಆದ್ದರಿಂದ ಮನುಷ್ಯನು ತನ್ನ ಮಗನ ತಾಯಿಯನ್ನು ತನ್ನ ತಾಯಿಯ ಹಾಗೆಯೇ ಕಾಣಬೇಕು.

01068048a ಭಾರ್ಯಾಯಾಂ ಜನಿತಂ ಪುತ್ರಮಾದರ್ಶೇ ಸ್ವಮಿವಾನನಂ।
01068048c ಹ್ಲಾದತೇ ಜನಿತಾ ಪ್ರೇಷ್ಕ್ಯ ಸ್ವರ್ಗಂ ಪ್ರಾಪ್ಯೇವ ಪುಣ್ಯಕೃತ್।।

ಕನ್ನಡಿಯಲ್ಲಿ ಕಂಡಂತೆ ಭಾರ್ಯೆಯಿಂದ ಜನಿಸಿದ ಪುತ್ರನ ಮುಖದಲ್ಲಿ ತನ್ನನ್ನು ತಾನೇ ಕಾಣುತ್ತಾನೆ ಮತ್ತು ಪುಣ್ಯಕರ್ಮಗಳಿಂದ ಸ್ವರ್ಗವನ್ನು ಸೇರಿದ ಸಂತೋಷವನ್ನು ಪಡೆಯುತ್ತಾನೆ.

01068049a ದಹ್ಯಮಾನಾ ಮನೋಧುಃಖೈರ್ವ್ಯಾಧಿಭಿಶ್ಚಾತುರಾ ನರಾಃ।
01068049c ಹ್ಲಾದಂತೇ ಸ್ವೇಷು ದಾರೇಷು ಘರ್ಮಾರ್ತಾಃ ಸಲಿಲೇಷ್ವಿವ।।

ಮನೋದುಃಖ, ವ್ಯಾಧಿ ಮತ್ತು ಆತುರತೆಯಿಂದ ಸುಡುತ್ತಿದ್ದ ನರನಿಗೆ ತನ್ನ ಹೆಂಡತಿಯನ್ನು ನೋಡಿದರೆ ಬೇಸಿಗೆಯ ಬಿಸಿಲಿನಿಂದ ಬಳಲಿತ್ತಿರುವವನಿಗೆ ತಣ್ಣೀರಿನ ಸ್ನಾನಮಾಡಿದಷ್ಟು ಸಂತೋಷವಾಗುತ್ತದೆ.

01068050a ಸುಸಂರಬ್ಧೋಽಪಿ ರಾಮಾಣಾಂ ನ ಬ್ರೂಯಾದಪ್ರಿಯಂ ಬುಧಃ।
01068050c ರತಿಂ ಪ್ರೀತಿಂ ಚ ಧರ್ಮಂ ಚ ತಾಸ್ವಾಯತ್ತಮವೇಕ್ಷ್ಯ ಚ।।

ತಿಳಿದವನು ಕೋಪದಲ್ಲಿಯೂ ತನ್ನ ಪತ್ನಿಗೆ ಇಷ್ಟವಾಗಿಲ್ಲದುದನ್ನು ಮಾಡಬಾರದು; ಯಾಕೆಂದರೆ, ಸಂತೋಷ, ಪ್ರೀತಿ, ಧರ್ಮ ಮತ್ತು ಎಲ್ಲವೂ ಪತ್ನಿಯನ್ನು ಅವಲಂಬಿಸಿರುತ್ತದೆ.

01068051a ಆತ್ಮನೋ ಜನ್ಮನಃ ಕ್ಷೇತ್ರಂ ಪುಣ್ಯಂ ರಾಮಾಃ ಸನಾತನಂ।
01068051c ಋಷೀಣಾಮಪಿ ಕಾ ಶಕ್ತಿಃ ಸ್ರಷ್ಟುಂ ರಾಮಾಮೃತೇ ಪ್ರಜಾಃ।।

ತನ್ನನ್ನು ತಾನೇ ಹುಟ್ಟಿಸಿಕೊಳ್ಳುವ ಸನಾತನ ಪುಣ್ಯ ಕ್ಷೇತ್ರ ಹೆಣ್ಣು. ಋಷಿಗಳಿಗೂ ಕೂಡ ಹೆಣ್ಣಿಲ್ಲದೇ ಸಂತತಿಯನ್ನು ಹುಟ್ಟಿಸಲು ಶಕ್ತಿಯೆಲ್ಲಿದೆ?

01068052a ಪರಿಪತ್ಯ ಯದಾ ಸೂನುರ್ಧರಣೀರೇಣುಗುಂಠಿತಃ।
01068052c ಪಿತುರಾಶ್ಲಿಷ್ಯತೇಽಂಗಾನಿ ಕಿಮಿವಾಸ್ತ್ಯಧಿಕಂ ತತಃ।।

ಧೂಳು ಕೊಳಕುಗಳಿಂದ ತುಂಬಿದ್ದರೂ ತನ್ನ ಮಗನು ಓಡಿ ಬಂದು ಬಿಗಿದಪ್ಪಿದಾಗ ಆಗುವ ಸಂತೋಷಕ್ಕಿಂತಲೂ ಹೆಚ್ಚಿನ ಸಂತೋಷ ಇನ್ನು ಯಾವುದಿದೆ?

01068053a ಸ ತ್ವಂ ಸ್ವಯಮನುಪ್ರಾಪ್ತಂ ಸಾಭಿಲಾಷಮಿಮಂ ಸುತಂ।
01068053c ಪ್ರೇಕ್ಷಮಾಣಂ ಚ ಕಾಕ್ಷೇಣ ಕಿಮರ್ಥಮವಮನ್ಯಸೇ।।

ತಾನಾಗಿಯೇ ಬಂದಿರುವ, ನಿನ್ನನ್ನು ಅಭಿಲಾಷೆಯ ದೃಷ್ಠಿಯಿಂದ ನೋಡುತ್ತಿರುವ ಈ ನಿನ್ನ ಮಗನನ್ನು ನೀನು ಏಕೆ ತಿರಸ್ಕಾರ ದೃಷ್ಠಿಯಿಂದ ನೋಡುತ್ತಿರುವೆ?

01068054a ಅಂಡಾನಿ ಬಿಭ್ರತಿ ಸ್ವಾನಿ ನ ಭಿಂದಂತಿ ಪಿಪೀಲಿಕಾಃ।
01068054c ನ ಭರೇಥಾಃ ಕಥಂ ನು ತ್ವಂ ಧರ್ಮಜ್ಞಃ ಸನ್ಸ್ವಮಾತ್ಮಜಂ।।

ಇರುವೆಗಳೂ ಕೂಡ ತಮ್ಮ ಮೊಟ್ಟೆಗಳನ್ನು ಒಡೆಯದ ಹಾಗೆ ರಕ್ಷಿಸುತ್ತವೆ. ಧರ್ಮಜ್ಞನಾದ ನೀನು ಏಕೆ ನಿನ್ನ ಸ್ವಂತ ಮಗನನ್ನು ಪಾಲಿಸುವುದಿಲ್ಲ?

01068055a ನ ವಾಸಸಾಂ ನ ರಾಮಾಣಾಂ ನಾಪಾಂ ಸ್ಪರ್ಶಸ್ತಥಾ ಸುಖಃ।
01068055c ಶಿಶೋರಾಲಿಂಗ್ಯಮಾನಸ್ಯ ಸ್ಪರ್ಶಃ ಸೂನೋರ್ಯಥಾ ಸುಖಃ।।

ತನ್ನ ಮಗುವಿನ ಗಾಢ ಆಲಿಂಗನ, ಸ್ಪರ್ಷ ಮತ್ತು ಸುವಾಸನೆಯು ಕೊಡುವಷ್ಟು ಸುಖವನ್ನು ಸುಗಂಧವಾಗಲೀ, ಸ್ತ್ರೀಯಾಗಲೀ, ನೀರಾಗಲೀ ಕೊಡುವುದಿಲ್ಲ.

01068056a ಬ್ರಾಹ್ಮಣೋ ದ್ವಿಪದಾಂ ಶ್ರೇಷ್ಠೋ ಗೌರ್ವರಿಷ್ಠಾ ಚತುಷ್ಪದಾಂ।
01068056c ಗುರುರ್ಗರೀಯಸಾಂ ಶ್ರೇಷ್ಠಃ ಪುತ್ರಃ ಸ್ಪರ್ಶವತಾಂ ವರಃ।।

ದ್ವಿಪದರಲ್ಲಿ ಬ್ರಾಹ್ಮಣರು ಹೇಗೆ ಶ್ರೇಷ್ಠರೋ, ಚತುಷ್ಪದರಲ್ಲಿ ಗೋವುಗಳು ಹೇಗೆ ಶ್ರೇಷ್ಠವೋ, ಹಿರಿಯರಲ್ಲಿ ಗುರುವು ಹೇಗೆ ಶ್ರೇಷ್ಠವೋ, ಹಾಗೆ ಸ್ಪರ್ಷದಲ್ಲಿ ಪುತ್ರನೇ ಶ್ರೇಷ್ಠ.

01068057a ಸ್ಪೃಶತು ತ್ವಾಂ ಸಮಾಶ್ಲಿಷ್ಯ ಪುತ್ರೋಽಯಂ ಪ್ರಿಯದರ್ಶನಃ।
01068057c ಪುತ್ರಸ್ಪರ್ಶಾತ್ಸುಖತರಃ ಸ್ಪರ್ಶೋ ಲೋಕೇ ನ ವಿದ್ಯತೇ।।

ಈ ಪ್ರಿಯದರ್ಶನ ಪುತ್ರನು ನಿನ್ನನ್ನು ಆಲಿಂಗಿಸಿ ಸ್ಪರ್ಷಿಸಲಿ. ಪುತ್ರಸ್ಪರ್ಷ ಸುಖಕ್ಕಿಂತ ಹೆಚ್ಚಿನದು ಈ ಲೋಕದಲ್ಲಿ ಇನ್ನಿಲ್ಲ.

01068058a ತ್ರಿಷು ವರ್ಷೇಷು ಪೂರ್ಣೇಷು ಪ್ರಜಾತಾಹಮರಿಂದಮ।
01068058c ಇಮಂ ಕುಮಾರಂ ರಾಜೇಂದ್ರ ತವ ಶೋಕಪ್ರಣಾಶನಂ।।

ಅರಿಂದಮ! ರಾಜೇಂದ್ರ! ಮೂರು ವರ್ಷಗಳು ಪೂರ್ಣವಾದ ನಂತರ ನಾನು ನಿನ್ನ ಈ ಶೋಕಪ್ರಾಣಾಶ ಕುಮಾರನಿಗೆ ಜನ್ಮವಿತ್ತಿದ್ದೇನೆ.

01068059a ಆಹರ್ತಾ ವಾಜಿಮೇಧಸ್ಯ ಶತಸಂಖ್ಯಸ್ಯ ಪೌರವ।
01068059c ಇತಿ ವಾಗಂತರಿಕ್ಷೇ ಮಾಂ ಸೂತಕೇಽಭ್ಯವದತ್ಪುರಾ।।

ಪೌರವ! ಹಿಂದೆ ನಾನು ಸೂತಕದಲ್ಲಿದ್ದಾಗ ಇವನು ಒಂದು ನೂರು ಅಶ್ವಮೇಧ ಯಜ್ಞಗಳನ್ನು ನಡೆಸುತ್ತಾನೆ ಎಂದು ಆಕಾಶದಲ್ಲಿ ಅಶರೀರವಾಣಿಯಾಯಿತು.

01068060a ನನು ನಾಮಾಂಕಮಾರೋಪ್ಯ ಸ್ನೇಹಾದ್ಗ್ರಾಮಾಂತರಂ ಗತಾಃ।
01068060c ಮೂರ್ಧ್ನಿ ಪುತ್ರಾನುಪಾಘ್ರಾಯ ಪ್ರತಿನಂದಂತಿ ಮಾನವಾಃ।।

ಮನೆಯನ್ನು ಬಿಟ್ಟು ದೂರ ಪ್ರಯಾಣಮಾಡುವವರು ಬೇರೊಬ್ಬರ ಮಕ್ಕಳನ್ನು ತಮ್ಮ ತೊಡೆಯಮೇಲಿರಿಸಿ, ಅವರ ತಲೆಯನ್ನು ಸೂಸಿ ತಮ್ಮ ಮಕ್ಕಳ ಆನಂದವನ್ನು ಪಡೆಯುತ್ತಾರೆ.

01068061a ವೇದೇಷ್ವಪಿ ವದಂತೀಮಂ ಮಂತ್ರವಾದಂ ದ್ವಿಜಾತಯಃ।
01068061c ಜಾತಕರ್ಮಣಿ ಪುತ್ರಾಣಾಂ ತವಾಪಿ ವಿದಿತಂ ತಥಾ।।

ಮಕ್ಕಳ ಜಾತಕರ್ಮದ ಸಮಯದಲ್ಲಿ ದ್ವಿಜರು ಹೇಳುವ ಈ ಮಂತ್ರಗಳನ್ನು ನೀನೂ ಕೂಡ ಕೇಳಿರಬಹುದು.

01068062a ಅಂಗಾದಂಗಾತ್ಸಂಭವಸಿ ಹೃದಯಾದಭಿಜಾಯಸೇ।
01068062c ಆತ್ಮಾ ವೈ ಪುತ್ರನಾಮಾಸಿ ಸ ಜೀವ ಶರದಃ ಶತಂ।।

“ನೀನು ನನ್ನ ಅಂಗಗಳಿಂದ ಸಂಭವಿಸಿರುವೆ. ಹೃದಯದಿಂದ ಹುಟ್ಟಿರುವೆ. ಪುತ್ರನಾಗಿರುವ ನೀನು ನಾನೇ. ನೂರು ಸಂವತ್ಸರಗಳನ್ನು ಜೀವಿಸು.

01068063a ಪೋಷೋ ಹಿ ತ್ವದಧೀನೋ ಮೇ ಸಂತಾನಮಪಿ ಚಾಕ್ಷಯಂ।
01068063c ತಸ್ಮಾತ್ತ್ವಂ ಜೀವ ಮೇ ವತ್ಸ ಸುಸುಖೀ ಶರದಾಂ ಶತಂ।।

ನನ್ನ ಪೋಷಣೆಯು ನಿನ್ನನ್ನವಲಂಬಿಸಿದೆ. ನನ್ನ ಸಂತಾನವೂ ನಿನ್ನಿಂದ ಅಕ್ಷಯವಾಗುತ್ತದೆ. ನಿನ್ನಿಂದಲೇ ನನಗೆ ಜೀವ. ವತ್ಸ! ನೂರು ಸಂವತ್ಸರಗಳು ಸುಖವಾಗಿ ಬಾಳು.”

01068064a ತ್ವದಂಗೇಭ್ಯಃ ಪ್ರಸೂತೋಽಯಂ ಪುರುಷಾತ್ಪುರುಷೋಽಪರಃ।
01068064c ಸರಸೀವಾಮಲೇಽತ್ಮಾನಂ ದ್ವಿತೀಯಂ ಪಶ್ಯ ಮೇ ಸುತಂ।।

ಇವನು ನಿನ್ನ ಅಂಗಗಳಿಂದ ಹುಟ್ಟಿದವನು, ಪುರುಷನಿಂದ ಹುಟ್ಟಿದ ಇನ್ನೊಬ್ಬ ಪುರುಷನು. ತಿಳಿ ಕೊಳದಂತಿರುವ ನಿನ್ನ ಮಗನಲ್ಲಿ ನಿನ್ನನ್ನೇ ಕಾಣು.

01068065a ಯಥಾ ಹ್ಯಾಹವನೀಯೋಽಗ್ನಿರ್ಗಾರ್ಹಪತ್ಯಾತ್ಪ್ರಣೀಯತೇ।
01068065c ತಥಾ ತ್ವತ್ತಃ ಪ್ರಸೂತೋಽಯಂ ತ್ವಮೇಕಃ ಸಂದ್ವಿಧಾ ಕೃತಃ।।

ಗಾರ್ಹಪತ್ಯದ ಅಗ್ನಿಯಿಂದ ಹೇಗೆ ಯಜ್ಞೇಶ್ವರನು ಹುಟ್ಟುತ್ತಾನೋ ಹಾಗೆ ಈ ಮಗುವೂ ಕೂಡ ನಿನ್ನಿಂದಲೇ ಹುಟ್ಟಿದವನು. ನೀನು ಒಬ್ಬನೇ ಆದರೂ ನಿನ್ನನ್ನು ನೀನೇ ಎರಡಾಗಿ ವಿಭಜನೆಗೊಂಡಿದ್ದೀಯೆ.

01068066a ಮೃಗಾಪಕೃಷ್ಟೇನ ಹಿ ತೇ ಮೃಗಯಾಂ ಪರಿಧಾವತಾ।
01068066c ಅಹಮಾಸಾದಿತಾ ರಾಜನ್ಕುಮಾರೀ ಪಿತುರಾಶ್ರಮೇ।।

ರಾಜನ್! ಮೃಗಗಳ ಬೇಟೆಗೆಂದು ಬಂದು ಆಯಾಸಗೊಂಡಾಗ ನೀನು ಕುಮಾರಿಯಾಗಿದ್ದ ನನ್ನನ್ನು ನನ್ನ ತಂದೆಯ ಆಶ್ರಮದಲ್ಲಿ ಪಡೆದಿದ್ದೆ.

01068067a ಉರ್ವಶೀ ಪೂರ್ವಚಿತ್ತಿಶ್ಚ ಸಹಜನ್ಯಾ ಚ ಮೇನಕಾ।
01068067c ವಿಶ್ವಾಚೀ ಚ ಘೃತಾಚೀ ಚ ಷಡೇವಾಪ್ಸರಸಾಂ ವರಾಃ।।

ಊರ್ವಶೀ, ಪೂರ್ವಚಿತ್ತಿ, ಸಹಜನ್ಯ, ಮೇನಕಾ, ವಿಶ್ವಾ, ಮತ್ತು ಘೃತಾಚೀ ಈ ಆರು ಮಂದಿ ಅಪ್ಸರೆಯರಲ್ಲಿ ಶ್ರೇಷ್ಠರು.

01068068a ತಾಸಾಂ ಮಾಂ ಮೇನಕಾ ನಾಮ ಬ್ರಹ್ಮಯೋನಿರ್ವರಾಪ್ಸರಾಃ।
01068068c ದಿವಃ ಸಂಪ್ರಾಪ್ಯ ಜಗತೀಂ ವಿಶ್ವಾಮಿತ್ರಾದಜೀಜನತ್।।

ಅವರಲ್ಲಿಯೇ ಶ್ರೇಷ್ಠ ಬ್ರಹ್ಮಯೋನಿಯಲ್ಲಿ ಜನಿಸಿದ ಮೇನಕಾ ಎಂಬ ಹೆಸರಿನ ಅಪ್ಸರೆಯು ಸ್ವರ್ಗದಿಂದ ಕೆಳಗಿಳಿದು ವಿಶ್ವಾಮಿತ್ರನಿಂದ ನನಗೆ ಜನ್ಮವಿತ್ತಳು.

01068069a ಸಾ ಮಾಂ ಹಿಮವತಃ ಪೃಷ್ಠೇ ಸುಷುವೇ ಮೇನಕಾಪ್ಸರಾಃ।
01068069c ಅವಕೀರ್ಯ ಚ ಮಾಂ ಯಾತಾ ಪರಾತ್ಮಜಮಿವಾಸತೀ।।

ಅಪ್ಸರೆ ಮೇನಕಾ ನನ್ನನ್ನು ಹಿಮಾಲಯದ ತಪ್ಪಲಿನಲ್ಲಿ ಜನ್ಮವಿತ್ತಳು. ಆ ವಾತ್ಸಲ್ಯವಿಹೀನಳು ಬೇರೆ ಯಾರದ್ದೋ ಮಗುವಿನಂತೆ ನನ್ನನ್ನು ಅಲ್ಲಿಯೇ ಬಿಟ್ಟು ಹೊರಟುಹೋದಳು.

01068070a ಕಿಂ ನು ಕರ್ಮಾಶುಭಂ ಪೂರ್ವಂ ಕೃತವತ್ಯಸ್ಮಿ ಜನ್ಮನಿ।
01068070c ಯದಹಂ ಬಾಂಧವೈಸ್ತ್ಯಕ್ತಾ ಬಾಲ್ಯೇ ಸಂಪ್ರತಿ ಚ ತ್ವಯಾ।।

ಹಿಂದಿನ ಜನ್ಮದಲ್ಲಿ ನಾನು ಯಾವ ಅಶುಭ ಕರ್ಮವನ್ನು ಮಾಡಿದ್ದೆನೋ ಏನೋ ಬಾಲ್ಯದಲ್ಲಿಯೇ ನನ್ನ ತಂದೆತಾಯಿಗಳು ಬಿಟ್ಟುಹೋದರು. ಈಗ ನಿನ್ನಿಂದ ನಾನು ಪರಿತ್ಯಜಿಸಲ್ಪಟ್ಟಿದ್ದೇನೆ.

01068071a ಕಾಮಂ ತ್ವಯಾ ಪರಿತ್ಯಕ್ತಾ ಗಮಿಷ್ಯಾಮ್ಯಹಮಾಶ್ರಮಂ।
01068071c ಇಮಂ ತು ಬಾಲಂ ಸಂತ್ಯಕ್ತುಂ ನಾರ್ಹಸ್ಯಾತ್ಮಜಮಾತ್ಮನಾ।।

ನಿನ್ನಿಂದ ಪರಿತ್ಯಕ್ತಳಾದರೆ ನಾನು ಆಶ್ರಮಕ್ಕೆ ಹಿಂದಿರುಗಲು ಸಿದ್ಧಳಿದ್ದೇನೆ. ಆದರೆ ನಿನ್ನದೇ ಮಗನಾಗಿರುವ ಈ ಬಾಲಕನನ್ನು ನೀನು ತ್ಯಜಿಸುವುದು ಸರಿಯಲ್ಲ.”

01068072 ದುಃಷಂತ ಉವಾಚ।
01068072a ನ ಪುತ್ರಮಭಿಜಾನಾಮಿ ತ್ವಯಿ ಜಾತಂ ಶಕುಂತಲೇ।
01068072c ಅಸತ್ಯವಚನಾ ನಾರ್ಯಃ ಕಸ್ತೇ ಶ್ರದ್ಧಾಸ್ಯತೇ ವಚಃ।।

ದುಃಷಂತನು ಹೇಳಿದನು: “ಶಕುಂತಲೇ! ನಿನ್ನಲ್ಲಿ ಹುಟ್ಟಿದ ಈ ಪುತ್ರನು ನನಗೆ ಗೊತ್ತೇ ಇಲ್ಲ. ಸಾಧಾರಣವಾಗಿ ನಾರಿಯರು ಅಸತ್ಯವನ್ನೇ ನುಡಿಯುವರು. ನಿನ್ನ ಈ ಮಾತುಗಳನ್ನು ಯಾರುತಾನೆ ನಂಬುವರು?

01068073a ಮೇನಕಾ ನಿರನುಕ್ರೋಶಾ ಬಂಧಕೀ ಜನನೀ ತವ।
01068073c ಯಯಾ ಹಿಮವತಃ ಪೃಷ್ಠೇ ನಿರ್ಮಾಲ್ಯೇವ ಪ್ರವೇರಿತಾ।।

ಅನುಕಂಪವಿಲ್ಲದ ವೇಶ್ಯೆ ನಿನ್ನ ಜನನಿ ಮೇನಕೆಯು ದೇವರಿಗೇರಿಸಿದ ಮಾಲೆಯನ್ನು ಹೇಗೋ ಹಾಗೆ ನಿನ್ನನ್ನು ಹಿಮಾಲಯದಲ್ಲಿ ಬಿಸುಟು ಹೋದಳು.

01068074a ಸ ಚಾಪಿ ನಿರನುಕ್ರೋಶಃ ಕ್ಷತ್ರಯೋನಿಃ ಪಿತಾ ತವ।
01068074c ವಿಶ್ವಾಮಿತ್ರೋ ಬ್ರಾಹ್ಮಣತ್ವೇ ಲುಬ್ಧಃ ಕಾಮಪರಾಯಣಃ।।

ಕ್ಷತ್ರಿಯನಾಗಿ ಹುಟ್ಟಿಯೂ ಬಾಹ್ಮಣತ್ವದ ಆಸೆಗೊಳಗಾದ ಕಾಮಪರಾಯಣ ನಿನ್ನ ಪಿತ ವಿಶ್ವಾಮಿತ್ರನಿಗೂ ಅನುಕಂಪವಿರಲಿಲ್ಲ.

01068075a ಮೇನಕಾಪ್ಸರಸಾಂ ಶ್ರೇಷ್ಠಾ ಮಹರ್ಷೀಣಾಂ ಚ ತೇ ಪಿತಾ।
01068075c ತಯೋರಪತ್ಯಂ ಕಸ್ಮಾತ್ತ್ವಂ ಪುಂಶ್ಚಲೀವಾಭಿಧಾಸ್ಯಸಿ।।

ಮೇನಕೆಯು ಅಪ್ಸರೆಯರಲ್ಲಿ ಮತ್ತು ನಿನ್ನ ಪಿತನು ಮಹರ್ಷಿಗಳಲ್ಲಿ ಶ್ರೇಷ್ಠರೆನಿಸಿದರೂ ಅವರ ಮಗಳಾದ ನೀನು ಯಾವ ಕಾರಣಕ್ಕಾಗಿ ಈ ರೀತಿ ನೆಲೆಗೋಸ್ಕರ ಅಲೆಯುತ್ತಿರುವೆ?

01068076a ಅಶ್ರದ್ಧೇಯಮಿದಂ ವಾಕ್ಯಂ ಕಥಯಂತೀ ನ ಲಜ್ಜಸೇ।
01068076c ವಿಶೇಷತೋ ಮತ್ಸಕಾಶೇ ದುಷ್ಟತಾಪಸಿ ಗಮ್ಯತಾಂ।।

ನಿನ್ನ ಈ ಮಾತುಗಳಲ್ಲಿ ಸ್ವಲ್ಪವೂ ವಿಶ್ವಾಸ ಬರುತ್ತಿಲ್ಲ. ಈ ರೀತಿ ವಿಶೇಷತಃ ನನ್ನ ಎದಿರು ಇದನ್ನೆಲ್ಲಾ ಹೇಳಿಕೊಳ್ಳಲು ನಾಚಿಕೆಯಾದರೂ ಆಗುತ್ತಿಲ್ಲವೇ? ದುಷ್ಟ ತಾಪಸಿ! ಹೊರಟು ಹೋಗು.

01068077a ಕ್ವ ಮಹರ್ಷಿಃ ಸದೈವೋಗ್ರಃ ಸಾಪ್ಸರಾ ಕ್ವ ಚ ಮೇನಕಾ।
01068077c ಕ್ವ ಚ ತ್ವಮೇವಂ ಕೃಪಣಾ ತಾಪಸೀವೇಷಧಾರಿಣೀ।।

ಸದೈವರಲ್ಲಿ ಅಗ್ರ ಮಹರ್ಷಿಯೆಲ್ಲಿ? ಅಪ್ಸರೆ ಮೇನಕೆ ಎಲ್ಲಿ? ತಾಪಸೀ ವೇಷಧಾರಿಣಿ ಕೃಪಣೆ ನೀನಾದರೂ ಎಲ್ಲಿದ್ದೀಯೆ?

01068078a ಅತಿಕಾಯಶ್ಚ ಪುತ್ರಸ್ತೇ ಬಾಲೋಽಪಿ ಬಲವಾನಯಂ।
01068078c ಕಥಮಲ್ಪೇನ ಕಾಲೇನ ಶಾಲಸ್ಕಂಧ ಇವೋದ್ಗತಃ।।

ನಿನ್ನ ಈ ಪುತ್ರನು ಅತಿಕಾಯನಾಗಿ ತೋರುತ್ತಿದ್ದಾನೆ, ಬಾಲಕನಾದರೂ ಬಲಶಾಲಿಯಾಗಿದ್ದಾನೆ. ಈ ಅಲ್ಪ ಕಾಲದಲ್ಲಿಯೇ ಇವನು ಹೇಗೆ ಶಾಲಸ್ಕಂಧದ ಹಾಗೆ ಬೆಳೆದಿದ್ದಾನೆ?

01068079a ಸುನಿಕೃಷ್ಟಾ ಚ ಯೋನಿಸ್ತೇ ಪುಂಶ್ಚಲೀ ಪ್ರತಿಭಾಸಿ ಮೇ।
01068079c ಯದೃಚ್ಛಯಾ ಕಾಮರಾಗಾಜ್ಜಾತಾ ಮೇನಕಯಾ ಹ್ಯಸಿ।।

ಮೇನಕೆಯ ಕಾಮರಾಗದಿಂದ ಜನಿಸಿದ ನೀನು ನೀಚ ಯೋನಿಯಲ್ಲಿ ಜನಿಸಿದವಳು. ನನಗೆ ವ್ಯಭಿಚಾರಿಣಿಯಂತೆ ತೋರುತ್ತಿರುವೆ.

01068080a ಸರ್ವಮೇತತ್ಪರೋಕ್ಷಂ ಮೇ ಯತ್ತ್ವಂ ವದಸಿ ತಾಪಸಿ।
01068080c ನಾಹಂ ತ್ವಾಮಭಿಜಾನಾಮಿ ಯಥೇಷ್ಟಂ ಗಮ್ಯತಾಂ ತ್ವಯಾ।।

ತಾಪಸಿ! ನೀನು ಹೇಳುತ್ತಿರುವ ಸರ್ವವೂ ನನಗೆ ತಿಳಿಯದಾಗಿದೆ. ನನಗೆ ನೀನು ಗೊತ್ತೇ ಇಲ್ಲ. ನಿನಗಿಷ್ಟವಾದಲ್ಲಿ ನೀನು ಹೋಗಬಹುದು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಶಕುಂತಲೋಪಾಖ್ಯಾನೇ ಅಷ್ಟಷಷ್ಟಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಶಕುಂತಲೋಪಾಖ್ಯಾನದಲ್ಲಿ ಅರವತ್ತೆಂಟನೆಯ ಅಧ್ಯಾಯವು.