055 ಭಾರತಸೂತ್ರಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಆದಿವಂಶಾವತರಣ ಪರ್ವ

ಅಧ್ಯಾಯ 55

ಸಾರ

ವೈಶಂಪಾಯನನ ಕಥಾಸಾರಾಂಶ (1-40).

01055001 ವೈಶಂಪಾಯನ ಉವಾಚ।
01055001a ಗುರವೇ ಪ್ರಾಙ್ನಮಸ್ಕೃತ್ಯ ಮನೋಬುದ್ಧಿಸಮಾಧಿಭಿಃ।
01055001c ಸಂಪೂಜ್ಯ ಚ ದ್ವಿಜಾನ್ಸರ್ವಾಂಸ್ತಥಾನ್ಯಾನ್ವಿದುಷೋ ಜನಾನ್।।
01055002a ಮಹರ್ಷೇಃ ಸರ್ವಲೋಕೇಷು ವಿಶ್ರುತಸ್ಯಾಸ್ಯ ಧೀಮತಃ।
01055002c ಪ್ರವಕ್ಷ್ಯಾಮಿ ಮತಂ ಕೃತ್ಸ್ನಂ ವ್ಯಾಸಸ್ಯಾಮಿತತೇಜಸಃ।।

ವೈಶಂಪಾಯನನು ಹೇಳಿದನು: “ಮನಸ್ಸು, ಬುದ್ಧಿ ಮತ್ತು ಸಮಾಧಿ ಪೂರ್ವಕ ಗುರುವಿಗೆ ನಮಸ್ಕರಿಸಿ ಇಲ್ಲಿರುವ ಸರ್ವ ದ್ವಿಜ-ವಿದುಷಿಗಳನ್ನು ಸಂಪೂಜಿಸಿ, ಸರ್ವಲೋಕವಿಶೃತ ಧೀಮಂತ ಅಮಿತತೇಜಸ ಮಹರ್ಷಿ ವ್ಯಾಸನಿಂದ ಕೇಳಿದುದೆಲ್ಲವನ್ನೂ ಸಂಪೂರ್ಣವಾಗಿ ಹೇಳುತ್ತೇನೆ.

01055003a ಶ್ರೋತುಂ ಪಾತ್ರಂ ಚ ರಾಜನ್ತ್ವಂ ಪ್ರಾಪ್ಯೇಮಾಂ ಭಾರತೀಂ ಕಥಾಂ।
01055003c ಗುರೋರ್ವಕ್ತುಂ ಪರಿಸ್ಪಂದೋ ಮುದಾ ಪ್ರೋತ್ಸಾಹತೀವ ಮಾಂ।।

ರಾಜನ್! ಈ ಭಾರತದ ಕಥೆಯನ್ನು ಕೇಳಲು ಪಾತ್ರನಾಗಿರುವ ನಿನಗೆ ಗುರುವಿನ ಆದೇಶ ಮತ್ತು ಪ್ರೋತ್ಸಾಹಗಳಿಂದ ಇದನ್ನು ಹೇಳಲು ತುಂಬಾ ಉತ್ಸುಕನಾಗಿದ್ದೇನೆ.

01055004a ಶೃಣು ರಾಜನ್ಯಥಾ ಭೇದಃ ಕುರುಪಾಂಡವಯೋರಭೂತ್।
01055004c ರಾಜ್ಯಾರ್ಥೇ ದ್ಯೂತಸಂಭೂತೋ ವನವಾಸಸ್ತಥೈವ ಚ।।

ರಾಜನ್! ಕುರುಪಾಂಡವರ ಮಧ್ಯೆ ಭೇದವು ಹೇಗೆ ಉಂಟಾಯಿತು ಮತ್ತು ಹೇಗೆ ರಾಜ್ಯಕ್ಕೋಸ್ಕರ ದ್ಯೂತ-ವನವಾಸಗಳಾದವು ಎನ್ನುವುದನ್ನು ಕೇಳು.

01055005a ಯಥಾ ಚ ಯುದ್ಧಮಭವತ್ಪೃಥಿವೀಕ್ಷಯಕಾರಕಂ।
01055005c ತತ್ತೇಽಹಂ ಸಂಪ್ರವಕ್ಷ್ಯಾಮಿ ಪೃಚ್ಛತೇ ಭರತರ್ಷಭ।।

ಭರತರ್ಷಭ! ನೀನು ಕೇಳಿದಂತೆ ಪೃಥ್ವಿಕ್ಷಯಕಾರಕ ಯುದ್ಧವು ಹೇಗೆ ನಡೆಯಿತು ಎನ್ನುವುದನ್ನು ಹೇಳುತ್ತೇನೆ.

01055006a ಮೃತೇ ಪಿತರಿ ತೇ ವೀರಾ ವನಾದೇತ್ಯ ಸ್ವಮಂದಿರಂ।
01055006c ನಚಿರಾದಿವ ವಿದ್ವಾಂಸೋ ವೇದೇ ಧನುಷಿ ಚಾಭವನ್।।

ತಂದೆಯ ಮರಣದ ಬಳಿಕ ಆ ವೀರರು ವನದಿಂದ ತಮ್ಮ ಅರಮನೆಗೆ ಆಗಮಿಸಿ ಸ್ವಲ್ಪವೇ ಸಮಯದಲ್ಲಿ ವೇದ-ಧನುರ್ವಿಧ್ಯಾ ವಿದ್ವಾಂಸರಾದರು.

01055007a ತಾಂಸ್ತಥಾ ರೂಪವೀರ್ಯೌಜಃ ಸಂಪನ್ನಾನ್ಪೌರಸಮ್ಮತಾನ್।
01055007c ನಾಮೃಷ್ಯನ್ಕುರವೋ ದೃಷ್ಟ್ವಾ ಪಾಂಡವಾಂಶ್ರೀಯಶೋಭೃತಃ।।

ಶ್ರೀಯಶೋಭೃತ, ರೂಪವೀರ್ಯಜ, ಸಂಪನ್ನ, ಮತ್ತು ಪೌರಸಮ್ಮತ ಪಾಂಡವರನ್ನು ನೋಡಿ ಕೌರವರು ಅಸೂಯೆಗೊಂಡರು.

01055008a ತತೋ ದುರ್ಯೋಧನಃ ಕ್ರೂರಃ ಕರ್ಣಶ್ಚ ಸಹಸೌಬಲಃ।
01055008c ತೇಷಾಂ ನಿಗ್ರಹನಿರ್ವಾಸಾನ್ವಿವಿಧಾಂಸ್ತೇ ಸಮಾಚರನ್।।

ಕ್ರೂರ ದುರ್ಯೋಧನನು ಕರ್ಣ-ಸೌಬಲರೊಡಗೂಡಿ ಅವರನ್ನು ನಿಗ್ರಹಿಸಲು ಮತ್ತು ನಿರ್ವಾಸರನ್ನಾಗಿ ಮಾಡಲು ವಿವಿಧ ಯೋಜನೆಗಳನ್ನು ನಡೆಸಿದನು.

01055009a 1ದದಾವಥ ವಿಷಂ ಪಾಪೋ ಭೀಮಾಯ ಧೃತರಾಷ್ಟ್ರಜಃ।
01055009c ಜರಯಾಮಾಸ ತದ್ವೀರಃ ಸಹಾನ್ನೇನ ವೃಕೋದರಃ।।

ಧೃತರಾಷ್ಟ್ರನ ಪಾಪಿಷ್ಟ ಮಕ್ಕಳು ಭೀಮನಿಗೆ ವಿಷವನ್ನಿತ್ತರು. ಆದರೆ ಆ ವೀರ ವೃಕೋದರನು ಅದನ್ನು ಜೀರ್ಣಿಸಿ ಸಹಿಸಿಕೊಂಡನು.

01055010a ಪ್ರಮಾಣಕೋಟ್ಯಾಂ ಸಂಸುಪ್ತಂ ಪುನರ್ಬದ್ಧ್ವಾ ವೃಕೋದರಂ।
01055010c ತೋಯೇಷು ಭೀಮಂ ಗಂಗಾಯಾಃ ಪ್ರಕ್ಷಿಪ್ಯ ಪುರಮಾವ್ರಜತ್।।

ಪುನಃ ಪ್ರಮಾಣಕೋಟಿಯಲ್ಲಿ ಮಲಗಿದ್ದ ಭೀಮ ವೃಕೋದರನನ್ನು ಕಟ್ಟಿ ಗಂಗೆಯ ನೀರಿನಲ್ಲಿ ಹಾಕಿ ಪುರಕ್ಕೆ ತೆರಳಿದರು.

01055011a ಯದಾ ಪ್ರಬುದ್ಧಃ ಕೌಂತೇಯಸ್ತದಾ ಸಂಚಿದ್ಯ ಬಂಧನಂ।
01055011c ಉದತಿಷ್ಟನ್ಮಹಾರಾಜ ಭೀಮಸೇನೋ ಗತವ್ಯಥಃ।।

ಮಹಾರಾಜ! ಎಚ್ಚೆತ್ತ ಕೌಂತೇಯ ಭೀಮಸೇನನು ಕಟ್ಟನ್ನು ಹರಿದು ನೀರಿನಿಂದ ಮೇಲೆದ್ದು ತನ್ನ ವ್ಯಥೆಯನ್ನು ಹೋಗಲಾಡಿಸಿಕೊಂಡನು.

01055012a ಆಶೀವಿಷೈಃ ಕೃಷ್ಣಸರ್ಪೈಃ ಸುಪ್ತಂ ಚೈನಮದಂಶಯತ್।
01055012c ಸರ್ವೇಷ್ವೇವಾಂಗದೇಶೇಷು ನ ಮಮಾರ ಚ ಶತ್ರುಹಾ।।

ನಿದ್ದೆಯಲ್ಲಿದ್ದಾಗ ಸರ್ವ ದೇಹಾಂಗಗಳನ್ನು ಮಹಾವಿಷಭರಿತ ಕೃಷ್ಣಸರ್ಪಗಳು ಕಚ್ಚಿದ್ದರೂ ಆ ಶತ್ರುಹನು ಸಾಯಲಿಲ್ಲ.

01055013a ತೇಷಾಂ ತು ವಿಪ್ರಕಾರೇಷು ತೇಷು ತೇಷು ಮಹಾಮತಿಃ।
01055013c ಮೋಕ್ಷಣೇ ಪ್ರತಿಘಾತೇ ಚ ವಿದುರೋಽವಹಿತೋಽಭವತ್।।

ಮಹಾಮತಿ ವಿದುರನು ಅವರು ಕಷ್ಟದಲ್ಲಿದ್ದಾಗಲೆಲ್ಲಾ ಅವರ ಹಿತವನ್ನೇ ಬಯಸಿ ಅವರನ್ನು ಉಳಿಸುವ ಯೋಜನೆಗಳನ್ನು ಮಾಡುತ್ತಿದ್ದನು.

01055014a ಸ್ವರ್ಗಸ್ಥೋ ಜೀವಲೋಕಸ್ಯ ಯಥಾ ಶಕ್ರಃ ಸುಖಾವಹಃ।
01055014c ಪಾಂಡವಾನಾಂ ತಥಾ ನಿತ್ಯಂ ವಿದುರೋಽಪಿ ಸುಖಾವಹಃ।।

ಸ್ವರ್ಗದಲ್ಲಿ ಇಂದ್ರನು ಜೀವಲೋಕಗಳಿಗೆ ಸುಖವನ್ನು ತರುವ ಹಾಗೆ ವಿದುರನು ನಿತ್ಯವೂ ಪಾಂಡವರ ಸುಖವನ್ನು ಬಯಸುತ್ತಿದ್ದನು.

01055015a ಯದಾ ತು ವಿವಿಧೋಪಾಯೈಃ ಸಂವೃತೈರ್ವಿವೃತೈರಪಿ।
01055015c ನಾಶಕ್ನೋದ್ವಿನಿಹಂತುಂ ತಾನ್ದೈವಭಾವ್ಯರ್ಥರಕ್ಷಿತಾನ್।।

ದೈವಭಾವ್ಯದ ರಕ್ಷಣೆಗೊಳಗಾಗಿದ್ದ ಅವರನ್ನು ವಿವಿಧ ಗೌಪ್ಯ ಅಥವಾ ಬಾಹ್ಯ ಉಪಾಯಗಳಿಂದಲೂ ಕೊಲ್ಲಲು ಕೌರವರಿಗೆ ಸಾಧ್ಯವಾಗಲಿಲ್ಲ.

01055016a ತತಃ ಸಮ್ಮಂತ್ರ್ಯ ಸಚಿವೈರ್ವೃಷದುಃಶಾಸನಾದಿಭಿಃ।
01055016c ಧೃತರಾಷ್ಟ್ರಮನುಜ್ಞಾಪ್ಯ ಜಾತುಷಂ ಗೃಹಮಾದಿಶತ್।।

01055017a 2ತತ್ರ ತಾನ್ವಾಸಯಾಮಾಸ ಪಾಂಡವಾನಮಿತೌಜಸಃ।
01055017c ಅದಾಹಯಚ್ಚ ವಿಸ್ರಬ್ಧಾನ್ಪಾವಕೇನ ಪುನಸ್ತದಾ।।

ಆಗ ವೃಷ (ಕರ್ಣ), ದುಃಶಾಸನ ಮೊದಲಾದ ಸಚಿವರು ಸಮಾಲೋಚಿಸಿ ಧೃತರಾಷ್ಟ್ರನ ಅನುಜ್ಞೆಯನ್ನು ಪಡೆದು ಒಂದು ಜತುಗೃಹ ನಿರ್ಮಾಣಕ್ಕೆ ಆಜ್ಞೆಯಿತ್ತರು. ಅಮಿತೌಜಸ ಪಾಂಡವರು ಅಲ್ಲಿ ವಾಸಿಸುವಂತೆ ಏರ್ಪಡಿಸಿದರು ಮತ್ತು ಅವರಿಗೆ ಸ್ವಲ್ಪವೂ ಅನುಮಾನಬಾರದ ಹಾಗೆ ಅವರೊಂದಿಗೆ ಪುನಃ ಆ ಮನೆಯನ್ನು ಬೆಂಕಿಹಚ್ಚಿ ಸುಟ್ಟುಹಾಕಿದರು.

01055018a ವಿದುರಸ್ಯೈವ ವಚನಾತ್ಖನಿತ್ರೀ ವಿಹಿತಾ ತತಃ।
01055018c ವೆಕ್ಷಯಾಮಾಸ ಯೋಗೇನ ತೇ ಮುಕ್ತಾಃ ಪ್ರಾದ್ರವನ್ಭಯಾತ್।।

ವಿದುರನ ಮಾತಿನಂತೆ ಅಲ್ಲಿ ಒಂದು ಕಣಿವೆಯನ್ನು ಅಗೆಯಲಾಗಿತ್ತು ಮತ್ತು ಅದರ ಸಹಾಯದಿಂದ ಅವರು ಅದೃಷ್ಠವಶಾತ್ ಆ ಭಯದಿಂದ ಮುಕ್ತರಾದರು.

01055019a ತತೋ ಮಹಾವನೇ ಘೋರೇ ಹಿಡಿಂಬಂ ನಾಮ ರಾಕ್ಷಸಂ।
01055019c ಭೀಮಸೇನೋಽವಧೀತ್ಕ್ರುದ್ಧೋ ಭುವಿ ಭೀಮಪರಾಕ್ರಮಃ।।

ನಂತರ ಆ ಮಹಾವನದಲ್ಲಿ ಭುವಿಯಲ್ಲೇ ಭೀಮಪರಾಕ್ರಮಿ ಕೃದ್ಧ ಭೀಮಸೇನನು ಹಿಡಿಂಬ ಎಂಬ ಹೆಸರಿನ ಘೋರ ರಾಕ್ಷಸನನ್ನು ಸಂಹರಿಸಿದನು.

01055020a ಅಥ ಸಂಧಾಯ ತೇ ವೀರಾ ಏಕಚಕ್ರಾಂ ವ್ರಜಂಸ್ತದಾ।
01055020c ಬ್ರಹ್ಮರೂಪಧರಾ ಭೂತ್ವಾ ಮಾತ್ರಾ ಸಹ ಪರಂತಪಾಃ।।

ಆ ಪರಂತಪ ವೀರರು ಎಲ್ಲರ ಒಪ್ಪಿಗೆಯಂತೆ ಏಕಚಕ್ರ ನಗರಿಗೆ ಹೋಗಿ ಅಲ್ಲಿ ಬ್ರಾಹ್ಮಣ ರೂಪ ಧರಿಸಿ ತಾಯಿಯೊಂದಿಗಿದ್ದರು.

01055021a ತತ್ರ ತೇ ಬ್ರಾಹ್ಮಣಾರ್ಥಾಯ ಬಕಂ ಹತ್ವಾ ಮಹಾಬಲಂ।
01055021c ಬ್ರಾಹ್ಮಣೈಃ ಸಹಿತಾ ಜಗ್ಮುಃ ಪಾಂಚಾಲಾನಾಂ ಪುರಂ ತತಃ।।

ಅಲ್ಲಿ ಆ ಬ್ರಾಹ್ಮಣನಿಗೋಸ್ಕರ ಮಹಾಬಲ ಬಕನನ್ನು ಸಂಹರಿಸಿ ಬ್ರಾಹ್ಮಣರ ಸಹಿತ ಪಾಂಚಾಲನಗರಿಗೆ ಹೋದರು.

01055022a 3ತೇ ತತ್ರ ದ್ರೌಪದೀಂ ಲಬ್ಧ್ವಾ ಪರಿಸಂವತ್ಸರೋಷಿತಾಃ।
01055022c ವಿದಿತಾ ಹಾಸ್ತಿನಪುರಂ ಪ್ರತ್ಯಾಜಗ್ಮುರರಿಂದಮಾಃ।।

ಅಲ್ಲಿ ಅವರು ದ್ರೌಪದಿಯನ್ನು ಪಡೆದು ಒಂದು ವರ್ಷಪರ್ಯಂತ ಅಲ್ಲಿಯೇ ವಾಸಿಸಿದರು. ತಮ್ಮ ಗುರುತು ತಿಳಿದ ನಂತರ ಅರಿಂದಮ ಪಾಂಡವರು ಹಸ್ತಿನಾಪುರಕ್ಕೆ ಹಿಂದಿರುಗಿದರು.

01055023a ತ ಉಕ್ತಾ ಧೃತರಾಷ್ಟ್ರೇಣ ರಾಜ್ಞಾ ಶಾಂತನವೇನ ಚ।
01055023c ಭ್ರಾತೃಭಿರ್ವಿಗ್ರಹಸ್ತಾತ ಕಥಂ ವೋ ನ ಭವೇದಿತಿ।
01055023e ಅಸ್ಮಾಭಿಃ ಖಾಂಡವಪ್ರಸ್ಥೇ ಯುಷ್ಮದ್ವಾಸೋಽನುಚಿಂತಿತಃ।।

ಅಲ್ಲಿ ಅವರಿಗೆ ರಾಜ ಧೃತರಾಷ್ಟ್ರ ಮತ್ತು ಶಾಂತನವ ಭೀಷ್ಮರು ಹೇಳಿದರು: “ಮಕ್ಕಳೇ! ನೀವು ಮತ್ತು ನಿಮ್ಮ ಭ್ರಾತೃಗಳ ಮಧ್ಯೆ ಯಾವುದೇ ರೀತಿಯ ಒಡಕು ಉಂಟಾಗಬಾರದೆಂದು ನಾವು ಖಾಂಡವಪ್ರಸ್ಥವು ನಿಮಗಿರಲಿ ಎಂದು ಯೋಚಿಸಿದ್ದೇವೆ.

01055024a ತಸ್ಮಾಜ್ಜನಪದೋಪೇತಂ ಸುವಿಭಕ್ತಮಹಾಪಥಂ।
01055024c ವಾಸಾಯ ಖಾಂಡವಪ್ರಸ್ಥಂ ವ್ರಜಧ್ವಂ ಗತಮನ್ಯವಃ4।।

ಆದುದರಿಂದ ಹಿಂದಿನ ಅಸೂಯೆಗಳನ್ನೆಲ್ಲ ತ್ಯಜಿಸಿ ಹಲವಾರು ಜನಪದ ಮಹಾಪಥಗಳಿಂದ ಕೂಡಿದ ಖಾಂಡವಪ್ರಸ್ಥದಲ್ಲಿ ವಾಸಮಾಡಿ.”

01055025a ತಯೋಸ್ತೇ ವಚನಾಜ್ಜಗ್ಮುಃ ಸಹ ಸರ್ವೈಃ ಸುಹೃಜ್ಜನೈಃ।
01055025c ನಗರಂ ಖಾಂಡವಪ್ರಸ್ಥಂ ರತ್ನಾನ್ಯಾದಾಯ ಸರ್ವಶಃ।।

ಈ ವಚನದಂತೆ ಅವರು ಎಲ್ಲ ಸುಹೃಜ್ಜನರೊಡಗೂಡಿ ಹಲವಾರು ರತ್ನಗಳೊಂದಿಗೆ ಖಾಂಡವಪ್ರಸ್ಥ ನಗರಿಗೆ ಹೋದರು.

01055026a ತತ್ರ ತೇ ನ್ಯವಸನ್ರಾಜನ್ಸಂವತ್ಸರಗಣಾನ್ಬಹೂನ್।
01055026c ವಶೇ ಶಸ್ತ್ರಪ್ರತಾಪೇನ ಕುರ್ವಂತೋಽನ್ಯಾನ್ಮಹೀಕ್ಷಿತಃ।।

ರಾಜನ್! ಅಲ್ಲಿ ಅವರು ಹಲವಾರು ವರ್ಷಗಳು ವಾಸಿಸಿದರು ಮತ್ತು ತಮ್ಮ ಶಸ್ತ್ರಪ್ರತಾಪದಿಂದ ಅನ್ಯ ಮಹೀಕ್ಷಿತರನ್ನು ವಶಪಡಿಸಿಕೊಂಡರು.

01055027a ಏವಂ ಧರ್ಮಪ್ರಧಾನಾಸ್ತೇ ಸತ್ಯವ್ರತಪರಾಯಣಾಃ।
01055027c ಅಪ್ರಮತ್ತೋತ್ಥಿತಾಃ ಕ್ಷಾಂತಾಃ ಪ್ರತಪಂತೋಽಹಿತಾಂಸ್ತದಾ।।

ಈ ರೀತಿ ಆ ಸತ್ಯವ್ರತಪರಾಯಣರು ಧರ್ಮಪ್ರಧಾನರಾಗಿದ್ದು, ಸಿಟ್ಟಿಗೇಳದೇ, ಶಾಂತರಾಗಿ ಅಹಿತಗಳನ್ನು ತುಳಿದು ರಾಜ್ಯವಾಳಿದರು.

01055028a ಅಜಯದ್ಭೀಮಸೇನಸ್ತು ದಿಶಂ ಪ್ರಾಚೀಂ ಮಹಾಬಲಃ।
01055028c ಉದೀಚೀಮರ್ಜುನೋ ವೀರಃ ಪ್ರತೀಚೀಂ ನಕುಲಸ್ತಥಾ।।
01055029a ದಕ್ಷಿಣಾಂ ಸಹದೇವಸ್ತು ವಿಜಿಗ್ಯೇ ಪರವೀರಹಾ।
01055029c ಏವಂ ಚಕ್ರುರಿಮಾಂ ಸರ್ವೇ ವಶೇ ಕೃತ್ಸ್ನಾಂ ವಸುಂಧರಾಂ।।

ಮಹಾಬಲ ಭೀಮಸೇನನು ಪಶ್ಚಿಮ ದಿಕ್ಕನ್ನು ಜಯಿಸಿದನು. ವೀರ ಅರ್ಜುನನು ಉತ್ತರ ದಿಕ್ಕನ್ನು, ನಕುಲನು ಪಶ್ಚಿಮವನ್ನು, ಮತ್ತು ಸಹದೇವನು ದಕ್ಷಿಣವನ್ನು ಜಯಿಸಿ, ಆ ಪರವೀರರು ಈ ವಸುಂಧರೆಯಲ್ಲಿ ಸರ್ವರನ್ನೂ ತಮ್ಮ ವಶಮಾಡಿಕೊಂಡರು.

01055030a ಪಂಚಭಿಃ ಸೂರ್ಯಸಂಕಾಶೈಃ ಸೂರ್ಯೇಣ ಚ ವಿರಾಜತಾ।
01055030c ಷಟ್ಸೂರ್ಯೇವಾಬಭೌ ಪೃಥ್ವೀ ಪಾಂಡವೈಃ ಸತ್ಯವಿಕ್ರಮೈಃ।।

ಸೂರ್ಯನೊಂದಿಗೆ ಸೂರ್ಯಸಂಕಾಶ ಐವರು ಪಾಂಡವರೂ ಸೇರಿ ಆರು ಸತ್ಯವಿಕ್ರಮಿ ಸೂರ್ಯರನ್ನು ಪೃಥ್ವಿಯು ಹೊಂದಿದಂತೆ ತೋರುತ್ತಿತ್ತು.

01055031a ತತೋ ನಿಮಿತ್ತೇ ಕಸ್ಮಿಂಶ್ಚಿದ್ಧರ್ಮರಾಜೋ ಯುಧಿಷ್ಠಿರಃ।
01055031c ವನಂ ಪ್ರಸ್ಥಾಪಯಾಮಾಸ ಭ್ರಾತರಂ ವೈ ಧನಂಜಯಂ।।

ನಂತರ ಯಾವುದೋ ಒಂದು ಕಾರಣದಿಂದ ಧರ್ಮರಾಜ ಯುಧಿಷ್ಠಿರನು ಸಹೋದರ ಧನಂಜಯನನ್ನು ವನಕ್ಕೆ ಕಳುಹಿಸಬೇಕಾಗಿ ಬಂದಿತು.

01055032a 5ಸ ವೈ ಸಂವತ್ಸರಂ ಪೂರ್ಣಂ ಮಾಸಂ ಚೈಕಂ ವನೇಽವಸತ್।
01055032c 6ತತೋಽಗಚ್ಛದ್ಧೃಷೀಕೇಶಂ ದ್ವಾರವತ್ಯಾಂ ಕದಾ ಚನ।।

ವನದಲ್ಲಿ ಒಂದು ವರ್ಷ ಒಂದು ತಿಂಗಳು ಇದ್ದು ಅವನು ಹೃಷೀಕೇಶಕ್ಕೆ ಹೋಗಿ ಅಲ್ಲಿಂದ ಒಮ್ಮೆ ದ್ವಾರವತಿಗೂ ಹೋದನು.

01055033a ಲಬ್ಧವಾಂಸ್ತತ್ರ ಬೀಭತ್ಸುರ್ಭಾರ್ಯಾಂ ರಾಜೀವಲೋಚನಾಂ।
01055033c ಅನುಜಾಂ ವಾಸುದೇವಸ್ಯ ಸುಭದ್ರಾಂ ಭದ್ರಭಾಷಿಣೀಂ।।

ಅಲ್ಲಿ ಬೀಭತ್ಸುವು ವಾಸುದೇವನ ಅನುಜೆ ರಾಜೀವಲೋಚನೆ, ಭದ್ರಭಾಷಿಣೀ ಸುಭದ್ರೆಯನ್ನು ಪತ್ನಿಯಾಗಿ ಪಡೆದನು.

01055034a ಸಾ ಶಚೀವ ಮಹೇಂದ್ರೇಣ ಶ್ರೀಃ ಕೃಷ್ಣೇನೇವ ಸಂಗತಾ।
01055034c ಸುಭದ್ರಾ ಯುಯುಜೇ ಪ್ರೀತಾ ಪಾಂಡವೇನಾರ್ಜುನೇನ ಹ।।

ಶಚಿಯು ಮಹೇಂದ್ರನೊಂದಿಗೆ ಮತ್ತು ಶ್ರೀಯು ಕೃಷ್ಣನೊಂದಿಗೆ ಹೇಗೋ ಹಾಗೆ ಸುಭದ್ರೆಯು ಪಾಂಡವ ಅರ್ಜುನನನ್ನು ಸೇರಿ ಸಂತೋಷಗೊಂಡಳು.

01055035a ಅತರ್ಪಯಚ್ಚ ಕೌಂತೇಯಃ ಖಾಂಡವೇ ಹವ್ಯವಾಹನಂ।
01055035c ಬೀಭತ್ಸುರ್ವಾಸುದೇವೇನ ಸಹಿತೋ ನೃಪಸತ್ತಮ।।

ನೃಪಸತ್ತಮ! ನಂತರ ಕೌಂತೇಯ ಬೀಭತ್ಸುವು ವಾಸುದೇವನ ಸಹಿತ ಖಾಂಡವವನ್ನು ಹವ್ಯವಾಹನನಿಗಿತ್ತು ಅವನನ್ನು ಸಂತೃಪ್ತಿಗೊಳಿಸಿದನು.

01055036a ನಾತಿಭಾರೋ ಹಿ ಪಾರ್ಥಸ್ಯ ಕೇಶವೇನಾಭವತ್ಸಹ।
01055036c ವ್ಯವಸಾಯಸಹಾಯಸ್ಯ ವಿಷ್ಣೋಃ ಶತ್ರುವಧೇಷ್ವಿವ।।

ಕೇಶವನ ಸಹಾಯದಿಂದ ಪಾರ್ಥನಿಗೆ ಈ ಕೆಲಸವು ಅತಿಭಾರವೆನ್ನಿಸಲಿಲ್ಲ. ಯಾಕೆಂದರೆ ವಿಷ್ಣುವಿಗೆ ಶತ್ರುವಧೆಯು ಮಹಾಕಾರ್ಯವೇನಲ್ಲ.

01055037a ಪಾರ್ಥಾಯಾಗ್ನಿರ್ದದೌ ಚಾಪಿ ಗಾಂಡೀವಂ ಧನುರುತ್ತಮಂ।
01055037c ಇಷುಧೀ ಚಾಕ್ಷಯೈರ್ಬಾಣೈ ರಥಂ ಚ ಕಪಿಲಕ್ಷಣಂ।।

ಅಗ್ನಿಯು ಪಾರ್ಥನಿಗೆ ಉತ್ತಮ ಗಾಂಡೀವ ಧನಸ್ಸು, ಅಕ್ಷಯ ಬಾಣಗಳುಳ್ಳ ಬತ್ತಳಿಕೆ ಮತ್ತು ಕಪಿಲಕ್ಷಣ ರಥವನ್ನು ನೀಡಿದನು.

01055038a ಮೋಕ್ಷಯಾಮಾಸ ಬೀಭತ್ಸುರ್ಮಯಂ ತತ್ರ ಮಹಾಸುರಂ।
01055038c ಸ ಚಕಾರ ಸಭಾಂ ದಿವ್ಯಾಂ ಸರ್ವರತ್ನಸಮಾಚಿತಾಂ।।

ಆ ಸಮಯದಲ್ಲಿ ಬೀಭತ್ಸುವು ಮಹಾಸುರ ಮಯನನ್ನು ರಕ್ಷಿಸಿದನು ಮತ್ತು ಅವನು ಸರ್ವರತ್ನಸಮಾಚಿತ ದಿವ್ಯ ಸಭೆಯೊಂದನ್ನು ನಿರ್ಮಿಸಿದನು.

01055039a ತಸ್ಯಾಂ ದುರ್ಯೋಧನೋ ಮಂದೋ ಲೋಭಂ ಚಕ್ರೇ ಸುದುರ್ಮತಿಃ।
01055039c ತತೋಽಕ್ಷೈರ್ವಂಚಯಿತ್ವಾ ಚ ಸೌಬಲೇನ ಯುಧಿಷ್ಠಿರಂ।।
01055040a ವನಂ ಪ್ರಸ್ಥಾಪಯಾಮಾಸ ಸಪ್ತ ವರ್ಷಾಣಿ ಪಂಚ ಚ।
01055040c ಅಜ್ಞಾತಮೇಕಂ ರಾಷ್ಟ್ರೇ ಚ ತಥಾ ವರ್ಷಂ ತ್ರಯೋದಶಂ।।

ಮಂದ ಮತ್ತು ದುರ್ಮತಿ ದುರ್ಯೋಧನನು ಅದನ್ನು ಪಡೆಯಲು ಬಯಸಿದನು. ಸೌಬಲನ ಸಹಾಯದಿಂದ ದ್ಯೂತದಲ್ಲಿ ಯುಧಿಷ್ಠಿರನನ್ನು ಗೆದ್ದು ಒಟ್ಟು ಹದಿಮೂರು ವರ್ಷ ವನಕ್ಕೆ ಹೋಗುವಂತೆ - ಹನ್ನೆರಡು ವರ್ಷ ವನದಲ್ಲಿ ಮತ್ತು ಒಂದು ವರ್ಷ ಯಾವುದಾದರೂ ರಾಷ್ಟ್ರದಲ್ಲಿ ಅಜ್ಞಾತವಾಸ - ಮಾಡಿದನು.

01055041a ತತಶ್ಚತುರ್ದಶೇ ವರ್ಷೇ ಯಾಚಮಾನಾಃ ಸ್ವಕಂ ವಸು।
01055041c ನಾಲಭಂತ ಮಹಾರಾಜ ತತೋ ಯುದ್ಧಮವರ್ತತ।।

ಮಹಾರಾಜ! ಹದಿನಾಲ್ಕನೆಯ ವರ್ಷ ತಮ್ಮ ಆಸ್ತಿಯನ್ನು ಹಿಂದೆ ಕೇಳಿದಾಗಲೂ ದೊರೆಯದಿದ್ದಾಗ, ಯುದ್ಧವು ನಡೆಯಿತು.

01055042a ತತಸ್ತೇ ಸರ್ವಮುತ್ಸಾದ್ಯ ಹತ್ವಾ ದುರ್ಯೋಧನಂ ನೃಪಂ।
01055042c ರಾಜ್ಯಂ ವಿದ್ರುತಭೂಯಿಷ್ಟಂ ಪ್ರತ್ಯಪದ್ಯಂತ ಪಾಂಡವಾಃ।।

ಆಗ ಪಾಂಡವರು ನೃಪ ದುರ್ಯೋಧನನನ್ನು ಕೊಂದು ರಾಜ್ಯವನ್ನು ಹಿಂದೆ ಪಡೆದರು.

01055043a ಏವಮೇತತ್ಪುರಾವೃತ್ತಂ ತೇಷಾಮಕ್ಲಿಷ್ಟಕರ್ಮಣಾಂ।
01055043c ಭೇದೋ ರಾಜ್ಯವಿನಾಶಶ್ಚ ಜಯಶ್ಚ ಜಯತಾಂ ವರ।।

ಇದೇ ಹಿಂದೆ ಆ ಅಕ್ಲಿಷ್ಟಕರ್ಮಿಗಳ ನಡುವೆ ನಡೆದ ಭೇದ, ರಾಜ್ಯವಿನಾಶ ಮತ್ತು ವಿಜಯಿಗಳಲ್ಲಿ ಶ್ರೇಷ್ಠರಾದವರ ಜಯ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಆದಿವಂಶಾವತರಣಪರ್ವಣಿ ಭಾರತಸೂತ್ರಂ ನಾಮ ಪಂಚಪಂಚಾಶತ್ತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಆದಿವಂಶಾವತರಣ ಪರ್ವದಲ್ಲಿ ಭಾರತಸೂತ್ರ ಎನ್ನುವ ಐವತ್ತೈದನೆಯ ಅಧ್ಯಾಯವು.


  1. ನೀಲಕಂಠೀಯದಲ್ಲಿ ಇದಕ್ಕೆ ಮೊದಲು ಈ ಅಧಿಕ ಶ್ಲೋಕವಿದೆ: ತತೋ ದುರ್ಯೋಧನಃ ಶೂರಃ ಕುಲಿಂಗಸ್ಯ ಮತೇ ಸ್ಥಿತಃ। ಪಾಂಡವಾನ್ ವಿವಿಧೋಪಾಯೈ ರಾಜ್ಯಹೇತೋರಪೀಡಯತ್।। ಅರ್ಥಾತ್ ಕುಲಿಂಗ ಶಕುನಿಯ ಅಭಿಪ್ರಾಯದಂತೆಯೇ ನಡೆದುಕೊಳ್ಳುತ್ತಿದ್ದ ಶೂರ ದುರ್ಯೋಧನನು ರಾಜ್ಯದ ಕಾರಣಕ್ಕಾಗಿ ಪಾಂಡವರನ್ನು ವಿವಿಧ ಉಪಾಯಗಳಿಂದ ಪೀಡಿಸಿದನು. ↩︎

  2. ನೀಲಕಂಠೀಯದಲ್ಲಿ ಜತುಗೃಹವಿಷಯಕ ಬೇರೆಯೇ ಶ್ಲೋಕಗಳಿವೆ: ಸುತಪ್ರಿಯೈಷೀ ತಾನ್ರಾಜಾ ಪಾಂಡವಾನಂಬಿಕಾಸುತಃ। ತತೋ ವಿವಾಸಯಾಮಾಸ ರಾಜ್ಯಭೋಗಬುಭುಕ್ಷಯಃ।। ತೇ ಪ್ರಾತಿಷ್ಠಂತ ಸಹಿತಾ ನಗರಾನ್ನಾಗಸಾಹ್ವಯಾತ್। ಪ್ರಸ್ಥಾನೇ ಚಾಭವನ್ಮಂತ್ರೀ ಕ್ಷತ್ತಾ ತೇಷಾಂ ಮಹಾತ್ಮನಾಮ್।। ತೇನ ಮುಕ್ತಾ ಜತುಗೃಹಾನ್ನಿಶೀಥೆ ಪ್ರಾದ್ರವನ್ವನಮ್। ತತಃ ಸಂಪ್ರಾಪ್ಯ ಕೌಂತೇಯಾ ನಗರಂ ವಾರಣಾವತಮ್।। ನ್ಯವಸಂತ ಮಹಾತ್ಮಾನೋ ಮಾತ್ರಾ ಸಹ ಪರಂತಪಾ। ಧೃತರಾಷ್ಟ್ರೇಣ ಚಾಜ್ಞಪ್ತಾ ಉಷಿತಾ ಜಾತುಷೇ ಗೃಹೇ।। ಪುರೋಚನಾದ್ರಕ್ಷಮಾಣಾಃ ಸಂವತ್ಸರಮತಂದ್ರಿತಾಃ। ಸುರುಂಗಾಂ ಕಾರಯಿತ್ವಾ ತು ವಿದುರೇಣ ಪ್ರಚೋದಿತಾಃ।। ಆದೀಪ್ಯ ಜಾತುಷಂ ವೇಶ್ಮ ದಗ್ಧ್ವಾ ಚೈವ ಪುರೋಚನಮ್। ಪ್ರಾದ್ರವನ್ ಭಯಸಂವಿಗ್ನಾ ಮಾತ್ರಸಹ ಪರಂತಪಾಃ।। ಅರ್ಥಾತ್: ಮಗನ ಪ್ರಿಯೈಷಿಯಾಗಿದ್ದ ರಾಜಾ ಅಂಬಿಕಾಸುತ ಧೃತರಾಷ್ಟ್ರನು ರಾಜ್ಯಭೋಗದ ಆಸೆಯಿಂದ ಪಾಂಡವರು ವಾರಣಾವತದಲ್ಲಿ ವಾಸಿಸುವಂತೆ ಆದೇಶವಿತ್ತನು. ತಾಯಿಯೊಂದಿಗೆ ಪಾಂಡವರು ಹಸ್ತಿನಾಪುರದಿಂದ ಹೊರಟಾಗ ವಿದುರನು ಆ ಮಹಾತ್ಮರಿಗೆ ಸಲಹೆಯನ್ನಿತ್ತನು. ಅದೇ ಸಲಹೆಯಿಂದಾಗಿ ಅವರು ರಾತ್ರಿಯಲ್ಲಿ ಪಲಾಯನಗೈದು ಜತುಗೃಹದಿಂದ ಮುಕ್ತರಾದರು. ಧೃತರಾಷ್ಟ್ರನ ಆಜ್ಞೆಯಂತೆ ಆ ಮಹಾತ್ಮ ಪರಂತಪ ಕೌಂತೇಯರು ವಾರಣಾವತ ನಗರವನ್ನು ತಲುಪಿ ಜತುಗೃಹದಲ್ಲಿ ವಾಸಿಸತೊಡಗಿದರು. ಪುರೋಚನನ ರಕ್ಷಣೆಯಲ್ಲಿ ಒಂದು ವರ್ಷ ಅಲ್ಲಿ ವಾಸಿಸುತ್ತಿದ್ದ ಆ ಕ್ರಿಯಾಶೀಲರು ವಿದುರನ ಸೂಚನೆಯನ್ನು ಒಂದು ಸುರಂಗವನ್ನು ತೋಡಿಸಿ, ಪುರೋಚನನೊಂದಿಗೆ ಆ ಜತುಗೃಹವನ್ನು ಸುಟ್ಟು ಭಯಸಂವಿಗ್ನರಾದ ಆ ಪರಂತಪರು ತಾಯಿಯೊಂದಿಗೆ ಓಡಿಹೋದರು. ↩︎

  3. ನೀಲಕಂಠೀಯದಲ್ಲಿ ಇದಕ್ಕೆ ಮೊದಲು ಹಿಡಿಂಬವಧ, ಬಕವಧ ಮತ್ತು ದ್ರೌಪದೀ ಸ್ವಯಂವರಗಳ ಕುರಿತು ಬೇರೆಯೇ ಶ್ಲೋಕಗಳಿವೆ: ದದೃಶುರ್ದಾರುಣಂ ರಕ್ಷೋ ಹಿಡಿಂಬಂ ವನನಿರ್ಝರೇ। ಹತ್ವಾ ಚ ತಂ ರಾಕ್ಷಸೇಂದ್ರಂ ಭೀತಾಃ ಸಮವಬೋಧನಾತ್।। ನಿಶಿ ಸಂಪ್ರಾದ್ರವನ್ ಪಾರ್ಥಾ ಧಾರ್ತರಾಷ್ಟ್ರಭಯಾರ್ದಿತಾಃ। ಪ್ರಾಪ್ತಾ ಹಿಡಿಂಬಾ ಭೀಮೇನ ಯತ್ರ ಜಾತೋ ಘಟೋತ್ಕಚಃ।। ಏಕಚಕ್ರಾಂ ತತೋ ಗತ್ವಾ ಪಾಂಡವಾಃ ಸಂಶಿತವ್ರತಾಃ। ವೇದಾಧ್ಯಯನಸಂಪನ್ನಾಸ್ತೇಽಭವನ್ ಬ್ರಹ್ಮಚಾರಿಣಃ।। ತೇ ತತ್ರ ನಿಯತಾಃ ಕಾಲಂ ಕಂಚಿದೂಷುರ್ನರರ್ಷಭಾಃ। ಮಾತ್ರಾ ಸಹೈಕಚಕ್ರಾಯಾಂ ಬ್ರಾಹ್ಮಣಸ್ಯ ನಿವೇಶನೇ।। ತತ್ರಾಸಸಾದ ಕ್ಷುಧಿತಂ ಪುರುಷಾದಂ ವೃಕೋದರಃ। ಭೀಮಸೇನೋ ಮಹಾಬಾಹುರ್ಬಕಂ ನಾಮ ಮಹಾಬಲಮ್।। ತಂ ಚಾಪಿ ಪುರುಷವ್ಯಾಘ್ರೋ ಬಾಹುವೀರ್ಯೇಣ ಪಾಂಡವಃ। ನಿಹತ್ಯ ತರಸಾ ವೀರೋ ನಾಗರಾನ್ ಪರ್ಯಸಾಂತ್ವಯತ್।। ತತಸ್ತೇ ಶುಶೃವುಃ ಕೃಷ್ಣಾಂ ಪಂಚಾಲೇಷು ಸ್ವಯಂವರಂ। ಶೃತ್ವಾ ಚೈವಾಭ್ಯಗಚ್ಛಂತ ಗತ್ವಾ ಚೈವಾಲಭಂತ ತಾಮ್।। ಅರ್ಥಾತ್: ವನನಿರ್ಝರದಲ್ಲಿ ಅವರು ಹಿಡಿಂಬನೆಂಬ ದಾರುಣ ರಾಕ್ಷಸನನ್ನು ನೋಡಿದರು. ಧಾರ್ತರಾಷ್ಟ್ರನ ಭಯದಿಂದಾಗ ತಮ್ಮ ಇರವು ಇತರರಿಗೆ ತಿಳಿಯಬಾರದೆಂದು ಪಾರ್ಥರು ರಾತ್ರಿಯಲ್ಲಿಯೇ ಅಲ್ಲಿಂದ ಓಡಿದರು. ಅದೇ ಸಮಯದಲ್ಲಿ ಭೀಮನಿಗೆ ಹಿಡಿಂಬೆಯು ದೊರಕಿ, ಘಟೋತ್ಕಚನ ಜನ್ಮವಾಯಿತು. ಸಂಶಿತವ್ರತ ಪಾಂಡವರು ಏಕಚಕ್ರನಗರಿಗೆ ಹೋಗಿ ವೇದಾಧ್ಯಯನ ಸಂಪನ್ನ ಬ್ರಹ್ಮಚಾರಿಗಳಾದರು. ಮಾತೆಯ ಸಹಿತ ಆ ನರರ್ಷಭರು ಏಕಚಕ್ರದ ಓರ್ವ ಬ್ರಾಹ್ಮಣನ ನಿವೇಶನದಲ್ಲಿ ಸ್ವಲ್ಪ ಕಾಲ ವಾಸಿಸಿದರು. ಅಲ್ಲಿಯೇ ಮಹಾಬಾಹು ವೃಕೋದರ ಭೀಮಸೇನನು ಕ್ರೂರ ನರಭಕ್ಷಕ ಮ್ಾಬಲಿ ಬಕನೆಂಬ ಹೆಸರಿನ ರಾಕ್ಷಸನ ಬಳಿಹೋದನು. ಅವನನ್ನೂ ಕೂಡ ಪುರುಷವ್ಯಾಘ್ರ ಪಾಂಡವನು ಬಾಹುವೀರ್ಯದಿಂದ ಅವನನ್ನು ಕೊಂದು ನಾಗರಿಕರಿಗೆ ಸಮಾಧಾನವನ್ನಿತ್ತನು. ಅನಂತರ ಅವರು ಪಂಚಾಲರ ರಾಜಕುಮಾರಿ ಕೃಷ್ಣೆಯ ಸ್ವಯಂವರದ ಕುರಿತು ಕೇಳಿದರು. ಕೇಳಿ ಅಲ್ಲಿಗೆ ಹೋಗಿ ಅವಳನ್ನು ಪಡೆದುಕೊಂಡರು ಕೂಡ. ↩︎

  4. ಗತಮತ್ಸರಾಃ ಎಂಬ ಪಾಠಾಂತರವಿದೆ (ನೀಲಕಂಠ). ↩︎

  5. ನೀಲಕಂಠೀಯದಲ್ಲಿ ಇದಕ್ಕೆ ಮೊದಲು ಈ ಅಧಿಕ ಶ್ಲೋಕಗಳಿವೆ: ತತೋ ನಿಮಿತ್ತೇ ಕಸ್ಮಿಂಶ್ಚಿದ್ಧರ್ಮರಾಜೋ ಯುಧಿಷ್ಠಿರಃ। ವನಂ ಪ್ರಸ್ಥಾಪಯಾಮಾಸ ತೇಜಸ್ವೀ ಸತ್ಯವಿಕ್ರಮಃ। ಪ್ರಾಣೇಭ್ಯೋಽಪಿ ಪ್ರಿಯತರಂ ಭ್ರಾತರಂ ಸವ್ಯಸಾಚಿನಿಮ್।। ದಕ್ಷಿಣಾತ್ಯ ಪಾಠದಲ್ಲಿ ಇದರ ನಂತರ ಇನ್ನೊಂದು ಶ್ಲೋಕವಿದೆ: ಅರ್ಜುನಂ ಪುರುಷವ್ಯಾಘ್ರಂ ಸ್ಥಿರಾತ್ಮಾನಾಂ ಗುಣೈರ್ಯುತಂ। ಧೈರ್ಯಾತ್ಸತ್ಯಾಚ್ಚ ಧರ್ಮಾಚ್ಚ ವಿಜಯಾಚ್ಚಾಧಿಕಪ್ರಿಯಃ। ಅರ್ಜುನೋ ಭ್ರಾತರಂ ಜ್ಯೇಷ್ಠಂ ನಾತ್ಯವರ್ತತ ಜಾತುಚಿತ್।। ↩︎

  6. ದಕ್ಷಿಣಾತ್ಯಪಾಠದಲ್ಲಿ ಇದಕ್ಕೆ ಮೊದಲು ಈ ಅಧಿಕ ಶ್ಲೋಕವಿದೆ: ತೀರ್ಥಯಾತ್ರಾಂ ಚ ಕೃತವಾನ್ ನಾಗಕನ್ಯಾಮವಾಪ್ಯ ಚ। ಪಾಂಡಸ್ಯ ತನಯಾಂ ಲಬ್ಧ್ವಾ ತತ್ರ ತಾಭ್ಯಾಂ ಸಹೋಷಿತಃ।। ↩︎