051 ಆಸ್ತೀಕವರಪ್ರದಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಆಸ್ತೀಕ ಪರ್ವ

ಅಧ್ಯಾಯ 51

ಸಾರ ತಕ್ಷಕನು ಬರುವವರೆಗೆ ವರವನ್ನು ನೀಡಬಾರದೆಂದು ಪುರೋಹಿತರು ಸೂಚಿಸುವುದು (1-5). ಇಂದ್ರನಿಂದ ತಕ್ಷಕನು ಜಾರಿ ಬೀಳುವುದು (6-10). ಆಸ್ತೀಕನು ವರವನು ವರವನ್ನು ಕೇಳುವುದು, ಜನಮೇಜಯನು ಬೇರೆ ವರವನ್ನು ಕೇಳಲು ಹೇಳುವುದು (11-25).

01051001 ಜನಮೇಜಯ ಉವಾಚ।
01051001a ಬಾಲೋ ವಾಕ್ಯಂ ಸ್ಥವಿರ ಇವ ಪ್ರಭಾಷತೇ ನಾಯಂ ಬಾಲಃ ಸ್ಥವಿರೋಽಯಂ ಮತೋ ಮೇ।
01051001c ಇಚ್ಛಾಮ್ಯಹಂ ವರಮಸ್ಮೈ ಪ್ರದಾತುಂ ತನ್ಮೇ ವಿಪ್ರಾ ವಿತರಧ್ವಂ ಸಮೇತಾಃ।।

ಜನಮೇಜಯನು ಹೇಳಿದನು: “ಬಾಲಕನಾಗಿದ್ದರೂ ಅವನು ಹಿರಿಯವರಂತೆ ಮಾತನಾಡುತ್ತಿದ್ದಾನೆ. ನನ್ನ ಮತದಲ್ಲಿ ಇವನು ಬಾಲಕನಲ್ಲ. ಇವನೋರ್ವ ಸ್ಥಾವಿರ. ಇವನಿಗೆ ಒಂದು ವರವನ್ನು ಕೊಡಲು ಬಯಸುತ್ತೇನೆ. ವಿಪ್ರರೇ! ನನಗೆ ನಿಮ್ಮ ಸಮ್ಮತಿಯನ್ನು ನೀಡಿ.”

01051002 ಸದಸ್ಯಾ ಊಚುಃ।
01051002a ಬಾಲೋಽಪಿ ವಿಪ್ರೋ ಮಾನ್ಯ ಏವೇಹ ರಾಜ್ಞಾಂ ಯಶ್ಚಾವಿದ್ವಾನ್ಯಶ್ಚ ವಿದ್ವಾನ್ಯಥಾವತ್।
01051002c ಸರ್ವಾನ್ಕಾಮಾಂಸ್ತ್ವತ್ತ ಏಷೋಽರ್ಹತೇಽದ್ಯ ಯಥಾ ಚ ನಸ್ತಕ್ಷಕ ಏತಿ ಶೀಘ್ರಂ।।

ಸದಸ್ಯರು ಹೇಳಿದರು: “ಬಾಲಕನಾಗಿದ್ದರೂ ವಿಪ್ರನು ರಾಜನ ಮಾನ್ಯತೆಗೆ ಅರ್ಹನು. ವಿದ್ವಾಂಸನಾಗಿದ್ದರೆ ಇನ್ನೂ ಹೆಚ್ಚು. ಅವನ ಎಲ್ಲ ಬಯಕೆಗಳೂ ಪೂರೈಸಲು ಅರ್ಹವೇ ಸರಿ. ಆದರೆ ತಕ್ಷಕನು ಇಲ್ಲಿಗೆ ಬಂದ ಕೂಡಲೇ.””

01051003 ಸೂತ ಉವಾಚ।
01051003a ವ್ಯಾಹರ್ತುಕಾಮೇ ವರದೇ ನೃಪೇ ದ್ವಿಜಂ ವರಂ ವೃಣೀಷ್ವೇತಿ ತತೋಽಭ್ಯುವಾಚ।
01051003c ಹೋತಾ ವಾಕ್ಯಂ ನಾತಿಹೃಷ್ಟಾಂತರಾತ್ಮಾ ಕರ್ಮಣ್ಯಸ್ಮಿಂಸ್ತಕ್ಷಕೋ ನೈತಿ ತಾವತ್।।

ಸೂತನು ಹೇಳಿದನು: “ಆ ದ್ವಿಜನಿಗೆ ವರವನ್ನು ನೀಡಲು ಬಯಸಿದ ರಾಜನು “ವರವನ್ನು ಕೇಳು” ಎಂದಾಗ ಹೋತನು ಅಸಂತೋಷದಿಂದ “ತಕ್ಷಕನು ಇನ್ನೂ ಯಜ್ಞಕುಂಡಕ್ಕೆ ಬಂದಿಲ್ಲ” ಎಂದನು.

01051004 ಜನಮೇಜಯ ಉವಾಚ।
01051004a ಯಥಾ ಚೇದಂ ಕರ್ಮ ಸಮಾಪ್ಯತೇ ಮೇ ಯಥಾ ಚ ನಸ್ತಕ್ಷಕ ಏತಿ ಶೀಘ್ರಂ।
01051004c ತಥಾ ಭವಂತಃ ಪ್ರಯತಂತು ಸರ್ವೇ ಪರಂ ಶಕ್ತ್ಯಾ ಸ ಹಿ ಮೇ ವಿದ್ವಿಷಾಣಃ।।

ಜನಮೇಜಯನು ಹೇಳಿದನು: “ತಕ್ಷಕನು ಶೀಘ್ರವಾಗಿ ಬಂದು ನನ್ನ ಈ ಕರ್ಮವು ಸಮಾಪ್ತಿಯಾಗುವಂತೆ ಪ್ರಯತ್ನಿಸು. ನಿನ್ನ ಎಲ್ಲ ಶಕ್ತಿಯನ್ನೂ ಸೇರಿಸಿ ನನ್ನ ಆ ಶತ್ರುವು ತಡಮಾಡದೇ ಇಲ್ಲಿಗೆ ಬರುವ ಹಾಗೆ ಮಾಡು.”

01051005 ಋತ್ವಿಜ ಊಚುಃ।
01051005a ಯಥಾ ಶಾಸ್ತ್ರಾಣಿ ನಃ ಪ್ರಾಹುರ್ಯಥಾ ಶಂಸತಿ ಪಾವಕಃ।
01051005c ಇಂದ್ರಸ್ಯ ಭವನೇ ರಾಜಂಸ್ತಕ್ಷಕೋ ಭಯಪೀಡಿತಃ।।

ಋತ್ವಿಜರು ಹೇಳಿದರು: “ಭಯಪೀಡಿತ ರಾಜ ತಕ್ಷಕನು ಇಂದ್ರನ ಭವನದಲ್ಲಿದ್ದಾನೆ ಎಂದು ಶಾಸ್ತ್ರಗಳು ಹೇಳುತ್ತಿವೆ ಮತ್ತು ಪಾವಕನು ತೋರಿಸುತ್ತಿದ್ದಾನೆ.””

01051006 ಸೂತ ಉವಾಚ।
01051006a ಯಥಾ ಸೂತೋ ಲೋಹಿತಾಕ್ಷೋ ಮಹಾತ್ಮಾ ಪೌರಾಣಿಕೋ ವೇದಿತವಾನ್ಪುರಸ್ತಾತ್।
01051006c ಸ ರಾಜಾನಂ ಪ್ರಾಹ ಪೃಷ್ಟಸ್ತದಾನೀಂ ಯಥಾಹುರ್ವಿಪ್ರಾಸ್ತದ್ವದೇತನ್ನೃದೇವ।।

ಸೂತನು ಹೇಳಿದನು: “ರಾಜನು ಈ ರೀತಿ ಹೇಳಿದಾಗ ಎಲ್ಲವನ್ನೂ ಮೊದಲೇ ತಿಳಿದಿದ್ದ ಪೌರಾಣಿಕ ಮಹಾತ್ಮ ಸೂತ ಲೋಹಿತಾಕ್ಷನು ಹೇಳಿದನು: “ದೇವ! ವಿಪ್ರನು ಹೇಳಿದ್ದುದು ಸರಿ.

01051007a ಪುರಾಣಮಾಗಮ್ಯ ತತೋ ಬ್ರವೀಮ್ಯಹಂ ದತ್ತಂ ತಸ್ಮೈ ವರಮಿಂದ್ರೇಣ ರಾಜನ್।
01051007c ವಸೇಹ ತ್ವಂ ಮತ್ಸಕಾಶೇ ಸುಗುಪ್ತೋ ನ ಪಾವಕಸ್ತ್ವಾಂ ಪ್ರದಹಿಷ್ಯತೀತಿ।।

ಪುರಾಣಗಳನ್ನು ಅಧ್ಯಯನ ಮಾಡಿದ್ದೇನಾದುದರಿಂದ ರಾಜ! ನಾನು ನಿನಗೆ ಹೇಳುತ್ತಿದ್ದೇನೆ. ಇಂದ್ರನು “ನನ್ನ ಪಕ್ಕದಲ್ಲಿಯೇ ನೀನು ಅಡಗಿ ವಾಸಿಸು. ಇಲ್ಲಿ ಅಗ್ನಿಯು ನಿನ್ನನ್ನು ಸುಡುವುದಿಲ್ಲ” ಎಂದು ಅವನಿಗೆ ಒಂದು ವರವನ್ನು ಕೊಟ್ಟಿದ್ದಾನೆ.”

01051008a ಏತಚ್ಛ್ರುತ್ವಾ ದೀಕ್ಷಿತಸ್ತಪ್ಯಮಾನ ಆಸ್ತೇ ಹೋತಾರಂ ಚೋದಯನ್ಕರ್ಮಕಾಲೇ।
01051008c ಹೋತಾ ಚ ಯತ್ತಃ ಸ ಜುಹಾವ ಮಂತ್ರೈರ್ ಅಥೋ ಇಂದ್ರಃ ಸ್ವಯಮೇವಾಜಗಾಮ।।

ಇದನ್ನು ಕೇಳಿದ ದೀಕ್ಷಿತನು ಉರಿದೆದ್ದು ಅಲ್ಲಿರುವ ಹೋತಾರನನ್ನು ಆ ಕಾಲಕ್ಕೆ ತಕ್ಕ ಕರ್ಮಗಳನ್ನು ಮಾಡಲು ಚೋದಿಸಿದನು. ಹೋತಾರನು ಮಂತ್ರಗಳನ್ನು ಉಚ್ಛರಿಸುತ್ತಾ ಹವಿಸ್ಸನ್ನು ಹಾಕಿದಾಗ ಸ್ವಯಂ ಇಂದ್ರನೇ ಅಲ್ಲಿಗೆ ಬಂದನು.

01051009a ವಿಮಾನಮಾರುಹ್ಯ ಮಹಾನುಭಾವಃ ಸರ್ವೈರ್ದೇವೈಃ ಪರಿಸಂಸ್ತೂಯಮಾನಃ।
01051009c ಬಲಾಹಕೈಶ್ಚಾಪ್ಯನುಗಮ್ಯಮಾನೋ ವಿದ್ಯಾಧರೈರಪ್ಸರಸಾಂ ಗಣೈಶ್ಚ।।

ವಿಮಾನಾರೂಢನಾಗಿದ್ದ ಆ ಮಹಾನುಭಾವನನ್ನು ಸರ್ವದೇವತೆಗಳೂ ಸುತ್ತುವರೆದಿದ್ದರು; ಮಹತ್ತರ ಮೋಡಗಳು ಹಿಂಬಾಲಿಸುತ್ತಿದ್ದವು; ವಿದ್ಯಾಧರ-ಅಪ್ಸರ ಗಣಗಳು ಜೊತೆಗೂಡಿದ್ದವು.

01051010a ತಸ್ಯೋತ್ತರೀಯೇ ನಿಹಿತಃ ಸ ನಾಗೋ ಭಯೋದ್ವಿಗ್ನಃ ಶರ್ಮ ನೈವಾಭ್ಯಗಚ್ಛತ್।
01051010c ತತೋ ರಾಜಾ ಮಂತ್ರವಿದೋಽಬ್ರವೀತ್ಪುನಃ ಕ್ರುದ್ಧೋ ವಾಕ್ಯಂ ತಕ್ಷಕಸ್ಯಾಂತಮಿಚ್ಛನ್।।

ಅವನ ಉತ್ತರೀಯದಲ್ಲಿ ಬೇರೆಲ್ಲೂ ಹೋಗಲು ಸ್ಥಳವಿಲ್ಲದೇ ಭಯೋದ್ವಿಗ್ನ ನಾಗನು ಅಡಗಿದ್ದನು. ಆಗ ತಕ್ಷಕನ ಅಂತ್ಯವನ್ನು ಇಚ್ಛಿಸುತ್ತಿದ್ದ ರಾಜನು ಪುನಃ ಮಂತ್ರವಿದರಲ್ಲಿ ಈ ಕೋಪದ ಮಾತುಗಳನ್ನಾಡಿದನು:

01051011a ಇಂದ್ರಸ್ಯ ಭವನೇ ವಿಪ್ರಾ ಯದಿ ನಾಗಃ ಸ ತಕ್ಷಕಃ।
01051011c ತಮಿಂದ್ರೇಣೈವ ಸಹಿತಂ ಪಾತಯಧ್ವಂ ವಿಭಾವಸೌ।।

“ವಿಪ್ರರೇ! ನಾಗ ತಕ್ಷಕನು ಇಂದ್ರನ ಭವನದಲ್ಲಿದ್ದರೆ ಇಂದ್ರನ ಸಮೇತ ಅವನನ್ನು ಅಗ್ನಿಯಲ್ಲಿ ಬೀಳಿಸಿರಿ.”

01051012 1‍ಋತ್ವಿಜ ಊಚುಃ।
01051012a ಅಯಮಾಯಾತಿ ವೈ ತೂರ್ಣಂ ತಕ್ಷಕಸ್ತೇ ವಶಂ ನೃಪ।

01051012c ಶ್ರೂಯತೇಽಸ್ಯ ಮಹಾನ್ನಾದೋ ರುವತೋ ಭೈರವಂ ಭಯಾತ್।।
ಋತ್ವಿಜರು ಹೇಳಿದರು: “ರಾಜ! ತಕ್ಷಕನು ನಮ್ಮ ವಶದಲ್ಲಿ ಬಂದಂತೆ ತೋರುತ್ತಿದೆ. ಭಯದಿಂದ ಕೂಗುತ್ತಿರುವ ಅವನ ಭೈರವ ಮಹಾನಾದವು ಕೇಳಿಬರುತ್ತಿದೆ.

01051013a ನೂನಂ ಮುಕ್ತೋ ವಜ್ರಭೃತಾ ಸ ನಾಗೋ ಭ್ರಷ್ಟಷ್ಚಾಂಕಾನ್ಮಂತ್ರವಿಸ್ರಸ್ತಕಾಯಃ2
01051013c ಘೂರ್ಣನ್ನಾಕಾಶೇ ನಷ್ಟಸಂಜ್ಞೋಽಭ್ಯುಪೈತಿ ತೀವ್ರಾನ್ನಿಃಶ್ವಾಸಾನ್ನಿಃಶ್ವಸನ್ಪನ್ನಗೇಂದ್ರಃ।।

ವಜ್ರಧಾರಿಯು ಆ ನಾಗನನ್ನು ಬಿಟ್ಟುಹಾಕಿದ್ದಾನೆ. ಮಂತ್ರಪ್ರಭಾವದಿಂದ ಅವನು ಶಂಕಭ್ರಷ್ಟನೂ ವಿಸ್ರಸ್ತಕಾಯನೂ ಆಗಿದ್ದಾನೆ. ಮೂರ್ಛೆಹೋಗಿ, ತೀವ್ರ ನಿಟ್ಟಿಸುರುಗಳನ್ನು ಬಿಡುತ್ತಾ ಪನ್ನಗೇಂದ್ರನು ಆಕಾಶದಲ್ಲಿ ಮೂರ್ಛೆತಪ್ಪಿ ಬರುತ್ತಿದ್ದಾನೆ.

01051014a ವರ್ತತೇ ತವ ರಾಜೇಂದ್ರ ಕರ್ಮೈತದ್ವಿಧಿವತ್ಪ್ರಭೋ।
01051014c ಅಸ್ಮೈ ತು ದ್ವಿಜಮುಖ್ಯಾಯ ವರಂ ತ್ವಂ ದಾತುಮರ್ಹಸಿ।।

ರಾಜೇಂದ್ರ! ನಿನ್ನ ಈ ಕರ್ಮವು ವಿಧಿವತ್ತಾಗಿ ಕೊನೆಗೊಳ್ಳುತ್ತಿದೆ. ಇನ್ನು ನೀನು ಆ ದ್ವಿಜಮುಖ್ಯನಿಗೆ ವರವನ್ನು ನೀಡಬಹುದು.”

01051015 ಜನಮೇಜಯ ಉವಾಚ 01051015a ಬಾಲಾಭಿರೂಪಸ್ಯ ತವಾಪ್ರಮೇಯ ವರಂ ಪ್ರಯಚ್ಛಾಮಿ ಯಥಾನುರೂಪಂ।
01051015c ವೃಣೀಷ್ವ ಯತ್ತೇಽಭಿಮತಂ ಹೃದಿ ಸ್ಥಿತಂ ತತ್ತೇ ಪ್ರದಾಸ್ಯಾಮ್ಯಪಿ ಚೇದದೇಯಂ।।

ಜನಮೇಜಯನು ಹೇಳಿದನು: “ಬಾಲಕರೂಪಿ ಶ್ರೇಷ್ಠ! ಅಪ್ರಮೇಯ! ನಿನಗೆ ಅನುರೂಪ ವರವೊಂದನ್ನು ನೀಡಲು ಬಯಸುತ್ತೇನೆ. ನಿನ್ನ ಹೃದಯದಲ್ಲಿ ನೆಲೆಸಿರುವ ಅಭಿಮತವೇನಿದ್ದರೂ ಕೇಳು. ಅದೇಯವಾಗಿದ್ದರೂ ನಾನು ಅದನ್ನು ನಿನಗೆ ಪ್ರದಾನಿಸುತ್ತೇನೆ.””

01051016 ಸೂತ ಉವಾಚ।
01051016a ಪತಿಷ್ಯಮಾಣೇ ನಾಗೇಂದ್ರೇ ತಕ್ಷಕೇ ಜಾತವೇದಸಿ।
01051016c ಇದಮಂತರಮಿತ್ಯೇವಂ ತದಾಸ್ತೀಕೋಽಭ್ಯಚೋದಯತ್।।

ಸೂತನು ಹೇಳಿದನು: “ನಾಗೇಂದ್ರ ತಕ್ಷಕನು ಇನ್ನೇನು ಅಗ್ನಿಯಲ್ಲಿ ಬೀಳುತ್ತಿದ್ದಾನೆ ಎನ್ನುವಾಗ, ಆ ಒಂದು ಅಂತರದಲ್ಲಿಯೇ ಆಸ್ತೀಕನು ಹೇಳಿದನು:

01051017a ವರಂ ದದಾಸಿ ಚೇನ್ಮಹ್ಯಂ ವೃಣೋಮಿ ಜನಮೇಜಯ।
01051017c ಸತ್ರಂ ತೇ ವಿರಮತ್ವೇತನ್ನ ಪತೇಯುರಿಹೋರಗಾಃ।।

“ಜನಮೇಜಯ! ನನಗೆ ವರವನ್ನು ಕೊಡಲು ಬಯಸುವೆಯಾದರೆ ಈ ಸತ್ರವನ್ನು ನಿಲ್ಲಿಸು ಮತ್ತು ಇನ್ನು ಯಾವ ನಾಗಗಳೂ ಈ ಅಗ್ನಿಯಲ್ಲಿ ಬೀಳದಿರಲಿ.”

01051018a ಏವಮುಕ್ತಸ್ತತೋ ರಾಜಾ ಬ್ರಹ್ಮನ್ಪಾರಿಕ್ಷಿತಸ್ತದಾ।
01051018c ನಾತಿಹೃಷ್ಟಮನಾ ವಾಕ್ಯಮಾಸ್ತೀಕಮಿದಮಬ್ರವೀತ್।।

ಬ್ರಾಹ್ಮಣ! ಈ ಮಾತುಗಳನ್ನು ಕೇಳಿದ ರಾಜ ಪಾರಿಕ್ಷಿತನು ಸ್ವಲ್ಪವೂ ಸಂತಸಗೊಳ್ಳದೇ ಆಸ್ತೀಕನಿಗೆ ಹೇಳಿದನು:

01051019a ಸುವರ್ಣಂ ರಜತಂ ಗಾಶ್ಚ ಯಚ್ಚಾನ್ಯನ್ಮನ್ಯಸೇ ವಿಭೋ।
01051019c ತತ್ತೇ ದದ್ಯಾಂ ವರಂ ವಿಪ್ರ ನ ನಿವರ್ತೇತ್ಕ್ರತುರ್ಮಮ।।

“ವಿಭೋ! ವಿಪ್ರ! ಸುವರ್ಣ, ರಜತ, ಗೋವುಗಳು, ಅಥವಾ ಇನ್ನೇನನ್ನಾದರೂ ನಿನಗಿಷ್ಟವಾದದ್ದನ್ನು ಕೇಳು. ಈ ಕ್ರತುವನ್ನು ನಿಲ್ಲಿಸಬೇಡ!”

01051020 ಆಸ್ತೀಕ ಉವಾಚ।
01051020a ಸುವರ್ಣಂ ರಜತಂ ಗಾಶ್ಚ ನ ತ್ವಾಂ ರಾಜನ್ವೃಣೋಮ್ಯಹಂ।
01051020c ಸತ್ರಂ ತೇ ವಿರಮತ್ವೇತತ್ಸ್ವಸ್ತಿ ಮಾತೃಕುಲಸ್ಯ ನಃ।।

ಆಸ್ತೀಕನು ಹೇಳಿದನು: “ರಾಜನ್! ಸುವರ್ಣ, ರಜತ ಅಥವಾ ಗೋವುಗಳು ಇವ್ಯಾವುವೂ ನನಗೆ ಬೇಡ. ನಿನ್ನ ಈ ಸತ್ರವನ್ನು ನಿಲ್ಲಿಸಿ ನನ್ನ ಮಾತೃಕುಲಕ್ಕೆ ಮಂಗಳವನ್ನುಂಟುಮಾಡು.””

01051021 ಸೂತ ಉವಾಚ।
01051021a ಆಸ್ತೀಕೇನೈವಮುಕ್ತಸ್ತು ರಾಜಾ ಪಾರಿಕ್ಷಿತಸ್ತದಾ।
01051021c ಪುನಃ ಪುನರುವಾಚೇದಮಾಸ್ತೀಕಂ ವದತಾಂ ವರಂ।।

ಸೂತನು ಹೇಳಿದನು: “ಆಸ್ತೀಕನು ಹೀಗೆ ಹೇಳಲು ರಾಜ ಪಾರಿಕ್ಷಿತನು ಪುನಃ ಪುನಃ ಮಾತುಗಾರರಲ್ಲಿ ಶ್ರೇಷ್ಠ ಆಸ್ತೀಕನಲ್ಲಿ ಕೇಳಿಕೊಂಡನು.

01051022a ಅನ್ಯಂ ವರಯ ಭದ್ರಂ ತೇ ವರಂ ದ್ವಿಜವರೋತ್ತಮ।
01051022c ಅಯಾಚತ ನ ಚಾಪ್ಯನ್ಯಂ ವರಂ ಸ ಭೃಗುನಂದನ।।

“ದ್ವಿಜವರೋತ್ತಮ! ಅನ್ಯ ಯಾವುದಾದರೂ ಒಳ್ಳೆಯ ವರವನ್ನು ಕೇಳಿಕೋ!” ಭೃಗುನಂದನ! ಆದರೆ ಅವನು ಬೇರೆ ಯಾವ ವರವನ್ನೂ ಕೇಳಲಿಲ್ಲ.

01051023a ತತೋ ವೇದವಿದಸ್ತತ್ರ ಸದಸ್ಯಾಃ ಸರ್ವ ಏವ ತಂ।
01051023c ರಾಜಾನಮೂಚುಃ ಸಹಿತಾ ಲಭತಾಂ ಬ್ರಾಹ್ಮಣೋ ವರಂ।।

ಆಗ ಅಲ್ಲಿರುವ ಎಲ್ಲ ವೇದವಿದಿತ ಸದಸ್ಯರೂ ಸೇರಿ “ಬ್ರಾಹ್ಮಣನಿಗೆ ವರವನ್ನು ನೀಡು!” ಎಂದು ಕೇಳಿಕೊಂಡರು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಆಸ್ತೀಕಪರ್ವಣಿ ಆಸ್ತೀಕವರಪ್ರದಾನೇ ಏಕಪಂಚಾಶತ್ತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಆಸ್ತೀಕಪರ್ವದಲ್ಲಿ ಆಸ್ತೀಕವರಪ್ರದಾನದಲ್ಲಿ ಐವತ್ತೊಂದನೆಯ ಅಧ್ಯಾಯವು.


  1. ಇದಕ್ಕೆ ಮೊದಲು ನೀಲಕಂಠೀಯದಲ್ಲಿ ಈ ಅಧಿಕ ಶ್ಲೋಕಗಳಿವೆ: ಸೌತಿರುವಾಚ: ಜನಮೇಜಯೇನ ರಾಜ್ಞಾ ತು ನೋದಿತಸ್ತಕ್ಷಕಂ ಪ್ರತಿ। ಹೋತಾ ಜುಹಾವ ತತ್ರಸ್ಥಂ ತಕ್ಷಕಂ ಪನ್ನಗಂ ತಥಾ।। ಹೂಯಮಾನೋ ತಥಾ ಚೈವ ತಕ್ಷಕಃ ಸಪುರಂದರಃ। ಆಕಾಶೇ ದದೃಶೇ ಚೈವ ಕ್ಷಣೇನ ವ್ಯಥಿತಸ್ತದಾ।। ಪುರಂದರಸ್ತು ತಂ ಯಜ್ಞಂ ದೃಷ್ವೋರುಭಯಮಾವಿಶತ್। ಹಿತ್ವಾ ತು ತಕ್ಷಕಂ ತ್ರಸ್ತಃ ಸ್ವಮೇವ ಭವನಂ ಯಯೌ।। ಇಂದ್ರೇ ಗತೇ ತು ನಾಗೇಂದ್ರಸ್ತಕ್ಷಕೋ ಭಯಮೋಹಿತಃ। ಮಂತ್ರಶಕ್ತ್ಯಾ ಪಾವಕಾರ್ಚಿಃ ಸಮೀಪಮವಶೋ ಗತಃ।। ಅರ್ಥಾತ್: ತಕ್ಷಕನ ಕುರಿತಾಗಿ ರಾಜಾ ಜನಮೇಜಯನು ಹಾಗನ್ನಲು ಹೋತನು ಪನ್ನಗ ತಕ್ಷಕನನ್ನು ಆಹ್ವಾನಿಸಿ ಅವನ ಹೆಸರಿನಲ್ಲಿ ಆಹುತಿಯನ್ನಿತ್ತನು. ಹಾಗೆ ಆಹುತಿಯನ್ನಿತ್ತ ಕೂಡಲೇ ಆಕಾಶದಲ್ಲಿ ಇಂದ್ರನ ಸಹಿತ ತಕ್ಷಕನು ಕಾಣಿಸಿಕೊಂಡನು. ಆಗ ಅವನು ವ್ಯಥಿತನಾಗಿದ್ದನು. ಆ ಯಜ್ಞವನ್ನು ನೋಡಿದ ಪುರಂದರನನ್ನಾದರೋ ಭಯವು ಆವರಿಸಿತು. ನಡುಗುತ್ತಾ ತಕ್ಷಕನನ್ನು ಅಲ್ಲಿಯೇ ಬಿಟ್ಟು ಅವನು ತನ್ನ ಭವನಕ್ಕೇ ಹೊರಟುಹೋದನು. ಇಂದ್ರನು ಹೊರಟುಹೋಗಲು ನಾಗೇಂದ್ರ ತಕ್ಷಕನು ಭಯಮೋಹಿತನಾಗಿ ಮಂತ್ರಶಕ್ತಿಯಿಂದ ಅವಶನಾಗಿ ಪಾವಕನ ಜ್ವಾಲೆಯ ಸಮೀಪ ಬಂದನು. ↩︎

  2. ಭ್ರಷ್ಟೋ ನಾಕಾನ್ಮಂತ್ರವಿಸ್ರಸ್ತಕಾಯಃ ಎಂಬ ಪಾಠಾಂತರವಿದೆ (ನೀಲಕಂಠ). ↩︎