066 ಶಕುಂತಲೋಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಸಂಭವ ಪರ್ವ

ಅಧ್ಯಾಯ 66

ಸಾರ

ವಿಶ್ವಾಮಿತ್ರ-ಮೇನಕೆಯರಲ್ಲಿ ಹೆಣ್ಣು ಮಗುವಿನ ಜನನ (1-5). ಹುಟ್ಟಿದ ಮಗುವನ್ನು ಅರಣ್ಯದಲ್ಲಿಯೇ ತೊರೆದು ಹೋಗಲು, ಕಣ್ವನು ಮಗುವನ್ನು ತಂದು, ಶಕುಂತಲೆಯೆಂದು ಸಾಕಿದುದು (6-15).

01066001 ಶಕುಂತಲೋವಾಚ।
01066001a ಏವಮುಕ್ತಸ್ತಯಾ ಶಕ್ರಃ ಸಂದಿದೇಶ ಸದಾಗತಿಂ।
01066001c ಪ್ರಾತಿಷ್ಠತ ತದಾ ಕಾಲೇ ಮೇನಕಾ ವಾಯುನಾ ಸಹ।।

ಶಕುಂತಲೆಯು ಹೇಳಿದಳು: ““ಅವಳು ಹೀಗೆ ಹೇಳಿದ ನಂತರ, ಮೇನಕೆಯು ಋಷಿಯ ಸನ್ನಿಧಿಯಲ್ಲಿರುವಾಗ ವಾಯುವೂ ಕೂಡ ಅಲ್ಲಿರುವಂತೆ ಶಕ್ರನು ಆದೇಶವನ್ನಿತ್ತನು.

01066002a ಅಥಾಪಶ್ಯದ್ವರಾರೋಹಾ ತಪಸಾ ದಗ್ಧಕಿಲ್ಬಿಷಂ।
01066002c ವಿಶ್ವಾಮಿತ್ರಂ ತಪಸ್ಯಂತಂ ಮೇನಕಾ ಭೀರುರಾಶ್ರಮೇ।।

ಅನಂತರ ಭೀರು ವರಾರೋಹೆ ಮೇನಕೆಯು ತಪಸ್ಸಿನಿಂದ ತನ್ನ ಪಾಪಗಳನ್ನೆಲ್ಲ ಭಸ್ಮಮಾಡಿಕೊಂಡು ತಪಸ್ಸಿನಲ್ಲಿ ತೊಡಗಿದ್ದ ವಿಶ್ವಾಮಿತ್ರನ ಆಶ್ರಮಕ್ಕೆ ಬಂದು ಅವನನ್ನು ನೋಡಿದಳು.

01066003a ಅಭಿವಾದ್ಯ ತತಃ ಸಾ ತಂ ಪ್ರಾಕ್ರೀಡದೃಷಿಸನ್ನಿಧೌ।
01066003c ಅಪೋವಾಹ ಚ ವಾಸೋಽಸ್ಯಾ ಮಾರುತಃ ಶಶಿಸನ್ನಿಭಂ।।

ಅವನನ್ನು ಅಭಿವಾದಿಸಿ ಅವಳು ಋಷಿಸನ್ನಿಧಿಯಲ್ಲಿ ಆಟವಾಡಲು ತೊಡಗಿದಳು. ಅದೇ ಸಮಯದಲ್ಲಿ ಮಾರುತನು ಅವಳ ಶಶಿಸನ್ನಿಭ ವಸ್ತ್ರವನ್ನು ಹಾರಿಸಿಬಿಟ್ಟನು.

01066004a ಸಾಗಚ್ಛತ್ತ್ವರಿತಾ ಭೂಮಿಂ ವಾಸಸ್ತದಭಿಲಿಂಗತೀ।
01066004c ಉತ್ಸ್ಮಯಂತೀವ ಸವ್ರೀಡಂ ಮಾರುತಂ ವರವರ್ಣಿನೀ।।

ಆಗ ಆ ವರವರ್ಣಿನಿಯು ನಾಚುತ್ತಾ ಮಾರುತನ ಈ ಕ್ರಿಯೆಯಿಂದ ಸಿಡುಕಿದ್ದಾಳೋ ಎಂದು ತೋರುವಂತೆ ತನ್ನ ವಸ್ತ್ರವನ್ನು ಹಿಡಿಯಲು ಅದರ ಹಿಂದೆ ಓಡತೊಡಗಿದಳು.

01066005a ಗೃದ್ಧಾಂ ವಾಸಸಿ ಸಂಭ್ರಾಂತಾಂ ಮೇನಕಾಂ ಮುನಿಸತ್ತಮಃ।
01066005c ಅನಿರ್ದೇಶ್ಯವಯೋರೂಪಾಮಪಶ್ಯದ್ವಿವೃತಾಂ ತದಾ।।

ಅದೇ ಸಮಯದಲ್ಲಿ ಮುನಿಸತ್ತಮನು ಆ ನಗ್ನ ಮೇನಕೆಯು ಯಾವುದೇ ರೀತಿಯ ವಯಸ್ಸಿನ ಗುರುತೇ ಇಲ್ಲದ ಅತೀವ ಸುಂದರಿ ಎನ್ನುವುದನ್ನು ಗಮನಿಸಿದನು.

01066006a ತಸ್ಯಾ ರೂಪಗುಣಂ ದೃಷ್ಟ್ವಾ ಸ ತು ವಿಪ್ರರ್ಷಭಸ್ತದಾ।
01066006c ಚಕಾರ ಭಾವಂ ಸಂಸರ್ಗೇ ತಯಾ ಕಾಮವಶಂ ಗತಃ।।

ಅವಳ ರೂಪಗುಣವನ್ನು ಕಂಡು ಆ ವಿಪ್ರರ್ಷಭನು ಕಾಮವಶನಾಗಿ ಅವಳ ಸಂಸರ್ಗವನ್ನು ಬಯಸಿದನು.

01066007a ನ್ಯಮಂತ್ರಯತ ಚಾಪ್ಯೇನಾಂ ಸಾ ಚಾಪ್ಯೈಚ್ಛದನಿಂದಿತಾ।
01066007c ತೌ ತತ್ರ ಸುಚಿರಂ ಕಾಲಂ ವನೇ ವ್ಯಹರತಾಮುಭೌ।
01066007e ರಮಮಾಣೌ ಯಥಾಕಾಮಂ ಯಥೈಕದಿವಸಂ ತಥಾ।।

ಅವಳನ್ನು ತನ್ನ ಬಳಿ ಬರಲು ಆಮಂತ್ರಿಸಲು ಆ ಅನಿಂದಿತೆಯು ಆಮಂತ್ರಣವನ್ನು ಸ್ವೀಕರಿಸಿದಳು. ಅವರೀರ್ವರೂ ಆ ವನದಲ್ಲಿ ಬಹಳ ಕಾಲ ರಮಿಸಿದರು. ಅವರ ಕಾಮಕೇಳಿಯಲ್ಲಿ ವರ್ಷಗಳೂ ದಿನಗಳಾಗಿ ತೋರಿದವು.

01066008a ಜನಯಾಮಾಸ ಸ ಮುನಿರ್ಮೇನಕಾಯಾಂ ಶಕುಂತಲಾಂ।
01066008c ಪ್ರಸ್ಥೇ ಹಿಮವತೋ ರಮ್ಯೇ ಮಾಲಿನೀಮಭಿತೋ ನದೀಂ।।
01066009a ಜಾತಮುತ್ಸೃಜ್ಯ ತಂ ಗರ್ಭಂ ಮೇನಕಾ ಮಾಲಿನೀಮನು।
01066009c ಕೃತಕಾರ್ಯಾ ತತಸ್ತೂರ್ಣಮಗಚ್ಛಚ್ಚಕ್ರಸಂಸದಂ।।

ಆ ಮುನಿಯು ಮೇನಕೆಯಲ್ಲಿ ಶಕುಂತಲೆಯನ್ನು ಹುಟ್ಟಿಸಿದನು. ಮೇನಕೆಯು ಹಿಮಾಲಯದ ಕಣಿವೆಯಲ್ಲಿ ಹರಿಯುತ್ತಿರುವ ರಮ್ಯ ಮಾಲಿನೀ ನದಿಯ ತೀರಕ್ಕೆ ಹೋಗಿ ಮಗಳಿಗೆ ಜನ್ಮವನ್ನಿತ್ತು ಅವಳನ್ನು ಅಲ್ಲಿಯೇ ಬಿಟ್ಟು, ತನ್ನ ಕಾರ್ಯವನ್ನು ಪೂರೈಸಿ ಸ್ವರ್ಗಲೋಕಕ್ಕೆ ತೆರಳಿದಳು.

01066010a ತಂ ವನೇ ವಿಜನೇ ಗರ್ಭಂ ಸಿಂಹವ್ಯಾಘ್ರಸಮಾಕುಲೇ।
01066010c ದೃಷ್ಟ್ವಾ ಶಯಾನಂ ಶಕುನಾಃ ಸಮಂತಾತ್ಪರ್ಯವಾರಯನ್।।

ಸಿಂಹ ವ್ಯಾಘ್ರಗಳಿಂದ ಕೂಡಿದ ಆ ನಿರ್ಜನ ವನದಲ್ಲಿ ಆ ಮಗುವನ್ನು ಕಂಡ ಶಕುನ ಪಕ್ಷಿಗಳು ಅದರ ಸುತ್ತಲೂ ಕುಳಿತು ರಕ್ಷಿಸಿದವು.

01066011a ನೇಮಾಂ ಹಿಂಸ್ಯುರ್ವನೇ ಬಾಲಾಂ ಕ್ರವ್ಯಾದಾ ಮಾಂಸಗೃದ್ಧಿನಃ।
01066011c ಪರ್ಯರಕ್ಷಂತ ತಾಂ ತತ್ರ ಶಕುಂತಾ ಮೇನಕಾತ್ಮಜಾಂ।।

ಈ ರೀತಿ ಆ ಹಿಮಾಲಯದ ವನದಲ್ಲಿ ಶಕುಂತ ಪಕ್ಷಿಗಳು ಮೇನಕಾತ್ಮಜೆಯನ್ನು ಯಾವುದೇ ಮಾಂಸಾಹಾರಿ ಪ್ರಾಣಿಗಳಿಂದ ರಕ್ಷಿಸಿದವು.

01066012a ಉಪಸ್ಪ್ರಷ್ಟುಂ ಗತಶ್ಚಾಹಮಪಶ್ಯಂ ಶಯಿತಾಮಿಮಾಂ।
01066012c ನಿರ್ಜನೇ ವಿಪಿನೇಽರಣ್ಯೇ ಶಕುಂತೈಃ ಪರಿವಾರಿತಾಂ।
01066012e ಆನಯಿತ್ವಾ ತತಶ್ಚೈನಾಂ ದುಹಿತೃತ್ವೇ ನ್ಯಯೋಜಯಂ।।

ಸ್ನಾನಕಾರ್ಯಗಳಿಗೆ ಹೋಗಿದ್ದ ನಾನು ಆ ನಿರ್ಜನ ವಿಪಿನಾರಣ್ಯದಲಿ ಶಕುಂತ ಪಕ್ಷಿಗಳಿಂದ ಸುತ್ತುವರೆಯಲ್ಪಟ್ಟು ಮಲಗಿದ್ದ ಈ ಮಗುವನ್ನು ನೋಡಿದೆನು. ಅವಳನ್ನು ಇಲ್ಲಿಗೆ ತಂದು ನನ್ನ ಮಗಳನ್ನಾಗಿ ಮಾಡಿಕೊಂಡೆನು.

01066013a ಶರೀರಕೃತ್ಪ್ರಾಣದಾತಾ ಯಸ್ಯ ಚಾನ್ನಾನಿ ಭುಂಜತೇ।
01066013c ಕ್ರಮೇಣ ತೇ ತ್ರಯೋಽಪ್ಯುಕ್ತಾಃ ಪಿತರೋ ಧರ್ಮನಿಶ್ಚಯೇ।।

ಧರ್ಮನಿಶ್ಚಯದ ಪ್ರಕಾರ ಕ್ರಮವಾಗಿ ಮೂರು ರೀತಿಯಲ್ಲಿ ತಂದೆಯೆನಿಸಿಕೊಳ್ಳಬಹುದು: ಶರೀರವನ್ನು ನೀಡುವುದರಿಂದ, ಪ್ರಾಣವನ್ನು ರಕ್ಷಿಸುವುದರಿಂದ ಮತ್ತು ಆಹಾರವನ್ನು ನೀಡುವುದರಿಂದ.

01066014a ನಿರ್ಜನೇ ಚ ವನೇ ಯಸ್ಮಾಚ್ಛಕುಂತೈಃ ಪರಿರಕ್ಷಿತಾ।
01066014c ಶಕುಂತಲೇತಿ ನಾಮಾಸ್ಯಾಃ ಕೃತಂ ಚಾಪಿ ತತೋ ಮಯಾ।।

ಆ ನಿರ್ಜನ ವನದಲ್ಲಿ ಶಕುಂತಗಳಿಂದ ಪರಿರಕ್ಷಿತ ಅವಳಿಗೆ ನಾನು ಶಕುಂತಲ ಎಂಬ ಹೆಸರನ್ನಿಟ್ಟೆನು.

01066015a ಏವಂ ದುಹಿತರಂ ವಿದ್ಧಿ ಮಮ ಸೌಮ್ಯ ಶಕುಂತಲಾಂ।
01066015c ಶಕುಂತಲಾ ಚ ಪಿತರಂ ಮನ್ಯತೇ ಮಾಮನಿಂದಿತಾ।।

ಸೌಮ್ಯ! ಈ ರೀತಿ ಶಕುಂತಲೆಯನ್ನು ನನ್ನ ಮಗಳೆಂದು ತಿಳಿಯುತ್ತೇನೆ. ಅನಿಂದಿತೆ ಶಕುಂತಲೆಯೂ ಕೂಡ ನನ್ನನ್ನು ತನ್ನ ತಂದೆಯೆಂದು ಭಾವಿಸುತ್ತಾಳೆ.”

01066016a ಏತದಾಚಷ್ಟ ಪೃಷ್ಟಃ ಸನ್ಮಮ ಜನ್ಮ ಮಹರ್ಷಯೇ।
01066016c ಸುತಾಂ ಕಣ್ವಸ್ಯ ಮಾಮೇವಂ ವಿದ್ಧಿ ತ್ವಂ ಮನುಜಾಧಿಪ।।

ತನ್ನನ್ನು ಕೇಳಿದಾಗ ಆ ಮಹರ್ಷಿಯು ನನ್ನ ಜನ್ಮದ ಕುರಿತು ಈ ರೀತಿ ಹೇಳಿದನು. ಮನುಜಾಧಿಪ! ಆದುದರಿಂದ ನೀನು ನನ್ನನ್ನು ಕಣ್ವನ ಸುತೆಯೆಂದೇ ತಿಳಿ.

01066017a ಕಣ್ವಂ ಹಿ ಪಿತರಂ ಮನ್ಯೇ ಪಿತರಂ ಸ್ವಮಜಾನತೀ।
01066017c ಇತಿ ತೇ ಕಥಿತಂ ರಾಜನ್ಯಥಾವೃತ್ತಂ ಶ್ರುತಂ ಮಯಾ।।

ರಾಜನ್! ನನ್ನ ಪಿತನಾರೆಂದು ತಿಳಿಯದ ನಾನು ಕಣ್ವನನ್ನೇ ನನ್ನ ಪಿತನೆಂದು ಭಾವಿಸುತ್ತೇನೆ. ನಾನು ಕೇಳಿದ್ದುದನ್ನು ಯಥಾವತ್ತಾಗಿ ನಿನಗೆ ಹೇಳಿದ್ದೇನೆ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಶಕುಂತಲೋಪಾಖ್ಯಾನೇ ಷಟ್‌ಷಷ್ಟಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಶಕುಂತಲೋಪಾಖ್ಯಾನದಲ್ಲಿ ಅರವತ್ತಾರನೆಯ ಅಧ್ಯಾಯವು.