057 ವ್ಯಾಸಾದ್ಯುತ್ಪತ್ತಿಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಆದಿವಂಶಾವತರಣ ಪರ್ವ

ಅಧ್ಯಾಯ 57

ಸಾರ

ವಸು ಉಪರಿಚರನ ಕಥೆ (1-30). ಸತ್ಯವತಿಯ ಜನನ (31-55). ವ್ಯಾಸನ ಜನನ (56-75). ಇತರರ ಅದ್ಭುತ ಜನನಗಳು (76-105).

01057001 ವೈಶಂಪಾಯನ ಉವಾಚ।
01057001a ರಾಜೋಪರಿಚರೋ ನಾಮ ಧರ್ಮನಿತ್ಯೋ ಮಹೀಪತಿಃ।
01057001c ಬಭೂವ ಮೃಗಯಾಂ ಗಂತುಂ ಸ ಕದಾ ಚಿದ್ಧೃತವ್ರತಃ।।

ವೈಶಂಪಾಯನನು ಹೇಳಿದನು: “ಒಂದು ಕಾಲದಲ್ಲಿ ಬೇಟೆಯಾಡುವುದರಲ್ಲಿ ಆಸಕ್ತಿಯನ್ನಿಟ್ಟಿದ್ದ ಧರ್ಮನಿತ್ಯ, ಸತ್ಯವ್ರತ, ಮಹೀಪತಿ, ಉಪರಿಚರ ಎಂಬ ಹೆಸರಿನ ರಾಜನಿದ್ದನು.

01057002a ಸ ಚೇದಿವಿಷಯಂ ರಮ್ಯಂ ವಸುಃ ಪೌರವನಂದನಃ।
01057002c ಇಂದ್ರೋಪದೇಶಾಜ್ಜಗ್ರಾಹ ಗ್ರಹಣೀಯಂ ಮಹೀಪತಿಃ।।

ಆ ಪೌರವನಂದನ ಮಹೀಪತಿಯು ಇಂದ್ರನ ಉಪದೇಶದಂತೆ ರಮ್ಯ ಸಂಪದ್ಭರಿತ ಚೇದಿರಾಜ್ಯವನ್ನು ತನ್ನದಾಗಿಸಿಕೊಂಡನು.

01057003a ತಮಾಶ್ರಮೇ ನ್ಯಸ್ತಶಸ್ತ್ರಂ ನಿವಸಂತಂ ತಪೋರತಿಂ।
01057003c 1ದೇವಃ ಸಾಕ್ಷಾತ್ಸ್ವಯಂ ವಜ್ರೀ ಸಮುಪಾಯಾನ್ಮಹೀಪತಿಂ।।

ಶಸ್ತ್ರಗಳನ್ನು ಪರಿತ್ಯಜಿಸಿ ಆಶ್ರಮದಲ್ಲಿ ವಾಸಿಸುತ್ತಾ ತಪೋನಿರತನಾಗಿರಲು ಆ ಮಹೀಪತಿಯ ಬಳಿ ಸಾಕ್ಷಾತ್ ದೇವ ವಜ್ರಿಯೇ ಸ್ವಯಂ ಬಂದನು.

01057004a 2ಇಂದ್ರತ್ವಮರ್ಹೋ ರಾಜಾಯಂ ತಪಸೇತ್ಯನುಚಿಂತ್ಯ ವೈ।।
01057004c ತಂ ಸಾಂತ್ವೇನ ನೃಪಂ ಸಾಕ್ಷಾತ್ತಪಸಃ ಸಂನ್ಯವರ್ತಯತ್।।

ತನ್ನ ತಪಸ್ಸಿನ ಮೂಲಕ ರಾಜನು ಇಂದ್ರತ್ವಕ್ಕೆ ಅರ್ಹನಾಗಬಲ್ಲನೆಂದು ಚಿಂತಿಸಿ ಅವನು ನೃಪನಿಗೆ ತಪಸ್ಸನ್ನು ತೊರೆಯಲು ಸಲಹೆಯನ್ನಿತ್ತನು.

01057005 ಇಂದ್ರ ಉವಾಚ 01057005a ನ ಸಂಕೀರ್ಯೇತ ಧರ್ಮೋಽಯಂ ಪೃಥಿವ್ಯಾಂ ಪೃಥಿವೀಪತೇ।
01057005c ತಂ ಪಾಹಿ ಧರ್ಮೋ ಹಿ ಧೃತಃ ಕೃತ್ಸ್ನಂ ಧಾರಯತೇ ಜಗತ್।।

ಇಂದ್ರನು ಹೇಳಿದನು: “ಪೃಥ್ವೀಪತೇ! ಪೃಥ್ವಿಯಲ್ಲಿ ಧರ್ಮ ಸಂಕರವು ನಡೆಯದಿರಲಿ. ಧರ್ಮವನ್ನು ರಕ್ಷಿಸು. ಯಾಕೆಂದರೆ ಧೃತ ಧರ್ಮವು ಇಡೀ ಜಗತ್ತನ್ನೇ ಎತ್ತಿ ಹಿಡಿಯುತ್ತದೆ.

01057006a ಲೋಕ್ಯಂ ಧರ್ಮಂ ಪಾಲಯ ತ್ವಂ ನಿತ್ಯಯುಕ್ತಃ ಸಮಾಹಿತಃ।
01057006c ಧರ್ಮಯುಕ್ತಸ್ತತೋ ಲೋಕಾನ್ಪುಣ್ಯಾನಾಪ್ಸ್ಯಸಿ ಶಾಶ್ವತಾನ್।।

ನಿತ್ಯಯುಕ್ತನೂ ಸಮಾಹಿತನೂ ಆಗಿ ಲೋಕಧರ್ಮವನ್ನು ಪಾಲಿಸು. ಧರ್ಮಯುಕ್ತನಾಗಿದ್ದರೆ ಲೋಕಗಳಲ್ಲಿ ಶಾಶ್ವತ ಪುಣ್ಯಗಳನ್ನು ಸಂಪಾದಿಸುವೆ.

01057007a ದಿವಿಷ್ಟಸ್ಯ ಭುವಿಷ್ಟಸ್ತ್ವಂ ಸಖಾ ಭೂತ್ವಾ ಮಮ ಪ್ರಿಯಃ।
01057007c ಊಧಃ ಪೃಥಿವ್ಯಾ3 ಯೋ ದೇಶಸ್ತಮಾವಸ ನರಾಧಿಪ।।
01057008a ಪಶವ್ಯಶ್ಚೈವ ಪುಣ್ಯಶ್ಚ ಸುಸ್ಥಿರೋ ಧನಧಾನ್ಯವಾನ್।
01057008c ಸ್ವಾರಕ್ಷ್ಯಶ್ಚೈವ ಸೌಮ್ಯಶ್ಚ ಭೋಗ್ಯೈರ್ಭೂಮಿಗುಣೈರ್ಯುತಃ।।

ನಾನು ದಿವಿ ಮತ್ತು ನೀನು ಭುವಿಗೆ ಸೇರಿದ್ದರೂ ನೀನು ನನ್ನ ಪ್ರಿಯ ಸಖನಾಗಿರು. ನರಾಧಿಪ! ಪೃಥ್ವಿಯಲ್ಲಿ ಪಶುಭರಿತ, ಪುಣ್ಯ, ಸುಸ್ಥಿರ, ಧನಧಾನ್ಯಗಳಿಂದ ತುಂಬಿದ, ಸುರಕ್ಷ, ಸೌಮ್ಯ, ಸುಗುಣಗಳನ್ನು ಹೊಂದಿದ್ದ ಭೋಗ್ಯಭೂಮಿಯನ್ನು ನಿನ್ನ ದೇಶವನ್ನಾಗಿಸಿ ಆಳು.

01057009a ಅತ್ಯನ್ಯಾನೇಷ ದೇಶೋ ಹಿ ಧನರತ್ನಾದಿಭಿರ್ಯುತಃ।
01057009c ವಸುಪೂರ್ಣಾ ಚ ವಸುಧಾ ವಸ ಚೇದಿಷು ಚೇದಿಪ।।

ಚೇದಿಪ! ಈ ವಸುಧೆಯಲ್ಲಿ ಚೇದಿಯೇ ಧನರತ್ನಭರಿತ, ಸಂಪೂರ್ಣ ಸಂಪತ್ತನ್ನು ಹೊಂದಿದ ದೇಶ. ಅಲ್ಲಿ ವಾಸಿಸು.

01057010a ಧರ್ಮಶೀಲಾ ಜನಪದಾಃ ಸುಸಂತೋಷಾಶ್ಚ ಸಾಧವಃ।
01057010c ನ ಚ ಮಿಥ್ಯಾಪ್ರಲಾಪೋಽತ್ರ ಸ್ವೈರೇಷ್ವಪಿ ಕುತೋಽನ್ಯಥಾ।।

ಇಲ್ಲಿಯ ನಾಗರಿಕರೆಲ್ಲ ಧರ್ಮಶೀಲರೂ, ಸುಸಂತೋಷರೂ, ಸಾಧುಗಳೂ ಆಗಿದ್ದಾರೆ. ಇಲ್ಲಿ ಚೇಷ್ಟೆಗೂ ಕೂಡ ಸುಳ್ಳನ್ನಾಡುವುದಿಲ್ಲ. ಹಾಗಿರುವಾಗ ಬೇರೆ ಯಾವ ಸಂದರ್ಭಗಳಲ್ಲಿ ಸುಳ್ಳನ್ನಾಡುತ್ತಾರೆ?

01057011a ನ ಚ ಪಿತ್ರಾ ವಿಭಜ್ಯಂತೇ ನರಾ ಗುರುಹಿತೇ ರತಾಃ।
01057011c ಯುಂಜತೇ ಧುರಿ ನೋ ಗಾಶ್ಚ ಕೃಶಾಃ ಸಂಧುಕ್ಷಯಂತಿ ಚ।।

ಅಲ್ಲಿಯ ಜನರು ಗುರುಹಿತರತರಾಗಿರುದ್ದಾರೆ. ತಂದೆಯಿಂದ ಬೇರೆಯಾಗುವುದಿಲ್ಲ. ನೇಗಿಲಿಗೆ ಅಥವಾ ಬಂಡಿಗಳಿಗೆ ಹಸುಗಳನ್ನು ಕಟ್ಟುವುದಿಲ್ಲ. ಬಡಕಲು ಗೋವುಗಳೂ ಕೂಡ ಸಮೃದ್ಧ ಹಾಲನ್ನು ಕೊಡುತ್ತವೆ.

01057012a ಸರ್ವೇ ವರ್ಣಾಃ ಸ್ವಧರ್ಮಸ್ಥಾಃ ಸದಾ ಚೇದಿಷು ಮಾನದ।
01057012c ನ ತೇಽಸ್ತ್ಯವಿದಿತಂ ಕಿಂ ಚಿತ್ತ್ರಿಷು ಲೋಕೇಷು ಯದ್ಭವೇತ್।।

ಮಾನದ! ಚೇದಿಯಲ್ಲಿ ಸರ್ವ ವರ್ಣದವರೂ ಸದಾ ಸ್ವಧರ್ಮ ನಿರತರಾಗಿದ್ದಾರೆ. ಈ ಮೂರೂ ಲೋಕಗಳಲ್ಲಿ ಇಲ್ಲಿರುವ ನಿನಗೆ ತಿಳಿಯದೇ ಇರುವಂಥಹದು ಯಾವುದೂ ನಡೆಯುವುದಿಲ್ಲ.

01057013a ದೇವೋಪಭೋಗ್ಯಂ ದಿವ್ಯಂ ಚ ಆಕಾಶೇ ಸ್ಫಾಟಿಕಂ ಮಹತ್।
01057013c ಆಕಾಶಗಂ ತ್ವಾಂ ಮದ್ದತ್ತಂ ವಿಮಾನಮುಪಪತ್ಸ್ಯತೇ।।

ದೇವೋಪಭೋಗ್ಯ ದಿವ್ಯ, ಆಕಾಶದಲ್ಲಿರುವ ಮಹಾ ಸ್ಫಟಿಕದ ಈ ಆಕಾಶಗ ವಿಮಾನವನ್ನು ನಿನಗೆ ನಾನು ಉಡುಗೊರೆಯಾಗಿ ಕೊಡುತ್ತಿದ್ದೇನೆ.

01057014a ತ್ವಮೇಕಃ ಸರ್ವಮರ್ತ್ಯೇಷು ವಿಮಾನವರಮಾಸ್ಥಿತಃ।
01057014c ಚರಿಷ್ಯಸ್ಯುಪರಿಸ್ಥೋ ವೈ ದೇವೋ ವಿಗ್ರಹವಾನಿವ।।

ಸರ್ವ ಮರ್ತ್ಯರಲ್ಲಿ ನೀನೊಬ್ಬನೇ ವಿಮಾನದಲ್ಲಿ ಕುಳಿತು ದೇವ ವಿಗ್ರಹನಂತೆ ಸಂಚರಿಸಬಲ್ಲವನಾಗುತ್ತೀಯೆ.

01057015a ದದಾಮಿ ತೇ ವೈಜಯಂತೀಂ ಮಾಲಾಮಂಲಾನಪಂಕಜಾಂ।
01057015c ಧಾರಯಿಷ್ಯತಿ ಸಂಗ್ರಾಮೇ ಯಾ ತ್ವಾಂ ಶಸ್ತ್ರೈರವಿಕ್ಷತಂ।।

ಬಾಡದೇ ಇರುವ ಕಮಲಗಳಿಂದ ರಚಿಸಿದ ಈ ವೈಜಯಂತಿ ಮಾಲೆಯನ್ನು ಕೊಡುತ್ತೇನೆ. ಇದನ್ನು ಧರಿಸಿದರೆ ಸಂಗ್ರಾಮದಲ್ಲಿ ನಿನಗೆ ಶಸ್ತ್ರಗಳಿಂದ ರಕ್ಷಣೆ ದೊರೆಯುತ್ತದೆ.

01057016a ಲಕ್ಷಣಂ ಚೈತದೇವೇಹ ಭವಿತಾ ತೇ ನರಾಧಿಪ।
01057016c ಇಂದ್ರಮಾಲೇತಿ ವಿಖ್ಯಾತಂ ಧನ್ಯಮಪ್ರತಿಮಂ ಮಹತ್।।

ನರಾಧಿಪ! ಇಂದ್ರಮಾಲಾ ಎಂದು ವಿಖ್ಯಾತ ಈ ಧನ್ಯ, ಅಪ್ರತಿಮ ಮಹತ್ತರ ಮಾಲೆಯು ನಿನಗೆ ದೇವತೆಗಳಿತ್ತ ಗುರುತಾಗಿರುತ್ತದೆ.””

01057017 ವೈಶಂಪಾಯನ ಉವಾಚ 01057017a ಯಷ್ಟಿಂ ಚ ವೈಣವೀಂ ತಸ್ಮೈ ದದೌ ವೃತ್ರನಿಷೂದನಃ।
01057017c ಇಷ್ಟಪ್ರದಾನಮುದ್ದಿಶ್ಯ ಶಿಷ್ಟಾನಾಂ ಪರಿಪಾಲಿನೀಂ।।

ವೈಶಂಪಾಯನನು ಹೇಳಿದನು: “ವೃತ್ರನಿಶೂದನನು ಅವನಿಗೆ ಇಷ್ಟಪ್ರದಾನ ಮತ್ತು ಶಿಷ್ಟ ಪರಿಪಾಲನೆಗೋಸ್ಕರ ಒಂದು ಬಿದಿರಿನ ಕಂಬವನ್ನೂ ಕೊಟ್ಟನು.

01057018a ತಸ್ಯಾಃ ಶಕ್ರಸ್ಯ ಪೂಜಾರ್ಥಂ ಭೂಮೌ ಭೂಮಿಪತಿಸ್ತದಾ।
01057018c ಪ್ರವೇಶಂ ಕಾರಯಾಮಾಸ ಗತೇ ಸಂವತ್ಸರೇ ತದಾ।।

ಒಂದು ಸಂವತ್ಸರವು ಕಳೆದ ನಂತರ ಭೂಮಿಪತಿಯು ಶಕ್ರನ ಪೂಜಾರ್ಥವಾಗಿ ಅದನ್ನು ಭೂಮಿಯಲ್ಲಿ ಹುಗಿಸಿದನು.

01057019a ತತಃ ಪ್ರಭೃತಿ ಚಾದ್ಯಾಪಿ ಯಷ್ಟ್ಯಾಃ ಕ್ಷಿತಿಪಸತ್ತಮೈಃ।
01057019c ಪ್ರವೇಶಃ ಕ್ರಿಯತೇ ರಾಜನ್ಯಥಾ ತೇನ ಪ್ರವರ್ತಿತಃ।।

ರಾಜನ್! ಅಂದಿನಿಂದ ಯಾವೆಲ್ಲ ಕ್ಷಿತಿಪತಿಸತ್ತಮರಾದರೋ ಅವರೆಲ್ಲರೂ ಅವನು ಮಾಡಿದ ರೀತಿಯಲ್ಲಿ ಬಿದಿರಿನ ಕಂಬವನ್ನು ಭೂಮಿಯಲ್ಲಿ ಹುಗಿಯುತ್ತಿದ್ದರು.

01057020a ಅಪರೇದ್ಯುಸ್ತಥಾ ಚಾಸ್ಯಾಃ ಕ್ರಿಯತೇ ಉಚ್ಛ್ರಯೋ ನೃಪೈಃ।
01057020c ಅಲಂಕೃತಾಯಾಃ ಪಿಟಕೈರ್ಗಂಧೈರ್ಮಾಲ್ಯೈಶ್ಚ ಭೂಷಣೈಃ।
01057020e ಮಾಲ್ಯದಾಮಪರಿಕ್ಷಿಪ್ತಾ ವಿಧಿವತ್ಕ್ರಿಯತೇಽಪಿ ಚ।।

ನೃಪರು ಅದನ್ನು ನೇರವಾಗಿ ನಿಲ್ಲಿಸಿ, ವಸ್ತ್ರದ ಮುಂಡಾಸು, ಗಂಧ ಮತ್ತು ಮಾಲೆ ಭೂಷಣಗಳಿಂದ ಅಲಂಕರಿಸಿ ಮಾಲೆಗಳಿಂದ ಸುತ್ತಿ ವಿಧಿವತ್ತಾಗಿ ಪೂಜಿಸುತ್ತಿದ್ದರು.

01057021a ಭಗವಾನ್ಪೂಜ್ಯತೇ ಚಾತ್ರ ಹಾಸ್ಯರೂಪೇಣ ಶಂಕರಃ।
01057021c ಸ್ವಯಮೇವ ಗೃಹೀತೇನ ವಸೋಃ ಪ್ರೀತ್ಯಾ ಮಹಾತ್ಮನಃ।।

ಈ ರೀತಿ ಪೂಜಿಸಿಕೊಂಡ ಭಗವಾನ್ ಶಂಕರ ಇಂದ್ರನು ಸ್ವಯಂ ತಾನೇ ಹಂಸರೂಪದಲ್ಲಿ ಬಂದು ಮಹಾತ್ಮ ವಸುವಿನ ಪೂಜೆಯನ್ನು ಸ್ವೀಕರಿಸಿದನು.

01057022a ಏತಾಂ ಪೂಜಾಂ ಮಹೇಂದ್ರಸ್ತು ದೃಷ್ಟ್ವಾ ದೇವ ಕೃತಾಂ ಶುಭಾಂ।
01057022c ವಸುನಾ ರಾಜಮುಖ್ಯೇನ ಪ್ರೀತಿಮಾನಬ್ರವೀದ್ವಿಭುಃ।।

ವಿಭು ಮಹೇಂದ್ರನಾದರೋ ಈ ಮಂಗಳಕರ ಪೂಜೆಯನ್ನು ನೋಡಿ ಸಂತೃಪ್ತನಾಗಿ ರಾಜಮುಖ್ಯ ವಸುವಿಗೆ ಹೇಳಿದನು:

01057023a ಯೇ ಪೂಜಯಿಷ್ಯಂತಿ ನರಾ ರಾಜಾನಶ್ಚ ಮಹಂ ಮಮ।
01057023c ಕಾರಯಿಷ್ಯಂತಿ ಚ ಮುದಾ ಯಥಾ ಚೇದಿಪತಿರ್ನೃಪಃ।।
01057024a ತೇಷಾಂ ಶ್ರೀರ್ವಿಜಯಶ್ಚೈವ ಸರಾಷ್ಟ್ರಾಣಾಂ ಭವಿಷ್ಯತಿ।
01057024c ತಥಾ ಸ್ಫೀತೋ ಜನಪದೋ ಮುದಿತಶ್ಚ ಭವಿಷ್ಯತಿ।।

“ಚೇದಿಪತಿ ನೃಪನ ಹಾಗೆ ಸಂತಸದಿಂದ ಯಾವ ನರ ಅಥವಾ ರಾಜನು ನನ್ನ ಈ ಮಹಾ ಪೂಜೆಯನ್ನು ಮಾಡುತ್ತಾನೋ ಅವನಿಗೆ ಸಂಪತ್ತು, ವಿಜಯ ಮತ್ತು ರಾಜ್ಯಗಳು ದೊರೆಯುತ್ತವೆ. ಅವನ ಜನಪದವೂ ವಿಸ್ತಾರಗೊಳ್ಳುತ್ತದೆ ಮತ್ತು ಸದಾ ಸಂತಸದಲ್ಲಿರುತ್ತದೆ.”

01057025a ಏವಂ ಮಹಾತ್ಮನಾ ತೇನ ಮಹೇಂದ್ರೇಣ ನರಾಧಿಪ।
01057025c ವಸುಃ ಪ್ರೀತ್ಯಾ ಮಘವತಾ ಮಹಾರಾಜೋಽಭಿಸತ್ಕೃತಃ।।

ಈ ರೀತಿ ನರಾಧಿಪ ಮಹಾರಾಜ ವಸುವು ಸಂಪ್ರೀತ ಮಹಾತ್ಮ ಮಹೇಂದ್ರ ಮಘವತನಿಂದ ಹರಸಲ್ಪಟ್ಟನು.

01057026a ಉತ್ಸವಂ ಕಾರಯಿಷ್ಯಂತಿ ಸದಾ ಶಕ್ರಸ್ಯ ಯೇ ನರಾಃ।
01057026c ಭೂಮಿದಾನಾದಿಭಿರ್ದಾನೈರ್ಯಥಾ ಪೂತಾ ಭವಂತಿ ವೈ।
01057026e ವರದಾನಮಹಾಯಜ್ಞೈಸ್ತಥಾ ಶಕ್ರೋತ್ಸವೇನ ತೇ।।
01057027a ಸಂಪೂಜಿತೋ ಮಘವತಾ ವಸುಶ್ಚೇದಿಪತಿಸ್ತದಾ।

ಯಾವ ಮಾನವರು ಸದಾ ಭೂಮಿದಾನ ಮತ್ತು ಇತರ ದಾನಗಳೊಂದಿಗೆ ಈ ಶಕ್ರನ ಉತ್ಸವವನ್ನು ನಡೆಸುತ್ತಾರೋ ಅವರು ಪವಿತ್ರರಾಗುತ್ತಾರೆ. ವರದಾನ ಮಹಾಯಜ್ಞಗಳೊಡಗೂಡಿದ ಈ ಶಕ್ರೋತ್ಸವದಿಂದ ಅವರು ಚೇದಿಪತಿ ವಸುವಿನಂತೆ ಮಘವತನಿಂದ ಸಂಪೂಜಿತರಾಗುತ್ತಾರೆ.

01057027c ಪಾಲಯಾಮಾಸ ಧರ್ಮೇಣ ಚೇದಿಸ್ಥಃ ಪೃಥಿವೀಮಿಮಾಂ।
01057027e ಇಂದ್ರಪ್ರೀತ್ಯಾ ಭೂಮಿಪತಿಶ್ಚಕಾರೇಂದ್ರಮಹಂ ವಸುಃ।।

ಭೂಮಿಪತಿ ವಸುವು ಚೇದಿಯಲ್ಲಿದ್ದುಕೊಂಡು ಇಡೀ ಪೃಥ್ವಿಯನ್ನು ಧರ್ಮದಿಂದ ಪಾಲಿಸಿದನು ಮತ್ತು ಇಂದ್ರನ ಪ್ರೀತಿಗೋಸ್ಕರ ಪ್ರತಿವರ್ಷ ಇಂದ್ರಮಹೋತ್ಸವನ್ನು ನಡೆಸಿದನು.

01057028a ಪುತ್ರಾಶ್ಚಾಸ್ಯ ಮಹಾವೀರ್ಯಾಃ ಪಂಚಾಸನ್ನಮಿತೌಜಸಃ।
01057028c ನಾನಾರಾಜ್ಯೇಷು ಚ ಸುತಾನ್ಸ ಸಮ್ರಾಡಭ್ಯಷೇಚಯತ್।।

ಅವನಿಗೆ ಐದು ಅಮಿತೌಜಸ ಮಹಾವೀರ್ಯವಂತ ಪುತ್ರರಾದರು ಮತ್ತು ಅವನು ತನ್ನ ಮಕ್ಕಳನ್ನು ನಾನಾ ರಾಜ್ಯಗಳಲ್ಲಿ ಸಾಮ್ರಾಟರನ್ನಾಗಿ ನಿಯೋಜಿಸಿದನು.

01057029a ಮಹಾರಥೋ ಮಗಧರಾಡ್ವಿಶ್ರುತೋ ಯೋ ಬೃಹದ್ರಥಃ।
01057029c ಪ್ರತ್ಯಗ್ರಹಃ ಕುಶಾಂಬಶ್ಚ ಯಮಾಹುರ್ಮಣಿವಾಹನಂ।
01057029e ಮಚ್ಛಿಲ್ಲಶ್ಚ4 ಯದುಶ್ಚೈವ ರಾಜನ್ಯಶ್ಚಾಪರಾಜಿತಃ।।

ಮಹಾರಥಿಯೆಂದು ವಿಶ್ರುತ ಮಗಧರಾಜ ಬೃಹದ್ರಥ, ಪ್ರತ್ಯಗ್ರಹ, ಮಣಿವಾಹನನೆಂದೂ ಕರೆಯಲ್ಪಟ್ಟ ಕುಶಾಂಬ, ಮಚ್ಛಿಲ ಮತ್ತು ಯದು – ಎಲ್ಲ ರಾಜರೂ ಅಪರಾಜಿತರು.

01057030a ಏತೇ ತಸ್ಯ ಸುತಾ ರಾಜನ್ರಾಜರ್ಷೇರ್ಭೂರಿತೇಜಸಃ।
01057030c ನ್ಯವೇಶಯನ್ನಾಮಭಿಃ ಸ್ವೈಸ್ತೇ ದೇಶಾಂಶ್ಚ ಪುರಾಣಿ ಚ।
01057030e ವಾಸವಾಃ ಪಂಚ ರಾಜಾನಃ ಪೃಥಗ್ವಂಶಾಶ್ಚ ಶಾಶ್ವತಾಃ।।

ಭೂರಿತೇಜಸ ರಾಜರ್ಷಿ ರಾಜನ ಈ ಮಕ್ಕಳು ತಮ್ಮ ಹೆಸರುಗಳನ್ನೇ ಹೊಂದಿದ ದೇಶ ಮತ್ತು ಪುರಗಳನ್ನು ಸ್ಥಾಪಿಸಿದರು; ಈ ಐದು ವಾಸವ ರಾಜರು ಮುಂದೆ ತಮ್ಮ ಶಾಶ್ವತ ವಂಶಗಳನ್ನು ಸ್ಥಾಪಿಸಿದರು.

01057031a ವಸಂತಮಿಂದ್ರಪ್ರಾಸಾದೇ ಆಕಾಶೇ ಸ್ಫಾಟಿಕೇ ಚ ತಂ।
01057031c ಉಪತಸ್ಥುರ್ಮಹಾತ್ಮಾನಂ ಗಂಧರ್ವಾಪ್ಸರಸೋ ನೃಪಂ।
01057031e ರಾಜೋಪರಿಚರೇತ್ಯೇವಂ ನಾಮ ತಸ್ಯಾಥ ವಿಶ್ರುತಂ।।

ಇಂದ್ರನು ನೀಡಿದ ಸ್ಫಟಿಕ ವಿಮಾನದಲ್ಲಿ ಆಕಾಶದಲ್ಲಿ ಹೋಗುತ್ತಿರುವಾಗ ಮಹಾತ್ಮ ನೃಪ ವಸುವನ್ನು ಗಂಧರ್ವ ಅಪ್ಸರೆಯರು ಉಪಚರಿಸುತ್ತಿದ್ದರು. ಆದುದರಿಂದ ಅವನಿಗೆ ರಾಜ ಉಪರಿಚರ ಎಂಬ ಹೆಸರು ಬಂದಿತು.

01057032a ಪುರೋಪವಾಹಿನೀಂ ತಸ್ಯ ನದೀಂ ಶುಕ್ತಿಮತೀಂ ಗಿರಿಃ।
01057032c ಅರೌತ್ಸೀಚ್ಚೇತನಾಯುಕ್ತಃ ಕಾಮಾತ್ಕೋಲಾಹಲಃ ಕಿಲ।।

ಒಮ್ಮೆ ಪುರದ ಬಳಿ ಹರಿಯುತ್ತಿದ್ದ ಶುಕ್ತಿಮತಿ ನದಿಯನ್ನು ಕೋಲಾಹಲವೆಂಬ ಕಾಮಪೀಡಿತ ಗಿರಿಯು ಬಲತ್ಕಾರಮಾಡಿತು ಎಂದು ಹೇಳುತ್ತಾರೆ.

01057033a ಗಿರಿಂ ಕೋಲಾಹಲಂ ತಂ ತು ಪದಾ ವಸುರತಾಡಯತ್।
01057033c ನಿಶ್ಚಕ್ರಾಮ ನದೀ ತೇನ ಪ್ರಹಾರವಿವರೇಣ ಸಾ।।

ಆಗ ವಸುವು ಕೋಲಾಹಲ ಪರ್ವತವನ್ನು ತನ್ನ ಕಾಲಿನಿಂದ ಒದ್ದಾಗ ಅವನ ಈ ಒದೆತದಿಂದ ಉಂಟಾದ ಕಣಿವೆಯಲ್ಲಿ ನದಿಯು ಹರಿಯಲು ಪ್ರಾರಂಭಿಸಿತು.

01057034a ತಸ್ಯಾಂ ನದ್ಯಾಮಜನಯನ್ಮಿಥುನಂ ಪರ್ವತಃ ಸ್ವಯಂ।
01057034c ತಸ್ಮಾದ್ವಿಮೋಕ್ಷಣಾತ್ಪ್ರೀತಾ ನದೀ ರಾಜ್ಞೇ ನ್ಯವೇದಯತ್।।

ಸ್ವಯಂ ಪರ್ವತನೊಂದಿಗೆ ಕೂಡಿದ ನದಿಯಲ್ಲಿ ಅವಳಿ ಮಕ್ಕಳು ಜನಿಸಿದರು; ಮತ್ತು ಸಂತೋಷದಿಂದ ನದಿಯು ತನಗೆ ಮೋಕ್ಷವನ್ನು ನೀಡಿದ ರಾಜನಿಗೆ ಅವರನ್ನು ಕೊಟ್ಟಳು.

01057035a ಯಃ ಪುಮಾನಭವತ್ತತ್ರ ತಂ ಸ ರಾಜರ್ಷಿಸತ್ತಮಃ।
01057035c ವಸುರ್ವಸುಪ್ರದಶ್ಚಕ್ರೇ ಸೇನಾಪತಿಮರಿಂದಮಂ।
01057035e ಚಕಾರ ಪತ್ನೀಂ ಕನ್ಯಾಂ ತು ದಯಿತಾಂ ಗಿರಿಕಾಂ ನೃಪಃ।।

ಅವರಲ್ಲಿ ಓರ್ವನು ಹುಡುಗನಾಗಿದ್ದನು. ಆ ಅರಿಂದಮನನ್ನು ರಾಜರ್ಷಿಸತ್ತಮ ವಸುವು ತನ್ನ ಸೇನಾಪತಿಯನಾಗಿ ನಿಯುಕ್ತಿಸಿ ಕೊಂಡನು. ಮಗಳು ಗಿರಿಕೆಯನ್ನು ನೃಪನು ತನ್ನ ಪತ್ನಿಯನ್ನಾಗಿ ಮಾಡಿಕೊಂಡನು.

01057036a ವಸೋಃ ಪತ್ನೀ ತು ಗಿರಿಕಾ ಕಾಮಾತ್ಕಾಲೇ ನ್ಯವೇದಯತ್।
01057036c ಋತುಕಾಲಮನುಪ್ರಾಪ್ತಂ ಸ್ನಾತಾ ಪುಂಸವನೇ ಶುಚಿಃ।।

ಒಮ್ಮೆ ವಸುವಿನ ಪತ್ನಿ ಗಿರಿಕೆಯು ತಾನು ಕಾಮಕಾಲದಲ್ಲಿದ್ದೇನೆಂದು ತಿಳಿಸಿ ಋತುಕಾಲವನ್ನು ಮುಗಿಸಿ ಸ್ನಾನಮಾಡಿ ಶುಚಿರ್ಭೂತಳಾಗಿ ಪುಂಸವನಳಾದಳು.

01057037a ತದಹಃ ಪಿತರಶ್ಚೈನಮೂಚುರ್ಜಹಿ ಮೃಗಾನಿತಿ।
01057037c ತಂ ರಾಜಸತ್ತಮಂ ಪ್ರೀತಾಸ್ತದಾ ಮತಿಮತಾಂ ವರಂ।।

ಆದರೆ ಅದೇ ದಿವಸ ಅವನ ಪ್ರೀತ ಪಿತೃಗಳು ಮತಿವಂತರಲ್ಲಿ ಶ್ರೇಷ್ಠ ಆ ರಾಜಸತ್ತಮನಿಗೆ “ಜಿಂಕೆಯನ್ನು ಹೊಡೆದು ತಾ!” ಎಂದರು.

01057038a ಸ ಪಿತೄಣಾಂ ನಿಯೋಗಂ ತಮವ್ಯತಿಕ್ರಮ್ಯ ಪಾರ್ಥಿವಃ।
01057038c ಚಚಾರ ಮೃಗಯಾಂ ಕಾಮೀ ಗಿರಿಕಾಮೇವ ಸಂಸ್ಮರನ್।
01057038e ಅತೀವ ರೂಪಸಂಪನ್ನಾಂ ಸಾಕ್ಷಾಚ್ಛ್ರಿಯಮಿವಾಪರಾಂ।।

ತನ್ನ ಪಿತೃಗಳ ನಿಯೋಗವನ್ನು ಅತಿಕ್ರಮಿಸಲಾಗದೆ ಆ ಪಾರ್ಥಿವನು ಕಾಮದಲ್ಲಿದ್ದ ಸಾಕ್ಷಾತ್ ಶ್ರೀಯನ್ನು ಮೀರಿದ ಅತೀವ ರೂಪಸಂಪನ್ನ ಗರಿಕೆಯನ್ನೇ ನೆನೆಯುತ್ತಾ ಜಿಂಕೆಯನ್ನು ಬೇಟೆಯಾಡಲು ಹೋದನು.

01057039a 5ತಸ್ಯ ರೇತಃ ಪ್ರಚಸ್ಕಂದ ಚರತೋ ರುಚಿರೇ ವನೇ।
01057039c ಸ್ಕನ್ನಮಾತ್ರಂ ಚ ತದ್ರೇತೋ ವೃಕ್ಷಪತ್ರೇಣ ಭೂಮಿಪಃ।।

ಆ ಸುಂದರ ವನದಲ್ಲಿ ತಿರುಗುತ್ತಿರುವಾಗ ಅವನ ವೀರ್ಯ ಸ್ಖಲನವಾಯಿತು. ಸ್ಖಲನವಾದ ಕೂಡಲೇ ಭೂಮಿಪನು ಆ ವೀರ್ಯವನ್ನು ಒಂದು ಮರದ ಎಲೆಯಲ್ಲಿ ಹಿಡಿದನು.

01057040a ಪ್ರತಿಜಗ್ರಾಹ ಮಿಥ್ಯಾ ಮೇ ನ ಸ್ಕಂದೇದ್ರೇತ ಇತ್ಯುತ।
01057040c ಋತುಶ್ಚ ತಸ್ಯಾಃ ಪತ್ನ್ಯಾ ಮೇ ನ ಮೋಘಃ ಸ್ಯಾದಿತಿ ಪ್ರಭುಃ।।

ಹಿಡಿದು “ನನ್ನ ಈ ಸ್ಖಲಿತ ವೀರ್ಯವು ಹಾಳಾಗಬಾರದು ಮತ್ತು ನನ್ನ ಪತ್ನಿಯ ಋತುಕಾಲವೂ ವ್ಯರ್ಥವಾಗಬಾರದು” ಎಂದು ಪ್ರಭುವು ಯೋಚಿಸಿದನು.

01057041a ಸಂಚಿಂತ್ಯೈವಂ ತದಾ ರಾಜಾ ವಿಚಾರ್ಯ ಚ ಪುನಃ ಪುನಃ।
01057041c ಅಮೋಘತ್ವಂ ಚ ವಿಜ್ಞಾಯ ರೇತಸೋ ರಾಜಸತ್ತಮಃ।।
01057042a ಶುಕ್ರಪ್ರಸ್ಥಾಪನೇ ಕಾಲಂ ಮಹಿಷ್ಯಾಃ ಪ್ರಸಮೀಕ್ಷ್ಯ ಸಃ।

ಈ ಯೋಚನೆ ಬಂದಕೂಡಲೇ ರಾಜನು ಪುನಃ ಪುನಃ ವಿಚಾರಮಾಡಿದನು. ರಾಜಸತ್ತಮನು ವೀರ್ಯವು ಬೀಳುವ ವೇಳೆಯಲ್ಲಿ ರಾಣಿಯು ಋತುಮತಿಯಾಗಿದ್ದಾಳೆ ಎಂದು ತಿಳಿದು ತನ್ನ ವೀರ್ಯವು ನಷ್ಟವಾಗಕೂಡದೆಂದು ನಿಶ್ಚಯಿಸಿದನು.

01057042c ಅಭಿಮಂತ್ರ್ಯಾಥ ತಚ್ಛುಕ್ರಮಾರಾತ್ತಿಷ್ಟಂತಮಾಶುಗಂ।
01057042e ಸೂಕ್ಷ್ಮಧರ್ಮಾರ್ಥತತ್ತ್ವಜ್ಞೋ ಜ್ಞಾತ್ವಾ ಶ್ಯೇನಂ ತತೋಽಬ್ರವೀತ್।।

ಧರ್ಮಾರ್ಥಗಳ ಸೂಕ್ಷ್ಮತೆಯನ್ನು ತಿಳಿದಿದ್ದ ಅವನು ವೀರ್ಯವನ್ನು ಅಭಿಮಂತ್ರಿಸಿ ಹತ್ತಿರದಲ್ಲಿಯೇ ಕುಳಿತಿದ್ದ ಒಂದು ವೇಗವಾಹಿನಿ ಗಿಡುಗವನ್ನುದ್ದೇಶಿಸಿ ಹೇಳಿದನು:

01057043a ಮತ್ಪ್ರಿಯಾರ್ಥಮಿದಂ ಸೌಮ್ಯ ಶುಕ್ರಂ ಮಮ ಗೃಹಂ ನಯ।
01057043c ಗಿರಿಕಾಯಾಃ ಪ್ರಯಚ್ಛಾಶು ತಸ್ಯಾ ಹ್ಯಾರ್ತವಮದ್ಯ ವೈ।। ।

“ಸೌಮ್ಯ! ನನ್ನ ಪ್ರಿಯೆಯ ಸಲುವಾಗಿ ಈ ವೀರ್ಯವನ್ನು ತೆಗೆದುಕೊಂಡು ನನ್ನ ಮನೆಗೆ ಹೋಗಿ ಗಿರಿಕೆಗೆ ಕೊಡು. ಇಂದು ಅವಳು ಋತುಮತಿಯಾಗಿದ್ದಾಳೆ.”

01057044a ಗೃಹೀತ್ವಾ ತತ್ತದಾ ಶ್ಯೇನಸ್ತೂರ್ಣಮುತ್ಪತ್ಯ ವೇಗವಾನ್।
01057044c ಜವಂ ಪರಮಮಾಸ್ಥಾಯ ಪ್ರದುದ್ರಾವ ವಿಹಂಗಮಃ।।

ಗಿಡುಗವು ಅದನ್ನು ಹಿಡಿದು ತಕ್ಷಣವೇ ಮೇಲೆ ಹಾರಿತು. ಆ ಪಕ್ಷಿಯು ತಕ್ಷಣವೇ ಅತ್ಯಂತ ವೇಗದಲ್ಲಿ ಹಾರತೊಡಗಿತು.

01057045a ತಮಪಶ್ಯದಥಾಯಾಂತಂ ಶ್ಯೇನಂ ಶ್ಯೇನಸ್ತಥಾಪರಃ।
01057045c ಅಭ್ಯದ್ರವಚ್ಚ ತಂ ಸದ್ಯೋ ದೃಷ್ಟ್ವೈವಾಮಿಷಶಂಕಯಾ।।
01057046a ತುಂಡಯುದ್ಧಮಥಾಕಾಶೇ ತಾವುಭೌ ಸಂಪ್ರಚಕ್ರತುಃ।
01057046c ಯುಧ್ಯತೋರಪತದ್ರೇತಸ್ತಚ್ಚಾಪಿ ಯಮುನಾಂಭಸಿ।।

ಬರುತ್ತಿದ್ದ ಗಿಡುಗವನ್ನು ಇನ್ನೊಂದು ಗಿಡುಗವು ನೋಡಿ, ನೋಡಿದಾಕ್ಷಣವೇ, ಅದು ಹಿಡಿದಿದ್ದುದು ಮಾಂಸದ ತುಂಡೆಂದು ಶಂಕಿಸಿ ಅದನ್ನು ಬೆನ್ನಟ್ಟಿತು ಮತ್ತು ಅವೆರಡೂ ಆಕಾಶದಲ್ಲಿ ಕಿತ್ತಾಡ ತೊಡಗಿದವು. ಹೀಗೆ ಕಿತ್ತಾಡುತ್ತಿರುವಾಗ ಆ ವೀರ್ಯವು ಯಮುನಾ ನದಿಯಲ್ಲಿ ಬಿದ್ದಿತು.

01057047a ತತ್ರಾದ್ರಿಕೇತಿ ವಿಖ್ಯಾತಾ ಬ್ರಹ್ಮಶಾಪಾದ್ವರಾಪ್ಸರಾಃ।
01057047c ಮೀನಭಾವಮನುಪ್ರಾಪ್ತಾ ಬಭೂವ ಯಮುನಾಚರೀ।।

ಅಲ್ಲಿ ಆದ್ರಿಕ ಎಂಬ ವಿಖ್ಯಾತ ಅಪ್ಸರ ಶ್ರೇಷ್ಠಳು ಬ್ರಹ್ಮಶಾಪದಿಂದಾಗಿ ಮೀನಿನ ರೂಪವನ್ನು ಹೊಂದಿ ಯಮುನೆಯಲ್ಲಿ ಈಸುತ್ತಿದ್ದಳು.

01057048a ಶ್ಯೇನಪಾದಪರಿಭ್ರಷ್ಟಂ ತದ್ವೀರ್ಯಮಥ ವಾಸವಂ।
01057048c ಜಗ್ರಾಹ ತರಸೋಪೇತ್ಯ ಸಾದ್ರಿಕಾ ಮತ್ಸ್ಯರೂಪಿಣೀ।।

ಗಿಡುಗನ ಕಾಲಿನಿಂದ ಬಿದ್ದ ವಾಸವನ ವೀರ್ಯವನ್ನು ತಕ್ಷಣವೇ ಮತ್ಸ್ಯರೂಪಿಣಿಯಾಗಿ ಈಸುತ್ತಿದ್ದ ಆದ್ರಿಕೆಯು ನುಂಗಿದಳು.

01057049a ಕದಾ ಚಿದಥ ಮತ್ಸೀಂ ತಾಂ ಬಬಂಧುರ್ಮತ್ಸ್ಯಜೀವಿನಃ।
01057049c ಮಾಸೇ ಚ ದಶಮೇ ಪ್ರಾಪ್ತೇ ತದಾ ಭರತಸತ್ತಮ।
01057049e ಉಜ್ಜಹ್ರುರುದರಾತ್ತಸ್ಯಾಃ ಸ್ತ್ರೀಪುಮಾಂಸಂ ಚ ಮಾನುಷಂ।।

ಭರತಸತ್ತಮ! ಹತ್ತು ತಿಂಗಳುಗಳು ಕಳೆದ ನಂತರ ಒಮ್ಮೆ ಬೆಸ್ತರು ಆ ಮತ್ಸ್ಯೆಯನ್ನು ಹಿಡಿದರು, ಮತ್ತು ಅದರ ಹೊಟ್ಟೆಯಲ್ಲಿ ಒಂದು ಹೆಣ್ಣು ಮತ್ತು ಗಂಡು ಅವಳಿ ನರರನ್ನು ಕಂಡರು.

01057050a ಆಶ್ಚರ್ಯಭೂತಂ ಮತ್ವಾ ತದ್ರಾಜ್ಞಸ್ತೇ ಪ್ರತ್ಯವೇದಯನ್।
01057050c ಕಾಯೇ ಮತ್ಸ್ಯಾ ಇಮೌ ರಾಜನ್ಸಂಭೂತೌ ಮಾನುಷಾವಿತಿ।।

ಆಶ್ಚರ್ಯಗೊಂಡ ಅವರು ರಾಜನಲ್ಲಿಗೆ ಹೋಗಿ ನಿವೇದಿಸಿದರು: “ರಾಜನ್! ಈ ಮನುಷ್ಯ ಅವಳಿಗಳು ಮತ್ಸ್ಯೆಯ ದೇಹದಿಂದ ಜನಿಸಿದರು.”

01057051a ತಯೋಃ ಪುಮಾಂಸಂ ಜಗ್ರಾಹ ರಾಜೋಪರಿಚರಸ್ತದಾ।
01057051c ಸ ಮತ್ಸ್ಯೋ ನಾಮ ರಾಜಾಸೀದ್ಧಾರ್ಮಿಕಃ ಸತ್ಯಸಂಗರಃ।।

ಅವರೀರ್ವರಲ್ಲಿ ಗಂಡುಮಗುವನ್ನು ರಾಜ ಉಪರಿಚರನು ತೆಗೆದುಕೊಂಡನು, ಮತ್ತು ಅವನು ಧಾರ್ಮಿಕ ಸತ್ಯಸಂಗರ ಮತ್ಸ್ಯ ಎಂಬ ಹೆಸರಿನ ರಾಜನಾದನು.

01057052a ಸಾಪ್ಸರಾ ಮುಕ್ತಶಾಪಾ ಚ ಕ್ಷಣೇನ ಸಮಪದ್ಯತ।
01057052c ಪುರೋಕ್ತಾ ಯಾ ಭಗವತಾ ತಿರ್ಯಗ್ಯೋನಿಗತಾ ಶುಭೇ।
01057052e ಮಾನುಷೌ ಜನಯಿತ್ವಾ ತ್ವಂ ಶಾಪಮೋಕ್ಷಮವಾಪ್ಸ್ಯಸಿ।।

“ಶುಭೇ! ನೀನು ಪ್ರಾಣಿಯೋನಿಯಲ್ಲಿರುವಾಗ ನೀನು ಈರ್ವರು ನರಪುತ್ರರಿಗೆ ಜನ್ಮವಿತ್ತಾಗ ಶಾಪದಿಂದ ವಿಮುಕ್ತಳಾಗುತ್ತೀಯೆ!” ಎಂದು ಹಿಂದೆ ಭಗವಂತನು ಹೇಳಿದ ಹಾಗೆಯೇ ಆ ಅಪ್ಸರೆಯು ಕ್ಷಣದಲ್ಲಿಯೇ ಶಾಪ ವಿಮುಕ್ತಳಾದಳು.

01057053a ತತಃ ಸಾ ಜನಯಿತ್ವಾ ತೌ ವಿಶಸ್ತಾ ಮತ್ಸ್ಯಘಾತಿನಾ।
01057053c ಸಂತ್ಯಜ್ಯ ಮತ್ಸ್ಯರೂಪಂ ಸಾ ದಿವ್ಯಂ ರೂಪಮವಾಪ್ಯ ಚ।
01057053e ಸಿದ್ಧರ್ಷಿಚಾರಣಪಥಂ ಜಗಾಮಾಥ ವರಾಪ್ಸರಾಃ।।

ಅವರೀರ್ವರಿಗೆ ಜನ್ಮವಿತ್ತು ಬೆಸ್ತರಿಂದ ಕೊಲ್ಲಲ್ಪಟ್ಟ ಆ ಅಪ್ಸರ ಶ್ರೇಷ್ಠೆಯು ಮತ್ಸ್ಯರೂಪವನ್ನು ತ್ಯಜಿಸಿ ತನ್ನ ದಿವ್ಯ ರೂಪವನ್ನು ಹೊಂದಿ ಸಿದ್ಧ ಋಷಿ ಚರಣರ ದಾರಿಯಲ್ಲಿ ಹೊರಟು ಹೋದಳು.

01057054a ಯಾ ಕನ್ಯಾ ದುಹಿತಾ ತಸ್ಯಾ ಮತ್ಸ್ಯಾ ಮತ್ಸ್ಯಸಗಂಧಿನೀ।
01057054c ರಾಜ್ಞಾ ದತ್ತಾಥ ದಾಶಾಯ ಇಯಂ ತವ ಭವತ್ವಿತಿ।
01057054e ರೂಪಸತ್ತ್ವಸಮಾಯುಕ್ತಾ ಸರ್ವೈಃ ಸಮುದಿತಾ ಗುಣೈಃ।।

ಮೀನಿನ ವಾಸನೆಯನ್ನು ಹೊಂದಿದ್ದ ಆ ಮೀನಿನ ಮಗಳು ರೂಪಸತ್ವ ಸಮಾಯುಕ್ತಳಾಗಿದ್ದಳು. ಸರ್ವ ಸುಮುದಿತ ಗುಣಗಳಿಂದ ಕೂಡಿದ ಆ ಕನ್ಯೆಯನ್ನು ರಾಜನು ದಾಶನಿಗೆ “ಇವಳು ನಿನ್ನ ಮಗಳಾಗಿರಲಿ!” ಎಂದು ಕೊಟ್ಟನು.

01057055a ಸಾ ತು ಸತ್ಯವತೀ ನಾಮ ಮತ್ಸ್ಯಘಾತ್ಯಭಿಸಂಶ್ರಯಾತ್।
01057055c ಆಸೀನ್ಮತ್ಸ್ಯಸಗಂಧೈವ ಕಂ ಚಿತ್ಕಾಲಂ ಶುಚಿಸ್ಮಿತಾ।।

ಸತ್ಯವತೀ ಎಂಬ ಹೆಸರಿನ ಆ ಶುಚಿಸ್ಮಿತೆಯು ಬೆಸ್ತರೊಂದಿಗೆ ವಾಸಿಸುತ್ತಿದ್ದುದರಿಂದ ಕೆಲವು ಕಾಲದವರೆಗೆ ಮೀನಿನ ವಾಸನೆಯನ್ನು ಹೊಂದಿದ್ದಳು.

01057056a ಶುಶ್ರೂಷಾರ್ಥಂ ಪಿತುರ್ನಾವಂ ತಾಂ ತು ವಾಹಯತೀಂ ಜಲೇ।
01057056c ತೀರ್ಥಯಾತ್ರಾಂ ಪರಿಕ್ರಾಮನ್ನಪಶ್ಯದ್ವೈ ಪರಾಶರಃ।।

ತಂದೆಯ ಶುಶ್ರೂಷೆ ಮಾಡಲೋಸುಗ ನದಿಯಲ್ಲಿ ದೋಣಿಯನ್ನು ನಡೆಸುತ್ತಿದ್ದ ಅವಳನ್ನು ಒಮ್ಮೆ ತೀರ್ಥಯಾತ್ರೆ ಮಾಡುತ್ತಾ ತಿರುಗುತ್ತಿದ್ದ ಪರಾಶರನು ನೋಡಿದನು.

01057057a ಅತೀವ ರೂಪಸಂಪನ್ನಾಂ ಸಿದ್ಧಾನಾಮಪಿ ಕಾಂಕ್ಷಿತಾಂ।
01057057c ದೃಷ್ಟ್ವೈವ ಚ ಸ ತಾಂ ಧೀಮಾಂಶ್ಚಕಮೇ ಚಾರುದರ್ಶನಾಂ।
01057057e ವಿದ್ವಾಂಸ್ತಾಂ ವಾಸವೀಂ ಕನ್ಯಾಂ ಕಾರ್ಯವಾನ್ಮುನಿಪುಂಗವಃ6।।

ಸಿದ್ಧರ ಮನವನ್ನೂ ಸೆಳೆಯುವ ಆ ಅತೀವ ರೂಪಸಂಪನ್ನೆಯನ್ನು ನೋಡಿದ ಆ ಧೀಮಂತ ವಿದ್ವಾಂಸ ಮುನಿಪುಂಗವನು ಅವಳ ಸೌಂದರ್ಯವನ್ನು ಬಯಸಿ ವಾಸವಿ ಕನ್ಯೆಯೊಡನೆ ಕಾರ್ಯನಿರತನಾದನು.

01057058a 7ಸಾಬ್ರವೀತ್ಪಶ್ಯ ಭಗವನ್ಪಾರಾವಾರೇ ಋಷೀನ್ಸ್ಥಿತಾನ್।
01057058c ಆವಯೋರ್ದೃಶ್ಯತೋರೇಭಿಃ ಕಥಂ ನು ಸ್ಯಾತ್ಸಮಾಗಮಃ।।

ಅವಳು ಹೇಳಿದಳು: “ಭಗವನ್! ನೋಡು! ದಂಡೆಗಳಲ್ಲಿ ಋಷಿಗಳು ನಿಂತಿದ್ದಾರೆ. ಅವರು ನಮ್ಮನ್ನು ನೋಡುತ್ತಿದ್ದಂತೆ ನಾವು ಹೇಗೆ ಪರಸ್ಪರ ಸಮಾಗಮ ಹೊಂದೋಣ?”

01057059a ಏವಂ ತಯೋಕ್ತೋ ಭಗವಾನ್ನೀಹಾರಮಸೃಜತ್ಪ್ರಭುಃ।
01057059c ಯೇನ ದೇಶಃ ಸ ಸರ್ವಸ್ತು ತಮೋಭೂತ ಇವಾಭವತ್।।

ಇದನ್ನು ಕೇಳಿದ ಭಗವಾನ್ ಪ್ರಭುವು ಆ ಸ್ಥಳದಲ್ಲಿ ಕತ್ತಲೆ ಕವಿಯುವಂತೆ ಮಂಜನ್ನು ನಿರ್ಮಿಸಿದನು.

01057060a ದೃಷ್ಟ್ವಾ ಸೃಷ್ಟಂ ತು ನೀಹಾರಂ ತತಸ್ತಂ ಪರಮರ್ಷಿಣಾ।
01057060c ವಿಸ್ಮಿತಾ ಚಾಬ್ರವೀತ್ಕನ್ಯಾ ವ್ರೀಡಿತಾ ಚ ಮನಸ್ವಿನೀ।।

ಪರಮ‌ಋಷಿಯು ತಕ್ಷಣವೇ ಸೃಷ್ಟಿಸಿದ ಕತ್ತಲೆಯ ಆವರಣವನ್ನು ಕಂಡು ವಿಸ್ಮಿತ ಮನಸ್ವಿನಿಯು ನಾಚುತ್ತಾ ಹೇಳಿದಳು:

01057061a ವಿದ್ಧಿ ಮಾಂ ಭಗವನ್ಕನ್ಯಾಂ ಸದಾ ಪಿತೃವಶಾನುಗಾಂ।
01057061c ತ್ವತ್ಸಮ್ಯೋಗಾಚ್ಚ ದುಷ್ಯೇತ ಕನ್ಯಾಭಾವೋ ಮಮಾನಘ।।

“ಭಗವನ್! ಸದಾ ಪಿತೃವಶದಲ್ಲಿದ್ದು ಅವನನ್ನೇ ಅನುಸರಿಸುತ್ತಿರುವ ನಾನು ಕನ್ಯೆಯೆಂದು ತಿಳಿ. ಅನಘ! ನಿನ್ನೊಡನೆ ಸೇರುವುದರಿಂದ ನನ್ನ ಕನ್ಯಾಭಾವದಲ್ಲಿ ದೋಷವುಂಟಾಗುವುದಲ್ಲವೇ?

01057062a ಕನ್ಯಾತ್ವೇ ದೂಷಿತೇ ಚಾಪಿ ಕಥಂ ಶಕ್ಷ್ಯೇ ದ್ವಿಜೋತ್ತಮ।
01057062c ಗಂತುಂ ಗೃಹಂ ಗೃಹೇ ಚಾಹಂ ಧೀಮನ್ನ ಸ್ಥಾತುಮುತ್ಸಹೇ।
01057062e ಏತತ್ಸಂಚಿಂತ್ಯ ಭಗವನ್ವಿಧತ್ಸ್ವ ಯದನಂತರಂ।।

ದ್ವಿಜೋತ್ತಮ! ಕನ್ಯತ್ವ ದೂಷಿತ ನಾನು ಹೇಗೆ ಮನೆಗೆ ಹಿಂದಿರುಗಲಿ? ಧೀಮಂತ! ಆಗ ನಾನು ಮನೆಯಲ್ಲಿ ವಾಸಿಸಲು ಉತ್ಸುಕಳಾಗುವುದಿಲ್ಲ. ಭಗವನ್! ಇವೆಲ್ಲವನ್ನೂ ಯೋಚಿಸಿ, ನಂತರ ನಿನಗೆ ತಿಳಿದದ್ದನ್ನು ಮಾಡು.”

01057063a ಏವಮುಕ್ತವತೀಂ ತಾಂ ತು ಪ್ರೀತಿಮಾನೃಷಿಸತ್ತಮಃ।
01057063c ಉವಾಚ ಮತ್ಪ್ರಿಯಂ ಕೃತ್ವಾ ಕನ್ಯೈವ ತ್ವಂ ಭವಿಷ್ಯಸಿ।।

ಹೀಗೆ ಹೇಳಿದ ಅವಳಲ್ಲಿ ಬಹಳ ಸಂತಸಗೊಂಡ ಆ ಋಷಿಸತ್ತಮನು “ನನ್ನ ಪ್ರಿಯ ಕಾರ್ಯವನ್ನು ಮಾಡಿದ ನಂತರವೂ ನೀನು ಕನ್ಯೆಯಾಗಿಯೇ ಉಳಿಯುವೆ” ಎಂದನು.

01057064a ವೃಣೀಷ್ವ ಚ ವರಂ ಭೀರು ಯಂ ತ್ವಮಿಚ್ಛಸಿ ಭಾಮಿನಿ।
01057064c ವೃಥಾ ಹಿ ನ ಪ್ರಸಾದೋ ಮೇ ಭೂತಪೂರ್ವಃ ಶುಚಿಸ್ಮಿತೇ।।

“ಭಾಮಿನಿ! ಭೀರು! ನಿನಗಿಷ್ಟವಾದ ವರವನ್ನು ಕೇಳು. ಶುಚಿಸ್ಮಿತೇ! ನನ್ನ ಪ್ರಸಾದವು ಈ ಹಿಂದೆ ಎಂದೂ ವೃಥವಾಗಿಲ್ಲ.”

01057065a ಏವಮುಕ್ತಾ ವರಂ ವವ್ರೇ ಗಾತ್ರಸೌಗಂಧ್ಯಮುತ್ತಮಂ।
01057065c ಸ ಚಾಸ್ಯೈ ಭಗವಾನ್ಪ್ರಾದಾನ್ಮನಸಃ ಕಾಂಕ್ಷಿತಂ ಪ್ರಭುಃ।।

ಇದನ್ನು ಕೇಳಿದ ಅವಳು ತನ್ನ ದೇಹವು ಉತ್ತಮ ಸುಗಂಧವನ್ನು ಹೊಂದಲಿ ಎಂದು ವರವನ್ನು ಕೇಳಲು ಅವಳ ಮನಸ್ಸಿನ ಆಕಾಂಕ್ಷೆಯನ್ನು ಭಗವಾನ್ ಪ್ರಭುವು ನೀಡಿದನು.

01057066a ತತೋ ಲಬ್ಧವರಾ ಪ್ರೀತಾ ಸ್ತ್ರೀಭಾವಗುಣಭೂಷಿತಾ।
01057066c ಜಗಾಮ ಸಹ ಸಂಸರ್ಗಂ ಋಷಿಣಾದ್ಭುತಕರ್ಮಣಾ।।

ಈ ವರವನ್ನು ಪಡೆದು ಪ್ರೀತಳಾದ ಅವಳು ಸ್ತ್ರೀಭಾವಗುಣ ಭೂಷಿತಳಾಗಿ ಆ ಅದ್ಭುತ ಕರ್ಮಣಿ ಋಷಿಯ ಬಳಿ ಸಾರಿ ಕೂಡಿದಳು.

01057067a ತೇನ ಗಂಧವತೀತ್ಯೇವ ನಾಮಾಸ್ಯಾಃ ಪ್ರಥಿತಂ ಭುವಿ।
01057067c ತಸ್ಯಾಸ್ತು ಯೋಜನಾದ್ಗಂಧಮಾಜಿಘ್ರಂತಿ ನರಾ ಭುವಿ।।

ಅಂದಿನಿಂದ ಅವಳು ಗಂಧವತೀ ಎಂಬ ಹೆಸರಿನಿಂದ ಭುವಿಯಲ್ಲಿ ಪ್ರಥಿತಗೊಂಡಳು. ಭುವಿಯಲ್ಲಿ ನರರಿಗೆ ಅವಳ ಸುಗಂಧವು ಒಂದು ಯೋಜನ ದೂರದಿಂದಲೂ ಸೂಸುವಂತಿತ್ತು.

01057068a ತತೋ ಯೋಜನಗಂಧೇತಿ ತಸ್ಯಾ ನಾಮ ಪರಿಶ್ರುತಂ।
01057068c ಪರಾಶರೋಽಪಿ ಭಗವಾಂಜಗಾಮ ಸ್ವಂ ನಿವೇಶನಂ।।

ಆದುದರಿಂದ ಅವಳು ಯೋಜನಗಂಧಿ ಎಂಬ ಹೆಸರಿನಿಂದಲೂ ಕರೆಯಲ್ಪಡುತ್ತಾಳೆ. ಭಗವಾನ್ ಪರಾಶರನು ತನ್ನ ನಿವೇಶನಕ್ಕೆ ತೆರಳಿದನು.

01057069a ಇತಿ ಸತ್ಯವತೀ ಹೃಷ್ಟಾ ಲಬ್ಧ್ವಾ ವರಮನುತ್ತಮಂ।
01057069c ಪರಾಶರೇಣ ಸಮ್ಯುಕ್ತಾ ಸದ್ಯೋ ಗರ್ಭಂ ಸುಷಾವ ಸಾ।
01057069e ಜಜ್ಞೇ ಚ ಯಮುನಾದ್ವೀಪೇ ಪಾರಾಶರ್ಯಃ ಸ ವೀರ್ಯವಾನ್।।

ಈ ರೀತಿ ಅನುತ್ತಮ ವರವನ್ನು ಪಡೆದ ಸತ್ಯವತಿಯು ಹರ್ಷಿತಳಾದಳು. ಪರಾಶರನನ್ನು ಸೇರಿದ ಕೂಡಲೇ ಅವಳು ಆ ಯಮುನಾ ದ್ವೀಪದಲ್ಲಿ ವೀರ್ಯವಂತ ಪಾರಶರ್ಯನಿಗೆ ಜನ್ಮವಿತ್ತಳು.

01057070a ಸ ಮಾತರಮುಪಸ್ಥಾಯ ತಪಸ್ಯೇವ ಮನೋ ದಧೇ।
01057070c ಸ್ಮೃತೋಽಹಂ ದರ್ಶಯಿಷ್ಯಾಮಿ ಕೃತ್ಯೇಷ್ವಿತಿ ಚ ಸೋಽಬ್ರವೀತ್।।

ತಪಸ್ಸನ್ನೇ ಮನದಲ್ಲಿಟ್ಟುಕೊಂಡಿದ್ದ ಅವನು ತಾಯಿಯ ಎದುರು ನಿಂತು “ನೀನು ಎಂದು ನನ್ನನ್ನು ನೆನೆದುಕೊಳ್ಳುತ್ತೀಯೋ ಆಗ ನಿನಗೆ ಕಾಣಿಸಿಕೊಳ್ಳುತ್ತೇನೆ ಮತ್ತು ಬೇಕಾದ ಕಾರ್ಯವನ್ನು ನಡೆಸಿಕೊಡುತ್ತೇನೆ” ಎಂದು ಹೇಳಿದನು.

01057071a ಏವಂ ದ್ವೈಪಾಯನೋ ಜಜ್ಞೇ ಸತ್ಯವತ್ಯಾಂ ಪರಾಶರಾತ್।
01057071c ದ್ವೀಪೇ ನ್ಯಸ್ತಃ ಸ ಯದ್ಬಾಲಸ್ತಸ್ಮಾದ್ದ್ವೈಪಾಯನೋಽಭವತ್।।

ಈ ರೀತಿ ದ್ವೈಪಾಯನನು ಪರಾಶರನಿಂದ ಸತ್ಯವತಿಯಲ್ಲಿ ಜನಿಸಿದನು. ದ್ವೀಪದಲ್ಲಿ ಅವನ ಜನ್ಮವಾದುದರಿಂದ ಅವನು ದ್ವೈಪಾಯನನಾದನು.

01057072a 8ಪಾದಾಪಸಾರಿಣಂ ಧರ್ಮಂ ವಿದ್ವಾನ್ಸ ತು ಯುಗೇ ಯುಗೇ।
01057072c ಆಯುಃ ಶಕ್ತಿಂ ಚ ಮರ್ತ್ಯಾನಾಂ ಯುಗಾನುಗಮವೇಕ್ಷ್ಯ ಚ।।
01057073a ಬ್ರಹ್ಮಣೋ ಬ್ರಾಹ್ಮಣಾನಾಂ ಚ ತಥಾನುಗ್ರಹಕಾಮ್ಯಯಾ।
01057073c ವಿವ್ಯಾಸ ವೇದಾನ್ಯಸ್ಮಾಚ್ಚ ತಸ್ಮಾದ್ವ್ಯಾಸ ಇತಿ ಸ್ಮೃತಃ।।

ಯುಗಯುಗದಲ್ಲಿಯೂ ಧರ್ಮದ ಒಂದೊಂದು ಕಾಲು ಕುಂಟಾಗುವುದೆಂದೂ ಮತ್ತು ಮನುಷ್ಯರ ಆಯಸ್ಸು-ಶಕ್ತಿಗಳು ಯುಗನಿಯಮಗಳನ್ನು ಅನುಸರಿಸಿದೆ ಎಂದು ತಿಳಿದ ಅವನು ಬ್ರಹ್ಮ ಮತ್ತು ಬ್ರಾಹ್ಮಣರಿಗೆ ಅನುಗ್ರಹಕಾರ್ಯ ಮಾಡಬೇಕೆಂದು ಬಯಸಿ ವೇದಗಳನ್ನು ವಿಂಗಡಿಸಿದನು, ಮತ್ತು ಇದರಿಂದಲೇ ಅವನು ವ್ಯಾಸನೆಂದು ಪ್ರಸಿದ್ಧನಾದನು.

01057074a ವೇದಾನಧ್ಯಾಪಯಾಮಾಸ ಮಹಾಭಾರತಪಂಚಮಾನ್।
01057074c ಸುಮಂತುಂ ಜೈಮಿನಿಂ ಪೈಲಂ ಶುಕಂ ಚೈವ ಸ್ವಮಾತ್ಮಜಂ।।
01057075a ಪ್ರಭುರ್ವರಿಷ್ಠೋ ವರದೋ ವೈಶಂಪಾಯನಮೇವ ಚ।
01057075c ಸಂಹಿತಾಸ್ತೈಃ ಪೃಥಕ್ತ್ವೇನ ಭಾರತಸ್ಯ ಪ್ರಕಾಶಿತಾಃ।।

ಆ ವರಿಷ್ಠ ವರದ ಪ್ರಭುವು ವೇದಗಳನ್ನು ಮತ್ತು ಐದನೆಯದಾದ ಮಹಾಭಾರತವನ್ನು ಸುಮಂತ, ಜೈಮಿನಿ, ಪೈಲ, ತನ್ನ ಮಗ ಶುಕ ಮತ್ತು ವೈಶಂಪಾಯನನಿಗೆ ಹೇಳಿಕೊಟ್ಟನು. ಇವರು ತಮ್ಮ ತಮ್ಮ ಶೈಲಿಗಳಲ್ಲಿ ಭಾರತವನ್ನು ಪ್ರಕಾಶಿಸಿದರು.

01057076a ತಥಾ ಭೀಷ್ಮಃ ಶಾಂತನವೋ ಗಂಗಾಯಾಮಮಿತದ್ಯುತಿಃ।
01057076c ವಸುವೀರ್ಯಾತ್ಸಮಭವನ್ಮಹಾವೀರ್ಯೋ ಮಹಾಯಶಾಃ।।

ನಂತರ ಶಾಂತನವನಿಂದ ಗಂಗೆಯಲ್ಲಿ ಅಮಿತಧ್ಯುತಿ ಮಹಾವೀರ ಮಹಾಯಶಸ್ವಿ ಭೀಷ್ಮನು ವಸುವೀರ್ಯದಿಂದ ಹುಟ್ಟಿದನು.

01057077a ಶೂಲೇ ಪ್ರೋತಃ ಪುರಾಣರ್ಷಿರಚೋರಶ್ಚೋರಶಂಕಯಾ।
01057077c ಅಣೀಮಾಂಡವ್ಯ ಇತಿ ವೈ ವಿಖ್ಯಾತಃ ಸುಮಹಾಯಶಾಃ।।

ಹಿಂದೆ ಒಮ್ಮೆ ಸುಮಹಾಯಶ ವಿಖ್ಯಾತ ಅಣೀಮಾಂಡವ್ಯ ಎನ್ನುವ ಋಷಿಯನ್ನು ಕಳ್ಳನಲ್ಲದಿದ್ದರೂ ಕಳ್ಳನೆನ್ನುವ ಅನುಮಾನದಿಂದ ಶೂಲಕ್ಕೇರಿಸಲಾಗಿತ್ತು.

01057078a ಸ ಧರ್ಮಮಾಹೂಯ ಪುರಾ ಮಹರ್ಷಿರಿದಮುಕ್ತವಾನ್।
01057078c ಇಷೀಕಯಾ ಮಯಾ ಬಾಲ್ಯಾದೇಕಾ ವಿದ್ಧಾ ಶಕುಂತಿಕಾ।।

ಆಗ ಈ ಮಹರ್ಷಿಯು ಧರ್ಮನನ್ನು ಕರೆದು ಹೇಳಿದನು: “ಬಾಲ್ಯದಲ್ಲಿ ನಾನು ಒಂದು ಪಕ್ಷಿಯನ್ನು ದರ್ಬೆಯ ತುದಿಯಿಂದ ಚುಚ್ಚಿದ್ದೆ ಅಷ್ಟೆ.

01057079a ತತ್ಕಿಲ್ಬಿಷಂ ಸ್ಮರೇ ಧರ್ಮ ನಾನ್ಯತ್ಪಾಪಮಹಂ ಸ್ಮರೇ।।
01057079c ತನ್ಮೇ ಸಹಸ್ರಸಮಿತಂ ಕಸ್ಮಾನ್ನೇಹಾಜಯತ್ತಪಃ।।

ಈ ಅಪರಾಧ ಮಾತ್ರ ನನಗೆ ನೆನಪಿದೆ. ಧರ್ಮ! ಬೇರೆ ಯಾವ ಪಾಪವೂ ನನ್ನಿಂದಾದದ್ದು ನೆನಪಿಲ್ಲ. ಇದನ್ನು ನಾನು ಸಹಸ್ರಾರು ವರ್ಷಗಳ ತಪಸ್ಸುಗಳಿಂದಲೂ ಹೇಗೆ ಜಯಿಸಲಿಲ್ಲ?

01057080a ಗರೀಯಾನ್ಬ್ರಾಹ್ಮಣವಧಃ ಸರ್ವಭೂತವಧಾದ್ಯತಃ।
01057080c ತಸ್ಮಾತ್ತ್ವಂ ಕಿಲ್ಬಿಷಾದಸ್ಮಾಚ್ಛೂದ್ರಯೋನೌ ಜನಿಷ್ಯಸಿ।।

ಸರ್ವ ಭೂತವಧೆಗಳಿಗಿಂತಲೂ ಬ್ರಾಹ್ಮಣವಧೆಯು ದೊಡ್ಡದು. ಆದುದರಿಂದ ನಿನ್ನ ಈ ಪಾಪದಿಂದ ನೀನು ಶೂದ್ರಯೋನಿಯಲ್ಲಿ ಜನಿಸುತ್ತೀಯೆ.”

01057081a ತೇನ ಶಾಪೇನ ಧರ್ಮೋಽಪಿ ಶೂದ್ರಯೋನಾವಜಾಯತ।
01057081c ವಿದ್ವಾನ್ವಿದುರರೂಪೇಣ ಧಾರ್ಮೀ ತನುರಕಿಲ್ಬಿಷೀ।।

ಅವನ ಈ ಶಾಪದಿಂದ ಧರ್ಮನೂ ಕೂಡ ದೋಷಗಳಿಲ್ಲದ ದೇಹವನ್ನು ಹೊಂದಿದ ಧಾರ್ಮಿಕ ವಿದ್ವಾನ್ ವಿದುರನ ರೂಪದಲ್ಲಿ ಶೂದ್ರಯೋನಿಯಲ್ಲಿ ಜನಿಸಿದನು.

01057082a ಸಂಜಯೋ ಮುನಿಕಲ್ಪಸ್ತು ಜಜ್ಞೇ ಸೂತೋ ಗವಲ್ಗಣಾತ್।
01057082c ಸೂರ್ಯಾಚ್ಚ ಕುಂತಿಕನ್ಯಾಯಾಂ ಜಜ್ಞೇ ಕರ್ಣೋ ಮಹಾರಥಃ।
01057082e ಸಹಜಂ ಕವಚಂ ಬಿಭ್ರತ್ಕುಂಡಲೋದ್ದ್ಯೋತಿತಾನನಃ।।

ಮುನಿಸಮಾನ ಸಂಜಯನು ಗಾವಲ್ಗಣನಲ್ಲಿ ಸೂತನಾಗಿ ಜನಿಸಿದನು. ಮಹಾರಥಿ ಕರ್ಣನು ಹುಟ್ಟುವಾಗಲೇ ಸಹಜ ಕವಚ ಮತ್ತು ಮುಖವನ್ನು ಬೆಳಗಿಸುತ್ತಾ ಹೊಳೆಯುತ್ತಿದ್ದ ಕುಂಡಲಗಳನ್ನು ಧರಿಸಿ ಸೂರ್ಯನಿಂದ ಕನ್ಯೆ ಕುಂತಿಯಲ್ಲಿ ಜನಿಸಿದನು.

01057083a ಅನುಗ್ರಹಾರ್ಥಂ ಲೋಕಾನಾಂ ವಿಷ್ಣುರ್ಲೋಕನಮಸ್ಕೃತಃ।
01057083c ವಸುದೇವಾತ್ತು ದೇವಕ್ಯಾಂ ಪ್ರಾದುರ್ಭೂತೋ ಮಹಾಯಶಾಃ।।

ಲೋಕನಮಸ್ಕೃತ ವಿಷ್ಣುವು ಲೋಕ ಅನುಗ್ರಹಾರ್ಥವಾಗಿ ಮಹಾಯಶ ವಸುದೇವ ದೇವಕಿಯರಲ್ಲಿ ಜನಿಸಿದನು.

01057084a ಅನಾದಿನಿಧನೋ ದೇವಃ ಸ ಕರ್ತಾ ಜಗತಃ ಪ್ರಭುಃ।
01057084c ಅವ್ಯಕ್ತಮಕ್ಷರಂ ಬ್ರಹ್ಮ ಪ್ರಧಾನಂ ನಿರ್ಗುಣಾತ್ಮಕಂ।।
01057085a ಆತ್ಮಾನಮವ್ಯಯಂ ಚೈವ ಪ್ರಕೃತಿಂ ಪ್ರಭವಂ ಪರಂ।
01057085c ಪುರುಷಂ ವಿಶ್ವಕರ್ಮಾಣಂ ಸತ್ತ್ವಯೋಗಂ ಧ್ರುವಾಕ್ಷರಂ।।

01057086a ಅನಂತಮಚಲಂ ದೇವಂ ಹಂಸಂ ನಾರಾಯಣಂ ಪ್ರಭುಂ।

01057086c ಧಾತಾರಮಜರಂ ನಿತ್ಯಂ ತಮಾಹುಃ ಪರಮವ್ಯಯಂ।।
01057087a 9ಪುರುಷಃ ಸ ವಿಭುಃ ಕರ್ತಾ ಸರ್ವಭೂತಪಿತಾಮಹಃ।
01057087c ಧರ್ಮಸಂವರ್ಧನಾರ್ಥಾಯ ಪ್ರಜಜ್ಞೇಽಂಧಕವೃಷ್ಣಿಷು।।

ಆ ಅನಾದಿನಿಧನ, ದೇವ, ಕರ್ತಾ, ಜಗತ್ ಪ್ರಭು, ಅವ್ಯಕ್ತ, ಅಕ್ಷರ, ಬ್ರಹ್ಮ, ಪ್ರಧಾನ, ನಿರ್ಗುಣಾತ್ಮಕ, ಆತ್ಮ, ಅವ್ಯಯ, ಪ್ರಕೃತಿಯ ಪರಮ ಪ್ರಭಾವಿ, ಪುರುಷ, ವಿಶ್ವಕರ್ಮ, ಸತ್ವಯೋಗಿ, ಧೃವ, ಅಕ್ಷರ, ಅನಂತ, ಅಚಲ, ದೇವ, ಹಂಸ, ನಾರಾಯಣ, ಪ್ರಭು, ಧಾತಾರ, ಅಜರ, ನಿತ್ಯ, ಪರಮವ್ಯಯ, ಪುರುಷ, ವಿಭು, ಕರ್ತ, ಸರ್ವಭೂತಪಿತಾಮಹನೆಂದು ಕರೆಯಲ್ಪಡುವವನು ಧರ್ಮಸಂವರ್ಧನಕ್ಕಾಗಿ ಅಂಧಕ-ವೃಷ್ಣಿಗಳಲ್ಲಿ ಜನಿಸಿದನು.

01057088a ಅಸ್ತ್ರಜ್ಞೌ ತು ಮಹಾವೀರ್ಯೌ ಸರ್ವಶಸ್ತ್ರವಿಶಾರದೌ।
01057088c ಸಾತ್ಯಕಿಃ ಕೃತವರ್ಮಾ ಚ ನಾರಾಯಣಮನುವ್ರತೌ।
01057088e ಸತ್ಯಕಾದ್ಧೃದಿಕಾಚ್ಚೈವ ಜಜ್ಞಾತೇಽಸ್ತ್ರವಿಶಾರದೌ।।

ನಾರಾಯಣನ ಅನುವ್ರತ ಅಸ್ತ್ರಜ್ಞರೂ, ಮಹಾವೀರ್ಯರೂ, ಸರ್ವಶಾಸ್ತ್ರವಿಶಾರದರೂ ಅಸ್ತ್ರವಿಶಾರದರೂ ಆದ ಸಾತ್ಯಕಿ-ಕೃತವರ್ಮರು ಸತ್ಯಕ ಮತ್ತು ಹೃದೀಕರಲ್ಲಿ ಜನಿಸಿದರು.

01057089a ಭರದ್ವಾಜಸ್ಯ ಚ ಸ್ಕನ್ನಂ ದ್ರೋಣ್ಯಾಂ ಶುಕ್ರಮವರ್ಧತ।
01057089c ಮಹರ್ಷೇರುಗ್ರತಪಸಸ್ತಸ್ಮಾದ್ದ್ರೋಣೋ ವ್ಯಜಾಯತ।।

ಭರದ್ವಾಜನ ಸ್ಖಲಿತ ವೀರ್ಯವು ದ್ರೋಣಿಯಲ್ಲಿ ಬೆಳೆಯತೊಡಗಿತು. ಅದರಿಂದ ಮಹರ್ಷಿ ಉಗ್ರತಪಸ್ವಿ ದ್ರೋಣನು ಜನಿಸಿದನು.

01057090a ಗೌತಮಾನ್ಮಿಥುನಂ ಜಜ್ಞೇ ಶರಸ್ತಂಬಾಚ್ಛರದ್ವತಃ।
01057090c ಅಶ್ವತ್ಥಾಮ್ನಶ್ಚ ಜನನೀ ಕೃಪಶ್ಚೈವ ಮಹಾಬಲಃ।
01057090e ಅಶ್ವತ್ಥಾಮಾ ತತೋ ಜಜ್ಞೇ ದ್ರೋಣಾದಸ್ತ್ರಭೃತಾಂ ವರಃ।।

ಶರದ್ವತ ಗೌತಮನಿಂದ, ಹುಲ್ಲಿನ ರಾಶಿಯಲ್ಲಿ ಅವಳಿಗಳು ಜನಿಸಿದರು - ಅಶ್ವತ್ಥಾಮನ ಜನನಿ ಮತ್ತು ಮಹಾಬಲಿ ಕೃಪ. ಅಸ್ತ್ರಭೃತರಲ್ಲಿ ಶ್ರೇಷ್ಠ ಅಶ್ವತ್ಥಾಮನು ದ್ರೋಣನಿಂದ ಜನಿಸಿದನು.

01057091a ತಥೈವ ಧೃಷ್ಟದ್ಯುಮ್ನೋಽಪಿ ಸಾಕ್ಷಾದಗ್ನಿಸಮದ್ಯುತಿಃ।
01057091c ವೈತಾನೇ ಕರ್ಮಣಿ ತತೇ ಪಾವಕಾತ್ಸಮಜಾಯತ।
01057091e ವೀರೋ ದ್ರೋಣವಿನಾಶಾಯ ಧನುಷಾ ಸಹ ವೀರ್ಯವಾನ್।।

ಸಾಕ್ಷಾತ್ ಅಗ್ನಿಸಮದ್ಯುತಿ ವೀರ ವೀರ್ಯವಾನ್ ಧೃಷ್ಟಧ್ಯುಮ್ನನೂ ಕೂಡ ದ್ರೋಣವಿನಾಶಕ್ಕಾಗಿ ಧನುಸ್ಸನ್ನು ಹಿಡಿದೇ ಯಜ್ಞವು ನಡೆಯುತ್ತಿರುವಾಗ ಉರಿಯುತ್ತಿರುವ ಬೆಂಕಿಯಲ್ಲಿ ಜನಿಸಿದನು.

01057092a ತಥೈವ ವೇದ್ಯಾಂ ಕೃಷ್ಣಾಪಿ ಜಜ್ಞೇ ತೇಜಸ್ವಿನೀ ಶುಭಾ।
01057092c ವಿಭ್ರಾಜಮಾನಾ ವಪುಷಾ ಬಿಭ್ರತೀ ರೂಪಮುತ್ತಮಂ।।

ಅದೇ ಯಜ್ಞಕುಂಡದಲ್ಲಿ ತೇಜಸ್ವಿನಿ, ಶುಭೆ, ಉತ್ತಮ ರೂಪಿಣಿ, ತನ್ನ ರೂಪದಿಂದ ವಿಭ್ರಾಜಮಾನ ಕೃಷ್ಣೆಯೂ ಜನಿಸಿದಳು.

01057093a ಪ್ರಹ್ರಾದಶಿಷ್ಯೋ ನಗ್ನಜಿತ್ಸುಬಲಶ್ಚಾಭವತ್ತತಃ।
01057093c ತಸ್ಯ ಪ್ರಜಾ ಧರ್ಮಹಂತ್ರೀ ಜಜ್ಞೇ ದೇವಪ್ರಕೋಪನಾತ್।।
01057094a ಗಾಂಧಾರರಾಜಪುತ್ರೋಽಭೂಚ್ಛಕುನಿಃ ಸೌಬಲಸ್ತಥಾ।
01057094c ದುರ್ಯೋಧನಸ್ಯ ಮಾತಾ ಚ ಜಜ್ಞಾತೇಽರ್ಥವಿದಾವುಭೌ।। ।

ಪ್ರಹ್ರಾದನ ಶಿಷ್ಯನಾಗಿದ್ದ ನಗ್ನಜಿತುವು ಸುಬಲನಾಗಿ ಹುಟ್ಟಿದನು. ದೇವಪ್ರಕೋಪನದಿಂದ ಅವನ ಸಂತತಿಯು ಧರ್ಮನಾಶಕವಾಯಿತು. ಅವನಿಗೆ ಗಾಂಧಾರ ರಾಜಪುತ್ರ ಸೌಬಲ ಶಕುನಿ ಮತ್ತು ದುರ್ಯೋಧನನ ಮಾತೆ – ಈ ಇಬ್ಬರು ಮಕ್ಕಳು ಹುಟ್ಟಿದರು.

01057095a ಕೃಷ್ಣದ್ವೈಪಾಯನಾಜ್ಜಜ್ಞೇ ಧೃತರಾಷ್ಟ್ರೋ ಜನೇಶ್ವರಃ।
01057095c ಕ್ಷೇತ್ರೇ ವಿಚಿತ್ರವೀರ್ಯಸ್ಯ ಪಾಂಡುಶ್ಚೈವ ಮಹಾಬಲಃ।।

ಕೃಷ್ಣದ್ವೈಪಾಯನನಿಂದ ವಿಚಿತ್ರವೀರ್ಯನ ಕ್ಷೇತ್ರದಲ್ಲಿ ಜನೇಶ್ವರ ಧೃತರಾಷ್ಟ್ರ ಮತ್ತು ಮಹಾಬಲಿ ಪಾಂಡುವು ಜನಿಸಿದರು.

01057096a 10ಪಾಂಡೋಸ್ತು ಜಜ್ಞಿರೇ ಪಂಚ ಪುತ್ರಾ ದೇವಸಮಾಃ ಪೃಥಕ್।
01057096c ದ್ವಯೋಃ ಸ್ತ್ರಿಯೋರ್ಗುಣಜ್ಯೇಷ್ಠಸ್ತೇಷಾಮಾಸೀದ್ಯುಧಿಷ್ಠಿರಃ।।

ಪಾಂಡುವಿಗೆ ಅವನ ಈರ್ವರು ಪತ್ನಿಯರಲ್ಲಿ ದೇವಸಮಾನ ಐವರು ಪುತ್ರರು ಜನಿಸಿದರು. ಅವರಲ್ಲಿ ಜ್ಯೇಷ್ಠನು ಗುಣವಂತ ಯುಧಿಷ್ಠಿರ.

01057097a ಧರ್ಮಾದ್ಯುಧಿಷ್ಠಿರೋ ಜಜ್ಞೇ ಮಾರುತಾತ್ತು ವೃಕೋದರಃ।
01057097c ಇಂದ್ರಾದ್ಧನಂಜಯಃ ಶ್ರೀಮಾನ್ಸರ್ವಶಸ್ತ್ರಭೃತಾಂ ವರಃ।।

ಧರ್ಮನಿಂದ ಯುಧಿಷ್ಠಿರ, ಮಾರುತನಿಂದ ವೃಕೋದರ, ಇಂದ್ರನಿಂದ ಸರ್ವಶಸ್ತ್ರಭೃತರಲ್ಲಿ ಶ್ರೇಷ್ಠ ಶ್ರೀಮಾನ್ ಧನಂಜಯ – ಇವರು ಜನಿಸಿದರು.

01057098a ಜಜ್ಞಾತೇ ರೂಪಸಂಪನ್ನಾವಶ್ವಿಭ್ಯಾಂ ತು ಯಮಾವುಭೌ।।
01057098c ನಕುಲಃ ಸಹದೇವಶ್ಚ ಗುರುಶುಶ್ರೂಷಣೇ ರತೌ।।

ರೂಪ ಸಂಪನ್ನರೂ ಗುರುಶುಶ್ರೂಷಣಾ ನಿರತರೂ ಆದ ಅವಳಿ ನಕುಲ ಮತ್ತು ಸಹದೇವರು ಅಶ್ವಿನಿಯರಿಂದ ಜನಿಸಿದರು.

01057099a ತಥಾ ಪುತ್ರಶತಂ ಜಜ್ಞೇ ಧೃತರಾಷ್ಟ್ರಸ್ಯ ಧೀಮತಃ।
01057099c ದುರ್ಯೋಧನಪ್ರಭೃತಯೋ ಯುಯುತ್ಸುಃ ಕರಣಸ್ತಥಾ।।

ಧೀಮಂತ ಧೃತರಾಷ್ಟ್ರನಿಗೆ ದುರ್ಯೋಧನನೂ ಸೇರಿ ನೂರು ಪುತ್ರರು ಮತ್ತು ಯುಯುತ್ಸುವೂ ಜನಿಸಿದರು.

01057100a 11ಅಭಿಮನ್ಯುಃ ಸುಭದ್ರಾಯಾಮರ್ಜುನಾದಭ್ಯಜಾಯತ।
01057100c ಸ್ವಸ್ರೀಯೋ ವಾಸುದೇವಸ್ಯ ಪೌತ್ರಃ ಪಾಂಡೋರ್ಮಹಾತ್ಮನಃ।।

ಅರ್ಜುನನಿಂದ ಸುಭದ್ರೆಯಲ್ಲಿ ವಾಸುದೇವನ ಅಳಿಯ ಮತ್ತು ಮಹಾತ್ಮ ಪಾಂಡುವಿನ ಮೊಮ್ಮಗ ಅಭಿಮನ್ಯುವು ಜನಿಸಿದನು.

01057101a ಪಾಂಡವೇಭ್ಯೋಽಪಿ ಪಂಚಭ್ಯಃ ಕೃಷ್ಣಾಯಾಂ ಪಂಚ ಜಜ್ಞಿರೇ।
01057101c ಕುಮಾರಾ ರೂಪಸಂಪನ್ನಾಃ ಸರ್ವಶಸ್ತ್ರವಿಶಾರದಾಃ।।

ಪಂಚ ಪಾಂಡವರಿಗೆ ಕೃಷ್ಣೆಯಲ್ಲಿಯೂ ಸಹ ಐವರು ರೂಪಸಂಪನ್ನ ಸರ್ವಶಸ್ತ್ರವಿಶಾರದ ಕುಮಾರರು ಜನಿಸಿದರು.

01057102a ಪ್ರತಿವಿಂಧ್ಯೋ ಯುಧಿಷ್ಠಿರಾತ್ಸುತಸೋಮೋ ವೃಕೋದರಾತ್।
01057102c ಅರ್ಜುನಾಚ್ಛ್ರುತಕೀರ್ತಿಸ್ತು ಶತಾನೀಕಸ್ತು ನಾಕುಲಿಃ।।

ಯುಧಿಷ್ಠಿರನಿಂದ ಪ್ರತಿವಿಂದ್ಯ, ವೃಕೋದರನಿಂದ ಸುತಸೋಮ, ಅರ್ಜುನನಿಂದ ಚಾರುಕೀರ್ತಿ, ಮತ್ತು ನಕುಲನಿಂದ ಶತಾನೀಕ.

01057103a ತಥೈವ ಸಹದೇವಾಚ್ಚ ಶ್ರುತಸೇನಃ ಪ್ರತಾಪವಾನ್।
01057103c ಹಿಡಿಂಬಾಯಾಂ ಚ ಭೀಮೇನ ವನೇ ಜಜ್ಞೇ ಘಟೋತ್ಕಚಃ।।

ಮತ್ತು ಸಹದೇವನಿಂದ ಪ್ರತಾಪವಂತ ಶೃತಸೇನ. ವನದಲ್ಲಿ ಹಿಡಿಂಬೆಯಲ್ಲಿ ಭೀಮನಿಂದ ಘಟೋತ್ಕಚನು ಹುಟ್ಟಿದನು.

01057104a ಶಿಖಂಡೀ ದ್ರುಪದಾಜ್ಜಜ್ಞೇ ಕನ್ಯಾ ಪುತ್ರತ್ವಮಾಗತಾ।
01057104c ಯಾಂ ಯಕ್ಷಃ ಪುರುಷಂ ಚಕ್ರೇ ಸ್ಥೂಣಃ ಪ್ರಿಯಚಿಕೀರ್ಷಯಾ।।

ಶಿಖಂಡಿಯು ದ್ರುಪದನಲ್ಲಿ ಕನ್ಯೆಯಾಗಿ ಹುಟ್ಟಿ ಪುತ್ರತ್ವವನ್ನು ಪಡೆದಳು. ಅವಳಿಗೆ ಪ್ರಿಯವಾದುದನ್ನು ಮಾಡಲೋಸುಗ ಯಕ್ಷ ಸ್ಥೂಲನು ಪುರುಷತ್ವವನ್ನು ನೀಡಿದನು.

01057105a ಕುರೂಣಾಂ ವಿಗ್ರಹೇ ತಸ್ಮಿನ್ಸಮಾಗಚ್ಛನ್ಬಹೂನ್ಯಥ।
01057105c ರಾಜ್ಞಾಂ ಶತಸಹಸ್ರಾಣಿ ಯೋತ್ಸ್ಯಮಾನಾನಿ ಸಮ್ಯುಗೇ।।

ಎಲ್ಲ ಕುರು ರಾಜರೂ ಮತ್ತು ಸೇನೆಗಳೂ ಆ ಬೃಹತ್ ಯುದ್ಧದಲ್ಲಿ ಪರಸ್ಪರರೊಡನೆ ಹೋರಾಡಲು ಸೇರಿದ್ದರು.

01057106a ತೇಷಾಮಪರಿಮೇಯಾನಿ ನಾಮಧೇಯಾನಿ ಸರ್ವಶಃ।
01057106c ನ ಶಕ್ಯಂ ಪರಿಸಂಖ್ಯಾತುಂ ವರ್ಷಾಣಾಮಯುತೈರಪಿ।
01057106e ಏತೇ ತು ಕೀರ್ತಿತಾ ಮುಖ್ಯಾಯೈರಾಖ್ಯಾನಮಿದಂ ತತಂ।।

ಆ ಅಪರಿಮೇಯರೆಲ್ಲರ ಹೆಸರುಗಳನ್ನು ಒಂದು ವರ್ಷದಲ್ಲಿಯೂ ಹೇಳಲು ಶಕ್ಯವಿಲ್ಲ. ಈ ಆಖ್ಯಾನದಲ್ಲಿ ಸೂಚಿತಗೊಂಡ ಕೆಲವು ಮುಖ್ಯರ ಹೆಸರುಗಳನ್ನು ಮಾತ್ರ ನಾನು ಹೇಳಿದ್ದೇನೆ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಆದಿವಂಶಾವತರಣಪರ್ವಣಿ ವ್ಯಾಸಾದ್ಯುತ್ಪತ್ತೌ ಸಪ್ತಪಂಚಾಶತ್ತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಆದಿವಂಶಾವತರಣ ಪರ್ವದಲ್ಲಿ ವ್ಯಾಸಾದ್ಯುತ್ಪತ್ತಿ ಎನ್ನುವ ಐವತ್ತೇಳನೆಯ ಅಧ್ಯಾಯವು.


  1. ಇದಕ್ಕೆ ಮೊದಲು ನೀಲಕಂಠೀಯದಲ್ಲಿ ಇಂದ್ರನೊಡನೆ ಇತರ ದೇವತೆಗಳೂ ಇದ್ದರೆಂದು ಸೂಚಿಸುವ ಈ ಅಧಿಕ ಶ್ಲೋಕಾರ್ಧವಿದೆ: ದೇವಾಃ ಶಕ್ರಪುರೋಗಾ ವೈ ರಾಜಾನಾಮುಪತಸ್ಥಿರೇ। ↩︎

  2. ನೀಲಕಂಠೀಯದಲ್ಲಿ ಇದಕ್ಕೆ ಬದಲಾದ ಒಂದು ಶ್ಲೋಕವಿದೆ: ದೇವಾ ಊಚುಃ। ನಸಂಕರ್ಯೇತ ಧರ್ಮೋಽಯಂ ಪೃಥಿವ್ಯಾಂ ಪೃಥಿವೀಪತೇ। ತ್ವಯಾ ಹಿ ಧರ್ಮೋ ವಿಧೃತಃ ಕೃತ್ಸಂ ಧಾರಯತೇ ಜಗತ್।। ↩︎

  3. ರಮ್ಯಃ ಪೃಥಿವ್ಯಾಂ ಎಂಬ ಪಾಠಾಂತರವಿದೆ (ನೀಲಕಂಠ). ↩︎

  4. ಮಾವೇಲ್ಲಶ್ಚ ಎಂಬ ಪಾಠಾಂತರವಿದೆ (ನೀಲಕಂಠ). ↩︎

  5. ಇದಕ್ಕೆ ಮೊದಲು ನೀಲಕಂಠೀಯದಲ್ಲಿ ವನಸೌಂದರ್ಯವನ್ನು ವರ್ಣಿಸುವ ಈ ಅಧಿಕ ಶ್ಲೋಕಗಳಿವೆ: ಅಶೋಕೈಶ್ಚಂಪಕೈಶ್ಚೂತೈರನೇಕೈರತಿಮುಕ್ತಕೈಃ। ಪುನ್ನಾಗೈಃ ಕರ್ಣಿಕಾರೈಶ್ಚ ಬಕುಲೈರ್ದಿವ್ಯಪಾಟಲೈಃ।। ಪಾಟಲೈರ್ನಾರಿಕೇಲೈಷ್ಚ ಚಂದನೈಶ್ಚಾರ್ಜುನೈಸ್ತಥಾ। ಏತೈ ರಮೈಮಹಾವೃಕ್ಷೈಃ ಪುಣ್ಯೈಃ ಸ್ವಾದುಫಲೇರ್ಯುತಮ್। ಕೋಕಿಲಾಕುಲಸಂನಾದಂ ಮತ್ತಭ್ರಮರನಾದಿತಮ್।। ವಸಂತಕಾಲೇ ತತ್ತಸ್ಯ ವನಂ ಚೈತ್ರರಥೋಪಮಮ್। ಮನ್ಮಥಾಭಿಪರೀತಾತ್ಮಾ ನಾಪಶ್ಯದ್ಗಿರಿಕಾಂ ತದಾ।। ಅಪಶ್ಯನ್ ಕಾಮಸಂತಪ್ತಶ್ಚರಮಾಣೇ ಯದೃಚ್ಛಯಾ। ಪುಣ್ಯಸಂಛನ್ನಶಾಖಾಯಾಂ ಪಲ್ಲವೈರುಪಶೋಭಿತಮ್।। ಅಶೋಕಂ ಸ್ತವಕೈಶ್ಛನ್ನಂ ರಮಣೀಯಮಪಶ್ಯತ। ಅಧಸ್ತಾತ್ತಸ್ಯ ಛಾಯಾಯಾಂ ಸುಖಾಸೀನೋ ನರಾಧಿಪಃ।। ಮಧುರ್ಗಂಧೈಶ್ಚ ಸಂಯುಕ್ತಂ ಪುಷ್ಪಗಂಧಮನೋಹರಮ್। ವಾಯುನಾ ಪ್ರೇರ್ಯಮಾಣಸ್ತು ಧೂಮ್ರಾಯ ಮುದಮನ್ವಗಾತ್।। ↩︎

  6. ದಿವ್ಯಾಂ ತಾಂ ವಾಸವೀಂ ಕನ್ಯಾಂ ರಂಭೋರುಂ ಮುನಿಪುಂಗವಃ। ಎಂಬ ಪಾಠಾಂತರವಿದೆ (ನೀಲಕಂಠ). ↩︎

  7. ಇದರ ಮೊದಲು ನೀಲಕಂಠೀಯದಲ್ಲಿ ಈ ಶ್ಲೋಕಾರ್ಧವಿದೆ: ಸಂಗಮಂ ಮಮ ಕಲ್ಯಾಣೀ ಕುರುಷ್ವೇತ್ಯಭ್ಯಭಾಷತ। ↩︎

  8. ಇದಕ್ಕೆ ಮೊದಲು ನೀಲಕಂಠೀಯದಲ್ಲಿ ಸತ್ಯವತಿಯ ಸುಗಂಧತ್ವದ ಕುರಿತು ದಾಶನು ಪ್ರಶ್ನಿಸುವ ಸನ್ನಿವೇಶವನ್ನು ವರ್ಣಿಸುವ ಈ ಅಧಿಕ ಶ್ಲೋಕಗಳಿವೆ: ತತಃ ಸತ್ಯವತೀ ಹೃಷ್ಟಾ ಜಗಾಮ ಸ್ವಂ ನಿವೇಶನಮ್। ತಸ್ಯಾಸ್ತ್ವಾಯೋಜನಾದ್ ಗಂಧಮಾಜಿಘ್ನಂತಿ ನರಾ ಭುವಿ।। ದಾಶರಾಜಸ್ತು ತದ್ಗಂಧಮಾಜಿಘ್ನನ್ ಪ್ರೀತಿಮಾಹವತ್। ದಾಶ ಉವಾಚ। ತ್ವಾಮಾಹುರ್ಮತ್ಯ್ಸಗಂಧೇತಿ ಕಥಂ ಬಾಲೇ ಸುಗಂಧತಾ। ಆಪಸ್ಯ ಮತ್ಸ್ಯಗಂಧತ್ವಂ ಕೇನ ದತ್ತಾ ಸುಗಂಧತಾ।। ಸತ್ಯವತ್ಯುವಾಚ: ಶಕ್ತೇಃ ಪುತ್ರೋ ಮಹಾಪ್ರಾಜ್ಞಃ ಪರಾಶರ ಇತಿ ಸ್ಮೃತಃ। ನಾವಂ ವಾಹಯಮಾನಾಯಾ ಮಮ ದೃಷ್ಟ್ವಾ ಸುಗರ್ಹಿತಂ। ಅಪಾಸ್ಯ ಮತ್ಸ್ಯಗಂಧತ್ವಂ ಯೋಜನಾದ್ ಗಂಧತಾಂ ದದೌ।। ಋಷೇಃ ಪ್ರಸಾದಂ ದೃಷ್ಟ್ವಾ ತು ಜನಾಃ ಪ್ರೀತಿಮುಪಾಗಮನ್। ↩︎

  9. ನೀಲಕಂಠೀಯದಲ್ಲಿ ಇದಕ್ಕೆ ಮೊದಲು ಈ ಶ್ಲೋಕಾರ್ಧವಿದೆ: ಕೈವಲ್ಯಂ ನಿರ್ಗುಣಂ ವಿಶ್ವಮನಾದಿಮಜಮವ್ಯಯಮ್। ↩︎

  10. ನೀಲಕಂಠೀಯದಲ್ಲಿ ಇದಕ್ಕೆ ಮೊದಲು ವಿದುರನ ಕುರಿತಾದ ಈ ಶ್ಲೋಕವಿದೆ: ಧರ್ಮಾರ್ಥಕುಶಲೋ ಧೀಮಾನ್ ಮೇಧಾವೀ ಧೂತಕಲ್ಮಷಃ। ವಿದುರಃ ಶೂದ್ರಯೂನೌ ತು ಜಜ್ಞೇ ದ್ವೈಪಾಯನಾದಪಿ।। ↩︎

  11. ನೀಲಕಂಠೀಯದಲ್ಲಿ ಧೃತರಾಷ್ಟ್ರನ ಮಕ್ಕಳಲ್ಲಿ ಏಕಾದಶ ಮಹಾರಥರನ್ನು ಸೂಚಿಸುವ ಈ ಶ್ಲೋಕಗಳಿವೆ: ತತೋ ದುಃಶಾಸನಶ್ಚೈವ ದುಃಸಹಶ್ಚಾಪಿ ಭಾರತ। ದುರ್ಮರ್ಷಣೋ ವಿಕರ್ಣಶ್ಚ ಚಿತ್ರಸೇನೋ ವಿವಿಂಶತಿಃ।। ಜಯಃ ಸತ್ಯವ್ರತಶ್ಚೈವ ಪುರುಮಿತ್ರಶ್ಚ ಭಾರತ। ವೈಶ್ಯಾಪುತ್ರೋ ಯುಯುತ್ಸುಶ್ಚ ಏಕಾದಶ ಮಹಾರಥಾಃ।। ↩︎