062 ಶಕುಂತಲೋಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಸಂಭವ ಪರ್ವ

ಅಧ್ಯಾಯ 62

ಸಾರ

ದುಃಷಂತನ ರಾಜ್ಯಭಾರ (1-10).

01062001 ಜನಮೇಜಯ ಉವಾಚ।
01062001a ತ್ವತ್ತಃ ಶ್ರುತಮಿದಂ ಬ್ರಹ್ಮನ್ದೇವದಾನವರಕ್ಷಸಾಂ।
01062001c ಅಂಶಾವತರಣಂ ಸಮ್ಯಗ್ಗಂಧರ್ವಾಪ್ಸರಸಾಂ ತಥಾ।।

ಜನಮೇಜಯನು ಹೇಳಿದನು: “ಬ್ರಹ್ಮನ್! ನಿನ್ನಿಂದ ಈ ದೇವ-ದಾನವ-ರಾಕ್ಷಸ ಮತ್ತು ಗಂಧರ್ವ-ಅಪ್ಸರೆಯರ ಅಂಶಾವತರಣವನ್ನು ಸಂಪೂರ್ಣ ಕೇಳಿದೆನು.

01062002a ಇಮಂ ತು ಭೂಯ ಇಚ್ಛಾಮಿ ಕುರೂಣಾಂ ವಂಶಮಾದಿತಃ।
01062002c ಕಥ್ಯಮಾನಂ ತ್ವಯಾ ವಿಪ್ರ ವಿಪ್ರರ್ಷಿಗಣಸನ್ನಿಧೌ।।

ಈಗ ನಾನು ಕುರು ವಂಶದ ಪ್ರಾರಂಭದ ಕುರಿತು ಕೇಳಬಯಸುತ್ತೇನೆ. ವಿಪ್ರ! ವಿಪ್ರರ್ಷಿಗಣಗಳ ಈ ಸನ್ನಿಧಿಯಲ್ಲಿ ಅದನ್ನು ಕಥಾರೂಪದಲ್ಲಿ ಹೇಳು.”

01062003 ವೈಶಂಪಾಯನ ಉವಾಚ।
01062003a ಪೌರವಾಣಾಂ ವಂಶಕರೋ ದುಃಷಂತೋ ನಾಮ ವೀರ್ಯವಾನ್।
01062003c ಪೃಥಿವ್ಯಾಶ್ಚತುರಂತಾಯಾ ಗೋಪ್ತಾ ಭರತಸತ್ತಮ।।

ವೈಶಂಪಾಯನನು ಹೇಳಿದನು: “ಭರತಸತ್ತಮ! ನಾಲ್ಕೂ ಕಡೆಗಳಲ್ಲಿ ಸಮುದ್ರವು ಆವರಿಸಿರುವ ಈ ಪೃಥ್ವಿಯನ್ನು ಪಾಲಿಸುತ್ತಿದ್ದ ದುಃಷಂತ ಎಂಬ ಹೆಸರಿನ ವೀರನೇ ಪೌರವರ ವಂಶಕರನು.

01062004a ಚತುರ್ಭಾಗಂ ಭುವಃ ಕೃತ್ಸ್ನಂ ಸ ಭುಂಕ್ತೇ ಮನುಜೇಶ್ವರಃ।
01062004c ಸಮುದ್ರಾವರಣಾಂಶ್ಚಾಪಿ ದೇಶಾನ್ಸ ಸಮಿತಿಂಜಯಃ।।

ಆ ಮನುಜೇಶ್ವರನು ಭೋಗಿಸಿದ ದೇಶವು ಸಮುದ್ರದಿಂದ ಆವರಿಸಲ್ಪಟ್ಟ ಭೂಮಿಯ ನಾಲ್ಕೂ ಭಾಗಗಳನ್ನು ಒಳಗೊಂಡಿದ್ದಿತು.

01062005a ಆಮ್ಲೇಚ್ಛಾಟವಿಕಾನ್ಸರ್ವಾನ್ಸ ಭುಂಕ್ತೇ ರಿಪುಮರ್ದನಃ।
01062005c ರತ್ನಾಕರಸಮುದ್ರಾಂತಾಂಶ್ಚಾತುರ್ವರ್ಣ್ಯಜನಾವೃತಾನ್।।

ಆ ರಿಪುಮರ್ದನನ ರಾಜ್ಯವು ಮ್ಲೇಚ್ಛರ ರಾಜ್ಯಗಳೆಲ್ಲವನ್ನೂ ಸೇರಿ ರತ್ನಾಕರ ಸಮುದ್ರದ ಅಂತ್ಯದವರೆಗೂ ಕೂಡಿದ್ದು ಚಾತುರ್ವಣ್ಯದವರನ್ನೂ ಒಳಗೊಂಡಿತ್ತು.

01062006a ನ ವರ್ಣಸಂಕರಕರೋ ನಾಕೃಷ್ಯಕರಕೃಜ್ಜನಃ।
01062006c ನ ಪಾಪಕೃತ್ಕಶ್ಚಿದಾಸೀತ್ತಸ್ಮಿನ್ರಾಜನಿ ಶಾಸತಿ।।

ಆ ರಾಜನ ಶಾಸನದಲ್ಲಿ ವರ್ಣಸಂಕರವಿರಲಿಲ್ಲ, ಬೇಸಾಯ ಮಾಡಬೇಕಾಗಿರಲಿಲ್ಲ, ಗಣಿಗಳನ್ನು ತೋಡಬೇಕಾಗಿರಲಿಲ್ಲ, ಪಾಪಕೃತ್ಯಗಳನ್ನು ಮಾಡುವವರು ಯಾರೂ ಇರಲಿಲ್ಲ.

01062007a ಧರ್ಮ್ಯಾಂ ರತಿಂ ಸೇವಮಾನಾ ಧರ್ಮಾರ್ಥಾವಭಿಪೇದಿರೇ।
01062007c ತದಾ ನರಾ ನರವ್ಯಾಘ್ರ ತಸ್ಮಿಂಜನಪದೇಶ್ವರೇ।।

ನರವ್ಯಾಘ್ರ! ಅವನ ರಾಜ್ಯಭಾರದಲ್ಲಿ ಎಲ್ಲರೂ ಧರ್ಮನಿರತರಾಗಿದ್ದು ಅವರು ಮಾಡುವ ಎಲ್ಲ ಕಾರ್ಯಗಳೂ ಧರ್ಮದ ಸೇವೆಯಲ್ಲಿಯೇ ನಡೆಯುತ್ತಿತ್ತು.

01062008a ನಾಸೀತ್ಚೋರಭಯಂ ತಾತ ನ ಕ್ಷುಧಾಭಯಮಣ್ವಪಿ।
01062008c ನಾಸೀದ್ವ್ಯಾಧಿಭಯಂ ಚಾಪಿ ತಸ್ಮಿಂಜನಪದೇಶ್ವರೇ।।

ಅಯ್ಯಾ! ಅವನ ರಾಜ್ಯಭಾರದಲ್ಲಿ ಯಾವುದೇ ರೀತಿಯ ಚೋರ ಭಯವಾಗಲೀ, ಬರಗಾಲದ ಭಯವಾಗಲೀ, ಅಥವಾ ವ್ಯಾಧಿ ಭಯವಾಗಲೀ ಇರಲಿಲ್ಲ.

01062009a ಸ್ವೈರ್ಧರ್ಮೈರೇಮಿರೇ ವರ್ಣಾ ದೈವೇ ಕರ್ಮಣಿ ನಿಃಸ್ಪೃಹಾಃ।
01062009c ತಮಾಶ್ರಿತ್ಯ ಮಹೀಪಾಲಮಾಸಂಶ್ಚೈವಾಕುತೋಭಯಾಃ।।

ಎಲ್ಲ ವರ್ಣದವರೂ ಅವರವರ ಧರ್ಮಗಳಲ್ಲಿ ನಿರತರಾಗಿದ್ದು ಯಾವುದೇ ಫಲವನ್ನೂ ಬಯಸದೇ ದೇವಕಾರ್ಯಗಳಲ್ಲಿ ತೊಡಗಿದ್ದರು. ಮಹೀಪಾಲ! ಅವನಲ್ಲಿ ಆಶ್ರಯ ಹೊಂದಿದ ಪ್ರಜೆಗಳ್ಯಾರಿಗೂ ಯಾವುದೇ ರೀತಿಯ ಭಯವಿರಲಿಲ್ಲ.

01062010a ಕಾಲವರ್ಷೀ ಚ ಪರ್ಜನ್ಯಃ ಸಸ್ಯಾನಿ ಫಲವಂತಿ ಚ।
01062010c ಸರ್ವರತ್ನಸಮೃದ್ಧಾ ಚ ಮಹೀ ವಸುಮತೀ ತದಾ।।

ಪರ್ಜನ್ಯನು ಕಾಲಕ್ಕೆ ಸರಿಯಾಗಿ ಮಳೆ ಸುರಿಸುತ್ತಿದ್ದನು ಮತ್ತು ಸಸ್ಯಗಳು ಫಲಭರಿತವಾಗಿರುತ್ತಿದ್ದವು. ಆ ಕಾಲದಲ್ಲಿ ವಸುಮತಿ ಭೂಮಿಯು ಸರ್ವರತ್ನ ಸಮೃದ್ಧಳಾಗಿದ್ದಳು.

01062011a ಸ ಚಾದ್ಭುತಮಹಾವೀರ್ಯೋ ವಜ್ರಸಂಹನನೋ ಯುವಾ।
01062011c ಉದ್ಯಮ್ಯ ಮಂದರಂ ದೋರ್ಭ್ಯಾಂ ಹರೇತ್ಸವನಕಾನನಂ।।

ಆ ಯುವಕನಾದರೋ ಅದ್ಭುತಮಹಾವೀರ್ಯನೂ, ವಜ್ರಕಾಯನೂ ಆಗಿದ್ದು ವನಕಾನನಗಳ ಸಮೇತ ಮಂದರ ಪರ್ವತವನ್ನು ಎತ್ತಿಹಿಡಿಯಬಲ್ಲಂಥ ಭುಜಯುಕ್ತನಾಗಿದ್ದನು.

01062012a ಧನುಷ್ಯಥ ಗದಾಯುದ್ಧೇ ತ್ಸರುಪ್ರಹರಣೇಷು ಚ।
01062012c ನಾಗಪೃಷ್ಠೇಽಶ್ವಪೃಷ್ಠೇ ಚ ಬಭೂವ ಪರಿನಿಷ್ಠಿತಃ।।

ಅವನು ಧನುರ್ಯುದ್ಧ, ಗದಾಯುದ್ಧ, ಖಡ್ಗ ಪ್ರಹಾರ, ಆನೆ ಸವಾರಿ ಮತ್ತು ಕುದುರೆ ಸವಾರಿ ಎಲ್ಲದರಲ್ಲಿಯೂ ಪರಿಣಿತನಾಗಿದ್ದನು.

01062013a ಬಲೇ ವಿಷ್ಣುಸಮಶ್ಚಾಸೀತ್ತೇಜಸಾ ಭಾಸ್ಕರೋಪಮಃ।
01062013c ಅಕ್ಷುಬ್ಧತ್ವೇಽರ್ಣವಸಮಃ ಸಹಿಷ್ಣುತ್ವೇ ಧರಾಸಮಃ।।

ಅವನು ಬಲದಲ್ಲಿ ವಿಷ್ಣುಸಮಾನನೂ, ತೇಜಸ್ಸಿನಲ್ಲಿ ಭಾಸ್ಕರನಂತೆಯೂ, ಶಾಂತತೆಯಲ್ಲಿ ಸಾಗರ ಸಮನೂ, ಮತ್ತು ಸಹಿಷ್ಣುತೆಯಲ್ಲಿ ಭೂಮಿಯ ಸಮನೂ ಆಗಿದ್ದನು.

01062014a ಸಮ್ಮತಃ ಸ ಮಹೀಪಾಲಃ ಪ್ರಸನ್ನಪುರರಾಷ್ಟ್ರವಾನ್।
01062014c ಭೂಯೋ ಧರ್ಮಪರೈರ್ಭಾವೈರ್ವಿದಿತಂ ಜನಮಾವಸತ್।।

ಆ ಸಮ್ಮತ ಮಹೀಪಾಲನು ಪ್ರಸನ್ನತೆಯಿಂದ ತನ್ನ ಪುರರಾಷ್ಟ್ರಗಳನ್ನು ಆಳುತ್ತಿರಲು ಅಲ್ಲಿಯ ಜನರೆಲ್ಲರೂ ಧರ್ಮ ನಿರತರಾಗಿದ್ದರು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಶಕುಂತಲೋಪಾಖ್ಯಾನೇ ದ್ವಿಷಷ್ಟಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಶಕುಂತಲೋಪಾಖ್ಯಾನದಲ್ಲಿ ಅರವತ್ತೆರಡನೆಯ ಅಧ್ಯಾಯವು.