ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಆಸ್ತೀಕ ಪರ್ವ
ಅಧ್ಯಾಯ 48
ಸಾರ
ಯಾಗದಲ್ಲಿ ಪುರೋಹಿತ ಪ್ರಮುಖರ ಹೆಸರುಗಳು (1-10). ತಕ್ಷಕನು ಇಂದ್ರನ ರಕ್ಷಣೆಯಲ್ಲಿ ಬರುವುದು (11-20). ವಾಸುಕಿಯು ಆಸ್ತೀಕನನ್ನು ಕರೆಯುವಂತೆ ತಂಗಿಗೆ ಹೇಳುವುದು (21-2).01048001 ಶೌನಕ ಉವಾಚ।
01048001a ಸರ್ಪಸತ್ರೇ ತದಾ ರಾಜ್ಞಃ ಪಾಂಡವೇಯಸ್ಯ ಧೀಮತಃ।
01048001c ಜನಮೇಜಯಸ್ಯ ಕೇ ತ್ವಾಸನೃತ್ವಿಜಃ ಪರಮರ್ಷಯಃ।।
ಶೌನಕನು ಹೇಳಿದನು: “ಧೀಮಂತ ಪಾಂಡವೇಯ ರಾಜ ಜನಮೇಜಯನ ಸರ್ಪಸತ್ರದಲ್ಲಿ ಯಾರು ಯಾರು ಪರಮ ಋಷಿಗಳು ಮತ್ತು ಋತ್ವಿಜರು ಭಾಗವಹಿಸಿದ್ದರು?
01048002a ಕೇ ಸದಸ್ಯಾ ಬಭೂವುಶ್ಚ ಸರ್ಪಸತ್ರೇ ಸುದಾರುಣೇ।
01048002c ವಿಷಾದಜನನೇಽತ್ಯರ್ಥಂ ಪನ್ನಗಾನಾಂ ಮಹಾಭಯೇ।।
ಪನ್ನಗಗಳಿಗೆ ಮಹಾಭಯ ವಿಷಾದಗಳನ್ನುಂಟುಮಾಡುವ ಉದ್ದೇಶವನ್ನು ಹೊಂದಿದ್ದ ಆ ದಾರುಣ ಸರ್ಪಸತ್ರದಲ್ಲಿ ಸದಸ್ಯರು ಯಾರಿದ್ದರು?
01048003a ಸರ್ವಂ ವಿಸ್ತರತಸ್ತಾತ ಭವಾಶಂಸಿತುಮರ್ಹತಿ।
01048003c ಸರ್ಪಸತ್ರವಿಧಾನಜ್ಞಾ ವಿಜ್ಞೇಯಾಸ್ತೇ ಹಿ ಸೂತಜ।।
ಸೂತಜ! ತಾತ! ಸರ್ಪಸತ್ರದ ವಿಧಾನಗಳನ್ನು ತಿಳಿದ ಯಾರ್ಯಾರು ಅಲ್ಲಿ ಇದ್ದರು ಎಂದು ತಿಳಿಸಲೋಸುಗ ಸರ್ವವನ್ನೂ ವಿಸ್ತಾರವಾಗಿ ವಿವರಿಸು.”
01048004 ಸೂತ ಉವಾಚ।
01048004a ಹಂತ ತೇ ಕಥಯಿಷ್ಯಾಮಿ ನಾಮಾನೀಹ ಮನೀಷಿಣಾಂ।
01048004c ಯೇ ಋತ್ವಿಜಃ ಸದಸ್ಯಾಶ್ಚ ತಸ್ಯಾಸನ್ನೃಪತೇಸ್ತದಾ।।
ಸೂತನು ಹೇಳಿದನು: “ಆ ನೃಪತಿಗೆ ಋತ್ವಿಜರು ಮತ್ತು ಸದಸ್ಯರಾಗಿದ್ದವರ ಹೆಸರುಗಳನ್ನು ಹೇಳುತ್ತೇನೆ.
01048005a ತತ್ರ ಹೋತಾ ಬಭೂವಾಥ ಬ್ರಾಹ್ಮಣಶ್ಚಂಡಭಾರ್ಗವಃ।
01048005c ಚ್ಯವನಸ್ಯಾನ್ವಯೇ ಜಾತಃ ಖ್ಯಾತೋ ವೇದವಿದಾಂ ವರಃ।।
ಚ್ಯವನನ ಕುಲದಲ್ಲಿ ಹುಟ್ಟಿ ವೇದವಿದರಲ್ಲಿ ಶ್ರೇಷ್ಠನಾದ, ಖ್ಯಾತ ಬ್ರಾಹ್ಮಣ ಚಂಡಭಾರ್ಗವನು ಅಲ್ಲಿ ಹೋತನಾಗಿದ್ದನು.
01048006a ಉದ್ಗಾತಾ ಬ್ರಾಹ್ಮಣೋ ವೃದ್ಧೋ ವಿದ್ವಾನ್ಕೌತ್ಸಾರ್ಯಜೈಮಿನಿಃ।
01048006c ಬ್ರಹ್ಮಾಭವಚ್ಛಾರ್ಙರವೋ ಅಧ್ವರ್ಯುರ್ಬೋಧಪಿಂಗಲಃ।।
ವೃದ್ಧನೂ ವಿದ್ವಾಂಸನೂ ಆದ ಬ್ರಾಹ್ಮಣ ಕೌತ್ಸನು ಉದ್ಗಾತ, ಜೈಮಿನಿಯು ಬ್ರಹ್ಮ ಹಾಗು ಶಾರ್ಙರವ ಮತ್ತ್ತು ಪಿಂಗಲರು ಅಧ್ವರ್ಯಿಯಾಗಿದ್ದರು.
01048007a ಸದಸ್ಯಶ್ಚಾಭವದ್ವ್ಯಾಸಃ ಪುತ್ರಶಿಷ್ಯಸಹಾಯವಾನ್।
01048007c ಉದ್ದಾಲಕಃ ಶಮಥಕಃ1 ಶ್ವೇತಕೇತುಶ್ಚ ಪಂಚಮಃ2।।
01048008a ಅಸಿತೋ ದೇವಲಶ್ಚೈವ ನಾರದಃ ಪರ್ವತಸ್ತಥಾ।
01048008c ಆತ್ರೇಯಃ ಕುಂಡಜಟರೋ ದ್ವಿಜಃ ಕುಟಿಘಟಸ್ತಥಾ3।।
01048009a ವಾತ್ಸ್ಯಃ ಶ್ರುತಶ್ರವಾ ವೃದ್ಧಸ್ತಪಹ್ಸ್ವಾಧ್ಯಾಯಶೀಲವಾನ್।
01048009c ಕಹೋಢೋ4 ದೇವಶರ್ಮಾ ಚ ಮೌದ್ಗಲ್ಯಃ ಶಮಸೌಭರಃ5।।
01048010a ಏತೇ ಚಾನ್ಯೇ ಚ ಬಹವೋ ಬ್ರಾಹ್ಮಣಾಃ ಸಂಶಿತವ್ರತಾಃ।
01048010c ಸದಸ್ಯಾ ಅಭವಂಸ್ತತ್ರ ಸತ್ರೇ ಪಾರಿಕ್ಷಿತಸ್ಯ ಹ।।
ಪುತ್ರ ಮತ್ತು ಶಿಷ್ಯರಿಂದೊಡಗೂಡಿದ ವ್ಯಾಸ, ಉದ್ದಾಲಕ, ಶಮಟಕ, ಶ್ವೇತಕೇತು, ಪಂಚಮ, ಅಸಿತ, ದೇವಲ, ನಾರದ, ಪರ್ವತ, ಆತ್ರೇಯ, ಕುಂಡ, ಜಟರ, ದ್ವಿಜ ಕುಟಿಘಟ, ವಾತ್ಸ್ಯ, ವೃದ್ಧ ತಪಸ್ವಿ ಸ್ವಾಧ್ಯಾಯಶೀಲ ಶೃತಶ್ರವ, ಕಹೋಢ, ದೇವಶರ್ಮ, ಮೌದ್ಗಲ್ಯ, ಶಮಸೌಭರ, ಮತ್ತು ಇನ್ನೂ ಇತರ ಬಹಳಷ್ಟು ಸಂಶಿತವ್ರತ ಬ್ರಾಹ್ಮಣರು ಪಾರಿಕ್ಷಿತನ ಆ ಸತ್ರದಲ್ಲಿ ಸದಸ್ಯರಾಗಿದ್ದರು.
01048011a ಜುಹ್ವತ್ಸ್ವೃತ್ವಿಕ್ಷ್ವಥ ತದಾ ಸರ್ಪಸತ್ರೇ ಮಹಾಕ್ರತೌ।
01048011c ಅಹಯಃ ಪ್ರಾಪತಂಸ್ತತ್ರ ಘೋರಾಃ ಪ್ರಾಣಿಭಯಾವಹಾಃ।।
ಋತ್ವಿಜರು ಆ ಮಹಾಕ್ರತು ಸರ್ಪ ಸತ್ರದಲ್ಲಿ ಆಹುತಿಗಳನ್ನು ಹಾಕುತ್ತಿದ್ದಂತೆ, ಪ್ರಾಣಿಗಳಿಗೆ ಭಯಕಾರಕ ಘೋರ ಸರ್ಪಗಳು ಉರಿಯುತ್ತಿರುವ ಬೆಂಕಿಯಲ್ಲಿ ಬಂದು ಬೀಳುತ್ತಿದ್ದವು.
01048012a ವಸಾಮೇದೋವಹಾಃ ಕುಲ್ಯಾ ನಾಗಾನಾಂ ಸಂಪ್ರವರ್ತಿತಾಃ।
01048012c ವವೌ ಗಂಧಶ್ಚ ತುಮುಲೋ ದಹ್ಯತಾಮನಿಶಂ ತದಾ।।
ನಾಗಗಳ ಕೊಬ್ಬು-ಮಾಂಸಗಳ ಹೊಳೆಯೇ ಹರಿದಿತ್ತು ಮತ್ತು ಒಂದೇ ಸಮನೆ ಸುಡುತ್ತಿದ್ದ ಅವುಗಳ ದುರ್ಗಂಧವು ಎಲ್ಲೆಡೆಯೂ ಹರಡಿ ತಡೆಯಲಸಾಧ್ಯವಾಗಿತ್ತು.
01048013a ಪತತಾಂ ಚೈವ ನಾಗಾನಾಂ ಧಿಷ್ಟಿತಾನಾಂ ತಥಾಂಬರೇ।
01048013c ಅಶ್ರೂಯತಾನಿಶಂ ಶಬ್ದಃ ಪಚ್ಯತಾಂ ಚಾಗ್ನಿನಾ ಭೃಶಂ।।
ಬೀಳುತ್ತಿರುವ, ಆಕಾಶದಲ್ಲಿಯೇ ನಿಂತಿದ್ದ ಮತ್ತು ಅಗ್ನಿಯಲ್ಲಿ ಬೇಯುತ್ತಿದ್ದ ನಾಗಗಳ ಆಕ್ರೋಶವು ಎಲ್ಲೆಡೆಯೂ ಕೇಳಿಬರುತ್ತಿತ್ತು.
01048014a ತಕ್ಷಕಸ್ತು ಸ ನಾಗೇಂದ್ರಃ ಪುರಂದರನಿವೇಶನಂ।
01048014c ಗತಃ ಶ್ರುತ್ವೈವ ರಾಜಾನಂ ದೀಕ್ಷಿತಂ ಜನಮೇಜಯಂ।।
ರಾಜ ಜನಮೇಜಯನು ದೀಕ್ಷೆಗೊಂಡಿರುವನೆಂದು ತಿಳಿದಾಕ್ಷಣವೇ ನಾಗೇಂದ್ರ ತಕ್ಷಕನು ಪುರಂದರನ ಅರಮನೆಯನ್ನು ಸೇರಿಕೊಂಡನು.
01048015a ತತಃ ಸರ್ವಂ ಯಥಾವೃತ್ತಮಾಖ್ಯಾಯ ಭುಜಗೋತ್ತಮಃ।
01048015c ಅಗಚ್ಛಚ್ಛರಣಂ ಭೀತ ಆಗಸ್ಕೃತ್ವಾ ಪುರಂದರಂ।।
ಭೀತ ಭುಜಗೋತ್ತಮನು ಪುರಂದರನಿಗೆ ಶರಣುಬಂದು ಅವನಿಗೆ ಸರ್ವವನ್ನೂ ಯಥಾವತ್ತಾಗಿ ವರದಿ ಮಾಡಿದನು.
01048016a ತಮಿಂದ್ರಃ ಪ್ರಾಹ ಸುಪ್ರೀತೋ ನ ತವಾಸ್ತೀಹ ತಕ್ಷಕ।
01048016c ಭಯಂ ನಾಗೇಂದ್ರ ತಸ್ಮಾದ್ವೈ ಸರ್ಪಸತ್ರಾತ್ಕಥಂ ಚನ।।
ಸುಪ್ರೀತ ಇಂದ್ರನು ಅವನಿಗೆ ಹೇಳಿದನು: “ನಾಗೇಂದ್ರ ತಕ್ಷಕ! ಇಲ್ಲಿ ನೀನು ಸರ್ಪಸತ್ರದಿಂದ ಯಾವುದೇ ರೀತಿಯ ಭಯಪಡುವ ಅವಶ್ಯಕತೆಯಿಲ್ಲ.
01048017a ಪ್ರಸಾದಿತೋ ಮಯಾ ಪೂರ್ವಂ ತವಾರ್ಥಾಯ ಪಿತಾಮಹಃ।
01048017c ತಸ್ಮಾತ್ತವ ಭಯಂ ನಾಸ್ತಿ ವ್ಯೇತು ತೇ ಮಾನಸೋ ಜ್ವರಃ।।
ಪೂರ್ವದಲ್ಲಿ ನಿನ್ನ ಪರವಾಗಿ ನಾನು ಪಿತಾಮಹನನ್ನು ಬೇಡಿಕೊಂಡಿದ್ದೆ. ಆದುದರಿಂದ ನೀನು ಭಯಪಡಬೇಕಾದ್ದೇನೂ ಇಲ್ಲ. ನಿನ್ನ ಮನಸ್ಸಿನಿಂದ ಈ ಜ್ವರವನ್ನು ತೆಗೆದುಹಾಕು.”
01048018a ಏವಮಾಶ್ವಾಸಿತಸ್ತೇನ ತತಃ ಸ ಭುಜಗೋತ್ತಮಃ।
01048018c ಉವಾಸ ಭವನೇ ತತ್ರ ಶಕ್ರಸ್ಯ ಮುದಿತಃ ಸುಖೀ।।
ಅವನಿಂದ ಈ ರೀತಿಯ ಆಶ್ವಾಸನೆಯನ್ನು ಪಡೆದ ಆ ಭುಜಗೋತ್ತಮನು ಶಕ್ರನ ಭವನದಲ್ಲಿಯೇ ಸುಖ-ಸಂತೋಷದಿಂದ ವಾಸಿಸಿದನು.
01048019a ಅಜಸ್ರಂ ನಿಪತತ್ಸ್ವಗ್ನೌ ನಾಗೇಷು ಭೃಶದುಃಖಿತಃ।
01048019c ಅಲ್ಪಶೇಷಪರೀವಾರೋ ವಾಸುಕಿಃ ಪರ್ಯತಪ್ಯತ।।
01048020a ಕಶ್ಮಲಂ ಚಾವಿಶದ್ಘೋರಂ ವಾಸುಕಿಂ ಪನ್ನಗೇಶ್ವರಂ।
01048020c ಸ ಘೂರ್ಣಮಾನಹೃದಯೋ ಭಗಿನೀಮಿದಮಬ್ರವೀತ್।।
ಆದರೆ ಅಗ್ನಿಯಲ್ಲಿ ಸತತವಾಗಿ ನಾಗಗಳು ಬೀಳುತ್ತಿರಲು ವಾಸುಕಿಯು ಕ್ಷೀಣವಾಗುತ್ತಿರುವ ತನ್ನ ವಂಶವನ್ನು ನೋಡಿ ದುಃಖದಿಂದ ನೊಂದು ಪರಿತಪಿಸಿದನು. ಪನ್ನಗೇಶ್ವರ ವಾಸುಕಿಯನ್ನು ಘೋರ ಕಶ್ಮಲವು ಆವರಿಸಿತು. ಕಂಪಿಸುತ್ತಿರುವ ಹೃದಯದಿಂದ ಅವನು ತನ್ನ ತಂಗಿಯಲ್ಲಿ ಹೇಳಿದನು:
01048021a ದಹ್ಯಂತೇಽಂಗಾನಿ ಮೇ ಭದ್ರೇ ದಿಶೋ ನ ಪ್ರತಿಭಾಂತಿ ಚ।
01048021c ಸೀದಾಮೀವ ಚ ಸಮ್ಮೋಹಾದ್ಘೂರ್ಣತೀವ ಚ ಮೇ ಮನಃ।।
“ಭದ್ರೇ! ನನ್ನ ಅಂಗಾಂಗಗಳು ಸುಡುತ್ತಿವೆ ಮತ್ತು ದಿಕ್ಕೇ ತೋಚದಂತಾಗಿದೆ. ಮೂರ್ಛೆಗೊಂಡಂತೆ ಕುಸಿಯುತ್ತಿದ್ದೇನೆ ಮತ್ತು ನನ್ನ ಮನಸ್ಸು ಭ್ರಮಿಸುತ್ತಿದೆ.
01048022a ದೃಷ್ಟಿರ್ಭ್ರಮತಿ ಮೇಽತೀವ ಹೃದಯಂ ದೀರ್ಯತೀವ ಚ।
01048022c ಪತಿಷ್ಯಾಮ್ಯವಶೋಽದ್ಯಾಹಂ ತಸ್ಮಿನ್ದೀಪ್ತೇ ವಿಭಾವಸೌ।।
ನನ್ನ ದೃಷ್ಟಿಯು ಭ್ರಮಿಸುತ್ತಿದೆ, ಹೃದಯವು ಒಡೆದುಹೋಗುತ್ತಿದೆ. ಯಾವುದೇ ರೀತಿಯ ಪ್ರತಿಭಟನೆಯನ್ನೂ ಮಾಡದೇ ನಾನು ಆ ಉರಿಯುತ್ತಿರುವ ಬೆಂಕಿಯಲ್ಲಿ ಬೀಳುವವನಿದ್ದೇನೆ.
01048023a ಪಾರಿಕ್ಷಿತಸ್ಯ ಯಜ್ಞೋಽಸೌ ವರ್ತತೇಽಸ್ಮಜ್ಜಿಘಾಂಸಯಾ।
01048023c ವ್ಯಕ್ತಂ ಮಯಾಪಿ ಗಂತವ್ಯಂ ಪಿತೃರಾಜನಿವೇಶನಂ।।
ನಮ್ಮ ಕುಲದ ವಿನಾಶಕ್ಕಾಗಿ ಪಾರಿಕ್ಷಿತನ ಯಜ್ಞವು ಪ್ರಾರಂಭವಾಗಿದೆ. ನಾನೂ ಕೂಡ ಪಿತೃರಾಜನ ಮನೆಗೆ ಹೋಗುತ್ತೇನೆನ್ನುವುದು ಖಚಿತವಾಗಿದೆ.
01048024a ಅಯಂ ಸ ಕಾಲಃ ಸಂಪ್ರಾಪ್ತೋ ಯದರ್ಥಮಸಿ ಮೇ ಸ್ವಸಃ।
01048024c ಜರತ್ಕಾರೋಃ ಪುರಾ ದತ್ತಾ ಸಾ ತ್ರಾಹ್ಯಸ್ಮಾನ್ಸಬಾಂಧವಾನ್।।
ತಂಗಿ! ನಿನ್ನನ್ನು ಯಾವ ಕಾರಣಕ್ಕಾಗಿ ಹಿಂದೆ ಜರತ್ಕಾರುವಿಗೆ ಕೊಟ್ಟಿದ್ದೆನೋ ಅದರ ಕಾಲ ಸಂಪ್ರಾಪ್ತಿಯಾಗಿದೆ. ಬಾಂಧವರೆಲ್ಲರೊಡನೆ ನಮ್ಮನ್ನು ರಕ್ಷಿಸು.
01048025a ಆಸ್ತೀಕಃ ಕಿಲ ಯಜ್ಞಂ ತಂ ವರ್ತಂತಂ ಭುಜಗೋತ್ತಮೇ।
01048025c ಪ್ರತಿಷೇತ್ಸ್ಯತಿ ಮಾಂ ಪೂರ್ವಂ ಸ್ವಯಮಾಹ ಪಿತಾಮಹಃ।।
ಭುಜಗೋತ್ತಮೇ! ಪೂರ್ವದಲ್ಲಿ ಪಿತಾಮಹನು ಸ್ವಯಂ ನನಗೆ ಆಸ್ತೀಕನೊಬ್ಬನೇ ನಡೆಯುತ್ತಿರುವ ಈ ಯಜ್ಞವನ್ನು ನಿಲ್ಲಿಸಬಲ್ಲನೆಂದು ಹೇಳಿದ್ದನು.
01048026a ತದ್ವತ್ಸೇ ಬ್ರೂಹಿ ವತ್ಸಂ ಸ್ವಂ ಕುಮಾರಂ ವೃದ್ಧಸಮ್ಮತಂ।
01048026c ಮಮಾದ್ಯ ತ್ವಂ ಸಭೃತ್ಯಸ್ಯ ಮೋಕ್ಷಾರ್ಥಂ ವೇದವಿತ್ತಮಂ।।
ಆದುದರಿಂದ ತಂಗಿ! ವೃದ್ಧರಿಂದಲೂ ಗೌರವಿಸಲ್ಪಡುತ್ತಿರುವ ನಿನ್ನ ಪ್ರೀತಿಯ ವೇದವಿತ್ತಮ ಮಗನಿಗೆ ಅವನನ್ನೇ ಅವಲಂಬಿಸಿರುವ ನಮ್ಮೆಲ್ಲರನ್ನೂ ಇಂದು ಈ ಸಂಕಟದಿಂದ ಬಿಡುಗಡೆಮಾಡಲು ಹೇಳು.””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಆಸ್ತೀಕಪರ್ವಣಿ ಸರ್ಪಸತ್ರೇ ವಾಸುಕಿವಾಕ್ಯೇ ಅಷ್ಟಚತ್ವಾರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಆಸ್ತೀಕಪರ್ವದಲ್ಲಿ ಸರ್ಪಸತ್ರದಲ್ಲಿ ವಾಸುಕಿವಾಕ್ಯದಲ್ಲಿ ನಲವತ್ತೆಂಟನೆಯ ಅಧ್ಯಾಯವು.