ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಆಸ್ತೀಕ ಪರ್ವ
ಅಧ್ಯಾಯ 45
ಸಾರ
ಜನಮೇಜಯನಿಗೆ ತಂದೆ ಪರಿಕ್ಷಿತನ ಸಾವಿನ ಕುರಿತ ವರದಿ (1-2).01045001 ಶೌನಕ ಉವಾಚ।
01045001a ಯದಪೃಚ್ಛತ್ತದಾ ರಾಜಾ ಮಂತ್ರಿಣೋ ಜನಮೇಜಯಃ।
01045001c ಪಿತುಃ ಸ್ವರ್ಗಗತಿಂ ತನ್ಮೇ ವಿಸ್ತರೇಣ ಪುನರ್ವದ।।
ಶೌನಕನು ಹೇಳಿದನು: “ರಾಜ ಜನಮೇಜಯನು ತನ್ನ ತಂದೆಯ ಸ್ವರ್ಗಗತಿಯಬಗ್ಗೆ ಮಂತ್ರಿಗಳೊಂದಿಗೆ ಏನನ್ನು ಕೇಳಿದನು ಎನ್ನುವುದನ್ನು ಪುನಃ ನನಗೆ ವಿಸ್ತಾರವಾಗಿ ಹೇಳು.”
01045002 ಸೂತ ಉವಾಚ।
01045002a ಶೃಣು ಬ್ರಹ್ಮನ್ಯಥಾ ಪೃಷ್ಟಾ ಮಂತ್ರಿಣೋ ನೃಪತೇಸ್ತದಾ।
01045002c ಆಖ್ಯಾತವಂತಸ್ತೇ ಸರ್ವೇ ನಿಧನಂ ತತ್ಪರಿಕ್ಷಿತಃ।।
ಸೂತನು ಹೇಳಿದನು: “ಬ್ರಾಹ್ಮಣ! ಪರಿಕ್ಷಿತನ ನಿಧನದ ಕುರಿತು ನೃಪತಿಯು ಮಂತ್ರಿಗಳಲ್ಲಿ ಏನನ್ನು ಕೇಳಿದನು ಮತ್ತು ಅವರು ಅವನಿಗೆ ಏನನ್ನು ಹೇಳಿದರು ಎನ್ನುವುದನ್ನು ಕೇಳು.
01045003 ಜನಮೇಜಯ ಉವಾಚ।
01045003a ಜಾನಂತಿ ತು ಭವಂತಸ್ತದ್ಯಥಾವೃತ್ತಃ ಪಿತಾ ಮಮ।
01045003c ಆಸೀದ್ಯಥಾ ಚ ನಿಧನಂ ಗತಃ ಕಾಲೇ ಮಹಾಯಶಾಃ।।
ಜನಮೇಜಯನು ಹೇಳಿದನು: “ನನ್ನ ತಂದೆ ಮಹಾಯಶಸ್ವಿಯು ಹೇಗಿದ್ದ ಮತ್ತು ಅವನು ಹೇಗೆ ಸಾವನ್ನಪ್ಪಿದ ಎನ್ನುವುದನ್ನು ನೀವು ಯಥಾವತ್ತಾಗಿ ತಿಳಿದಿದ್ದೀರಿ.
01045004a ಶ್ರುತ್ವಾ ಭವತ್ಸಕಾಶಾದ್ಧಿ ಪಿತುರ್ವೃತ್ತಮಶೇಷತಃ।
01045004c ಕಲ್ಯಾಣಂ ಪ್ರತಿಪತ್ಸ್ಯಾಮಿ ವಿಪರೀತಂ ನ ಜಾತು ಚಿತ್।।
ತಂದೆಯ ಕುರಿತು ಎಲ್ಲವನ್ನೂ ನಿಮ್ಮಿಂದ ಕೇಳಿದ ನಂತರವೇ ಯಾವುದು ಕಲ್ಯಾಣಕರವಾದುದೋ ಅದನ್ನು ಮಾಡುತ್ತೇನೆ. ಅನ್ಯಥಾ ಇಲ್ಲ.””
01045005 ಸೂತ ಉವಾಚ।
01045005a ಮಂತ್ರಿಣೋಽಥಾಬ್ರುವನ್ವಾಕ್ಯಂ ಪೃಷ್ಟಾಸ್ತೇನ ಮಹಾತ್ಮನಾ।
01045005c ಸರ್ವಧರ್ಮವಿದಃ ಪ್ರಾಜ್ಞಾ ರಾಜಾನಂ ಜನಮೇಜಯಂ।।
ಸೂತನು ಹೇಳಿದನು: “ಆ ಮಾಹಾತ್ಮ ರಾಜ ಜನಮೇಜಯನ ಮಾತುಗಳನ್ನು ಕೇಳಿದ ಸರ್ವ ಧರ್ಮವಿದ ಪ್ರಾಜ್ಞ ಮಂತ್ರಿಗಳು ಹೇಳಿದರು:
01045006a ಧರ್ಮಾತ್ಮಾ ಚ ಮಹಾತ್ಮಾ ಚ ಪ್ರಜಾಪಾಲಃ ಪಿತಾ ತವ।
01045006c ಆಸೀದಿಹ ಯಥಾವೃತ್ತಃ ಸ ಮಹಾತ್ಮಾ ಶೃಣುಷ್ವ ತತ್।।
“ನಿನ್ನ ತಂದೆಯು ಧರ್ಮಾತ್ಮನೂ, ಮಹಾತ್ಮನೂ, ಪ್ರಜಾಪಾಲಕನೂ ಆಗಿದ್ದನು. ಆ ಮಹಾತ್ಮನು ಹೇಗೆ ನಡೆದುಕೊಳ್ಳುತ್ತಿದ್ದನು ಎನ್ನುವುದನ್ನು ಕೇಳು.
01045007a ಚಾತುರ್ವರ್ಣ್ಯಂ ಸ್ವಧರ್ಮಸ್ಥಂ ಸ ಕೃತ್ವಾ ಪರ್ಯರಕ್ಷತ।
01045007c ಧರ್ಮತೋ ಧರ್ಮವಿದ್ರಾಜಾ ಧರ್ಮೋ ವಿಗ್ರಹವಾನಿವ।।
ಸ್ವಧರ್ಮದಲ್ಲಿ ನಿಷ್ಠನಾಗಿದ್ದು ನಾಲ್ಕೂವರ್ಣದವರನ್ನು ರಕ್ಷಿಸುತ್ತಿದ್ದನು. ರಾಜನು ಧರ್ಮನಂತೆಯೇ ಧರ್ಮವತ್ತಾಗಿ ಧಾರ್ಮಿಕನಾಗಿದ್ದನು.
01045008a ರರಕ್ಷ ಪೃಥಿವೀಂ ದೇವೀಂ ಶ್ರೀಮಾನತುಲವಿಕ್ರಮಃ।
01045008c ದ್ವೇಷ್ಟಾರಸ್ತಸ್ಯ ನೈವಾಸನ್ಸ ಚ ನ ದ್ವೇಷ್ಟಿ ಕಂಚನ।
01045008e ಸಮಃ ಸರ್ವೇಷು ಭೂತೇಷು ಪ್ರಜಾಪತಿರಿವಾಭವತ್।।
ಶ್ರೀಮಂತನೂ ಅತುಲ ವಿಕ್ರಮಿಯೂ ಆದ ಅವನು ಪೃಥ್ವೀ ದೇವಿಯನ್ನು ರಕ್ಷಿಸುತ್ತಿದ್ದನು. ಅವನಿಗೆ ಯಾರ ಮೇಲೂ ದ್ವೇಷವಿರಲಿಲ್ಲ ಮತ್ತು ಯಾರೂ ಅವನನ್ನು ದ್ವೇಷಿಸುತ್ತಿರಲಿಲ್ಲ. ಪ್ರಜಾಪತಿಯಂತೆ ಸರ್ವರನ್ನೂ ಒಂದೇಸಮನಾಗಿ ಕಾಣುತ್ತಿದ್ದನು.
01045009a ಬ್ರಾಹ್ಮಣಾಃ ಕ್ಷತ್ರಿಯಾ ವೈಶ್ಯಾಃ ಶೂದ್ರಾಶ್ಚೈವ ಸ್ವಕರ್ಮಸು।
01045009c ಸ್ಥಿತಾಃ ಸುಮನಸೋ ರಾಜಂಸ್ತೇನ ರಾಜ್ಞಾ ಸ್ವನುಷ್ಠಿತಾಃ।।
ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು ಮತ್ತು ಶೂದ್ರರೆಲ್ಲರೂ ತಮ್ಮ ತಮ್ಮ ಕರ್ಮಗಳಲ್ಲಿ ನಿರತರಾಗಿದ್ದು, ಸುಖಮನಸ್ಕರಾಗಿ, ರಾಜನ ರಾಜ್ಯಭಾರದಿಂದ ಸುರಕ್ಷಿತರಾಗಿದ್ದರು.
01045010a ವಿಧವಾನಾಥಕೃಪಣಾನ್ವಿಕಲಾಂಶ್ಚ ಬಭಾರ ಸಃ।
01045010c ಸುದರ್ಶಃ ಸರ್ವಭೂತಾನಾಮಾಸೀತ್ಸೋಮ ಇವಾಪರಃ।।
ವಿಧವೆಯರ, ಅನಾಥರ ಮತ್ತು ಬಡವರ ಜೀವನ ಜವಾಬ್ದಾರಿಯನ್ನು ಹೊತ್ತ ಆ ಸುಂದರನು ಸರ್ವರಿಗೂ ಚಂದ್ರನಂತಿದ್ದನು.
01045011a ತುಷ್ಟಪುಷ್ಟಜನಃ ಶ್ರೀಮಾನ್ಸತ್ಯವಾಗ್ದೃಢವಿಕ್ರಮಃ।
01045011c ಧನುರ್ವೇದೇ ಚ ಶಿಷ್ಯೋಽಭೂನ್ನೃಪಃ ಶಾರದ್ವತಸ್ಯ ಸಃ।।
ಜನರೆಲ್ಲರೂ ತುಷ್ಟಪುಷ್ಟರೂ, ಶ್ರೀಮಂತರೂ, ಸತ್ಯವಂತರೂ, ದೃಢವಿಕ್ರಮಿಗಳೂ ಆಗಿದ್ದರು. ಧನುರ್ವೇದದಲ್ಲಿ ನೃಪನು ಶಾರದ್ವತ ಕೃಪನ ಶಿಷ್ಯನಾಗಿದ್ದನು.
01045012a ಗೋವಿಂದಸ್ಯ ಪ್ರಿಯಶ್ಚಾಸೀತ್ಪಿತಾ ತೇ ಜನಮೇಜಯ।
01045012c ಲೋಕಸ್ಯ ಚೈವ ಸರ್ವಸ್ಯ ಪ್ರಿಯ ಆಸೀನ್ಮಹಾಯಶಾಃ।।
ಜನಮೇಜಯ! ಗೋವಿಂದನ ಪ್ರಿಯಕರನಾಗಿದ್ದ ನಿನ್ನ ತಂದೆಯು ಲೋಕದಲ್ಲಿ ಸರ್ವರ ಪ್ರಿಯಕರನಾಗಿ ಮಹಾ ಯಶಸ್ವಿಯಾಗಿದ್ದನು.
01045013a ಪರಿಕ್ಷೀಣೇಷು ಕುರುಷು ಉತ್ತರಾಯಾಮಜಾಯತ।
01045013c ಪರಿಕ್ಷಿದಭವತ್ತೇನ ಸೌಭದ್ರಸ್ಯಾತ್ಮಜೋ ಬಲೀ।।
ಕುರುಗಳ ಪರಿಕ್ಷೀಣವಾದಾಗ ಉತ್ತರೆಯಲ್ಲಿ ಹುಟ್ಟಿದ ಆ ಅಭಿಮನ್ಯುವಿನ ಬಲಶಾಲಿ ಮಗನನ್ನು ಪರಿಕ್ಷಿತ ಎಂದು ಕರೆದಿದ್ದರು.
01045014a ರಾಜಧರ್ಮಾರ್ಥಕುಶಲೋ ಯುಕ್ತಃ ಸರ್ವಗುಣೈರ್ನೃಪಃ।
01045014c ಜಿತೇಂದ್ರಿಯಶ್ಚಾತ್ಮವಾಂಶ್ಚ ಮೇಧಾವೀ ವೃದ್ಧಸೇವಿತಃ।।
ರಾಜಧರ್ಮಾರ್ಥ ಕುಶಲನಾಗಿದ್ದ ಆ ರಾಜನು ಸರ್ವಗುಣ ಸಂಪನ್ನನೂ, ಸ್ವತಃ ಜಿತೇಂದ್ರಿಯನೂ, ಮೇಧಾವಿಯೂ, ವೃದ್ಧರ ಸೇವನಿರತನೂ ಆಗಿದ್ದನು.
01045015a ಷಢ್ವರ್ಗವಿನ್ಮಹಾಬುದ್ಧಿರ್ನೀತಿಧರ್ಮವಿದುತ್ತಮಃ।
01045015c ಪ್ರಜಾ ಇಮಾಸ್ತವ ಪಿತಾ ಷಷ್ಟಿಂ ವರ್ಷಾಣ್ಯಪಾಲಯತ್।
01045015e ತತೋ ದಿಷ್ಟಾಂತಮಾಪನ್ನಃ ಸರ್ಪೇಣಾನತಿವರ್ತಿತಂ।।
ಷಡ್ವರ್ಗಗುಣಯುಕ್ತನಾದ ಮಹಾಬುದ್ಧಿಶಾಲಿಯೂ, ನೀತಿಧರ್ಮ ವಿದುತ್ತಮನೂ ಆದ ನಿನ್ನ ತಂದೆಯು ಅರವತ್ತು ವರ್ಷಗಳ ಕಾಲ ಪ್ರಜಾಪಾಲನೆಯನ್ನು ಮಾಡಿದನು. ನಂತರ ಅವನಿಗೆ ಒಂದು ಸರ್ಪದಿಂದ ತಡೆಗಟ್ಟಲಾಗದಂಥಹ ಆಪತ್ತು ಸಂಭವಿಸಿತು.
01045016a ತತಸ್ತ್ವಂ ಪುರುಷಶ್ರೇಷ್ಠ ಧರ್ಮೇಣ ಪ್ರತಿಪೇದಿವಾನ್।
01045016c ಇದಂ ವರ್ಷಸಹಸ್ರಾಯ ರಾಜ್ಯಂ ಕುರುಕುಲಾಗತಂ।
01045016e ಬಾಲ ಏವಾಭಿಜಾತೋಽಸಿ ಸರ್ವಭೂತಾನುಪಾಲಕಃ।।
ಅವನ ನಂತರ ಪುರುಷಶ್ರೇಷ್ಠನಾದ ನೀನು ಸಹಸ್ರಾರು ವರ್ಷಗಳಿಂದ ಕುರುಕುಲಾಗತವಾಗಿದ್ದ ಈ ರಾಜ್ಯವನ್ನು ಧರ್ಮಪೂರ್ವಕವಾಗಿ ಪಡೆದೆ. ಸರ್ವಭೂತಾನುಪಾಲಕ! ನೀನು ಬಾಲಕನಾಗಿರುವಾಗಲೇ ನಿನ್ನನ್ನು ಅಭಿಷಿಕ್ತನನ್ನಾಗಿ ಮಾಡಲಾಗಿತ್ತು.”
01045017 ಜನಮೇಜಯ ಉವಾಚ।
01045017a ನಾಸ್ಮಿನ್ಕುಲೇ ಜಾತು ಬಭೂವ ರಾಜಾ ಯೋ ನ ಪ್ರಜಾನಾಂ ಹಿತಕೃತ್ಪ್ರಿಯಶ್ಚ।
01045017c ವಿಶೇಷತಃ ಪ್ರೇಕ್ಷ್ಯ ಪಿತಾಮಹಾನಾಂ ವೃತ್ತಂ ಮಹದ್ವೃತ್ತಪರಾಯಣಾನಾಂ।।
ಜನಮೇಜಯನು ಹೇಳಿದನು: “ಪ್ರಜೆಗಳ ಹಿತವನ್ನಾಗಲೀ ಅವರಿಗೆ ಬೇಕಾಗಿದ್ದುದನ್ನಾಗಲೀ ಮಾಡದೇ ಇದ್ದ ರಾಜರು ಯಾರೂ ನನ್ನ ಈ ಕುಲದಲ್ಲಿ ಹುಟ್ಟಲಿಲ್ಲ. ವಿಶೇಷವಾಗಿ ನನ್ನ ಪಿತಾಮಹರು ಮಹಾ ಕಾರ್ಯಗಳನ್ನೆಸಗಿದವರು.
01045018a ಕಥಂ ನಿಧನಮಾಪನ್ನಃ ಪಿತಾ ಮಮ ತಥಾವಿಧಃ।
01045018c ಆಚಕ್ಷಧ್ವಂ ಯಥಾವನ್ಮೇ ಶ್ರೋತುಮಿಚ್ಛಾಮಿ ತತ್ತ್ವತಃ।।
ಹೀಗಿರುವಾಗ ನನ್ನ ತಂದೆಯಾದರೋ ಹೇಗೆ ಸಾವೆಂಬ ಆಪತ್ತಿಗೆ ಒಳಗಾದನು? ನನಗೆ ವಿವರಿಸಿ. ಯಥಾವತ್ತಾಗಿ ಕೇಳಲು ಬಯಸುತ್ತೇನೆ.””
01045019 ಸೂತ ಉವಾಚ।
01045019a ಏವಂ ಸಂಚೋದಿತಾ ರಾಜ್ಞಾ ಮಂತ್ರಿಣಸ್ತೇ ನರಾಧಿಪಂ।
01045019c ಊಚುಃ ಸರ್ವೇ ಯಥಾವೃತ್ತಂ ರಾಜ್ಞಃ ಪ್ರಿಯಹಿತೇ ರತಾಃ।।
ಸೂತನು ಹೇಳಿದನು: “ಈ ರೀತಿ ರಾಜನಿಂದ ಆಜ್ಞೆಯಾದಾಗ ಮಂತ್ರಿಗಳು ಪ್ರಿಯಹಿತ ನಿರತ ರಾಜ ನರಾಧಿಪನಿಗೆ ಎಲ್ಲವನ್ನೂ ವರದಿಮಾಡಿದರು.
01045020a ಬಭೂವ ಮೃಗಯಾಶೀಲಸ್ತವ ರಾಜನ್ಪಿತಾ ಸದಾ।
01045020c ಯಥಾ ಪಾಂಡುರ್ಮಹಾಭಾಗೋ ಧನುರ್ಧರವರೋ ಯುಧಿ।
01045020e ಅಸ್ಮಾಸ್ವಾಸಜ್ಯ ಸರ್ವಾಣಿ ರಾಜಕಾರ್ಯಾಣ್ಯಶೇಷತಃ।।
“ರಾಜನ್! ಯುದ್ಧದಲ್ಲಿ ಮಹಾಭಾಗ ಪಾಂಡುವಿನಂತೆ ಶ್ರೇಷ್ಠ ಧನುರ್ಧರನಾದ ನಿನ್ನ ತಂದೆಯು ಸದಾ ಮೃಗಯಾಶೀಲನಾಗಿ ರಾಜಕಾರ್ಯಗಳೊಂದನ್ನೂ ಬಿಡದೇ ಎಲ್ಲವನ್ನು ನಮಗೊಪ್ಪಿಸಿದ್ದನು.
01045021a ಸ ಕದಾ ಚಿದ್ವನಚರೋ ಮೃಗಂ ವಿವ್ಯಾಧ ಪತ್ರಿಣಾ।
01045021c ವಿದ್ಧ್ವಾ ಚಾನ್ವಸರತ್ತೂರ್ಣಂ ತಂ ಮೃಗಂ ಗಹನೇ ವನೇ।।
01045022a ಪದಾತಿರ್ಬದ್ಧನಿಸ್ತ್ರಿಂಶಸ್ತತಾಯುಧಕಲಾಪವಾನ್।
01045022c ನ ಚಾಸಸಾದ ಗಹನೇ ಮೃಗಂ ನಷ್ಟಂ ಪಿತಾ ತವ।।
ಒಮ್ಮೆ ಅವನು ವನದಲ್ಲಿ ಸಂಚರಿಸುತ್ತಿದ್ದ ಮೃಗವೊಂದನ್ನು ಬಾಣದಿಂದ ಹೊಡೆದು, ಖಡ್ಗ ಮತ್ತು ಧನುಸ್ಸು ಭತ್ತಳಿಗೆಗಳನ್ನು ಹಿಡಿದು ಕಾಲ್ನಡುಗೆಯಲ್ಲಿಯೇ ಹೊಡೆತ ತಿಂದ ಮೃಗವನ್ನು ಆ ದಟ್ಟಡವಿಯಲ್ಲಿ ಹಿಂಬಾಲಿಸುತ್ತಾ ಹೋದನು. ಆದರೆ ನಿನ್ನ ತಂದೆಗೆ ಆ ಮೃಗವು ದೊರೆಯಲೇ ಇಲ್ಲ.
01045023a ಪರಿಶ್ರಾಂತೋ ವಯಃಸ್ತಶ್ಚ ಷಷ್ಟಿವರ್ಷೋ ಜರಾನ್ವಿತಃ।
01045023c ಕ್ಷುಧಿತಃ ಸ ಮಹಾರಣ್ಯೇ ದದರ್ಶ ಮುನಿಮಂತಿಕೇ।।
ಅರವತ್ತು ವರ್ಷ ವಯಸ್ಸಿನ ವೃದ್ಧನಾಗಿದ್ದ ಅವನು ಆಯಾಸಗೊಂಡು ಹಸಿವು ಬಾಯಾರಿಕೆಗಳಿಂದ ಬಳಲಿ, ಆ ಮಹಾರಣ್ಯದಲ್ಲಿ ಓರ್ವ ಮುನಿಯನ್ನು ಕಂಡನು.
01045024a ಸ ತಂ ಪಪ್ರಚ್ಛ ರಾಜೇಂದ್ರೋ ಮುನಿಂ ಮೌನವ್ರತಾನ್ವಿತಂ।
01045024c ನ ಚ ಕಿಂ ಚಿದುವಾಚೈನಂ ಸ ಮುನಿಃ ಪೃಚ್ಛತೋಽಪಿ ಸನ್।।
ಆ ಸಮಯದಲ್ಲಿ ಮೌನವ್ರತವನ್ನಾಚರಿಸುತ್ತಿದ್ದ ಆ ಮುನಿಯನ್ನು ರಾಜೇಂದ್ರನು ಕೇಳಿದನು. ಪುನಃ ಪುನಃ ಕೇಳಿದರೂ ಆ ಮುನಿಯು ಯಾವ ಉತ್ತರವನ್ನೂ ನೀಡಲಿಲ್ಲ.
01045025a ತತೋ ರಾಜಾ ಕ್ಷುಚ್ಛ್ರಮಾರ್ತಸ್ತಂ ಮುನಿಂ ಸ್ಥಾಣುವತ್ಸ್ಥಿತಂ।
01045025c ಮೌನವ್ರತಧರಂ ಶಾಂತಂ ಸದ್ಯೋ ಮನ್ಯುವಶಂ ಯಯೌ।।
ಹಸಿವು ಬಾಯಾರಿಕೆಗಳಿಂದ ಬಳಲಿದ್ದ ರಾಜನು ಮೌನವ್ರತಧರನಾಗಿ ಶಾಂತವಾಗಿ ಅಲುಗಾಡದೇ ಕುಳಿತಿದ್ದ ಮುನಿಯನ್ನು ಕಂಡು ಸಿಟ್ಟಿಗೆದ್ದನು.
01045026a ನ ಬುಬೋಧ ಹಿ ತಂ ರಾಜಾ ಮೌನವ್ರತಧರಂ ಮುನಿಂ।
01045026c ಸ ತಂ ಮನ್ಯುಸಮಾವಿಷ್ಟೋ ಧರ್ಷಯಾಮಾಸ ತೇ ಪಿತಾ।।
ಮುನಿಯು ಮೌನವ್ರತವನ್ನು ಪಾಲಿಸುತ್ತಿದ್ದಾನೆಂದು ತಿಳಿಯದೇ ನಿನ್ನ ತಂದೆ ರಾಜನು ಸಿಟ್ಟಿನ ಆವೇಶದಲ್ಲಿ ಅವನನ್ನು ಅಪಮಾನಿಸಿದನು.
01045027a ಮೃತಂ ಸರ್ಪಂ ಧನುಷ್ಕೋಟ್ಯಾ ಸಮುತ್ಕ್ಷಿಪ್ಯ ಧರಾತಲಾತ್।
01045027c ತಸ್ಯ ಶುದ್ಧಾತ್ಮನಃ ಪ್ರಾದಾತ್ಸ್ಕಂಧೇ ಭರತಸತ್ತಮ।।
ಭರತಸತ್ತಮನು ತನ್ನ ಧನುಸ್ಸಿನ ತುದಿಯಿಂದ ನೆಲದ ಮೇಲೆ ಸತ್ತು ಬಿದ್ದಿದ್ದ ಸರ್ಪವನ್ನು ಮೇಲೆತ್ತಿ ಆ ಶುದ್ಧಾತ್ಮನ ಭುಜಗಳ ಮೇಲೆ ಹಾಕಿದನು.
01045028a ನ ಚೋವಾಚ ಸ ಮೇಧಾವೀ ತಮಥೋ ಸಾಧ್ವಸಾಧು ವಾ।
01045028c ತಸ್ಥೌ ತಥೈವ ಚಾಕ್ರುಧ್ಯನ್ಸರ್ಪಂ ಸ್ಕಂಧೇನ ಧಾರಯನ್।।
ಆದರೂ ಆ ಮೇಧಾವಿಯು ಒಳ್ಳೆಯದಾಗಲೀ ಕೆಟ್ಟುದಾಗಲೀ ಒಂದು ಮಾತನ್ನೂ ಆಡಲಿಲ್ಲ. ಸರ್ಪವನ್ನು ತನ್ನ ಭುಜದ ಮೇಲೆ ಹೊತ್ತು ಹಾಗೆಯೇ ನಿಂತುಕೊಂಡಿದ್ದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಆಸ್ತೀಕಪರ್ವಣಿ ಪಂಚಚತ್ವಾರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಆಸ್ತೀಕಪರ್ವದಲ್ಲಿ ನಲವತ್ತೈದನೆಯ ಅಧ್ಯಾಯವು.