ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಆಸ್ತೀಕ ಪರ್ವ
ಅಧ್ಯಾಯ 47
ಸಾರ
ಜನಮೇಜಯನು ಸರ್ಪಯಾಗವನ್ನು ಕೈಗೊಂಡಿದುದು (1-10). ಯಾಗಕ್ಕೆ ವಿಘ್ನವಾಗಬಾರದೆಂದು ಯಾರನ್ನೂ ಒಳಬಿಡದಂತೆ ಆಜ್ಞೆ (11-15). ಯಾಗ ಪ್ರಾರಂಭ, ಸರ್ಪಗಳು ಯಜ್ಞಕುಂಡಕ್ಕೆ ಬಂದು ಬೀಳುವುದು (16-25).01047001 ಸೂತ ಉವಾಚ।
01047001a ಏವಮುಕ್ತ್ವಾ ತತಃ ಶ್ರೀಮಾನ್ಮಂತ್ರಿಭಿಶ್ಚಾನುಮೋದಿತಃ।
01047001c ಆರುರೋಹ ಪ್ರತಿಜ್ಞಾಂ ಸ ಸರ್ಪಸತ್ರಾಯ ಪಾರ್ಥಿವಃ।
ಸೂತನು ಹೇಳಿದನು: “ಹೀಗೆ ಹೇಳಿ ಮಂತ್ರಿಗಳಿಂದ ಅನುಮೋದಿಸಲ್ಪಟ್ಟ ಶ್ರೀಮಾನ್ ಪಾರ್ಥಿವನು ಸರ್ಪಸತ್ರದ ಪ್ರತಿಜ್ಞೆಯನ್ನು ಕೈಗೊಂಡನು.
01047001e ಬ್ರಹ್ಮನ್ಭರತಶಾರ್ದೂಲೋ ರಾಜಾ ಪಾರಿಕ್ಷಿತಸ್ತದಾ।।
01047002a ಪುರೋಹಿತಮಥಾಹೂಯ ಋತ್ವಿಜಂ ವಸುಧಾಧಿಪಃ।
01047002c ಅಬ್ರವೀದ್ವಾಕ್ಯಸಂಪನ್ನಃ ಸಂಪದರ್ಥಕರಂ ವಚಃ।।
ಬ್ರಾಹ್ಮಣ! ಭರತಶಾರ್ದೂಲ ಪರಿಕ್ಷಿತನ ಮಗ ವಸುಧಾಧಿಪ ರಾಜನು ಪುರೋಹಿತರನ್ನೂ ಮತ್ತು ಯಾಗ ಪ್ರವೀಣ ಋತ್ವಿಜರನ್ನೂ ಕರೆಯಿಸಿ ಈ ಸಂಪನ್ನ ಮಾತುಗಳನ್ನು ಹೇಳಿದನು:
01047003a ಯೋ ಮೇ ಹಿಂಸಿತವಾಂಸ್ತಾತಂ ತಕ್ಷಕಃ ಸ ದುರಾತ್ಮವಾನ್।
01047003c ಪ್ರತಿಕುರ್ಯಾಂ ಯಥಾ ತಸ್ಯ ತದ್ಭವಂತೋ ಬ್ರುವಂತು ಮೇ।।
“ನನ್ನ ತಂದೆಗೆ ಹಿಂಸೆಯನ್ನಿತ್ತ ದುರಾತ್ಮ ತಕ್ಷಕನ ಮೇಲೆ ಸೇಡನ್ನು ತೀರಿಸಿಕೊಳ್ಳಲು ಏನು ಮಾಡಬೇಕು ಎನ್ನುವುದನ್ನು ನೀವು ನನಗೆ ಹೇಳಿ.
01047004a ಅಪಿ ತತ್ಕರ್ಮ ವಿದಿತಂ ಭವತಾಂ ಯೇನ ಪನ್ನಗಂ।
01047004c ತಕ್ಷಕಂ ಸಂಪ್ರದೀಪ್ತೇಽಗ್ನೌ ಪ್ರಾಪ್ಸ್ಯೇಽಹಂ ಸಹಬಾಂಧವಂ।।
01047005a ಯಥಾ ತೇನ ಪಿತಾ ಮಹ್ಯಂ ಪೂರ್ವಂ ದಗ್ಧೋ ವಿಷಾಗ್ನಿನಾ।
01047005c ತಥಾಹಮಪಿ ತಂ ಪಾಪಂ ದಗ್ಧುಮಿಚ್ಛಾಮಿ ಪನ್ನಗಂ।।
ಬಂಧುಗಳ ಸಮೇತ ಪನ್ನಗ ತಕ್ಷಕನನ್ನು ಹಿಂದೆ ತನ್ನ ವಿಷಾಗ್ನಿಯಲ್ಲಿ ನನ್ನ ತಂದೆಯನ್ನು ಹೇಗೆ ಸುಟ್ಟನೋ ಹಾಗೆಯೇ ಉರಿಯುತ್ತಿರುವ ಅಗ್ನಿಯಲ್ಲಿ ಎಳೆದು ತಂದು ಹಾಕಬಲ್ಲ ಯೋಜನೆಯನ್ನು ಹೇಳಿ. ಆ ಪಾಪಿ ಪನ್ನಗನನ್ನು ನಾನೂ ಕೂಡ ಭಸ್ಮಮಾಡಲು ಬಯಸುತ್ತೇನೆ.”
01047006 ಋತ್ವಿಜ ಊಚುಃ।
01047006a ಅಸ್ತಿ ರಾಜನ್ಮಹತ್ಸತ್ರಂ ತ್ವದರ್ಥಂ ದೇವನಿರ್ಮಿತಂ।
01047006c ಸರ್ಪಸತ್ರಮಿತಿ ಖ್ಯಾತಂ ಪುರಾಣೇ ಕಥ್ಯತೇ ನೃಪ।।
ಋತ್ವಿಜರು ಹೇಳಿದರು: “ನಿನಗಾಗಿಯೇ ದೇವನಿರ್ಮಿತ ಮಹಾಸತ್ರವೊಂದಿದೆ ರಾಜನ್! ನೃಪ! ಇದು ಸರ್ಪಸತ್ರವೆಂದು ಪುರಾಣಗಳಲ್ಲಿ ವರ್ಣಿತಗೊಂಡಿದೆ.
01047007a ಆಹರ್ತಾ ತಸ್ಯ ಸತ್ರಸ್ಯ ತ್ವನ್ನಾನ್ಯೋಽಸ್ತಿ ನರಾಧಿಪ।
01047007c ಇತಿ ಪೌರಾಣಿಕಾಃ ಪ್ರಾಹುರಸ್ಮಾಕಂ ಚಾಸ್ತಿ ಸ ಕ್ರತುಃ।।
ನರಾಧಿಪ! ನಿನ್ನನ್ನು ಬಿಟ್ಟು ಬೇರೆ ಯಾರೂ ಈ ಸತ್ರವನ್ನು ಕೈಗೊಳ್ಳಲು ಅಸಮರ್ಥರು ಎಂದು ಪೌರಾಣಿಕರು ಹೇಳುತ್ತಾರೆ ಮತ್ತು ಇದನ್ನು ನಡೆಸುವ ಕ್ರಮವು ನಮ್ಮಲ್ಲಿದೆ.””
01047008 ಸೂತ ಉವಾಚ।
01047008a ಏವಮುಕ್ತಃ ಸ ರಾಜರ್ಷಿರ್ಮೇನೇ ಸರ್ಪಂ ಹಿ ತಕ್ಷಕಂ।
01047008c ಹುತಾಶನಮುಖಂ ದೀಪ್ತಂ ಪ್ರವಿಷ್ಟಮಿತಿ ಸತ್ತಮ।।
ಸೂತನು ಹೇಳಿದನು: “ಇದನ್ನು ಕೇಳಿದ ರಾಜರ್ಷಿ ಸತ್ತಮನು ಆ ಸರ್ಪ ತಕ್ಷಕನು ಉರಿಯುತ್ತಿರುವ ಅಗ್ನಿಯಲ್ಲಿ ಬೀಳುತ್ತಿರುವುದನ್ನು ಕಲ್ಪಿಸಿಕೊಂಡನು.
01047009a ತತೋಽಬ್ರವೀನ್ಮಂತ್ರವಿದಸ್ತಾನ್ರಾಜಾ ಬ್ರಾಹ್ಮಣಾಂಸ್ತದಾ।
01047009c ಆಹರಿಷ್ಯಾಮಿ ತತ್ಸತ್ರಂ ಸಂಭಾರಾಃ ಸಂಭ್ರಿಯಂತು ಮೇ।।
ಆಗ ಮಂತ್ರವಿದ್ವಾಂಸಿ ಬ್ರಾಹ್ಮಣರನ್ನುದ್ದೇಶಿಸಿ ರಾಜನು ಹೇಳಿದನು: “ಆ ಸತ್ರವನ್ನು ನಾನು ಕೈಗೊಳ್ಳುತ್ತೇನೆ. ಅದಕ್ಕೆ ಬೇಕಾದ ಸಲಕರಣೆಗಳನ್ನು ಸಂಗ್ರಹಿಸಿರಿ.”
01047010a ತತಸ್ತೇ ಋತ್ವಿಜಸ್ತಸ್ಯ ಶಾಸ್ತ್ರತೋ ದ್ವಿಜಸತ್ತಮ।
01047010c ದೇಶಂ ತಂ ಮಾಪಯಾಮಾಸುರ್ಯಜ್ಞಾಯತನಕಾರಣಾತ್।
01047010e ಯಥಾವಜ್ಜ್ಞಾನವಿದುಷಃ ಸರ್ವೇ ಬುದ್ಧ್ಯಾ ಪರಂ ಗತಾಃ।।
ಅನಂತರ ವಿಧಿ ವಿಧಾನಗಳನ್ನು ತಿಳಿದಿದ್ದ ದ್ವಿಜಸತ್ತಮ ಋತ್ವಿಜರು ಉತ್ಸಾಹದಿಂದ ಯಜ್ಞಾರ್ಥವಾಗಿ ಒಂದು ಆಯತ ಪ್ರದೇಶವನ್ನು ಶಾಸ್ತ್ರೋಕ್ತವಾಗಿ ಅಳೆದರು.
01047011a ಋದ್ಧ್ಯಾ ಪರಮಯಾ ಯುಕ್ತಮಿಷ್ಟಂ ದ್ವಿಜಗಣಾಯುತಂ।
01047011c ಪ್ರಭೂತಧನಧಾನ್ಯಾಧ್ಯಮೃತ್ವಿಗ್ಭಿಃ ಸುನಿವೇಶಿತಂ।।
ಅತ್ಯುತ್ತಮವಾಗಿ ಸಿಂಗರಿಸಲ್ಪಟ್ಟ ಆ ಪುಣ್ಯ ಪ್ರದೇಶವು ದ್ವಿಜಗಣಗಳಿಂದ ತುಂಬಿಕೊಂಡಿದ್ದು ಧನ-ದಾನ್ಯಗಳಿಂದ ಸುಂದರವಾಗಿ ರಚಿಸಲ್ಪಟ್ಟಿತ್ತು.
01047012a ನಿರ್ಮಾಯ ಚಾಪಿ ವಿಧಿವದ್ಯಜ್ಞಾಯತನಮೀಪ್ಸಿತಂ।
01047012c ರಾಜಾನಂ ದೀಕ್ಷಯಾಮಾಸುಃ ಸರ್ಪಸತ್ರಾಪ್ತಯೇ ತದಾ।।
ಈ ರೀತಿ ವಿಧಿವತ್ತಾಗಿ ಯಜ್ಞಶಾಲೆಯನ್ನು ನಿರ್ಮಿಸಿ ಅಲ್ಲಿ ರಾಜನಿಗೆ ಸರ್ಪಸತ್ರದ ದೀಕ್ಷೆಯನ್ನು ಕೊಡಿಸಿದರು.
01047013a ಇದಂ ಚಾಸೀತ್ತತ್ರ ಪೂರ್ವಂ ಸರ್ಪಸತ್ರೇ ಭವಿಷ್ಯತಿ।
01047013c ನಿಮಿತ್ತಂ ಮಹದುತ್ಪನ್ನಂ ಯಜ್ಞವಿಘ್ನಕರಂ ತದಾ।।
ಆದರೆ ಸರ್ಪಸತ್ರವು ನಡೆಯುವುದರ ಮೊದಲೇ ಯಜ್ಞಕ್ಕೆ ವಿಘ್ನವನ್ನು ಸೂಚಿಸುವ ಮಹತ್ತರ ಶಕುನವು ಕಾಣಿಸಿಕೊಂಡಿತು.
01047014a ಯಜ್ಞಸ್ಯಾಯತನೇ ತಸ್ಮಿನ್ಕ್ರಿಯಮಾಣೇ ವಚೋಽಬ್ರವೀತ್।
01047014c ಸ್ಥಪತಿರ್ಬುದ್ಧಿಸಂಪನ್ನೋ ವಾಸ್ತುವಿದ್ಯಾವಿಶಾರದಃ।।
01047015a ಇತ್ಯಬ್ರವೀತ್ಸೂತ್ರಧಾರಃ ಸೂತಃ ಪೌರಾಣಿಕಸ್ತದಾ।
01047015c ಯಸ್ಮಿನ್ದೇಶೇ ಚ ಕಾಲೇ ಚ ಮಾಪನೇಯಂ ಪ್ರವರ್ತಿತಾ।
01047015e ಬ್ರಾಹ್ಮಣಂ ಕಾರಣಂ ಕೃತ್ವಾ ನಾಯಂ ಸಂಸ್ಥಾಸ್ಯತೇ ಕ್ರತುಃ।।
ಯಜ್ಞಶಾಲೆಯನ್ನು ಅಳೆಯುತ್ತಿರುವಾಗ ಅಲ್ಲಿಯೇ ನಿಂತಿದ್ದ ಓರ್ವ ಬುದ್ಧಿಸಂಪನ್ನ ವಾಸ್ತುವಿದ್ಯಾವಿಶಾರದ ಸೂತ್ರಧಾರ ಸೂತ ಪೌರಾಣಿಕನು ಹೇಳಿದನು: “ಯಾವ ಕಾಲ ಪ್ರದೇಶದಲ್ಲಿ ಅಳತೆಯನ್ನು ತೆಗೆದುಕೊಳ್ಳಲಾಗುತ್ತಿದೆಯೋ ಅಲ್ಲಿ ಓರ್ವ ಬ್ರಾಹ್ಮಣನ ಕಾರಣದಿಂದಾಗಿ ಸರ್ಪಸತ್ರವು ಸಂಪೂರ್ಣವಾಗುವುದಿಲ್ಲ.”
01047016a ಏತಚ್ಛ್ರುತ್ವಾ ತು ರಾಜಾ ಸ ಪ್ರಾಗ್ದೀಕ್ಷಾಕಾಲಮಬ್ರವೀತ್।
01047016c ಕ್ಷತ್ತಾರಂ ನೇಹ ಮೇ ಕಶ್ಚಿದಜ್ಞಾತಃ ಪ್ರವಿಶೇದಿತಿ।।
ಇದನ್ನು ಕೇಳಿದ ರಾಜನು ದೀಕ್ಷೆ ತೆಗೆದುಕೊಳ್ಳುವ ಮೊದಲೇ “ನನಗೆ ಅನುಜ್ಞೆಯಿಲ್ಲದೇ ಯಾರಿಗೂ ಈ ಸ್ಥಳಕ್ಕೆ ಪ್ರವೇಶವಿಲ್ಲ!”ಎಂದು ಹೇಳಿದನು.
01047017a ತತಃ ಕರ್ಮ ಪ್ರವವೃತೇ ಸರ್ಪಸತ್ರೇ ವಿಧಾನತಃ।
01047017c ಪರ್ಯಕ್ರಾಮಂಶ್ಚ ವಿಧಿವತ್ಸ್ವೇ ಸ್ವೇ ಕರ್ಮಣಿ ಯಾಜಕಾಃ।।
01047018a ಪರಿಧಾಯ ಕೃಷ್ಣವಾಸಾಂಸಿ ಧೂಮಸಂರಕ್ತಲೋಚನಾಃ।
01047018c ಜುಹುವುರ್ಮಂತ್ರವಚ್ಚೈವ ಸಮಿದ್ಧಂ ಜಾತವೇದಸಂ।।
ಅನಂತರ ವಿಧಿವತ್ತಾಗಿ ಸರ್ಪಸತ್ರದ ಕರ್ಮಗಳು ಪ್ರಾರಂಭವಾದವು. ಪ್ರತಿಯೊಬ್ಬ ಯಾಜಕನೂ ತನ್ನ ತನ್ನ ಕರ್ಮಾಂಗಗಳನ್ನು ವಿಧಿವತ್ತಾಗಿ ಮಾಡತೊಡಗಿದನು. ಎಲ್ಲರೂ ಕಪ್ಪು ಬಟ್ಟೆಗಳನ್ನು ಉಟ್ಟಿದ್ದರು ಮತ್ತು ಹೊಗೆಯಿಂದ ಅವರ ಕಣ್ಣುಗಳು ಕೆಂಪಾಗಿದ್ದವು. ಅವರು ಮಂತ್ರೋಚ್ಛಾರಣೆ ಮಾಡುತ್ತಾ ಸಮಿತ್ತನ್ನು ಜಾತವೇದಸನಲ್ಲಿ ಹಾಕುತ್ತಿದ್ದರು.
01047019a ಕಂಪಯಂತಶ್ಚ ಸರ್ವೇಷಾಮುರಗಾಣಾಂ ಮನಾಂಸಿ ತೇ।
01047019c ಸರ್ಪಾನಾಜುಹುವುಸ್ತತ್ರ ಸರ್ವಾನಗ್ನಿಮುಖೇ ತದಾ।।
ಸರ್ಪಗಳನ್ನೆಲ್ಲವನ್ನೂ ಅಗ್ನಿಯ ಬಾಯಿಯಲ್ಲಿ ಆಹುತಿಯನ್ನಾಗಿ ಹಾಕುತ್ತಾ ಸರ್ವ ಸರ್ಪಗಳ ಮನಸ್ಸಿನಲ್ಲಿ ಆತಂಕವನ್ನು ಹುಟ್ಟಿಸಿದರು.
01047020a ತತಃ ಸರ್ಪಾಃ ಸಮಾಪೇತುಃ ಪ್ರದೀಪ್ತೇ ಹವ್ಯವಾಹನೇ।
01047020c ವಿವೇಷ್ಟಮಾನಾಃ ಕೃಪಣಾ ಆಹ್ವಯಂತಃ ಪರಸ್ಪರಂ।।
ಆರ್ತರಾಗಿ ಪರಸ್ಪರರನ್ನು ಕೂಗಿ ಕರೆಯುತ್ತಾ, ಒಂದಕ್ಕೊಂದು ಸುತ್ತಿಕೊಂಡಿದ್ದ ಸರ್ಪಗಳು ಒಂದೊಂದೇ ಉರಿಯುತ್ತಿರುವ ಹವ್ಯವಾಹನನಲ್ಲಿ ಬಂದು ಬೀಳತೊಡಗಿದವು.
01047021a ವಿಸ್ಫುರಂತಃ ಶ್ವಸಂತಶ್ಚ ವೇಷ್ಟಯಂತಸ್ತಥಾ ಪರೇ।
01047021c ಪುಚ್ಛೈಃ ಶಿರೋಭಿಶ್ಚ ಭೃಶಂ ಚಿತ್ರಭಾನುಂ ಪ್ರಪೇದಿರೇ।।
ಭುಸಗುಟ್ಟುತ್ತಾ, ಉಬ್ಬಿಕೊಂಡು, ತಲೆಗಳಿಂದ ಅಥವಾ ಬಾಲಗಳಿಂದ ಒಂದು ಮತ್ತೊಂದನ್ನು ಸುತ್ತಿಕೊಳ್ಳುತ್ತಾ, ತಲೆ ಮುಂದಾಗಿ ಅಥವಾ ಬಾಲ ಮುಂದಾಗಿ ಉರಿಯುತ್ತಿರುವ ಬೆಂಕಿಗೆ ಬಂದು ಬೀಳತೊಡಗಿದವು.
01047022a ಶ್ವೇತಾಃ ಕೃಷ್ಣಾಶ್ಚ ನೀಲಾಶ್ಚ ಸ್ಥವಿರಾಃ ಶಿಶವಸ್ತಥಾ।
01047022c ರುವಂತೋ ಭೈರವಾನ್ನಾದಾನ್ಪೇತುರ್ದೀಪ್ತೇ ವಿಭಾವಸೌ।।
ಬಿಳಿದಾದ, ಕಪ್ಪಾದ, ನೀಲವರ್ಣದ, ಮುದಿಯಾದ, ಹರಯದ ಸರ್ಪಗಳು ರೋದಿಸುತ್ತಾ ಭೈರವ ನಿನಾದಗೈಯುತ್ತಾ, ಭುಗಿಲೆನ್ನುತ್ತಿರುವ ಬೆಂಕಿಗೆ ಬಂದು ಬೀಳತೊಡಗಿದವು.
01047023a ಏವಂ ಶತಸಹಸ್ರಾಣಿ ಪ್ರಯುತಾನ್ಯರ್ಬುದಾನಿ ಚ।
01047023c ಅವಶಾನಿ ವಿನಷ್ಟಾನಿ ಪನ್ನಗಾನಾಂ ದ್ವಿಜೋತ್ತಮ।।
ದ್ವಿಜೋತ್ತಮ! ಈ ರೀತಿ ಲಕ್ಷಗಟ್ಟಲೆ ಕೋಟಿಗಟ್ಟಲೆ ಸರ್ಪಗಳು ನಿಶ್ಯಕ್ತಗೊಂಡು ವಿನಾಶಹೊಂದಿದವು.
01047024a ಇಂದುರಾ ಇವ ತತ್ರಾನ್ಯೇ ಹಸ್ತಿಹಸ್ತಾ ಇವಾಪರೇ।
01047024c ಮತ್ತಾ ಇವ ಚ ಮಾತಂಗಾ ಮಹಾಕಾಯಾ ಮಹಾಬಲಾಃ।।
ಕೆಲವು ಇಲಿಗಳಂತೆ ಸಣ್ಣವಾಗಿದ್ದರೆ ಕೆಲವು ಆನೆಗಳಷ್ಟು ದೊಡ್ಡವಾಗಿದ್ದವು, ಮಾತಂಗಗಳಂತೆ ಉನ್ಮತ್ತಗೊಂಡು ಮಹಾಬಲಶಾಲಿಗಳೂ ಮಹಾಕಾಯರೂ ಆಗಿದ್ದರು.
01047025a ಉಚ್ಚಾವಚಾಶ್ಚ ಬಹವೋ ನಾನಾವರ್ಣಾ ವಿಷೋಲ್ಬಣಾಃ।
01047025c ಘೋರಾಶ್ಚ ಪರಿಘಪ್ರಖ್ಯಾ ದಂದಶೂಕಾ ಮಹಾಬಲಾಃ।
01047025e ಪ್ರಪೇತುರಗ್ನಾವುರಗಾ ಮಾತೃವಾಗ್ದಂಡಪೀಡಿತಾಃ।।
ತಾಯಿಯ ಶಾಪದಿಂದ ಪೀಡಿತರಾಗಿ ನಾನಾ ಬಣ್ಣದ, ಕಡುವಿಷಗಳ ಘೋರ, ಕಬ್ಬಿಣದ ಹಲ್ಲುಗಳನ್ನು ಹೊಂದಿದ್ದ ಪರಿಘಗಳಂತಿರುವ ಬಹಳಷ್ಟು ಮಹಾಬಲಶಾಲೀ ಸರ್ಪಗಳು ಸುಟ್ಟು ಭಸ್ಮವಾದವು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಆಸ್ತೀಕಪರ್ವಣಿ ಸರ್ಪಸತ್ರೋಪಕ್ರಮೇ ಸಪ್ತಚತ್ವಾರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಆಸ್ತೀಕಪರ್ವದಲ್ಲಿ ಸರ್ಪಸತ್ರೋಪಕ್ರಮದಲ್ಲಿ ನಲವತ್ತೇಳನೆಯ ಅಧ್ಯಾಯವು.