ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಆದಿವಂಶಾವತರಣ ಪರ್ವ
ಅಧ್ಯಾಯ 54
ಸಾರ
ಜನಮೇಜಯನ ಸರ್ಪಸತ್ರದಲ್ಲಿ ವ್ಯಾಸನ ಆಗಮನ (1-10). ಕುರು-ಪಾಂಡವರ ಕುರಿತು ಪ್ರಶ್ನಿಸಲು ವ್ಯಾಸನು ವೈಶಂಪಾಯನನಿಗೆ ಮಹಾಭಾರತ ಕಥೆಯನ್ನು ಹೇಳಲು ಅನುಮತಿಯನ್ನು ನೀಡಿದುದು (11-24).
01054001 ಸೂತ ಉವಾಚ।
01054001a ಶ್ರುತ್ವಾ ತು ಸರ್ಪಸತ್ರಾಯ ದೀಕ್ಷಿತಂ ಜನಮೇಜಯಂ।
01054001c ಅಭ್ಯಾಗಚ್ಛದೃಷಿರ್ವಿದ್ವಾನ್ ಕೃಷ್ಣದ್ವೈಪಾಯನಸ್ತದಾ।।
ಸೂತನು ಹೇಳಿದನು: “ಸರ್ಪಸತ್ರಕ್ಕೆ ಜನಮೇಜಯನು ದೀಕ್ಷಿತನಾಗಿದ್ದಾನೆಂದು ಕೇಳಿದ ಋಷಿವಿದ್ವಾಂಸ ಕೃಷ್ಣದ್ವೈಪಾಯನನು ಅಲ್ಲಿಗೆ ಬಂದನು.
01054002a ಜನಯಾಮಾಸ ಯಂ ಕಾಲೀ ಶಕ್ತೇಃ ಪುತ್ರಾತ್ಪರಾಶರಾತ್।
01054002c ಕನ್ಯೈವ ಯಮುನಾದ್ವೀಪೇ ಪಾಂಡವಾನಾಂ ಪಿತಾಮಹಂ।।
ಪಾಂಡವ ಪಿತಾಮಹನು ಯಮುನಾನದಿಯ ಒಂದು ದ್ವೀಪದಲ್ಲಿ ಗುಪ್ತವಾಗಿ ಶಕ್ತಿಯ ಪುತ್ರ ಪರಾಶರನಿಗೆ ಕನ್ಯೆ ಕಾಲಿ (ಸತ್ಯವತಿ) ಯಲ್ಲಿ ಜನಿಸಿದ್ದನು.
01054003a ಜಾತಮಾತ್ರಶ್ಚ ಯಃ ಸದ್ಯ ಇಷ್ಟ್ಯಾ ದೇಹಮವೀವೃಧತ್।
01054003c ವೇದಾಂಶ್ಚಾಧಿಜಗೇ ಸಾಂಗಾನ್ಸೇತಿಹಾಸಾನ್ಮಹಾಯಶಾಃ।।
ಹುಟ್ಟಿದ ತಕ್ಷಣವೇ ತನ್ನ ಇಷ್ಟಮಾತ್ರದಿಂದ ದೇಹವನ್ನು ಬೆಳೆಯಿಸಿಕೊಂಡ ಆ ಮಹಾಯಶನು ವೇದ-ವೇದಾಂಗಗಳನ್ನು ಮತ್ತು ಇತಿಹಾಸಗಳನ್ನು ಗೆದ್ದಿದ್ದನು.
01054004a ಯಂ ನಾತಿತಪಸಾ ಕಶ್ಚಿನ್ನ ವೇದಾಧ್ಯಯನೇನ ಚ।
01054004c ನ ವ್ರತೈರ್ನೋಪವಾಸೈಶ್ಚ ನ ಪ್ರಸೂತ್ಯಾ ನ ಮನ್ಯುನಾ।।
ತಪಸ್ಸಿನಲ್ಲಿ, ವೇದಾಧ್ಯಯನದಲ್ಲಿ, ವ್ರತೋಪವಾಸಗಳಲ್ಲಿ, ಸಂತಾನದಲ್ಲಿ ಅಥವಾ ಸಿಟ್ಟಿನಲ್ಲಿ ಅವನನ್ನು ಮೀರಿದವರ್ಯಾರೂ ಇರಲಿಲ್ಲ.
01054005a ವಿವ್ಯಾಸೈಕಂ ಚತುರ್ಧಾ ಯೋ ವೇದಂ ವೇದವಿದಾಂ ವರಃ।
01054005c ಪರಾವರಜ್ಞೋ ಬ್ರಹ್ಮರ್ಷಿಃ ಕವಿಃ ಸತ್ಯವ್ರತಃ ಶುಚಿಃ।।
ಶುಚಿಯೂ, ಸತ್ಯವ್ರತನೂ, ಕವಿಯೂ, ಬ್ರಹ್ಮರ್ಷಿಯೂ, ಪರಾವರಜ್ಞನೂ, ವೇದವಿದರಲ್ಲಿ ಶ್ರೇಷ್ಠನೂ ಆದ ಅವನು ವೇದವನ್ನು ನಾಲ್ಕು ಭಾಗಗಳನ್ನಾಗಿ ವಿಂಗಡಿಸಿದನು.
01054006a ಯಃ ಪಾಂಡುಂ ಧೃತರಾಷ್ಟ್ರಂ ಚ ವಿದುರಂ ಚಾಪ್ಯಜೀಜನತ್।
01054006c ಶಂತನೋಃ ಸಂತತಿಂ ತನ್ವನ್ಪುಣ್ಯಕೀರ್ತಿರ್ಮಹಾಯಶಾಃ।।
ಪಾಂಡು, ಧೃತರಾಷ್ಟ್ರ, ಮತ್ತು ವಿದುರರಿಗೆ ಜನ್ಮವಿತ್ತು ಅವನು ಮಹಾಯಶಸ್ವಿ ಪುಣ್ಯಕೀರ್ತಿಮಯ ಶಂತನು ಸಂತತಿಯನ್ನು ಮುಂದುವರಿಸಿದನು.
01054007a ಜನಮೇಜಯಸ್ಯ ರಾಜರ್ಷೇಃ ಸ ತದ್ಯಜ್ಞಸದಸ್ತದಾ।
01054007c ವಿವೇಶ ಶಿಷ್ಯೈಃ ಸಹಿತೋ ವೇದವೇದಾಂಗಪಾರಗೈಃ।।
ತನ್ನ ವೇದವೇದಾಂಗಪಾರಂಗತ ಶಿಷ್ಯರೊಂದಿಗೆ ಅವನು ರಾಜರ್ಷಿ ಜನಮೇಜಯನ ಯಜ್ಞಶಾಲೆಯನ್ನು ಪ್ರವೇಶಿಸಿದನು.
01054008a ತತ್ರ ರಾಜಾನಮಾಸೀನಂ ದದರ್ಶ ಜನಮೇಜಯಂ।
01054008c ವೃತಂ ಸದಸ್ಯೈರ್ಬಹುಭಿರ್ದೇವೈರಿವ ಪುರಂದರಂ।।
01054009a ತಥಾ ಮೂರ್ಧಾವಸಿಕ್ತೈಶ್ಚ ನಾನಾಜನಪದೇಶ್ವರೈಃ।
01054009c ಋತ್ವಿಗ್ಭಿರ್ದೇವಕಲ್ಪೈಶ್ಚ ಕುಶಲೈರ್ಯಜ್ಞಸಂಸ್ತರೇ।।
ಅಲ್ಲಿ ಅವನು ದೇವತೆಗಳಿಂದ ಸುತ್ತುವರೆದ ಪುರಂದರನಂತೆ ಅನೇಕ ಸದಸ್ಯರಿಂದ, ಮೂರ್ಧಾವಸಿಕ್ತ ನಾನಾ ಜನಪದೇಶ್ವರರಿಂದ, ಮತ್ತು ಯಜ್ಞಕಾರ್ಯ ಕುಶಲ ದೇವಕಲ್ಪ ಋತ್ವಿಜರಿಂದ ಆವೃತನಾಗಿ ಕುಳಿತಿದ್ದ ರಾಜ ಜನಮೇಜಯನನ್ನು ಕಂಡನು.
01054010a ಜನಮೇಜಯಸ್ತು ರಾಜರ್ಷಿರ್ದೃಷ್ಟ್ವಾ ತಮೃಷಿಮಾಗತಂ।
01054010c ಸಗಣೋಽಬ್ಯುದ್ಯಯೌ ತೂರ್ಣಂ ಪ್ರೀತ್ಯಾ ಭರತಸತ್ತಮಃ।।
ಭರತಸತ್ತಮ ರಾಜರ್ಷಿ ಜನಮೇಜಯನು ಆಗಮಿಸುತ್ತಿದ್ದ ಋಷಿಯನ್ನು ಕಂಡು ಅತ್ಯಂತ ಹರ್ಷಿತನಾಗಿ ತನ್ನ ಸಂಗಾತಿಗಳೊಂದಿಗೆ ಮುಂದೆಬಂದು ಬರಮಾಡಿಕೊಂಡನು.
01054011a ಕಾಂಚನಂ ವಿಷ್ಟರಂ ತಸ್ಮೈ ಸದಸ್ಯಾನುಮತೇ ಪ್ರಭುಃ।
01054011c ಆಸನಂ ಕಲ್ಪಯಾಮಾಸ ಯಥಾ ಶಕ್ರೋ ಬೃಹಸ್ಪತೇಃ।।
ಸದಸ್ಯರ ಅನುಮತಿಯಂತೆ ಶಕ್ರನು ಬೃಹಸ್ಪತಿಗೆ ನೀಡುವ ಹಾಗೆ ಪ್ರಭು ಜನಮೇಜಯನು ಅವನಿಗೆ ಕಾಂಚನ ಆಸನವನ್ನಿತ್ತನು.
01054012a ತತ್ರೋಪವಿಷ್ಟಂ ವರದಂ ದೇವರ್ಷಿಗಣಪೂಜಿತಂ।
01054012c ಪೂಜಯಾಮಾಸ ರಾಜೇಂದ್ರಃ ಶಾಸ್ತ್ರದೃಷ್ಟೇನ ಕರ್ಮಣಾ।।
ಅಲ್ಲಿ ಕುಳಿತುಕೊಂಡ ದೇವರ್ಷಿಗಣಪೂಜಿತ ವರದನನ್ನು ರಾಜೇಂದ್ರನು ಶಾಸ್ತ್ರೋಕ್ತ ಕರ್ಮಗಳಿಂದ ಪೂಜಿಸಿದನು.
01054013a ಪಾದ್ಯಮಾಚಮನೀಯಂ ಚ ಅರ್ಘ್ಯಂ ಗಾಂ ಚ ವಿಧಾನತಃ।
01054013c ಪಿತಾಮಹಾಯ ಕೃಷ್ಣಾಯ ತದರ್ಹಾಯ ನ್ಯವೇದಯತ್।।
ಪಿತಾಮಹ ಕೃಷ್ಣನಿಗೆ ವಿಧಿವತ್ತಾಗಿ ಪಾದ್ಯ, ಆಚಮನೀಯ, ಅರ್ಘ್ಯ ಮತ್ತು ಗೋವುಗಳನ್ನು ನಿವೇದಿಸಿದನು.
01054014a ಪ್ರತಿಗೃಹ್ಯ ಚ ತಾಂ ಪೂಜಾಂ ಪಾಂಡವಾಜ್ಜನಮೇಜಯಾತ್।
01054014c ಗಾಂ ಚೈವ ಸಮನುಜ್ಞಾಯ ವ್ಯಾಸಃ ಪ್ರೀತೋಽಭವತ್ತದಾ।।
ಸುಪ್ರೀತ ವ್ಯಾಸನು ಪಾಂಡವ್ಯ ಜನಮೇಜಯನ ಪೂಜೆ-ಗೋವುಗಳನ್ನು ಪ್ರತಿಗ್ರಹಿಸಿದನು.
01054015a ತಥಾ ಸಂಪೂಜಯಿತ್ವಾ ತಂ ಯತ್ನೇನ ಪ್ರಪಿತಾಮಹಂ।
01054015c ಉಪೋಪವಿಶ್ಯ ಪ್ರೀತಾತ್ಮಾ ಪರ್ಯಪೃಚ್ಛದನಾಮಯಂ।।
ಪ್ರಪಿತಾಮಹನನ್ನು ಈ ರೀತಿ ಪೂಜಿಸಿ, ಅವನ ಕೆಳಗಿನ ಸ್ಥಾನದಲ್ಲಿ ಕುಳಿತುಕೊಂಡು ಅನಾಮಯನ ಕುಶಲವನ್ನು ವಿಚಾರಿಸಿದನು.
01054016a ಭಗವಾನಪಿ ತಂ ದೃಷ್ಟ್ವಾ ಕುಶಲಂ ಪ್ರತಿವೇದ್ಯ ಚ।
01054016c ಸದಸ್ಯೈಃ ಪೂಜಿತಃ ಸರ್ವೈಃ ಸದಸ್ಯಾನಭ್ಯಪೂಜಯತ್।।
ಆ ಭಗವಾನನೂ ಕೂಡ ಅವನನ್ನು ನೋಡಿ ಕುಶಲವನ್ನು ವಿಚಾರಿಸಿ, ತನ್ನನ್ನು ಪೂಜಿಸಿದ ಸರ್ವ ಸದಸ್ಯರಿಗೆ ವಂದಿಸಿದನು.
01054017a ತತಸ್ತಂ ಸತ್ಕೃತಂ1 ಸರ್ವೈಃ ಸದಸ್ಯೈರ್ಜನಮೇಜಯಃ।
01054017c ಇದಂ ಪಶ್ಚಾದ್ದ್ವಿಜಶ್ರೇಷ್ಠಂ ಪರ್ಯಪೃಚ್ಛತ್ಕೃತಾಂಜಲಿಃ।।
ಎಲ್ಲ ಸದಸ್ಯರು ದ್ವಿಜಶ್ರೇಷ್ಠನನ್ನು ಸತ್ಕರಿಸಿದ ನಂತರ ಜನಮೇಜಯನು ಅಂಜಲೀಬದ್ಧನಾಗಿ ಕೇಳಿಕೊಂಡನು:
01054018a ಕುರೂಣಾಂ ಪಾಂಡವಾನಾಂ ಚ ಭವಾನ್ಪ್ರತ್ಯಕ್ಷದರ್ಶಿವಾನ್।
01054018c ತೇಷಾಂ ಚರಿತಮಿಚ್ಛಾಮಿ ಕಥ್ಯಮಾನಂ ತ್ವಯಾ ದ್ವಿಜ।।
“ಕುರುಗಳನ್ನೂ ಪಾಂಡವರನ್ನೂ ನೀನು ಪ್ರತ್ಯಕ್ಷವಾಗಿ ನೋಡಿದ್ದೀಯೆ. ದ್ವಿಜ! ನಿನ್ನಿಂದ ಅವರ ಚರಿತ್ರೆಯನ್ನು ಕೇಳಲು ಬಯಸುತ್ತೇನೆ.
01054019a ಕಥಂ ಸಮಭವದ್ಭೇದಸ್ತೇಷಾಮಕ್ಲಿಷ್ಟಕರ್ಮಣಾಂ।
01054019c ತಚ್ಚ ಯುದ್ಧಂ ಕಥಂ ವೃತ್ತಂ ಭೂತಾಂತಕರಣಂ ಮಹತ್।।
01054020a ಪಿತಾಮಹಾನಾಂ ಸರ್ವೇಷಾಂ ದೈವೇನಾವಿಷ್ಟಚೇತಸಾಂ।
01054020c ಕಾರ್ತ್ಸ್ನ್ಯೆನೈತತ್ಸಮಾಚಕ್ಷ್ವ ಭಗವನ್ಕುಶಲೋ ಹ್ಯಸಿ।।
ಆ ಅಕ್ಲಿಷ್ಟಕರ್ಮಿಗಳಲ್ಲಿ ಭೇದವು ಹೇಗೆ ಉಂಟಾಯಿತು? ದೈವಪ್ರೇರಿತ ಆ ಸರ್ವ ಭೂತಾಂತಕಾರಕ ಆ ಮಹಾಯುದ್ಧವು ನನ್ನ ಪಿತಾಮಹ ಚೇತನರ ಮಧ್ಯೆ ಹೇಗೆ ನಡೆಯುವಂತಾಯಿತು? ಭಗವನ್! ಅವೆಲ್ಲವನ್ನೂ ನನಗೆ ಹೇಳು. ಯಾಕೆಂದರೆ ನಿನಗೊಬ್ಬನಿಗೇ ಇವೆಲ್ಲ ಚೆನ್ನಾಗಿ ತಿಳಿದಿವೆ.”
01054021a ತಸ್ಯ ತದ್ವಚನಂ ಶ್ರುತ್ವಾ ಕೃಷ್ಣದ್ವೈಪಾಯನಸ್ತದಾ।
01054021c ಶಶಾಸ ಶಿಷ್ಯಮಾಸೀನಂ ವೈಶಂಪಾಯನಮಂತಿಕೇ।। ।
ಅವನ ಆ ಮಾತುಗಳನ್ನು ಕೇಳಿದ ಕೃಷ್ಣದ್ವೈಪಾಯನನು ಅಲ್ಲಿಯೇ ಕುಳಿತಿದ್ದ ಶಿಷ್ಯ ವೈಶಂಪಾಯನನಿಗೆ ಆದೇಶವನ್ನಿತ್ತನು:
01054022a ಕುರೂಣಾಂ ಪಾಂಡವಾನಾಂ ಚ ಯಥಾ ಭೇದೋಽಭವತ್ಪುರಾ।
01054022c ತದಸ್ಮೈ ಸರ್ವಮಾಚಕ್ಷ್ವ ಯನ್ಮತ್ತಃ ಶ್ರುತವಾನಸಿ।।
“ಹಿಂದೆ ಕುರು-ಪಾಂಡವರಲ್ಲಿ ಹೇಗೆ ಭೇದವುಂಟಾಯಿತು ಎನ್ನುವುದೆಲ್ಲವನ್ನೂ ನನ್ನಿಂದ ಕೇಳಿದ್ದ ಹಾಗೆ ಹೇಳು.”
01054023a ಗುರೋರ್ವಚನಮಾಜ್ಞಾಯ ಸ ತು ವಿಪ್ರರ್ಷಭಸ್ತದಾ।
01054023c ಆಚಚಕ್ಷೇ ತತಃ ಸರ್ವಮಿತಿಹಾಸಂ ಪುರಾತನಂ।।
01054024a ತಸ್ಮೈ ರಾಜ್ಞೇ ಸದಸ್ಯೇಭ್ಯಃ ಕ್ಷತ್ರಿಯೇಭ್ಯಶ್ಚ ಸರ್ವಶಃ।
01054024c ಭೇದಂ ರಾಜ್ಯವಿನಾಶಂ ಚ ಕುರುಪಾಂಡವಯೋಸ್ತದಾ।।
ಗುರುವಿನ ವಚನವನ್ನು ಸ್ವೀಕರಿಸಿದ ಆ ವಿಪ್ರರ್ಷಭನು ಕುರು-ಪಾಂಡವರಲ್ಲಾದ ಭೇದ ಮತ್ತು ನಂತರದ ರಾಜ್ಯವಿನಾಶದ ಸಹಿತ ಆ ಪುರಾತನ ಇತಿಹಾಸ ಸರ್ವವನ್ನೂ ಅಲ್ಲಿ ನೆರೆದಿದ್ದ ಸದಸ್ಯರು ಮತ್ತು ಕ್ಷತ್ರಿಯ ರಾಜರೆಲ್ಲರಿಗೆ ಹೇಳತೊಡಗಿದನು.
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಆದಿವಂಶಾವತರಣಿ ಕಥಾನುಬಂಧೇ ಚತುಷ್ಪಂಚಾಶತ್ತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಆದಿವಂಶಾವತರಣ ಪರ್ವದಲ್ಲಿ ಕಥಾನುಬಂಧ ಎನ್ನುವ ಐವತ್ನಾಲ್ಕನೆಯ ಅಧ್ಯಾಯವು.
-
ಸಹಿತಃ ಎಂಬ ಪಾಠಾಂತರವಿದೆ (ನೀಲಕಂಠ). ↩︎