ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಆದಿವಂಶಾವತರಣ ಪರ್ವ
ಅಧ್ಯಾಯ 60
ಸಾರ
ಬ್ರಹ್ಮನ ಮಾನಸ ಪುತ್ರರು (1-5). ದಕ್ಷನ ಮಕ್ಕಳು (6-15). ಪ್ರಜಾಪತಿಯ ಸಂತಾನ (16-35). ಋಷಿಗಳು (36-45). ದೇವಗಣಗಳು (46-60).
01060001 ವೈಶಂಪಾಯನ ಉವಾಚ।
01060001a ಬ್ರಹ್ಮಣೋ ಮಾನಸಾಃ ಪುತ್ರಾ ವಿದಿತಾಃ ಷಣ್ಮಹರ್ಷಯಃ।
01060001c ಏಕಾದಶ ಸುತಾಃ ಸ್ಥಾಣೋಃ ಖ್ಯಾತಾಃ ಪರಮಮಾನಸಾಃ।।
ವೈಶಂಪಾಯನನು ಹೇಳಿದನು: “ಆರು ಮಹರ್ಷಿಗಳು ಬ್ರಹ್ಮನ ಮಾನಸ ಪುತ್ರರೆಂದು ತಿಳಿದಿದ್ದೇವೆ. ಅವನ ಏಳನೆಯ ಪುತ್ರ ಸ್ಥಾಣು. ಸ್ಥಾಣುವಿಗೆ ಹನ್ನೊಂದು ವಿಖ್ಯಾತ, ಪರಮ ಮನಸ್ಕ ಮಕ್ಕಳಿದ್ದರು.
01060002a ಮೃಗವ್ಯಾಧಶ್ಚ ಶರ್ವಶ್ಚ1 ನಿರೃತಿಶ್ಚ ಮಹಾಯಶಾಃ।
01060002c ಅಜೈಕಪಾದಹಿರ್ಬುಧ್ನ್ಯಃ ಪಿನಾಕೀ ಚ ಪರಂತಪಃ।।
01060003a ದಹನೋಽಥೇಶ್ವರಶ್ಚೈವ ಕಪಾಲೀ ಚ ಮಹಾದ್ಯುತಿಃ।
01060003c ಸ್ಥಾಣುರ್ಭವಶ್ಚ ಭಗವಾನ್ರುದ್ರಾ ಏಕಾದಶ ಸ್ಮೃತಾಃ।।
ಮೃಗವ್ಯಾಧ, ಶರ್ವ, ಮಹಾಯಶಸ್ವಿ ನಿರೃತಿ, ಅಜೈಕಪಾದ, ಅಹಿರ್ಬುಧ್ನ್ಯ, ಪರಂತಪ ಪಿನಾಕೀ, ದಹನ, ಈಶ್ವರ, ಮಹಾದ್ಯುತಿ ಕಪಾಲೀ, ಸ್ಥಾಣು, ಮತ್ತು ಭಗವಾನ್ ಭವ ಇವರೆಲ್ಲರೂ ಏಕಾದಶ ರುದ್ರರೆಂದು ಕರೆಯಲ್ಪಟ್ಟಿದ್ದಾರೆ.
01060004a ಮರೀಚಿರಂಗಿರಾ ಅತ್ರಿಃ ಪುಲಸ್ತ್ಯಃ ಪುಲಹಃ ಕ್ರತುಃ।
01060004c ಷಡೇತೇ ಬ್ರಹ್ಮಣಃ ಪುತ್ರಾ ವೀರ್ಯವಂತೋ ಮಹರ್ಷಯಃ।।
ಮರೀಚಿ, ಅಂಗಿರಸ, ಅತ್ರಿ, ಪುಲಸ್ತ್ಯ, ಪುಲಹ ಮತ್ತು ಕ್ರತು ಈ ಆರು ವೀರ್ಯವಂತ ಮಹರ್ಷಿಗಳು ಬ್ರಹ್ಮನ ಪುತ್ರರು.
01060005a ತ್ರಯಸ್ತ್ವಂಗಿರಸಃ ಪುತ್ರಾ ಲೋಕೇ ಸರ್ವತ್ರ ವಿಶ್ರುತಾಃ।
01060005c ಬೃಹಸ್ಪತಿರುತಥ್ಯಶ್ಚ ಸಂವರ್ತಶ್ಚ ಧೃತವ್ರತಾಃ।।
ಅಂಗಿರಸನಿಗೆ ಲೋಕಗಳಲ್ಲಿ ಸರ್ವತ್ರ ವಿಶ್ರುತ ಮೂರು ಧೃತವ್ರತ ಪುತ್ರರಾದರು: ಬೃಹಸ್ಪತಿ, ಉತಥ್ಯ, ಮತ್ತು ಸಂವರ್ತ2.
01060006a ಅತ್ರೇಸ್ತು ಬಹವಃ ಪುತ್ರಾಃ ಶ್ರೂಯಂತೇ ಮನುಜಾಧಿಪ।
01060006c ಸರ್ವೇ ವೇದವಿದಃ ಸಿದ್ಧಾಃ ಶಾಂತಾತ್ಮಾನೋ ಮಹರ್ಷಯಃ।।
ಮನುಜಾಧಿಪ! ಅತ್ರಿಯ ಮಕ್ಕಳು ಬಹಳ ಎಂದು ಕೇಳಿದ್ದೇವೆ. ಅವರೆಲ್ಲರೂ ವೇದವಿದರೂ, ಸಿದ್ಧರೂ, ಶಾಂತಾತ್ಮರೂ ಆದ ಮಹರ್ಷಿಗಳು.
01060007a ರಾಕ್ಷಸಾಸ್ತು ಪುಲಸ್ತ್ಯಸ್ಯ ವಾನರಾಃ ಕಿನ್ನರಾಸ್ತಥಾ3।
01060007c ಪುಲಹಸ್ಯ ಮೃಗಾಃ ಸಿಂಹಾ ವ್ಯಾಘ್ರಾಃ ಕಿಂಪುರುಷಾಸ್ತಥಾ4।।
ರಾಕ್ಷಸ, ವಾನರ ಮತ್ತು ಕಿನ್ನರರು ಪುಲಸ್ತ್ಯನ ಮಕ್ಕಳು. ಮೃಗ, ಸಿಂಹ, ವ್ಯಾಘ್ರ, ಮತ್ತು ಕಿಂಪುರುಷರು ಪುಲಹನ ಮಕ್ಕಳು.
01060008a ಕ್ರತೋಃ ಕ್ರತುಸಮಾಃ ಪುತ್ರಾಃ ಪತಂಗಸಹಚಾರಿಣಃ।
01060008c ವಿಶ್ರುತಾಸ್ತ್ರಿಷು ಲೋಕೇಷು ಸತ್ಯವ್ರತಪರಾಯಣಾಃ।।
ಕ್ರತು ಸಮರಾದ, ಮೂರೂ ಲೋಕಗಳಲ್ಲಿ ವಿಶೃತ ಸತ್ಯವ್ರತಪರಾಯಣ ಸೂರ್ಯನ ಸಹಚಾರಿ ಪುತ್ರರು5 ಕ್ರತುವಿಗೆ ಜನಿಸಿದರು.
01060009a ದಕ್ಷಸ್ತ್ವಜಾಯತಾಂಗುಷ್ಟಾದ್ದಕ್ಷಿಣಾದ್ಭಗವಾನೃಷಿಃ।
01060009c ಬ್ರಹ್ಮಣಃ ಪೃಥಿವೀಪಾಲ ಪುತ್ರಃ ಪುತ್ರವತಾಂ ವರಃ6।।
ಪೃಥಿವೀ ಪಾಲ! ಪುತ್ರರಲ್ಲಿ ಮತ್ತು ಪುತ್ರವಂತರಲ್ಲಿ ಶ್ರೇಷ್ಠ ಭಗವಾನ್ ಋಷಿ ದಕ್ಷನು ಬ್ರಹ್ಮನ ಎಡ ಅಂಗುಷ್ಠದಿಂದ ಜನಿಸಿದನು.
01060010a ವಾಮಾದಜಾಯತಾಂಗುಷ್ಟಾದ್ಭಾರ್ಯಾ ತಸ್ಯ ಮಹಾತ್ಮನಃ।
01060010c ತಸ್ಯಾಂ ಪಂಚಾಶತಂ ಕನ್ಯಾಃ ಸ ಏವಾಜನಯನ್ಮುನಿಃ।।
ಆ ಮಹಾತ್ಮನ ಭಾರ್ಯೆಯು ಅವನ ಬಲ ಅಂಗುಷ್ಠದಿಂದ ಹುಟ್ಟಿದಳು. ಆ ಮುನಿಯು ಅವಳಿಂದ ಐವತ್ತು ಕನ್ಯೆಯರನ್ನು ಪಡೆದನು.
01060011a ತಾಃ ಸರ್ವಾಸ್ತ್ವನವದ್ಯಾಂಗ್ಯಃ ಕನ್ಯಾಃ ಕಮಲಲೋಚನಾಃ।
01060011c ಪುತ್ರಿಕಾಃ ಸ್ಥಾಪಯಾಮಾಸ ನಷ್ಟಪುತ್ರಃ ಪ್ರಜಾಪತಿಃ।।
ಆ ಎಲ್ಲ ಕನ್ಯೆಯರೂ ಅನವದ್ಯಾಂಗಿಯರೂ, ಕಮಲಲೋಚನೆಯರೂ ಆಗಿದ್ದರು. ಪುತ್ರಹೀನನಾಗಿದ್ದ ಪ್ರಜಾಪತಿಯು ಅವರನ್ನೇ ಪುತ್ರಿಕರನ್ನಾಗಿರಿಸಿಕೊಂಡನು7.
01060012a ದದೌ ಸ ದಶ ಧರ್ಮಾಯ ಸಪ್ತವಿಂಶತಿಮಿಂದವೇ।
01060012c ದಿವ್ಯೇನ ವಿಧಿನಾ ರಾಜನ್ಕಶ್ಯಪಾಯ ತ್ರಯೋದಶ।।
ರಾಜನ್! ಅವರಲ್ಲಿ ಹತ್ತು ಕನ್ಯೆಯರನ್ನು ಧರ್ಮನಿಗೆ, ಇಪ್ಪತ್ತೇಳು ಕನ್ಯೆಯರನ್ನು ಚಂದ್ರನಿಗೆ ಮತ್ತು ಹದಿಮೂರು ಕನ್ಯೆಯರನ್ನು ಕಶ್ಯಪನಿಗೆ ದೇವ ವಿಧಿಯಂತೆ ಕೊಟ್ಟನು.
01060013a ನಾಮತೋ ಧರ್ಮಪತ್ನ್ಯಸ್ತಾಃ ಕೀರ್ತ್ಯಮಾನಾ ನಿಬೋಧ ಮೇ।
01060013c ಕೀರ್ತಿರ್ಲಕ್ಷ್ಮೀರ್ಧೃತಿರ್ಮೇಧಾ ಪುಷ್ಟಿಃ ಶ್ರದ್ಧಾ ಕ್ರಿಯಾ ತಥಾ।।
01060014a ಬುದ್ಧಿರ್ಲಜ್ಜಾ ಮತಿಶ್ಚೈವ ಪತ್ನ್ಯೋ ಧರ್ಮಸ್ಯ ತಾ ದಶ।
01060014c ದ್ವಾರಾಣ್ಯೇತಾನಿ ಧರ್ಮಸ್ಯ ವಿಹಿತಾನಿ ಸ್ವಯಂಭುವಾ।।
ನಾನು ಈಗ ಧರ್ಮನ ಪತ್ನಿಗಳ ಹೆಸರುಗಳನ್ನು ಹೇಳುತ್ತೇನೆ, ಕೇಳು. ಕೀರ್ತಿ, ಲಕ್ಷ್ಮಿ, ಧೃತಿ, ಮೇಧಾ, ಪುಷ್ಟಿ, ಶ್ರದ್ಧಾ, ಕ್ರಿಯಾ, ಬುದ್ಧಿ, ಲಜ್ಜಾ, ಮತಿ – ಇವರು ಧರ್ಮನ ಹತ್ತು ಪತ್ನಿಯರು. ಸ್ವಯಂಭು ಬ್ರಹ್ಮನು ಇವರೆಲ್ಲರನ್ನೂ ಧರ್ಮದ್ವಾರಗಳನ್ನಾಗಿ ವಿಹಿಸಿದನು.
01060015a ಸಪ್ತವಿಂಶತಿ ಸೋಮಸ್ಯ ಪತ್ನ್ಯೋ ಲೋಕೇ ಪರಿಶ್ರುತಾಃ।
01060015c ಕಾಲಸ್ಯ ನಯನೇ ಯುಕ್ತಾಃ ಸೋಮಪತ್ನ್ಯಃ ಶುಭವ್ರತಾಃ।
01060015e ಸರ್ವಾ ನಕ್ಷತ್ರಯೋಗಿನ್ಯೋ ಲೋಕಯಾತ್ರಾವಿಧೌ ಸ್ಥಿತಾಃ।।
ಸೋಮನ ಇಪ್ಪತ್ತೇಳು ಪತ್ನಿಯರು ಲೋಕಪರಿಶೃತರಾಗಿದ್ದಾರೆ. ಆ ಶುಭವ್ರತೆ ಸೋಮಪತ್ನಿಯರು ಎಲ್ಲರೂ ಕಾಲದ ಕಣ್ಣುಗಳಾಗಿದ್ದು ನಕ್ಷತ್ರ ಯೋಗಿನಿಯರಾಗಿ ಲೋಕಯಾತ್ರೆಯಲ್ಲಿ ನಿರತರಾಗಿದ್ದಾರೆ.
01060016a ಪಿತಾಮಹೋ ಮುನಿರ್ದೇವಸ್ತಸ್ಯ ಪುತ್ರಃ ಪ್ರಜಾಪತಿಃ।
01060016c ತಸ್ಯಾಷ್ಟೌ ವಸವಃ ಪುತ್ರಾಸ್ತೇಷಾಂ ವಕ್ಷ್ಯಾಮಿ ವಿಸ್ತರಂ।।
ಪಿತಾಮಹ ಬ್ರಹ್ಮನ ಸ್ತನದಿಂದ ಹುಟ್ಟಿದ ಕಾರಣದಿಂದ ಮುನಿ ಧರ್ಮದೇವನು ಅವನ ಪುತ್ರನೆನಿಸಿಕೊಂಡನು. ಪ್ರಜಾಪತಿ ದಕ್ಷನೂ ಬ್ರಹ್ಮನ ಮಗನೇ. ಧರ್ಮನಿಗೆ ದಕ್ಷಕನ್ಯೆಯರಲ್ಲಿ ಎಂಟು ಪುತ್ರರು ಜನಿಸಿದರು – ಅವರೇ ಅಷ್ಟವಸುಗಳು. ಅವರ ಕುರಿತು ವಿಸ್ತಾರವಾಗಿ ಹೇಳುತ್ತೇನೆ.
01060017a ಧರೋ ಧ್ರುವಶ್ಚ ಸೋಮಶ್ಚಾಹಶ್ಚೈವಾನಿಲೋಽನಲಃ।
01060017c ಪ್ರತ್ಯೂಷಶ್ಚ ಪ್ರಭಾಸಶ್ಚ ವಸವೋಽಷ್ಟಾವಿತಿ ಸ್ಮೃತಾಃ।।
ಧರ, ಧೃವ, ಸೋಮ, ಅಹ, ಅನಿಲ, ಅನಲ, ಪ್ರತ್ಯೂಷ, ಮತ್ತು ಪ್ರಭಾಸ ಇವರು ಅಷ್ಟ ವಸುಗಳೆಂದು ಕರೆಯಲ್ಪಟ್ಟಿದ್ದಾರೆ.
01060018a ಧೂಮ್ರಾಯಾಶ್ಚ ಧರಃ ಪುತ್ರೋ ಬ್ರಹ್ಮವಿದ್ಯೋ ಧ್ರುವಸ್ತಥಾ।
01060018c ಚಂದ್ರಮಾಸ್ತು ಮನಸ್ವಿನ್ಯಾಃ ಶ್ವಸಾಯಾಃ ಶ್ವಸನಸ್ತಥಾ।।
ಧರ ಮತ್ತು ಬ್ರಹ್ಮವಿದ ಧೃವರು ಧೂಮ್ರಾಳ ಮಕ್ಕಳು. ಚಂದ್ರನು ಮನಸ್ವಿನಿಯಲ್ಲಿ ಮತ್ತು ಶ್ವಸನನು (ಅನಿಲನು) ಶ್ವಸಳಲ್ಲಿ ಜನಿಸಿದರು.
01060019a ರತಾಯಾಶ್ಚಾಪ್ಯಹಃ ಪುತ್ರಃ ಶಾಂಡಿಲ್ಯಾಶ್ಚ ಹುತಾಶನಃ।
01060019c ಪ್ರತ್ಯೂಷಶ್ಚ ಪ್ರಭಾಸಶ್ಚ ಪ್ರಭಾತಾಯಾಃ ಸುತೌ ಸ್ಮೃತೌ।।
ಅಹನು ರತಳ ಪುತ್ರ. ಹುತಾಶನನು ಶಾಂಡಿಲಿಯ ಪುತ್ರ. ಪ್ರತ್ಯೂಷ ಮತ್ತು ಪ್ರಭಾಸರು ಪ್ರಭಾತಳ ಪುತ್ರರೆಂದು ಹೇಳುತ್ತಾರೆ.
01060020a ಧರಸ್ಯ ಪುತ್ರೋ ದ್ರವಿಣೋ ಹುತಹವ್ಯವಹಸ್ತಥಾ।
01060020c ಧ್ರುವಸ್ಯ ಪುತ್ರೋ ಭಗವಾನ್ಕಾಲೋ ಲೋಕಪ್ರಕಾಲನಃ।।
ದ್ರವಿಣ ಮತ್ತು ಹುತಹವ್ಯಹರು ಧರನ ಪುತ್ರರು. ಲೋಕಪ್ರಕಾಲನ ಭಗವಾನ್ ಕಾಲನು ಧ್ರುವನ ಪುತ್ರ.
01060021a ಸೋಮಸ್ಯ ತು ಸುತೋ ವರ್ಚಾ ವರ್ಚಸ್ವೀ ಯೇನ ಜಾಯತೇ।
01060021c ಮನೋಹರಾಯಾಃ ಶಿಶಿರಃ ಪ್ರಾಣೋಽಥ ರಮಣಸ್ತಥಾ।।
ಸೋಮನಿಗೆ ಮನೋಹರೆಯಲ್ಲಿ ಜನರು ವರ್ಚಸ್ವೀ ಎನಿಸಿಕೊಳ್ಳುವ ವರ್ಚಾ ಎಂಬ ಸುತನಾದನು. ಅನಂತರ ಶಿಶಿರ, ಪ್ರಾಣ ಮತ್ತು ರಮಣರು ಜನಿಸಿದರು.
01060022a ಅಹ್ನಃ ಸುತಃ ಸ್ಮೃತೋ ಜ್ಯೋತಿಃ ಶ್ರಮಃ8 ಶಾಂತಸ್ತಥಾ ಮುನಿಃ।
01060022c ಅಗ್ನೇಃ ಪುತ್ರಃ ಕುಮಾರಸ್ತು ಶ್ರೀಮಾಂಶರವಣಾಲಯಃ।।
01060023a ತಸ್ಯ ಶಾಖೋ ವಿಶಾಖಶ್ಚ ನೈಗಮೇಶಶ್ಚ ಪೃಷ್ಠಜಃ।
01060023c ಕೃತ್ತಿಕಾಭ್ಯುಪಪತ್ತೇಶ್ಚ ಕಾರ್ತ್ತಿಕೇಯ ಇತಿ ಸ್ಮೃತಃ।।
ಅಹನ ಸುತರು ಜ್ಯೋತಿ, ಶ್ರಮ, ಶಾಂತ ಮತ್ತು ಮುನಿ. ಶರವಣಾಲಯ ಶ್ರೀಮಾನ್ ಕುಮಾರನು ಅಗ್ನಿಯ ಪುತ್ರ. ಅವನಿಗೆ ಶಾಖ, ವಿಶಾಖ ಮತ್ತು ಕೊನೆಯವ ನೈಗಮೇಷ ಎನ್ನುವ ತಮ್ಮಂದಿರು9. ಕೃತ್ತಿಕೆಯರಿಂದ ಪೋಷಿಸಲ್ಪಟ್ಟ ಅವನು ಕಾರ್ತಿಕೇಯನೆಂದು ಕರೆಯಲ್ಪಟ್ಟನು.
01060024a ಅನಿಲಸ್ಯ ಶಿವಾ ಭಾರ್ಯಾ ತಸ್ಯಾಃ ಪುತ್ರಃ ಪುರೋಜವಃ10।
01060024c ಅವಿಜ್ಞಾತಗತಿಶ್ಚೈವ ದ್ವೌ ಪುತ್ರಾವನಿಲಸ್ಯ ತು।।
ಅನಿಲನ ಭಾರ್ಯೆ ಶಿವಾ; ಅವರ ಮಕ್ಕಳು ಪುರೋಜವ ಮತ್ತು ಅವಿಜ್ಞಾತಗತಿ. ಇವರು ಅನಿಲನ ಈರ್ವರು ಪುತ್ರರು.
01060025a ಪ್ರತ್ಯೂಷಸ್ಯ ವಿದುಃ ಪುತ್ರಮೃಷಿಂ ನಾಮ್ನಾಥ ದೇವಲಂ।
01060025c ದ್ವೌ ಪುತ್ರೌ ದೇವಲಸ್ಯಾಪಿ ಕ್ಷಮಾವಂತೌ ಮನೀಷಿಣೌ।। ।
ಋಷಿ ದೇವಲನು ಪ್ರತ್ಯೂಷನ ಪುತ್ರನೆಂದು ಹೇಳುತ್ತಾರೆ. ದೇವಲನಿಗೆ ಕ್ಷಮಾವಂತರೂ ವಿದ್ವಾಂಸರೂ ಆದ ಈರ್ವರು ಪುತ್ರರಾದರು.
01060026a ಬೃಹಸ್ಪತೇಸ್ತು ಭಗಿನೀ ವರಸ್ತ್ರೀ ಬ್ರಹ್ಮಚಾರಿಣೀ।
01060026c ಯೋಗಸಿದ್ಧಾ ಜಗತ್ಸರ್ವಮಸಕ್ತಂ ವಿಚರತ್ಯುತ।
01060026e ಪ್ರಭಾಸಸ್ಯ ತು ಭಾರ್ಯಾ ಸಾ ವಸೂನಾಮಷ್ಟಮಸ್ಯ ಹ।।
ಬೃಹಸ್ಪತಿಯ ತಂಗಿ ವರಸ್ತ್ರೀ, ಬ್ರಹ್ಮಚಾರಿಣೀ, ಯೋಗಸಿದ್ಧೆ, ಮತ್ತು ನಿರಾಸಕ್ತಳಾಗಿ ಸರ್ವ ಜಗತ್ತನ್ನೂ ಸಂಚರಿಸಿದವಳು ಎಂಟನೇ ವಸು ಪ್ರಭಾಸನ ಭಾರ್ಯೆಯು.
01060027a ವಿಶ್ವಕರ್ಮಾ ಮಹಾಭಾಗೋ ಜಜ್ಞೇ ಶಿಲ್ಪಪ್ರಜಾಪತಿಃ।
01060027c ಕರ್ತಾ ಶಿಲ್ಪಸಹಸ್ರಾಣಾಂ ತ್ರಿದಶಾನಾಂ ಚ ವರ್ಧಕಿಃ।।
01060028a ಭೂಷಣಾನಾಂ ಚ ಸರ್ವೇಷಾಂ ಕರ್ತಾ ಶಿಲ್ಪವತಾಂ ವರಃ।
01060028c ಯೋ ದಿವ್ಯಾನಿ ವಿಮಾನಾನಿ ದೇವತಾನಾಂ ಚಕಾರ ಹ।।
ಅವರಲ್ಲಿ ಶಿಲ್ಪಪ್ರಜಾಪತಿ, ಸಹಸ್ರ ಶಿಲ್ಪಗಳ ಕರ್ತೃ, ಮೂವತ್ತು ದೇವತೆಗಳ ಶಿಲ್ಪಿ, ಸರ್ವ ಭೂಷಣಗಳ ಕರ್ತ, ಶಿಲ್ಪವಂತರಲ್ಲಿಯೇ ಶ್ರೇಷ್ಠ, ದೇವತೆಗಳ ದಿವ್ಯ ವಿಮಾನಗಳನ್ನು ರಚಿಸಿದ ಮಹಾಭಾಗ ವಿಶ್ವಕರ್ಮನು ಜನಿಸಿದನು.
01060029a ಮನುಷ್ಯಾಶ್ಚೋಪಜೀವಂತಿ ಯಸ್ಯ ಶಿಲ್ಪಂ ಮಹಾತ್ಮನಃ।
01060029c ಪೂಜಯಂತಿ ಚ ಯಂ ನಿತ್ಯಂ ವಿಶ್ವಕರ್ಮಾಣಮವ್ಯಯಂ।।
ಈ ಮಹಾತ್ಮನ ಶಿಲ್ಪದಿಂದ ಉಪಜೀವಿಸುವ ಮನುಷ್ಯರು ನಿತ್ಯನೂ ಅವ್ಯಯನೂ ಆದ ಈ ವಿಶ್ವಕರ್ಮನನ್ನು ಪೂಜಿಸುತ್ತಾರೆ.
01060030a ಸ್ತನಂ ತು ದಕ್ಷಿಣಂ ಭಿತ್ತ್ವಾ ಬ್ರಹ್ಮಣೋ ನರವಿಗ್ರಹಃ।
01060030c ನಿಃಸೃತೋ ಭಗವಾನ್ಧರ್ಮಃ ಸರ್ವಲೋಕಸುಖಾವಹಃ।।
ಸರ್ವಲೋಕಸುಖಕಾರಕ ಭಗವಾನ್ ಧರ್ಮನು ನರರೂಪವನ್ನು ಧರಿಸಿ ಬ್ರಹ್ಮನ ಎಡ ಸ್ತನವನ್ನು ಒಡೆದು ಹೊರಬಂದನು.
01060031a ತ್ರಯಸ್ತಸ್ಯ ವರಾಃ ಪುತ್ರಾಃ ಸರ್ವಭೂತಮನೋಹರಾಃ।
01060031c ಶಮಃ ಕಾಮಶ್ಚ ಹರ್ಷಶ್ಚ ತೇಜಸಾ ಲೋಕಧಾರಿಣಃ।।
ಅವನಿಗೆ ಸರ್ವಭೂತಮನೋಹರ, ತಮ್ಮ ತೇಜಸ್ಸಿನಿಂದ ಲೋಕವನ್ನೆಲ್ಲ ಪರಿಪಾಲಿಸುತ್ತಿರುವ ಮೂವರು ಪುತ್ರರಾದರು: ಶಮ, ಕಾಮ ಮತ್ತು ಹರ್ಷ.
01060032a ಕಾಮಸ್ಯ ತು ರತಿರ್ಭಾರ್ಯಾ ಶಮಸ್ಯ ಪ್ರಾಪ್ತಿರಂಗನಾ।
01060032c ನಂದೀ11 ತು ಭಾರ್ಯಾ ಹರ್ಷಸ್ಯ ಯತ್ರ ಲೋಕಾಃ ಪ್ರತಿಷ್ಠಿತಾಃ।।
ಕಾಮನ ಭಾರ್ಯೆ ರತಿ, ಶಮನ ಅಂಗನೆ ಪ್ರಾಪ್ತಿ, ಮತ್ತು ಹರ್ಷನ ಭಾರ್ಯೆ ನಂದೀ. ಇವರಲ್ಲಿಯೇ ಸಂಪೂರ್ಣಲೋಕಗಳು ಪ್ರತಿಷ್ಠಿತಗೊಂಡಿವೆ.
01060033a ಮರೀಚೇಃ ಕಶ್ಯಪಃ ಪುತ್ರಃ ಕಶ್ಯಪಸ್ಯ ಸುರಾಸುರಾಃ।
01060033c ಜಜ್ಞಿರೇ ನೃಪಶಾರ್ದೂಲ ಲೋಕಾನಾಂ ಪ್ರಭವಸ್ತು ಸಃ।।
ನೃಪಶಾರ್ದೂಲ! ಕಶ್ಯಪನು ಮರೀಚಿಯ ಪುತ್ರ ಮತ್ತು ಕಶ್ಯಪನಿಂದ ಸುರಾಸುರರು ಉತ್ಪನ್ನರಾದರು. ಹೀಗೆ ಕಶ್ಯಪನು ಲೋಕಗಳ ಆದಿ ಕಾರಣನು.
01060034a ತ್ವಾಷ್ಟ್ರೀ ತು ಸವಿತುರ್ಭಾರ್ಯಾ ವಡವಾರೂಪಧಾರಿಣೀ।
01060034c ಅಸೂಯತ ಮಹಾಭಾಗಾ ಸಾಂತರಿಕ್ಷೇಽಶ್ವಿನಾವುಭೌ।।
ಸೂರ್ಯನ ಪತ್ನಿ, ತ್ವಷ್ಟನ ಮಗಳು, ಪರಮ ಸೌಭಾಗ್ಯವತಿ ಸಂಜ್ಞೆಯು ಹೆಣ್ಣು ಕುದುರೆಯ ರೂಪಧಾರಣೆ ಮಾಡಿಕೊಂಡು ಅಂತರಿಕ್ಷದಲ್ಲಿ ಅಶ್ವಿನೀಕುಮಾರರಿಬ್ಬರಿಗೆ ಜನ್ಮವಿತ್ತಳು.
01060035a ದ್ವಾದಶೈವಾದಿತೇಃ ಪುತ್ರಾಃ ಶಕ್ರಮುಖ್ಯಾ ನರಾಧಿಪ।
01060035c ತೇಷಾಮವರಜೋ ವಿಷ್ಣುರ್ಯತ್ರ ಲೋಕಾಃ ಪ್ರತಿಷ್ಠಿತಾಃ।।
ನರಾಧಿಪ! ಶಕ್ರನ ನಾಯಕತ್ವದಲ್ಲಿರುವ ಹನ್ನೆರಡು ಆದಿತ್ಯರಲ್ಲಿ ಯಾರಲ್ಲಿ ಮತ್ತು ಯಾರ ಮೇಲೆ ಲೋಕಗಳೆಲ್ಲವೂ ನಿಂತಿವೆಯೋ ಆ ವಿಷ್ಣುವೇ ಕಿರಿಯವನು.
01060036a ತ್ರಯಸ್ತ್ರಿಂಶತ ಇತ್ಯೇತೇ ದೇವಾಸ್ತೇಷಾಮಹಂ ತವ।
01060036c ಅನ್ವಯಂ ಸಂಪ್ರವಕ್ಷ್ಯಾಮಿ ಪಕ್ಷೈಶ್ಚ ಕುಲತೋ ಗಣಾನ್।।
ಈ ರೀತಿ ನಾನು ಮೂವತ್ಮೂರು12 ದೇವತೆಗಳ ಕುರಿತು ಹೇಳಿದ್ದೇನೆ. ಈಗ ಅವರಿಗೆ ಅನ್ವಯಿಸುವ ಪಕ್ಷ, ಕುಲ ಮತ್ತು ಗಣಗಳ ಕುರಿತು ಹೇಳುತ್ತೇನೆ.
01060037a ರುದ್ರಾಣಾಮಪರಃ ಪಕ್ಷಃ ಸಾಧ್ಯಾನಾಂ ಮರುತಾಂ ತಥಾ।
01060037c ವಸೂನಾಂ ಭಾರ್ಗವಂ ವಿದ್ಯಾದ್ವಿಶ್ವೇದೇವಾಂಸ್ತಥೈವ ಚ।।
ರುದ್ರರ ಒಂದು ಬೇರೆಯೇ ಪಕ್ಷ ಅಥವಾ ಗಣವಿದೆ. ಸಾಧ್ಯ, ಮರುತ್ ಮತ್ತು ವಸುಗಳದ್ದೂ ಬೇರೆ ಬೇರೆ ಗಣಗಳಿವೆ. ಇದೇ ಪ್ರಕಾರ ಭಾರ್ಗವ ಮತ್ತು ವಿಶ್ವೇದೇವಗಣಗಳ ಕುರಿತೂ ತಿಳಿದುಕೊಳ್ಳಬೇಕು.
01060038a ವೈನತೇಯಸ್ತು ಗರುಡೋ ಬಲವಾನರುಣಸ್ತಥಾ।
01060038c ಬೃಹಸ್ಪತಿಶ್ಚ ಭಗವಾನಾದಿತ್ಯೇಷ್ವೇವ ಗಣ್ಯತೇ।।
ವೈನತೇಯ ಗರುಡ, ಬಲವಾನ್ ಅರುಣ, ಮತ್ತು ಭಗವಾನ್ ಬೃಹಸ್ಪತಿ ಇವರು ಆದಿತ್ಯ ಗಣಕ್ಕೆ ಸೇರಿದವರೆಂದು ಪರಿಗಣಿಸುತ್ತಾರೆ.
01060039a ಅಶ್ವಿಭ್ಯಾಂ ಗುಹ್ಯಕಾನ್ವಿದ್ಧಿ ಸರ್ವೌಷಧ್ಯಸ್ತಥಾ ಪಶೂನ್।
01060039c ಏಷ ದೇವಗಣೋ ರಾಜನ್ಕೀರ್ತಿತಸ್ತೇಽನುಪೂರ್ವಶಃ।
01060039e ಯಂ ಕೀರ್ತಯಿತ್ವಾ ಮನುಜಃ ಸರ್ವಪಾಪೈಃ ಪ್ರಮುಚ್ಯತೇ।
ಈರ್ವರು ಅಶ್ವಿನಿಯರು, ಸರ್ವ ಔಷಧಿಗಳು ಮತ್ತು ಪಶುಗಳನ್ನು ಗುಹ್ಯಕರೆಂದು ತಿಳಿ. ರಾಜನ್! ಈ ರೀತಿ ದೇವಗಣಗಳನ್ನು ಕ್ರಮಬದ್ಧವಾಗಿ ಹೇಳಲಾಗಿದೆ. ಇದನ್ನು ಪಠಿಸುವ ಮನುಷ್ಯನು ಸರ್ವಪಾಪಗಳಿಂದ ಮುಕ್ತನಾಗುತ್ತಾನೆ.
01060040a ಬ್ರಹ್ಮಣೋ ಹೃದಯಂ ಭಿತ್ತ್ವಾ ನಿಃಸೃತೋ ಭಗವಾನ್ಭೃಗುಃ।
01060040c ಭೃಗೋಃ ಪುತ್ರಃ ಕವಿರ್ವಿದ್ವಾಂಶುಕ್ರಃ ಕವಿಸುತೋ ಗ್ರಹಃ।।
01060041a ತ್ರೈಲೋಕ್ಯಪ್ರಾಣಯಾತ್ರಾರ್ಥೇ ವರ್ಷಾವರ್ಷೇ ಭಯಾಭಯೇ।
01060041c ಸ್ವಯಂಭುವಾ ನಿಯುಕ್ತಃ ಸನ್ಭುವನಂ ಪರಿಧಾವತಿ।।
ಭಗವಾನ್ ಭೃಗುವು ಬ್ರಹ್ಮನ ಹೃದಯವನ್ನು ಸೀಳಿ ಹೊರಬಂದನು. ಭೃಗುವಿನ ಪುತ್ರ ಕವಿ, ಮತ್ತು ವಿದ್ವಾನ್ ಶುಕ್ರನು ಕವಿಸುತನು. ಶುಕ್ರನು ಗ್ರಹವಾಗಿ ಮೂರೂ ಲೋಕಗಳ ಜೀವನರಕ್ಷಣೆಗೆ ವೃಷ್ಟಿ, ಅನಾವೃಷ್ಟಿ, ಭಯ ಮತ್ತು ಅಭಯಗಳನ್ನು ಹುಟ್ಟಿಸುತ್ತಿರುತ್ತಾನೆ. ಸ್ವಯಂಭು ಬ್ರಹ್ಮನ ಪ್ರೇರಣೆಯಂತೆ ಸಮಸ್ತ ಲೋಕಗಳನ್ನು ಪರಿಭ್ರಮಿಸುತ್ತಿರುತ್ತಾನೆ.
01060042a ಯೋಗಾಚಾರ್ಯೋ ಮಹಾಬುದ್ಧಿರ್ದೈತ್ಯಾನಾಮಭವದ್ಗುರುಃ।
01060042c ಸುರಾಣಾಂ ಚಾಪಿ ಮೇಧಾವೀ ಬ್ರಹ್ಮಚಾರೀ ಯತವ್ರತಃ।।
ಯೋಗಾಚಾರ್ಯ, ಮಹಾಬುದ್ಧಿವಂತ, ಮೇಧವೀ, ಬ್ರಹ್ಮಚಾರಿ, ಮತ್ತು ಯತವ್ರತನಾದ ಅವನು ದೈತ್ಯ ಮತ್ತು ಸುರರ ಗುರುವಾದನು.
01060043a ತಸ್ಮಿನ್ನಿಯುಕ್ತೇ ವಿಭುನಾ ಯೋಗಕ್ಷೇಮಾಯ ಭಾರ್ಗವೇ।
01060043c ಅನ್ಯಮುತ್ಪಾದಯಾಮಾಸ ಪುತ್ರಂ ಭೃಗುರನಿಂದಿತಂ।।
01060044a ಚ್ಯವನಂ ದೀಪ್ತತಪಸಂ ಧರ್ಮಾತ್ಮಾನಂ ಮನೀಷಿಣಂ।
01060044c ಯಃ ಸ ರೋಷಾಚ್ಚ್ಯುತೋ ಗರ್ಭಾನ್ಮಾತುರ್ಮೋಕ್ಷಾಯ ಭಾರತ।।
ಈ ರೀತಿ ವಿಭು ಬ್ರಹ್ಮನು ಭಾರ್ಗವ ಶುಕ್ರನಿಗೆ ಲೋಕಗಳ ಯೋಗಕ್ಷೇಮಕ್ಕೆಂದು ನಿಯುಕ್ತಗೊಳಿಸಲು ಭಾರ್ಗವನು ಇನ್ನೊಬ್ಬ ಪುತ್ರ ಅನಿಂದಿತ ದೀಪ್ತತಪಸ್ವಿ, ಧರ್ಮಾತ್ಮ ಮನೀಷಿಣಿ ಚ್ಯವನನನ್ನು ಪಡೆದನು. ಭಾರತ! ಅವನು ತಾಯಿಯನ್ನು ಬಿಡುಗಡೆಗೊಳಿಸಲು ರೋಷಗೊಂಡಾಗ ಅವಳ ಗರ್ಭದಿಂದ ಚ್ಯುತನಾಗಿದ್ದನು.
01060045a ಆರುಷೀ ತು ಮನೋಃ ಕನ್ಯಾ ತಸ್ಯ ಪತ್ನೀ ಮನೀಷಿಣಃ।
01060045c ಔರ್ವಸ್ತಸ್ಯಾಂ ಸಮಭವದೂರುಂ ಭಿತ್ತ್ವಾ ಮಹಾಯಶಾಃ।
01060045e ಮಹಾತಪಾ ಮಹಾತೇಜಾ ಬಾಲ ಏವ ಗುಣೈರ್ಯುತಃ।।
ಮನುವಿನ ಕನ್ಯೆ ಆರುಷಿಯು ಆ ಮನೀಷಿಣಿಯ ಪತ್ನಿ. ಅವಳ ತೊಡೆಯನ್ನು ಸೀಳಿ ಮಹಾತಪಸ್ವಿ, ಮಹಾತೇಜಸ್ವಿ ಬಾಲ್ಯದಲ್ಲಿಯೇ ಗುಣಯುಕ್ತ ಔರ್ವನು ಜನಿಸಿದನು.
01060046a ಋಚೀಕಸ್ತಸ್ಯ ಪುತ್ರಸ್ತು ಜಮದಗ್ನಿಸ್ತತೋಽಭವತ್।
01060046c ಜಮದಗ್ನೇಸ್ತು ಚತ್ವಾರ ಆಸನ್ಪುತ್ರಾ ಮಹಾತ್ಮನಃ।।
ಔರ್ವನ ಪುತ್ರ ಋಚೀಕ ಮತ್ತು ಋಚೀಕನ ಮಗ ಜಮದಗ್ನಿ. ಮಹಾತ್ಮ ಜಮದಗ್ನಿಗೆ ನಾಲ್ವರು ಪುತ್ರರಿದ್ದರು.
01060047a ರಾಮಸ್ತೇಷಾಂ ಜಘನ್ಯೋಽಭೂದಜಘನ್ಯೈರ್ಗುಣೈರ್ಯುತಃ।
01060047c ಸರ್ವಶಸ್ತ್ರಾಸ್ತ್ರಕುಶಲಃ ಕ್ಷತ್ರಿಯಾಂತಕರೋ ವಶೀ।।
ಅವರಲ್ಲಿ ಕಿರಿಯವನು ರಾಮ. ಆದರೆ ಅವನು ಗುಣಗಳಲ್ಲಿ ಕಿರಿಯವನಿರಲಿಲ್ಲ. ಅವನು ಸರ್ವಶಸ್ತ್ರಾಸ್ತ್ರ ಕುಶಲನೂ, ಕ್ಷತ್ರಿಯಾಂತಕನೂ ಮತ್ತು ಜಿತೇಂದ್ರಿಯನೂ ಆಗಿದ್ದನು.
01060048a ಔರ್ವಸ್ಯಾಸೀತ್ಪುತ್ರಶತಂ ಜಮದಗ್ನಿಪುರೋಗಮಂ।
01060048c ತೇಷಾಂ ಪುತ್ರಸಹಸ್ರಾಣಿ ಬಭೂವುರ್ಭೃಗುವಿಸ್ತರಃ।।
ಔರ್ವನ ನೂರು ಪುತ್ರರಲ್ಲಿ ಜಮದಗ್ನಿಯು ಹಿರಿಯವನಾಗಿದ್ದನು. ಅವರಿಗೆ ಸಹಸ್ರಾರು ಪುತ್ರರಿದ್ದು ಭೃಗುಕುಲವು ವಿಸ್ತಾರವಾಯಿತು.
01060049a ದ್ವೌ ಪುತ್ರೌ ಬ್ರಹ್ಮಣಸ್ತ್ವನ್ಯೌ ಯಯೋಸ್ತಿಷ್ಠತಿ ಲಕ್ಷಣಂ।
01060049c ಲೋಕೇ ಧಾತಾ ವಿಧಾತಾ ಚ ಯೌ ಸ್ಥಿತೌ ಮನುನಾ ಸಹ।।
ಬ್ರಹ್ಮನಿಗೆ ಅನ್ಯ ಎರಡು ಪುತ್ರರಿದ್ದರು - ಧಾತಾ ಮತ್ತು ವಿಧಾತ - ಅವರ ಸೃಷ್ಟಿರೂಪ ರಕ್ಷಣೆಗಳು ಲೋಕದಲ್ಲಿ ಸದಾ ದೊರೆಯುತ್ತಿರುತ್ತವೆ. ಇವರು ಮನುವಿನ ಸಂಗಡ ಇರುತ್ತಾರೆ.
01060050a ತಯೋರೇವ ಸ್ವಸಾ ದೇವೀ ಲಕ್ಷ್ಮೀಃ ಪದ್ಮಗೃಹಾ ಶುಭಾ।
01060050c ತಸ್ಯಾಸ್ತು ಮಾನಸಾಃ ಪುತ್ರಾಸ್ತುರಗಾ ವ್ಯೋಮಚಾರಿಣಃ।।
ಅವರ ತಂಗಿಯೇ ದೇವಿ ಪದ್ಮಗೃಹೆ, ಶುಭೆ ಲಕ್ಷ್ಮಿ. ಅವಳ ಮಾನಸ ಪುತ್ರರು ಆಕಾಶಚಾರಿಣಿ ತುರಗಗಳು.
01060051a ವರುಣಸ್ಯ ಭಾರ್ಯಾ ಜ್ಯೇಷ್ಠಾ ತು ಶುಕ್ರಾದ್ದೇವೀ ವ್ಯಜಾಯತ।
01060051c ತಸ್ಯಾಃ ಪುತ್ರಂ ಬಲಂ ವಿದ್ಧಿ ಸುರಾಂ ಚ ಸುರನಂದಿನೀಂ।।
ಶುಕ್ರನಲ್ಲಿ ಜನಿಸಿದ ದೇವಿಯು ವರುಣನ ಹಿರಿಯ ಹೆಂಡತಿ. ಅವಳು ಬಲ ಎನ್ನುವ ಪುತ್ರನಿಗೂ ಮತ್ತು ಸುರನಂದಿನಿಯಾದ ಸುರಾ ಎನ್ನುವ ಮಗಳಿಗೂ ಜನ್ಮವಿತ್ತಳು.
01060052a ಪ್ರಜಾನಾಮನ್ನಕಾಮಾನಾಮನ್ಯೋನ್ಯಪರಿಭಕ್ಷಣಾತ್।
01060052c ಅಧರ್ಮಸ್ತತ್ರ ಸಂಜಾತಃ ಸರ್ವಭೂತವಿನಾಶನಃ।।
ಅನ್ನಕಾಮಿ ಪ್ರಜೆಗಳು ಅನ್ಯೋನ್ಯರನ್ನು ಭಕ್ಷಿಸುವ ಸಮಯದಲ್ಲಿ ಸರ್ವ ಭೂತವಿನಾಶಕ ಅಧರ್ಮನ ಜನ್ಮವಾಯಿತು.
01060053a ತಸ್ಯಾಪಿ ನಿರೃತಿರ್ಭಾರ್ಯಾ ನೈರೃತಾ ಯೇನ ರಾಕ್ಷಸಾಃ।
01060053c ಘೋರಾಸ್ತಸ್ಯಾಸ್ತ್ರಯಃ ಪುತ್ರಾಃ ಪಾಪಕರ್ಮರತಾಃ ಸದಾ।
01060053e ಭಯೋ ಮಹಾಭಯಶ್ಚೈವ ಮೃತ್ಯುರ್ಭೂತಾಂತಕಸ್ತಥಾ।।
ಅವನ ಭಾರ್ಯೆಯು ನಿರೃತಿ ಮತ್ತು ಅವಳಲ್ಲಿ ನೈರೃತರೆಂಬ ರಾಕ್ಷಸರು ಹುಟ್ಟಿದರು. ಅವಳಿಗೆ ಸದಾ ಪಾಪಕರ್ಮರತ ಮೂವರು ಘೋರ ಪುತ್ರರಿದ್ದರು: ಭಯ, ಮಹಾಭಯ, ಮತ್ತು ಭೂತಾಂತಕ ಮೃತ್ಯು.
01060054a ಕಾಕೀಂ ಶ್ಯೇನೀಂ ಚ ಭಾಸೀಂ ಚ ಧೃತರಾಷ್ಟ್ರೀಂ ತಥಾ ಶುಕೀಂ।
01060054c ತಾಮ್ರಾ ತು ಸುಷುವೇ ದೇವೀ ಪಂಚೈತಾ ಲೋಕವಿಶ್ರುತಾಃ।।
ದೇವೀ ತಾಮ್ರಾ ಐದು ಲೋಕವಿಶ್ರುತ ಕನ್ಯೆಯರಿಗೆ ಜನ್ಮವಿತ್ತಳು: ಕಾಕೀ, ಶ್ಯೇನೀ, ಭಾಸೀ, ಧೃತರಾಷ್ಟ್ರೀ ಮತ್ತು ಶುಕೀ.
01060055a ಉಲೂಕಾನ್ಸುಷುವೇ ಕಾಕೀ ಶ್ಯೇನೀ ಶ್ಯೇನಾನ್ವ್ಯಜಾಯತ।
01060055c ಭಾಸೀ ಭಾಸಾನಜನಯದ್ಗೃಧ್ರಾಂಶ್ಚೈವ ಜನಾಧಿಪ।।
ಜನಾಧಿಪ! ಕಾಕಿಯು ಉಲೂಕಗಳಿಗೆ (ಗೂಬೆಗಳಿಗೆ) ಜನ್ಮವಿತ್ತಳು, ಶ್ಯೇನಿಯು ಗಿಡುಗಗಳಿಗೆ ಜನ್ಮವಿತ್ತಳು, ಮತ್ತು ಬಾಸಿಯು ಹದ್ದುಗಳೇ ಮೊದಲಾದ ಪಕ್ಷಿಗಳಿಗೆ ಜನ್ಮವಿತ್ತಳು.
01060056a ಧೃತರಾಷ್ಟ್ರೀ ತು ಹಂಸಾಂಶ್ಚ ಕಲಹಂಸಾಂಶ್ಚ ಸರ್ವಶಃ।
01060056c ಚಕ್ರವಾಕಾಂಶ್ಚ ಭದ್ರಂ ತೇ ಪ್ರಜಜ್ಞೇ ಸಾ ತು ಭಾಮಿನೀ।।
ನಿನಗೆ ಮಂಗಳವಾಗಲಿ! ಭಾಮಿನಿ ಧೃತರಾಷ್ಟ್ರಿಯು ಸರ್ವ ಹಂಸ, ಕೊಕ್ಕರೆಗಳು ಮತ್ತು ಚಕ್ರವಾಕಗಳಿಗೆ ಜನ್ಮವಿತ್ತಳು.
01060057a ಶುಕೀ ವಿಜಜ್ಞೇ ಧರ್ಮಜ್ಞ ಶುಕಾನೇವ ಮನಸ್ವಿನೀ।
01060057c ಕಲ್ಯಾಣಗುಣಸಂಪನ್ನಾ ಸರ್ವಲಕ್ಷಣಪೂಜಿತಾ।।
ಧರ್ಮಜ್ಞ! ಮನಸ್ವಿನಿ, ಕಲ್ಯಾಣಗುಣಸಂಪನ್ನೆ ಸರ್ವಲಕ್ಷಣಪೂಜಿತೆ ಶುಕಿಯು ಗಿಳಿಗಳಿಗೆ ಜನ್ಮವಿತ್ತಳು.
01060058a ನವ ಕ್ರೋಧವಶಾ ನಾರೀಃ ಪ್ರಜಜ್ಞೇಽಪ್ಯಾತ್ಮಸಂಭವಾಃ।
01060058c ಮೃಗೀಂ ಚ ಮೃಗಮಂದಾಂ ಚ ಹರಿಂ ಭದ್ರಮನಾಮಪಿ।।
01060059a ಮಾತಂಗೀಮಥ ಶಾರ್ದೂಲೀಂ ಶ್ವೇತಾಂ ಸುರಭಿಮೇವ ಚ।
01060059c ಸರ್ವಲಕ್ಷಣಸಂಪನ್ನಾಂ ಸುರಸಾಂ ಚ ಯಶಸ್ವಿನೀಂ।।
01060060a ಅಪತ್ಯಂ ತು ಮೃಗಾಃ ಸರ್ವೇ ಮೃಗ್ಯಾ ನರವರಾತ್ಮಜ।
01060060c ಋಕ್ಷಾಶ್ಚ ಮೃಗಮಂದಾಯಾಃ ಸೃಮರಾಶ್ಚಮರಾ ಅಪಿ।।
ಅವಳಲ್ಲಿ ಒಂಭತ್ತು ಆತ್ಮಸಂಭವ ಕ್ರೋಧವಶ ನಾರಿಯರು ಹುಟ್ಟಿದರು: ಮೃಗೀ, ಮೃಗಮಂದಾ, ಹರಿ, ಭದ್ರಮನಾ, ಮಾತಂಗೀ, ಶಾರ್ದೂಲೀ, ಶ್ವೇತಾ, ಮತ್ತು ಸುರಭಿ. ನರವರಾತ್ಮಜ! ಸರ್ವಲಕ್ಷಣಸಂಪನ್ನೆ ಯಶಸ್ವಿನಿ ಮೃಗಳ ಮಗಳೇ ಸರ್ವ ಜಿಂಕೆಗಳ ಮೂಲ. ಕರಡಿ, ಸೃಮರ, ಮತ್ತು ಚಮರಗಳು ಮೃಗಮಂದಳ ಮಕ್ಕಳು.
01060061a ತತಸ್ತ್ವೈರಾವತಂ ನಾಗಂ ಜಜ್ಞೇ ಭದ್ರಮನಾ ಸುತಂ।
01060061c ಐರಾವತಃ ಸುತಸ್ತಸ್ಯಾ ದೇವನಾಗೋ ಮಹಾಗಜಃ।।
ಆನೆ ಐರಾವತವು ಭದ್ರಮನಾಳ ಮಗನಾಗಿ ಹುಟ್ಟಿದನು. ಮಹಾಗಜ, ದೇವನಾಗ ಐರಾವತನು ಅವಳ ಮಗ.
01060062a ಹರ್ಯಾಶ್ಚ ಹರಯೋಽಪತ್ಯಂ ವಾನರಾಶ್ಚ ತರಸ್ವಿನಃ।
01060062c ಗೋಲಾಂಗೂಲಾಂಶ್ಚ ಭದ್ರಂ ತೇ ಹರ್ಯಾಃ ಪುತ್ರಾನ್ಪ್ರಚಕ್ಷತೇ।।
ಹರಿಯಲ್ಲಿ ಕುದುರೆಗಳು ಮತ್ತು ತರಸ್ವಿ ವಾನರರು ಜನಿಸಿದರು. ಗೋಲಾಂಗೂಲಗಳೂ ಹರಿಯ ಪುತ್ರರೆಂದೇ ತಿಳಿ. ನಿನಗೆ ಮಂಗಳವಾಗಲಿ!
01060063a ಪ್ರಜಜ್ಞೇ ತ್ವಥ ಶಾರ್ದೂಲೀ ಸಿಂಹಾನ್ವ್ಯಾಘ್ರಾಂಶ್ಚ ಭಾರತ।
01060063c ದ್ವೀಪಿನಶ್ಚ ಮಹಾಭಾಗ ಸರ್ವಾನೇವ ನ ಸಂಶಯಃ।।
ಮಹಾಭಾಗ ಭಾರತ! ನಿಸ್ಸಂಶಯವಾಗಿ ಶಾರ್ದೂಲಿಯಲ್ಲಿ ಸಿಂಹ, ವ್ಯಾಘ್ರ ಮತ್ತು ಸರ್ವ ಚಿರತೆಗಳೂ ಜನಿಸಿದರು.
01060064a ಮಾತಂಗ್ಯಾಸ್ತ್ವಥ ಮಾತಂಗಾ ಅಪತ್ಯಾನಿ ನರಾಧಿಪ।
01060064c ದಿಶಾಗಜಂ ತು ಶ್ವೇತಾಖ್ಯಂ ಶ್ವೇತಾಜನಯದಾಶುಗಂ।।
ನರಾಧಿಪ! ಆನೆಗಳೆಲ್ಲವೂ ಮಾತಂಗಿಯ ಮಕ್ಕಳು. ವೇಗವಂತನಾದ ದಿಗ್ಗಜ ಶ್ವೇತನು ಶ್ವೇತಳ ಮಗನೆಂದು ಹೇಳುತ್ತಾರೆ.
01060065a ತಥಾ ದುಹಿತರೌ ರಾಜನ್ಸುರಭಿರ್ವೈ ವ್ಯಜಾಯತ।
01060065c ರೋಹಿಣೀಂ ಚೈವ ಭದ್ರಂ ತೇ ಗಂಧರ್ವೀಂ ಚ ಯಶಸ್ವಿನೀಂ।
ರಾಜನ್! ಸುರಭಿಗೆ ಈರ್ವರು ಪುತ್ರಿಯರು ಜನಿಸಿದರು: ರೋಹಿಣೀ ಮತ್ತು ಯಶಸ್ವಿನಿ ಗಂಧರ್ವೀ.
01060065e ರೋಹಿಣ್ಯಾಂ ಜಜ್ಞಿರೇ ಗಾವೋ ಗಂಧರ್ವ್ಯಾಂ ವಾಜಿನಃ ಸುತಾಃ।।
01060066a ಸುರಸಾಜನಯನ್ನಾಗಾನ್ರಾಜನ್ಕದ್ರೂಶ್ಚ ಪನ್ನಗಾನ್।
ರೋಹಿಣಿಯಲ್ಲಿ ಗೋವುಗಳು ಹುಟ್ಟಿದವು ಮತ್ತು ಕುದುರೆಗಳು ಗಂಧರ್ವಿಯ ಮಕ್ಕಳು. ರಾಜನ್! ಸುರಸೆಯಲ್ಲಿ ನಾಗಗಳು ಮತ್ತು ಕದ್ರುವಿನಲ್ಲಿ ಪನ್ನಗಗಳು ಜನಿಸಿದರು.
01060066c ಸಪ್ತ ಪಿಂಡಫಲಾನ್ವೃಕ್ಷಾನನಲಾಪಿ ವ್ಯಜಾಯತ।
01060066e ಅನಲಾಯಾಃ ಶುಕೀ ಪುತ್ರೀ ಕದ್ರ್ವಾಸ್ತು ಸುರಸಾ ಸುತಾ।।
ಅನಲಳು ಏಳು ರೀತಿಯ ಪಿಂಡಫಲಗಳನ್ನು ನೀಡುವ ವೃಕ್ಷಗಳಿಗೆ ಜನ್ಮವಿತ್ತಳು. ಶುಕಿಯು ಅನಲೆಯ ಮಗಳು ಮತ್ತು ಸುರಸೆಯು ಕದ್ರುವಿನ ಸುತೆ.
01060067a ಅರುಣಸ್ಯ ಭಾರ್ಯಾ ಶ್ಯೇನೀ ತು ವೀರ್ಯವಂತೌ ಮಹಾಬಲೌ।
01060067c ಸಂಪಾತಿಂ ಜನಯಾಮಾಸ ತಥೈವ ಚ ಜಟಾಯುಷಂ।
01060067e ದ್ವೌ ಪುತ್ರೌ ವಿನತಾಯಾಸ್ತು ವಿಖ್ಯಾತೌ ಗರುಡಾರುಣೌ।। ।
ಅರುಣನ ಭಾರ್ಯೆ ಶ್ಯೇನಿಯು ವೀರ್ಯವಂತರೂ ಮಹಾಬಲಿಗಳೂ ಆದ ಸಂಪಾತಿ ಮತ್ತು ಜಟಾಯುಗಳಿಗೆ ಜನ್ಮವಿತ್ತಳು. ವಿನತೆಯ ಮಕ್ಕಳಾದ ಗರುಡ ಮತ್ತು ಅರುಣ ಈರ್ವರೂ ವಿಖ್ಯಾತರು.
01060068a ಇತ್ಯೇಷ ಸರ್ವಭೂತಾನಾಂ ಮಹತಾಂ ಮನುಜಾಧಿಪ।
01060068c ಪ್ರಭವಃ ಕೀರ್ತಿತಃ ಸಮ್ಯಙ್ಮಯಾ ಮತಿಮತಾಂ ವರ।।
ಮತಿವಂತರಲ್ಲಿ ಶ್ರೇಷ್ಠ ಮನುಜಾಧಿಪ! ಈ ಸರ್ವ ಮಹಾಭೂತಗಳ ಹುಟ್ಟನ್ನು ಸಂಪೂರ್ಣವಾಗಿ ವಿವರಿಸಿದ್ದೇನೆ.
01060069a ಯಂ ಶ್ರುತ್ವಾ ಪುರುಷಃ ಸಮ್ಯಕ್ಪೂತೋ ಭವತಿ ಪಾಪ್ಮನಃ।
01060069c ಸರ್ವಜ್ಞತಾಂ ಚ ಲಭತೇ ಗತಿಮಗ್ರ್ಯಾಂ ಚ ವಿಂದತಿ।।
ಇದನ್ನು ಕೇಳಿದ ಪುರುಷನು ಪಾಪಗಳನ್ನು ತೊಳೆದು ಪುಣ್ಯವಂತನಾಗುತ್ತಾನೆ. ಇದನ್ನೆಲ್ಲ ತಿಳಿದವನಿಗೆ ಉತ್ತಮ ಗತಿಯು ದೊರೆಯುತ್ತದೆ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಆದಿವಂಶಾವತರಣಪರ್ವಣಿ ಷಷ್ಟಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಆದಿವಂಶಾವತರಣ ಪರ್ವದಲ್ಲಿ ಅರವತ್ತನೆಯ ಅಧ್ಯಾಯವು.
-
ಸರ್ಪಶ್ಚ ಎಂಬ ಪಾಠಾಂತರವಿದೆ (ನೀಲಕಂಠ). ↩︎
-
ಬೃಹಸ್ಪತಿ ಮತ್ತು ಸಂವರ್ತರ ನಡುವಿನ ಪೈಪೋಟಿ ಮತ್ತು ಸಂವರ್ತನು ಮರುತ್ತನ ಯಜ್ಞವನ್ನು ಮಾಡಿಸುವ ಕಥೆಯನ್ನು ಮಹಾಭಾರತದ ಅಶ್ವಮೇಧಿಕ ಪರ್ವದಲ್ಲಿ ವ್ಯಾಸನು ಯುಧಿಷ್ಠಿರನಿಗೆ ಹೇಳುತ್ತಾನೆ. ↩︎
-
ನೀಲಕಂಠೀಯದಲ್ಲಿ ಇಲ್ಲಿ ಯಕ್ಷರೂ ಕೂಡ ಪುಲಸ್ತ್ಯನ ಸಂತಾನವೆಂದು ಸೂಚಿಸುವ ಈ ಶ್ಲೋಕಾರ್ಧವಿದೆ: ಯಕ್ಷಾಶ್ಚ ಮನುಜವ್ಯಾಘ್ರ ಪುತ್ರಾಸ್ತಸ್ಯ ಚ ಧೀಮತಃ। ↩︎
-
ಪುಲಹಸ್ಯ ಸುತಾ ರಾಜನ್ ಶರಭಾಶ್ಚ ಪ್ರಕೀರ್ತಿತಾಃ। ಸಿಂಹಾಃ ಕಿಂಪುರುಷಾವ್ಯಾಘ್ರಾ ಋಕ್ಷಾ ಈಹಾಮೃಗಸ್ತಥಾ।। ಎಂಬ ಪಾಠಾಂತರವಿದೆ (ನೀಲಕಂಠ). ↩︎
-
ಇವರೇ ವಾಲಖಿಲ್ಯರು ಮತ್ತು ಇವರ ಸಂಖ್ಯೆ ಅರವತ್ತು ಸಾವಿರ ಎಂದು ಗೋರಖಪುರದ ಗೀತಾ ಪ್ರೆಸ್ ಸಂಪುಟದಲ್ಲಿದೆ. ↩︎
-
ಶಾಂತಾತ್ಮಾ ಸುಮಹಾತಪಾಃ ಎಂಬ ಪಾಠಾಂತರವಿದೆ (ನೀಲಕಂಠ). ↩︎
-
ಮತ್ತು ಅವರ ವಿವಾಹ ಕಾರ್ಯವನ್ನೂ ಪುತ್ರಿಕಾ ಧರ್ಮವನ್ನು ಅನುಸರಿಸಿಯೇ ಮಾಡಿದನು. ಮನುಸ್ಮೃತಿಯಲ್ಲಿ ದಕ್ಷನೇ ಪುತ್ರಿಕಾ-ವಿಧಿಯ ಪ್ರವರ್ತಕನೆಂದು ಹೇಳಲ್ಪಟ್ಟಿದೆ. ಪುತ್ರಿಕಾ ವಿಧಿಯ ಲಕ್ಷಣವನ್ನು ಹೀಗೆ ವರ್ಣಿಸಲಾಗಿದೆ: ಅಪುತ್ರೋಽನೇನ ವಿಧಿನಾ ಸುತಾಂ ಕುರ್ವೀತ ಪುತ್ರಿಕಾಮ್। ಯದಪತ್ಯಂ ಭವೇದಸ್ಯಾಂ ತನ್ಮಮ ಸ್ಯಾತ್ ಸ್ವಧಾಕರಮ್।। ಅರ್ಥಾತ್ ಯಾರಿಗೆ ಪುತ್ರನಿಲ್ಲವೋ ಅವನು ಈ ವಿಧಿಯಲ್ಲಿ ತನ್ನ ಪುತ್ರಿಯನ್ನು ಪುತ್ರಿಕೆಯನ್ನಾಗಿ ಮಾಡಿಕೊಳ್ಳಬಹುದು: ಈ ಕನ್ಯೆಯ ಗರ್ಭದಲ್ಲಿ ಹುಟ್ಟುವ ಬಾಲಕನು ನನ್ನ ಶ್ರಾದ್ಧಾದಿ ಕರ್ಮಗಳನ್ನು ಮಾಡುವ ಪುತ್ರರೂಪಿಯಾಗಲಿ ಎಂದು ಸಂಕಲ್ಪಮಾಡಿಕೊಳ್ಳಬೇಕು.(ಮನುಸ್ಮೃತಿ 9:127). ↩︎
-
ಶಮಃ ಎಂಬ ಪಾಠಾಂತರವಿದೆ (ನೀಲಕಂಠ). ↩︎
-
ಕೆಲವು ಪುರಾಣಗಳಲ್ಲಿ ಶಾಖ, ವಿಶಾಖ ಮತ್ತು ನೈಗಮೇಯ – ಈ ಮೂರೂ ಕಾರ್ತಿಕೇಯನದ್ದೇ ಹೆಸರುಗಳೆಂದು ಹೇಳುತ್ತಾರೆ. ಕೆಲವೊಂದು ಕಡೆ ಈ ಮೂವರು ಕಾರ್ತಿಕೇಯನ ಮಕ್ಕಳೆಂದು ಹೇಳಲಾಗಿದೆ. ಕಲ್ಪಭೇದದಿಂದಾಗಿ ಇವೆಲ್ಲವೂ ಸರಿಯಾಗಿದ್ದಿರಬಹುದು (ಗೋರಖಪುರ ಗೀತಾ ಪ್ರೆಸ್ ಸಂಪುಟ). ↩︎
-
ಮನೋಜವಃ ಎಂಬ ಪಾಠಾಂತರವಿದೆ (ನೀಲಕಂಠ). ↩︎
-
ನಂದಾ ಎಂಬ ಪಾಠಾಂತರವಿದೆ (ನೀಲಕಂಠ). ↩︎
-
ಎಂಟು ವಸುಗಳು, ಹನ್ನೊಂದು ರುದ್ರರು, ಹನ್ನೆರಡು ಆದಿತ್ಯರು, ಪ್ರಜಾಪತಿ ಮತ್ತು ವಷಟ್ಕಾರ – ಇವರೇ ಮೂವತ್ಮೂರು ದೇವತೆಗಳು. ↩︎