043 ಜರತ್ಕಾರುನಿರ್ಗಮನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಆಸ್ತೀಕ ಪರ್ವ

ಅಧ್ಯಾಯ 43

ಸಾರ ಮುನಿ ಜರತ್ಕಾರುವು ತನ್ನ ನಿಯಮಾನುಸಾರ ವಾಸುಕಿಯ ತಂಗಿ ಜರತ್ಕಾರುವನ್ನು ವಿವಾಹವಾದುದು (1-10). ಸಂಧ್ಯಾಸಮಯದಲ್ಲಿ ನಿದ್ರಿಸುತ್ತಿದ್ದ ಪತಿಯನ್ನು ಜರತ್ಕಾರುವು ಎಬ್ಬಿಸುವುದು (11-20). ಹೊಟ್ಟೆಯಲ್ಲಿ ಮಗುವಿದೆಯೆಂದು ಹೇಳಿ ಮುನಿಯು ಪತ್ನಿಯನ್ನು ಬಿಟ್ಟು ಹೋಗುವುದು (21-39).

01043001 ಸೂತ ಉವಾಚ।
01043001a ವಾಸುಕಿಸ್ತ್ವಬ್ರವೀದ್ವಾಕ್ಯಂ ಜರತ್ಕಾರುಮೃಷಿಂ ತದಾ।
01043001c ಸನಾಮಾ ತವ ಕನ್ಯೇಯಂ ಸ್ವಸಾ ಮೇ ತಪಸಾನ್ವಿತಾ।।

ಸೂತನು ಹೇಳಿದನು: “ಆಗ ವಾಸುಕಿಯು ಋಷಿ ಜರತ್ಕಾರುವಿಗೆ ಹೇಳಿದನು: “ನನ್ನ ಈ ತಪಸ್ವಿನಿ ತಂಗಿಯು ನಿನ್ನ ಹೆಸರನ್ನೇ ಹೊಂದಿದ್ದಾಳೆ.

01043002a ಭರಿಷ್ಯಾಮಿ ಚ ತೇ ಭಾರ್ಯಾಂ ಪ್ರತೀಚ್ಛೇಮಾಂ ದ್ವಿಜೋತ್ತಮ।
01043002c ರಕ್ಷಣಂ ಚ ಕರಿಷ್ಯೇಽಸ್ಯಾಃ ಸರ್ವಶಕ್ತ್ಯಾ ತಪೋಧನ।।

ದ್ವಿಜೋತ್ತಮ! ಇವಳನ್ನು ನಿನ್ನ ಭಾರ್ಯೆಯಾಗಿ ಸ್ವೀಕರಿಸು. ನಾನೇ ಅವಳ ಜೀವನವನ್ನು ನೋಡಿಕೊಳ್ಳುತ್ತೇನೆ. ತಪೋಧನ! ನನ್ನ ಸರ್ವ ಶಕ್ತಿಗಳನ್ನೂ ಉಪಯೋಗಿಸಿ ಅವಳ ರಕ್ಷಣೆಯನ್ನು ಮಾಡುತ್ತೇನೆ.”

01043003a ಪ್ರತಿಶ್ರುತೇ ತು ನಾಗೇನ ಭರಿಷ್ಯೇ ಭಗಿನೀಮಿತಿ।
01043003c ಜರತ್ಕಾರುಸ್ತದಾ ವೇಶ್ಮ ಭುಜಗಸ್ಯ ಜಗಾಮ ಹ।।

ತನ್ನ ತಂಗಿಯನ್ನು ತಾನೇ ನೋಡಿಕೊಳ್ಳುತ್ತೇನೆ ಎಂದು ನಾಗನಿಂದ ಅಶ್ವಾಸನೆಯನ್ನು ಪಡೆದ ನಂತರ ಜರತ್ಕಾರುವು ಆ ನಾಗನ ಮನೆಗೆ ಹೋದನು.

01043004a ತತ್ರ ಮಂತ್ರವಿದಾಂ ಶ್ರೇಷ್ಠಸ್ತಪೋವೃದ್ಧೋ ಮಹಾವ್ರತಃ।
01043004c ಜಗ್ರಾಹ ಪಾಣಿಂ ಧರ್ಮಾತ್ಮಾ ವಿಧಿಮಂತ್ರಪುರಸ್ಕೃತಂ।।

ಅಲ್ಲಿ ಮಂತ್ರವಿಧ್ವಾಂಸಿ, ಶ್ರೇಷ್ಠ ತಪೋವೃದ್ಧ, ಮಹಾವ್ರತ ಧರ್ಮಾತ್ಮನು ವಿಧಿಮಂತ್ರಪೂರಕವಾಗಿ ಅವಳ ಕೈ ಹಿಡಿದನು.

01043005a ತತೋ ವಾಸಗೃಹಂ ಶುಭ್ರಂ ಪನ್ನಗೇಂದ್ರಸ್ಯ ಸಮ್ಮತಂ।
01043005c ಜಗಾಮ ಭಾರ್ಯಾಮಾದಾಯ ಸ್ತೂಯಮಾನೋ ಮಹರ್ಷಿಭಿಃ।।

ಪನ್ನಗೇಂದ್ರನ ಸಮ್ಮತಿಯಂತೆ ಪತ್ನಿಯನ್ನು ಪಡೆದು ಮಹರ್ಷಿಗಳೆಲ್ಲರೂ ಸ್ತುತಿಸುತ್ತಿರಲು ಶುಭ್ರ ವಾಸಗೃಹಕ್ಕೆ ತೆರಳಿದನು.

01043006a ಶಯನಂ ತತ್ರ ವೈ ಕ್ಲಪ್ತಂ ಸ್ಪರ್ಧ್ಯಾಸ್ತರಣಸಂವೃತಂ।
01043006c ತತ್ರ ಭಾರ್ಯಾಸಹಾಯಃ ಸ ಜರತ್ಕಾರುರುವಾಸ ಹ।।

ಆಲ್ಲಿ ಜರತ್ಕಾರುವು ಅಮೂಲ್ಯ ರತ್ನಗಳಿಂದ ಸಜ್ಜಿತ ಹಾಸಿಗೆಯ ಮೇಲೆ ತನ್ನ ಭಾರ್ಯೆಯೊಡನೆ ಮಲಗುತ್ತಿದ್ದನು.

01043007a ಸ ತತ್ರ ಸಮಯಂ ಚಕ್ರೇ ಭಾರ್ಯಯಾ ಸಹ ಸತ್ತಮಃ।
01043007c ವಿಪ್ರಿಯಂ ಮೇ ನ ಕರ್ತವ್ಯಂ ನ ಚ ವಾಚ್ಯಂ ಕದಾ ಚನ।।

ಆ ಸತ್ತಮನು ತನ್ನ ಪತ್ನಿಯೊಂದಿಗೆ ಒಂದು ಒಪ್ಪಂದವನ್ನು ಮಾಡಿಕೊಂಡನು: “ಎಂದೂ ನನಗೆ ಅಪ್ರಿಯ ಕಾರ್ಯವನ್ನಾಗಲೀ ಮಾತನ್ನಾಗಲೀ ಮಾಡಬಾರದು ಆಡಬಾರದು.

01043008a ತ್ಯಜೇಯಮಪ್ರಿಯೇ ಹಿ ತ್ವಾಂ ಕೃತೇ ವಾಸಂ ಚ ತೇ ಗೃಹೇ।
01043008c ಏತದ್ಗೃಹಾಣ ವಚನಂ ಮಯಾ ಯತ್ಸಮುದೀರಿತಂ।।

ಹಾಗೇನಾದರೂ ಮಾಡಿದರೆ ನಾನು ನಿನ್ನನ್ನು ಬಿಟ್ಟು ಹೋಗುತ್ತೇನೆ ಮತ್ತು ನಿನ್ನ ಈ ಮನೆಯಲ್ಲಿ ಎಂದೂ ವಾಸಿಸುವುದಿಲ್ಲ. ನನ್ನ ಈ ಮಾತುಗಳನ್ನು ಯಾವಾಗಲೂ ನಿನ್ನ ಮನಸ್ಸಿನಲ್ಲಿಟ್ಟಿಕೋ.”

01043009a ತತಃ ಪರಮಸಂವಿಗ್ನಾ ಸ್ವಸಾ ನಾಗಪತೇಸ್ತು ಸಾ।
01043009c ಅತಿದುಃಖಾನ್ವಿತಾ ವಾಚಂ ತಮುವಾಚೈವಮಸ್ತ್ವಿತಿ।।

ಅವನ ಮಾತುಗಳಿಂದ ಪರಮ ಸಂವಿಗ್ನಳಾದ ನಾಗಪತಿಯ ತಂಗಿಯು ಅತಿ ದುಃಖಸಮನ್ವಿತಳಾಗಿ “ಹಾಗೆಯೇ ಆಗಲಿ” ಎಂದು ವಚನವನ್ನಿತ್ತಳು.

01043010a ತಥೈವ ಸಾ ಚ ಭರ್ತಾರಂ ದುಃಖಶೀಲಮುಪಾಚರತ್।
01043010c ಉಪಾಯೈಃ ಶ್ವೇತಕಾಕೀಯೈಃ ಪ್ರಿಯಕಾಮಾ ಯಶಸ್ವಿನೀ।।

ಆ ಯಶಸ್ವಿನಿಯಾದರೋ ಶ್ವೇತಕಾಕೀಯ ಉಪಾಯಗಳಿಂದ ಎಷ್ಟೇ ಕಷ್ವವಾದರೂ ತನ್ನ ಪತಿಗೆ ಪ್ರಿಯಕರವಾದುದನ್ನೇ ಮಾಡುತ್ತಿದ್ದಳು.

01043011a ಋತುಕಾಲೇ ತತಃ ಸ್ನಾತಾ ಕದಾಚಿದ್ವಾಸುಕೇಃ ಸ್ವಸಾ।
01043011c ಭರ್ತಾರಂ ತಂ ಯಥಾನ್ಯಾಯಮುಪತಸ್ಥೇ ಮಹಾಮುನಿಂ।।

ಒಮ್ಮೆ ವಾಸುಕಿಯ ತಂಗಿಯು ಋತುಕಾಲದ ನಂತರ ಸ್ನಾನಮಾಡಿ ನ್ಯಾಯದಂತೆ ಮಹಾಮುನಿ ಪತಿಯ ಬಳಿ ಹೋದಳು.

01043012a ತತ್ರ ತಸ್ಯಾಃ ಸಮಭವದ್ಗರ್ಭೋ ಜ್ವಲನಸನ್ನಿಭಃ।
01043012c ಅತೀವ ತಪಸಾ ಯುಕ್ತೋ ವೈಶ್ವಾನರಸಮದ್ಯುತಿಃ।
01043012e ಶುಕ್ಲಪಕ್ಷೇ ಯಥಾ ಸೋಮೋ ವ್ಯವರ್ಧತ ತಥೈವ ಸಃ।।

ಆಗ ಅವಳು ಗರ್ಭವತಿಯಾದಳು. ಅತ್ಯಂತ ತಪೋಬಲವನ್ನು ಹೊಂದಿ ಪ್ರಜ್ವಲ ಪ್ರಭೆಯಿಂದ ಕೂಡಿದ್ದ ಆ ಗರ್ಭವು ವೈಶ್ವಾನರನ ಸಮಾನ ಕಾಂತಿಯನ್ನು ಹೊಂದಿದ್ದು ಶುಕ್ಲಪಕ್ಷದ ಚಂದ್ರನಂತೆ ಬೆಳೆಯತೊಡಗಿತು.

01043013a ತತಃ ಕತಿಪಯಾಹಸ್ಯ ಜರತ್ಕಾರುರ್ಮಹಾತಪಾಃ।
01043013c ಉತ್ಸಂಗೇಽಸ್ಯಾಃ ಶಿರಃ ಕೃತ್ವಾ ಸುಷ್ವಾಪ ಪರಿಖಿನ್ನವತ್।।

ಕೆಲವು ದಿನಗಳ ನಂತರ ಮಹಾತಪಸ್ವಿ ಜರತ್ಕಾರುವು ಆಯಾಸಗೊಂಡು ತನ್ನ ಪತ್ನಿಯ ತೊಡೆಯಮೇಲೆ ತಲೆಯನ್ನಿಟ್ಟು ನಿದ್ರಿಸುತ್ತಿದ್ದನು.

01043014a ತಸ್ಮಿಂಶ್ಚ ಸುಪ್ತೇ ವಿಪ್ರೇಂದ್ರೇ ಸವಿತಾಸ್ತಮಿಯಾದ್ಗಿರಿಂ।
01043014c ಅಹ್ನಃ ಪರಿಕ್ಷಯೇ ಬ್ರಹ್ಮಂಸ್ತತಃ ಸಾಚಿಂತಯತ್ತದಾ।
01043014e ವಾಸುಕೇರ್ಭಗಿನೀ ಭೀತಾ ಧರ್ಮಲೋಪಾನ್ಮನಸ್ವಿನೀ।।

ಈ ರೀತಿ ಆ ವಿಪ್ರೇಂದ್ರನು ಮಲಗಿರುವಾಗ ಸೂರ್ಯನು ಗಿರಿಗಳಲ್ಲಿ ಅಸ್ತಮನಾಗತೊಡಗಿದನು. ಹಗಲು ಕಳೆಯುತ್ತಾ ಬಂದಿರುವುದರಿಂದ ವಾಸುಕಿಯ ತಂಗಿ ಮನಸ್ವಿನಿಯು ಬ್ರಾಹ್ಮಣನ ಧರ್ಮಲೋಪವಾಗುವುದೆಂದು ಭೀತಳಾದಳು.

01043015a ಕಿಂ ನು ಮೇ ಸುಕೃತಂ ಭೂಯಾದ್ಭರ್ತುರುತ್ಥಾಪನಂ ನ ವಾ।
01043015c ದುಃಶೀಲೋ ಹಿ ಧರ್ಮಾತ್ಮಾ ಕಥಂ ನಾಸ್ಯಾಪರಾಧ್ನುಯಾಂ।।

“ಈಗ ನಾನು ಏನು ಮಾಡಲಿ? ನನ್ನ ಪತಿಯನ್ನು ಎಚ್ಚರಿಸಲೇ ಅಥವಾ ಬೇಡವೇ? ಈ ಧರ್ಮಾತ್ಮನಿಗೆ ಅಪರಾಧವಾಗದ ರೀತಿಯಲ್ಲಿ ದುಃಖಶೀಲಳಾದ ನಾನು ಏನು ಮಾಡಲಿ?

01043016a ಕೋಪೋ ವಾ ಧರ್ಮಶೀಲಸ್ಯ ಧರ್ಮಲೋಪೋಽಥ ವಾ ಪುನಃ।
01043016c ಧರ್ಮಲೋಪೋ ಗರೀಯಾನ್ವೈ ಸ್ಯಾದತ್ರೇತ್ಯಕರೋನ್ಮನಃ।।

ಅವನು ಕುಪಿತನಾಗುತ್ತಾನೆ ಅಥವಾ ಆ ಧರ್ಮಶೀಲನು ಧರ್ಮಲೋಪನಾಗುತ್ತಾನೆ. ಆದರೆ ನನ್ನ ಪ್ರಕಾರ ಈ ಎರಡರಲ್ಲಿ ಧರ್ಮಲೋಪವೇ ದೊಡ್ಡ ಅಪರಾಧ.

01043017a ಉತ್ಥಾಪಯಿಷ್ಯೇ ಯದ್ಯೇನಂ ಧ್ರುವಂ ಕೋಪಂ ಕರಿಷ್ಯತಿ।
01043017c ಧರ್ಮಲೋಪೋ ಭವೇದಸ್ಯ ಸಂಧ್ಯಾತಿಕ್ರಮಣೇ ಧ್ರುವಂ।।

ಅವನನ್ನು ನಾನು ಎಬ್ಬಿಸಿದರೆ ನಿಶ್ಚಿತವಾಗಿಯೂ ಅವನು ಕೋಪಗೊಳ್ಳುತ್ತಾನೆ. ಇಲ್ಲವಾದರೆ ಸಂಧ್ಯಾವಂದನೆಯ ಸಮಯವು ಕಳೆದುಹೋದಮೇಲೆ ಅವನ ಧರ್ಮಲೋಪವಾಗುವುದೂ ನಿಶ್ಚಯವೇ.”

01043018a ಇತಿ ನಿಶ್ಚಿತ್ಯ ಮನಸಾ ಜರತ್ಕಾರುರ್ಭುಜಂಗಮಾ।
01043018c ತಂ ಋಷಿಂ ದೀಪ್ತತಪಸಂ ಶಯಾನಮನಲೋಪಮಂ।
01043018e ಉವಾಚೇದಂ ವಚಃ ಶ್ಲಕ್ಷ್ಣಂ ತತೋ ಮಧುರಭಾಷಿಣೀ।।

ಈ ರೀತಿ ಯೋಚಿಸಿದ ನಾಗಕನ್ಯೆ ಜರತ್ಕಾರುವು ದೀಪ್ತತಪಸ್ವಿ ಅಗ್ನಿಯಂತೆ ಮಲಗಿರುವ ಋಷಿಗೆ ಮಧುರ ಮತ್ತು ಶ್ಲಾಘನೀಯ ಮಾತುಗಳನ್ನಾಡಿದಳು:

01043019a ಉತ್ತಿಷ್ಠ ತ್ವಂ ಮಹಾಭಾಗ ಸೂರ್ಯೋಽಸ್ತಮುಪಗಚ್ಛತಿ।
01043019c ಸಂಧ್ಯಾಮುಪಾಸ್ಸ್ವ ಭಗವನ್ನಪಃ ಸ್ಪೃಷ್ಟ್ವಾ ಯತವ್ರತಃ।।

“ಮಹಾಭಾಗ! ಎದ್ದೇಳು! ಸೂರ್ಯಸ್ತವಾಗುತ್ತಿದೆ. ಭಗವನ್! ನಿನ್ನ ವ್ರತನಿಯಮದಂತೆ ನೀರನ್ನು ಮುಟ್ಟಿ ಸಂಧ್ಯಾ ಉಪಾಸನೆಯನ್ನು ಮಾಡು.

01043020a ಪ್ರಾದುಷ್ಕೃತಾಗ್ನಿಹೋತ್ರೋಽಯಂ ಮುಹೂರ್ತೋ ರಮ್ಯದಾರುಣಃ।
01043020c ಸಂಧ್ಯಾ ಪ್ರವರ್ತತೇ ಚೇಯಂ ಪಶ್ಚಿಮಾಯಾಂ ದಿಶಿ ಪ್ರಭೋ।।

ಪ್ರಭು! ಸಾಯಂಕಾಲದ ಅಗ್ನಿಹೋತ್ರದ ಮುಹೂರ್ತವು ಬಂದಿದೆ. ಪಶ್ಚಿಮ ದಿಕ್ಕಿನಲ್ಲಿ ರಮ್ಯ ಮತ್ತು ದಾರುಣ ಸಂಧ್ಯೆಯು ಆವರಿಸುತ್ತಿದೆ.”

01043021a ಏವಮುಕ್ತಃ ಸ ಭಗವಾನ್ಜರತ್ಕಾರುರ್ಮಹಾತಪಾಃ।
01043021c ಭಾರ್ಯಾಂ ಪ್ರಸ್ಫುರಮಾಣೋಷ್ಠ ಇದಂ ವಚನಮಬ್ರವೀತ್।।

ಹೀಗೆ ಕರೆಯಲ್ಪಟ್ಟ ಮಹಾತಪಸ್ವಿ ಭಗವಾನ್ ಜರತ್ಕಾರುವು ಕೋಪದಿಂದ ತುಟಿಗಳನ್ನು ನಡುಗಿಸುತ್ತಾ ತನ್ನ ಭಾರ್ಯೆಗೆ ಹೇಳಿದನು:

01043022a ಅವಮಾನಃ ಪ್ರಯುಕ್ತೋಽಯಂ ತ್ವಯಾ ಮಮ ಭುಜಂಗಮೇ।
01043022c ಸಮೀಪೇ ತೇ ನ ವತ್ಸ್ಯಾಮಿ ಗಮಿಷ್ಯಾಮಿ ಯಥಾಗತಂ।।

“ನಾಗಕನ್ಯೆ! ನಿನ್ನಿಂದ ನನ್ನ ಅಪಮಾನವಾಗಿದೆ. ನಿನ್ನೊಡನೆ ನಾನಿನ್ನು ವಾಸಿಸಲಾರೆ. ನಾನು ಎಲ್ಲಿಂದ ಬಂದಿದ್ದೆನೋ ಅಲ್ಲಿಗೆ ಹೋಗುತ್ತಿದ್ದೇನೆ.

01043023a ನ ಹಿ ತೇಜೋಽಸ್ತಿ ವಾಮೋರು ಮಯಿ ಸುಪ್ತೇ ವಿಭಾವಸೋಃ।
01043023c ಅಸ್ತಂ ಗಂತುಂ ಯಥಾಕಾಲಮಿತಿ ಮೇ ಹೃದಿ ವರ್ತತೇ।।

ನಾನು ಮಲಗಿರುವಾಗ ನಿರ್ದಿಷ್ಠ ವೇಳೆಯಲ್ಲಿಯೇ ಅಸ್ತವಾಗಲು ಸೂರ್ಯನಿಗೂ ಧೈರ್ಯವಿಲ್ಲ ಎಂದು ನನಗೆ ನಿಶ್ಚಯವಾಗಿಯೂ ತಿಳಿದಿದೆ.

01043024a ನ ಚಾಪ್ಯವಮತಸ್ಯೇಹ ವಸ್ತುಂ ರೋಚೇತ ಕಸ್ಯ ಚಿತ್।
01043024c ಕಿಂ ಪುನರ್ಧರ್ಮಶೀಲಸ್ಯ ಮಮ ವಾ ಮದ್ವಿಧಸ್ಯ ವಾ।।

ಅಪಮಾನವನ್ನು ಹೊಂದಿದ ಯಾರೂ ಇರಲು ಬಯಸುವುದಿಲ್ಲ. ಹಾಗಿದ್ದಾಗ ಧರ್ಮಶೀಲನಾದ ನನ್ನಂಥವನು ಹೇಗೆ ಇದ್ದಾನು?”

01043025a ಏವಮುಕ್ತಾ ಜರತ್ಕಾರುರ್ಭರ್ತ್ರಾ ಹೃದಯಕಂಪನಂ।
01043025c ಅಬ್ರವೀದ್ಭಗಿನೀ ತತ್ರ ವಾಸುಕೇಃ ಸನ್ನಿವೇಶನೇ।।

ತನ್ನ ಮನೆಯಲ್ಲಿ ಪತಿಯ ಈ ಹೃದಯಕಂಪನ ಮಾತುಗಳನ್ನು ಕೇಳಿದ ವಾಸುಕಿಯ ತಂಗಿ ಜರತ್ಕಾರುವು ಹೇಳಿದಳು:

01043026a ನಾವಮಾನಾತ್ಕೃತವತೀ ತವಾಹಂ ಪ್ರತಿಬೋಧನಂ।
01043026c ಧರ್ಮಲೋಪೋ ನ ತೇ ವಿಪ್ರ ಸ್ಯಾದಿತ್ಯೇತತ್ಕೃತಂ ಮಯಾ।।

“ನಿನಗೆ ಅವಮಾನಿಸಲು ನಿನ್ನನ್ನು ಎಬ್ಬಿಸಲಿಲ್ಲ. ವಿಪ್ರ! ನೀನು ಧರ್ಮಲೋಪನಾಗಬಾರದೆಂದು ನಾನು ಈ ರೀತಿ ಮಾಡಿದೆ.”

01043027a ಉವಾಚ ಭಾರ್ಯಾಮಿತ್ಯುಕ್ತೋ ಜರತ್ಕಾರುರ್ಮಹಾತಪಾಃ।
01043027c ಋಷಿಃ ಕೋಪಸಮಾವಿಷ್ಟಸ್ತ್ಯಕ್ತುಕಾಮೋ ಭುಜಂಗಮಾಂ।।

ಪತ್ನಿಯು ಹೀಗೆ ಹೇಳಲಾಗಿ ಮಹಾತಪಸ್ವಿ ಋಷಿ ಜರತ್ಕಾರುವು ಆ ನಾಗಕನ್ಯೆಯನ್ನು ತೊರೆಯುವ ಉದ್ದೇಶದಿಂದ ಕೋಪಸಮಾವಿಷ್ಟನಾಗಿ ಹೇಳಿದನು:

01043028a ನ ಮೇ ವಾಗನೃತಂ ಪ್ರಾಹ ಗಮಿಷ್ಯೇಽಹಂ ಭುಜಂಗಮೇ।
01043028c ಸಮಯೋ ಹ್ಯೇಷ ಮೇ ಪೂರ್ವಂ ತ್ವಯಾ ಸಹ ಮಿಥಃ ಕೃತಃ।।

“ಭುಜಂಗಮೇ! ನಾನು ಎಂದೂ ಅಸತ್ಯವನ್ನು ನುಡಿದಿಲ್ಲ. ಆದುದರಿಂದ ನಾನು ಹೋಗುತ್ತಿದ್ದೇನೆ. ನಾವಿಬ್ಬರೂ ಮೊದಲೇ ಈ ಒಪ್ಪಂದವನ್ನು ಮಾಡಿಕೊಂಡಿದ್ದೆವು.

01043029a ಸುಖಮಸ್ಮ್ಯುಷಿತೋ ಭದ್ರೇ ಬ್ರೂಯಾಸ್ತ್ವಂ ಭ್ರಾತರಂ ಶುಭೇ।
01043029c ಇತೋ ಮಯಿ ಗತೇ ಭೀರು ಗತಃ ಸ ಭಗವಾನಿತಿ।
01043029e ತ್ವಂ ಚಾಪಿ ಮಯಿ ನಿಷ್ಕ್ರಾಂತೇ ನ ಶೋಕಂ ಕರ್ತುಮರ್ಹಸಿ।।

ಭದ್ರೆ! ಶುಭೇ! ಭೀರು! ನಿನ್ನ ಜೊತೆ ನನ್ನ ಜೀವನವು ಸುಖಕರವಾಗಿತ್ತು. ನಾನು ಹೋದ ಬಳಿಕ ನಿನ್ನ ಅಣ್ಣನಿಗೆ ಭಗವಾನನು ಹೊರಟುಹೋದನೆಂದು ಹೇಳು. ನಾನು ಹೊರಟು ಹೋದ ಮೇಲೆ ನೀನು ನನಗಾಗಿ ಶೋಕಿಸಬಾರದು.”

01043030a ಇತ್ಯುಕ್ತಾ ಸಾನವದ್ಯಾಂಗೀ ಪ್ರತ್ಯುವಾಚ ಪತಿಂ ತದಾ।
01043030c ಜರತ್ಕಾರುಂ ಜರತ್ಕಾರುಶ್ಚಿಂತಾಶೋಕಪರಾಯಣಾ।।
01043031a ಬಾಷ್ಪಗದ್ಗದಯಾ ವಾಚಾ ಮುಖೇನ ಪರಿಶುಷ್ಯತಾ।
01043031c ಕೃತಾಂಜಲಿರ್ವರಾರೋಹಾ ಪರ್ಯಶ್ರುನಯನಾ ತತಃ।
01043031e ಧೈರ್ಯಮಾಲಂಬ್ಯ ವಾಮೋರೂರ್ಹೃದಯೇನ ಪ್ರವೇಪತಾ।।

ಇದನ್ನು ಕೇಳಿದ ಆ ಅನವಧ್ಯಾಂಗಿ ವರಾರೋಹೆ ಜರತ್ಕಾರುವು ಚಿಂತಶೋಕಪರಾಯಣಳಾಗಿ, ಬಾಷ್ಪಗದ್ಗದಳಾಗಿ, ಮುಖದ ಬಣ್ಣವನ್ನೇ ಕಳೆದುಕೊಂಡು ಕಣ್ಣಲ್ಲಿ ಕಣ್ಣೀರನ್ನು ತುಂಬಿಕೊಂಡು, ಅಂಜಲೀ ಬದ್ಧಳಾಗಿ, ಹೃದಯವು ಢವಢವಿಸುತ್ತಿದ್ದರೂ ಧೈರ್ಯತಾಳಿ ಜರತ್ಕಾರುವಿಗೆ ಹೇಳಿದಳು:

01043032a ನ ಮಾಮರ್ಹಸಿ ಧರ್ಮಜ್ಞ ಪರಿತ್ಯಕ್ತುಮನಾಗಸಂ।
01043032c ಧರ್ಮೇ ಸ್ಥಿತಾಂ ಸ್ಥಿತೋ ಧರ್ಮೇ ಸದಾ ಪ್ರಿಯಹಿತೇ ರತಾಂ।।

“ಧರ್ಮಜ್ಞ! ತಪ್ಪನ್ನೇನೂ ಮಾಡಿರದ ನನ್ನನ್ನು ಈ ರೀತಿ ಬಿಟ್ಟು ಹೋಗುವುದು ಸರಿಯಲ್ಲ. ಧರ್ಮದಲ್ಲಿ ನೆಲಸಿರುವ ನೀನು ಸದಾ ನಿನ್ನ ಪ್ರಿಯಹಿತ ನಿರತಳಾಗಿ ಧರ್ಮದಲ್ಲಿಯೇ ಇರುವ ನನ್ನನ್ನು ಬಿಟ್ಟುಹೋಗಬೇಡ.

01043033a ಪ್ರದಾನೇ ಕಾರಣಂ ಯಚ್ಚ ಮಮ ತುಭ್ಯಂ ದ್ವಿಜೋತ್ತಮ।
01043033c ತದಲಬ್ಧವತೀಂ ಮಂದಾಂ ಕಿಂ ಮಾಂ ವಕ್ಷ್ಯತಿ ವಾಸುಕಿಃ।।

ದ್ವಿಜೋತ್ತಮ! ಯಾವ ಕಾರಣಕ್ಕಾಗಿ ನನ್ನನ್ನು ನಿನಗೆ ಕೊಡಲಾಗಿತ್ತೋ ಅದು ಇನ್ನೂ ಪೂರ್ತಿಯಾಗಿಲ್ಲ. ನನ್ನನ್ನು ಮೂಢಳೆಂದು ತಿಳಿಯುವ ವಾಸುಕಿಗೆ ಏನು ಹೇಳಲಿ?

01043034a ಮಾತೃಶಾಪಾಭಿಭೂತಾನಾಂ ಜ್ಞಾತೀನಾಂ ಮಮ ಸತ್ತಮ।
01043034c ಅಪತ್ಯಮೀಪ್ಷಿತಂ ತ್ವತ್ತಸ್ತಚ್ಚ ತಾವನ್ನ ದೃಶ್ಯತೇ।।

ಸತ್ತಮ! ಮಾತೃಶಾಪಕ್ಕೊಳಗಾದ ನನ್ನ ಬಾಂಧವರು ಬಯಸುತ್ತಿರುವ ನಿನ್ನಿಂದ ನನ್ನಲ್ಲಿ ಹುಟ್ಟುವ ಮಗನು ಇನ್ನೂ ಕಾಣುತ್ತಿಲ್ಲ.

01043035a ತ್ವತ್ತೋ ಹ್ಯಪತ್ಯಲಾಭೇನ ಜ್ಞಾತೀನಾಂ ಮೇ ಶಿವಂ ಭವೇತ್।
01043035c ಸಂಪ್ರಯೋಗೋ ಭವೇನ್ನಾಯಂ ಮಮ ಮೋಘಸ್ತ್ವಯಾ ದ್ವಿಜ।।
01043036a ಜ್ಞಾತೀನಾಂ ಹಿತಮಿಚ್ಛಂತೀ ಭಗವಂಸ್ತ್ವಾಂ ಪ್ರಸಾದಯೇ।
01043036c ಇಮಮವ್ಯಕ್ತರೂಪಂ ಮೇ ಗರ್ಭಮಾಧಾಯ ಸತ್ತಮ।
01043036e ಕಥಂ ತ್ಯಕ್ತ್ವಾ ಮಹಾತ್ಮಾಸನ್ಗಂತುಮಿಚ್ಛಸ್ಯನಾಗಸಂ।।

ನಿನ್ನಿಂದ ಹುಟ್ಟುವ ಈ ಸಂತತಿಯಿಂದಲೇ ನನ್ನ ಬಾಂಧವರಿಗೆ ಮಂಗಳವಾಗುತ್ತದೆ. ದ್ವಿಜನೇ! ಇದೇ ಉದ್ದೇಶದಿಂದ ನಿನ್ನೊಡನೆ ಕೂಡಿದುದನ್ನು ನಿಷ್ಫಲಗೊಳಿಸಬೇಡ. ಭಗವನ್! ಬಾಂಧವರ ಹಿತವನ್ನು ಬಯಸುವ ನನಗೆ ಕರುಣಿಸು. ಸತ್ತಮ! ಮಹಾತ್ಮ! ನನಗೆ ಗರ್ಭವನ್ನು ನೀಡಿ ಇನ್ನೂ ಅದು ತೋರಿಸಿಕೊಳ್ಳದಿರುವಾಗಲೇ ಅನಪರಾಧಿಯಾದ ನನ್ನನ್ನು ಬಿಟ್ಟು ಹೇಗೆ ಹೋಗುತ್ತಿದ್ದೀಯೆ?”

01043037a ಏವಮುಕ್ತಸ್ತು ಸ ಮುನಿರ್ಭಾರ್ಯಾಂ ವಚನಮಬ್ರವೀತ್।
01043037c ಯದ್ಯುಕ್ತಮನುರೂಪಂ ಚ ಜರತ್ಕಾರುಸ್ತಪೋಧನಃ।।

ಇದನ್ನು ಕೇಳಿದ ತಪೋಧನ ಮುನಿ ಜರತ್ಕಾರುವು ಭಾರ್ಯೆಗೆ ಈ ಅನುರೂಪ ಮಾತನ್ನು ಹೇಳಿದನು:

01043038a ಅಸ್ತ್ಯೇಷ ಗರ್ಭಃ ಸುಭಗೇ ತವ ವೈಶ್ವಾನರೋಪಮಃ।
01043038c ಋಷಿಃ ಪರಮಧರ್ಮಾತ್ಮಾ ವೇದವೇದಾಂಗಪಾರಗಃ।।

“ಸುಭಗೇ! ನಿನ್ನ ಗರ್ಭದಲ್ಲಿ ವೈಶ್ವಾನರನಂತಿರುವ ವೇದವೇದಾಂಗ ಪಾರಂಗತ ಪರಮಧರ್ಮಾತ್ಮ ಋಷಿಯಿರುವನು.”

01043039a ಏವಮುಕ್ತ್ವಾ ಸ ಧರ್ಮಾತ್ಮಾ ಜರತ್ಕಾರುರ್ಮಹಾನೃಷಿಃ।
01043039c ಉಗ್ರಾಯ ತಪಸೇ ಭೂಯೋ ಜಗಾಮ ಕೃತನಿಶ್ಚಯಃ।।

ಹೀಗೆ ಹೇಳಿ ಆ ಧರ್ಮಾತ್ಮ ಮಹಾನ್ ಋಷಿ ಜರತ್ಕಾರುವು ಉಗ್ರ ತಪಸ್ಸನ್ನು ಕೈಗೊಳ್ಳಲು ನಿರ್ಧರಿಸಿ ಹೊರಟುಹೋದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಆಸ್ತೀಕಪರ್ವಣಿ ಜರತ್ಕಾರುನಿರ್ಗಮೇ ತ್ರಿಚತ್ವಾರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಆಸ್ತೀಕಪರ್ವದಲ್ಲಿ ಜರತ್ಕಾರುನಿರ್ಗಮ ಎನ್ನುವ ನಲ್ವತ್ತ್ಮೂರನೆಯ ಅಧ್ಯಾಯವು.