063 ಶಕುಂತಲೋಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಸಂಭವ ಪರ್ವ

ಅಧ್ಯಾಯ 63

ಸಾರ

ದುಃಷಂತನು ಬೇಟೆಗೆ ಹೊರಟಿದುದು (1-2).

01063001 ವೈಶಂಪಾಯನ ಉವಾಚ।
01063001a ಸ ಕದಾ ಚಿನ್ಮಹಾಬಾಹುಃ ಪ್ರಭೂತಬಲವಾಹನಃ।
01063001c ವನಂ ಜಗಾಮ ಗಹನಂ ಹಯನಾಗಶತೈರ್ವೃತಃ।।

ವೈಶಂಪಾಯನನು ಹೇಳಿದನು: “ಒಮ್ಮೆ ಆ ಮಹಾಬಾಹುವು ನೂರಾರು ಆನೆ ಕುದುರೆಗಳನ್ನೊಡಗೂಡಿದ ಮಹಾಸೇನೆಯೊಂದಿಗೆ ಗಹನ ವನವೊಂದಕ್ಕೆ ಹೋದನು.

01063002a ಖಡ್ಗಶಕ್ತಿಧರೈರ್ವೀರೈರ್ಗದಾಮುಸಲಪಾಣಿಭಿಃ।
01063002c ಪ್ರಾಸತೋಮರಹಸ್ತೈಶ್ಚ ಯಯೌ ಯೋಧಶತೈರ್ವೃತಃ।।

ಖಡ್ಗ ಮತ್ತು ಶಕ್ತಿಗಳನ್ನು ಧರಿಸಿದ, ಗದೆ ಮುಸಲಗಳನ್ನು ಹಿಡಿದ ನೂರಾರು ವೀರ ಯೋಧರಿಂದ ಆವೃತ ರಾಜನು ಮುಂದೆ ಸಾಗಿದನು.

01063003a ಸಿಂಹನಾದೈಶ್ಚ ಯೋಧಾನಾಂ ಶಂಖದುಂದುಭಿನಿಸ್ವನೈಃ।
01063003c ರಥನೇಮಿಸ್ವನೈಶ್ಚಾಪಿ ಸನಾಗವರಬೃಂಹಿತೈಃ।।
01063004a ಹೇಷಿತಸ್ವನಮಿಶ್ರೈಶ್ಚ ಕ್ಷ್ವೇಡಿತಾಸ್ಫೋಟಿತಸ್ವನೈಃ।
01063004c ಆಸೀತ್ಕಿಲಕಿಲಾಶಬ್ದಸ್ತಸ್ಮಿನ್ಗಚ್ಛತಿ ಪಾರ್ಥಿವೇ।।

ರಾಜನು ಹೊರಟಾಗ ಯೋಧರ ಸಿಂಹನಾದ, ಶಂಖದುಂಧುಭಿಗಳ ಸ್ವರ, ರಥಗಾಲಿಗಳ ಶಬ್ಧ, ದೊಡ್ಡ ದೊಡ್ಡ ಆನೆಗಳ ಕೂಗಾಟ, ಕುದುರೆಗಳ ಕೂಗು, ನಡೆಯುತ್ತಿರುವ ಸೈನಿಕರ ಆಯುಧಗಳ ಸದ್ದು ಇವುಗಳೆಲ್ಲವುಗಳ ಒಟ್ಟು ಆರ್ಭಟವು ಕಿವಿಗಳನ್ನು ಕಿವುಡುಮಾಡುವಷ್ಟು ಜೋರಿನಲ್ಲಿ ಕೇಳಿಬರುತ್ತಿತ್ತು.

01063005a ಪ್ರಾಸಾದವರಶೃಂಗಸ್ಥಾಃ ಪರಯಾ ನೃಪಶೋಭಯಾ।
01063005c ದದೃಶುಸ್ತಂ ಸ್ತ್ರಿಯಸ್ತತ್ರ ಶೂರಮಾತ್ಮಯಶಸ್ಕರಂ।।

ಶೂರನೂ ಆತ್ಮಯಶಸ್ಕರನೂ ಆದ ಆ ಸುಂದರ ನೃಪನನ್ನು ಸ್ತ್ರೀಯರು ಮನೆಗಳ ಮಹಡಿಗಳ ಮೇಲೆ ನಿಂತು ನೋಡುತ್ತಿದ್ದರು.

01063006a ಶಕ್ರೋಪಮಮಮಿತ್ರಘ್ನಂ ಪರವಾರಣವಾರಣಂ।
01063006c ಪಶ್ಯಂತಃ ಸ್ತ್ರೀಗಣಾಸ್ತತ್ರ ಶಸ್ತ್ರಪಾಣಿಂ ಸ್ಮ ಮೇನಿರೇ।।

ಶಕ್ರನಂತೆ ಶತ್ರುಗಳನ್ನು ನಾಶಗೊಳಿಸಬಲ್ಲ, ಪರರ ಆನೆಗಳನ್ನು ಹೊಡೆದೋಡಿಸಬಲ್ಲ ಆ ಶಸ್ತ್ರಪಾಣಿಯನ್ನು ನೋಡಿದ ಸ್ತ್ರೀಗಣಗಳು ಈ ರೀತಿ ಯೋಚಿಸಿಸುತ್ತಿದ್ದವು:

01063007a ಅಯಂ ಸ ಪುರುಷವ್ಯಾಘ್ರೋ ರಣೇಽದ್ಭುತಪರಾಕ್ರಮಃ।
01063007c ಯಸ್ಯ ಬಾಹುಬಲಂ ಪ್ರಾಪ್ಯ ನ ಭವಂತ್ಯಸುಹೃದ್ಗಣಾಃ।।

“ರಣದಲ್ಲಿ ಅದ್ಭುತಪರಾಕ್ರಮಿಯಾದ ಇವನು ಪುರುಷವ್ಯಾಘ್ರ. ಇವನ ಬಾಹುಬಲಕ್ಕೆ ಸಿಲುಕಿದ ಯಾವ ಶತ್ರುವೂ ಉಳಿಯಲಿಕ್ಕಿಲ್ಲ.”

01063008a ಇತಿ ವಾಚೋ ಬ್ರುವಂತ್ಯಸ್ತಾಃ ಸ್ತ್ರಿಯಃ ಪ್ರೇಮ್ಣಾ ನರಾಧಿಪಂ।
01063008c ತುಷ್ಟುವುಃ ಪುಷ್ಪವೃಷ್ಟೀಶ್ಚ ಸಸೃಜುಸ್ತಸ್ಯ ಮೂರ್ಧನಿ।।

ನರಾಧಿಪನ ಕುರಿತು ಪ್ರೇಮದಿಂದ ಸ್ತ್ರೀಯರು ಈ ರೀತಿ ಆಡಿಕೊಂಡರು, ಮತ್ತು ಸಂತಸದಿಂದ ಅವನ ನೆತ್ತಿಯ ಮೇಲೆ ಹೂವಿನ ಮಳೆಯನ್ನೇ ಸುರಿಸಿದರು.

01063009a ತತ್ರ ತತ್ರ ಚ ವಿಪ್ರೇಂದ್ರೈಃ ಸ್ತೂಯಮಾನಃ ಸಮಂತತಃ।
01063009c ನಿರ್ಯಯೌ ಪರಯಾ ಪ್ರೀತ್ಯಾ ವನಂ ಮೃಗಜಿಘಾಂಸಯಾ।।

ಅವನು ಹೋದಲ್ಲೆಲ್ಲಾ ವಿಪ್ರೇಂದ್ರರು ಸ್ತುತಿಸುತ್ತಿರಲು ಅವನು ಅತಿ ಸಂತಸದಿಂದ ಮೃಗ ಬೇಟೆಗೆಂದು ವನವನ್ನು ಪ್ರವೇಶಿಸಿದನು.

01063010a ಸುದೂರಮನುಜಗ್ಮುಸ್ತಂ ಪೌರಜಾನಪದಾಸ್ತದಾ।
01063010c ನ್ಯವರ್ತಂತ ತತಃ ಪಶ್ಚಾದನುಜ್ಞಾತಾ ನೃಪೇಣ ಹ।।

ಅವನನ್ನು ಸ್ವಲ್ಪದೂರದವರೆಗೆ ಅನುಸರಿಸಿದ ನಗರ ಮತ್ತು ಗ್ರಾಮೀಣ ಜನರು ಸ್ವಲ್ಪ ಸಮಯದ ನಂತರ ರಾಜನ ಅನುಜ್ಞೆಯಂತೆ ಹಿಂದಿರುಗಿದರು.

01063011a ಸುಪರ್ಣಪ್ರತಿಮೇನಾಥ ರಥೇನ ವಸುಧಾಧಿಪಃ।
01063011c ಮಹೀಮಾಪೂರಯಾಮಾಸ ಘೋಷೇಣ ತ್ರಿದಿವಂ ತಥಾ।।

ಗರುಡನಂತೆ ಅತಿ ವೇಗದಲ್ಲಿ ಪ್ರಯಾಣಿಸುತ್ತಿದ್ದ ಆ ವಸುಧಾಧಿಪನ ರಥ ಘೋಷವು ಇಡೀ ಭೂಮಿಯನ್ನೂ ಸೇರಿ ಮೂರೂ ಲೋಕಗಳನ್ನೂ ತುಂಬಿತು.

01063012a ಸ ಗಚ್ಛಂದದೃಶೇ ಧೀಮಾನ್ನಂದನಪ್ರತಿಮಂ ವನಂ।
01063012c ಬಿಲ್ವಾರ್ಕಖದಿರಾಕೀರ್ಣಂ ಕಪಿತ್ಥಧವಸಂಕುಲಂ।।

ಹೀಗೆ ಹೋಗುತ್ತಿರುವಾಗ ಆ ಧೀಮಂತನು ಬಿಲ್ವಾಕ, ಅರ್ಕ, ಖದಿರ, ಕೀರ್ಣ, ಕಪಿತ್ಥ ಮತ್ತು ಧವ ಸಂಕುಲಗಳಿಂದ ಕೂಡಿದ ನಂದನವನವನ್ನೇ ಹೋಲುವ ವನವೊಂದನ್ನು ಕಂಡನು.

01063013a ವಿಷಮಂ ಪರ್ವತಪ್ರಸ್ಥೈರಶ್ಮಭಿಶ್ಚ ಸಮಾವೃತಂ।
01063013c ನಿರ್ಜಲಂ ನಿರ್ಮನುಷ್ಯಂ ಚ ಬಹುಯೋಜನಮಾಯತಂ।
01063013e ಮೃಗಸಂಘೈರ್ವೃತಂ ಘೋರೈರನ್ಯೈಶ್ಚಾಪಿ ವನೇಚರೈಃ।।

ಅದು ಪರ್ವತ, ಕಣಿವೆ, ಬಂಡೆಗಲ್ಲುಗಳನ್ನುಹೊಂದಿದ್ದು ವಿಷಮವಾಗಿತ್ತು; ನಿರ್ಜಲ ನಿರ್ಮನುಷ್ಯವಾಗಿ ಬಹಳಷ್ಟು ಯೋಜನ ವಿಸ್ತೀರ್ಣಗೊಂಡಿತ್ತು; ಜಿಂಕೆ, ಸಿಂಹ ಮತ್ತು ಇನ್ನೂ ಇತರ ಘೋರ ವನಪ್ರಾಣಿಗಳಿಂದ ತುಂಬಿಕೊಂಡಿತ್ತು.

01063014a ತದ್ವನಂ ಮನುಜವ್ಯಾಘ್ರಃ ಸಭೃತ್ಯಬಲವಾಹನಃ।
01063014c ಲೋಡಯಾಮಾಸ ದುಃಷಂತಃ ಸೂದಯನ್ವಿವಿಧಾನ್ಮೃಗಾನ್।।

ತನ್ನ ಸೇವಕರು ಮತ್ತು ಸೈನಿಕರೊಡಗೂಡಿದ ಆ ಮನುಜವ್ಯಾಘ್ರ ದುಃಷಂತನು ಆ ವನದಲ್ಲಿ ವಿವಿಧ ಮೃಗಗಳನ್ನು ಬೇಟೆಯಾಡಿದನು.

01063015a ಬಾಣಗೋಚರಸಂಪ್ರಾಪ್ತಾಂಸ್ತತ್ರ ವ್ಯಾಘ್ರಗಣಾನ್ಬಹೂನ್।
01063015c ಪಾತಯಾಮಾಸ ದುಃಷಂತೋ ನಿರ್ಬಿಭೇದ ಚ ಸಾಯಕೈಃ।।

ತನ್ನ ಬಾಣಗಳ ಪರಿಧಿಯಲ್ಲಿ ಸಿಕ್ಕಿದ ಹಲವಾರು ವ್ಯಾಘ್ರಗಳನ್ನು ದುಃಷಂತನು ಸಾಯಕಗಳಿಂದ ಹೊಡೆದು ಉರುಳಿಸಿದನು.

01063016a ದೂರಸ್ಥಾನ್ಸಾಯಕೈಃ ಕಾಂಶ್ಚಿದಭಿನತ್ಸ ನರರ್ಷಭಃ।
01063016c ಅಭ್ಯಾಶಮಾಗತಾಂಶ್ಚಾನ್ಯಾನ್ಖಡ್ಗೇನ ನಿರಕೃಂತತ।।

ಆ ನರರ್ಷಭನು ದೂರದಲ್ಲಿರುವವನ್ನು ಬಾಣಗಳಿಂದ ಹೊಡೆದನು; ಹತ್ತಿರದಲ್ಲಿರುವವನ್ನು ಖಡ್ಗದಿಂದ ಕತ್ತರಿಸಿದನು.

01063017a ಕಾಂಶ್ಚಿದೇಣಾನ್ಸ ನಿರ್ಜಘ್ನೇ ಶಕ್ತ್ಯಾ ಶಕ್ತಿಮತಾಂ ವರಃ।
01063017c ಗದಾಮಂಡಲತತ್ತ್ವಜ್ಞಶ್ಚಚಾರಾಮಿತವಿಕ್ರಮಃ।।
01063018a ತೋಮರೈರಸಿಭಿಶ್ಚಾಪಿ ಗದಾಮುಸಲಕರ್ಪಣೈಃ।
01063018c ಚಚಾರ ಸ ವಿನಿಘ್ನನ್ವೈ ವನ್ಯಾಂಸ್ತತ್ರ ಮೃಗದ್ವಿಜಾನ್।।

ಆ ಶಕ್ತಿವಂತರಲ್ಲಿ ಶ್ರೇಷ್ಠನು ಕೆಲವು ಪ್ರಾಣಿಗಳನ್ನು ಈಟಿಯಿಂದ ಹೊಡೆದನು; ಆ ಅಮಿತವಿಕ್ರಮಿಯು ಕೆಲವನ್ನು ಗದೆಯಿಂದ ಹೊಡೆದು ಉರುಳಿಸಿದನು. ಈ ರೀತಿ ತೋಮರ, ಖಡ್ಗ, ಗದೆ, ಮುಸಲ ಮುಂತಾದ ಆಯುಧಗಳನ್ನು ಹಿಡಿದು ಬೇಟೆಯಾಡುವಾಗ ಆ ವನದಲ್ಲಿರುವ ಮೃಗಗಳೆಲ್ಲವೂ ಅಲ್ಲಿಂದ ಪಲಾಯನಗೈಯ ತೊಡಗಿದವು.

01063019a ರಾಜ್ಞಾ ಚಾದ್ಭುತವೀರ್ಯೇಣ ಯೋಧೈಶ್ಚ ಸಮರಪ್ರಿಯೈಃ।
01063019c ಲೋಡ್ಯಮಾನಂ ಮಹಾರಣ್ಯಂ ತತ್ಯಜುಶ್ಚ ಮಹಾಮೃಗಾಃ।।

ರಾಜನ ಆ ಸಮರಪ್ರಿಯ ಅದ್ಭುತವೀರ್ಯ ಯೋಧರ ಧಾಳಿಗೊಳಗಾದ ಆ ಮಹಾರಣ್ಯದ ಮಹಾಮೃಗಗಳೆಲ್ಲವೂ ಅಲ್ಲಿಂದ ಓಡತೊಡಗಿದವು.

01063020a ತತ್ರ ವಿದ್ರುತಸಂಘಾನಿ ಹತಯೂಥಪತೀನಿ ಚ।
01063020c ಮೃಗಯೂಥಾನ್ಯಥೌತ್ಸುಕ್ಯಾಚ್ಚಬ್ದಂ ಚಕ್ರುಸ್ತತಸ್ತತಃ।।

ತಮ್ಮ ಪಡೆಯ ನಾಯಕನನ್ನು ಕಳೆದುಕೊಂಡು ಗಲಿಬಿಲಿಗೊಂಡ ಜಿಂಕೆಗಳ ಪಡೆಯು ಭಯ ಉದ್ವೇಗಗಳ ಆಕ್ರಂದವನ್ನೀಯುತ್ತಾ ಎಲ್ಲ ದಿಕ್ಕುಗಳಲ್ಲಿಯೂ ಓಡತೊಡಗಿದವು.

01063021a ಶುಷ್ಕಾಂ ಚಾಪಿ ನದೀಂ ಗತ್ವಾ ಜಲನೈರಾಶ್ಯಕರ್ಶಿತಾಃ।
01063021c ವ್ಯಾಯಾಮಕ್ಲಾಂತಹೃದಯಾಃ ಪತಂತಿ ಸ್ಮ ವಿಚೇತಸಃ।।
01063022a ಕ್ಷುತ್ಪಿಪಾಸಾಪರೀತಾಶ್ಚ ಶ್ರಾಂತಾಶ್ಚ ಪತಿತಾ ಭುವಿ।
01063022c ಕೇ ಚಿತ್ತತ್ರ ನರವ್ಯಾಘ್ರೈರಭಕ್ಷ್ಯಂತ ಬುಭುಕ್ಷಿತೈಃ।।

ಬತ್ತಿಹೋದ ನದಿಗಳಿಂದ ತಮ್ಮ ಬಾಯಾರಿಕೆಯನ್ನು ನೀಗಿಕೊಳ್ಳಲಾರದೇ ಕೃಷರಾಗಿ, ಆಯಾಸದಿಂದ ಬಳಲಿದವರಾಗಿ ಅಲ್ಲಿಯೇ ವಿಚೇತಸರಾಗಿ ಬಿದ್ದವು. ಹಸಿವು ಬಾಯಾರಿಕೆಗಳಿಂದ ಬಳಲಿದವುಗಳು ಭೂಮಿಯ ಮೇಲೆ ಬಿದ್ದವು. ಕೆಲವನ್ನು ಅಲ್ಲಿದ್ದ ನರವ್ಯಾಘ್ರರು ಹಸಿದಾಗಿಯೇ ಭಕ್ಷಿಸಿದರು.

01063023a ಕೇ ಚಿದಗ್ನಿಮಥೋತ್ಪಾದ್ಯ ಸಮಿಧ್ಯ ಚ ವನೇಚರಾಃ।
01063023c ಭಕ್ಷಯಂತಿ ಸ್ಮ ಮಾಂಸಾನಿ ಪ್ರಕುಟ್ಯ ವಿಧಿವತ್ತದಾ।

ಕೆಲವೊಂದನ್ನು ಆ ವನಚರರು ಬೆಂಕಿಯನ್ನು ಹಾಕಿ ಅದರಲ್ಲಿ ಮಾಂಸವನ್ನು ವಿಧಿವತ್ತಾಗಿ ಸುಟ್ಟು ತಿಂದರು.

01063024a ತತ್ರ ಕೇ ಚಿದ್ಗಜಾ ಮತ್ತಾ ಬಲಿನಃ ಶಸ್ತ್ರವಿಕ್ಷತಾಃ।
01063024cಸಂಕೋಚ್ಯಾಗ್ರಕರಾನ್ಭೀತಾಃ ಪ್ರದ್ರವಂತಿ ಸ್ಮ ವೇಗಿತಾಃ।।

ಶಸ್ತ್ರಗಳಿಂದ ಗಾಯಗೊಂಡು ಭಯಭೀತರಾದ ಬಲಶಾಲೀ ಮತ್ತ ಗಜಗಳು ತಮ್ಮ ಸೊಂಡಿಲುಗಳನ್ನು ಮೇಲೇರಿಸಿ ಘೀಳಿಡುತ್ತಾ ಓಡತೊಡಗಿದವು.

01063025a ಶಕೃನ್ಮೂತ್ರಂ ಸೃಜಂತಶ್ಚ ಕ್ಷರಂತಃ ಶೋಣಿತಂ ಬಹು।
01063025c ವನ್ಯಾ ಗಜವರಾಸ್ತತ್ರ ಮಮೃದುರ್ಮನುಜಾನ್ಬಹೂನ್।।

ಭಯಭೀತರಾಗಿ ಮಲ ಮೂತ್ರಗಳನ್ನು ವಿಸರ್ಜಿಸುತ್ತಾ ರಕ್ತವನ್ನು ಕಾರುತ್ತಾ ಓಡುತ್ತಿದ್ದ ಆ ಆನೆಗಳು ಹಲವಾರು ಸೈನಿಕರನ್ನು ತುಳಿದು ಕೊಂದುಹಾಕಿದವು.

01063026a ತದ್ವನಂ ಬಲಮೇಘೇನ ಶರಧಾರೇಣ ಸಂವೃತಂ।
01063026c ವ್ಯರೋಚನ್ಮಹಿಷಾಕೀರ್ಣಂ ರಾಜ್ಞಾ ಹತಮಹಾಮೃಗಂ।।

ಹಲವಾರು ಪ್ರಾಣಿಗಳಿಂದ ತುಂಬಿದ್ದ ಆ ವನವನ್ನು ರಾಜನ ಅಸಂಖ್ಯ ಸೇನೆಯು ಸಿಂಹ, ಹುಲಿ ಮತ್ತು ಇತರ ಪ್ರಾಣಿಗಳಿಂದ ಮುಕ್ತಮಾಡಿತು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಶಕುಂತಲೋಪಾಖ್ಯಾನೇ ತ್ರಿಷಷ್ಟಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಶಕುಂತಲೋಪಾಖ್ಯಾನದಲ್ಲಿ ಅರವತ್ಮೂರನೆಯ ಅಧ್ಯಾಯವು.