044 ಆಸ್ತೀಕೋತ್ಪತ್ತಿಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಆಸ್ತೀಕ ಪರ್ವ

ಅಧ್ಯಾಯ 44

ಸಾರ ಅಣ್ಣ ವಾಸುಕಿಗೆ ಜರತ್ಕಾರುವು ನಡೆದುದನ್ನು ವರದಿಮಾಡಿದುದು (1-10). ಆಸ್ತೀಕನ ಜನನ, ವಿದ್ಯಾಭ್ಯಾಸ (11-22).

01044001 ಸೂತ ಉವಾಚ।
01044001a ಗತಮಾತ್ರಂ ತು ಭರ್ತಾರಂ ಜರತ್ಕಾರುರವೇದಯತ್।
01044001c ಭ್ರಾತುಸ್ತ್ವರಿತಮಾಗಮ್ಯ ಯಥಾತಥ್ಯಂ ತಪೋಧನ।।

ಸೂತನು ಹೇಳಿದನು: “ತಪೋಧನ! ಪತಿಯು ಹೊರಟುಹೋದ ನಂತರ ಜರತ್ಕಾರುವು ತಕ್ಷಣವೇ ತನ್ನ ಅಣ್ಣನಲ್ಲಿಗೆ ಹೋಗಿ ನಡೆದುದೆಲ್ಲವನ್ನೂ ವರದಿಮಾಡಿದಳು.

01044002a ತತಃ ಸ ಭುಜಗಶ್ರೇಷ್ಠಃ ಶ್ರುತ್ವಾ ಸುಮಹದಪ್ರಿಯಂ।
01044002c ಉವಾಚ ಭಗಿನೀಂ ದೀನಾಂ ತದಾ ದೀನತರಃ ಸ್ವಯಂ।।

ಈ ಮಹದಪ್ರಿಯ ಮಾತುಗಳನ್ನು ಕೇಳಿದ ಭುಜಗಶ್ರೇಷ್ಠನು ಸ್ವಯಂ ದೀನತರನಾಗಿ ದೀನಳಾಗಿದ್ದ ತಂಗಿಗೆ ಹೇಳಿದನು:

01044003a ಜಾನಾಸಿ ಭದ್ರೇ ಯತ್ಕಾರ್ಯಂ ಪ್ರದಾನೇ ಕಾರಣಂ ಚ ಯತ್।
01044003c ಪನ್ನಗಾನಾಂ ಹಿತಾರ್ಥಾಯ ಪುತ್ರಸ್ತೇ ಸ್ಯಾತ್ತತೋ ಯದಿ।।

“ಭದ್ರೇ! ನಿನ್ನನ್ನು ಅವನಿಗೆ ಯಾವ ಕಾರಣಕ್ಕಾಗಿ ಕೊಟ್ಟಿದ್ದೆವೆಂದು ನಿನಗೆ ತಿಳಿದಿದೆ. ನಾಗಗಳ ಹಿತಕ್ಕೋಸ್ಕರವಾಗಿ ಅವನಿಂದ ನಿನ್ನಲ್ಲಿ ಪುತ್ರನಾಗಬೇಕಿತ್ತು.

01044004a ಸ ಸರ್ಪಸತ್ರಾತ್ಕಿಲ ನೋ ಮೋಕ್ಷಯಿಷ್ಯತಿ ವೀರ್ಯವಾನ್।
01044004c ಏವಂ ಪಿತಾಮಹಃ ಪೂರ್ವಮುಕ್ತವಾನ್ಮಾಂ ಸುರೈಃ ಸಹ।।

ಆ ವೀರ್ಯವಂತನು ಸರ್ಪಸತ್ರದಿಂದ ನಮ್ಮನ್ನೆಲ್ಲ ಮೋಕ್ಷಗೊಳಿಸುವನು ಎಂದು ಹಿಂದೆ ನಾನು ಸುರರೊಂದಿಗಿದ್ದಾಗ ಪಿತಾಮಹನು ಹೇಳಿದ್ದನು.

01044005a ಅಪ್ಯಸ್ತಿ ಗರ್ಭಃ ಸುಭಗೇ ತಸ್ಮಾತ್ತೇ ಮುನಿಸತ್ತಮಾತ್।
01044005c ನ ಚೇಚ್ಛಾಮ್ಯಫಲಂ ತಸ್ಯ ದಾರಕರ್ಮ ಮನೀಷಿಣಃ।।

ಸುಭಗೇ! ಆ ಮುನಿಸತ್ತಮನಿಂದ ನೀನು ಗರ್ಭವನ್ನು ಧರಿಸಿದ್ದೀಯಾ? ನಿನ್ನ ಈ ಮದುವೆಯು ನಿಷ್ಫಲವಾಗಬಾರದು ಎನ್ನುವುದೇ ನನ್ನ ಇಚ್ಛೆ.

01044006a ಕಾಮಂ ಚ ಮಮ ನ ನ್ಯಾಯ್ಯಂ ಪ್ರಷ್ಟುಂ ತ್ವಾಂ ಕಾರ್ಯಮೀದೃಶಂ।
01044006c ಕಿಂ ತು ಕಾರ್ಯಗರೀಯಸ್ತ್ವಾತ್ತತಸ್ತ್ವಾಹಮಚೂಚುದಂ।।

ಈ ವಿಷಯದ ಕುರಿತು ಈ ರೀತಿ ನಿನ್ನನ್ನು ಪ್ರಶ್ನಿಸುವುದು ನಿಜವಾಗಿಯೂ ಸರಿಯಲ್ಲ. ಆದರೂ ವಿಷಯವು ಮಹತ್ತರವಾದುದರಿಂದ ನಿನ್ನಲ್ಲಿ ಈ ರೀತಿ ಕೇಳಬೇಕಾಗಿದೆ.

01044007a ದುರ್ವಾಸತಾಂ ವಿದಿತ್ವಾ ಚ ಭರ್ತುಸ್ತೇಽತಿತಪಸ್ವಿನಃ।
01044007c ನೈನಮನ್ವಾಗಮಿಷ್ಯಾಮಿ ಕದಾಚಿದ್ಧಿ ಶಪೇತ್ಸ ಮಾಂ।।

ನಿನ್ನ ಅತಿತಪಸ್ವಿ ಪತಿಯು ಬೇಗ ಸಿಟ್ಟಿಗೇಳುತ್ತಾನೆ ಎನ್ನುವುದನ್ನು ನಾನು ತಿಳಿದಿದ್ದೇನೆ. ಆದುದರಿಂದ ಅವನ ಹಿಂದೆ ಹೋಗಲು ಆಗುವುದಿಲ್ಲ. ಅವನು ನನಗೆ ಶಾಪವನ್ನೂ ಕೊಡಬಲ್ಲ.

01044008a ಆಚಕ್ಷ್ವ ಭದ್ರೇ ಭರ್ತುಸ್ತ್ವಂ ಸರ್ವಮೇವ ವಿಚೇಷ್ಟಿತಂ।
01044008c ಶಲ್ಯಮುದ್ಧರ ಮೇ ಘೋರಂ ಭದ್ರೇ ಹೃದಿ ಚಿರಸ್ಥಿತಂ।।

ಭದ್ರೇ! ನಿನ್ನ ಮತ್ತು ನಿನ್ನ ಪತಿಯ ನಡುವೆ ನಡೆದುದೆಲ್ಲವನ್ನೂ ಹೇಳಿ ನನ್ನ ಹೃದಯದಲ್ಲಿ ಬಹಳ ಕಾಲದಿಂದ ಹುದುಗಿರುವ ಘೋರ ಶೂಲವನ್ನು ಕಿತ್ತೊಗೆ.”

01044009a ಜರತ್ಕಾರುಸ್ತತೋ ವಾಕ್ಯಮಿತ್ಯುಕ್ತಾ ಪ್ರತ್ಯಭಾಷತ।
01044009c ಆಶ್ವಾಸಯಂತೀ ಸಂತಪ್ತಂ ವಾಸುಕಿಂ ಪನ್ನಗೇಶ್ವರಂ।।

ಈ ಮಾತುಗಳನ್ನು ಕೇಳಿದ ಜರತ್ಕಾರುವು ಸಂತಪ್ತ ಪನ್ನಗೇಶ್ವರ ವಾಸುಕಿಯನ್ನು ಸಂತವಿಸುತ್ತಾ ಉತ್ತರಿಸಿದಳು:

01044010a ಪೃಷ್ಟೋ ಮಯಾಪತ್ಯಹೇತೋಃ ಸ ಮಹಾತ್ಮಾ ಮಹಾತಪಾಃ।
01044010c ಅಸ್ತೀತ್ಯುದರಮುದ್ದಿಶ್ಯ ಮಮೇದಂ ಗತವಾಂಶ್ಚ ಸಃ।।

“ಮಗುವಿನ ಕುರಿತು ನಾನು ಕೇಳಿದಾಗ ಆ ಮಹಾತಪಸ್ವಿ ಮಹಾತ್ಮನು ನನ್ನ ಉದರವನ್ನು ತೋರಿಸಿ, “ಅಲ್ಲಿ ಇದೆ!” ಎಂದು ಹೇಳಿ ಹೊರಟು ಹೋದನು.

01044011a ಸ್ವೈರೇಷ್ವಪಿ ನ ತೇನಾಹಂ ಸ್ಮರಾಮಿ ವಿತಥಂ ಕ್ವಚಿತ್।
01044011c ಉಕ್ತಪೂರ್ವಂ ಕುತೋ ರಾಜನ್ಸಾಂಪರಾಯೇ ಸ ವಕ್ಷ್ಯತಿ।।

ತಮಾಷೆಯಲ್ಲಿಯೂ ಅವನು ಹುಸಿಮಾತನ್ನಾಡಿದ್ದುದು ನೆನಪಿಲ್ಲ. ಹಾಗಿದ್ದಾಗ ರಾಜನ್! ಈ ಮಹತ್ತರ ವಿಷಯದ ಕುರಿತು ಅವನು ಏಕೆ ಸುಳ್ಳಾಡುತ್ತಾನೆ?

01044012a ನ ಸಂತಾಪಸ್ತ್ವಯಾ ಕಾರ್ಯಃ ಕಾರ್ಯಂ ಪ್ರತಿ ಭುಜಂಗಮೇ।
01044012c ಉತ್ಪತ್ಸ್ಯತಿ ಹಿ ತೇ ಪುತ್ರೋ ಜ್ವಲನಾರ್ಕಸಮದ್ಯುತಿಃ।।

ಅವನು “ಭುಜಂಗಮೇ! ನಿನ್ನ ಕಾರ್ಯದ ಕುರಿತು ಸಂತಾಪಪಡಬೇಡ. ಅಗ್ನಿ-ಸೂರ್ಯರ ಸಮಾನ ಪ್ರಭೆಯನ್ನುಳ್ಳ ಪುತ್ರನೋರ್ವನು ನಿನ್ನಲ್ಲಿ ಜನಿಸುತ್ತಾನೆ” ಎಂದನು.

01044013a ಇತ್ಯುಕ್ತ್ವಾ ಹಿ ಸ ಮಾಂ ಭ್ರಾತರ್ಗತೋ ಭರ್ತಾ ತಪೋವನಂ।
01044013c ತಸ್ಮಾದ್ವ್ಯೇತು ಪರಂ ದುಃಖಂ ತವೇದಂ ಮನಸಿ ಸ್ಥಿತಂ।।

ಅಣ್ಣ! ಹೀಗೆ ಹೇಳಿ ನನ್ನ ಪತಿಯು ತಪೋವನಕ್ಕೆ ಹೊರಟುಹೋದನು. ಆದುದರಿಂದ ನಿನ್ನ ಮನಸ್ಸಿನಲ್ಲಿರುವ ಪರಮ ದುಃಖ ವೇದನೆಯನ್ನು ತೆಗೆದುಹಾಕು.”

01044014a ಏತಚ್ಛ್ರುತ್ವಾ ಸ ನಾಗೇಂದ್ರೋ ವಾಸುಕಿಃ ಪರಯಾ ಮುದಾ।
01044014c ಏವಮಸ್ತ್ವಿತಿ ತದ್ವಾಕ್ಯಂ ಭಗಿನ್ಯಾಃ ಪ್ರತ್ಯಗೃಹ್ಣತ।।

ಇದನ್ನು ಕೇಳಿದ ನಾಗೇಂದ್ರ ವಾಸುಕಿಯು ಪರಮ ಹರ್ಷಿತನಾಗಿ “ಹಾಗೆಯೇ ಆಗಲಿ” ಎಂದು ತಂಗಿಯ ಮಾತುಗಳನ್ನು ಸ್ವೀಕರಿಸಿದನು.

01044015a ಸಾಂತ್ವಮಾನಾರ್ಥದಾನೈಶ್ಚ ಪೂಜಯಾ ಚಾನುರೂಪಯಾ।
01044015c ಸೋದರ್ಯಾಂ ಪೂಜಯಾಮಾಸ ಸ್ವಸಾರಂ ಪನ್ನಗೋತ್ತಮಃ।।

ಆ ಪನ್ನಗೋತ್ತಮನು ತನ್ನ ಸೋದರಿಯನ್ನು ಸಂತವಿಸಿ, ಗೌರವಿಸಿ, ಉಡುಗೊರೆ, ಮತ್ತು ಇನ್ನೂ ಇತರ ಪೂಜಾ ವಸ್ತುಗಳಿಂದ ಸತ್ಕರಿಸಿದನು.

01044016a ತತಃ ಸ ವವೃಧೇ ಗರ್ಭೋ ಮಹಾತೇಜಾ ರವಿಪ್ರಭಃ।
01044016c ಯಥಾ ಸೋಮೋ ದ್ವಿಜಶ್ರೇಷ್ಠ ಶುಕ್ಲಪಕ್ಷೋದಿತೋ ದಿವಿ।।

ಅವಳಲ್ಲಿರುವ ರವಿಪ್ರಭ ಮಹಾತೇಜಸ್ವಿ ದ್ವಿಜಶ್ರೇಷ್ಠನು ಆಕಾಶದಲ್ಲಿ ಶುಕ್ಲಪಕ್ಷದ ಚಂದ್ರನಂತೆ ಬೆಳೆಯತೊಡಗಿದನು.

01044017a ಯಥಾಕಾಲಂ ತು ಸಾ ಬ್ರಹ್ಮನ್ ಪ್ರಜಜ್ಞೇ ಭುಜಗಸ್ವಸಾ।
01044017c ಕುಮಾರಂ ದೇವಗರ್ಭಾಭಂ ಪಿತೃಮಾತೃಭಯಾಪಹಂ।।

ಸಮಯ ಪ್ರಾಪ್ತಿಯಾದಾಗ ನಾಗನ ಸಹೋದರಿಯು ದೇವಗರ್ಭದಂತೆ ಹೊಳೆಯುತ್ತಿದ್ದ ಪಿತೃ ಮತ್ತು ಮಾತೃ ಭಯಾಪಹ ಬ್ರಾಹ್ಮಣ ಕುಮಾರನಿಗೆ ಜನ್ಮವಿತ್ತಳು.

01044018a ವವೃಧೇ ಸ ಚ ತತ್ರೈವ ನಾಗರಾಜನಿವೇಶನೇ।
01044018c ವೇದಾಂಶ್ಚಾಧಿಜಗೇ ಸಾಂಗಾನ್ಭಾರ್ಗವಾಚ್ಚ್ಯವನಾತ್ಮಜಾತ್।।

ನಾಗರಾಜನ ಮನೆಯಲ್ಲಿಯೇ ಅವನು ಬೆಳೆದನು ಮತ್ತು ಚ್ಯವನಾತ್ಮಜ ಭಾರ್ಗವನಿಂದ ವೇದ-ವೇದಾಂಗಗಳನ್ನು ಕಲಿತನು.

01044019a ಚರಿತವ್ರತೋ ಬಾಲ ಏವ ಬುದ್ಧಿಸತ್ತ್ವಗುಣಾನ್ವಿತಃ।
01044019c ನಾಮ ಚಾಸ್ಯಾಭವತ್ಖ್ಯಾತಂ ಲೋಕೇಷ್ವಾಸ್ತೀಕ ಇತ್ಯುತ।।

ಬಾಲಕನಾಗಿದ್ದರೂ ವ್ರತಗಳನ್ನು ಅನುಸರಿಸುತ್ತಿದ್ದ ಆ ಬುದ್ಧಿವಂತ ಸತ್ವಗುಣಾನ್ವಿತನು ಆಸ್ತೀಕ ಎನ್ನುವ ಹೆಸರಿನಿಂದ ಲೋಕಗಳಲ್ಲೆಲ್ಲಾ ಖ್ಯಾತನಾದನು.

01044020a ಅಸ್ತೀತ್ಯುಕ್ತ್ವಾ ಗತೋ ಯಸ್ಮಾತ್ಪಿತಾ ಗರ್ಭಸ್ಥಮೇವ ತಂ।
01044020c ವನಂ ತಸ್ಮಾದಿದಂ ತಸ್ಯ ನಾಮಾಸ್ತೀಕೇತಿ ವಿಶ್ರುತಂ।।

ಅವನು ಇನ್ನೂ ಗರ್ಭದಲ್ಲಿರುವಾಗ ಅವನ ತಂದೆಯು “ಅಸ್ತಿ” ಎಂದು ಹೇಳಿ ಹೊರಟು ಹೋಗಿದ್ದನು. ಆದುದರಿಂದಲೇ ಅವನು ಆಸ್ತೀಕ ಎಂಬ ಹೆಸರಿನಿಂದ ಕರೆಯಲ್ಪಟ್ಟನು.

01044021a ಸ ಬಾಲ ಏವ ತತ್ರಸ್ಥಶ್ಚರನ್ನಮಿತಬುದ್ಧಿಮಾನ್।
01044021c ಗೃಹೇ ಪನ್ನಗರಾಜಸ್ಯ ಪ್ರಯತ್ನಾತ್ಪರ್ಯರಕ್ಷ್ಯತ।।

ಬಾಲಕನಾಗಿದ್ದರೂ ಧೃಢನಾಗಿ ಅತಿ ಬುದ್ಧಿವಂತನಾಗಿದ್ದ ಅವನು ಪನ್ನಗರಾಜನ ಮನೆಯಲ್ಲಿ ಅತ್ಯಂತ ಜಾಗರೂಕತೆಯಿಂದ ರಕ್ಷಣೆ ಪಡೆದಿದ್ದನು.

01044022a ಭಗವಾನಿವ ದೇವೇಶಃ ಶೂಲಪಾಣಿರ್ಹಿರಣ್ಯದಃ।
01044022c ವಿವರ್ಧಮಾನಃ ಸರ್ವಾಂಸ್ತಾನ್ಪನ್ನಗಾನಭ್ಯಹರ್ಷಯತ್।।

ಅವನು ಶೂಲಪಾಣಿ ಹಿರಣ್ಯ ದೇವೇಶ ಭಗವಂತನಂತೆ ತೋರುತ್ತಿದ್ದು ಆ ನಾಗಗಳಿಗೆಲ್ಲ ಸಂತಸವನ್ನು ನೀಡುತ್ತಾ ಬೆಳೆದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಆಸ್ತೀಕಪರ್ವಣಿ ಆಸ್ತೀಕೋತ್ಪತ್ತೌ ಚತುಶ್ಚತ್ವಾರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಆಸ್ತೀಕಪರ್ವದಲ್ಲಿ ಅಸ್ತೀಕೋತ್ಪತ್ತೌ ಎನ್ನುವ ನಲ್ವತ್ನಾಲ್ಕನೆಯ ಅಧ್ಯಾಯವು.