067 ಶಕುಂತಲೋಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಸಂಭವ ಪರ್ವ

ಅಧ್ಯಾಯ 67

ಸಾರ

ದುಃಷಂತನು ಶಕುಂತಲೆಯನ್ನು ವಿವಾಹವಾಗಲು ಕೇಳಿಕೊಳ್ಳುವುದು (1-15). ಅವಳ ಮಗನೇ ತನ್ನ ವಾರಸುದಾರನಾಗುತ್ತಾನೆಂದು ಭರವಸೆಯನ್ನು ನೀಡಿ ದುಃಷಂತನು ಶಕುಂತಲೆಯನ್ನು ಕೂಡಿ ಹೊರಟುಹೋದುದು (16-20). ಕಣ್ವನು ಹಿಂದಿರುಗಿದಾಗ ಶಕುಂತಲೆಯನ್ನು ಸಂತವಿಸಿ ವರವನ್ನಿತ್ತಿದುದು (21-33).

01067001 ದುಃಷಂತ ಉವಾಚ।
01067001a ಸುವ್ಯಕ್ತಂ ರಾಜಪುತ್ರೀ ತ್ವಂ ಯಥಾ ಕಲ್ಯಾಣಿ ಭಾಷಸೇ।
01067001c ಭಾರ್ಯಾ ಮೇ ಭವ ಸುಶ್ರೋಣಿ ಬ್ರೂಹಿ ಕಿಂ ಕರವಾಣಿ ತೇ।।

ದುಃಷಂತನು ಹೇಳಿದನು: “ರಾಜಪುತ್ರೀ! ಕಲ್ಯಾಣೀ! ನೀನು ಹೇಳಿದುದೆಲ್ಲವೂ ಸಂಯುಕ್ತವಾಗಿದೆ. ಸುಶ್ರೋಣಿ! ನನ್ನ ಭಾರ್ಯೆಯಾಗು. ನಿನಗಾಗಿ ನಾನು ಏನು ಮಾಡಲಿ ಹೇಳು.

01067002a ಸುವರ್ಣಮಾಲಾ ವಾಸಾಂಸಿ ಕುಂಡಲೇ ಪರಿಹಾಟಕೇ।
01067002c ನಾನಾಪತ್ತನಜೇ ಶುಭ್ರೇ ಮಣಿರತ್ನೇ ಚ ಶೋಭನೇ।।
01067003a ಆಹರಾಮಿ ತವಾದ್ಯಾಹಂ ನಿಷ್ಕಾದೀನ್ಯಜಿನಾನಿ ಚ।
01067003c ಸರ್ವಂ ರಾಜ್ಯಂ ತವಾದ್ಯಾಸ್ತು ಭಾರ್ಯಾ ಮೇ ಭವ ಶೋಭನೇ।।

ಶೋಭನೇ! ನಿನಗೋಸ್ಕರ ನಾನು ಇಂದೇ ಸುವರ್ಣಮಾಲೆ, ವಸ್ತ್ರಗಳು, ಕುಂಡಲಗಳು, ನಾನಾ ರೀತಿಯ ಮುತ್ತು, ವಜ್ರ, ಶುಭ್ರ ಮಣಿ ರತ್ನಗಳು, ಇನ್ನೂ ಮುಂತಾದ ವಸ್ತುಗಳನ್ನು ತರಿಸುತ್ತೇನೆ. ನನ್ನ ಸರ್ವ ರಾಜ್ಯವನ್ನೂ ನಿನಗಾಗಿ ಇಡುತ್ತೇನೆ. ಶೋಭನೇ! ನನ್ನ ಭಾರ್ಯೆಯಾಗು.

01067004a ಗಾಂಧರ್ವೇಣ ಚ ಮಾಂ ಭೀರು ವಿವಾಹೇನೈಹಿ ಸುಂದರಿ।
01067004c ವಿವಾಹಾನಾಂ ಹಿ ರಂಭೋರು ಗಾಂಧರ್ವಃ ಶ್ರೇಷ್ಠ ಉಚ್ಯತೇ।।

ಭೀರು! ಸುಂದರಿ! ರಂಭೋರು! ಗಾಂಧರ್ವ ವಿವಾಹ ಮಾಡಿಕೊಳ್ಳೋಣ. ಏಕೆಂದರೆ ವಿವಾಹಗಳಲ್ಲೆಲ್ಲ ಗಾಂಧರ್ವ ವಿವಾಹವು ಶ್ರೇಷ್ಠವೆಂದು ಹೇಳುತ್ತಾರೆ.”

01067005 ಶಕುಂತಲೋವಾಚ 01067005a ಫಲಾಹಾರೋ ಗತೋ ರಾಜನ್ಪಿತಾ ಮೇ ಇತ ಆಶ್ರಮಾತ್।
01067005c ತಂ ಮುಹೂರ್ತಂ ಪ್ರತೀಕ್ಷಸ್ವ ಸ ಮಾಂ ತುಭ್ಯಂ ಪ್ರದಾಸ್ಯತಿ।।

ಶಕುಂತಲೆಯು ಹೇಳಿದಳು: “ರಾಜನ್! ಈಗ ನನ್ನ ಪಿತನು ಫಲಾಹಾರಕ್ಕೆಂದು ಹೋಗಿದ್ದಾನೆ. ಸ್ವಲ್ಪ ಸಮಯ ಪ್ರತೀಕ್ಷಿಸು. ಅವನೇ ನನ್ನನ್ನು ನಿನಗೆ ಒಪ್ಪಿಸುತ್ತಾನೆ.”

01067006 ದುಃಷಂತ ಉವಾಚ।
01067006a ಇಚ್ಛಾಮಿ ತ್ವಾಂ ವರಾರೋಹೇ ಭಜಮಾನಾಮನಿಂದಿತೇ।
01067006c ತ್ವದರ್ಥಂ ಮಾಂ ಸ್ಥಿತಂ ವಿದ್ಧಿ ತ್ವದ್ಗತಂ ಹಿ ಮನೋ ಮಮ।।

ದುಃಷಂತನು ಹೇಳಿದನು: “ವರಾರೋಹೆ! ಅನಿಂದಿತೆ! ನೀನೇ ನನ್ನನ್ನು ಸ್ವೀಕರಿಸಬೇಕೆಂಬುದು ನನ್ನ ಇಚ್ಛೆ. ನಾನು ನಿನಗಾಗಿಯೇ ಇದ್ದೇನೆ ಮತ್ತು ನನ್ನ ಮನಸ್ಸು ನಿನ್ನಲ್ಲಿಯೇ ಇದೆ ಎನ್ನುವುದನ್ನು ತಿಳಿ.

01067007a ಆತ್ಮನೋ ಬಂಧುರಾತ್ಮೈವ ಗತಿರಾತ್ಮೈವ ಚಾತ್ಮನಃ।
01067007c ಆತ್ಮನೈವಾತ್ಮನೋ ದಾನಂ ಕರ್ತುಮರ್ಹಸಿ ಧರ್ಮತಃ।।

ತನಗೆ ತಾನೇ ಬಂಧು ಮತ್ತು ತನ್ನನ್ನು ತಾನೇ ಅನುಸರಿಸಬೇಕು. ಆದುದರಿಂದ ಧರ್ಮದ ಪ್ರಕಾರ ತನ್ನನ್ನು ತಾನೇ ದಾನವಾಗಿ ಕೊಟ್ಟುಕೊಳ್ಳಬೇಕು.

01067008a ಅಷ್ಟಾವೇವ ಸಮಾಸೇನ ವಿವಾಹಾ ಧರ್ಮತಃ ಸ್ಮೃತಾಃ।
01067008c ಬ್ರಾಹ್ಮೋ ದೈವಸ್ತಥೈವಾರ್ಷಃ ಪ್ರಾಜಾಪತ್ಯಸ್ತಥಾಸುರಃ।।
01067009a ಗಾಂಧರ್ವೋ ರಾಕ್ಷಸಶ್ಚೈವ ಪೈಶಾಚಶ್ಚಾಷ್ಟಮಃ ಸ್ಮೃತಃ।
01067009c ತೇಷಾಂ ಧರ್ಮಾನ್ಯಥಾಪೂರ್ವಂ ಮನುಃ ಸ್ವಾಯಂಭುವೋಽಬ್ರವೀತ್।।

ಧರ್ಮಸ್ಮೃತಿಗಳು ವಿವಾಹಗಳನ್ನು ಎಂಟು ಪ್ರಕಾರಗಳಲ್ಲಿ ವಿಂಗಡಿಸಿವೆ. ಬ್ರಹ್ಮ, ದೈವ, ಆರ್ಷ, ಪ್ರಜಾಪತ್ಯ, ಅಸುರ, ಗಂಧರ್ವ, ರಾಕ್ಷಸ ಮತ್ತು ಪೈಶಾಚ ಎಂಬ ಎಂಟು ಬಗೆಯವೆಂದು ಹೇಳುತ್ತಾರೆ. ಪೂರ್ವದಲ್ಲಿ ಯಾವ ಪ್ರಕಾರವು ಯಾರಿಗೆ ಧರ್ಮಸಮ್ಮತವಾದದ್ದು ಎಂದು ಸ್ವಯಂಭುವು ಮನುವಿಗೆ ಹೇಳಿದ್ದಾನೆ.

01067010a ಪ್ರಶಸ್ತಾಂಶ್ಚತುರಃ ಪೂರ್ವಾನ್ಬ್ರಾಹ್ಮಣಸ್ಯೋಪಧಾರಯ।
01067010c ಷಡಾನುಪೂರ್ವ್ಯಾ ಕ್ಷತ್ರಸ್ಯ ವಿದ್ಧಿ ಧರ್ಮ್ಯಾನನಿಂದಿತೇ।।

ಅನಿಂದಿತೇ! ಮೊದಲನೆಯ ನಾಲ್ಕು ಪ್ರಕಾರಗಳು ಬ್ರಾಹ್ಮಣರಿಗೆ ಸರಿಯಾದದ್ದು. ಮತ್ತು ಮೊದಲನೆಯ ಆರು ಪ್ರಕಾರಗಳು ಕ್ಷತ್ರಿಯರಿಗೆ ಧರ್ಮಯುತವಾದದ್ದು ಎಂದು ತಿಳಿ.

01067011a ರಾಜ್ಞಾಂ ತು ರಾಕ್ಷಸೋಽಪ್ಯುಕ್ತೋ ವಿಟ್ಶೂದ್ರೇಷ್ವಾಸುರಃ ಸ್ಮೃತಃ।
01067011c ಪಂಚಾನಾಂ ತು ತ್ರಯೋ ಧರ್ಮ್ಯಾ ದ್ವಾವಧರ್ಮ್ಯೌ ಸ್ಮೃತಾವಿಹ।।

ರಾಜರಿಗೆ ರಾಕ್ಷಸ ಪದ್ಧತಿಯ ವಿವಾಹವೂ ಕೂಡ ಸರಿಯೆನಿಸಲ್ಪಟ್ಟಿದೆ. ಅಸುರ ಪದ್ಧತಿಯು ವೈಶ್ಯ ಮತ್ತು ಶೂದ್ರರಿಗೆಂದು ಹೇಳಲ್ಪಟ್ಟಿದೆ. ಮೊದಲನೆಯ ಐದು ಪ್ರಕಾರಗಳಲ್ಲಿ, ಮೂರು ಧರ್ಮಪ್ರಕಾರವಾದದ್ದು ಮತ್ತು ಎರಡು ಅಧರ್ಮವೆಂದು ಹೇಳುತ್ತಾರೆ.

01067012a ಪೈಶಾಚಶ್ಚಾಸುರಶ್ಚೈವ ನ ಕರ್ತವ್ಯೌ ಕಥಂ ಚನ।
01067012c ಅನೇನ ವಿಧಿನಾ ಕಾರ್ಯೋ ಧರ್ಮಸ್ಯೈಷಾ ಗತಿಃ ಸ್ಮೃತಾ।।

ಪೈಶಾಚ ಮತ್ತು ಅಸುರ ಪ್ರಕಾರಗಳಂತೆ ಎಂದೂ ವಿವಾಹವಾಗಬಾರದು. ಧರ್ಮಸ್ಮೃತಿಗಳಲ್ಲಿ ಹೇಳಿರುವಂತಹ ಇವುಗಳೆಲ್ಲವೂ ಪರಿಪಾಲಿಸಬೇಕಾದಂಥವುಗಳು.

01067013a ಗಾಂಧರ್ವರಾಕ್ಷಸೌ ಕ್ಷತ್ರೇ ಧರ್ಮ್ಯೌ ತೌ ಮಾ ವಿಶಂಕಿಥಾಃ।
01067013c ಪೃಥಗ್ವಾ ಯದಿ ವಾ ಮಿಶ್ರೌ ಕರ್ತವ್ಯೌ ನಾತ್ರ ಸಂಶಯಃ।।

ಗಾಂಧರ್ವ ಮತ್ತು ರಾಕ್ಷಸ ವಿವಾಹಗಳು ಕ್ಷತ್ರಿಯರಿಗೆ ಧಾರ್ಮಿಕವಾದವುಗಳು. ನೀನು ಶಂಕಿಸಬೇಡ. ಈ ಎರಡರಲ್ಲಿ ಒಂದು ಅಥವಾ ಮಿಶ್ರಣವು ಸರಿ ಎನ್ನುವುದರಲ್ಲಿ ಸಂಶಯವಿಲ್ಲ.

01067014a ಸಾ ತ್ವಂ ಮಮ ಸಕಾಮಸ್ಯ ಸಕಾಮಾ ವರವರ್ಣಿನಿ।
01067014c ಗಾಂಧರ್ವೇಣ ವಿವಾಹೇನ ಭಾರ್ಯಾ ಭವಿತುಮರ್ಹಸಿ।।

ವರವರ್ಣಿನೀ! ನಾನು ಕಾಮದಿಂದ ತುಂಬಿದ್ದೇನೆ, ನೀನೂ ಕೂಡ ಕಾಮದಿಂದಿದ್ದೀಯೆ. ಆದ್ದರಿಂದ ನೀನು ಗಾಂಧರ್ವ ವಿವಾಹದ ಪ್ರಕಾರ ನನ್ನ ಭಾರ್ಯೆಯಾಗಬೇಕು.”

01067015 ಶಕುಂತಲೋವಾಚ।
01067015a ಯದಿ ಧರ್ಮಪಥಸ್ತ್ವೇಷ ಯದಿ ಚಾತ್ಮಾ ಪ್ರಭುರ್ಮಮ।
01067015c ಪ್ರದಾನೇ ಪೌರವಶ್ರೇಷ್ಠ ಶೃಣು ಮೇ ಸಮಯಂ ಪ್ರಭೋ।।

ಶಕುಂತಲೆಯು ಹೇಳಿದಳು: “ಪೌರವಶ್ರೇಷ್ಠ! ಇವೆಲ್ಲವೂ ಧರ್ಮಪಥದಲ್ಲಿಯೇ ಇದ್ದುದಾದರೆ ಮತ್ತು ನಾನೇ ನನ್ನ ಪ್ರಭು, ಮತ್ತು ನನ್ನನ್ನು ನಾನೇ ಕೊಡಬಲ್ಲೆ ಎನ್ನುವುದಾದರೆ, ನನ್ನ ಈ ನಿಯಮಗಳನ್ನು ಕೇಳು.

01067016a ಸತ್ಯಂ ಮೇ ಪ್ರತಿಜಾನೀಹಿ ಯತ್ತ್ವಾಂ ವಕ್ಷ್ಯಾಮ್ಯಹಂ ರಹಃ।
01067016c ಮಮ ಜಾಯೇತ ಯಃ ಪುತ್ರಃ ಸ ಭವೇತ್ತ್ವದನಂತರಂ।।
01067017a ಯುವರಾಜೋ ಮಹಾರಾಜ ಸತ್ಯಮೇತದ್ಬ್ರವೀಹಿ ಮೇ।
01067017c ಯದ್ಯೇತದೇವಂ ದುಃಷಂತ ಅಸ್ತು ಮೇ ಸಂಗಮಸ್ತ್ವಯಾ।।

ಮಹಾರಾಜ! ಬೇರೆ ಯಾರೂ ಇಲ್ಲದ, ನಾವಿಬ್ಬರೇ ಇರುವ ಈ ಏಕಾಂತದಲ್ಲಿ ನನಗೆ ಒಂದು ಸತ್ಯ ವಚನವನ್ನು ನೀಡು. ನನ್ನಲ್ಲಿ ಹುಟ್ಟಿದ ಪುತ್ರನು ನಿನ್ನ ನಂತರದಲ್ಲಿ ಯುವರಾಜನಾಗಬೇಕು. ನಾನು ಸತ್ಯವನ್ನು ಹೇಳುತ್ತಿದ್ದೇನೆ. ದುಃಷಂತ! ಇದು ಹೀಗೆಯೇ ಆಗುವುದಾದರೆ ನನ್ನ ನಿನ್ನ ಸಂಗಮವಾಗಲಿ.””

01067018 ವೈಶಂಪಾಯನ ಉವಾಚ।
01067018a ಏವಮಸ್ತ್ವಿತಿ ತಾಂ ರಾಜಾ ಪ್ರತ್ಯುವಾಚಾವಿಚಾರಯನ್।
01067018c ಅಪಿ ಚ ತ್ವಾಂ ನಯಿಷ್ಯಾಮಿ ನಗರಂ ಸ್ವಂ ಶುಚಿಸ್ಮಿತೇ।
01067018e ಯಥಾ ತ್ವಮರ್ಹಾ ಸುಶ್ರೋಣಿ ಸತ್ಯಮೇತದ್ಬ್ರವೀಮಿ ತೇ।।

ವೈಶಂಪಾಯನನು ಹೇಳಿದನು: “ರಾಜನು ಒಂದು ಸ್ವಲ್ಪವೂ ವಿಚಾರಿಸದೆ “ಹಾಗೆಯೇ ಆಗಲಿ” ಎಂದನು. “ಶುಚಿಸ್ಮಿತೇ! ನಿನ್ನನ್ನು ನನ್ನ ನಗರಕ್ಕೆ ಕರೆದೊಯ್ಯುತ್ತೇನೆ. ಸುಶ್ರೋಣಿ! ಸತ್ಯವನ್ನು ಹೇಳಬೇಕೆಂದರೆ ನೀನು ಇವೆಲ್ಲವುಗಳಿಗೂ ಅರ್ಹೆ.”

01067019a ಏವಮುಕ್ತ್ವಾ ಸ ರಾಜರ್ಷಿಸ್ತಾಮನಿಂದಿತಗಾಮಿನೀಂ।
01067019c ಜಗ್ರಾಹ ವಿಧಿವತ್ಪಾಣಾವುವಾಸ ಚ ತಯಾ ಸಹ।।

ಹೀಗೆ ಹೇಳಿ ಆ ರಾಜರ್ಷಿಯು ಅನಿಂದಿತಗಾಮಿನಿಯನ್ನು ವಿಧಿವತ್ತಾಗಿ ಪಾಣಿಗ್ರಹಣ ಮಾಡಿ, ಅವಳನ್ನು ಕೂಡಿದನು.

01067020a ವಿಶ್ವಾಸ್ಯ ಚೈನಾಂ ಸ ಪ್ರಾಯಾದಬ್ರವೀಚ್ಚ ಪುನಃ ಪುನಃ।
01067020c ಪ್ರೇಷಯಿಷ್ಯೇ ತವಾರ್ಥಾಯ ವಾಹಿನೀಂ ಚತುರಂಗಿಣೀಂ।
01067020e ತಯಾ ತ್ವಾಮಾನಯಿಷ್ಯಾಮಿ ನಿವಾಸಂ ಸ್ವಂ ಶುಚಿಸ್ಮಿತೇ।।

“ಶುಚಿಸ್ಮಿತೇ! ನಿನಗೋಸ್ಕರ ಚತುರಂಗ ಸೇನೆಯನ್ನು ಕಳುಹಿಸಿ ನಿನ್ನನ್ನು ನನ್ನ ನಿವಾಸಕ್ಕೆ ಕರೆಯಿಸಿಕೊಳ್ಳುತ್ತೇನೆ” ಎಂದು ಪುನಃ ಪುನಃ ಆಶ್ವಾಸನೆಗಳನ್ನಿತ್ತು ಅವನು ತನ್ನ ನಗರಿಗೆ ಹಿಂದಿರುಗಿದನು.

01067021a ಇತಿ ತಸ್ಯಾಃ ಪ್ರತಿಶ್ರುತ್ಯ ಸ ನೃಪೋ ಜನಮೇಜಯ।
01067021c ಮನಸಾ ಚಿಂತಯನ್ಪ್ರಾಯಾತ್ಕಾಶ್ಯಪಂ ಪ್ರತಿ ಪಾರ್ಥಿವಃ।।

ಜನಮೇಜಯ! ಈ ರೀತಿ ಅವಳಿಗೆ ಭರವಸೆಯನ್ನಿತ್ತು ಆ ನೃಪನು ಹೊರಟುಹೋದನು. ಹೋಗುತ್ತಿರುವಾಗ ಆ ಪಾರ್ಥಿವನು ಮನಸ್ಸಿನಲ್ಲಿಯೇ ಕಾಶ್ಯಪನ ಕುರಿತು ಯೋಚಿಸಿದನು.

01067022a ಭಗವಾಂಸ್ತಪಸಾ ಯುಕ್ತಃ ಶ್ರುತ್ವಾ ಕಿಂ ನು ಕರಿಷ್ಯತಿ।
01067022c ಏವಂ ಸಂಚಿಂತಯನ್ನೇವ ಪ್ರವಿವೇಶ ಸ್ವಕಂ ಪುರಂ।।

“ಆ ತಪಸ್ವಿ ಭಗವಾನನು ಇದನ್ನೆಲ್ಲ ಕೇಳಿ ಏನು ಮಾಡುತ್ತಾನೋ” ಎಂದು ಚಿಂತಿಸುತ್ತಾ ಅವನು ತನ್ನ ಪುರವನ್ನು ಸೇರಿದನು.

01067023a ಮುಹೂರ್ತಯಾತೇ ತಸ್ಮಿಂಸ್ತು ಕಣ್ವೋಽಪ್ಯಾಶ್ರಮಮಾಗಮತ್।
01067023c ಶಕುಂತಲಾ ಚ ಪಿತರಂ ಹ್ರಿಯಾ ನೋಪಜಗಾಮ ತಂ।।

ಅವನು ಹೊರಟುಹೋದ ಸ್ವಲ್ಪ ಸಮಯದಲ್ಲಿಯೇ ಕಣ್ವನು ಆಶ್ರಮಕ್ಕೆ ಹಿಂದಿರುಗಿದನು. ಆದರೆ ಶಕುಂತಲೆಯು ನಾಚಿಕೊಂಡು ಅವನನ್ನು ಸ್ವಾಗತಿಸಲು ಹೊರಬರಲಿಲ್ಲ.

01067024a ವಿಜ್ಞಾಯಾಥ ಚ ತಾಂ ಕಣ್ವೋ ದಿವ್ಯಜ್ಞಾನೋ ಮಹಾತಪಾಃ।
01067024c ಉವಾಚ ಭಗವಾನ್ಪ್ರೀತಃ ಪಶ್ಯನ್ದಿವ್ಯೇನ ಚಕ್ಷುಷಾ।।

ಮಹಾತಪಸ್ವಿ ಕಣ್ವನಾದರೂ ತನ್ನ ದಿವ್ಯಜ್ಞಾನದಿಂದ ಎಲ್ಲವನ್ನೂ ತಿಳಿದುಕೊಂಡನು. ತನ್ನ ದಿವ್ಯ ದೃಷ್ಟಿಯಿಂದ ಎಲ್ಲವನ್ನೂ ಕಂಡುಕೊಂಡ ಭಗವಾನನು ಸಂತೋಷಗೊಂಡು ಹೇಳಿದನು:

01067025a ತ್ವಯಾದ್ಯ ರಾಜಾನ್ವಯಯಾ ಮಾಮನಾದೃತ್ಯ ಯತ್ಕೃತಃ।
01067025c ಪುಂಸಾ ಸಹ ಸಮಾಯೋಗೋ ನ ಸ ಧರ್ಮೋಪಘಾತಕಃ।।

“ಇಂದು ನೀನು ಗೌಪ್ಯವಾಗಿ ನಾನು ಬರುವುದನ್ನು ಕಾಯದೇ ರಾಜನೊಂದಿಗೆ ಸಮಾಗಮ ಮಾಡಿದ ಕಾರ್ಯವು ಒಳ್ಳೆಯದೇ ಆಗಿದೆ. ಇದರಿಂದ ನೀನು ಧರ್ಮಘಾತಕಿಯಾಗಲಿಲ್ಲ.

01067026a ಕ್ಷತ್ರಿಯಸ್ಯ ಹಿ ಗಾಂಧರ್ವೋ ವಿವಾಹಃ ಶ್ರೇಷ್ಠ ಉಚ್ಯತೇ।
01067026c ಸಕಾಮಾಯಾಃ ಸಕಾಮೇನ ನಿರ್ಮಂತ್ರೋ ರಹಸಿ ಸ್ಮೃತಃ।।

ಸಕಾಮಿಗಳು ಸಕಾಮದಿಂದ ಮಂತ್ರಗಳಿಲ್ಲದೆಯೇ ರಹಸ್ಯದಲ್ಲಿ ಗಾಂಧರ್ವ ವಿವಾಹವನ್ನು ಮಾಡಿಕೊಳ್ಳುವುದು ಕ್ಷತ್ರಿಯರಿಗೆ ಶ್ರೇಷ್ಠವೆಂದೇ ಹೇಳುತ್ತಾರೆ.

01067027a ಧರ್ಮಾತ್ಮಾ ಚ ಮಹಾತ್ಮಾ ಚ ದುಃಷಂತಃ ಪುರುಷೋತ್ತಮಃ।
01067027c ಅಭ್ಯಗಚ್ಛಃ ಪತಿಂ ಯಂ ತ್ವಂ ಭಜಮಾನಂ ಶಕುಂತಲೇ।।

ಶಕುಂತಲೆ! ನಿನ್ನ ಪತಿಯೆಂದು ಸ್ವೀಕರಿಸಿದ ಆ ಪುರುಷೋತ್ತಮ ದುಃಷಂತನು ಧರ್ಮಾತ್ಮನೂ ಮಹಾತ್ಮನೂ ಆಗಿದ್ದಾನೆ.

01067028a ಮಹಾತ್ಮಾ ಜನಿತಾ ಲೋಕೇ ಪುತ್ರಸ್ತವ ಮಹಾಬಲಃ।
01067028c ಯ ಇಮಾಂ ಸಾಗರಾಪಾಂಗಾಂ ಕೃತ್ಸ್ನಾಂ ಭೋಕ್ಷ್ಯತಿ ಮೇದಿನೀಂ।।

ನಿನ್ನಲ್ಲಿ ಜನಿಸುವ ಪುತ್ರನು ಲೋಕದಲ್ಲಿ ಮಹಾತ್ಮನೂ ಮಹಾಬಲಶಾಲಿಯೂ ಆಗುತ್ತಾನೆ. ಅವನು ಸಾಗರದಿಂದ ಆವರಿಸಲ್ಪಟ್ಟ ಈ ಎಲ್ಲ ಮೇದಿನಿಯನ್ನೂ ಭೋಗಿಸುತ್ತಾನೆ.

01067029a ಪರಂ ಚಾಭಿಪ್ರಯಾತಸ್ಯ ಚಕ್ರಂ ತಸ್ಯ ಮಹಾತ್ಮನಃ।
01067029c ಭವಿಷ್ಯತ್ಯಪ್ರತಿಹತಂ ಸತತಂ ಚಕ್ರವರ್ತಿನಃ।।

ಆ ಮಹಾತ್ಮನು ತನ್ನ ವೈರಿಗಳ ವಿರುದ್ಧ ಹೊರಟಾಗ ಯಾರಿಗೂ ಅವನನ್ನು ಸೋಲಿಸಲಿಕ್ಕಾಗುವುದಿಲ್ಲ, ಮತ್ತು ಅವನು ಚಕ್ರವರ್ತಿಯೆಂದು ಎನಿಸಿಕೊಳ್ಳುತ್ತಾನೆ.”

01067030a ತತಃ ಪ್ರಕ್ಷಾಲ್ಯ ಪಾದೌ ಸಾ ವಿಶ್ರಾಂತಂ ಮುನಿಮಬ್ರವೀತ್।
01067030c ವಿನಿಧಾಯ ತತೋ ಭಾರಂ ಸನ್ನಿಧಾಯ ಫಲಾನಿ ಚ।।

ಆಗ ಅವಳು ಅವನು ಹೊತ್ತಿದ್ದ ಫಲ ಭಾರವನ್ನು ಕೆಳಗಿಳಿಸಿ ಅವುಗಳನ್ನು ಸರಿಯಾದ ಜಾಗದಲ್ಲಿ ಇರಿಸಿ, ಅವನ ಪಾದಗಳನ್ನು ತೊಳೆದಳು. ಮುನಿಯು ವಿಶ್ರಾಂತಿ ಹೊಂದಿದ ನಂತರ ಹೇಳಿದಳು:

01067031a ಮಯಾ ಪತಿರ್ವೃತೋ ಯೋಽಸೌ ದುಃಷಂತಃ ಪುರುಷೋತ್ತಮಃ।
01067031c ತಸ್ಮೈ ಸಸಚಿವಾಯ ತ್ವಂ ಪ್ರಸಾದಂ ಕರ್ತುಮರ್ಹಸಿ।।

“ನಾನು ಪತಿಯನ್ನಾಗಿ ಸ್ವೀಕರಿಸಿದ ಆ ಪುರುಷೋತ್ತಮ ದುಃಷಂತನಿಗೆ ನೀನು ಅನುಗ್ರಹಿಸಬೇಕು.”

01067032 ಕಣ್ವ ಉವಾಚ।
01067032a ಪ್ರಸನ್ನ ಏವ ತಸ್ಯಾಹಂ ತ್ವತ್ಕೃತೇ ವರವರ್ಣಿನಿ।
01067032c ಗೃಹಾಣ ಚ ವರಂ ಮತ್ತಸ್ತತ್ಕೃತೇ ಯದಭೀಪ್ಸಿತಂ।।

ಕಣ್ವನು ಹೇಳಿದನು: “ವರವರ್ಣಿನಿ! ನಿನಗೋಸ್ಕರ ಅವನಿಗೆ ನಾನು ಅನುಗ್ರಹಿಸುತ್ತೇನೆ. ನನ್ನಿಂದ ಬೇಕಾದ ನಿನಗಿಷ್ಟ ವರವೊಂದನ್ನು ಕೇಳು.””

01067033 ವೈಶಂಪಾಯನ ಉವಾಚ।
01067033a ತತೋ ಧರ್ಮಿಷ್ಠತಾಂ ವವ್ರೇ ರಾಜ್ಯಾಚ್ಚಾಸ್ಖಲನಂ ತಥಾ।
01067033c ಶಕುಂತಲಾ ಪೌರವಾಣಾಂ ದುಃಷಂತಹಿತಕಾಮ್ಯಯಾ।।

ವೈಶಂಪಾಯನನು ಹೇಳಿದನು: “ಆಗ ದುಃಷಂತನಿಗೆ ಹಿತವನ್ನೇ ಬಯಸುತ್ತಿದ್ದ ಶಕುಂತಲೆಯು “ಪೌರವರು ಸದಾ ಧರ್ಮಿಷ್ಠರಾಗಿರಲಿ ಮತ್ತು ಅವರಿಗೆ ಎಂದೂ ರಾಜ್ಯಚ್ಯುತಿಯಾಗದಿರಲಿ” ಎಂದು ಕೇಳಿಕೊಂಡಳು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಶಕುಂತಲೋಪಾಖ್ಯಾನೇ ಸಪ್ತಷಷ್ಟಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಶಕುಂತಲೋಪಾಖ್ಯಾನದಲ್ಲಿ ಅರವತ್ತೇಳನೆಯ ಅಧ್ಯಾಯವು.