064 ಶಕುಂತಲೋಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಸಂಭವ ಪರ್ವ

ಅಧ್ಯಾಯ 64

ಸಾರ

ದುಃಷಂತನು ಕಣ್ವಾಶ್ರಮವನ್ನು ಕಂಡು ಪ್ರವೇಶಿಸಿದುದು (1-25). ಆಶ್ರಮ ವರ್ಣನೆ (26-42).

01064001 ವೈಶಂಪಾಯನ ಉವಾಚ।
01064001a ತತೋ ಮೃಗಸಹಸ್ರಾಣಿ ಹತ್ವಾ ವಿಪುಲವಾಹನಃ।
01064001c ರಾಜಾ ಮೃಗಪ್ರಸಂಗೇನ ವನಮನ್ಯದ್ವಿವೇಶ ಹ।।

ವೈಶಂಪಾಯನನು ಹೇಳಿದನು: “ಸಹಸ್ರಾರು ಮೃಗಗಳನ್ನು ಬೇಟೆಯಾಡಿದ ಆ ವಿಪುಲವಾಹನ ರಾಜನು ಬೇಟೆಯಾಡುತ್ತಾ ಇನ್ನೊಂದು ವನವನ್ನು ಪ್ರವೇಶಿಸಿದನು.

01064002a ಏಕ ಏವೋತ್ತಮಬಲಃ ಕ್ಷುತ್ಪಿಪಾಸಾಸಮನ್ವಿತಃ।
01064002c ಸ ವನಸ್ಯಾನ್ತಮಾಸಾದ್ಯ ಮಹದೀರಿಣಮಾಸದತ್।।

ಹಸಿವು ಬಾಯಾರಿಕೆಗಳಿಂದ ಬಳಲಿದ ಆ ಉತ್ತಮ ಬಲಶಾಲಿಯು ಒಬ್ಬನೇ ವನದ ಅಂಚಿನಲ್ಲಿದ್ದ ಒಂದು ಮೈದಾನ ಪ್ರದೇಶವನ್ನು ಸೇರಿದನು.

01064003a ತಚ್ಚಾಪ್ಯತೀತ್ಯ ನೃಪತಿರುತ್ತಮಾಶ್ರಮಸಮ್ಯುತಂ।
01064003c ಮನಃಪ್ರಹ್ಲಾದಜನನಂ ದೃಷ್ಟಿಕಾಂತಮತೀವ ಚ।
01064003e ಶೀತಮಾರುತಸಂಯುಕ್ತಂ ಜಗಾಮಾನ್ಯನ್ಮಹದ್ವನಂ।।

ಅದನ್ನು ದಾಟಿದ ನೃಪತಿಯು ಉತ್ತಮ ಆಶ್ರಮಗಳಿಂದ ಕೂಡಿದ, ಅತೀವ ಸುಂದರವಾಗಿದ್ದು ಮನಸ್ಸಿಗೆ ಸಂತೋಷವನ್ನುಂಟುಮಾಡುವ, ತಂಗಾಳಿ ಬೀಸುತ್ತಿದ್ದ ಇನ್ನೊಂದು ಮಹಾ ವನವನ್ನು ಪ್ರವೇಶಿಸಿದನು.

01064004a ಪುಷ್ಪಿತೈಃ ಪಾದಪೈಃ ಕೀರ್ಣಮತೀವ ಸುಖಶಾದ್ವಲಂ।
01064004c ವಿಪುಲಂ ಮಧುರಾರಾವೈರ್ನಾದಿತಂ ವಿಹಗೈಸ್ತಥಾ।।

ಹೂತುಂಬಿದ ಮರಗಳು ಮತ್ತು ವಿಶಾಲ ಸಮೃದ್ಧ ಹುಲ್ಲಿನ ಹಾಸಿಗೆಯನ್ನು ಹೊಂದಿದ್ದ ಅಲ್ಲಿ ಪಕ್ಷಿಗಳ ಮಧುರ ಕಲರವಗಳು ಪ್ರತಿಧ್ವನಿಸುತ್ತಿದ್ದವು.

01064005a ಪ್ರವೃದ್ಧವಿಟಪೈರ್ವೃಕ್ಷೈಃ ಸುಖಚ್ಚಾಯೈಃ ಸಮಾವೃತಂ।
01064005c ಷಟ್ಪದಾಘೂರ್ಣಿತಲತಂ ಲಕ್ಷ್ಮ್ಯಾ ಪರಮಯಾ ಯುತಂ।।

ಅಲ್ಲಿ ಸುಖಛಾಯೆಯನ್ನು ನೀಡುವ ವಿಶಾಲ ರೆಂಬೆಗಳನ್ನು ಹೊಂದಿ ಪ್ರವೃದ್ಧವಾಗಿ ಬೆಳೆದಿದ್ದ ವೃಕ್ಷಗಳಿದ್ದವು. ಸುಂದರ ಪೊದೆಗಳು ಮತ್ತು ಹೂವಿನ ಬಳ್ಳಿಗಳನ್ನು ದುಂಬಿಗಳು ಸುತ್ತುವರೆದಿದ್ದವು.

01064006a ನಾಪುಷ್ಪಃ ಪಾದಪಃ ಕಶ್ಚಿನ್ನಾಫಲೋ ನಾಪಿ ಕಂಟಕೀ।
01064006c ಷಟ್ಪದೈರ್ವಾಪ್ಯನಾಕೀರ್ಣಸ್ತಸ್ಮಿನ್ವೈ ಕಾನನೇಽಭವತ್।।

ಆ ಕಾನನದಲ್ಲಿ ಹೂ-ಫಲಗಳಿಲ್ಲದ ಮರವೇ ಇರಲಿಲ್ಲ, ಮುಳ್ಳುಗಳಿಂದ ಕೂಡಿದ ಪೊದೆಯೇ ಇರಲಿಲ್ಲ, ಮತ್ತು ದುಂಬಿಗಳು ಮುತ್ತಿಕೊಂಡಿರದ ಯಾವ ಗಿಡವೂ ಇರಲಿಲ್ಲ.

01064007a ವಿಹಗೈರ್ನಾದಿತಂ ಪುಷ್ಪೈರಲಂಕೃತಮತೀವ ಚ।
01064007c ಸರ್ವರ್ತುಕುಸುಮೈರ್ವೃಕ್ಷೈರತೀವ ಸುಖಶಾದ್ವಲಂ।
01064007e ಮನೋರಮಂ ಮಹೇಷ್ವಾಸೋ ವಿವೇಶ ವನಮುತ್ತಮಂ।।

ಪಕ್ಷಿಗಳ ನಾದದಿಂದ ತುಂಬಿದ್ದ, ಬಹಳಷ್ಟು ಪುಷ್ಪಗಳಿಂದ ಅಲಂಕೃತವಾಗಿದ್ದ, ಸರ್ವ‌ಋತುಗಳಲ್ಲಿ ಕಂಡುಬರುವ ಸುಮವೃಕ್ಷಗಳ ಸುಖ ನೆರಳಿನಿಂದ ಮನೋರಮ ಆ ಉತ್ತಮ ವನವನ್ನು ಮಹೇಷ್ವಾಸನು ಪ್ರವೇಶಿಸಿದನು.

01064008a ಮಾರುತಾಗಲಿತಾಸ್ತತ್ರ ದ್ರುಮಾಃ ಕುಸುಮಶಾಲಿನಃ।
01064008c ಪುಷ್ಪವೃಷ್ಟಿಂ ವಿಚಿತ್ರಾಂ ಸ್ಮ ವ್ಯಸೃಜಂಸ್ತೇ ಪುನಃ ಪುನಃ।।

ಗಾಳಿಯಿಂದ ಅಲುಗಾಡುತ್ತಿದ್ದ ಕುಸುಮದ್ರುಮಗಳಿಂದ ಪುನಃ ಪುನಃ ಪುಷ್ಪವೃಷ್ಟಿಯಾಗುತ್ತಿತ್ತು.

01064009a ದಿವಸ್ಪೃಶೋಽಥ ಸಂಘುಷ್ಟಾಃ ಪಕ್ಷಿಭಿರ್ಮಧುರಸ್ವರೈಃ।
01064009c ವಿರೇಜುಃ ಪಾದಪಾಸ್ತತ್ರ ವಿಚಿತ್ರಕುಸುಮಾಂಬರಾಃ।।
01064010a ತೇಷಾಂ ತತ್ರ ಪ್ರವಾಲೇಷು ಪುಷ್ಪಭಾರಾವನಾಮಿಷು।
01064010c ರುವಂತಿ ರಾವಂ ವಿಹಗಾಃ ಷಟ್ಪದೈಃ ಸಹಿತಾ ಮೃದು।।

ಸ್ವರ್ಗವನ್ನು ಮುಟ್ಟುತ್ತಿವೆಯೋ ಎನ್ನುವಷ್ಟು ಎತ್ತರ ಬೆಳೆದಿದ್ದ ಪಕ್ಷಿಗಳ ಮಧುರ ಸ್ವರಗಳಿಂದ ವಿರಾಜಿಸುತ್ತಿದ್ದ ಅಲ್ಲಿಯ ಮರಗಳ ರೆಂಬೆಗಳು ವಿಚಿತ್ರ ಕುಸುಮಗಳನ್ನು ಹೊತ್ತು ಆ ಪುಷ್ಪಗಳ ಭಾರದಿಂದಲೋ ಎಂಬಂತೆ ಕೆಳಗೆ ಚಾಚಿ ಸುತ್ತುವರೆದ ಪಕ್ಷಿ-ದುಂಬಿಗಳ ನಾದಸಮೂಹದಲ್ಲಿ ಮುದಿತವಾಗಿದ್ದವು.

01064011a ತತ್ರ ಪ್ರದೇಶಾಂಶ್ಚ ಬಹೂನ್ಕುಸುಮೋತ್ಕರಮಂಡಿತಾನ್।
01064011c ಲತಾಗೃಹಪರಿಕ್ಷಿಪ್ತಾನ್ ಮನಸಃ ಪ್ರೀತಿವರ್ಧನಾನ್।
01064011e ಸಂಪಶ್ಯನ್ಸ ಮಹಾತೇಜಾ ಬಭೂವ ಮುದಿತಸ್ತದಾ।।

ಆ ಪ್ರದೇಶದಲ್ಲಿ ಹೂವಿನ ಗೊಂಚಲುಗಳನ್ನು ಹೊಂದಿದ್ದ ಹಲವಾರು ಬಳ್ಳಿಗಳಿದ್ದವು. ಮನಸ್ಸಿನ ಸಂತೋಷವನ್ನು ಹೆಚ್ಚಿಸುವ ಲತಾಗೃಹಗಳಿದ್ದವು. ಇದನ್ನೆಲ್ಲಾ ನೋಡಿದ ಮಹಾತೇಜಸ್ವಿಯು ಆನಂದಿತನಾದನು.

01064012a ಪರಸ್ಪರಾಶ್ಲಿಷ್ಟಶಾಖೈಃ ಪಾದಪೈಃ ಕುಸುಮಾಚಿತೈಃ।
01064012c ಅಶೋಭತ ವನಂ ತತ್ತೈರ್ಮಹೇಂದ್ರಧ್ವಜಸನ್ನಿಭೈಃ।।

ತಮ್ಮ ತಮ್ಮ ಕುಸುಮಾಚ್ಛಾದಿತ ರೆಂಬೆಗಳಿಂದ ಪರಸ್ಪರ ಅಪ್ಪಿಕೊಂಡಂತಿದ್ದ ವೃಕ್ಷಗಳಿಂದ ಕೂಡಿದ ಆ ವನವು ಅನೇಕ ಸುಂದರ ಕಾಮನಬಿಲ್ಲುಗಳಂತೆ ಶೋಭಿಸುತ್ತಿತ್ತು.

01064013a ಸುಖಶೀತಃ ಸುಗಂಧೀ ಚ ಪುಷ್ಪರೇಣುವಹೋಽನಿಲಃ।
01064013c ಪರಿಕ್ರಾಮನ್ವನೇ ವೃಕ್ಷಾನುಪೈತೀವ ರಿರಂಸಯಾ।।

ಹೂವುಗಳ ಪರಾಗವನ್ನು ಹೊತ್ತ ಸುಗಂಧಿತ ಸುಖಶೀತಲ ಗಾಳಿಯು ಅಲ್ಲಿಯ ಮರಗಳೊಂದಿಗೆ ಆಟವಾಡುತ್ತಿದೆಯೋ ಎನ್ನುವಂತೆ ವನದ ಸುತ್ತಲೂ ಬೀಸುತ್ತಿತ್ತು.

01064014a ಏವಂಗುಣಸಮಾಯುಕ್ತಂ ದದರ್ಶ ಸ ವನಂ ನೃಪಃ।
01064014c ನದೀಕಚ್ಚೋದ್ಭವಂ ಕಾಂತಮುಚ್ಚ್ರಿತಧ್ವಜಸನ್ನಿಭಂ।।

ಈ ರೀತಿ ಗುಣಸಮಾಯುಕ್ತ ಆ ವನವು ನದಿಯೊಂದರ ತೀರದಲ್ಲಿ ಇಂದ್ರನ ಗೌರವಾರ್ಥ ನೆಟ್ಟಿದ್ದ ಧ್ವಜದಂತಿದೆ ಎನ್ನುವುದನ್ನು ನೃಪನು ಗಮನಿಸಿದನು.

01064015a ಪ್ರೇಕ್ಷಮಾಣೋ ವನಂ ತತ್ತು ಸುಪ್ರಹೃಷ್ಟವಿಹಂಗಮಂ।
01064015c ಆಶ್ರಮಪ್ರವರಂ ರಮ್ಯಂ ದದರ್ಶ ಚ ಮನೋರಮಂ।।

ಆ ವನದಲ್ಲಿ ಸದಾ ಸಂತಸದಿಂದ ಚಿಲಿಪಿಲಿಗುಡುತ್ತಿದ್ದ ಪಕ್ಷಿಗಳನ್ನು ಮತ್ತು ಮನೋರಮ ರಮ್ಯ ಆಶ್ರಮಸಂಕುಲವನ್ನು ಕಂಡನು.

01064016a ನಾನಾವೃಕ್ಷಸಮಾಕೀರ್ಣಂ ಸಂಪ್ರಜ್ವಲಿತಪಾವಕಂ।
01064016c ಯತಿಭಿರ್ವಾಲಖಿಲ್ಯೈಶ್ಚ ವೃತಂ ಮುನಿಗಣಾನ್ವಿತಂ।।

ಅದು ನಾನಾ ವೃಕ್ಷಗಳಿಂದ ಸುತ್ತುವರೆದಿತ್ತು ಮತ್ತು ಮಧ್ಯದಲ್ಲಿ ಪುಣ್ಯ ಪಾವಕವು ಉರಿಯುತ್ತಿತ್ತು. ವಾಲಖಿಲ್ಯಧಾರಿ ಯತಿ ಮತ್ತು ಮುನಿಗಣಗಳಿಂದ ಕೂಡಿತ್ತು.

01064017a ಅಗ್ನ್ಯಾಗಾರೈಶ್ಚ ಬಹುಭಿಃ ಪುಷ್ಪಸಂಸ್ತರಸಂಸ್ತೃತಂ।
01064017c ಮಹಾಕಚ್ಚೈರ್ಬೃಹದ್ಭಿಶ್ಚ ವಿಭ್ರಾಜಿತಮತೀವ ಚ।।

ಬಹಳ ಅಗ್ನ್ಯಾಗಾರಗಳಿದ್ದವು, ನೆಲದ ಮೇಲೆ ಮರಗಳಿಂದ ಕೆಳಗೆ ಬಿದ್ದ ಪುಷ್ಪಗಳ ದರಿಯೇ ಹಾಸಿತ್ತು. ಮಹಾ ರೆಂಬೆಗಳನ್ನು ಹೊಂದಿದ್ದ ಸುಂದರ ಮರಗಳಿಂದ ಅತೀವ ಸುಂದರವಾಗಿ ಕಾಣುತ್ತಿತ್ತು.

01064018a ಮಾಲಿನೀಮಭಿತೋ ರಾಜನ್ನದೀಂ ಪುಣ್ಯಾಂ ಸುಖೋದಕಾಂ।
01064018c ನೈಕಪಕ್ಷಿಗಣಾಕೀರ್ಣಾಂ ತಪೋವನಮನೋರಮಾಂ।।
01064018e ತತ್ರ ವ್ಯಾಲಮೃಗಾನ್ಸೌಮ್ಯಾನ್ಪಶ್ಯನ್ಪ್ರೀತಿಮವಾಪ ಸಃ।।

ರಾಜನ್! ಸುಖೋದಕವನ್ನು ಹೊಂದಿದ್ದ ಪುಣ್ಯಕರ ಮಾಲಿನೀ ನದಿಯು ಅಲ್ಲಿ ಹರಿಯುತ್ತಿತ್ತು.

01064019a ತಂ ಚಾಪ್ಯತಿರಥಃ ಶ್ರೀಮಾನಾಶ್ರಮಂ ಪ್ರತ್ಯಪದ್ಯತ।
01064019c ದೇವಲೋಕಪ್ರತೀಕಾಶಂ ಸರ್ವತಃ ಸುಮನೋಹರಂ।।

ಹೀಗೆಯೇ ಆ ಶ್ರೀಮಾನ್ ಅತಿರಥನು ಸರ್ವತವೂ ಸುಮನೋಹರವಾಗಿದ್ದ ದೇವಲೋಕದಂತಿದ್ದ ಅಶ್ರಮವನ್ನು ಪ್ರವೇಶಿಸಿದನು.

01064020a ನದೀಮಾಶ್ರಮಸಂಶ್ಲಿಷ್ಟಾಂ ಪುಣ್ಯತೋಯಾಂ ದದರ್ಶ ಸಃ।
01064020c ಸರ್ವಪ್ರಾಣಭೃತಾಂ ತತ್ರ ಜನನೀಮಿವ ವಿಷ್ಟಿತಾಂ।।

ಅಲ್ಲಿರುವ ಸರ್ವ ಪ್ರಾಣಿಗಳಿಗೂ ಜನನಿಯಂತೆ ಹರಿಯುತ್ತಿರುವ ಪುಣ್ಯ ನದಿಯ ದಂಡೆಯ ಮೇಲೆ ನಿಂತಿದ್ದ ಆ ಆಶ್ರಮವನ್ನು ನೋಡಿದನು.

01064021a ಸಚಕ್ರವಾಕಪುಲಿನಾಂ ಪುಷ್ಪಫೇನಪ್ರವಾಹಿನೀಂ।
01064021c ಸಕಿನ್ನರಗಣಾವಾಸಾಂ ವಾನರರ್ಕ್ಷನಿಶೇವಿತಾಂ।।

ಪುಷ್ಪ-ನೊರೆಗಳೊಡನೆ ಪ್ರವಾಹಿಸುತ್ತಿದ್ದ ಅದರ ದಂಡೆಯ ಮೇಲೆ ಚಕ್ರವಾಕಗಳು ಆಟವಾಡುತ್ತಿದ್ದವು, ತಮ್ಮ ಗಣಗಳೊಂದಿಗೆ ಕಿನ್ನರರು ವಾಸಿಸುತ್ತಿದ್ದರು ಮತ್ತು ವಾನರ-ಕರಡಿಗಳು ಅಲ್ಲಿಗೆ ಬರುತ್ತಿದ್ದವು.

01064022a ಪುಣ್ಯಸ್ವಾಧ್ಯಾಯಸಂಘುಷ್ಟಾಂ ಪುಲಿನೈರುಪಶೋಭಿತಾಂ।
01064022c ಮತ್ತವಾರಣಶಾರ್ದೂಲಭುಜಗೇಂದ್ರನಿಶೇವಿತಾಂ।।

ಸ್ವಾಧ್ಯಾಯ ನಿರತ ಪುಣ್ಯಪುರುಷರು ಆ ಸುಂದರ ದಂಡೆಯ ಮೇಲೆ ವಾಸಿಸುತ್ತಿದ್ದರು. ಮದಿಸಿದ ಆನೆಗಳೂ, ಹುಲಿಗಳೂ, ಸರ್ಪಗಳೂ ಅಲ್ಲಿಗೆ ಬರುತ್ತಿದ್ದವು.

01064023a ನದೀಮಾಶ್ರಮಸಂಬದ್ಧಾಂ ದೃಷ್ಟ್ವಾಶ್ರಮಪದಂ ತಥಾ।
01064023c ಚಕಾರಾಭಿಪ್ರವೇಶಾಯ ಮತಿಂ ಸ ನೃಪತಿಸ್ತದಾ।।

ನದಿಯ ದಂಡೆಗೇ ಹೊಂದಿಕೊಂಡಿದ್ದ ಆಶ್ರಮಪದವನ್ನು ನೋಡಿದ ನೃಪತಿಯು ಅದನ್ನು ಪ್ರವೇಶಿಸುವ ಮನಸ್ಸುಮಾಡಿದನು.

01064024a ಅಲಂಕೃತಂ ದ್ವೀಪವತ್ಯಾ ಮಾಲಿನ್ಯಾ ರಮ್ಯತೀರಯಾ।
01064024c ನರನಾರಾಯಣಸ್ಥಾನಂ ಗಂಗಯೇವೋಪಶೋಭಿತಂ।।

ಮಾಲಿನೀ ನದಿಯು ದ್ವೀಪಗಳಿಂದ ಮತ್ತು ರಮ್ಯ ತೀರಗಳಿಂದ ಅಲಂಕೃತವಾಗಿದ್ದು, ಗಂಗಾ ತೀರದಲ್ಲಿದ್ದ ನರನಾರಾಯಣರ ಆಶ್ರಮದಂತೆ ಶೋಭಿಸುತ್ತಿತ್ತು.

01064024e ಮತ್ತಬರ್ಹಿಣಸಂಘುಷ್ಟಂ ಪ್ರವಿವೇಶ ಮಹದ್ವನಂ।।
01064025a ತತ್ಸ ಚೈತ್ರರಥಪ್ರಖ್ಯಂ ಸಮುಪೇತ್ಯ ನರೇಶ್ವರಃ।

ಚೈತ್ರರಥನ ವನದಂತಿರುವ, ಮತ್ತು ನವಿಲು ಸಂಕುಲಗಳಿಂದ ಕೂಡಿದ ಆ ಮಹಾವನವನ್ನು ನರೇಶ್ವರನು ಪ್ರವೇಶಿಸಿದನು.

01064025c ಅತೀವ ಗುಣಸಂಪನ್ನಮನಿರ್ದೇಶ್ಯಂ ಚ ವರ್ಚಸಾ।।
01064025e ಮಹರ್ಷಿಂ ಕಾಶ್ಯಪಂ ದ್ರಷ್ಟುಮಥ ಕಣ್ವಂ ತಪೋಧನಂ।।

ಅತೀವ ಗುಣಸಂಪನ್ನ ಅನಿರ್ದೇಶ್ಯ ವರ್ಚಸ ಮಹರ್ಷಿ ತಪೋಧನ ಕಾಶ್ಯಪ ಕಣ್ವನನ್ನು ನೋಡಲು ಬಯಸಿದನು.

01064026a ರಥಿನೀಂ ಅಶ್ವಸಂಬಾಧಾಂ ಪದಾತಿಗಣಸಂಕುಲಾಂ।
01064026c ಅವಸ್ಥಾಪ್ಯ ವನದ್ವಾರಿ ಸೇನಾಮಿದಮುವಾಚ ಸಃ।।

ರಥಿಗಳನ್ನು, ಅಶ್ವಸವಾರಿಗಳನ್ನು ಮತ್ತು ಪದಾತಿಗಣಸಂಕುಲಗಳ ಸೇನೆಯನ್ನು ವನದ ದಾರಿಯಲ್ಲಿಯೇ ನಿಲ್ಲಿಸಿ ಈ ಮಾತುಗಳನ್ನಾಡಿದನು:

01064027a ಮುನಿಂ ವಿರಜಸಂ ದ್ರಷ್ಟುಂ ಗಮಿಷ್ಯಾಮಿ ತಪೋಧನಂ।
01064027c ಕಾಶ್ಯಪಂ ಸ್ಥೀಯತಾಮತ್ರ ಯಾವದಾಗಮನಂ ಮಮ।।

“ನಾನು ಮುನಿ ವಿರಜಸ ತಪೋಧನ ಕಾಶ್ಯಪನನ್ನು ಕಾಣಲು ಹೋಗುತ್ತಿದ್ದೇನೆ. ನಾನು ಬರುವವರೆಗೆ ಇಲ್ಲಿಯೇ ನಿಂತಿರಿ.”

01064028a ತದ್ವನಂ ನಂದನಪ್ರಖ್ಯಮಾಸಾದ್ಯ ಮನುಜೇಶ್ವರಃ।
01064028c ಕ್ಷುತ್ಪಿಪಾಸೇ ಜಹೌ ರಾಜಾ ಹರ್ಷಂ ಚಾವಾಪ ಪುಷ್ಕಲಂ।।

ನಂದನವನದಂತಿರುವ ಆ ವನವನ್ನು ಪ್ರವೇಶಿಸುತ್ತಿದ್ದಂತೆಯೇ ಮನುಜೇಶ್ವರ ರಾಜನು ಹಸಿವು ಬಯಾರಿಕೆಗಳನ್ನು ಕಳೆದುಕೊಂಡು ಅತ್ಯಂತ ಹರ್ಷಿತನಾದನು.

01064029a ಸಾಮಾತ್ಯೋ ರಾಜಲಿಂಗಾನಿ ಸೋಽಪನೀಯ ನರಾಧಿಪಃ।
01064029c ಪುರೋಹಿತಸಹಾಯಶ್ಚ ಜಗಾಮಾಶ್ರಮಮುತ್ತಮಂ।
01064029e ದಿದೃಕ್ಷುಸ್ತತ್ರ ತಂ ಋಷಿಂ ತಪೋರಾಶಿಮಥಾವ್ಯಯಂ।।

ರಾಜಚಿಹ್ನೆಗಳನ್ನು ಕಳಚಿಟ್ಟು ಅಮಾತ್ಯರು ಮತ್ತು ಪುರೋಹಿತರೊಂದಿಗೆ ಆ ನರಾಧಿಪನು ಉತ್ತಮ ಋಷಿ ತಪೋ ರಾಶಿ ಅವ್ಯಯನನ್ನು ನೋಡಲು ಹೊರಟನು.

01064030a ಬ್ರಹ್ಮಲೋಕಪ್ರತೀಕಾಶಮಾಶ್ರಮಂ ಸೋಽಭಿವೀಕ್ಷ್ಯ ಚ।
01064030c ಷಟ್ಪದೋದ್ಗೀತಸಂಘುಷ್ಟಂ ನಾನಾದ್ವಿಜ ಗಣಾಯುತಂ।।

ಆ ಬ್ರಹ್ಮಲೋಕಪ್ರತೀಕಾಶ ಆಶ್ರಮವನ್ನು ನೋಡಿದನು. ಅಲ್ಲಿ ನಾನಾ ದ್ವಿಜಗಣಗಳ ಮಂತ್ರೋಚ್ಛಾರಣೆಯು ದುಂಬಿಗಳ ಝೇಂಕಾರದಂತೆ ಕೇಳಿಬರುತ್ತಿತ್ತು.

01064031a ಋಚೋ ಬಹ್ವೃಚಮುಖ್ಯೈಶ್ಚ ಪ್ರೇರ್ಯಮಾಣಾಃ ಪದಕ್ರಮೈಃ।
01064031c ಶುಶ್ರಾವ ಮನುಜವ್ಯಾಘ್ರೋ ವಿತತೇಷ್ವಿಹ ಕರ್ಮಸು।।

ಆಶ್ರಮದ ಒಂದೆಡೆಯಿಂದ ಸುಸ್ವರವಾಗಿ ಕೇಳಿಬರುತ್ತಿದ್ದ ಬ್ರಾಹ್ಮಣ ಪ್ರಮುಖರ ಪದಕ್ರಮ ಪ್ರಕಾರ ಋಕ್ಕುಗಳನ್ನು ಆ ಮನುಜವ್ಯಾಘ್ರನು ಆಲಿಸಿದನು.

01064032a ಯಜ್ಞವಿದ್ಯಾಂಗವಿದ್ಭಿಶ್ಚ ಕ್ರಮದ್ಭಿಶ್ಚ ಕ್ರಮಾನಪಿ।
01064032c ಅಮಿತಾತ್ಮಭಿಃ ಸುನಿಯತೈಃ ಶುಶುಭೇ ಸ ತದಾಶ್ರಮಃ।।

ಯಜ್ಞವಿಂದ್ಯಾಂಗಗಳನ್ನು ಮತ್ತು ಕ್ರಮಗಳನ್ನು ತಿಳಿದಿದ್ದ ಅಮಿತಾತ್ಮರಿಂದೊಡಗೂಡಿದ ಯಜ್ಞಮಂಟಪಗಳು ಆ ಅಶ್ರಮದಲ್ಲಿ ಶೋಭಿಸುತ್ತಿದ್ದವು.

01064033a ಅಥರ್ವವೇದಪ್ರವರಾಃ ಪೂಗಯಾಜ್ಞಿಕ ಸಮ್ಮತಾಃ।
01064033c ಸಂಹಿತಾಮೀರಯಂತಿ ಸ್ಮ ಪದಕ್ರಮಯುತಾಂ ತು ತೇ।।

ಪದಕ್ರಮಗಳನ್ನನುಸರಿಸಿ ಅಥರ್ವವೇದಪ್ರವರರು ಸಂಹಿತೆಗಳನ್ನು ಪಠಿಸುತ್ತಿದ್ದರು.

01064034a ಶಬ್ದಸಂಸ್ಕಾರಸಂಯುಕ್ತಂ ಬ್ರುವದ್ಭಿಶ್ಚಾಪರೈರ್ದ್ವಿಜೈಃ।
01064034c ನಾದಿತಃ ಸ ಬಭೌ ಶ್ರೀಮಾನ್ ಬ್ರಹ್ಮಲೋಕ ಇವಾಶ್ರಮಃ।।

ಇನ್ನೊಂದೆಡೆ ದ್ವಿಜರ ಶಬ್ಧಸಂಸ್ಕಾರಗಳಿಂದೊಡಗೂಡಿದ ಮಂತ್ರನಾದವು ಕೇಳಿಬರುತ್ತಿದ್ದು ಆ ಶ್ರೀಮಂತ ಆಶ್ರಮವು ಬ್ರಹ್ಮಲೋಕದಂತೆ ತೋರಿಬರುತ್ತಿತ್ತು.

01064035a ಯಜ್ಞಸಂಸ್ಕಾರವಿದ್ಭಿಶ್ಚ ಕ್ರಮಶಿಕ್ಷಾ ವಿಶಾರದೈಃ।
01064035c ನ್ಯಾಯತತ್ತ್ವಾರ್ಥವಿಜ್ಞಾನಸಂಪನ್ನೈರ್ವೇದಪಾರಗೈಃ।।

ಅಲ್ಲಿ ಯಜ್ಞಸಂಸ್ಕಾರಗಳನ್ನು ತಿಳಿದವರೂ, ಕ್ರಮಶಿಕ್ಷಾ ವಿಶಾರದರೂ, ನ್ಯಾಯ ತತ್ವಾರ್ಥ ವಿಜ್ನಾನ ಸಂಪನ್ನರೂ, ವೇದ ಪಾರಂಗತರೂ ಇದ್ದರು.

01064036a ನಾನಾವಾಕ್ಯಸಮಾಹಾರಸಮವಾಯವಿಶಾರದೈಃ।
01064036c ವಿಶೇಷಕಾರ್ಯವಿದ್ಭಿಶ್ಚ ಮೋಕ್ಷಧರ್ಮಪರಾಯಣೈಃ।।

ಅಲ್ಲಿ ನಾನಾ ವಾಕ್ಯ ಸಮಾಹಾರ ಸಮವಾಯ ವಿಶಾರದರಿದ್ದರು, ವಿಶೇಷ ಕಾರ್ಯವಿದ್ವತ್ತರಿದ್ದರು, ಮತ್ತು ಮೋಕ್ಷಧರ್ಮ ಪರಾಯಣರಿದ್ದರು.

01064037a ಸ್ಥಾಪನಾಕ್ಷೇಪಸಿದ್ಧಾಂತಪರಮಾರ್ಥಜ್ಞತಾಂ ಗತೈಃ।
01064037c ಲೋಕಾಯತಿಕಮುಖ್ಯೈಶ್ಚ ಸಮನ್ತಾದನುನಾದಿತಂ।।
01064038a ತತ್ರ ತತ್ರ ಚ ವಿಪ್ರೇಂದ್ರಾನ್ನಿಯತಾನ್ಸಂಶಿತವ್ರತಾನ್।
01064038c ಜಪಹೋಮಪರಾನ್ಸಿದ್ಧಾನ್ದದರ್ಶ ಪರವೀರಹಾ।।

ಪರವೀರಹ ವಿಪ್ರೇಂದ್ರನು ಎಲ್ಲೆಡೆಯಲ್ಲಿಯೂ ಜಪ ಹೋಮಾದಿಗಳಲ್ಲಿ ನಿರತ ನಿಯತ ಸಂಶಿತವ್ರತ ಸಿದ್ಧರನ್ನು ನೋಡಿದನು.

01064039a ಆಸನಾನಿ ವಿಚಿತ್ರಾಣಿ ಪುಷ್ಪವಂತಿ ಮಹೀಪತಿಃ।
01064039c ಪ್ರಯತ್ನೋಪಹಿತಾನಿ ಸ್ಮ ದೃಷ್ಟ್ವಾ ವಿಸ್ಮಯಮಾಗಮತ್।।

ಪುಷ್ಪಗಳಿಂದ ತುಂಬಾ ಜಾಗರೂಕತೆಯಿಂದ ರಚಿಸಿದ್ದ ವಿಚಿತ್ರ ಆಸನಗಳನ್ನು ನೋಡಿದ ಮಹೀಪತಿಯು ವಿಸ್ಮಿತನಾದನು.

01064040a ದೇವತಾಯತನಾನಾಂ ಚ ಪೂಜಾಂ ಪ್ರೇಕ್ಷ್ಯ ಕೃತಾಂ ದ್ವಿಜೈಃ।
01064040c ಬ್ರಹ್ಮಲೋಕಸ್ಥಮಾತ್ಮಾನಂ ಮೇನೇ ಸ ನೃಪಸತ್ತಮಃ।।

ದ್ವಿಜರಿಂದ ನಡೆಯುತ್ತಿದ್ದ ದೇವತಾ ಪೂಜೆಗಳನ್ನು ನೋಡಿದ ಆ ನೃಪಸತ್ತಮನು ತಾನು ಬ್ರಹ್ಮಲೋಕದಲ್ಲಿದ್ದೇನೋ ಎಂದು ಭಾವಿಸಿದನು.

01064041a ಸ ಕಾಶ್ಯಪತಪೋಗುಪ್ತಮಾಶ್ರಮಪ್ರವರಂ ಶುಭಂ।
01064041c ನಾತೃಪ್ಯತ್ ಪ್ರೇಕ್ಷಮಾಣೋ ವೈ ತಪೋಧನಗಣೈರ್ಯುತಂ।।

ಕಾಶ್ಯಪನ ತಪೋಬಲದಿಂದ ರಕ್ಷಿಸಲ್ಪಟ್ಟ, ತಪೋಧನ ಗಣಗಳಿಂದ ಕೂಡಿದ್ದ ಶುಭ ಆಶ್ರಮ ಸಂಕುಲವನ್ನು ಎಷ್ಟು ನೋಡಿದರು ಅವನಿಗೆ ತೃಪ್ತಿಯಾಗಲಿಲ್ಲ.

01064042a ಸ ಕಾಶ್ಯಪಸ್ಯಾಯತನಂ ಮಹಾವ್ರತೈಃ ವೃತಂ ಸಮನ್ತಾದೃಷಿಭಿಸ್ತಪೋಧನೈಃ। 01064042c ವಿವೇಶ ಸಾಮಾತ್ಯಪುರೋಹಿತೋಽರಿಹಾ ವಿವಿಕ್ತಂ ಅತ್ಯರ್ಥಮನೋಹರಂ ಶಿವಂ।।

ಆ ಅರಿಮರ್ದನನು ತನ್ನ ಅಮಾತ್ಯ ಮತ್ತು ಪುರೋಹಿತನ ಸಹಿತ ಮನೋಹರ, ಮಂಗಳಕರ, ತಪೋಧನ ಋಷಿ ಮಹಾವ್ರತರಿಂದ ಕೂಡಿದ್ದ ಕಾಶ್ಯಪನ ಆ ತಪೋ ಆಶ್ರಮವನ್ನು ಪ್ರವೇಶಿಸಿದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಶಕುಂತಲೋಪಾಖ್ಯಾನೇ ಚತುಷಷ್ಟಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಶಕುಂತಲೋಪಾಖ್ಯಾನದಲ್ಲಿ ಅರವತ್ನಾಲ್ಕನೆಯ ಅಧ್ಯಾಯವು.