ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಆಸ್ತೀಕ ಪರ್ವ
ಅಧ್ಯಾಯ 46
ಸಾರ
ತಕ್ಷಕನು ಆಸೆತೋರಿಸಿ ಕಾಶ್ಯಪನನ್ನು ಹಿಂದೆ ಕಳುಹಿಸಿದುದರ ಕುರಿತು ವರದಿ ಮತ್ತು ಸಾಕ್ಷಿ (1-25). ತಕ್ಷಕನ ಸೇಡು ತೀರಿಸಲು ಜನಮೇಜಯನು ಸರ್ಪಗಳ ನಾಶದ ಕುರಿತು ನಿಶ್ಚಯಿಸಿದುದು (26-41).01046001 ಮಂತ್ರಿಣ ಊಚುಃ।
01046001a ತತಃ ಸ ರಾಜಾ ರಾಜೇಂದ್ರ ಸ್ಕಂಧೇ ತಸ್ಯ ಭುಜಂಗಮಂ।
01046001c ಮುನೇಃ ಕ್ಷುತ್ಕ್ಷಾಮ ಆಸಜ್ಯ ಸ್ವಪುರಂ ಪುನರಾಯಯೌ।।
ಮಂತ್ರಿಗಳು ಹೇಳಿದರು: “ಹಸಿದು ಆಯಾಸಗೊಂಡಿದ್ದ ರಾಜೇಂದ್ರನು ಆ ಮುನಿಯ ಭುಜದ ಮೇಲೆ ಸರ್ಪವನ್ನು ಏರಿಸಿ ತನ್ನ ನಗರಿಗೆ ಮರಳಿದನು.
01046002a ಋಷೇಸ್ತಸ್ಯ ತು ಪುತ್ರೋಽಭೂದ್ಗವಿ ಜಾತೋ ಮಹಾಯಶಾಃ।
01046002c ಶೃಂಗೀ ನಾಮ ಮಹಾತೇಜಾಸ್ತಿಗ್ಮವೀರ್ಯೋಽತಿಕೋಪನಃ।।
ಆ ಋಷಿಗೆ ಹಸುವಿನಲ್ಲಿ ಹುಟ್ಟಿದ್ದ ಮಹಾಯಶಸ್ವಿ, ಮಹಾತೇಜಸ್ವಿ, ತಿಗ್ಮವೀರ್ಯ, ಮತ್ತು ಅತಿಕೋಪಿ ಶೃಂಗಿ ಎಂಬ ಹೆಸರಿನ ಮಗನಿದ್ದನು.
01046003a ಬ್ರಹ್ಮಾಣಂ ಸೋಽಭ್ಯುಪಾಗಮ್ಯ ಮುನಿಃ ಪೂಜಾಂ ಚಕಾರ ಹ।
01046003c ಅನುಜ್ಞಾತೋ ಗತಸ್ತತ್ರ ಶೃಂಗೀ ಶುಶ್ರಾವ ತಂ ತದಾ।
01046003e ಸಖ್ಯುಃ ಸಕಾಶಾತ್ಪಿತರಂ ಪಿತ್ರಾ ತೇ ಧರ್ಷಿತಂ ತಥಾ।।
01046004a ಮೃತಂ ಸರ್ಪಂ ಸಮಾಸಕ್ತಂ ಪಿತ್ರಾ ತೇ ಜನಮೇಜಯ।
01046004c ವಹಂತಂ ಕುರುಶಾರ್ದೂಲ ಸ್ಕಂಧೇನಾನಪಕಾರಿಣಂ।।
ಜನಮೇಜಯ! ಕುರುಶಾರ್ದೂಲ! ಆ ಮುನಿಯು ಬ್ರಹ್ಮನಲ್ಲಿಗೆ ಹೋಗಿ ಅವನ ಪೂಜೆಯನ್ನು ಮಾಡುತ್ತಿದ್ದನು. ಒಮ್ಮೆ ಅವನು ಮರಳಿ ಬರುತ್ತಿರುವಾಗ ಅವನ ಗೆಳೆಯನು “ನಿನ್ನ ತಂದೆಯು ಮೃತ ಸರ್ಪವೊಂದನ್ನು ಭುಜಗಳ ಮೇಲಿರಿಸಿಕೊಂಡಿದ್ದಾನೆ!” ಎಂದು ಅವನ ತಂದೆಗೆ ಆದ ಅಪಮಾನದ ಕುರಿತು ಹೇಳಿದನು.
01046005a ತಪಸ್ವಿನಮತೀವಾಥ ತಂ ಮುನಿಪ್ರವರಂ ನೃಪ।
01046005c ಜಿತೇಂದ್ರಿಯಂ ವಿಶುದ್ಧಂ ಚ ಸ್ಥಿತಂ ಕರ್ಮಣ್ಯಥಾದ್ಭುತೇ।।
01046006a ತಪಸಾ ದ್ಯೋತಿತಾತ್ಮಾನಂ ಸ್ವೇಷ್ವಂಗೇಷು ಯತಂ ತಥಾ।।
01046006c ಶುಭಾಚಾರಂ ಶುಭಕಥಂ ಸುಸ್ಥಿರಂ ತಮಲೋಲುಪಂ।।
01046007a ಅಕ್ಷುದ್ರಮನಸೂಯಂ ಚ ವೃದ್ಧಂ ಮೌನವ್ರತೇ ಸ್ಥಿತಂ।
01046007c ಶರಣ್ಯಂ ಸರ್ವಭೂತಾನಾಂ ಪಿತ್ರಾ ವಿಪ್ರಕೃತಂ ತವ।।
ನೃಪ! ನಿನ್ನ ತಂದೆಯು ಓರ್ವ ಮುನಿಪ್ರವರ, ಜಿತೇಂದ್ರಿಯ, ವಿಶುದ್ಧ, ಅದ್ಭುತಕರ್ಮನಿರತ, ತಪಸ್ಸಿನಿಂದ ಆತ್ಮ ಮತ್ತು ಅಂಗಗಳು ಕಾಂತಿಯುಕ್ತವಾಗಿರುವ, ಶುಭಾಚಾರಿ, ಶುಭವಾಚಕ, ಸುಸ್ಥಿರ, ತಮಲೋಲುಪ, ಅಕ್ಷುದ್ರ, ಅನಸೂಯ, ವೃದ್ಧ, ಮೌನವ್ರತದಲ್ಲಿದ್ದ, ಸರ್ವಭೂತಗಳ ಶರಣ್ಯನಾದ ಆ ಉಗ್ರತಪಸ್ವಿಯನ್ನು ಅಪಮಾನಿಸಿದ್ದನು.
01046008a ಶಶಾಪಾಥ ಸ ತಚ್ಛ್ರುತ್ವಾ ಪಿತರಂ ತೇ ರುಷಾನ್ವಿತಃ।
01046008c ಋಷೇಃ ಪುತ್ರೋ ಮಹಾತೇಜಾ ಬಾಲೋಽಪಿ ಸ್ಥವಿರೈರ್ವರಃ।।
ಇದನ್ನು ಕೇಳಿ ರೋಷಾನ್ವಿತನಾಗಿ ಬಾಲಕನಾಗಿದ್ದರೂ ಶ್ರೇಷ್ಠನಾಗಿದ್ದ ಮಹಾತೇಜಸ್ವಿ ಋಷಿಪುತ್ರನು ನಿನ್ನ ತಂದೆಯನ್ನು ಶಪಿಸಿದನು.
01046009a ಸ ಕ್ಷಿಪ್ರಮುದಕಂ ಸ್ಪೃಷ್ಟ್ವಾ ರೋಷಾದಿದಮುವಾಚ ಹ।
01046009c ಪಿತರಂ ತೇಽಭಿಸಂಧಾಯ ತೇಜಸಾ ಪ್ರಜ್ವಲನ್ನಿವ।।
ತಕ್ಷಣವೇ ಅವನು ನೀರನ್ನು ಸ್ಪರ್ಷಿಸಿ ರೋಷದಿಂದ ಪ್ರಜ್ವಲಿಸುವ ತೇಜಸ್ಸುಳ್ಳವನಾಗಿ ನಿನ್ನ ತಂದೆಯನ್ನುದ್ದೇಶಿಸಿ ಹೇಳಿದನು:
01046010a ಅನಾಗಸಿ ಗುರೌ ಯೋ ಮೇ ಮೃತಂ ಸರ್ಪಮವಾಸೃಜತ್।
01046010c ತಂ ನಾಗಸ್ತಕ್ಷಕಃ ಕ್ರುದ್ಧಸ್ತೇಜಸಾ ಸಾದಯಿಷ್ಯತಿ।
01046010e ಸಪ್ತರಾತ್ರಾದಿತಃ ಪಾಪಂ ಪಶ್ಯ ಮೇ ತಪಸೋ ಬಲಂ।।
“ಮೃತಸರ್ಪವನ್ನು ಯಾವ ಪಾಪಿಯು ನನ್ನ ಗುರುವಿಗೆ ತೊಡಿಸಿದ್ದಾನೆಯೋ ಅವನನ್ನು ನಾಗ ತಕ್ಷಕನು ಇಂದಿನಿಂದ ಏಳು ರಾತ್ರಿಗಳೊಳಗೆ ತನ್ನ ವಿಷದಿಂದ ಸುಟ್ಟುಹಾಕುತ್ತಾನೆ. ನನ್ನ ತಪೋಬಲವನ್ನು ಆ ಪಾಪಿಯು ನೋಡಲಿ!”
01046011a ಇತ್ಯುಕ್ತ್ವಾ ಪ್ರಯಯೌ ತತ್ರ ಪಿತಾ ಯತ್ರಾಸ್ಯ ಸೋಽಭವತ್।
01046011c ದೃಷ್ಟ್ವಾ ಚ ಪಿತರಂ ತಸ್ಮೈ ಶಾಪಂ ತಂ ಪ್ರತ್ಯವೇದಯತ್।।
ಹೀಗೆ ಹೇಳಿ ಅವನು ತನ್ನ ತಂದೆಯಿದ್ದಲ್ಲಿಗೆ ಬಂದು ಅವನನ್ನು ಕಂಡು ಶಾಪದ ಕುರಿತು ವರದಿ ಮಾಡಿದನು.
01046012a ಸ ಚಾಪಿ ಮುನಿಶಾರ್ದೂಲಃ ಪ್ರೇಷಯಾಮಾಸ ತೇ ಪಿತುಃ।
01046012c ಶಪ್ತೋಽಸಿ ಮಮ ಪುತ್ರೇಣ ಯತ್ತೋ ಭವ ಮಹೀಪತೇ।
01046012e ತಕ್ಷಕಸ್ತ್ವಾಂ ಮಹಾರಾಜ ತೇಜಸಾ ಸಾದಯಿಷ್ಯತಿ।।
ಆಗ ಆ ಮುನಿಶಾರ್ದೂಲನು ನಿನ್ನ ತಂದೆಗೆ ಒಂದು ಸಂದೇಶವನ್ನು ಕಳುಹಿಸಿದನು: “ಮಹೀಪತೇ! ನೀನು ನನ್ನ ಪುತ್ರನಿಂದ ಶಪಿಸಲ್ಪಟ್ಟಿದ್ದೀಯೆ. ಮಹಾರಾಜ! ತಕ್ಷಕನು ತನ್ನ ತೇಜಸ್ಸಿನಿಂದ ನಿನ್ನನ್ನು ಸುಡಲಿದ್ದಾನೆ.”
01046013a ಶ್ರುತ್ವಾ ತು ತದ್ವಚೋ ಘೋರಂ ಪಿತಾ ತೇ ಜನಮೇಜಯ।
01046013c ಯತ್ತೋಽಭವತ್ಪರಿತ್ರಸ್ತಸ್ತಕ್ಷಕಾತ್ಪನ್ನಗೋತ್ತಮಾತ್।।
ಜನಮೇಜಯ! ಆ ಘೋರ ವಚನಗಳನ್ನು ಕೇಳಿದ ನಿನ್ನ ತಂದೆಯು ಪನ್ನಗೋತ್ತಮ ತಕ್ಷಕನಿಂದ ತಪ್ಪಿಸಿಕೊಳ್ಳಲು ಎಲ್ಲಾ ತರಹದ ಮುಂಜಾಗರೂಕತೆಯನ್ನು ಕೈಗೊಂಡನು.
01046014a ತತಸ್ತಸ್ಮಿಂಸ್ತು ದಿವಸೇ ಸಪ್ತಮೇ ಸಮುಪಸ್ಥಿತೇ।
01046014c ರಾಜ್ಞಃ ಸಮೀಪಂ ಬ್ರಹ್ಮರ್ಷಿಃ ಕಾಶ್ಯಪೋ ಗಂತುಮೈಚ್ಛತ।।
ಏಳನೆಯ ದಿವಸವು ಬಂದಾಗ ರಾಜನ ಬಳಿಗೆ ಬ್ರಹ್ಮರ್ಷಿ ಕಾಶ್ಯಪನು ಬರಲು ಉತ್ಸುಕನಾಗಿದ್ದನು.
01046015a ತಂ ದದರ್ಶಾಥ ನಾಗೇಂದ್ರಃ ಕಾಶ್ಯಪಂ ತಕ್ಷಕಸ್ತದಾ।
01046015c ತಮಬ್ರವೀತ್ಪನ್ನಗೇಂದ್ರಃ ಕಾಶ್ಯಪಂ ತ್ವರಿತಂ ವ್ರಜನ್।
01046015e ಕ್ವ ಭವಾಂಸ್ತ್ವರಿತೋ ಯಾತಿ ಕಿಂ ಚ ಕಾರ್ಯಂ ಚಿಕೀರ್ಷತಿ।।
ಆಗ ನಾಗೇಂದ್ರ ತಕ್ಷಕನು ಕಾಶ್ಯಪನನ್ನು ನೋಡಿದನು. ಅವಸರದಲ್ಲಿ ಬರುತ್ತಿದ್ದ ಕಾಶ್ಯಪನಲ್ಲಿ ಪನ್ನಗೇಂದ್ರನು ಕೇಳಿದನು: “ಇಷ್ಟೊಂದು ಅವಸರದಲ್ಲಿ ನೀನು ಎಲ್ಲಿಗೆ ಹೋಗುತ್ತಿರುವೆ ಮತ್ತು ಅಲ್ಲಿ ಏನು ಕೆಲಸವಿದೆ?”
01046016 ಕಾಶ್ಯಪ ಉವಾಚ।
01046016a ಯತ್ರ ರಾಜಾ ಕುರುಶ್ರೇಷ್ಠಃ ಪರಿಕ್ಷಿನ್ನಾಮ ವೈ ದ್ವಿಜ।
01046016c ತಕ್ಷಕೇಣ ಭುಜಂಗೇನ ಧಕ್ಷ್ಯತೇ ಕಿಲ ತತ್ರ ವೈ।।
01046017a ಗಚ್ಛಾಮ್ಯಹಂ ತಂ ತ್ವರಿತಃ ಸದ್ಯಃ ಕರ್ತುಮಪಜ್ವರಂ।
01046017c ಮಯಾಭಿಪನ್ನಂ ತಂ ಚಾಪಿ ನ ಸರ್ಪೋ ಧರ್ಷಯಿಷ್ಯತಿ।।
ಕಾಶ್ಯಪನು ಹೇಳಿದನು: “ದ್ವಿಜನೇ! ನಾಗ ತಕ್ಷಕನು ಕಚ್ಚಲಿರುವ ಪರಿಕ್ಷಿತನೆಂಬ ಹೆಸರಿನ ಕುರುಶ್ರೇಷ್ಠ ರಾಜನಲ್ಲಿಗೆ ಅವನು ಆ ಸರ್ಪದ ಕಡಿತದಿಂದ ಸಾಯದ ಹಾಗೆ ಚಿಕಿತ್ಸೆಯನ್ನು ನೀಡಲು ಅವಸರದಲ್ಲಿ ಹೋಗುತ್ತಿದ್ದೇನೆ.”
01046018 ತಕ್ಷಕ ಉವಾಚ।
01046018a ಕಿಮರ್ಥಂ ತಂ ಮಯಾ ದಷ್ಟಂ ಸಂಜೀವಯಿತುಮಿಚ್ಛಸಿ।
01046018c ಬ್ರೂಹಿ ಕಾಮಮಹಂ ತೇಽದ್ಯ ದಧ್ಮಿಸ್ವಂ ವೇಷ್ಮಗಮ್ಯತಾಂ।।
ತಕ್ಷಕನು ಹೇಳಿದನು: “ನಾನು ಕಚ್ಚುವವನನ್ನು ನೀನು ಬದುಕಿಸಲು ಏಕೆ ಬಯಸುತ್ತೀಯೆ? ನಿನ್ನ ಆಸೆಯೇನೆಂಬುದನ್ನು ಹೇಳು. ನೀನು ಅಲ್ಲಿಗೆ ಯಾವುದರ ಆಸೆಯಿಂದ ಹೋಗುತ್ತಿದ್ದೀಯೋ ಅದನ್ನು ನಾನೇ ಕೊಡುತ್ತೇನೆ.””
01046019 ಮಂತ್ರಿಣ ಊಚುಃ।
01046019a ಧನಲಿಪ್ಸುರಹಂ ತತ್ರ ಯಾಮೀತ್ಯುಕ್ತಶ್ಚ ತೇನ ಸಃ।
01046019c ತಮುವಾಚ ಮಹಾತ್ಮಾನಂ ಮಾನಯನ್ ಶ್ಲಕ್ಷ್ಣಯಾ ಗಿರಾ।।
ಮಂತ್ರಿಗಳು ಹೇಳಿದರು: ““ಹಣದ ಆಸೆಯಿಂದ ಅಲ್ಲಿಗೆ ಹೋಗುತ್ತಿದ್ದೇನೆ” ಎಂದು ಹೇಳಲು ಅವನು ಆ ಮಹಾತ್ಮನಿಗೆ ಈ ಗೌರವಯುಕ್ತ ಶ್ಲಾಘನೀಯ ಮಾತುಗಳನ್ನಾಡಿದನು:
01046020a ಯಾವದ್ಧನಂ ಪ್ರಾರ್ಥಯಸೇ ತಸ್ಮಾದ್ರಾಜ್ಞಸ್ತತೋಽಧಿಕಂ।
01046020c ಗೃಹಾಣ ಮತ್ತ ಏವ ತ್ವಂ ಸಂನಿವರ್ತಸ್ವ ಚಾನಘ।।
“ಅನಘ! ನೀನು ರಾಜನಿಂದ ಎಷ್ಟು ಧನವನ್ನು ಕೇಳ ಬಯಸುತ್ತೀಯೋ ಅದಕ್ಕೂ ಅಧಿಕವಾದ ಧನವನ್ನು ನನ್ನಿಂದ ಸ್ವೀಕರಿಸಿ ಹಿಂದಿರುಗು.
01046021a ಸ ಏವಮುಕ್ತೋ ನಾಗೇನ ಕಾಶ್ಯಪೋ ದ್ವಿಪದಾಂ ವರಃ।
01046021c ಲಬ್ಧ್ವಾ ವಿತ್ತಂ ನಿವವೃತೇ ತಕ್ಷಕಾದ್ಯಾವದೀಪ್ಸಿತಂ।।
ನಾಗೇಂದ್ರನ ಆ ಮಾತುಗಳನ್ನು ಕೇಳಿ ದ್ವಿಜಶ್ರೇಷ್ಠ ಕಾಶ್ಯಪನು ತನಗೆ ಬೇಕಾದಷ್ಟು ಧನವನ್ನು ತಕ್ಷಕನಿಂದ ಪಡೆದು ಹಿಂದಿರುಗಿದನು.
01046022a ತಸ್ಮಿನ್ಪ್ರತಿಗತೇ ವಿಪ್ರೇ ಚಧ್ಮನೋಪೇತ್ಯ ತಕ್ಷಕಃ।
01046022c ತಂ ನೃಪಂ ನೃಪತಿಶ್ರೇಷ್ಠ ಪಿತರಂ ಧಾರ್ಮಿಕಂ ತವ।।
01046023a ಪ್ರಾಸಾದಸ್ಥಂ ಯತ್ತಮಪಿ ದಗ್ಧವಾನ್ವಿಷವಹ್ನಿನಾ।
01046023c ತತಸ್ತ್ವಂ ಪುರುಷವ್ಯಾಘ್ರ ವಿಜಯಾಯಾಭಿಷೇಚಿತಃ।।
ಆ ವಿಪ್ರನು ಹೊರಟುಹೋದ ನಂತರ ತಕ್ಷಕನು ಅರಮನೆಯಲ್ಲಿದ್ದ ನಿನ್ನ ತಂದೆ ನೃಪತಿಶ್ರೇಷ್ಠ ಧಾರ್ಮಿಕ ನೃಪನಲ್ಲಿಗೆ ರೂಪ ಬದಲಾಯಿಸಿಕೊಂಡು ಹೋಗಿ, ಅವನನ್ನು ತನ್ನ ವಿಷಾಗ್ನಿಯಿಂದ ಸುಟ್ಟುಹಾಕಿದನು. ಪುರುಷವ್ಯಾಘ್ರ! ಇದರ ನಂತರ ನಿನಗೆ ರಾಜಾಭಿಷೇಕವನ್ನು ಮಾಡಲಾಯಿತು.
01046024a ಏತದ್ದೃಷ್ಟಂ ಶ್ರುತಂ ಚಾಪಿ ಯಥಾವನ್ನೃಪಸತ್ತಮ।
01046024c ಅಸ್ಮಾಭಿರ್ನಿಖಿಲಂ ಸರ್ವಂ ಕಥಿತಂ ತೇ ಸುದಾರುಣಂ।।
ನೃಪಸತ್ತಮ! ನಾವು ನೋಡಿದ್ದುದನ್ನು ಮತ್ತು ಕೇಳಿದ್ದುದೆಲ್ಲವನ್ನೂ ದಾರುಣವಾಗಿದ್ದರೂ ಯಥಾವತ್ತಾಗಿ ನಿನಗೆ ತಿಳಿಸಿದ್ದೇವೆ.
01046025a ಶ್ರುತ್ವಾ ಚೈತಂ ನೃಪಶ್ರೇಷ್ಠ ಪಾರ್ಥಿವಸ್ಯ ಪರಾಭವಂ।
01046025c ಅಸ್ಯ ಚರ್ಷೇರುತ್ತಂಕಸ್ಯ ವಿಧತ್ಸ್ವ ಯದನಂತರಂ।।
ನೃಪಶ್ರೇಷ್ಠ! ಪಾರ್ಥಿವನ ಮತ್ತು ನಂತರ ಋಷಿ ಉತ್ತಂಕನ ಪರಾಭವಗಳ ಕುರಿತು ಕೇಳಿದ್ದೀಯೆ. ನಿನಗೆ ಯುಕ್ತವೆನಿಸಿದ್ದುದನ್ನು ಮಾಡು.”
01046026 ಜನಮೇಜಯ ಉವಾಚ।
01046026a ಏತತ್ತು ಶ್ರೋತುಮಿಚ್ಛಾಮಿ ಅಟವ್ಯಾಂ ನಿರ್ಜನೇ ವನೇ।
01046026c ಸಂವಾದಂ ಪನ್ನಗೇಂದ್ರಸ್ಯ ಕಾಶ್ಯಪಸ್ಯ ಚ ಯತ್ತದಾ।।
01046027a ಕೇನ ದೃಷ್ಟಂ ಶ್ರುತಂ ಚಾಪಿ ಭವತಾಂ ಶ್ರೋತ್ರಮಾಗತಂ।
01046027c ಶ್ರುತ್ವಾ ಚಾಥ ವಿಧಾಸ್ಯಾಮಿ ಪನ್ನಗಾಂತಕರೀಂ ಮತಿಂ।।
ಜನಮೇಜಯನು ಹೇಳಿದನು: “ನೀವು ಈಗತಾನೆ ವರದಿ ಮಾಡಿದ ಅಡವಿಯ ನಿರ್ಜನ ವನದಲ್ಲಿ ಪನ್ನಗೇಂದ್ರ ಮತ್ತು ಕಾಶ್ಯಪರ ನಡುವಿನ ಸಂವಾದವನ್ನು ಯಾರು ನೋಡಿದ್ದರು ಅಥವಾ ಕೇಳಿದ್ದರು ಎನ್ನುವುದನ್ನು ಕೇಳಲು ಬಯಸುತ್ತೇನೆ. ಅದನ್ನು ಕೇಳಿದ ನಂತರ ನಾಗಗಳ ವಿನಾಶದ ಕುರಿತು ನನ್ನ ನಿರ್ಧಾರವನ್ನು ತಿಳಿಸುತ್ತೇನೆ.”
01046028 ಮಂತ್ರಿಣ ಊಚುಃ।
01046028a ಶೃಣು ರಾಜನ್ಯಥಾಸ್ಮಾಕಂ ಯೇನೈತತ್ಕಥಿತಂ ಪುರಾ।
01046028c ಸಮಾಗಮಂ ದ್ವಿಜೇಂದ್ರಸ್ಯ ಪನ್ನಗೇಂದ್ರಸ್ಯ ಚಾಧ್ವನಿ।।
ಮಂತ್ರಿಗಳು ಹೇಳಿದರು: “ರಾಜನ್! ಈ ಹಿಂದೆ ದ್ವಿಜೇಂದ್ರ ಮತ್ತು ಪನ್ನಗೇಂದ್ರರ ಮಧ್ಯೆ ನಡೆದ ಸಂವಾದವನ್ನು ನಾವು ಯಾರಿಂದ ಕೇಳಿದೆವೆನ್ನುವುದನ್ನು ಕೇಳು.
01046029a ತಸ್ಮಿನ್ವೃಕ್ಷೇ ನರಃ ಕಶ್ಚಿದಿಂಧನಾರ್ಥಾಯ ಪಾರ್ಥಿವ।
01046029c ವಿಚಿನ್ವನ್ಪೂರ್ವಮಾರೂಢಃ ಶುಷ್ಕಶಾಖಂ ವನಸ್ಪತಿಂ।
01046029e ಅಬುಧ್ಯಮಾನೌ ತಂ ತತ್ರ ವೃಕ್ಷಸ್ಥಂ ಪನ್ನಗದ್ವಿಜೌ।।
ಪಾರ್ಥಿವ! ಇಂಧನಾರ್ಥವಾಗಿ ಯಾವನೋ ಒಬ್ಬನು ಒಂದು ವೃಕ್ಷವನ್ನು ಹತ್ತಿ ವೃಕ್ಷದಲ್ಲಿರುವ ಒಣರೆಂಬೆಗಳನ್ನು ಕಟ್ಟಿಗೆಗಳನ್ನಾಗಿ ಕಡಿಯುತ್ತಿದ್ದನು. ಆದರೆ ಆ ವೃಕ್ಷದಲ್ಲಿದ್ದ ಅವನನ್ನು ಪನ್ನಗನಾಗಲೀ ದ್ವಿಜನಾಗಲೀ ನೋಡಲಿಲ್ಲ.
01046030a ಸ ತು ತೇನೈವ ವೃಕ್ಷೇಣ ಭಸ್ಮೀಭೂತೋಽಭವತ್ತದಾ।
01046030c ದ್ವಿಜಪ್ರಭಾವಾದ್ರಾಜೇಂದ್ರ ಜೀವಿತಃ ಸವನಸ್ಪತಿಃ।।
ಆ ವೃಕ್ಷದ ಜೊತೆಗೆ ಅವನೂ ಕೂಡ ಭಸ್ಮೀಭೂತನಾಗಿದ್ದ ಮತ್ತು ರಾಜೇಂದ್ರ! ಅದೇ ಮರದ ಜೊತೆಗೆ ಆ ದ್ವಿಜನ ಪ್ರಭಾವದಿಂದ ಪುನಃ ಜೀವಿತಗೊಂಡಿದ್ದ.
01046031a ತೇನ ಗತ್ವಾ ನೃಪಶ್ರೇಷ್ಠ ನಗರೇಽಸ್ಮಿನ್ನಿವೇದಿತಂ।
01046031c ಯಥಾವೃತ್ತಂ ತು ತತ್ಸರ್ವಂ ತಕ್ಷಕಸ್ಯ ದ್ವಿಜಸ್ಯ ಚ।।
ನೃಪಶ್ರೇಷ್ಠ! ಅವನೇ ಈ ನಗರಕ್ಕೆ ಬಂದು ತಕ್ಷಕ ಮತ್ತು ದ್ವಿಜನ ಕುರಿತು ಎಲ್ಲವನ್ನೂ ಯಥಾವತ್ತಾಗಿ ವರದಿ ಮಾಡಿದನು.
01046032a ಏತತ್ತೇ ಕಥಿತಂ ರಾಜನ್ಯಥಾವೃತ್ತಂ ಯಥಾಶ್ರುತಂ।
01046032c ಶ್ರುತ್ವಾ ತು ನೃಪಶಾರ್ದೂಲ ಪ್ರಕುರುಷ್ವ ಯಥೇಪ್ಸಿತಂ।।
ರಾಜನ್! ಹೀಗೆ ನಾವು ನಡೆದುದ್ದನ್ನು ಮತ್ತು ಕೇಳಿದ್ದುದನ್ನು ವರದಿಮಾಡಿದ್ದೇವೆ. ಇದನ್ನು ಕೇಳಿದ ನೀನು ಬಯಸಿದ ಹಾಗೆ ಮಾಡು.””
01046033 ಸೂತ ಉವಾಚ।
01046033a ಮಂತ್ರಿಣಾಂ ತು ವಚಃ ಶ್ರುತ್ವಾ ಸ ರಾಜಾ ಜನಮೇಜಯಃ।
01046033c ಪರ್ಯತಪ್ಯತ ದುಃಖಾರ್ತಃ ಪ್ರತ್ಯಪಿಂಷತ್ಕರೇ ಕರಂ।।
ಸೂತನು ಹೇಳಿದನು: “ಮಂತ್ರಿಗಳ ಆ ಮಾತನ್ನು ಕೇಳಿದ ರಾಜ ಜನಮೇಜಯನು ಕೈ ಹಿಂಡಿಕೊಳ್ಳುತ್ತಾ ದುಃಖಾರ್ತನಾಗಿ ರೋದಿಸಿದನು.
01046034a ನಿಃಶ್ವಾಸಮುಷ್ಣಮಸಕೃದ್ದೀರ್ಘಂ ರಾಜೀವಲೋಚನಃ।
01046034c ಮುಮೋಚಾಶ್ರೂಣಿ ಚ ತದಾ ನೇತ್ರಾಭ್ಯಾಂ ಪ್ರತತಂ ನೃಪಃ।
01046034e ಉವಾಚ ಚ ಮಹೀಪಾಲೋ ದುಃಖಶೋಕಸಮನ್ವಿತಃ।।
ಆ ರಾಜೀವಲೋಚನ ರಾಜ ಮಹೀಪಾಲನು ದೀರ್ಘವಾದ ಬಿಸಿ ನಿಟ್ಟುಸಿರು ಬಿಟ್ಟು ಕಣ್ಣುಗಳಿಂದ ಕಣ್ಣೀರು ಸುರಿಸುತ್ತಾ, ದುಃಖಶೋಕಸಮನ್ವಿತನಾಗಿ ಹೇಳಿದನು:
01046035a ಶ್ರುತ್ವೈತದ್ಭವತಾಂ ವಾಕ್ಯಂ ಪಿತುರ್ಮೇ ಸ್ವರ್ಗತಿಂ ಪ್ರತಿ।
01046035c ನಿಶ್ಚಿತೇಯಂ ಮಮ ಮತಿರ್ಯಾ ವೈ ತಾಂ ಮೇ ನಿಬೋಧತ।।
“ನನ್ನ ತಂದೆಯು ಸ್ವರ್ಗಗತಿಯನ್ನು ಹೇಗೆ ಪಡೆದ ಎನ್ನುವುದನ್ನು ನಿಮ್ಮಿಂದ ಕೇಳಿದೆ. ಈಗ ನನ್ನ ಮನಸ್ಸಿನ ಧೃಢ ನಿಶ್ವಯವನ್ನು ತಿಳಿಯಿರಿ.
01046036a ಅನಂತರಮಹಂ ಮನ್ಯೇ ತಕ್ಷಕಾಯ ದುರಾತ್ಮನೇ।
01046036c ಪ್ರತಿಕರ್ತವ್ಯಮಿತ್ಯೇವ ಯೇನ ಮೇ ಹಿಂಸಿತಃ ಪಿತಾ।।
ನನ್ನ ತಂದೆಗೆ ಹಿಂಸೆಕೊಟ್ಟ ದುರಾತ್ಮ ತಕ್ಷಕನಿಗೆ ಪ್ರತೀಕಾರವನ್ನೆಸಗುವ ಕಾರ್ಯದಲ್ಲಿ ವಿಳಂಬಮಾಡಬಾರದು.
01046037a ಋಷೇರ್ಹಿ ಶೃಂಗೇರ್ವಚನಂ ಕೃತ್ವಾ ದಗ್ಧ್ವಾ ಚ ಪಾರ್ಥಿವಂ।
01046037c ಯದಿ ಗಚ್ಛೇದಸೌ ಪಾಪೋ ನನು ಜೀವೇತ್ಪಿತಾ ಮಮ।।
ಅವನೇ ಋಷಿ ಶೃಂಗಿಯ ಮಾತುಗಳು ನಿಜವಾಗುವಂತೆ ಮಾಡಿದನು ಮತ್ತು ನನ್ನ ತಂದೆಯನ್ನು ಸುಟ್ಟುಹಾಕಿದನು. ಈ ಪಾಪಿಯು ಹೊರಟು ಹೋಗಿದ್ದರೆ ನನ್ನ ತಂದೆಯು ಬದುಕಿರುತ್ತಿದ್ದನು.
01046038a ಪರಿಹೀಯೇತ ಕಿಂ ತಸ್ಯ ಯದಿ ಜೀವೇತ್ಸ ಪಾರ್ಥಿವಃ।
01046038c ಕಾಶ್ಯಪಸ್ಯ ಪ್ರಸಾದೇನ ಮಂತ್ರಿಣಾಂ ಸುನಯೇನ ಚ।।
ಕಾಶ್ಯಪನ ಅನುಗ್ರಹದಿಂದ ಮತ್ತು ಮಂತ್ರಿಗಳ ಯೋಜನೆಯಂತೆ ಪಾರ್ಥಿವನು ಬದುಕಿದ್ದರೆ ಅವನು ಏನನ್ನು ಕಳೆದುಕೊಳ್ಳುತ್ತಿದ್ದ?
01046039a ಸ ತು ವಾರಿತವಾನ್ಮೋಹಾತ್ಕಾಶ್ಯಪಂ ದ್ವಿಜಸತ್ತಮಂ।
01046039c ಸಂಜಿಜೀವಯಿಷುಂ ಪ್ರಾಪ್ತಂ ರಾಜಾನಮಪರಾಜಿತಂ।।
ಅಪರಾಜಿತ ರಾಜನಿಗೆ ಪುನರ್ಜೀವನವನ್ನು ಕೊಡಲು ಬರುತ್ತಿದ್ದ ದ್ವಿಜಸತ್ತಮ ಕಾಶ್ಯಪನನ್ನು ಅವನೇ ಮೋಹದಿಂದ ತಡೆಗಟ್ಟಿದನು.
01046040a ಮಹಾನತಿಕ್ರಮೋ ಹ್ಯೇಷ ತಕ್ಷಕಸ್ಯ ದುರಾತ್ಮನಃ।
01046040c ದ್ವಿಜಸ್ಯ ಯೋಽದದದ್ದ್ರವ್ಯಂ ಮಾ ನೃಪಂ ಜೀವಯೇದಿತಿ।।
ನೃಪನನ್ನು ಬದುಕಿಸಬಾರದೆಂದು ಆ ದ್ವಿಜನಿಗೆ ಸಂಪತ್ತನ್ನಿತ್ತ ದುರಾತ್ಮ ತಕ್ಷಕನ ದುಷ್ಕರ್ಮವು ಮಹತ್ತರವಾದದ್ದು.
01046041a ಉತ್ತಂಕಸ್ಯ ಪ್ರಿಯಂ ಕುರ್ವನ್ನಾತ್ಮನಶ್ಚ ಮಹತ್ಪ್ರಿಯಂ।
01046041c ಭವತಾಂ ಚೈವ ಸರ್ವೇಷಾಂ ಯಾಸ್ಯಾಮ್ಯಪಚಿತಿಂ ಪಿತುಃ।।
ಉತ್ತಂಕನಿಗೆ ಪ್ರಿಯವಾದುದನ್ನು ಮಾಡಲು, ನಿಮ್ಮನ್ನೆಲ್ಲ ಮತ್ತು ನನ್ನನ್ನು ಸಂತಸಗೊಳಿಸಲೋಸುಗ ನಾನು ನನ್ನ ತಂದೆಯ ಸೇಡನ್ನು ತೀರಿಸಿಕೊಳ್ಳುತ್ತೇನೆ.””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಆಸ್ತೀಕಪರ್ವಣಿ ಪಾರಿಕ್ಷಿನ್ಮಂತ್ರಿಸಂವಾದೇ ಷಟ್ಚತ್ವಾರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಆಸ್ತೀಕಪರ್ವದಲ್ಲಿ ಪಾರಿಕ್ಷಿನ್ಮಂತ್ರಿಸಂವಾದವೆಂಬ ನಲ್ವತ್ತಾರನೆಯ ಅಧ್ಯಾಯವು.