ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಆಸ್ತೀಕ ಪರ್ವ
ಅಧ್ಯಾಯ 50
ಸಾರ
ಆಸ್ತೀಕನು ಜನಮೇಜಯನ ಸರ್ಪಯಾಗವನ್ನು ಹೊಗಳಿದುದು (1-17).01050001 ಆಸ್ತೀಕ ಉವಾಚ।
01050001a ಸೋಮಸ್ಯ ಯಜ್ಞೋ ವರುಣಸ್ಯ ಯಜ್ಞಃ ಪ್ರಜಾಪತೇರ್ಯಜ್ಞ ಆಸೀತ್ಪ್ರಯಾಗೇ।
01050001c ತಥಾ ಯಜ್ಞೋಽಯಂ ತವ ಭಾರತಾಗ್ರ್ಯ ಪಾರಿಕ್ಷಿತ ಸ್ವಸ್ತಿ ನೋಽಸ್ತು ಪ್ರಿಯೇಭ್ಯಃ।।
ಆಸ್ತೀಕನು ಹೇಳಿದನು: “ಭಾರತಾಗ್ರ್ಯ! ಪಾರಿಕ್ಷಿತ! ನಿನ್ನ ಈ ಯಜ್ಞವು ಸೋಮನ ಯಜ್ಞ, ವರುಣನ ಯಜ್ಞ, ಮತ್ತು ಪ್ರಯಾಗದಲ್ಲಿ ಪ್ರಜಾಪತಿಯು ನಡೆಸಿದ ಯಜ್ಞಗಳ ಹಾಗೆಯೇ ಇದೆ. ನಮ್ಮ ಪ್ರಿಯಜನರಿಗೆ ಕಲ್ಯಾಣವಾಗಲಿ!
01050002a ಶಕ್ರಸ್ಯ ಯಜ್ಞಃ ಶತಸಂಖ್ಯ ಉಕ್ತಃ ತಥಾಪರಸ್ತುಲ್ಯಸಂಖ್ಯಃ1 ಶತಂ ವೈ।
01050002c ತಥಾ ಯಜ್ಞೋಽಯಂ ತವ ಭಾರತಾಗ್ರ್ಯ ಪಾರಿಕ್ಷಿತ ಸ್ವಸ್ತಿ ನೋಽಸ್ತು ಪ್ರಿಯೇಭ್ಯಃ।।
ಭಾರತಾಗ್ರ್ಯ! ಪಾರಿಕ್ಷಿತ! ಶಕ್ರನ ಯಜ್ಞಗಳು ನೂರೆಂದು ಹೇಳುತ್ತಾರೆ. ಹಾಗೆಯೇ ಇತರರ ಯಜ್ಞಸಂಖ್ಯೆಯೂ ನೂರೆಂದು ಹೇಳುತ್ತಾರೆ. ನಿನ್ನ ಈ ಯಜ್ಞವು ಆ ಎಲ್ಲ ಯಜ್ಞಗಳಿಗೆ ಸಮಾನವಾಗಿದೆ. ನಮ್ಮ ಪ್ರಿಯಜನರಿಗೆ ಮಂಗಳವಾಗಲಿ!
01050003a ಯಮಸ್ಯ ಯಜ್ಞೋ ಹರಿಮೇಧಸಶ್ಚ ಯಥಾ ಯಜ್ಞೋ ರಂತಿದೇವಸ್ಯ ರಾಜ್ಞಃ।
01050003c ತಥಾ ಯಜ್ಞೋಽಯಂ ತವ ಭಾರತಾಗ್ರ್ಯ ಪಾರಿಕ್ಷಿತ ಸ್ವಸ್ತಿ ನೋಽಸ್ತು ಪ್ರಿಯೇಭ್ಯಃ।।
ಭಾರತಾಗ್ರ್ಯ! ಪಾರಿಕ್ಷಿತ! ನಿನ್ನ ಈ ಯಜ್ಞವು ಯಮನ ಯಜ್ಞ, ಹರಿಮೇಧನ ಯಜ್ಞ, ಮತ್ತು ರಾಜಾ ರಂತಿದೇವನ ಯಜ್ಞಗಳಂತಿದೆ. ನಮ್ಮ ಪ್ರಿಯಜನರಿಗೆ ಕಲ್ಯಾಣವಾಗಲಿ!
01050004a ಗಯಸ್ಯ ಯಜ್ಞಃ ಶಶಬಿಂದೋಶ್ಚ ರಾಜ್ಞೋ ಯಜ್ಞಸ್ತಥಾ ವೈಶ್ರವಣಸ್ಯ ರಾಜ್ಞಃ।
01050004c ತಥಾ ಯಜ್ಞೋಽಯಂ ತವ ಭಾರತಾಗ್ರ್ಯ ಪಾರಿಕ್ಷಿತ ಸ್ವಸ್ತಿ ನೋಽಸ್ತು ಪ್ರಿಯೇಭ್ಯಃ।।
ಭಾರತಾಗ್ರ್ಯ! ಪಾರಿಕ್ಷಿತ! ನಿನ್ನ ಈ ಯಜ್ಞವು ಗಯನ ಯಜ್ಞ, ರಾಜಾ ಶಶಬಿಂದುವಿನ ಯಜ್ಞ, ರಾಜಾ ವೈಶ್ರವಣನ ಯಜ್ಞಗಳಂತಿದೆ. ನಮ್ಮ ಪ್ರಿಯಜನರಿಗೆ ಕಲ್ಯಾಣವಾಗಲಿ!
01050005a ನೃಗಸ್ಯ ಯಜ್ಞಸ್ತ್ವಜಮೀಢಸ್ಯ ಚಾಸೀದ್ಯಥಾ ಯಜ್ಞೋ ದಾಶರಥೇಶ್ಚ ರಾಜ್ಞಃ।
01050005c ತಥಾ ಯಜ್ಞೋಽಯಂ ತವ ಭಾರತಾಗ್ರ್ಯ ಪಾರಿಕ್ಷಿತ ಸ್ವಸ್ತಿ ನೋಽಸ್ತು ಪ್ರಿಯೇಭ್ಯಃ।।
ಭಾರತಾಗ್ರ್ಯ! ಪಾರಿಕ್ಷಿತ! ನಿನ್ನ ಈ ಯಜ್ಞವು ನೃಗನ ಯಜ್ಞ, ಅಜಮೀಢನ ಯಜ್ಞ ಮತ್ತು ರಾಜಾ ದಾಶರಥಿಯ ಯಜ್ಞಗಳಂತಿದೆ. ನಮ್ಮ ಪ್ರಿಯಜನರಿಗೆ ಕಲ್ಯಾಣವಾಗಲಿ!
01050006a ಯಜ್ಞಃ ಶ್ರುತೋ ನೋ ದಿವಿ ದೇವಸೂನೋರ್2 ಯುಧಿಷ್ಠಿರರಸ್ಯಾಜಮೀಢಸ್ಯ ರಾಜ್ಞಃ।
01050006c ತಥಾ ಯಜ್ಞೋಽಯಂ ತವ ಭಾರತಾಗ್ರ್ಯ ಪಾರಿಕ್ಷಿತ ಸ್ವಸ್ತಿ ನೋಽಸ್ತು ಪ್ರಿಯೇಭ್ಯಃ।।
ಭಾರತಾಗ್ರ್ಯ! ಪಾರಿಕ್ಷಿತ! ನಿನ್ನ ಈ ಯಜ್ಞವು ಸ್ವರ್ಗದಲ್ಲಿಯ ದೇವತೆಗಳೂ ಕೇಳಿದ್ದ ಅಜಮೀಢನ ವಂಶಜ ರಾಜಾ ಯುಧಿಷ್ಠಿರನ ಯಜ್ಞದಂತಿದೆ. ನಮ್ಮ ಪ್ರಿಯಜನರಿಗೆ ಮಂಗಳವಾಗಲಿ!
01050007a ಕೃಷ್ಣಸ್ಯ ಯಜ್ಞಃ ಸತ್ಯವತ್ಯಾಃ ಸುತಸ್ಯ ಸ್ವಯಂ ಚ ಕರ್ಮ ಪ್ರಚಕಾರ ಯತ್ರ।
01050007c ತಥಾ ಯಜ್ಞೋಽಯಂ ತವ ಭಾರತಾಗ್ರ್ಯ ಪಾರಿಕ್ಷಿತ ಸ್ವಸ್ತಿ ನೋಽಸ್ತು ಪ್ರಿಯೇಭ್ಯಃ।।
ಭಾರತಾಗ್ರ್ಯ! ಪಾರಿಕ್ಷಿತ! ನಿನ್ನ ಈ ಯಜ್ಞವು ಸ್ವಯಂ ತಾನೇ ಕರ್ಮಚಾರಿಯಾಗಿದ್ದ ಸತ್ಯವತೀಸುತ ಕೃಷ್ಣನ ಯಜ್ಞದಂತಿದೆ. ನಮ್ಮ ಪ್ರಿಯಜನರಿಗೆ ಮಂಗಳವಾಗಲಿ!
01050008a ಇಮೇ ಹಿ ತೇ ಸೂರ್ಯಹುತಾಶವರ್ಚಸಃ ಸಮಾಸತೇ ವೃತ್ರಹಣಃ ಕ್ರತುಂ ಯಥಾ।
01050008c ನೈಷಾಂ ಜ್ಞಾನಂ ವಿದ್ಯತೇ ಜ್ಞಾತುಮದ್ಯ ದತ್ತಂ ಯೇಭ್ಯೋ ನ ಪ್ರಣಶ್ಯೇತ್ಕಥಂ ಚಿತ್।।
ಇಲ್ಲಿ ಸೇರಿರುವ ಋತ್ವಿಜರು ಸೂರ್ಯಾಗ್ನಿ ವರ್ಚಸ್ಸುಳ್ಳವರು ಮತ್ತು ಅವರು ವೃತ್ರಹರ ಇಂದ್ರನ ಕ್ರತುವಿನಂತೆಯೇ ನಿನ್ನ ಈ ಯಜ್ಞವನ್ನು ನಡೆಸುತ್ತಿದ್ದಾರೆ. ಅವರಿಗೆ ತಿಳಿಯದೇ ಇದ್ದ ಜ್ಞಾನವೇ ಇಲ್ಲ. ಅವರಿಗೆ ಕೊಟ್ಟ ಏನೂ ಎಂದೂ ನಿಷ್ಫಲವಾಗುವುದಿಲ್ಲ.
01050009a ಋತ್ವಿಕ್ಸಮೋ ನಾಸ್ತಿ ಲೋಕೇಷು ಚೈವ ದ್ವೈಪಾಯನೇನೇತಿ ವಿನಿಶ್ಚಿತಂ ಮೇ।
01050009c ಏತಸ್ಯ ಶಿಷ್ಯಾ ಹಿ ಕ್ಷಿತಿಂ ಚರಂತಿ ಸರ್ವರ್ತ್ವಿಜಃ ಕರ್ಮಸು ಸ್ವೇಷು ದಕ್ಷಾಃ।।
ದ್ವೈಪಾಯನನ ಸಮಾನ ಋತ್ವಿಜನು ಲೋಕಗಳಲ್ಲೆಲ್ಲೂ ಇಲ್ಲ ಎಂದು ನನ್ನ ನಿಶ್ಚಯ. ಸ್ವಕರ್ಮ ದಕ್ಷರಾದ ಅವನ ಋತ್ವಿಜ ಶಿಷ್ಯರು ಯಜ್ಞಮಾಡಿಸಲು ಇಡೀ ಭೂಮಿಯಲ್ಲಿ ಸಂಚರಿಸುತ್ತಾರೆ.
01050010a ವಿಭಾವಸುಶ್ಚಿತ್ರಭಾನುರ್ಮಹಾತ್ಮಾ ಹಿರಣ್ಯರೇತಾ ವಿಶ್ವಭುಕ್ ಕೃಷ್ಣವರ್ತ್ಮಾ।
01050010c ಪ್ರದಕ್ಷಿಣಾವರ್ತಶಿಖಃ ಪ್ರದೀಪ್ತೋ ಹವ್ಯಂ ತವೇದಂ ಹುತಭುಗ್ವಷ್ಟಿ ದೇವಃ।।
ಮಹಾತ್ಮ ವಿಭಾವಸು ಚಿತ್ರಭಾನು ಹಿರಣ್ಯರೇತ, ವಿಶ್ವಭುಕ್, ಮತ್ತು ಯಾರ ದಾರಿ ಕಪ್ಪಾಗಿದೆಯೋ ಆ ಪ್ರದೀಪ್ತಮಾನ ಅಗ್ನಿ ದೇವನು ದಕ್ಷಿಣಾವರ್ತ ಶಿಖೆಯಿಂದ ಪ್ರಜ್ವಲಗೊಂಡು ನಿನ್ನ ಆಹುತಿಯನ್ನು ಭಕ್ಷಿಸಲು ಕಾತರಿಸಿದ್ದಾನೆ.
01050011a ನೇಹ ತ್ವದನ್ಯೋ ವಿದ್ಯತೇ ಜೀವಲೋಕೇ ಸಮೋ ನೃಪಃ ಪಾಲಯಿತಾ ಪ್ರಜಾನಾಂ।
01050011c ಧೃತ್ಯಾ ಚ ತೇ ಪ್ರೀತಮನಾಃ ಸದಾಹಂ ತ್ವಂ ವಾ ರಾಜಾ3 ಧರ್ಮರಾಜೋ ಯಮೋ ವಾ।।
ಈ ಜೀವಲೋಕದಲ್ಲಿ ಪ್ರಜೆಗಳನ್ನು ಪಾಲಿಸುವ ನಿನ್ನ ಸಮನಾದ ಇನ್ನೊಬ್ಬ ನೃಪನಿಲ್ಲ. ರಾಜ! ನಿನ್ನ ಧೈರ್ಯದಿಂದ ನನ್ನ ಮನಸ್ಸು ಸದಾ ಪ್ರಸನ್ನವಾಗಿರುತ್ತದೆ. ನೀನು ಸಾಕ್ಷಾತ್ ಧರ್ಮರಾಜ ಅಥವಾ ಯಮನಂತೆ ಪ್ರಭಾವಶಾಲಿಯು.
01050012a ಶಕ್ರಃ ಸಾಕ್ಷಾದ್ವಜ್ರಪಾಣಿರ್ಯಥೇಹ ತ್ರಾತಾ ಲೋಕೇಽಸ್ಮಿಂಸ್ತ್ವಂ ತಥೇಹ ಪ್ರಜಾನಾಂ।
01050012c ಮತಸ್ತ್ವಂ ನಃ ಪುರುಷೇಂದ್ರೇಹ ಲೋಕೇ ನ ಚ ತ್ವದನ್ಯೋ ಗೃಹಪತಿರಸ್ತಿ ಯಜ್ಞೇ4।।
ನೀನು ಲೋಕದ ಎಲ್ಲ ಪ್ರಜೆಗಳನ್ನು ಪಾಲಿಸುವ ಸಾಕ್ಷಾತ್ ವಜ್ರಪಾಣಿ ಶಕ್ರನಂತಿದ್ದೀಯೆ. ನಿನ್ನಂತಹ ಪುರುಷೇಂದ್ರನು ಈ ಲೋಕದಲ್ಲಿ ಇನ್ನೊಬ್ಬನಿಲ್ಲ, ಹಾಗೆಯೇ ನಿನ್ನಂತಹ ಯಜ್ಞ ಗೃಹಪತಿಯು ಇನ್ನೊಬ್ಬನ್ನಿಲ್ಲ.
01050013a ಖಟ್ವಾಂಗನಾಭಾಗದಿಲೀಪಕಲ್ಪೋ ಯಯಾತಿಮಾಂಧಾತೃಸಮಪ್ರಭಾವಃ 01050013c ಆದಿತ್ಯತೇಜಃಪ್ರತಿಮಾನತೇಜಾ ಭೀಷ್ಮೋ ಯಥಾ ಭ್ರಾಜಸಿ ಸುವ್ರತಸ್ತ್ವಂ।।
ನೀನು ಖಟ್ವಾಂಗ, ನಾಭಾಗ ಅಥವಾ ದಿಲೀಪನಂತಿರುವೆ. ಪ್ರಭಾವದಲ್ಲಿ ಯಯಾತಿ ಮತ್ತು ಮಾಂಧಾತರ ಸಮಾನನಾಗಿರುವೆ. ನಿನ್ನ ತೇಜಸ್ಸು ಆದಿತ್ಯನ ತೇಜಸ್ಸಿಗೆ ಸಮಾನ. ಸುವ್ರತ! ನೀನು ಭೀಷ್ಮನ ಹಾಗೆ ಬೆಳಗುತ್ತಿದ್ದೀಯೆ.
01050014a ವಾಲ್ಮೀಕಿವತ್ತೇ ನಿಭೃತಂ ಸುಧೈರ್ಯಂ ವಸಿಷ್ಠವತ್ತೇ ನಿಯತಶ್ಚ ಕೋಪಃ।
01050014c ಪ್ರಭುತ್ವಮಿಂದ್ರೇಣ ಸಮಂ ಮತಂ ಮೇ ದ್ಯುತಿಶ್ಚ ನಾರಾಯಣವದ್ವಿಭಾತಿ।।
ನನ್ನ ಮತದಲ್ಲಿ ವಾಲ್ಮೀಕಿಯಂತೆ ನಿನ್ನ ಸುಧೈರ್ಯವು ಅಡಕವಾಗಿರುವುದು. ವಸಿಷ್ಠನಂತೆ ನಿನ್ನ ಕೋಪವು ನಿಯತವಾದುದು. ನಿನ್ನ ಪ್ರಭುತ್ವವು ಇಂದ್ರನಂತಿದೆ ಮತ್ತು ದ್ಯುತಿಯು ನಾರಾಯಣನಂತಿದೆ.
01050015a ಯಮೋ ಯಥಾ ಧರ್ಮವಿನಿಶ್ಚಯಜ್ಞಃ ಕೃಷ್ಣೋ ಯಥಾ ಸರ್ವಗುಣೋಪಪನ್ನಃ।
01050015c ಶ್ರಿಯಾಂ ನಿವಾಸೋಽಸಿ ಯಥಾ ವಸೂನಾಂ ನಿಧಾನಭೂತೋಽಸಿ ತಥಾ ಕ್ರತೂನಾಂ।।
ಯಮನ ಹಾಗೆ ನೀನು ಧರ್ಮವಿನಿಶ್ಚಯಗಳನ್ನು ತಿಳಿದವನಾಗಿದ್ದೀಯೆ. ಕೃಷ್ಣನ ಹಾಗೆ ಸರ್ವಗುಣೋಪಪನ್ನನಾಗಿದ್ದೀಯೆ. ವಸುಗಳ ನಿವಾಸದಲ್ಲಿರುವ ಹಾಗೆ ಸಂಪತ್ತು ನಿನ್ನಲ್ಲಿದೆ ಮತ್ತು ಎಲ್ಲ ಕ್ರತುಗಳ ನಿಧಿಯಾಗಿರುವೆ.
01050016a ದಂಭೋದ್ಭವೇನಾಸಿ ಸಮೋ ಬಲೇನ ರಾಮೋ ಯಥಾ ಶಸ್ತ್ರವಿದಸ್ತ್ರವಿಚ್ಚ।
01050016c ಔರ್ವತ್ರಿತಾಭ್ಯಾಮಸಿ ತುಲ್ಯತೇಜಾ ದುಷ್ಪ್ರೇಕ್ಷಣೀಯೋಽಸಿ ಭಗೀರಥೋ ವಾ।।
ಬಲದಲ್ಲಿ ನೀನು ದಂಭೋದ್ಭವನ ಸಮನಾಗಿದ್ದೀಯೆ. ಶಸ್ತ್ರಾಸ್ತ್ರ ಜ್ಞಾನದಲ್ಲಿ ರಾಮನ ಸಮನಾಗಿದ್ದೀಯೆ. ತೇಜಸ್ಸಿನಲ್ಲಿ ಔರ್ವ ಮತ್ತು ತ್ರಿತರ ಸಮಾನನಾಗಿದ್ದೀಯೆ. ಮತ್ತು ಭಗೀರಥನಂತೆ ನಿನ್ನ ಕಡೆ ನೋಡಲೂ ಕಠಿನವಾಗುತ್ತದೆ.””
01050017 ಸೂತ ಉವಾಚ।
01050017a ಏವಂ ಸ್ತುತಾಃ ಸರ್ವ ಏವ ಪ್ರಸನ್ನಾ ರಾಜಾ ಸದಸ್ಯಾ ಋತ್ವಿಜೋ ಹವ್ಯವಾಹಃ।
01050017c ತೇಷಾಂ ದೃಷ್ಟ್ವಾ ಭಾವಿತಾನೀಂಗಿತಾನಿ ಪ್ರೋವಾಚ ರಾಜಾ ಜನಮೇಜಯೋಽಥ।।
ಸೂತನು ಹೇಳಿದನು: “ಹೀಗೆ ಸ್ತುತಿಸಲ್ಪಟ್ಟ ರಾಜ, ಸದಸ್ಯರು, ಋತ್ವಿಜರು ಮತ್ತು ಹವ್ಯವಾಹನ ಸರ್ವರೂ ಪ್ರಸನ್ನರಾದರು. ಅವರೆಲ್ಲರೂ ಹೊರತೋರಿಸಿದ ಇಂಗಿತವನ್ನು ಗಮನಿಸಿದ ರಾಜ ಜನಮೇಜಯನು ಹೀಗೆ ಹೇಳಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಆಸ್ತೀಕಪರ್ವಣಿ ಸರ್ಪಸತ್ರೇ ಆಸ್ತೀಕಕೃತರಾಜಸ್ತವೇ ಪಂಚಾಶತ್ತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಆಸ್ತೀಕಪರ್ವದಲ್ಲಿ ಸರ್ಪಸತ್ರದಲ್ಲಿ ಆಸ್ತೀಕಕೃತರಾಜಸ್ತವದಲ್ಲಿ ಐವತ್ತನೆಯ ಅಧ್ಯಾಯವು.