053 ಕಥಾನುಬಂಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಆಸ್ತೀಕ ಪರ್ವ

ಅಧ್ಯಾಯ 53

ಸಾರ ಆಸ್ತೀಕನಿಗೆ ವರಪ್ರಾಪ್ತಿ, ಅವನು ತಕ್ಷಕನನ್ನು ತಡೆಯುವುದು (1-5). ಸಂತೋಷಗೊಂಡ ಸರ್ಪಗಳು ಆಸ್ತೀಕನಿಗೆ ವರಗಳನ್ನಿತ್ತುದುದು (6-20). ಶೌನಕನು ಸರ್ಪಯಾಗದ ಸಮಯದಲ್ಲಿ ಜನಮೇಜಯನಿಗೆ ಹೇಳಿದ ವ್ಯಾಸ ರಚಿತ ಮಹಾಭಾರತ ಕಥೆಯನ್ನು ಹೇಳಲು ಉಗ್ರಶ್ರವನಲ್ಲಿ ಕೇಳಿಕೊಳ್ಳುವುದು (21-36).

01053001 ಸೂತ ಉವಾಚ।
01053001a ಇದಮತ್ಯದ್ಭುತಂ ಚಾನ್ಯದಾಸ್ತೀಕಸ್ಯಾನುಶುಶ್ರುಮಃ।
01053001c ತಥಾ ವರೈಶ್ಚಂದ್ಯಮಾನೇ ರಾಜ್ಞಾ ಪಾರಿಕ್ಷಿತೇನ ಹ।।

ಸೂತನು ಹೇಳಿದನು: “ರಾಜ ಪಾರಿಕ್ಷಿತನು ಆಸ್ತೀಕನಿಗೆ ವರವನ್ನು ಕೊಡುತ್ತಾನೆನ್ನುವಾಗ ಆದ ಈ ಅತ್ಯದ್ಭುತದ ಕುರಿತು ಕೇಳು.

01053002a ಇಂದ್ರಹಸ್ತಾಚ್ಚ್ಯುತೋ ನಾಗಃ ಖ ಏವ ಯದತಿಷ್ಟತ।
01053002c ತತಶ್ಚಿಂತಾಪರೋ ರಾಜಾ ಬಭೂವ ಜನಮೇಜಯಃ।।

ಇಂದ್ರನ ಕೈಯಿಂದ ಜಾರಿದ ನಾಗ ತಕ್ಷಕನು ಕೆಳಗೆ ಬೀಳದೆಯೇ ಆಕಾಶದಲ್ಲಿಯೇ ನಿಂತಾಗ ರಾಜ ಜನಮೇಜಯನು ಚಿಂತಾಪರನಾದನು.

01053003a ಹೂಯಮಾನೇ ಭೃಶಂ ದೀಪ್ತೇ ವಿಧಿವತ್ಪಾವಕೇ ತದಾ।
01053003c ನ ಸ್ಮ ಸ ಪ್ರಾಪತದ್ವಹ್ನೌ ತಕ್ಷಕೋ ಭಯಪೀಢಿತಃ।।

ಉರಿಯುತ್ತಿರುವ ಅಗ್ನಿಯಲ್ಲಿ ವಿಧಿವತ್ತಾಗಿ ಹವಿಸ್ಸುಗಳು ಬೀಳುತ್ತಿದ್ದರೂ ಭಯಪೀಡಿತನಾಗಿ ಮೂರ್ಛಿತ ತಕ್ಷಕನು ವಹ್ನಿಯಲ್ಲಿ ಬೀಳಲಿಲ್ಲ.”

01053004 ಶೌನಕ ಉವಾಚ।
01053004a ಕಿಂ ಸೂತ ತೇಷಾಂ ವಿಪ್ರಾಣಾಂ ಮಂತ್ರಗ್ರಾಮೋ ಮನೀಷಿಣಾಂ।
01053004c ನ ಪ್ರತ್ಯಭಾತ್ತದಾಗ್ನೌ ಯನ್ನ ಪಪಾತ ಸ ತಕ್ಷಕಃ।।

ಶೌನಕನು ಹೇಳಿದನು: “ಸೂತ! ಅಲ್ಲಿರುವ ವಿಧ್ವಾಂಸ ವಿಪ್ರರ ಮಂತ್ರಗಳು ಪರಿಣಾಮಕಾರಿಯಾಗಿರಲಿಲ್ಲವೇ? ತಕ್ಷಕನು ಏಕೆ ಉರಿಯುತ್ತಿರುವ ಅಗ್ನಿಯಲ್ಲಿ ಬಂದು ಬೀಳಲಿಲ್ಲ?”

01053005 ಸೂತ ಉವಾಚ।
01053005a ತಮಿಂದ್ರಹಸ್ತಾದ್ವಿಸ್ರಸ್ತಂ ವಿಸಂಜ್ಞಂ ಪನ್ನಗೋತ್ತಮಂ।
01053005c ಆಸ್ತೀಕಸ್ತಿಷ್ಠ ತಿಷ್ಠೇತಿ ವಾಚಸ್ತಿಸ್ರೋಽಭ್ಯುದೈರಯತ್।।

ಸೂತನು ಹೇಳಿದನು: “ಇಂದ್ರನ ಕೈಯಿಂದ ಜಾರಿ ಮೂರ್ಛಿತನಾಗಿ ಬೀಳುತ್ತಿದ್ದ ಪನ್ನಗೋತ್ತಮನಿಗೆ ಆಸ್ತೀಕನು “ನಿಲ್ಲು! ನಿಲ್ಲು!” ಎಂದು ಮೂರು ಬಾರಿ ಕೂಗಿ ಹೇಳಿದನು.

01053006a ವಿತಸ್ಥೇ ಸೋಽಂತರಿಕ್ಷೇಽಥ ಹೃದಯೇನ ವಿದೂಯತಾ।
01053006c ಯಥಾ ತಿಷ್ಠೇಽತ ವೈ ಕಶ್ಚಿದ್ಗೋಚಕ್ರಸ್ಯಾಂತರಾ ನರಃ।।

ಹೃದಯದಲ್ಲಿ ನೋವನ್ನು ಅನುಭವಿಸುತ್ತಿದ್ದ ಅವನು ಸ್ವರ್ಗ ಮತ್ತು ಭೂಮಿಯ ನಡುವೆ ನೇತಾಡುತ್ತಿರುವ ವ್ಯಕ್ತಿಯಂತೆ ಅಲ್ಲಿಯೇ ಅಂತರಕ್ಷದಲ್ಲಿ ನಿಂತುಬಿಟ್ಟನು.

01053007a ತತೋ ರಾಜಾಬ್ರವೀದ್ವಾಕ್ಯಂ ಸದಸ್ಯೈಶ್ಚೋದಿತೋ ಭೃಶಂ।
01053007c ಕಾಮಮೇತದ್ಭವತ್ವೇವಂ ಯಥಾಽಽಸ್ತೀಕಸ್ಯ ಭಾಷಿತಂ।।

ಮೇಲಿಂದ ಮೇಲೆ ಸದಸ್ಯರಿಂದ ಒತ್ತಡಬಂದಾಗ ರಾಜನು “ಅಸ್ತೀಕನ ಬಯಕೆಯಲ್ಲಿದ್ದುದು ನಡೆಯಲಿ” ಎಂದನು.

01053008a ಸಮಾಪ್ಯತಾಮಿದಂ ಕರ್ಮ ಪನ್ನಗಾಃ ಸಂತ್ವನಾಮಯಾಃ।
01053008c ಪ್ರೀಯತಾಮಯಮಾಸ್ತೀಕಃ ಸತ್ಯಂ ಸೂತವಚೋಽಸ್ತು ತತ್।।

“ಈ ಕಾರ್ಯವು ನಿಲ್ಲಲಿ. ನಾಗಗಳು ಬದುಕಲಿ. ಆಸ್ತೀಕನು ಬಯಸಿದಂತೆಯೇ ಆಗಲಿ ಮತ್ತು ಸೂತನ ಮಾತು ಸತ್ಯವಾಗಲಿ.”

01053009a ತತೋ ಹಲಹಲಾಶಬ್ದಃ ಪ್ರೀತಿಜಃ ಸಮವರ್ತತ।
01053009c ಆಸ್ತೀಕಸ್ಯ ವರೇ ದತ್ತೇ ತಥೈವೋಪರರಾಮ ಚ।।
01053010a ಸ ಯಜ್ಞಃ ಪಾಂಡವೇಯಸ್ಯ ರಾಜ್ಞಃ ಪಾರಿಕ್ಷಿತಸ್ಯ ಹ।
01053010c ಪ್ರೀತಿಮಾಂಶ್ಚಾಭವದ್ರಾಜಾ ಭಾರತೋ ಜನಮೇಜಯಃ।।

ಆಸ್ತೀಕನ ವರವನ್ನಿತ್ತಾಕ್ಷಣ ಎಲ್ಲಕಡೆಯಿಂದಲೂ ಸಂತೋಷದ ಹಲಹಲ ಶಬ್ಧವು ಕೇಳಿಬಂದಿತು. ಪಾಂಡವೇಯ ರಾಜ ಪಾರಿಕ್ಷಿತನ ಯಜ್ಞವು ಸಮಾಪ್ತಿಯಾಯಿತು ಮತ್ತು ಭಾರತ ರಾಜ ಜನಮೇಜಯನು ತನ್ನ ಕುರಿತು ಸಂತಸಗೊಂಡನು.

01053011a ಋತ್ವಿಗ್ಭ್ಯಃ ಸಸದಸ್ಯೇಭ್ಯೋ ಯೇ ತತ್ರಾಸನ್ಸಮಾಗತಾಃ।
01053011c ತೇಭ್ಯಶ್ಚ ಪ್ರದದೌ ವಿತ್ತಂ ಶತಶೋಽಥ ಸಹಸ್ರಶಃ।।

ಅಲ್ಲಿ ಸಮಾಗತ ಋತ್ವಿಜ ಮತ್ತು ಸದಸ್ಯರಿಗೆ ನೂರು ನೂರು ಮತ್ತು ಸಹಸ್ರಾರು ಸಂಖ್ಯೆಗಳಲ್ಲಿ ಸಂಪತ್ತನ್ನು ನೀಡಿಲಾಯಿತು.

01053012a ಲೋಹಿತಾಕ್ಷಾಯ ಸೂತಾಯ ತಥಾ ಸ್ಥಪತಯೇ ವಿಭುಃ।
01053012c ಯೇನೋಕ್ತಂ ತತ್ರ ಸತ್ರಾಗ್ರೇ ಯಜ್ಞಸ್ಯ ವಿನಿವರ್ತನಂ।।
01053013a ನಿಮಿತ್ತಂ ಬ್ರಾಹ್ಮಣ ಇತಿ ತಸ್ಮೈ ವಿತ್ತಂ ದದೌ ಬಹು।
01053013c 1ತತಶ್ಚಕಾರಾವಭೃಥಂ ವಿಧಿದೃಷ್ಟೇನ ಕರ್ಮಣಾ।।

ವಾಸ್ತುಶಾಸ್ತ್ರವನ್ನು ತಿಳಿದಿದ್ದ ಮತ್ತು ಸತ್ರದ ಪ್ರಾರಂಭದಲ್ಲಿಯೇ ಈ ಯಜ್ಞವು ಓರ್ವ ಬ್ರಾಹ್ಮಣನ ಕಾರಣದಿಂದ ನಿಲ್ಲುತ್ತದೆ ಎಂದು ಹೇಳಿದ್ದ ಸೂತ ಲೋಹಿತಾಕ್ಷನಿಗೂ ಬಹಳಷ್ಟು ಸಂಪತ್ತನ್ನು ದಾನವಾಗಿ ನೀಡಲಾಯಿತು. ನಂತರ ವಿಧಿಪೂರ್ವಕ ಅವಭೃತ ಕಾರ್ಯವೂ ನಡೆಯಿತು.

01053014a ಆಸ್ತೀಕಂ ಪ್ರೇಷಯಾಮಾಸ ಗೃಹಾನೇವ ಸುಸತ್ಕೃತಂ।
01053014c ರಾಜಾ ಪ್ರೀತಮನಾಃ ಪ್ರೀತಂ ಕೃತಕೃತ್ಯಂ ಮನೀಷಿಣಂ।।

ಈ ಒಳ್ಳೆಯ ಕಾರ್ಯವು ಕೃತಕೃತ್ಯವಾಯಿತೆಂದು ಸಂತೋಷಗೊಂಡ ರಾಜನು ಆಸ್ತೀಕನನ್ನು ಸತ್ಕರಿಸಿ ಮನೆಗೆ ಕಳುಹಿಸಿಕೊಟ್ಟನು.

01053015a ಪುನರಾಗಮನಂ ಕಾರ್ಯಮಿತಿ ಚೈನಂ ವಚೋಽಬ್ರವೀತ್।
01053015c ಭವಿಷ್ಯಸಿ ಸದಸ್ಯೋ ಮೇ ವಾಜಿಮೇಧೇ ಮಹಾಕ್ರತೌ।।

“ಪುನಃ ಬಂದು ನನ್ನ ಮುಂದಿನ ಕಾರ್ಯ ಮಹಾಕ್ರತು ಅಶ್ವಮೇಧದಲ್ಲಿ ಸದಸ್ಯನಾಗಬೇಕು” ಎಂದನು.

01053016a ತಥೇತ್ಯುಕ್ತ್ವಾ ಪ್ರದುದ್ರಾವ ಸ ಚಾಸ್ತೀಕೋ ಮುದಾ ಯುತಃ।
01053016c ಕೃತ್ವಾ ಸ್ವಕಾರ್ಯಮತುಲಂ ತೋಷಯಿತ್ವಾ ಚ ಪಾರ್ಥಿವಂ।।

“ಹಾಗೆಯೇ ಆಗಲಿ” ಎಂದು ತನ್ನ ಕಾರ್ಯದಿಂದಾಗಿ ಮಾತುಲ ಪಾರ್ಥಿವನಿಗೆ ಅತೀವ ಸಂತೋಷವಾಯಿತಲ್ಲ ಎಂದು ಸಂತುಷ್ಟಗೊಂಡು ಆಸ್ತೀಕನು ಮರಳಿದನು.

01053017a ಸ ಗತ್ವಾ ಪರಮಪ್ರೀತೋ ಮಾತರಂ ಮಾತುಲಂ ಚ ತಂ।
01053017c ಅಭಿಗಮ್ಯೋಪಸಂಗೃಹ್ಯ ಯಥಾವೃತ್ತಂ ನ್ಯವೇದಯತ್।।

ಪರಮ ಸಂತಸಗೊಂಡು ತನ್ನ ತಾಯಿ ಮತ್ತು ಮಾವನ ಬಳಿ ಹೋಗಿ ಅವರಿಗೆ ಅಭಿನಂದಿಸಿ ನಡೆದುದೆಲ್ಲವನ್ನೂ ನಿವೇದಿಸಿದನು.

01053018a ಏತಚ್ಛ್ರುತ್ವಾ ಪ್ರೀಯಮಾಣಾಃ ಸಮೇತಾ ಯೇ ತತ್ರಾಸನ್ ಪನ್ನಗಾ ವೀತಮೋಹಾಃ।
01053018c ತೇಽಆಸ್ತೀಕೇ ವೈ ಪ್ರೀತಿಮಂತೋ ಬಭೂವುಃ ಊಚುಶ್ಚೈನಂ ವರಮಿಷ್ಟಂ ವೃಣೀಷ್ವ।।

ಇದನ್ನೆಲ್ಲಾ ಕೇಳಿ ಅಲ್ಲಿ ಸೇರಿದ್ದ ಪನ್ನಗಗಳೆಲ್ಲರೂ ತಮ್ಮ ತಮ್ಮ ಭಯವನ್ನು ಕಳೆದುಕೊಂದು ಸಂತಸಗೊಂಡರು. ಆಸ್ತೀಕನಿಂದ ಬಹಳ ಸಂತಸಗೊಂಡ ಅವರು “ನಿನಗಿಷ್ಟವಾದ ವರವನ್ನು ಕೇಳಿಕೋ!” ಎಂದರು.

01053019a ಭೂಯೋ ಭೂಯಃ ಸರ್ವಶಸ್ತೇಽಬ್ರುವಂಸ್ತಂ ಕಿಂ ತೇ ಪ್ರಿಯಂ ಕರವಾಮೋಽದ್ಯ ವಿದ್ವನ್।
01053019c ಪ್ರೀತಾ ವಯಂ ಮೋಕ್ಷಿತಾಶ್ಚೈವ ಸರ್ವೇ ಕಾಮಂ ಕಿಂ ತೇ ಕರವಾಮೋಽದ್ಯ ವತ್ಸ।।

ಅಲ್ಲಿದ್ದ ಎಲ್ಲರೂ ಮೇಲಿಂದ ಮೇಲೆ “ವಿದ್ವನ್! ನಿನಗೇನು ಇಷ್ಟವಿದೆ? ನಾವೇನು ಮಾಡಬೇಕು? ವತ್ಸ! ನಮ್ಮೆಲ್ಲರನ್ನು ನೀನು ರಕ್ಷಿಸಿದುದಕ್ಕಾಗಿ ನಾವು ಸಂತಸಗೊಂಡಿದ್ದೇವೆ. ಇಂದು ನಾವು ನಿನಗಾಗಿ ಏನನ್ನು ಮಾಡಬೇಕು ಎಂದು ಹೇಳು.”

01053020 ಆಸ್ತೀಕ ಉವಾಚ।
01053020a ಸಾಯಂ ಪ್ರಾತಃ ಸುಪ್ರಸನ್ನಾತ್ಮರೂಪಾ ಲೋಕೇ ವಿಪ್ರಾ ಮಾನವಾಶ್ಚೇತರೇಽಪಿ।
01053020c ಧರ್ಮಾಖ್ಯಾನಂ ಯೇ ವದೇಯುರ್ಮಮೇದಂ ತೇಷಾಂ ಯುಷ್ಮದ್ಭ್ಯೋ ನೈವ ಕಿಂ ಚಿದ್ಭಯಂ ಸ್ಯಾತ್।।

ಆಸ್ತೀಕನು ಹೇಳಿದನು: “ಈ ಲೋಕದಲ್ಲಿ ಯಾವ ವಿಪ್ರ ಅಥವಾ ಅನ್ಯ ಮಾನವನು ಸುಪ್ರಸನ್ನನಾಗಿ ಆತ್ಮರೂಪನಾಗಿ ಸಾಯಂಕಾಲ ಅಥವಾ ಪ್ರಾತಃಕಾಲದಲ್ಲಿ ಈ ಧರ್ಮಾಖ್ಯಾನವನ್ನು ಕೇಳುತ್ತಾನೋ ಅವನಿಗೆ ನಿಮ್ಮಿಂದ ಯಾವ ರೀತಿಯ ಭಯವೂ ಬಾರದಿರಲಿ.””

01053021 ಸೂತ ಉವಾಚ।
01053021a ತೈಶ್ಚಾಪ್ಯುಕ್ತೋ ಭಾಗಿನೇಯಃ ಪ್ರಸನ್ನೈಃ ಏತತ್ಸತ್ಯಂ ಕಾಮಮೇವಂ ಚರಂತಃ।
01053021c ಪ್ರೀತ್ಯಾ ಯುಕ್ತಾ ಈಪ್ಸಿತಂ ಸರ್ವಶಸ್ತೇ ಕರ್ತಾರಃ ಸ್ಮ ಪ್ರವಣಾ ಭಾಗಿನೇಯ।।

ಸೂತನು ಹೇಳಿದನು: “ಅವರೂ ಕೂಡ ಸಂತೋಷದಿಂದ ಹೇಳಿದರು: “ತಂಗಿಯ ಮಗನೇ! ನೀನು ಕೇಳಿಕೊಂಡ ಈ ಕೆಲಸವನ್ನು ಸತ್ಯವಾಗಿಯೂ ನಡೆಸಿಕೊಡುತ್ತೇವೆ. ನಿನಗಿಷ್ಟವಾದ ಎಲ್ಲವನ್ನೂ ನಾವು ಸಂತಸದಿಂದ ಮಾಡಿಕೊಡುತ್ತೇವೆ.

01053022a ಜರತ್ಕಾರೋರ್ಜರತ್ಕಾರ್ವಾಂ ಸಮುತ್ಪನ್ನೋ ಮಹಾಯಶಾಃ2
01053022c ಆಸ್ತೀಕಃ ಸತ್ಯಸಂಧೋ ಮಾಂ ಪನ್ನಗೇಭ್ಯೋಽಭಿರಕ್ಷತು3।।
01053023a ಅಸಿತಂ ಚಾರ್ತಿಮಂತಂ ಚ ಸುನೀಥಂ ಚಾಪಿ ಯಃ ಸ್ಮರೇತ್4
01053023c ದಿವಾ ವಾ ಯದಿ ವಾ ರಾತ್ರೌ ನಾಸ್ಯ ಸರ್ಪಭಯಂ ಭವೇತ್5।।

ಜರತ್ಕಾರುವಿನಿಂದ ಜರತ್ಕಾರುವಿನಲ್ಲಿ ಹುಟ್ಟಿ ನಾಗಗಳನ್ನು ರಕ್ಷಿಸಿದ ಆ ಮಹಾಯಶ ಸತ್ಯಸಂಧ ಆಸ್ತೀಕನನ್ನು ಯಾರು ಅಸಿತ, ಆರ್ತಿಮಂತ ಮತ್ತು ಸುನೀಥನೆಂದು ಹಗಲು ಅಥವಾ ರಾತ್ರಿಯಲ್ಲಿ ಸ್ಮರಿಸುತ್ತಾರೋ ಅವರಿಗೆ ಸರ್ಪಭಯವೇ ಇರುವುದಿಲ್ಲ.””

01053024 ಸೂತ ಉವಾಚ।
01053024a ಮೋಕ್ಷಯಿತ್ವಾ ಸ ಭುಜಗಾನ್ಸರ್ಪಸತ್ರಾದ್ದ್ವಿಜೋತ್ತಮಃ।
01053024c ಜಗಾಮ ಕಾಲೇ ಧರ್ಮಾತ್ಮಾದಿಷ್ಟಾಂತಂ ಪುತ್ರಪೌತ್ರವಾನ್।।

ಸೂತನು ಹೇಳಿದನು: “ದ್ವಿಜೋತ್ತಮ! ನಾಗಗಳನ್ನು ಸರ್ಪಸತ್ರದಿಂದ ರಕ್ಷಿಸಿದ ಆ ಧರ್ಮಾತ್ಮನು ಕಾಲಕ್ರಮೇಣವಾಗಿ ತನ್ನ ಪುತ್ರಪೌತ್ರರನ್ನು ತೊರೆದು ಕಾಲವಶನಾದನು.

01053025a ಇತ್ಯಾಖ್ಯಾನಂ ಮಯಾಸ್ತೀಕಂ ಯಥಾವತ್ಕೀರ್ತಿತಂ ತವ।
01053025c ಯತ್ಕೀರ್ತಯಿತ್ವಾ ಸರ್ಪೇಭ್ಯೋ ನ ಭಯಂ ವಿದ್ಯತೇ ಕ್ವ ಚಿತ್।।

ಅಸ್ತೀಕನ ಈ ಆಖ್ಯಾನವನ್ನು ಯಥಾವತ್ತಾಗಿ ನಿನಗೆ ಹೇಳಿದ್ದೇನೆ. ಇದನ್ನು ಪಠಿಸಿದವರಿಗೆ ಸರ್ಪಗಳಿಂದ ಭಯವೇ ಇರುವುದಿಲ್ಲ.

01053026a 6ಶ್ರುತ್ವಾ ಧರ್ಮಿಷ್ಠಮಾಖ್ಯಾನಮಾಸ್ತೀಕಂ ಪುಣ್ಯವರ್ಧನಂ।
01053026c ಆಸ್ತೀಕಸ್ಯ ಕವೇರ್ವಿಪ್ರ ಶ್ರೀಮಚ್ಚರಿತಮಾದಿತಃ।।

ವಿಪ್ರ! ಆಸ್ತೀಕನ ಪುಣ್ಯಕರ್ಮಗಳನ್ನೊಳಗೂಡಿದ ಈ ಧರ್ಮಿಷ್ಠ ಆಸ್ತೀಕೋಪಾಖ್ಯಾನವನ್ನು ಕೇಳಿದವರ ಪುಣ್ಯವು ವೃದ್ಧಿಯಾಗುತ್ತದೆ.”

01053027 ಶೌನಕ ಉವಾಚ।
01053027a ಭೃಗುವಂಶಾತ್ಪ್ರಭೃತ್ಯೇವ ತ್ವಯಾ ಮೇ ಕಥಿತಂ ಮಹತ್।
01053027c ಆಖ್ಯಾನಮಖಿಲಂ ತಾತ ಸೌತೇ ಪ್ರೀತೋಽಸ್ಮಿ ತೇನ ತೇ।।

ಶೌನಕನು ಹೇಳಿದನು: “ಮಗು! ಸೌತಿ! ನೀನು ಪೂರ್ತಿಯಾಗಿ ಹೇಳಿದ ಭೃಗುವಂಶದಿಂದ ಪ್ರಾರಂಭಗೊಂಡ ಈ ಮಹತ್ತರ ಕಥೆಯಿಂದ ನಾನು ಸಂತಸಗೊಂಡಿದ್ದೇನೆ.

01053028a ಪ್ರಕ್ಷ್ಯಾಮಿ ಚೈವ ಭೂಯಸ್ತ್ವಾಂ ಯಥಾವತ್ಸೂತನಂದನ।
01053028c ಯಾಂ ಕಥಾಂ ವ್ಯಾಸಸಂಪನ್ನಾಂ ತಾಂ ಚ ಭೂಯಃ ಪ್ರಚಕ್ಷ್ವ ಮೇ।।
01053029a ತಸ್ಮಿನ್ಪರಮದುಷ್ಪ್ರಾಪೇ ಸರ್ಪಸತ್ರೇ ಮಹಾತ್ಮನಾಂ।
01053029c ಕರ್ಮಾಂತರೇಷು ವಿಧಿವತ್ಸದಸ್ಯಾನಾಂ ಮಹಾಕವೇ।।

ಸೂತನಂದನ! ನಿನ್ನಲ್ಲಿ ಇನ್ನೊಮ್ಮೆ ಕೇಳಿಕೊಳ್ಳುತ್ತಿದ್ದೇನೆ. ಆ ಸರ್ಪಸತ್ರದಲ್ಲಿ ಸೇರಿದ್ದ ಸದಸ್ಯರಿಗೆ ಕರ್ಮಾಂತರಗಳಲ್ಲಿ ವಿಧಿವತ್ತಾಗಿ ಹೇಳಿದ ಮಹಾಕವಿ ವ್ಯಾಸನಿಂದ ಸಂಪಾದಿತಗೊಂಡ ಕಥೆಗಳನ್ನು ಪುನಃ ಕೇಳಲು ಬಯಸುತ್ತೇನೆ.

01053030a ಯಾ ಬಭೂವುಃ ಕಥಾಶ್ಚಿತ್ರಾ ಯೇಷ್ವರ್ಥೇಷು ಯಥಾತಥಂ।
01053030c ತ್ವತ್ತ ಇಚ್ಛಾಮಹೇ ಶ್ರೋತುಂ ಸೌತೇ ತ್ವಂ ವೈ ವಿಚಕ್ಷಣಃ।।

ಸೌತಿ! ನಿನ್ನಿಂದ ಚಿತ್ರವಿಚಿತ್ರ ಕಥೆಗಳನ್ನು ಅವುಗಳ ಅರ್ಥ ಬದಲಾವಣೆಯಾಗದ ರೀತಿಯಲ್ಲಿ ಕೇಳಲು ಬಯಸುತ್ತೇವೆ.”

01053031 ಸೂತ ಉವಾಚ।
01053031a ಕರ್ಮಾಂತರೇಷ್ವಕಥಯನ್ದ್ವಿಜಾ ವೇದಾಶ್ರಯಾಃ ಕಥಾಃ।
01053031c ವ್ಯಾಸಸ್ತ್ವಕಥಯನ್ನಿತ್ಯಮಾಖ್ಯಾನಂ ಭಾರತಂ ಮಹತ್।।

ಸೂತನು ಹೇಳಿದನು: “ಕರ್ಮಾಂಗಗಳಿಂದ ಬಿಡುವು ದೊರೆತಾಗ ದ್ವಿಜರು ವೇದಗಳನ್ನು ಆಧಾರಿಸಿದ ಕಥೆಗಳನ್ನು ಹೇಳುತ್ತಿದ್ದರು. ವ್ಯಾಸನು ಮಹಾಭಾರತದ ಕಥೆಯನ್ನು ನಿತ್ಯವೂ ಹೇಳುತ್ತಿದ್ದನು.”

01053032 ಶೌನಕ ಉವಾಚ।
01053032a ಮಹಾಭಾರತಮಾಖ್ಯಾನಂ ಪಾಂಡವಾನಾಂ ಯಶಸ್ಕರಂ।
01053032c ಜನಮೇಜಯೇನ ಯತ್ಪೃಷ್ಟಃ ಕೃಷ್ಣದ್ವೈಪಾಯನಸ್ತದಾ।।
01053033a ಶ್ರಾವಯಾಮಾಸ ವಿಧಿವತ್ತದಾ ಕರ್ಮಾಂತರೇಷು ಸಃ।
01053033c ತಾಮಹಂ ವಿಧಿವತ್ಪುಣ್ಯಾಂ ಶ್ರೋತುಮಿಚ್ಛಾಮಿ ವೈ ಕಥಾಂ।।

ಶೌನಕನು ಹೇಳಿದನು: “ಕರ್ಮಾಂಗಗಳ ಮಧ್ಯದಲ್ಲಿ ಜನಮೇಜಯನು ಕೇಳಿದಾಗ ಕೃಷ್ಣದ್ವೈಪಾಯನನಿಂದ ವಿಧಿವತ್ತಾಗಿ ಹೇಳಲ್ಪಟ್ಟ ಪಾಂಡವರ ಯಶಸ್ಸನ್ನು ವರ್ಣಿಸುವ ಆ ಮಹಾಭಾರತ ಕಥೆಯನ್ನು ವಿಧಿವತ್ತಾಗಿ ಕೇಳಬಯಸುತ್ತೇನೆ.

01053034a ಮನಃಸಾಗರಸಂಭೂತಾಂ ಮಹರ್ಷೇಃ ಪುಣ್ಯಕರ್ಮಣಃ।
01053034c ಕಥಯಸ್ವ ಸತಾಂ ಶ್ರೇಷ್ಠ ನ ಹಿ ತೃಪ್ಯಾಮಿ ಸೂತಜ।।

ಸೂತಜ! ನಾನು ಇನ್ನೂ ತೃಪ್ತಿಗೊಂಡಿಲ್ಲ. ಸತ್ಯವಂತರಲ್ಲಿ ಶ್ರೇಷ್ಠ, ಪುಣ್ಯಕರ್ಮಿ ಮಹರ್ಷಿಯ ಮನೋಸಾಗರದಲ್ಲಿ ಉದ್ಭವವಾದ ಆ ಕಥೆಯನ್ನು ಹೇಳು.”

01053035 ಸೂತ ಉವಾಚ।
01053035a ಹಂತ ತೇ ಕಥಯಿಷ್ಯಾಮಿ ಮಹದಾಖ್ಯಾನಮುತ್ತಮಂ।
01053035c ಕೃಷ್ಣದ್ವೈಪಾಯನಮತಂ ಮಹಾಭಾರತಮಾದಿತಃ।।

ಸೂತನು ಹೇಳಿದನು: “ಈಗ ನಾನು ಕೃಷ್ಣದ್ವೈಪಾಯನ ವಿರಚಿತ ಉತ್ತಮ ಮಹದಾಖ್ಯಾನ ಮಹಾಭಾರತವನ್ನು ಪ್ರಾರಂಭದಿಂದ ಹೇಳುತ್ತೇನೆ.

01053036a ತಜ್ಜುಷಸ್ವೋತ್ತಮಮತೇ ಕಥ್ಯಮಾನಂ ಮಯಾ ದ್ವಿಜ।
01053036c ಶಂಸಿತುಂ ತನ್ಮನೋಹರ್ಷೋ ಮಮಾಪೀಹ ಪ್ರವರ್ತತೇ।।

ದ್ವಿಜ! ನಾನು ಹೇಳುತ್ತಿರುವ ಈ ಉತ್ತಮ ಕಥೆಯನ್ನು ಸ್ವಾದಿಸು. ಅದನ್ನು ಹೇಳಲು ನನ್ನ ಮನಸ್ಸೂ ಕೂಡ ಹರ್ಷಗೊಂಡಿದೆ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಆಸ್ತೀಕಪರ್ವಣಿ ಕಥಾನುಬಂಧೇ ತ್ರಿಪಂಚಾಶತ್ತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಆಸ್ತೀಕಪರ್ವದಲ್ಲಿ ಕಥಾನುಬಂಧದಲ್ಲಿ ಐವತ್ಮೂರನೆಯ ಅಧ್ಯಾಯವು. ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಆಸ್ತೀಕಪರ್ವಃ।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಆಸ್ತೀಕಪರ್ವವು. ಇದೂವರೆಗಿನ ಒಟ್ಟು ಮಹಾಪರ್ವಗಳು-0/18, ಉಪಪರ್ವಗಳು-5/100, ಅಧ್ಯಾಯಗಳು-53, ಶ್ಲೋಕಗಳು-1823


  1. ನೀಲಕಂಠೀಯದಲ್ಲಿ ಇದರ ಮೊದಲು ಈ ಅಧಿಕ ಶ್ಲೋಕವಿದೆ: ದತ್ವಾ ದ್ರವ್ಯಂ ಯಥಾನ್ಯಾಯಂ ಭೋಜನಾಚ್ಛಾದನಾನ್ವಿತಮ್। ಪ್ರೀತಸ್ತಸ್ಮೈ ನರಪತಿರಪ್ರಮೇಯಪರಾಕ್ರಮಃ।। ↩︎

  2. ಯೋ ಜರತ್ಕಾರುಣಾ ಜಾತೋ ಜರತ್ಕಾರೌ ಮಹಾಯಶಾಃ। ಎಂಬ ಪಾಠಾಂತರವಿದೆ (ನೀಲಕಂಠ). ↩︎

  3. ಆಸ್ತೀಕಃ ಸರ್ಪಸತ್ರೇ ವಃ ಪನ್ನಗಾನ್ಯೋಽಭ್ಯರಕ್ಷತ। ಎಂಬ ಪಾಠಾಂತರವಿದೆ (ನೀಲಕಂಠ). ↩︎

  4. ತಂ ಸ್ಮರಂತಂ ಮಹಾಭಾಗಾ ನ ಮಾಂ ಹಿಂಸಿತುಮರ್ಹಥ। ಎಂಬ ಪಾಠಾಂತರವಿದೆ (ನೀಲಕಂಠ). ↩︎

  5. ನೀಲಕಂಠೀಯದಲ್ಲಿ ಇದಕ್ಕೆ ಬದಲಾಗಿ ಈ ಅಧಿಕ ಶ್ಲೋಕಗಳಿವೆ: ಸರ್ಪಾಪಸರ್ಪ ಭದ್ರಂ ತೇ ಗಚ್ಛ ಸರ್ಪ ಮಹಾವಿಷ। ಜನಮೇಜಯಸ್ಯ ಯಜ್ಞಾಂತೇ ಆಸ್ತೀಕವಚನಂ ಸ್ಮರ।। ಆಸ್ತೀಕಸ್ಯ ವಚಃ ಶೃತ್ವಾ ಯಃ ಸರ್ಪೋ ನ ನಿವರ್ತತೇ। ಶತಧಾ ಭಿದ್ಯತೇ ಮೂರ್ಧ್ನಿ ಶಿಂಶವೃಕ್ಷಫಲಂ ಯಥಾ।। ಸೌತಿರುವಾಚ। ಸ ಏವಮುಕ್ತಸ್ತು ತದಾ ದ್ವಿಜೇಂದ್ರಃ ಸಮಾಗತೈಸ್ತೈರ್ಭುಜಗೇಂದ್ರಮುಖ್ಯೈ। ಸಂಪ್ರಾಪ್ಯ ಪ್ರೀತಿಂ ವಿಪುಲಾಂ ಮಹಾತ್ಮಾ ತತೋ ಮನೋ ಗಮನಾಯಾಥ ದಧ್ನೇ।। ↩︎

  6. ಇದಕ್ಕೆ ಮೊದಲು ನೀಲಕಂಠೀಯದಲ್ಲಿ ಈ ಅಧಿಕ ಶ್ಲೋಕಗಳಿವೆ: ಯಥಾ ಕಥಿತವಾನ್ ಬ್ರಹ್ಮನ್ ಪ್ರಮತಿಃ ಪೂರ್ವಜಸ್ತವ। ಪುತ್ರಾಯ ರುರವೇ ಪ್ರೀತಃ ಪೃಚ್ಛತೇ ಭಾರ್ಗವೋತ್ತಮ।। ಯದ್ವಾಕ್ಯಂ ಶೃತವಾಂಶ್ಚಾಹಂ ತಥಾ ಚ ಕಥಿತಂ ಮಯಾ। ↩︎