049 ಸರ್ಪಸತ್ರೇ ಆಸ್ತೀಕಾಗಮನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಆಸ್ತೀಕ ಪರ್ವ

ಅಧ್ಯಾಯ 49

ಸಾರ ಜರತ್ಕಾರು-ಆಸ್ತೀಕರ ಸಂವಾದ (1-15). ಆಸ್ತೀಕನು ಜನಮೇಜಯನ ಯಾಗಶಾಲೆಗೆ ಪ್ರವೇಶವನ್ನು ಯಾಚಿಸುವುದು (16-25).

01049001 ಸೂತ ಉವಾಚ।
01049001a ತತ ಆಹೂಯ ಪುತ್ರಂ ಸ್ವಂ ಜರತ್ಕಾರುರ್ಭುಜಂಗಮಾ।
01049001c ವಾಸುಕೇರ್ನಾಗರಾಜಸ್ಯ ವಚನಾದಿದಮಬ್ರವೀತ್।।

ಸೂತನು ಹೇಳಿದನು: “ಆಗ ಭುಜಂಗಮೆ ಜರತ್ಕಾರುವು ತನ್ನ ಪುತ್ರನನ್ನು ಕರೆದು ನಾಗರಾಜ ವಾಸುಕಿಯ ಈ ಮಾತುಗಳನ್ನು ತಿಳಿಸಿದಳು.

01049002a ಅಹಂ ತವ ಪಿತುಃ ಪುತ್ರ ಭ್ರಾತ್ರಾ ದತ್ತಾ ನಿಮಿತ್ತತಃ।
01049002c ಕಾಲಃ ಸ ಚಾಯಂ ಸಂಪ್ರಾಪ್ತಸ್ತತ್ಕುರುಷ್ವ ಯಥಾತಥಂ।।

“ಯಾವ ಉದ್ದೇಶಕ್ಕಾಗಿ ನನ್ನ ಅಣ್ಣನು ನನ್ನನ್ನು ನಿನ್ನ ತಂದೆಗೆ ಕೊಟ್ಟಿದ್ದನೋ ಅದನ್ನು ಪೂರೈಸುವ ಕಾಲವು ಪ್ರಾಪ್ತವಾಗಿದೆ. ಆದುದರಿಂದ ಏನಾಗಬೇಕೋ ಅದನ್ನು ಮಾಡಬೇಕಾಗಿದೆ.”

01049003 ಆಸ್ತೀಕ ಉವಾಚ।
01049003a ಕಿಂನಿಮಿತ್ತಂ ಮಮ ಪಿತುರ್ದತ್ತಾ ತ್ವಂ ಮಾತುಲೇನ ಮೇ।
01049003c ತನ್ಮಮಾಚಕ್ಷ್ವ ತತ್ತ್ವೇನ ಶ್ರುತ್ವಾ ಕರ್ತಾಸ್ಮಿತತ್ತಥಾ।।

ಆಸ್ತೀಕನು ಹೇಳಿದನು: “ನನ್ನ ಸೋದರ ಮಾವನು ಯಾವ ಕಾರಣಕ್ಕಾಗಿ ನಿನ್ನನ್ನು ನನ್ನ ತಂದೆಗೆ ಕೊಟ್ಟನು? ಅದನ್ನೆಲ್ಲ ನನಗೆ ಹೇಳು. ಅದನ್ನು ಕೇಳಿ ನಾನು ಬೇಕಾದುದನ್ನು ಮಾಡುತ್ತೇನೆ.””

01049004 ಸೂತ ಉವಾಚ।
01049004a ತತ ಆಚಷ್ಟ ಸಾ ತಸ್ಮೈ ಬಾಂಧವಾನಾಂ ಹಿತೈಷಿಣೀ।
01049004c ಭಗಿನೀ ನಾಗರಾಜಸ್ಯ ಜರತ್ಕಾರುರವಿಕ್ಲವಾ।।

ಸೂತನು ಹೇಳಿದನು: “ಬಾಂಧವಹಿತೈಷಿಣಿ ನಾಗರಾಜನ ತಂಗಿ ಜರತ್ಕಾರುವು ಅವರಿಗಿದ್ದ ಶಾಂತಚಿತ್ತನಾಗಿದ್ದ ಆಸ್ತೀಕನಿಗೆ ಹೇಳಿದಳು:

01049005a ಭುಜಗಾನಾಮಶೇಷಾಣಾಂ ಮಾತಾ ಕದ್ರೂರಿತಿ ಶ್ರುತಿಃ।
01049005c ತಯಾ ಶಪ್ತಾ ರುಷಿತಯಾ ಸುತಾ ಯಸ್ಮಾನ್ನಿಬೋಧ ತತ್।।

“ಮಗನೇ! ಎಲ್ಲಾ ನಾಗಗಳ ತಾಯಿ ಕದ್ರುವೆಂದು ಖ್ಯಾತಳಾಗಿದ್ದಾಳೆ. ಅವಳು ರೋಷಗೊಂಡು ತನ್ನ ಮಕ್ಕಳಿಗೆ ಶಾಪವನ್ನಿತ್ತಳು. ಅದಕ್ಕೆ ಕಾರಣವನ್ನು ಕೇಳು.

01049006a ಉಚ್ಛೈಃಶ್ರವಾಃ ಸೋಽಶ್ವರಾಜೋ ಯನ್ಮಿಥ್ಯಾ ನ ಕೃತೋ ಮಮ।
01049006c ವಿನತಾನಿಮಿತ್ತಂ ಪಣಿತೇ ದಾಸಭಾವಾಯ ಪುತ್ರಕಾಃ।।
01049007a ಜನಮೇಜಯಸ್ಯ ವೋ ಯಜ್ಞೇ ಧಕ್ಷ್ಯತ್ಯನಿಲಸಾರಥಿಃ।
01049007c ತತ್ರ ಪಂಚತ್ವಮಾಪನ್ನಾಃ ಪ್ರೇತಲೋಕಂ ಗಮಿಷ್ಯಥ।।

“ಮಕ್ಕಳೇ! ನಾನು ವಿನತಳೊಂದಿಗೆ ದಾಸತ್ವದ ಪಣತೊಟ್ಟಾಗ ನೀವು ಅಶ್ವರಾಜ ಉಚ್ಛೈಶ್ರವನ ಬಣ್ಣವನ್ನು ಸುಳ್ಳುಮಾಡಲು ಒಪ್ಪಲಿಲ್ಲ. ಆದುದರಿಂದ ಜನಮೇಜಯನ ಯಜ್ಞದಲ್ಲಿ ಅನಿಲಸಾರಥಿಯು ನಿಮ್ಮನ್ನು ಸುಟ್ಟುಹಾಕುತ್ತಾನೆ. ಈ ರೀತಿ ನೀವು ಪಂಚಭೂತಗಳಲ್ಲಿ ಒಂದಾಗಿ ಪ್ರೇತಲೋಕವನ್ನು ಸೇರುವಿರಿ.”

01049008a ತಾಂ ಚ ಶಪ್ತವತೀಮೇವಂ ಸಾಕ್ಷಾಲ್ಲೋಕಪಿತಾಮಹಃ।
01049008c ಏವಮಸ್ತ್ವಿತಿ ತದ್ವಾಕ್ಯಂ ಪ್ರೋವಾಚಾನುಮುಮೋದ ಚ।।

ಹೀಗೆ ಅವಳು ಶಪಿಸುತ್ತಿರುವಾಗ ಸಾಕ್ಷಾತ್ ಲೋಕಪಿತಾಮಹನೂ “ಹಾಗೆಯೇ ಆಗಲಿ!” ಎಂದು ಆ ವಾಖ್ಯಗಳನ್ನು ಅನುಮೋದಿಸಿದನು.

01049009a ವಾಸುಕಿಶ್ಚಾಪಿ ತಚ್ಛ್ರುತ್ವಾ ಪಿತಾಮಹವಚಸ್ತದಾ।
01049009c ಅಮೃತೇ ಮಥಿತೇ ತಾತ ದೇವಾನ್ ಶರಣಮೀಯಿವಾನ್।।

ಇದನ್ನು ಮತ್ತು ಪಿತಾಮಹನ ಮಾತುಗಳನ್ನು ಕೇಳಿದ ವಾಸುಕಿಯು ಅಮೃತ ಮಂಥನದ ನಂತರ ದೇವತೆಗಳಲ್ಲಿ ಶರಣುಹೋದನು.

01049010a ಸಿದ್ಧಾರ್ಥಾಶ್ಚ ಸುರಾಃ ಸರ್ವೇ ಪ್ರಾಪ್ಯಾಮೃತಮನುತ್ತಮಂ।
01049010c ಭ್ರಾತರಂ ಮೇ ಪುರಸ್ಕೃತ್ಯ ಪ್ರಜಾಪತಿಮುಪಾಗಮನ್।।

ಆಗ ಅನುತ್ತಮ ಅಮೃತವನ್ನು ಪಡೆದ ಸರ್ವ ಸುರರೂ ನನ್ನ ಅಣ್ಣನನ್ನು ಪುರಸ್ಕರಿಸಿ ಪ್ರಜಾಪತಿಯ ಬಳಿ ಬಂದರು.

01049011a ತೇ ತಂ ಪ್ರಸಾದಯಾಮಾಸುರ್ದೇವಾಃ ಸರ್ವೇ ಪಿತಾಮಹಂ।
01049011c ರಾಜ್ಞಾ ವಾಸುಕಿನಾ ಸಾರ್ಧಂ ಸ ಶಾಪೋ ನ ಭವೇದಿತಿ।।

ಅವನು ಮತ್ತು ಎಲ್ಲ ದೇವತೆಗಳು ಪಿತಾಮಹನಲ್ಲಿ ಕೇಳಿಕೊಂಡರು: “ಈ ಶಾಪವು ರಾಜ ವಾಸುಕಿಗೆ ತಗುಲದೇ ಇರಲಿ!

01049012a ವಾಸುಕಿರ್ನಾಗರಾಜೋಽಯಂ ದುಃಖಿತೋ ಜ್ಞಾತಿಕಾರಣಾತ್।
01049012c ಅಭಿಶಾಪಃ ಸ ಮಾತ್ರಾಸ್ಯ ಭಗವನ್ನ ಭವೇದಿತಿ।।

ನಾಗರಾಜ ಈ ವಾಸುಕಿಯು ತನ್ನ ಜಾತಿಗೋಸ್ಕರವಾಗಿ ದುಃಖಿತನಾಗಿದ್ದಾನೆ. ಭಗವನ್! ಹೇಗೆ ಆ ತಾಯಿಯ ಶಾಪವು ತಗಲದಂತೆ ಮಾಡಬಹುದು?”

01049013 ಬ್ರಹ್ಮೋವಾಚ।
01049013a ಜರತ್ಕಾರುರ್ಜರತ್ಕಾರುಂ ಯಾಂ ಭಾರ್ಯಾಂ ಸಮವಾಪ್ಸ್ಯತಿ।
01049013c ತತ್ರ ಜಾತೋ ದ್ವಿಜಃ ಶಾಪಾದ್ಭುಜಗಾನ್ಮೋಕ್ಷಯಿಷ್ಯತಿ।।

ಬ್ರಹ್ಮನು ಹೇಳಿದನು: “ಜರತ್ಕಾರುವು ಜರತ್ಕಾರುವೆನ್ನುವವಳನ್ನು ಪತ್ನಿಯನ್ನಾಗಿ ಸ್ವೀಕರಿಸುವನು. ಅವರಲ್ಲಿ ಹುಟ್ಟಿದ ದ್ವಿಜನು ನಾಗಗಳನ್ನು ಶಾಪದಿಂದ ಮುಕ್ತಿಗೊಳಿಸುವನು.””

01049014 ಜರತ್ಕಾರುರುವಾಚ।
01049014a ಏತಚ್ಛ್ರುತ್ವಾ ತು ವಚನಂ ವಾಸುಕಿಃ ಪನ್ನಗೇಶ್ವರಃ।
01049014c ಪ್ರಾದಾನ್ಮಾಮಮರಪ್ರಖ್ಯ ತವ ಪಿತ್ರೇ ಮಹಾತ್ಮನೇ।
01049014e ಪ್ರಾಗೇವಾನಾಗತೇ ಕಾಲೇ ತತ್ರ ತ್ವಂ ಮಯ್ಯಜಾಯಥಾಃ।।

ಜರತ್ಕಾರುವು ಹೇಳಿದಳು: “ಈ ಮಾತುಗಳನ್ನು ಕೇಳಿದ ಪನ್ನಗೇಶ್ವರ ವಾಸುಕಿಯು ನನ್ನನ್ನು ನಿನ್ನ ತಂದೆ ಮಹಾತ್ಮನಿಗೆ ಕೊಟ್ಟನು ಮತ್ತು ಸಮಯಾನುಸಾರವಾಗಿ ನೀನು ನನ್ನಲ್ಲಿ ಜನಿಸಿದೆ.

01049015a ಅಯಂ ಸ ಕಾಲಃ ಸಂಪ್ರಾಪ್ತೋ ಭಯಾನ್ನಸ್ತ್ರಾತುಮರ್ಹಸಿ।
01049015c ಭ್ರಾತರಂ ಚೈವ ಮೇ ತಸ್ಮಾತ್ತ್ರಾತುಮರ್ಹಸಿ ಪಾವಕಾತ್।।

ಈಗ ಸಮಯವು ಪ್ರಾಪ್ತವಾಗಿದೆ. ನಮ್ಮನ್ನು ಈ ಭಯದಿಂದ ರಕ್ಷಿಸು! ನನ್ನ ಅಣ್ಣನನ್ನು ಪಾವಕನಿಂದ ರಕ್ಷಿಸು!

01049016a ಅಮೋಘಂ ನಃ ಕೃತಂ ತತ್ಸ್ಯಾದ್ಯದಹಂ ತವ ಧೀಮತೇ।
01049016c ಪಿತ್ರೇ ದತ್ತಾ ವಿಮೋಕ್ಷಾರ್ಥಂ ಕಥಂ ವಾ ಪುತ್ರ ಮನ್ಯಸೇ।।

ನನ್ನನ್ನು ನಿನ್ನ ತಂದೆಗೆ ಕೊಟ್ಟಿದ್ದುದು ನಿಷ್ಫಲವಾಗುವಂತೆ ಮಾಡಬೇಡ. ಅಥವಾ ಮಗು! ನಿನ್ನ ಯೋಚನೆ ಬೇರೆ ಏನಾದರೂ ಇದೆಯೇ?””

01049017 ಸೂತ ಉವಾಚ।
01049017a ಏವಮುಕ್ತಸ್ತಥೇತ್ಯುಕ್ತ್ವಾ ಸೋಽಸ್ತೀಕೋ ಮಾತರಂ ತದಾ।
01049017c ಅಬ್ರವೀದ್ದುಃಖಸಂತಪ್ತಂ ವಾಸುಕಿಂ ಜೀವಯನ್ನಿವ।।

ಸೂತನು ಹೇಳಿದನು: “ಇದನ್ನು ಕೇಳಿದ ಆಸ್ತೀಕನು “ಹಾಗೆಯೇ ಆಗಲಿ!” ಎಂದು ತನ್ನ ತಾಯಿಗೆ ಹೇಳಿ, ದುಃಖಸಂತಪ್ತ ವಾಸುಕಿಗೆ ಪುನರ್ಜೀವವನ್ನು ನೀಡುವಂತಹ ಈ ಮಾತುಗಳನ್ನು ಹೇಳಿದನು:

01049018a ಅಹಂ ತ್ವಾಂ ಮೋಕ್ಷಯಿಷ್ಯಾಮಿ ವಾಸುಕೇ ಪನ್ನಗೋತ್ತಮ।
01049018c ತಸ್ಮಾಚ್ಛಾಪಾನ್ಮಹಾಸತ್ತ್ವ ಸತ್ಯಮೇತದ್ಬ್ರವೀಮಿ ತೇ।।

“ಪನ್ನಗೋತ್ತಮ ವಾಸುಕಿ! ನಾನು ನಿನ್ನನ್ನು ಆ ಶಾಪದಿಂದ ವಿಮುಕ್ತಗೊಳಿಸುತ್ತೇನೆ. ನಾನು ಸತ್ಯವನ್ನು ಹೇಳುತ್ತಿದ್ದೇನೆ.

01049019a ಭವ ಸ್ವಸ್ಥಮನಾ ನಾಗ ನ ಹಿ ತೇ ವಿದ್ಯತೇ ಭಯಂ।
01049019c ಪ್ರಯತಿಷ್ಯೇ ತಥಾ ಸೌಮ್ಯ ಯಥಾ ಶ್ರೇಯೋ ಭವಿಷ್ಯತಿ।
01049019e ನ ಮೇ ವಾಗನೃತಂ ಪ್ರಾಹಸ್ವೈರೇಷ್ವಪಿ ಕುತೋಽನ್ಯಥಾ।।

ನಾಗ! ಸ್ವಸ್ಥಮನಸ್ಕನಾಗಿರು. ನಿನಗೆ ಯಾವ ಭಯವೂ ಇಲ್ಲ. ಸೌಮ್ಯ! ನಿನ್ನ ಶ್ರೇಯಸ್ಸಿಗೇ ಪ್ರಯತ್ನಿಸುತ್ತೇನೆ. ಚೇಷ್ಟೆಯಲ್ಲಿಯೂ ಕೂಡ ಎಂದೂ ನನ್ನ ಮಾತು ಸುಳ್ಳಾಗಲಾರದು.

01049020a ತಂ ವೈ ನೃಪವರಂ ಗತ್ವಾ ದೀಕ್ಷಿತಂ ಜನಮೇಜಯಂ।
01049020c ವಾಗ್ಭಿರ್ಮಂಗಲಯುಕ್ತಾಭಿಸ್ತೋಷಯಿಷ್ಯೇಽದ್ಯ ಮಾತುಲ।
01049020e ಯಥಾ ಸ ಯಜ್ಞೋ ನೃಪತೇರ್ನಿರ್ವರ್ತಿಷ್ಯತಿ ಸತ್ತಮ।।

ಸತ್ತಮ! ಮಾವ! ದೀಕ್ಷೆಯಲ್ಲಿರುವ ಆ ನೃಪವರ ಜನಮೇಜಯನಲ್ಲಿ ಹೋಗಿ ಮಂಗಲಯುಕ್ತ ಮಾತುಗಳಿಂದ ಅವನನ್ನು ತೃಪ್ತಿಗೊಳಿಸಿ ನೃಪತಿಯ ಯಜ್ಞವು ಕೊನೆಗೊಳ್ಳುವಹಾಗೆ ಮಾಡುತ್ತೇನೆ.

01049021a ಸ ಸಂಭಾವಯ ನಾಗೇಂದ್ರ ಮಯಿ ಸರ್ವಂ ಮಹಾಮತೇ।
01049021c ನ ತೇ ಮಯಿ ಮನೋ ಜಾತು ಮಿಥ್ಯಾ ಭವಿತುಮರ್ಹತಿ।।

ಮಹಾಮತಿ ನಾಗೇಂದ್ರ! ನಿನ್ನ ಎಲ್ಲ ವಿಶ್ವಾಸವನ್ನೂ ನನ್ನಲ್ಲಿ ಇಡು ಮತ್ತು ನನ್ನಲ್ಲಿ ನೀನಿಟ್ಟ ವಿಶ್ವಾಸವು ಎಂದೂ ಸುಳ್ಳಾಗುವುದಿಲ್ಲ.”

01049022 ವಾಸುಕಿರುವಾಚ।
01049022a ಆಸ್ತೀಕ ಪರಿಘೂರ್ಣಾಮಿ ಹೃದಯಂ ಮೇ ವಿದೀರ್ಯತೇ।
01049022c ದಿಶಶ್ಚ ನ ಪ್ರಜಾನಾಮಿ ಬ್ರಹ್ಮದಂಡನಿಪೀಡಿತಃ।।

ವಾಸುಕಿಯು ಹೇಳಿದನು: “ಆಸ್ತೀಕ! ಈ ಬ್ರಹ್ಮದಂಡ ಪೀಡಿತನಾದ ನಾನು ನಡುಗುತ್ತಿದ್ದೇನೆ ಮತ್ತು ನನ್ನ ಹೃದಯವು ಒಡೆಯುತ್ತಿದೆ. ನನಗೆ ದಿಕ್ಕೇ ತೋಚದಂತಾಗಿದೆ.”

01049023 ಆಸ್ತೀಕ ಉವಾಚ।
01049023a ನ ಸಂತಾಪಸ್ತ್ವಯಾ ಕಾರ್ಯಃ ಕಥಂ ಚಿತ್ಪನ್ನಗೋತ್ತಮ।
01049023c ದೀಪ್ತಾದಗ್ನೇಃ ಸಮುತ್ಪನ್ನಂ ನಾಶಯಿಷ್ಯಾಮಿ ತೇ ಭಯಂ।।

ಆಸ್ತೀಕನು ಹೇಳಿದನು: “ಪನ್ನಗೋತ್ತಮ! ನೀನು ಯಾವುದಕ್ಕೂ ಭಯ ಪಡಬೇಡ. ಉರಿಯುತ್ತಿರುವ ಅಗ್ನಿಯಿಂದ ನಿನಗುಂಟಾಗಿರುವ ಈ ಭಯವನ್ನು ನಾಶಪಡಿಸುತ್ತೇನೆ.

01049024a ಬ್ರಹ್ಮದಂಡಂ ಮಹಾಘೋರಂ ಕಾಲಾಗ್ನಿಸಮತೇಜಸಂ।
01049024c ನಾಶಯಿಷ್ಯಾಮಿ ಮಾತ್ರ ತ್ವಂ ಭಯಂ ಕಾರ್ಷೀಃ ಕಥಂ ಚನ।।

ಕಾಲಾಗ್ನಿಯಂತೆ ಉರಿಯುತ್ತಿರುವ ಈ ಮಹಾಘೋರ ಬ್ರಹ್ಮದಂಡವನ್ನು ನಾಶಪಡಿಸುತ್ತೇನೆ. ಯಾವುದೇ ರೀತಿಯ ಭಯಪಡಬೇಡ.””

01049025 ಸೂತ ಉವಾಚ।
01049025a ತತಃ ಸ ವಾಸುಕೇರ್ಘೋರಮಪನೀಯ ಮನೋಜ್ವರಂ।
01049025c ಆಧಾಯ ಚಾತ್ಮನೋಽನ್ಗೇಷು ಜಗಾಮ ತ್ವರಿತೋ ಭೃಶಂ।।
01049026a ಜನಮೇಜಯಸ್ಯ ತಂ ಯಜ್ಞಂ ಸರ್ವೈಃ ಸಮುದಿತಂ ಗುಣೈಃ।
01049026c ಮೋಕ್ಷಾಯ ಭುಜಗೇಂದ್ರಾಣಾಮಾಸ್ತೀಕೋ ದ್ವಿಜಸತ್ತಮಃ।।

ಸೂತನು ಹೇಳಿದನು: “ನಂತರ, ವಾಸುಕಿಯ ಘೋರ ಮನೋಜ್ಚರವನ್ನು ಕಿತ್ತು ತನ್ನ ಭುಜದಮೇಲೆತ್ತಿಕೊಂಡು ಆ ದ್ವಿಜಸತ್ತಮ ಆಸ್ತೀಕನು ತ್ವರೆಯಲ್ಲಿ ಹೊರಟು ಭುಜಗೇಂದ್ರರ ಮೋಕ್ಷಾರ್ಥವಾಗಿ ಸರ್ವಗುಣ ಸಮುದಿತ ಆ ಜನಮೇಜಯನ ಯಜ್ಞದಲ್ಲಿಗೆ ಧಾವಿಸಿದನು.

01049027a ಸ ಗತ್ವಾಪಶ್ಯದಾಸ್ತೀಕೋ ಯಜ್ಞಾಯತನಮುತ್ತಮಂ।
01049027c ವೃತಂ ಸದಸ್ಯೈರ್ಬಹುಭಿಃ ಸೂರ್ಯವಹ್ನಿಸಮಪ್ರಭೈಃ।।

ಅಲ್ಲಿ ಹೋಗಿ ಆಸ್ತೀಕನು ಅನೇಕ ಸೂರ್ಯವಹ್ನಿಸಮಪ್ರಭ ಸದಸ್ಯರಿಂದ ಆವೃತಗೊಂಡ ಉತ್ತಮ ಯಜ್ಞಾಯತವನ್ನು ಕಂಡನು.

01049028a ಸ ತತ್ರ ವಾರಿತೋ ದ್ವಾಃಸ್ಥೈಃ ಪ್ರವಿಶನ್ದ್ವಿಜಸತ್ತಮಃ।
01049028c ಅಭಿತುಷ್ಟಾವ ತಂ ಯಜ್ಞಂ ಪ್ರವೇಶಾರ್ಥೀ ದ್ವಿಜೋತ್ತಮಃ।।

ಆ ದ್ವಿಜಸತ್ತಮನು ಅಲ್ಲಿಗೆ ಪ್ರವೇಶಿಸುತ್ತಿರಲು ದ್ವಾರಪಾಲಕರು ಅವನನ್ನು ತಡೆಗಟ್ಟಿದರು. ಆದರೆ ಆ ಪ್ರವೇಶಾರ್ಥಿ ದ್ವಿಜೋತ್ತಮನು ಉಚ್ಛ ಧ್ವನಿಯಲ್ಲಿ ಆ ಯಜ್ಞವನ್ನು ಪ್ರಶಂಸಿಸತೊಡಗಿದನು1.

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಆಸ್ತೀಕಪರ್ವಣಿ ಸರ್ಪಸತ್ರೇ ಆಸ್ತೀಕಾಗಮನೇ ಏಕೋನಪಂಚಾಶತ್ತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಆಸ್ತೀಕಪರ್ವದಲ್ಲಿ ಸರ್ಪಸತ್ರದಲ್ಲಿ ಆಸ್ತೀಕಾಗಮನದಲ್ಲಿ ನಲವತ್ತೊಂಭತ್ತನೆಯ ಅಧ್ಯಾಯವು.


  1. ನೀಲಕಂಠೀಯದಲ್ಲಿ ಇದರ ನಂತರ ಈ ಒಂದು ಶ್ಲೋಕವಿದೆ: ಸ ಪ್ರಾಪ್ಯ ಯಜ್ಞಾಯತನಂ ವರಿಷ್ಠಂ ದ್ವಿಜೋತ್ತಮಃ ಪುಣ್ಯಕೃತಾಂ ವರಿಷ್ಠಃ। ತುಷ್ಟಾವ ರಾಜಾನಮನಂತಕೀರ್ತಿಮೃತ್ವಿಕ್ಸದಸ್ಯಾಂಶ್ಚ ತಥೈವ ಚಾಗ್ನಿಮ್।। ಅರ್ಥಾತ್ ಈ ರೀತಿ ಆ ಪರಮ ಶ್ರೇಷ್ಠ ಯಜ್ಞಮಂಡಲದ ಹತ್ತಿರ ಹೋಗಿ ಪುಣ್ಯಕೃತರಲ್ಲಿ ಶ್ರೇಷ್ಠ ಆಸ್ತೀಕನು ಅಕ್ಷಯ ಕೀರ್ತಿಗಳಿಂದ ಸುಶೋಭಿತ ಯಜಮಾನ ರಾಜಾ ಜನಮೇಜಯ, ಋತ್ವಿಜರು, ಸದಸ್ಯರು ಮತ್ತು ಹಾಗೆಯೇ ಅಗ್ನಿದೇವನ ಸ್ತವನವನ್ನು ಆರಂಭಿಸಿದನು. ↩︎