ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಆದಿವಂಶಾವತರಣ ಪರ್ವ
ಅಧ್ಯಾಯ 59
ಸಾರ
ಆದಿವಂಶಾವಳಿ (1-54)1.
01059001 ವೈಶಂಪಾಯನ ಉವಾಚ।
01059001a ಅಥ ನಾರಾಯಣೇನೇಂದ್ರಶ್ಚಕಾರ ಸಹ ಸಂವಿದಂ।
01059001c ಅವತರ್ತುಂ ಮಹೀಂ ಸ್ವರ್ಗಾದಂಶತಃ ಸಹಿತಃ ಸುರೈಃ।।
ವೈಶಂಪಾಯನನು ಹೇಳಿದನು: “ಆಗ ಇಂದ್ರನು ನಾರಾಯಣನಲ್ಲಿ “ಸುರರೊಂದಿಗೆ ಸ್ವರ್ಗದಿಂದ ಭೂಮಿಗಿಳಿದು ನಮ್ಮ ನಮ್ಮ ಅಂಶಗಳಿಂದ ಅವತರಿಸಿತೋಣ!” ಎಂದು ಒಪ್ಪಂದ ಮಾಡಿಕೊಂಡನು.
01059002a ಆದಿಶ್ಯ ಚ ಸ್ವಯಂ ಶಕ್ರಃ ಸರ್ವಾನೇವ ದಿವೌಕಸಃ।
01059002c ನಿರ್ಜಗಾಮ ಪುನಸ್ತಸ್ಮಾತ್ ಕ್ಷಯಾನ್ನಾರಾಯಣಸ್ಯ ಹ।।
ಸ್ವಯಂ ಶಕ್ರನೇ ಸರ್ವ ದಿವೌಕಸರಿಗೆ ಆದೇಶವನ್ನಿತ್ತು ನಾರಾಯಣನ ನಿವಾಸದಿಂದ ಹಿಂದಿರುಗಿದನು.
01059003a ತೇಽಮರಾರಿವಿನಾಶಾಯ ಸರ್ವಲೋಕಹಿತಾಯ ಚ।
01059003c ಅವತೇರುಃ ಕ್ರಮೇಣೇಮಾಂ ಮಹೀಂ ಸ್ವರ್ಗಾದ್ದಿವೌಕಸಃ।।
ಅಮರ ಶತ್ರುಗಳ ವಿನಾಶಕ್ಕಾಗಿ ಮತ್ತು ಸರ್ವಲೋಕಹಿತಕ್ಕಾಗಿ ದಿವೌಕಸರು ಕ್ರಮೇಣವಾಗಿ ಸ್ವರ್ಗದಿಂದ ಭೂಮಿಗಿಳಿದರು.
01059004a ತತೋ ಬ್ರಹ್ಮರ್ಷಿವಂಶೇಷು ಪಾರ್ಥಿವರ್ಷಿಕುಲೇಷು ಚ।
01059004c ಜಜ್ಞಿರೇ ರಾಜಶಾರ್ದೂಲ ಯಥಾಕಾಮಂ ದಿವೌಕಸಃ।।
ರಾಜಶಾರ್ದೂಲ! ದಿವೌಕಸರು ಅವರಿಗಿಷ್ಟವಾದಂತೆ ಬ್ರಹ್ಮರ್ಷಿ ವಂಶಗಳಲ್ಲಿ ಮತ್ತು ರಾಜರ್ಷಿ ಕುಲಗಳಲ್ಲಿ ಜನ್ಮತಾಳಿದರು.
01059005a ದಾನವಾನ್ರಾಕ್ಷಸಾಂಶ್ಚೈವ ಗಂಧರ್ವಾನ್ಪನ್ನಗಾಂಸ್ತಥಾ।
01059005c ಪುರುಷಾದಾನಿ ಚಾನ್ಯಾನಿ ಜಘ್ನುಃ ಸತ್ತ್ವಾನ್ಯನೇಕಶಃ।।
ಅವರು ಅನೇಕ ಸಂಖ್ಯೆಗಳಲ್ಲಿ ದಾನವ, ರಾಕ್ಷಸ, ಗಂಧರ್ವ, ನಾಗ ಮತ್ತು ಇತರ ನರಭಕ್ಷಕರನ್ನು ಸಂಹರಿಸಿದರು.
01059006a ದಾನವಾ ರಾಕ್ಷಸಾಶ್ಚೈವ ಗಂಧರ್ವಾಃ ಪನ್ನಗಾಸ್ತಥಾ।
01059006c ನ ತಾನ್ಬಲಸ್ಥಾನ್ಬಾಲ್ಯೇಽಪಿ ಜಘ್ನುರ್ಭರತಸತ್ತಮ।।
ಭರತಸತ್ತಮ! ದಾನವರಿಗಾಗಲೀ ರಾಕ್ಷಸರಿಗಾಗಲೀ ಗಂಧರ್ವರಿಗಾಗಲೀ ಅಥವಾ ನಾಗಗಳಿಗಾಗಲೀ ಬಲಶಾಲಿಗಳಾದ ಅವರನ್ನು ಬಾಲ್ಯದಲ್ಲಿಯೂ ಕೊಲ್ಲಲಿಕ್ಕಾಗಲಿಲ್ಲ.”
01059007 ಜನಮೇಜಯ ಉವಾಚ।
01059007a ದೇವದಾನವಸಂಘಾನಾಂ ಗಂಧರ್ವಾಪ್ಸರಸಾಂ ತಥಾ।
01059007c ಮಾನವಾನಾಂ ಚ ಸರ್ವೇಷಾಂ ತಥಾ ವೈ ಯಕ್ಷರಕ್ಷಸಾಂ।।
01059008a ಶ್ರೋತುಮಿಚ್ಛಾಮಿ ತತ್ತ್ವೇನ ಸಂಭವಂ ಕೃತ್ಸ್ನಮಾದಿತಃ।
01059008c ಪ್ರಾಣಿನಾಂ ಚೈವ ಸರ್ವೇಷಾಂ ಸರ್ವಶಃ ಸರ್ವವಿದ್ಧ್ಯಸಿ।।
ಜನಮೇಜಯನು ಹೇಳಿದನು: “ದೇವದಾನವರ ಗುಂಪುಗಳ, ಗಂಧರ್ವ-ಅಪ್ಸರೆಯರ, ಮಾನವರ, ಯಕ್ಷರಾಕ್ಷಸರ ಮತ್ತು ಸರ್ವ ಪಾಣಿಗಳೆಲ್ಲರ ಹುಟ್ಟನ್ನು ಪ್ರಾರಂಭದಿಂದ - ಎಲ್ಲರ ಎಲ್ಲವನ್ನೂ ತಿಳಿದ ನಿನ್ನಿಂದ ಕೇಳಲು ಬಯಸುತ್ತೇನೆ.”
01059009 ವೈಶಂಪಾಯನ ಉವಾಚ।
01059009a ಹಂತ ತೇ ಕಥಯಿಷ್ಯಾಮಿ ನಮಸ್ಕೃತ್ವಾ ಸ್ವಯಂಭುವೇ।
01059009c ಸುರಾದೀನಾಮಹಂ ಸಮ್ಯಗ್ಲೋಕಾನಾಂ ಪ್ರಭವಾಪ್ಯಯಂ।।
ವೈಶಂಪಾಯನನು ಹೇಳಿದನು: “ಸ್ವಯಂಭುವಿಗೆ ನಮಸ್ಕರಿಸಿ ಸುರರೇ ಮೊದಲಾಗಿ ಲೋಕದ ಎಲ್ಲರ ಹುಟ್ಟನ್ನು ಹೇಳುತ್ತೇನೆ.
01059010a ಬ್ರಹ್ಮಣೋ ಮಾನಸಾಃ ಪುತ್ರಾ ವಿದಿತಾಃ ಷಣ್ಮಹರ್ಷಯಃ।
01059010c ಮರೀಚಿರತ್ರ್ಯಂಗಿರಸೌ ಪುಲಸ್ತ್ಯಃ ಪುಲಹಃ ಕ್ರತುಃ।।
ಮರೀಚಿ, ಅತ್ರಿ, ಅಂಗೀರಸ, ಪುಲಸ್ತ್ಯ, ಪುಲಹ ಮತ್ತು ಕ್ರತು ಈ ಆರು ಮಹರ್ಷಿಗಳು ಬ್ರಹ್ಮನ ಮಾನಸಪುತ್ರರೆಂದು ಹೇಳುತ್ತಾರೆ2.
01059011a ಮರೀಚೇಃ ಕಶ್ಯಪಃ ಪುತ್ರಃ ಕಶ್ಯಪಾತ್ತು ಇಮಾಃ ಪ್ರಜಾಃ।
01059011c ಪ್ರಜಜ್ಞಿರೇ ಮಹಾಭಾಗಾ ದಕ್ಷಕನ್ಯಾಸ್ತ್ರಯೋದಶ।।
ಮರೀಚಿಯ ಪುತ್ರ ಕಶ್ಯಪ. ಕಶ್ಯಪನಿಂದ ಮಹಾಭಾಗ ದಕ್ಷನ ಹದಿಮೂರು ಕನ್ಯೆಯರಲ್ಲಿ ಎಲ್ಲ ಪ್ರಜೆಗಳೂ ಹುಟ್ಟಿದರು.
01059012a ಅದಿತಿರ್ದಿತಿರ್ದನುಃ ಕಾಲಾ ಅನಾಯುಃ ಸಿಂಹಿಕಾ ಮುನಿಃ।
01059012c ಕ್ರೋಧಾ ಪ್ರಾವಾ ಅರಿಷ್ಟಾ3 ಚ ವಿನತಾ ಕಪಿಲಾ ತಥಾ।।
01059013a ಕದ್ರೂಶ್ಚ ಮನುಜವ್ಯಾಘ್ರ ದಕ್ಷಕನ್ಯೈವ ಭಾರತ।
01059013c ಏತಾಸಾಂ ವೀರ್ಯಸಂಪನ್ನಂ ಪುತ್ರಪೌತ್ರಮನಂತಕಂ।।
ಮನುಜವ್ಯಾಘ್ರ! ಭಾರತ! ಅದಿತಿ, ದಿತಿ, ದನು, ಕಾಲಾ, ಅನಾಯು, ಸಿಂಹಿಕಾ, ಮುನಿ, ಕ್ರೋಧಾ, ಪ್ರಾವಾ, ಅರಿಷ್ಟಾ, ವಿನತಾ, ಕಪಿಲ, ಮತ್ತು ಕದ್ರು ಇವರು ಕಶ್ಯಪ ಪತ್ನಿಯರಾದ ದಕ್ಷಕನ್ಯೆಯರು4. ಇವರಲ್ಲಿ ಅನಂತ ಸಂಖ್ಯೆಗಳಲ್ಲಿ ವೀರ್ಯಸಂಪನ್ನ ಪುತ್ರ ಪೌತ್ರರಾದರು.
01059014a ಅದಿತ್ಯಾಂ ದ್ವಾದಶಾದಿತ್ಯಾಃ ಸಂಭೂತಾ ಭುವನೇಶ್ವರಾಃ।
01059014c ಯೇ ರಾಜನ್ನಾಮತಸ್ತಾಂಸ್ತೇ ಕೀರ್ತಯಿಷ್ಯಾಮಿ ಭಾರತ।।
ಹನ್ನೆರಡು ಭುವನೇಶ್ವರ ಆದಿತ್ಯರು ಅದಿತಿಯಲ್ಲಿ ಜನಿಸಿದರು. ಭಾರತ! ರಾಜನ್! ಅವರ ಹೆಸರುಗಳನ್ನು ಹೇಳುತ್ತೇನೆ.
01059015a ಧಾತಾ ಮಿತ್ರೋಽರ್ಯಮಾ ಶಕ್ರೋ ವರುಣಶ್ಚಾಂಶ ಏವ ಚ।
01059015c ಭಗೋ ವಿವಸ್ವಾನ್ಪೂಷಾ ಚ ಸವಿತಾ ದಶಮಸ್ತಥಾ।।
ಮೊದಲ ಹತ್ತು ಮಂದಿ - ಧಾತ, ಮಿತ್ರ, ಆರ್ಯಮ, ಶಕ್ರ, ವರುಣ, ಅಂಶ, ಭಗ, ವಿವಸ್ವತ, ಪೂಷ ಮತ್ತು ಸವಿತ.
01059016a ಏಕಾದಶಸ್ತಥಾ ತ್ವಷ್ಟಾ ವಿಷ್ಣುರ್ದ್ವಾದಶ ಉಚ್ಯತೇ।
01059016c ಜಘನ್ಯಜಃ ಸ ಸರ್ವೇಷಾಮಾದಿತ್ಯಾನಾಂ ಗುಣಾಧಿಕಃ।।
ಹನ್ನೊಂದನೆಯವನು ತ್ವಷ್ಟ ಮತ್ತು ಹನ್ನೆರಡನೆಯವನು ವಿಷ್ಣು ಎಂದು ಹೇಳುತ್ತಾರೆ. ಕೊನೆಯವನು ಸರ್ವ ಆದಿತ್ಯರಲ್ಲಿ ಅಧಿಕ ಗುಣವಂತನು.
01059017a ಏಕ ಏವ ದಿತೇಃ ಪುತ್ರೋ ಹಿರಣ್ಯಕಶಿಪುಃ ಸ್ಮೃತಃ।
01059017c ನಾಮ್ನಾ ಖ್ಯಾತಾಸ್ತು ತಸ್ಯೇಮೇ ಪುತ್ರಾಃ ಪಂಚ ಮಹಾತ್ಮನಃ।।
ದಿತಿಗೆ ಹಿರಣ್ಯಕಶಿಪುವೆಂಬ ಹೆಸರಿನಿಂದ ಖ್ಯಾತ ಒಬ್ಬನೇ ಮಗನಿದ್ದನೆಂದು ಕೇಳಿದ್ದೇವೆ5. ಆ ಮಹಾತ್ಮನಿಗೆ ಐವರು ಪುತ್ರರಿದ್ದರು.
01059018a ಪ್ರಹ್ರಾದಃ6 ಪೂರ್ವಜಸ್ತೇಷಾಂ ಸಂಹ್ರಾದಸ್ತದನಂತರಂ।
01059018c ಅನುಹ್ರಾದಸ್ತೃತೀಯೋಽಭೂತ್ತಸ್ಮಾಚ್ಚ ಶಿಬಿಬಾಷ್ಕಲೌ।।
ಅವರಲ್ಲಿ ಮೊದಲನೆಯವನು ಪ್ರಹ್ರಾದ, ಅವನ ನಂತರ ಸಂಹ್ಲಾದ, ಮೂರನೆಯವನು ಅನುಹ್ಲಾದ, ಮತ್ತು ನಂತರ ಶಿಬಿ ಮತ್ತು ಬಾಷ್ಕಲ.
01059019a ಪ್ರಹ್ರಾದಸ್ಯ7 ತ್ರಯಃ ಪುತ್ರಾಃ ಖ್ಯಾತಾಃ ಸರ್ವತ್ರ ಭಾರತ।
01059019c ವಿರೋಚನಶ್ಚ ಕುಂಭಶ್ಚ ನಿಕುಂಭಶ್ಚೇತಿ ವಿಶ್ರುತಾಃ।।
ಭಾರತ! ವಿರೋಚನ, ಕುಂಭ ಮತ್ತು ನಿಕುಂಭರೆಂದು ವಿಶ್ರುತರಾಗಿದ್ದ ಪ್ರಹ್ರಾದನ ಮೂವರು ಪುತ್ರರು ಎಲ್ಲೆಲ್ಲಿಯೂ ಖ್ಯಾತರಾಗಿದ್ದರು.
01059020a ವಿರೋಚನಸ್ಯ ಪುತ್ರೋಽಭೂದ್ಬಲಿರೇಕಃ ಪ್ರತಾಪವಾನ್।
01059020c ಬಲೇಶ್ಚ ಪ್ರಥಿತಃ ಪುತ್ರೋ ಬಾಣೋ ನಾಮ ಮಹಾಸುರಃ8।।
ಪ್ರತಾಪಿ ಬಲಿಯೊಬ್ಬನೇ ವಿರೋಚನನ ಪುತ್ರ. ಬಾಣ ಎಂಬ ಹೆಸರಿನ ಮಹಾಸುರನು ಬಲಿಯ ಪುತ್ರನೆಂದು ಪ್ರಥಿತದಲ್ಲಿದೆ.
01059021a ಚತ್ವಾರಿಂಶದ್ದನೋಃ9 ಪುತ್ರಾಃ ಖ್ಯಾತಾಃ ಸರ್ವತ್ರ ಭಾರತ।
01059021c ತೇಷಾಂ ಪ್ರಥಮಜೋ ರಾಜಾ ವಿಪ್ರಚಿತ್ತಿರ್ಮಹಾಯಶಾಃ।।
ಭಾರತ! ದನುವಿನ ನಲವತ್ತು ಪುತ್ರರೂ ಸರ್ವತ್ರ ಖ್ಯಾತರಾಗಿದ್ದರು. ಅವರಲ್ಲಿ ಮೊದಲು ಹುಟ್ಟಿದವನು ಮಹಾಯಶಸ್ವಿ ರಾಜಾ ವಿಪ್ರಚಿತ್ತಿ.
01059022a ಶಂಬರೋ ನಮುಚಿಶ್ಚೈವ ಪುಲೋಮಾ ಚೇತಿ ವಿಶ್ರುತಃ।
01059022c ಅಸಿಲೋಮಾ ಚ ಕೇಶೀ ಚ ದುರ್ಜಯಶ್ಚೈವ ದಾನವಃ।।
01059023a ಅಯಃಶಿರಾ ಅಶ್ವಶಿರಾ ಅಯಃಶಂಕುಶ್ಚ10 ವೀರ್ಯವಾನ್।
01059023c ತಥಾ ಗಗನಮೂರ್ಧಾ ಚ ವೇಗವಾನ್ಕೇತುಮಾಂಶ್ಚ ಯಃ।।
01059024a ಸ್ವರ್ಭಾನುರಶ್ವೋಽಶ್ವಪತಿರ್ವೃಷಪರ್ವಾಜಕಸ್ತಥಾ।
01059024c ಅಶ್ವಗ್ರೀವಶ್ಚ ಸೂಕ್ಷ್ಮಶ್ಚ ತುಹುಂಡಶ್ಚ ಮಹಾಸುರಃ।।
01059025a ಇಸೃಪಾ ಏಕಚಕ್ರಶ್ಚ11 ವಿರೂಪಾಕ್ಷೋ ಹರಾಹರೌ।
01059025c ನಿಚಂದ್ರಶ್ಚ ನಿಕುಂಭಶ್ಚ ಕುಪಠಃ ಕಾಪಠಸ್ತಥಾ।।
01059026a ಶರಭಃ ಶಲಭಶ್ಚೈವ ಸೂರ್ಯಾಚಂದ್ರಮಸೌ ತಥಾ।
01059026c ಇತಿ ಖ್ಯಾತಾ ದನೋರ್ವಂಶೇ ದಾನವಾಃ ಪರಿಕೀರ್ತಿತಾಃ।
01059026e ಅನ್ಯೌ ತು ಖಲು ದೇವಾನಾಂ ಸೂರ್ಯಾಚಂದ್ರಮಸೌ ಸ್ಮೃತೌ।।
ಶಂಬರ, ನಮುಚಿ, ಪುಲೋಮ, ಅಸಿಲೋಮ. ಕೇಶಿ, ದುರ್ಜಯ, ಅಯಃಶಿರ, ಅಶ್ವಶಿರ, ಅಯಃಶಂಕು, ಗಗನಮೂರ್ಧಾ, ವೇಗವಾನ, ಕೇತುಮಾನ್, ಸ್ವರ್ಭಾನು, ಅಶ್ವ, ಅಶ್ವಪತಿ, ವೃಶಪರ್ವ, ಅಜಕ, ಅಶ್ವಗ್ರೀವ, ಸೂಕ್ಷ್ಮ, ತುಹುಂಡ, ಇಸೃಪ, ಏಕಚಕ್ರ, ವಿರೂಪಾಕ್ಷ, ಹರ, ಅಹರ, ನಿಚಂದ್ರ, ನಿಕುಂಭ, ಕುಪಠ, ಕಾಪಠ, ಶರಭ, ಶಲಭ, ಸೂರ್ಯ, ಚಂದ್ರ, ಇವರೆಲ್ಲರೂ ದಾನವ ವಂಶದಲ್ಲಿ ಖ್ಯಾತರೆಂದು ಹೇಳುತ್ತಾರೆ. ದೇವತೆಗಳಾದ ಸೂರ್ಯ ಮತ್ತು ಚಂದ್ರರೇ ಬೇರೆ ಎಂದೂ ಕೇಳಿದ್ದೇವೆ.
01059027a ಇಮೇ ಚ ವಂಶೇ ಪ್ರಥಿತಾಃ ಸತ್ತ್ವವಂತೋ ಮಹಾಬಲಾಃ।
01059027c ದನುಪುತ್ರಾ ಮಹಾರಾಜ ದಶ ದಾನವಪುಂಗವಾಃ।।
ಮಹಾರಾಜ! ಇವು ಸತ್ವವಂತ ಮತ್ತು ಮಹಾಬಲ ದಾನವ ವಂಶಗಳೆಂದು ಪ್ರಥಿತಗೊಂಡಿವೆ. ದನುವಿನ ವಂಶದಲ್ಲಿ ಹುಟ್ಟಿದ ಈ ಹತ್ತು ದಾನವರು ಮುಖ್ಯರು.
01059028a ಏಕಾಕ್ಷೋ ಮೃತಪಾ ವೀರಃ ಪ್ರಲಂಬನರಕಾವಪಿ।
01059028c ವಾತಾಪಿಃ ಶತ್ರುತಪನಃ ಶತಶ್ಚೈವ ಮಹಾಸುರಃ।।
01059029a ಗವಿಷ್ಠಶ್ಚ ದನಾಯುಶ್ಚ12 ದೀರ್ಘಜಿಹ್ವಶ್ಚ ದಾನವಃ।
01059029c ಅಸಂಖ್ಯೇಯಾಃ ಸ್ಮೃತಾಸ್ತೇಷಾಂ ಪುತ್ರಾಃ ಪೌತ್ರಾಶ್ಚ ಭಾರತ।।
ಭಾರತ! ಏಕಾಕ್ಷ, ವೀರ ಮೃತಪ, ಪ್ರಲಂಬ, ನರಕ, ವಾತಾಪಿ, ಶತ್ರುತಪನ, ಮಹಾಸುರ ಶಠ, ಗವಿಷ್ಠ, ದನಾಯು, ದಾನವ ದೀರ್ಘಜಿಹ್ವ, ಮತ್ತು ಇವರ ಪುತ್ರ-ಪೌತ್ರರು ಅಸಂಖ್ಯರು ಎಂದು ಕೇಳಿದ್ದೇವೆ!
01059030a ಸಿಂಹಿಕಾ ಸುಷುವೇ ಪುತ್ರಂ ರಾಹುಂ ಚಂದ್ರಾರ್ಕಮರ್ದನಂ।
01059030c ಸುಚಂದ್ರಂ ಚಂದ್ರಹಂತಾರಂ ತಥಾ ಚಂದ್ರವಿಮರ್ದನಂ।।
ಸಿಂಹಿಕೆಯು ಚಂದ್ರ ಮತ್ತು ಸೂರ್ಯರ ಮಾನಮರ್ದನ ರಾಹು, ಹಾಗೂ ಸುಚಂದ್ರ, ಚಂದ್ರಹಂತಾರ ಹಾಗೂ ಚಂದ್ರವಿಮರ್ದನರೆಂಬ ಪುತ್ರರಿಗೆ ಜನ್ಮವಿತ್ತಳು.
01059031a ಕ್ರೂರಸ್ವಭಾವಂ ಕ್ರೂರಾಯಾಃ ಪುತ್ರಪೌತ್ರಮನಂತಕಂ।
01059031c ಗಣಃ ಕ್ರೋಧವಶೋ ನಾಮ ಕ್ರೂರಕರ್ಮಾರಿಮರ್ದನಃ।।
ಕ್ರೂರಳ ಅಸಂಖ್ಯ ಪುತ್ರ ಪೌತ್ರರು ಕ್ರೂರ ಸ್ವಭಾವದವರಾಗಿದ್ದರು. ಆ ಕ್ರೂರ ಕರ್ಮಿ ಅರಿಮರ್ದನ ಗುಂಪಿಗೆ ಕ್ರೋಧವಶ ಎನ್ನುವ ಹೆಸರಿದೆ.
01059032a ಅನಾಯುಷಃ ಪುನಃ ಪುತ್ರಾಶ್ಚತ್ವಾರೋಽಸುರಪುಂಗವಾಃ।
01059032c ವಿಕ್ಷರೋ ಬಲವೀರೌ ಚ ವೃತ್ರಶ್ಚೈವ ಮಹಾಸುರಃ।।
ಅನಾಯುವಿಗೆ ನಾಲ್ವರು ಅಸುರಪುಂಗವ ಪುತ್ರರಾದರು: ವಿಕ್ಷರ, ಬಲ, ವೀರ, ಮತ್ತು ಮಹಾಸುರ ವೃತ್ರ.
01059033a ಕಾಲಾಯಾಃ ಪ್ರಥಿತಾಃ ಪುತ್ರಾಃ ಕಾಲಕಲ್ಪಾಃ ಪ್ರಹಾರಿಣಃ।
01059033c ಭುವಿ ಖ್ಯಾತಾ ಮಹಾವೀರ್ಯಾ ದಾನವೇಷು ಪರಂತಪಾಃ।।
ಕಾಲಾಳ ಪುತ್ರರು ಕಾಲನಂತೆ ಪ್ರಹಾರಿಗಳಿದ್ದರೆಂದು ಹೇಳುತ್ತಾರೆ. ಅವರು ಭೂಮಿಯ ದಾನವರಲ್ಲಿಯೇ ಮಹಾವೀರ ಶತ್ರುತಾಪನರೆಂದು ಖ್ಯಾತರಾದರು.
01059034a ವಿನಾಶನಶ್ಚ ಕ್ರೋಧಶ್ಚ ಹಂತಾ ಕ್ರೋಧಸ್ಯ ಚಾಪರಃ।
01059034c ಕ್ರೋಧಶತ್ರುಸ್ತಥೈವಾನ್ಯಃ ಕಾಲೇಯಾ13 ಇತಿ ವಿಶ್ರುತಾಃ।।
ಈ ನಾಲ್ವರ ಹೆಸರು: ವಿನಾಶನ, ಕ್ರೋಧ, ಹಂತ, ಕ್ರೋಧಶತ್ರು. ಕಾಲೇಯರೆಂದು ವಿಶೃತ ಅನ್ಯರೂ ಕ್ರೋಧಳ ವಂಶದವರೇ.
01059035a ಅಸುರಾಣಾಮುಪಾಧ್ಯಾಯಃ ಶುಕ್ರಃಸ್ತ್ವ ಋಷಿಸುತೋಽಭವತ್।
01059035c ಖ್ಯಾತಾಶ್ಚೋಶನಸಃ ಪುತ್ರಾಶ್ಚತ್ವಾರೋಽಸುರಯಾಜಕಾಃ।।
ಅಸುರರ ಉಪಾಧ್ಯಾಯ ಶುಕ್ರನು ಭೃಗುಋಷಿಯ ಮಗನು. ಅವನು ಉಶನ ಎಂದೂ ಖ್ಯಾತನಾಗಿದ್ದನು. ಅವನ ನಾಲ್ವರು ಪುತ್ರರೂ ಅಸುರ ಯಾಜಕರಾಗಿದ್ದರು.
01059036a ತ್ವಷ್ಟಾವರಸ್ತಥಾತ್ರಿಶ್ಚ ದ್ವಾವನ್ಯೌ ಮಂತ್ರಕರ್ಮಿಣೌ।
01059036c ತೇಜಸಾ ಸೂರ್ಯಸಂಕಾಶಾ ಬ್ರಹ್ಮಲೋಕಪ್ರಭಾವನಾಃ।।
ಇವರಲ್ಲದೇ ಅವನಿಗೆ ತ್ವಷ್ಟಾವರ ಮತ್ತು ಅತ್ರಿ ಎಂಬ ಇಬ್ಬರು ಮಂತ್ರಕರ್ಮಿ ಪುತ್ರರಾದರು. ತೇಜದಲ್ಲಿ ಅವರು ಸೂರ್ಯಸಂಕಾಶರೂ ಬ್ರಹ್ಮಲೋಕ ಪ್ರಭಾವನರೂ ಆಗಿದ್ದರು.
01059037a ಇತ್ಯೇಷ ವಂಶಪ್ರಭವಃ ಕಥಿತಸ್ತೇ ತರಸ್ವಿನಾಂ।
01059037c ಅಸುರಾಣಾಂ ಸುರಾಣಾಂ ಚ ಪುರಾಣೇ ಸಂಶ್ರುತೋ ಮಯಾ।।
ಈ ರೀತಿ ಪುರಾಣಗಳಿಂದ ನಾನು ಕೇಳಿದ ಹಾಗೆ ಅಸುರರು ಮತ್ತು ಸುರರ ವಂಶೋತ್ಮತ್ತಿ ಮತ್ತು ಕುಲಗಳನ್ನು ಹೇಳಿದ್ದೇನೆ.
01059038a ಏತೇಷಾಂ ಯದಪತ್ಯಂ ತು ನ ಶಕ್ಯಂ ತದಶೇಷತಃ।
01059038c ಪ್ರಸಂಖ್ಯಾತುಂ ಮಹೀಪಾಲ ಗುಣಭೂತಮನಂತಕಂ।।
ಇವರಲ್ಲಿ ಜನಿಸಿದ ಪೀಳಿಗೆಗಳೆಲ್ಲವನ್ನೂ ಎಣಿಸುವುದು ಅಶಕ್ಯ. ಮಹೀಪಾಲ! ಅವರ ಸಂಖ್ಯೆ ಅನಂತ.
01059039a ತಾರ್ಕ್ಷ್ಯಶ್ಚಾರಿಷ್ಟನೇಮಿಶ್ಚ ತಥೈವ ಗರುಡಾರುಣೌ।
01059039c ಆರುಣಿರ್ವಾರುಣಿಶ್ಚೈವ ವೈನತೇಯಾ ಇತಿ ಸ್ಮೃತಾಃ।।
ತಾರ್ಕ್ಷ್ಯ, ಅರಿಷ್ಟನೇಮಿ, ಗರುಡ, ಅರುಣ, ಆರುಣಿ ಮತ್ತು ವಾರುಣಿಯರು ವಿನತೆಯ ಮಕ್ಕಳೆಂದು ಕೇಳಿದ್ದೇವೆ.
01059040a ಶೇಷೋಽನಂತೋ ವಾಸುಕಿಶ್ಚ ತಕ್ಷಕಶ್ಚ ಭುಜಂಗಮಃ।
01059040c ಕೂರ್ಮಶ್ಚ ಕುಲಿಕಶ್ಚೈವ ಕಾದ್ರವೇಯಾ ಮಹಾಬಲಾಃ।।
ಶೇಷ, ಅನಂತ, ವಾಸುಕಿ, ತಕ್ಷಕ, ಕೂರ್ಮ, ಕುಲಿಕ ಈ ಎಲ್ಲ ಮಹಾ ಬಲಶಾಲಿ ನಾಗಗಳು ಕದ್ರುವಿನ ಮಕ್ಕಳು.
01059041a ಭೀಮಸೇನೋಗ್ರಸೇನೌ ಚ ಸುಪರ್ಣೋ ವರುಣಸ್ತಥಾ।
01059041c ಗೋಪತಿರ್ಧೃತರಾಷ್ಟ್ರಶ್ಚ ಸೂರ್ಯವರ್ಚಾಶ್ಚ ಸಪ್ತಮಃ।।
01059042a ಪತ್ರವಾನರ್ಕಪರ್ಣಶ್ಚ14 ಪ್ರಯುತಶ್ಚೈವ ವಿಶ್ರುತಃ।
01059042c ಭೀಮಶ್ಚಿತ್ರರಥಶ್ಚೈವ ವಿಖ್ಯಾತಃ ಸರ್ವವಿದ್ವಶೀ।।
01059043a ತಥಾ ಶಾಲಿಶಿರಾ ರಾಜನ್ ಪ್ರದ್ಯುಮ್ನಶ್ಚ15 ಚತುರ್ದಶಃ।
01059043c ಕಲಿಃ ಪಂಚದಶಶ್ಚೈವ ನಾರದಶ್ಚೈವ ಷೋಡಶಃ।
01059043e ಇತ್ಯೇತೇ ದೇವಗಂಧರ್ವಾ ಮೌನೇಯಾಃ ಪರಿಕೀರ್ತಿತಾಃ।।
ಭೀಮಸೇನ, ಉಗ್ರಸೇನ, ಸುಪರ್ಣ, ವರುಣ, ಗೋಪತಿ, ಧೃತರಾಷ್ಟ್ರ, ಮತ್ತು ಏಳನೆಯವನು ಸೂರ್ಯವರ್ಚ; ಪತ್ರವಾನ, ಅರ್ಕಪರ್ಣ, ಪ್ರಖ್ಯಾತ ಪ್ರಯುತ, ವಿಖ್ಯಾತ ಮತ್ತು ಸರ್ವವನ್ನು ತಿಳಿದ ಭೀಮ ಮತ್ತು ಚಿತ್ರರಥರು; ಶಾಲಿಶಿರ ಮತ್ತು ಹದಿನಾಲ್ಕನೆಯವನು ಪ್ರದ್ಯುಮ್ನ, ಹದಿನೈದನೆಯವನು ಕಲಿ, ಹದಿನಾರನೆಯವನು ನಾರದ16, ಇವರೆಲ್ಲ ದೇವ-ಗಂಧರ್ವರೂ ಮುನಿಯ ಮಕ್ಕಳೆಂದು ಹೇಳಿದ್ದಾರೆ.
01059044a ಅತಸ್ತು ಭೂತಾನ್ಯನ್ಯಾನಿ ಕೀರ್ತಯಿಷ್ಯಾಮಿ ಭಾರತ।
01059044c ಅನವದ್ಯಾಮನುವಶಾಮನೂನಾಮರುಣಾಂ ಪ್ರಿಯಾಂ।
01059044e ಅನೂಪಾಂ ಸುಭಗಾಂ ಭಾಸೀಮಿತಿ ಪ್ರಾವಾ ವ್ಯಜಾಯತ17।।
ಭಾರತ! ಈಗ ನಾನು ಅನ್ಯ ಜೀವಿಗಳ ಕುರಿತು ಹೇಳುತ್ತೇನೆ. ಅನವದ್ಯ, ಅಮನು, ಅವಶ, ಅನೂನಾ, ಅರುಣಾ, ಪ್ರಿಯಾ, ಅನೂಪಾ, ಸುಭಗಾ ಮತ್ತು ಭಾಸೀ ಇವರು ದಕ್ಷಕನ್ಯೆ ಪ್ರಾವಳಲ್ಲಿ ಜನಿಸಿದರು.
01059045a ಸಿದ್ಧಃ ಪೂರ್ಣಶ್ಚ ಬರ್ಹೀ ಚ ಪೂರ್ಣಾಶಶ್ಚ ಮಹಾಯಶಾಃ।
01059045c ಬ್ರಹ್ಮಚಾರೀ ರತಿಗುಣಃ ಸುಪರ್ಣಶ್ಚೈವ ಸಪ್ತಮಃ।।
01059046a ವಿಶ್ವಾವಸುಶ್ಚ ಭಾನುಶ್ಚ ಸುಚಂದ್ರೋ ದಶಮಸ್ತಥಾ।
01059046c ಇತ್ಯೇತೇ ದೇವಗಂಧರ್ವಾಃ ಪ್ರಾವೇಯಾಃ ಪರಿಕೀರ್ತಿತಾಃ।।
ಸಿದ್ಧ, ಪೂರ್ಣ, ಬರ್ಹಿ, ಮಹಾಯಶ ಪೂರ್ಣಾಶ, ಬ್ರಹ್ಮಚಾರೀ, ರತಿಗುಣ, ಏಳನೆಯವನು ಸುಪರ್ಣ, ವಿಶ್ವಾವಸು, ಭಾನು, ಮತ್ತು ಹತ್ತನೆಯವನು ಸುಚಂದ್ರ ಈ ಎಲ್ಲ ದೇವ-ಗಂಧರ್ವರೂ ಪ್ರಾವಳ ಮಕ್ಕಳೆಂದು ಹೇಳುತ್ತಾರೆ.
01059047a ಇಮಂತ್ವಪ್ಸರಸಾಂ ವಂಶಂ ವಿದಿತಂ ಪುಣ್ಯಲಕ್ಷಣಂ।
01059047c ಪ್ರಾವಾಸೂತ ಮಹಾಭಾಗಾ ದೇವೀ ದೇವರ್ಷಿತಃ ಪುರಾ।।
01059048a ಅಲಂಬುಸಾ ಮಿಶ್ರಕೇಷೀ ವಿದ್ಯುತ್ಪರ್ಣಾ ತುಲಾನಘಾ18।
01059048c ಅರುಣಾ ರಕ್ಷಿತಾ ಚೈವ ರಂಭಾ ತದ್ವನ್ಮನೋರಮಾ।।
01059049a ಅಸಿತಾ ಚ ಸುಬಾಹುಶ್ಚ ಸುವ್ರತಾ ಸುಭುಜಾ ತಥಾ।
01059049c ಸುಪ್ರಿಯಾ ಚಾತಿಬಾಹುಶ್ಚ ವಿಖ್ಯಾತೌ ಚ ಹಹಾಹುಹೂ।
01059049e ತುಂಬುರುಶ್ಚೇತಿ ಚತ್ವಾರಃ ಸ್ಮೃತಾ ಗಂಧರ್ವಸತ್ತಮಾಃ।।
ಇದಕ್ಕೆ ಮೊದಲು ಈ ಮಹಾಭಾಗೆ ದೇವಿ ಪ್ರಾಹಾಳಲ್ಲಿ ದೇವರ್ಷಿ ಕಶ್ಯಪನಿಂದ ಪುಣ್ಯಲಕ್ಷಣಗಳಿಂದೊಡಗೂಡಿದ ಅಪ್ಸರೆಯರ ವಂಶವು ಉತ್ಪನ್ನವಾಯಿತೆಂದು ಹೇಳುತ್ತಾರೆ. ಅಲಂಬುಸಾ, ಮಿಶ್ರಕೇಶೀ, ವಿದ್ಯುತ್ಪರ್ಣಾ, ಅನಘೆ ತುಲಾ, ಅರುಣಾ, ರಕ್ಷಿತಾ, ರಂಭಾ, ಮನೋರಮಾ, ಅಸಿತ, ಸುಬಾಹು, ಸುವ್ರತಾ, ಸುಭುಜಾ, ಸುಪ್ರಿಯಾ. ಅತಿಬಾಹು, ವಿಖ್ಯಾತರಾದ ಹಾಹಾ, ಹುಹು, ತುಂಬುರು ಈ ನಾಲ್ವರು ಗಂಧರ್ವಸತ್ತಮರೂ ಕೂಡ ಪ್ರಾಹಾಳ ಮಕ್ಕಳು.
01059050a ಅಮೃತಂ ಬ್ರಾಹ್ಮಣಾ ಗಾವೋ ಗಂಧರ್ವಾಪ್ಸರಸಸ್ತಥಾ।
01059050c ಅಪತ್ಯಂ ಕಪಿಲಾಯಾಸ್ತು ಪುರಾಣೇ ಪರಿಕೀರ್ತಿತಂ।।
ಅಮೃತ, ಬ್ರಾಹ್ಮಣ, ಗೋವುಗಳು, ಗಂಧರ್ವರು ಮತ್ತು ಅಪ್ಸರೆಯರು ಕಪಿಲಳ ಮಕ್ಕಳೆಂದು ಪುರಾಣಗಳು ಹೇಳುತ್ತವೆ.
01059052a ಭುಜಗಾನಾಂ ಸುಪರ್ಣಾನಾಂ ರುದ್ರಾಣಾಂ ಮರುತಾಂ ತಥಾ।
01059052c ಗವಾಂ ಚ ಬ್ರಾಹ್ಮಣಾನಾಂ ಚ ಶ್ರೀಮತಾಂ ಪುಣ್ಯಕರ್ಮಣಾಂ।।
01059051a ಇತಿ ತೇ ಸರ್ವಭೂತಾನಾಂ ಸಂಭವಃ ಕಥಿತೋ ಮಯಾ।
01059051c ಯಥಾವತ್ಪರಿಸಂಖ್ಯಾತೋ ಗಂಧರ್ವಾಪ್ಸರಸಾಂ ತಥಾ।।
ಈ ರೀತಿ ನಾನು ಸರ್ವಭೂತಗಳ - ಅಪ್ಸರೆಯರ, ಗಂಧರ್ವರ, ಸರ್ಪಗಳ, ಪಕ್ಷಿಗಳ, ರುದ್ರರ, ಮರುತರ, ಗೋವುಗಳ ಮತ್ತು ಪುಣ್ಯಕರ್ಮಿ ಸುಮತಿ ಬ್ರಾಹ್ಮಣರ - ಹುಟ್ಟಿನ ಕುರಿತು ಯಥಾವತ್ತಾಗಿ, ಸಾಕಷ್ಟು ಹೇಳಿದ್ದೇನೆ.
01059053a ಆಯುಷ್ಯಶ್ಚೈವ ಪುಣ್ಯಶ್ಚ ಧನ್ಯಃ ಶ್ರುತಿಸುಖಾವಹಃ।
01059053c ಶ್ರೋತವ್ಯಶ್ಚೈವ ಸತತಂ ಶ್ರಾವ್ಯಶ್ಚೈವಾನಸೂಯತಾ।।
ಇದನ್ನು ಸತತವಾಗಿ ಕೇಳುವವರು, ಯಾವ ಅಸೂಯೆಯೂ ಇಲ್ಲದೇ ಕೇಳುವವರು ಮತ್ತು ಸುಖಮನಸಿನಿಂದ ಕೇಳುವವರು ಆಯುಷ್ಯ-ಪುಣ್ಯಗಳನ್ನು ಹೊಂದಿ ಧನ್ಯರಾಗುತ್ತಾರೆ.
01059054a ಇಮಂ ತು ವಂಶಂ ನಿಯಮೇನ ಯಃ ಪತೇನ್ಮಹಾತ್ಮನಾಂ ಬ್ರಾಹ್ಮಣದೇವಸಂನಿಧೌ। 01059054c ಅಪತ್ಯಲಾಭಂ ಲಭತೇ ಸ ಪುಷ್ಕಲಂ ಶ್ರಿಯಂ ಯಶಃ ಪ್ರೇತ್ಯ ಚ ಶೋಭನಾಂ ಗತಿಂ।।
ಮಹಾತ್ಮ ಬ್ರಾಹ್ಮಣ ಮತ್ತು ದೇವಸನ್ನಿಧಿಗಳಲ್ಲಿ ಯಾರು ಈ ವಂಶಾವಳಿಯನ್ನು ನಿಯಮದಿಂದ ಪಠಿಸುತ್ತಾರೋ ಅವರಿಗೆ ಪುಷ್ಕಲ ಸಂಪತ್ತು, ಯಶಸ್ಸು, ಶುಭ ಗತಿ ಮತ್ತು ಸಂತಾನಲಾಭವು ದೊರೆಯುತ್ತದೆ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಆದಿವಂಶಾವತರಣಪರ್ವಣಿ ಆದಿತ್ಯಾದಿವಂಶಕಥನೇ ಏಕೋನಷಷ್ಠಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಆದಿವಂಶಾವತರಣ ಪರ್ವದಲ್ಲಿ ಆದಿತ್ಯಾದಿವಂಶಕಥನ ಎನ್ನುವ ಐವತ್ತೊಂಭತ್ತನೆಯ ಅಧ್ಯಾಯವು.
-
ಬಿಬೇಕ್ ದೆಬ್ರೋಯ್ ಈ ಅಧ್ಯಾಯ ಮತ್ತು ಮುಂದಿನ 3 ಅಧ್ಯಾಯಗಳನ್ನು ಸಂಭವ ಪರ್ವದಲ್ಲಿ ಸೇರಿಸಿದ್ದಾರೆ. ಆದರೆ ಪುಣೆಯ ವಿಮರ್ಶಾತ್ಮಕ ಆವೃತ್ತಿಯಲ್ಲಿ ಈ ಪರ್ವಗಳು ಅಂಶಾವತರಣ ಪರ್ವದಲ್ಲಿಯೇ ಇವೆ. ↩︎
-
ವಿಷ್ಣುಪುರಾಣದ ಮೊದಲನೇ ಅಂಶದ ಏಳನೇ ಅಧ್ಯಾಯದಲ್ಲಿ ಭೃಗು, ದಕ್ಷ ಮತ್ತು ವಸಿಷ್ಠರನ್ನೂ ಸೇರಿಸಿ ಬ್ರಹ್ಮನ ಮಾನಸ ಪುತ್ರರು ಒಟ್ಟು ಒಂಭತ್ತು ಎಂದು ಸೂಚಿಸುವ ಶ್ಲೋಕವಿದೆ: ಭೃಗುಂ ಪುಲಸ್ತ್ಯಂ ಪುಲಹಂ ಕ್ರತುಮಂಗಿರಸಂ ತಥಾ। ಮರೀಚಿಂ ದಕ್ಷಮತ್ರಿಂ ಚ ವಸಿಷ್ಠಂ ಚೈವ ಮಾನಸಾನ್। ನವ ಬ್ರಹ್ಮಾಣಿ ಇತ್ಯೇತೇ ಪುರಾಣೇ ನಿಶ್ಚಯಂ ಗತಾಃ।। ಅರ್ಥಾತ್: ಭೃಗು, ಪುಲಸ್ತ್ಯ, ಪುಲಹ, ಕ್ರತು, ಅಂಗೀರಸ, ಮರೀಚಿ, ದಕ್ಷ, ಅತ್ರಿ ಮತ್ತು ವಸಿಷ್ಠ ಈ ಒಂಭತ್ತು ಜನರು ಬಹ್ಮಮಾನಸಪುತ್ರರೆಂದೂ ನವಬ್ರಹ್ಮರೆಂದೂ ಪುರಾಣಗಳಲ್ಲಿ ಪ್ರಸಿದ್ಧರಾಗಿರುವರು. ↩︎
-
ಪ್ರಾಧಾ ಚ ವಿಶ್ವಾ ಚ ಎಂಬ ಪಾಠಾಂತರವಿದೆ (ನೀಲಕಂಠ). ↩︎
-
ಕಶ್ಯಪನನ್ನು ವಿವಾಹವಾದ ದಕ್ಷನ ಹದಿಮೂರು ಪುತ್ರಿಯರ ಹೆಸರುಗಳಲ್ಲಿ ಪಾಠಾಂತರಗಳಿವೆ. ಉದಾಹರಣೆಗೆ, ಪದ್ಮಪುರಾಣದ ಪ್ರಕಾರ ಈ ಹದಿಮೂರು ದಕ್ಷಕನ್ಯೆಯರ ಹೆಸರುಗಳು: ಅದಿತಿ, ದಿತಿ, ದನು, ಅರಿಷ್ಟಾ, ಸುರಸಾ, ಸುರಭಿ, ವಿನತಾ, ತಾಮ್ರ, ಕ್ರೋಧವಶಾ, ಇರಾ, ಕದ್ರು, ಶುಕ್ರಿ ಮತ್ತು ಶುನಿ. ಮಹಾಭಾರತ ಖಿಲಭಾಗ ಹರಿವಂಶದ ಹರಿವಂಶಪರ್ವದ ಮೂರನೇ ಅಧ್ಯಾಯದಲ್ಲಿ ಕಶ್ಯಪ ಪತ್ನಿಯರ ಕುರಿತಾದ ಈ ಶ್ಲೋಕಗಳಿವೆ: ಲೋಕಾ ಭರತಶಾರ್ದೂಲ ಕಶ್ಯಪಸ್ಯ ನಿಬೋಧ ಮೇ। ಅದಿತಿರ್ದಿತಿರ್ದನುಶ್ಚೈವ ಅರಿಷ್ಟಾ ಸುರಸಾ ಖಶಾ।। ಸುರಭಿರ್ವಿನತಾ ಚೈವ ತಾಮ್ರಾ ಕ್ರೋಧವಶಾ ಇರಾ। ಕದ್ರುರ್ಮುನಿಶ್ಚ ರಾಜೇಂದ್ರ ತಾಸ್ವಪತ್ಯಾನಿ ಮೇ ಶೃಣು।। ಅರ್ಥಾತ್: ಭರತಶಾರ್ದೂಲ! ಈಗ ಕಶ್ಯಪನ ಪತ್ನಿಯರ ಕುರಿತು ನನ್ನಿಂದ ಕೇಳು. ಅದಿತಿ, ದಿತಿ, ದನು, ಅರಿಷ್ಟಾ, ಸುರಸಾ, ಖಶಾ, ಸುರಭಿ, ವಿನತಾ, ತಾಮ್ರಾ, ಕ್ರೋಧವಶಾ, ಇರಾ, ಕದ್ರು ಮತ್ತು ಮುನಿ ಇವರು ಕಶ್ಯಪನ ಪತ್ನಿಯರು. ಅವರ ಸಂತಾನಗಳ ಕುರಿತು ನನ್ನಿಂದ ಕೇಳು. ↩︎
-
ದಿತಿಯ ಮಕ್ಕಳ ಸಂಖ್ಯೆಯ ಕುರಿತು ಪಾಠಾಂತರಗಳಿವೆ. ಉದಾಹರಣೆಗೆ ಮಹಾಭಾರತದ ಖಿಲಭಾಗ ಹರಿವಂಶದ ಹರಿವಂಶಪರ್ವದ ಮೂರನೇ ಅಧ್ಯಾಯದಲ್ಲಿ ಈ ಶ್ಲೋಕವಿದೆ: ದಿತ್ಯಾಃ ಪುತ್ರದ್ವಯಂ ಜಜ್ಞೇ ಕಶ್ಯಪಾದಿತಿ ನಃ ಶ್ರುತಮ್। ಹಿರಣ್ಯಕಶಿಪುಶ್ಚೈವ ಹಿರಣ್ಯಾಕ್ಷಶ್ಚ ವೀರ್ಯವಾನ್।। ಅರ್ಥಾತ್: ಕಶ್ಯಪನಿಂದ ದಿತಿಯಲ್ಲಿ ಈರ್ವರು ಪುತ್ರರು ಜನಿಸಿದ್ದರೆಂದು ಕೇಳಿದ್ದೇವೆ: ಹಿರಣ್ಯಕಶಿಪು ಮತ್ತು ವೀರ್ಯವಾನ್ ಹಿರಣ್ಯಾಕ್ಷ. ↩︎
-
ಪ್ರಹ್ಲಾದಃ ಎಂಬ ಪಾಠಾಂತರವಿದೆ (ನೀಲಕಂಠ). ↩︎
-
ಪ್ರಹ್ಲಾದಸ್ಯ ಎಂಬ ಪಾಠಾಂತರವಿದೆ (ನೀಲಕಂಠ). ↩︎
-
ನೀಲಕಂಠೀಯದಲ್ಲಿ ಇದರ ನಂತರ ಈ ಶ್ಲೋಕಾರ್ಧವಿದೆ: ರುದ್ರಭ್ಯಾನುಚರಃ ಶ್ರೀಮಾನ್ಮಹಾಕಾಲೇತಿ ಯಂ ವಿದುಃ। ↩︎
-
ಚತುಸ್ತ್ರಿಂಶದ್ದನೋಃ ಎಂಬ ಪಾಠಾಂತರವಿದೆ (ನೀಲಕಂಠ). ವಿಪ್ರಚಿತ್ತಿ ಮತ್ತು ಮುಂದಿನ ಶ್ಲೋಕಗಳಲ್ಲಿ ಹೇಳಿರುವ ದಾನವರ ಒಟ್ಟು ಸಂಖ್ಯೆ ಮೂವತ್ನಾಲ್ಕು. ↩︎
-
ಅಶ್ವಶಂಕುಶ್ಚ ಎಂಬ ಪಾಠಾಂತರವಿದೆ (ನೀಲಕಂಠ). ↩︎
-
ಈಷುಪಾದೇಕಚಕ್ರಶ್ಚ ಎಂಬ ಪಾಠಾಂತರವಿದೆ (ನೀಲಕಂಠ). ↩︎
-
ವನಾಯುಶ್ಚ ಎಂಬ ಪಾಠಾಂತರವಿದೆ (ನೀಲಕಂಠ). ↩︎
-
ಕಾಲಕೇಯಾ ಎಂಬ ಪಾಠಾಂತರವಿದೆ (ನೀಲಕಂಠ). ↩︎
-
ಸತ್ಯವಾಗರ್ಕಪರ್ಣಶ್ಚ ಎಂಬ ಪಾಠಾಂತರವಿದೆ (ನೀಲಕಂಠ). ↩︎
-
ಪರ್ಜನ್ಯಶ್ಚ ಎಂಬ ಪಾಠಾಂತರವಿದೆ (ನೀಲಕಂಠ). ↩︎
-
ನಾರದನು ಮೊದಲು ಬ್ರಹ್ಮನ ಮಗನಾಗಿದ್ದನು. ದಕ್ಷನ ಪುತ್ರರಾದ ಹರ್ಯಶ್ವರನ್ನು ಆಧ್ಯಾತ್ಮಿಕ ಮಾರ್ಗದಲ್ಲಿ ಕರೆದೊಯ್ದುದಕ್ಕಾಗಿ ದಕ್ಷನು ಅವನ ಮೇಲೆ ಕೋಪಗೊಂಡಾಗ ಬ್ರಹ್ಮಮುಖೇನ ಮಾಡಿಕೊಂಡ ಒಪ್ಪಂದದಂತೆ ನಾರದನು ಪುನಃ ದಕ್ಷನ ಮಗಳಿಗೆ ಮಗನಾಗಿ ಜನಿಸಿದನು (ಮಹಾಭಾರತ ಖಿಲಭಾಗ ಹರಿವಂಶ, ಹರಿವಂಶ ಪರ್ವ, ಅಧ್ಯಾಯ ೩). ↩︎
-
ಅನವದ್ಯಾಂ ಮನುಂ ವಂಶಾಮಸುರಾಂ ಮಾರ್ಗಣಪ್ರಿಯಾಮ್। ಅರೂಪಾಂ ಸುಭಗಾಂ ಭಾಸೀಮಿತಿ ಪ್ರಾಧಾ ವ್ಯಜಾಯತ।। ಎಂಬ ಪಾಠಾಂತರವಿದೆ (ನೀಲಕಂಠ). ↩︎
-
ತಿಲೋತ್ತಮಾ ಎನ್ನುವ ಪಾಠಾಂತರವಿದೆ (ನೀಲಕಂಠ). ↩︎