065 ಶಕುಂತಲೋಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಸಂಭವ ಪರ್ವ

ಅಧ್ಯಾಯ 65

ಸಾರ

ದುಃಷಂತನನ್ನು ಶಕುಂತಲೆಯು ಸ್ವಾಗತಿಸಿ ಸತ್ಕರಿಸಿದುದು (1-15). ಶಕುಂತಲೆಯು ದುಃಷಂತನಿಗೆ ತನ್ನ ಜನ್ಮವೃತ್ತಾಂತವನ್ನು ಪ್ರಾರಂಭಿಸುವುದು (16-20). ವಿಶ್ವಾಮಿತ್ರನ ತಪಸ್ಸಿಗೆ ಹೆದರಿ ಇಂದ್ರನು ಮೇನಕೆಯ ಸಹಾಯ ಕೋರುವುದು (21-42).

01065001 ವೈಶಂಪಾಯನ ಉವಾಚ।
01065001a ತತೋ ಗಚ್ಛನ್ಮಹಾಬಾಹುರೇಕೋಽಮಾತ್ಯಾನ್ವಿಸೃಜ್ಯ ತಾನ್।
01065001c ನಾಪಶ್ಯದಾಶ್ರಮೇ ತಸ್ಮಿಂಸ್ತಮೃಷಿಂ ಸಂಶಿತವ್ರತಂ।।

ವೈಶಂಪಾಯನನು ಹೇಳಿದನು: “ಆಶ್ರಮದಲ್ಲಿ ಸಂಶಿತವ್ರತ ಋಷಿಯನ್ನು ಕಾಣದೇ ಆ ಮಹಾಬಾಹುವು ತನ್ನ ಅಮಾತ್ಯರನ್ನೆಲ್ಲ ಹಿಂದೆಯೇ ಬಿಟ್ಟು ಒಬ್ಬನೇ ಹೋದನು.

01065002a ಸೋಽಪಶ್ಯಮಾನಸ್ತಮೃಷಿಂ ಶೂನ್ಯಂ ದೃಷ್ಟ್ವಾ ತಮಾಶ್ರಮಂ।
01065002c ಉವಾಚ ಕ ಇಹೇತ್ಯುಚ್ಚೈರ್ವನಂ ಸನ್ನಾದಯನ್ನಿವ।।

ಆ ಋಷಿಯ ಆಶ್ರಮದಲ್ಲಿ ಯಾರನ್ನೂ ಕಾಣದೇ “ಇಲ್ಲಿ ಯಾರಾದರೂ ಇದ್ದೀರಾ?” ಎಂದು ವನದಲ್ಲೆಲ್ಲಾ ಪ್ರತಿಧ್ವನಿಸುವಂತೆ ಜೋರಾಗಿ ಕೂಗಿ ಕೇಳಿದನು.

01065003a ಶ್ರುತ್ವಾಥ ತಸ್ಯ ತಂ ಶಬ್ಧಂ ಕನ್ಯಾ ಶ್ರೀರಿವ ರೂಪಿಣೀ।
01065003c ನಿಶ್ಚಕ್ರಾಮಾಶ್ರಮಾತ್ತಸ್ಮಾತ್ತಾಪಸೀವೇಷಧಾರಿಣೀ।।

ಅವನ ಆ ಮಾತುಗಳನ್ನು ಕೇಳಿ ರೂಪದಲ್ಲಿ ಶ್ರೀಯಂತಿರುವ ತಪಸ್ವಿ ವಸ್ತ್ರಧಾರಿಣಿ ಕನ್ಯೆಯೋರ್ವಳು ಆ ಆಶ್ರಮದಿಂದ ಹೊರಬಂದಳು.

01065004a ಸಾ ತಂ ದೃಷ್ಟ್ವೈವ ರಾಜಾನಂ ದುಃಷಂತಮಸಿತೇಕ್ಷಣಾ।
01065004c ಸ್ವಾಗತಂ ತ ಇತಿ ಕ್ಷಿಪ್ರಮುವಾಚ ಪ್ರತಿಪೂಜ್ಯ ಚ।।

ತನ್ನ ಕಪ್ಪು ಕಣ್ಣುಗಳಿಂದ ರಾಜ ದುಃಷಂತನನ್ನು ನೋಡಿದಾಕ್ಷಣವೇ ಸ್ವಾಗತವೆಂದು ಹೇಳಿ ಅವನನ್ನು ಪ್ರತಿಪೂಜಿಸಿದಳು.

01065005a ಆಸನೇನಾರ್ಚಯಿತ್ವಾ ಚ ಪಾದ್ಯೇನಾರ್ಘ್ಯೇಣ ಚೈವ ಹಿ।
01065005c ಪಪ್ರಚ್ಛಾನಾಮಯಂ ರಾಜನ್ಕುಶಲಂ ಚ ನರಾಧಿಪಂ।।

ಗೌರವಾನ್ವಿತ ಆಸನವನ್ನಿತ್ತು, ಪಾದಗಳಿಗೆ ಅರ್ಘ್ಯವನ್ನಿತ್ತು, ಆ ಅನಾಮಯ ನರಾಧಿಪ ರಾಜನ ಕುಶಲವನ್ನು ಕೇಳಿದಳು.

01065006a ಯಥಾವದರ್ಚಯಿತ್ವಾ ಸಾ ಪೃಷ್ಟ್ವಾ ಚಾನಾಮಯಂ ತದಾ।
01065006c ಉವಾಚ ಸ್ಮಯಮಾನೇವ ಕಿಂ ಕಾರ್ಯಂ ಕ್ರಿಯತಾಮಿತಿ।।

ಈ ರೀತಿ ಯಥಾವತ್ತಾಗಿ ಅರ್ಚಿಸಿ ಅವನು ಸುಖಾಸೀನನಾಗಿದ್ದುದನ್ನು ನೋಡಿ “ಯಾವ ಕಾರ್ಯವನ್ನು ಎಸಗಬೇಕು?” ಎಂದು ಕೇಳಿದಳು.

01065007a ತಾಮಬ್ರವೀತ್ತತೋ ರಾಜಾ ಕನ್ಯಾಂ ಮಧುರಭಾಷಿಣೀಂ।
01065007c ದೃಷ್ಟ್ವಾ ಸರ್ವಾನವದ್ಯಾಂಗೀಂ ಯಥಾವತ್ಪ್ರತಿಪೂಜಿತಃ।।

ಯಥಾವತ್ತಾಗಿ ಪ್ರತಿಪೂಜಿತ ರಾಜನು ಆ ಸರ್ವಾನವದ್ಯಾಂಗಿ ಮಧುರಭಾಷಿಣಿಯನ್ನು ನೋಡಿ ಹೇಳಿದನು:

01065008a ಆಗತೋಽಹಂ ಮಹಾಭಾಗಮೃಷಿಂ ಕಣ್ವಮುಪಾಸಿತುಂ।
01065008c ಕ್ವ ಗತೋ ಭಗವಾನ್ಭದ್ರೇ ತನ್ಮಮಾಚಕ್ಷ್ವ ಶೋಭನೇ।।

“ಮಹಾಭಾಗ ಕಣ್ವ ಋಷಿಯ ಉಪಾಸನೆಗೆಂದು ನಾನು ಬಂದಿದ್ದೇನೆ. ಭದ್ರೆ! ಶೋಭನೆ! ಭಗವಾನರು ಎಲ್ಲಿ ಹೋಗಿದ್ದಾರೆ ಎಂದು ಹೇಳು.”

01065009 ಶಕುಂತಲೋವಾಚ 01065009a ಗತಃ ಪಿತಾ ಮೇ ಭಗವಾನ್ಫಲಾನ್ಯಾಹರ್ತುಮಾಶ್ರಮಾತ್।
01065009c ಮುಹೂರ್ತಂ ಸಂಪ್ರತೀಕ್ಷಸ್ವ ದ್ರಕ್ಷ್ಯಸ್ಯೇನಮಿಹಾಗತಂ।।

ಶಕುಂತಲೆಯು ಹೇಳಿದಳು: “ನನ್ನ ತಂದೆ ಭಗವಾನನು ಫಲಗಳನ್ನು ತರಲು ಆಶ್ರಮದಿಂದ ಹೋಗಿದ್ದಾನೆ. ಸ್ವಲ್ಪ ಸಮಯ ಕಾಯಬೇಕು. ಅವನು ಹಿಂದಿರುಗಿದ ಕೂಡಲೇ ಅವನನ್ನು ಕಾಣಬಹುದು.””

01065010 ವೈಶಂಪಾಯನ ಉವಾಚ 01065010a ಅಪಶ್ಯಮಾನಸ್ತಮೃಷಿಂ ತಯಾ ಚೋಕ್ತಸ್ತಥಾ ನೃಪಃ।
01065010c ತಾಂ ಚ ದೃಷ್ಟ್ವಾ ವರಾರೋಹಾಂ ಶ್ರೀಮತೀಂ ಚಾರುಹಾಸಿನೀಂ।।

ವೈಶಂಪಾಯನನು ಹೇಳಿದನು: “ಈಗ ಋಷಿಯನ್ನು ನೋಡಲಿಕ್ಕಾಗುವುದಿಲ್ಲವೆಂದು ಹೇಳಿದ ಆ ಚಾರುಹಾಸಿನಿ, ಶ್ರೀಮತಿ ವರಾರೋಹೆಯನ್ನು ನೃಪನು ನೋಡಿದನು.

01065011a ವಿಭ್ರಾಜಮಾನಾಂ ವಪುಷಾ ತಪಸಾ ಚ ದಮೇನ ಚ।
01065011c ರೂಪಯೌವನಸಂಪನ್ನಾಮಿತ್ಯುವಾಚ ಮಹೀಪತಿಃ।।

ರೂಪ, ತಪಸ್ಸು ಮತ್ತು ದಮಗಳಿಂದ ವಿಭ್ರಾಜಿಸುತ್ತಿರುವ, ಆ ರೂಪಯೌವನ ಸಂಪನ್ನೆಯನ್ನು ಉದ್ದೇಶಿಸಿ ಮಹೀಪತಿಯು ಹೇಳಿದನು:

01065012a ಕಾಸಿ ಕಸ್ಯಾಸಿ ಸುಶ್ರೋಣಿ ಕಿಮರ್ಥಂ ಚಾಗತಾ ವನಂ।
01065012c ಏವಂರೂಪಗುಣೋಪೇತಾ ಕುತಸ್ತ್ವಮಸಿ ಶೋಭನೇ।।

“ಸುಶ್ರೋಣಿ! ನೀನು ಯಾರು ಮತ್ತು ಯಾರ ಮಗಳು? ಈ ವನಕ್ಕೆ ಯಾವ ಕಾರಣಕ್ಕಾಗಿ ಆಗಮಿಸಿರುವೆ? ಶೋಭನೆ! ಈ ರೀತಿ ರೂಪ ಗುಣಯುಕ್ತೆ ನೀನು ಎಲ್ಲಿಂದ ಬಂದಿರುವೆ?

01065013a ದರ್ಶನಾದೇವ ಹಿ ಶುಭೇ ತ್ವಯಾ ಮೇಽಪಹೃತಂ ಮನಃ।
01065013c ಇಚ್ಛಾಮಿ ತ್ವಾಮಹಂ ಜ್ಞಾತುಂ ತನ್ಮಮಾಚಕ್ಷ್ವ ಶೋಭನೇ।।

ಶುಭೇ! ಮೊದಲನೆಯ ನೋಟದಲ್ಲಿಯೇ ನೀನು ನನ್ನ ಮನವನ್ನು ಅಪಹರಿಸಿರುವೆ. ನಿನ್ನನ್ನು ತಿಳಿಯಲು ಬಯಸುತ್ತೇನೆ. ಶೋಭನೆ! ಎಲ್ಲವನ್ನೂ ಹೇಳು.”

01065014a ಏವಮುಕ್ತಾ ತದಾ ಕನ್ಯಾ ತೇನ ರಾಜ್ಞಾ ತದಾಶ್ರಮೇ।
01065014c ಉವಾಚ ಹಸತೀ ವಾಕ್ಯಮಿದಂ ಸುಮಧುರಾಕ್ಷರಂ।।

ಆ ಅಶ್ರಮದಲ್ಲಿ ಈ ರೀತಿ ರಾಜನು ಕೇಳಲಾಗಿ ಆ ಕನ್ಯೆಯು ಮುಗುಳ್ನಗುತ್ತಾ ಸುಮಧುರಾಕ್ಷರಗಳಲ್ಲಿ ಹೇಳಿದಳು:

01065015a ಕಣ್ವಷ್ಯಾಹಂ ಭಗವತೋ ದುಃಷಂತ ದುಹಿತಾ ಮತಾ।
01065015c ತಪಸ್ವಿನೋ ಧೃತಿಮತೋ ಧರ್ಮಜ್ಞಸ್ಯ ಯಶಸ್ವಿನಃ।।

“ದುಃಷಂತ! ನಾನು ತಪಸ್ವಿ, ಧೃತಿಮತಿ, ಧರ್ಮಜ್ಞ ಯಶಸ್ವಿ ಭಗವಾನ್ ಕಣ್ವನ ಮಗಳು.”

01065016 ದುಃಷಂತ ಉವಾಚ 01065016a ಊರ್ಧ್ವರೇತಾ ಮಹಾಭಾಗೋ ಭಗವಾಽಲ್ಲೋಕಪೂಜಿತಃ।
01065016c ಚಲೇದ್ಧಿ ವೃತ್ತಾದ್ಧರ್ಮೋಽಪಿ ನ ಚಲೇತ್ಸಂಶಿತವ್ರತಃ।।

ದುಃಷಂತನು ಹೇಳಿದನು: “ಲೋಕಪೂಜಿತ ಮಹಾಭಾಗ ಭಗವಾನರು ಬ್ರಹ್ಮಚಾರಿಗಳು. ಒಮ್ಮೆ ಧರ್ಮವೇ ದಾರಿತಪ್ಪಬಹುದು. ಆದರೆ ಸಂಶಿತವ್ರತರು ಎಂದೂ ತಪ್ಪುವುದಿಲ್ಲ.

01065017a ಕಥಂ ತ್ವಂ ತಸ್ಯ ದುಹಿತಾ ಸಂಭೂತಾ ವರವರ್ಣಿನೀ।
01065017c ಸಂಶಯೋ ಮೇ ಮಹಾನತ್ರ ತಂ ಮೇ ಚೇತ್ತುಮಿಹಾರ್ಹಸಿ।।

ವರವರ್ಣಿನೀ! ನೀನು ಹೇಗೆ ಅವರ ಮಗಳಾಗಲಿಕ್ಕೆ ಸಾಧ್ಯ? ನನ್ನ ಮನಸ್ಸಿನಲ್ಲಿರುವ ಈ ಸಂಶಯವನ್ನು ನೀನು ದೂರಮಾಡಬೇಕು.” 01065018 ಶಕುಂತಲೋವಾಚ

01065018a ಯಥಾಯಮಾಗಮೋ ಮಹ್ಯಂ ಯಥಾ ಚೇದಮಭೂತ್ಪುರಾ।
01065018c ಶೃಣು ರಾಜನ್ಯಥಾತತ್ತ್ವಂ ಯಥಾಸ್ಮಿ ದುಹಿತಾ ಮುನೇಃ।।

ಶಕುಂತಲೆಯು ಹೇಳಿದಳು: “ನಾನು ಮುನಿಯ ಮಗಳು ಹೇಗೆ ಆದನೆಂದು ನಡೆದುದೆಲ್ಲವನ್ನೂ ನಾನು ಕೇಳಿರುವ ಹಾಗೆ ಹೇಳುತ್ತೇನೆ. ರಾಜನ್! ಸವಿಸ್ತಾರವಾಗಿ ಕೇಳು.

01065019a ಋಷಿಃ ಕಶ್ಚಿದಿಹಾಗಮ್ಯ ಮಮ ಜನ್ಮಾಭ್ಯಚೋದಯತ್।
01065019c ತಸ್ಮೈ ಪ್ರೋವಾಚ ಭಗವಾನ್ಯಥಾ ತಚ್ಛೃಣು ಪಾರ್ಥಿವ।।

ಪಾರ್ಥಿವ! ಒಮ್ಮೆ ಋಷಿಯೋರ್ವನು ಬಂದು ನನ್ನ ಜನ್ಮದ ಕುರಿತು ಕೇಳಿದ್ದನು. ಆಗ ನನ್ನ ಕುರಿತು ಅವನಿಗೆ ಭಗವಾನ್ ಋಷಿಯು ಹೇಳಿದ್ದುದನ್ನು ಕೇಳು.

01065020a ತಪ್ಯಮಾನಃ ಕಿಲ ಪುರಾ ವಿಶ್ವಾಮಿತ್ರೋ ಮಹತ್ತಪಃ।
01065020c ಸುಭೃಶಂ ತಾಪಯಾಮಾಸ ಶಕ್ರಂ ಸುರಗಣೇಶ್ವರಂ।।

“ಹಿಂದೆ ವಿಶ್ವಾಮಿತ್ರನು ಮಹಾತಪಸ್ಸನ್ನು ತಪಿಸುತ್ತಿದ್ದನು. ಇದು ಸುರಗಣೇಶ್ವರ ಶಕ್ರನನ್ನು ಸುಟ್ಟು ಕಾಡತೊಡಗಿತು.

01065021a ತಪಸಾ ದೀಪ್ತವೀರ್ಯೋಽಯಂ ಸ್ಥಾನಾನ್ಮಾಂ ಚ್ಯಾವಯೇದಿತಿ।
01065021c ಭೀತಃ ಪುರಂದರಸ್ತಸ್ಮಾನ್ಮೇನಕಾಮಿದಮಬ್ರವೀತ್।।

“ಈ ದೀಪ್ತವೀರನು ತನ್ನ ತಪಸ್ಸಿನಿಂದ ನನ್ನನ್ನು ನನ್ನ ಸ್ಥಾನದಿಂದ ತೆಗೆದುಹಾಕುವನು!” ಎಂದು ಭೀತನಾದ ಪುರಂದರನು ಮೇನಕೆಯಲ್ಲಿ ಹೇಳಿದನು:

01065022a ಗುಣೈರ್ದಿವ್ಯೈರಪ್ಸರಸಾಂ ಮೇನಕೇ ತ್ವಂ ವಿಶಿಷ್ಯಸೇ।
01065022c ಶ್ರೇಯೋ ಮೇ ಕುರು ಕಲ್ಯಾಣಿ ಯತ್ತ್ವಾಂ ವಕ್ಷ್ಯಾಮಿ ತಚ್ಛೃಣು।।

“ಮೇನಕೇ! ಗುಣ ಮತ್ತು ದೇವತ್ವದಲ್ಲಿ ಎಲ್ಲ ಅಪ್ಸರೆಯರೆಯರಲ್ಲಿ ನೀನು ವಿಶೇಷವಾಗಿರುವೆ. ಕಲ್ಯಾಣಿ! ನನಗೊಂದು ಒಳ್ಳೆಯ ಕಾರ್ಯವನ್ನು ಮಾಡಿಕೊಡು. ನಾನು ಹೇಳುವುದನ್ನು ಕೇಳು.

01065023a ಅಸಾವಾದಿತ್ಯಸಂಕಾಶೋ ವಿಶ್ವಾಮಿತ್ರೋ ಮಹಾತಪಾಃ।
01065023c ತಪ್ಯಮಾನಸ್ತಪೋ ಘೋರಂ ಮಮ ಕಂಪಯತೇ ಮನಃ।।

ಆದಿತ್ಯಸಂಕಾಶ ಮಹಾತಪಸ್ವಿ ವಿಶ್ವಾಮಿತ್ರನು ತಪಸ್ಸನ್ನು ಮಾಡುತ್ತಿದ್ದಾನೆ. ಆ ಘೋರ ತಪಸ್ಸಿನಿಂದ ನನ್ನ ಮನಸ್ಸು ತತ್ತರಿಸಿದೆ.

01065024a ಮೇನಕೇ ತವ ಭಾರೋಽಯಂ ವಿಶ್ವಾಮಿತ್ರಃ ಸುಮಧ್ಯಮೇ।
01065024c ಸಂಶಿತಾತ್ಮಾ ಸುದುರ್ಧರ್ಷ ಉಗ್ರೇ ತಪಸಿ ವರ್ತತೇ।।
01065025a ಸ ಮಾಂ ನ ಚ್ಯಾವಯೇತ್ಸ್ಥಾನಾತ್ತಂ ವೈ ಗತ್ವಾ ಪ್ರಲೋಭಯ।
01065025c ಚರ ತಸ್ಯ ತಪೋವಿಘ್ನಂ ಕುರು ಮೇ ಪ್ರಿಯಮುತ್ತಮಂ।।

ಸುಮದ್ಯಮೇ! ಮೇನಕೇ! ನನ್ನ ಈ ಪದದಿಂದ ನನ್ನನ್ನು ತೆಗೆದುಹಾಕಬಲ್ಲ ಉಗ್ರ ತಪಸ್ಸಿನಲ್ಲಿ ನಿರತನಾದ ಸಂಶಿತಾತ್ಮ ವಿಶ್ವಾಮಿತ್ರನಲ್ಲಿಗೆ ಹೋಗಿ ಅವನನ್ನು ಆಕರ್ಷಿಸಿ ಅವನ ತಪೋವಿಘ್ನವನ್ನು ಮಾಡುವುದು ನಿನ್ನ ಹೊಣೆಗಾರಿಕೆ. ಇದೇ ನನಗೆ ಉತ್ತಮ ಸಂತೋಷವನ್ನು ಕೊಡುವಂಥಹುದು.

01065026a ರೂಪಯೌವನಮಾಧುರ್ಯಚೇಷ್ಟಿತಸ್ಮಿತಭಾಷಿತೈಃ।
01065026c ಲೋಭಯಿತ್ವಾ ವರಾರೋಹೇ ತಪಸಃ ಸನ್ನಿವರ್ತಯ।।

ವರಾರೋಹೇ! ರೂಪ, ಯೌವನ, ಮಾಧುರ್ಯತೆ, ಚೇಷ್ಟೆ, ಮುಗುಳ್ನಗೆ ಮತ್ತು ಮಾತುಗಳಿಂದ ಅವನಲ್ಲಿ ಲೋಭವನ್ನು ಹುಟ್ಟಿಸಿ ಅವನನ್ನು ತಪಸ್ಸಿನಿಂದ ವಂಚಿಸು.”

01065027 ಮೇನಕೋವಾಚ 01065027a ಮಹಾತೇಜಾಃ ಸ ಭಗವಾನ್ಸದೈವ ಚ ಮಹಾತಪಾಃ।
01065027c ಕೋಪನಶ್ಚ ತಥಾ ಹ್ಯೇನಂ ಜಾನಾತಿ ಭಗವಾನಪಿ।।

ಮೇನಕೆಯು ಹೇಳಿದಳು: “ಭಗವನ್! ಆ ಮಹಾತಪಸ್ವಿಯು ಮಹಾತೇಜಸ್ವಿ, ಸದಾ ಕುಪಿತನಾಗಿರುತ್ತಾನೆ. ಇದನ್ನು ನೀನು ಕೂಡ ತಿಳಿದಿದ್ದೀಯೆ.

01065028a ತೇಜಸಸ್ತಪಸಶ್ಚೈವ ಕೋಪಸ್ಯ ಚ ಮಹಾತ್ಮನಃ।
01065028c ತ್ವಮಪ್ಯುದ್ವಿಜಸೇ ಯಸ್ಯ ನೋದ್ವಿಜೇಯಮಹಂ ಕಥಂ।।

ಆ ಮಹಾತ್ಮನ ತೇಜಸ್ಸು, ತಪಸ್ಸು ಮತ್ತು ಕೋಪವು ನಿನ್ನನ್ನೂ ಕೂಡ ಉದ್ವಿಗ್ನನನ್ನಾಗಿ ಮಾಡಿದೆ. ನಾನಾದರೂ ಹೇಗೆ ಅವನಿಗೆ ಭಯಪಡದಿರಲಿ?

01065029a ಮಹಾಭಾಗಂ ವಸಿಷ್ಠಂ ಯಃ ಪುತ್ರೈರಿಷ್ಟೈರ್ವ್ಯಯೋಜಯತ್।
01065029c ಕ್ಷತ್ರೇ ಜಾತಶ್ಚ ಯಃ ಪೂರ್ವಮಭವದ್ಬ್ರಾಹ್ಮಣೋ ಬಲಾತ್।।

ಮಹಾಭಾಗ ವಸಿಷ್ಠನೂ ಕೂಡ ಇವನಿಂದ ತನ್ನ ಪುತ್ರರನ್ನು ಅಕಾಲದಲ್ಲಿ ಕಳೆದುಕೊಳ್ಳಬೇಕಾಯಿತು. ಕ್ಷತ್ರಿಯನಾಗಿ ಹುಟ್ಟಿದರೂ ತನ್ನ ಬಲದಿಂದ ಬ್ರಾಹ್ಮಣನಾಗಿದ್ದಾನೆ.

01065030a ಶೌಚಾರ್ಥಂ ಯೋ ನದೀಂ ಚಕ್ರೇ ದುರ್ಗಮಾಂ ಬಹುಭಿರ್ಜಲೈಃ।
01065030c ಯಾಂ ತಾಂ ಪುಣ್ಯತಮಾಂ ಲೋಕೇ ಕೌಶಿಕೀತಿ ವಿದುರ್ಜನಾಃ।।

ಅವನು ಶೌಚಾರ್ಥವಾಗಿ ತುಂಬಾ ನೀರಿರುವ ಮತ್ತು ಆಳವಾದ ಒಂದು ನದಿಯನ್ನೇ ಸೃಷ್ಟಿಸಿದನು. ಆ ಪುಣ್ಯ ನದಿಯು ಈಗಲೂ ಲೋಕದಲ್ಲಿ ಕೌಶಿಕಿಯೆಂದು ಕರೆಯಲ್ಪಡುತ್ತಿದೆ.

01065031a ಬಭಾರ ಯತ್ರಾಸ್ಯ ಪುರಾ ಕಾಲೇ ದುರ್ಗೇ ಮಹಾತ್ಮನಃ।
01065031c ದಾರಾನ್ಮತಂಗೋ ಧರ್ಮಾತ್ಮಾ ರಾಜರ್ಷಿರ್ವ್ಯಾಧತಾಂ ಗತಃ।।

ಹಿಂದಿನ ಕಾಲದಲ್ಲಿ ಆ ದುರ್ಗದಲ್ಲಿ ಮಹಾತ್ಮ ಧರ್ಮಾತ್ಮ ರಾಜರ್ಷಿ ಮತಂಗನು ತನ್ನ ಪತ್ನಿಯೊಡನೆ ವ್ಯಾಧನಾಗಿ ವಾಸಿಸುತ್ತಿದ್ದನು.

01065032a ಅತೀತಕಾಲೇ ದುರ್ಭಿಕ್ಷೇ ಯತ್ರೈತ್ಯ ಪುನರಾಶ್ರಮಂ।
01065032c ಮುನಿಃ ಪಾರೇತಿ ನದ್ಯಾ ವೈ ನಾಮ ಚಕ್ರೇ ತದಾ ಪ್ರಭುಃ।।

ದುರ್ಭಿಕ್ಷವು ಮುಗಿದ ನಂತರ ಪುನಃ ಆಶ್ರಮಕ್ಕೆ ಮರಳಿ ಬಂದು ಆ ಮುನಿ ಪ್ರಭುವು ಆ ನದಿಗೆ ಪಾರ ಎಂಬ ಹೆಸರನ್ನಿತ್ತನು.

01065033a ಮತಂಗಂ ಯಾಜಯಾಂ ಚಕ್ರೇ ಯತ್ರ ಪ್ರೀತಮನಾಃ ಸ್ವಯಂ।
01065033c ತ್ವಂ ಚ ಸೋಮಂ ಭಯಾದ್ಯಸ್ಯ ಗತಃ ಪಾತುಂ ಶುರೇಶ್ವರ।।

ಸಂತೋಷಗೊಂಡ ಅವನು ಮತಂಗನ ಯಜ್ಞವನ್ನು ನೆರವೇರಿಸಿಕೊಟ್ಟನು. ಸುರೇಶ್ವರ! ಭಯಪಟ್ಟ ನೀನೂ ಕೂಡ ಅಲ್ಲಿಗೆ ಹೋಗಿ ಸೋಮವನ್ನು ಸ್ವೀಕರಿಸಿದೆ.

01065034a ಅತಿ ನಕ್ಷತ್ರವಂಶಾಂಶ್ಚ ಕ್ರುದ್ಧೋ ನಕ್ಷತ್ರಸಂಪದಾ।
01065034c ಪ್ರತಿ ಶ್ರವಣಪೂರ್ವಾಣಿ ನಕ್ಷತ್ರಾಣಿ ಸಸರ್ಜ ಯಃ।।

ಕೃದ್ಧನಾದ ಇವನು ಶ್ರವಣ ಮೊದಲಾದ ನಕ್ಷತ್ರಗಳನ್ನು ಸೃಷ್ಟಿಸಿ ಬೇರೆಯೇ ಒಂದು ನಕ್ಷತ್ರ ವಂಶ, ನಕ್ಷತ್ರಮಂಡಲವನ್ನು ರಚಿಸಿದನು.

01065035a ಏತಾನಿ ಯಸ್ಯ ಕರ್ಮಾಣಿ ತಸ್ಯಾಹಂ ಭೃಶಮುದ್ವಿಜೇ।
01065035c ಯಥಾ ಮಾಂ ನ ದಹೇತ್ಕ್ರುದ್ಧಸ್ತಥಾಜ್ಞಾಪಯ ಮಾಂ ವಿಭೋ।।

ಇಂಥಹ ಕಾರ್ಯಗಳನ್ನೆಲ್ಲ ಎಸಗಿದ ಅವನ ಬಳಿ ಹೋಗಲು ನನಗೆ ಭಯ, ಉದ್ವಿಗ್ನತೆ ಉಂಟಾಗಿದೆ. ಅವನ ಕೋಪದಿಂದ ಸುಟ್ಟುಹೋಗುವುದನ್ನು ತಡೆಯಬಲ್ಲಂತಹ ಏನಾದರೂ ಉಪಾಯವನ್ನು ಹೇಳು ಪ್ರಭು!

01065036a ತೇಜಸಾ ನಿರ್ದಹೇಲ್ಲೋಕಾನ್ಕಂಪಯೇದ್ಧರಣೀಂ ಪದಾ।
01065036c ಸಂಕ್ಷಿಪೇಚ್ಚ ಮಹಾಮೇರುಂ ತೂರ್ಣಮಾವರ್ತಯೇತ್ತಥಾ।।

ಅವನು ತನ್ನ ತೇಜಸ್ಸಿನಿಂದ ಲೋಕಗಳನ್ನು ಸುಡಬಲ್ಲ. ತನ್ನ ಪಾದದಿಂದ ಧರಣಿಯನ್ನು ನಡುಗಿಸಬಲ್ಲ ಮತ್ತು ಮಹಾಮೇರುವನ್ನು ಕಿತ್ತು ಬಹಳಷ್ಟು ದೂರದವರೆಗೆ ಎಸೆಯಬಲ್ಲ.

01065037a ತಾದೃಶಂ ತಪಸಾ ಯುಕ್ತಂ ಪ್ರದೀಪ್ತಮಿವ ಪಾವಕಂ।
01065037c ಕಥಮಸ್ಮದ್ವಿಧಾ ಬಾಲಾ ಜಿತೇಂದ್ರಿಯಮಭಿಸ್ಪೃಶೇತ್।।

ಇಂಥಹ ತಪಸ್ಸಿನಿಂದ ಪಾವಕನಂತೆ ಉರಿಯುತ್ತಿರುವ ಆ ಜಿತೇಂದ್ರಿಯನನ್ನು ನನ್ನಂಥಹ ಬಾಲಕಿಯು ಹೇಗೆ ತಾನೆ ಮುಟ್ಟಿಯಾಳು?

01065038a ಹುತಾಶನಮುಖಂ ದೀಪ್ತಂ ಸೂರ್ಯಚಂದ್ರಾಕ್ಷಿತಾರಕಂ।
01065038c ಕಾಲಜಿಹ್ವಂ ಸುರಶ್ರೇಷ್ಠ ಕಥಮಸ್ಮದ್ವಿಧಾ ಸ್ಪೃಶೇತ್।।

ಅವನ ಬಾಯಿಯು ಹುತಾಶನನಂತೆ ಉರಿಯುತ್ತದೆ, ಅವನ ಕಣ್ಣುಗಳು ಸೂರ್ಯ-ಚಂದ್ರರಂತೆ, ಮತ್ತು ಅವನ ನಾಲಗೆಯು ಯಮನಂತಿವೆ. ಸುರಶ್ರೇಷ್ಠ! ಅಂಥವನನ್ನು ನಾನು ಹೇಗೆ ಸ್ಪರ್ಷಿಸಲಿ?

01065039a ಯಮಶ್ಚ ಸೋಮಶ್ಚ ಮಹರ್ಷಯಶ್ಚ ಸಾಧ್ಯಾ ವಿಶ್ವೇ ವಾಲಖಿಲ್ಯಾಶ್ಚ ಸರ್ವೇ। 01065039c ಏತೇಽಪಿ ಯಸ್ಯೋದ್ವಿಜಂತೇ ಪ್ರಭಾವಾತ್ ಕಸ್ಮಾತ್ತಸ್ಮಾನ್ಮಾದೃಶೀ ನೋದ್ವಿಜೇತ।।

ಯಮನೂ, ಸೋಮನೂ, ಮಹರ್ಷಿಗಳೂ, ಸಾಧ್ಯರೂ, ವಿಶ್ವೇದೇವತೆಗಳೂ, ವಾಲಖಿಲ್ಯರೂ ಸರ್ವರೂ ಅವನ ಪ್ರಭಾವದ ಕುರಿತು ಜಾಗರೂಕರಾಗಿರುತ್ತಾರೆ. ನನ್ನಂತಹ ಹೆಣ್ಣು ಹೇಗೆತಾನೆ ಅವನಿಗೆ ಹೆದರುವುದಿಲ್ಲ?

01065040a ತ್ವಯೈವಮುಕ್ತಾ ಚ ಕಥಂ ಸಮೀಪಂ ಋಷೇರ್ನ ಗಚ್ಛೇಯಮಹಂ ಸುರೇಂದ್ರ। 01065040c ರಕ್ಷಾಂ ತು ಮೇ ಚಿಂತಯ ದೇವರಾಜ ಯಥಾ ತ್ವದರ್ಥಂ ರಕ್ಷಿತಾಹಂ ಚರೇಯಂ।।

ಸುರೇಂದ್ರ! ನೀನು ಹೇಳಿದ ಬಳಿಕ ಅವನ ಬಳಿ ಹೇಗೆ ನಾನು ಹೋಗದೇ ಇರಲಿ? ಆದರೂ ನನ್ನನು ರಕ್ಷಿಸುವ ಕುರಿತು ಏನಾದರೂ ಯೋಚಿಸು. ದೇವರಾಜ! ನಿನಗೋಸ್ಕರ ನಾನು ಹೇಗೆ ಸುರಕ್ಷಿತವಾಗಿ ಅವನ ಬಳಿ ಹೋಗಲಿ?

01065041a ಕಾಮಂ ತು ಮೇ ಮಾರುತಸ್ತತ್ರ ವಾಸಃ ಪ್ರಕ್ರೀಡಿತಾಯಾ ವಿವೃಣೋತು ದೇವ। 01065041c ಭವೇಚ್ಚ ಮೇ ಮನ್ಮಥಸ್ತತ್ರ ಕಾರ್ಯೇ ಸಹಾಯಭೂತಸ್ತವ ದೇವಪ್ರಸಾದಾತ್।।

ದೇವ! ನಾನು ಆಡುತ್ತಿರುವಾಗ ಮಾರುತನೂ ಅಲ್ಲಿ ಇದ್ದು ನನ್ನ ವಸ್ತ್ರವನ್ನು ಹಾರಿಸಲಿ. ಮನ್ಮಥನೂ ಅಲ್ಲಿದ್ದು ನನ್ನ ಈ ಕಾರ್ಯದಲ್ಲಿ ನಿನ್ನ ದೇವಪ್ರಸಾದವೆಂದು ಸಹಾಯವನ್ನು ನೀಡಲಿ.

01065042a ವನಾಚ್ಚ ವಾಯುಃ ಸುರಭಿಃ ಪ್ರವಾಯೇತ್ತಸ್ಮಿನ್ಕಾಲೇ ತಮೃಷಿಂ ಲೋಭಯಂತ್ಯಾಃ। 01065042c ತಥೇತ್ಯುಕ್ತ್ವಾ ವಿಹಿತೇ ಚೈವ ತಸ್ಮಿಂನ್ ತತೋ ಯಯೌ ಸಾಶ್ರಮಂ ಕೌಶಿಕಸ್ಯ।।

ನಾನು ಋಷಿಯಲ್ಲಿ ಆಸೆಯನ್ನು ಹುಟ್ಟಿಸುವಾಗ ವಾಯುವು ವನದಿಂದ ಸುರಭಿ ಸುಗಂಧವನ್ನು ಹೊತ್ತು ತರಲಿ.” ಇವೆಲ್ಲವುಗಳ ಏರ್ಪಾಡಾಯಿತೆಂದು ಖಚಿತಪಡಿಸಿಕೊಂಡು ಅವಳು ಕೌಶಿಕನ ಆಶ್ರಮಕ್ಕೆ ಬಂದಳು.””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಶಕುಂತಲೋಪಾಖ್ಯಾನೇ ಪಂಚಷಷ್ಟಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಶಕುಂತಲೋಪಾಖ್ಯಾನದಲ್ಲಿ ಅರವತ್ತೈದನೆಯ ಅಧ್ಯಾಯವು.