ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಆಸ್ತೀಕ ಪರ್ವ
ಅಧ್ಯಾಯ 42
ಸಾರ
ಜರತ್ಕಾರುವು ತನ್ನ ವಿವಾಹಕ್ಕೆ ನಿಯಮಗಳನ್ನು ಹಾಕಿಕೊಳ್ಳುವುದು (1-5). ಕನ್ಯೆಯನ್ನು ಹುಡುಕಿ ಅರಣ್ಯದಲ್ಲಿ ಅಲೆಯುತ್ತಿರುವಾಗ ವಾಸುಕಿಯು ತನ್ನ ತಂಗಿಯನ್ನು ಕೊಡಲು ಮುಂದೆ ಬಂದುದು (6-20).01042001 ಸೂತ ಉವಾಚ।
01042001a ಏತತ್ ಶ್ರುತ್ವಾ ಜರತ್ಕಾರುರ್ದುಃಖಶೋಕಪರಾಯಣಃ।
01042001c ಉವಾಚ ಸ್ವಾನ್ಪಿತೄನ್ದುಃಖಾದ್ಬಾಷ್ಪಸಂದಿಗ್ಧಯಾ ಗಿರಾ।।
ಸೂತನು ಹೇಳಿದನು: “ಇದನ್ನೆಲ್ಲ ಕೇಳಿದ ಜರತ್ಕಾರುವು ದುಃಖಶೋಕಪರಾಯಣನಾಗಿ, ದುಃಖದಿಂದ ಬಾಷ್ಪಸಂದಿಗ್ಧ ಸ್ವರದಲ್ಲಿ ತನ್ನ ಪಿತೃಗಳಿಗೆ ಹೇಳಿದನು:
01042002a ಅಹಮೇವ ಜರತ್ಕಾರುಃ ಕಿಲ್ಬಿಷೀ ಭವತಾಂ ಸುತಃ।
01042002c ತದ್ದಂಡಂ ಧಾರಯತ ಮೇ ದುಷ್ಕೃತೇರಕೃತಾತ್ಮನಃ।।
“ನಾನೇ ಆ ತಪ್ಪಿತಸ್ಥ ನಿಮ್ಮ ಸುತ ಜರತ್ಕಾರು. ನಾನು ಓರ್ವ ಪಾಪಿ. ಪಾಪಾತ್ಮನಾದ ನನಗೆ ಶಿಕ್ಷೆಯನ್ನು ವಿಧಿಸಿ.”
01042003 ಪಿತರ ಊಚುಃ 01042003a ಪುತ್ರ ದಿಷ್ಟ್ಯಾಸಿ ಸಂಪ್ರಾಪ್ತ ಇಮಂ ದೇಶಂ ಯದೃಚ್ಛಯಾ।
01042003c ಕಿಮರ್ಥಂ ಚ ತ್ವಯಾ ಬ್ರಹ್ಮನ್ನ ಕೃತೋ ದಾರಸಂಗ್ರಹಃ।।
ಪಿತೃಗಳು ಹೇಳಿದರು: “ಇದೇ ಸ್ಥಳಕ್ಕೆ ನೀನು ತಿರುಗಾಡುತ್ತಾ ಬಂದಿದ್ದೀಯೆ ಎಂದರೆ ಅದೃಷ್ಟವೇ ಸರಿ. ಬ್ರಾಹ್ಮಣ! ನೀನು ಇದೂವರೆಗೂ ಪತ್ನಿಯನ್ನು ಪಡೆಯದೇ ಇರಲು ಕಾರಣವೇನು?”
01042004 ಜರತ್ಕಾರುರುವಾಚ 01042004a ಮಮಾಯಂ ಪಿತರೋ ನಿತ್ಯಂ ಹೃದ್ಯರ್ಥಃ ಪರಿವರ್ತತೇ।
01042004c ಊರ್ಧ್ವರೇತಾಃ ಶರೀರಂ ವೈ ಪ್ರಾಪಯೇಯಮಮುತ್ರ ವೈ।।
ಜರತ್ಕಾರುವು ಹೇಳಿದನು: “ಪಿತೃಗಳೇ! ನನ್ನ ವೀರ್ಯವನ್ನು ಹಿಡಿದಿಟ್ಟುಕೊಂಡು ಇದೇ ಶರೀರವನ್ನು ಹೊತ್ತು ಅಪರ ಲೋಕವನ್ನು ಸೇರಬೇಕೆಂಬುದು ಸದಾ ನನ್ನ ಹೃದಯದಲ್ಲಿ ಇದ್ದ ಬಯಕೆ.
01042005a ಏವಂ ದೃಷ್ಟ್ವಾ ತು ಭವತಃ ಶಕುಂತಾನಿವ ಲಂಬತಃ।
01042005c ಮಯಾ ನಿವರ್ತಿತಾ ಬುದ್ಧಿರ್ಬ್ರಹ್ಮಚರ್ಯಾತ್ಪಿತಾಮಹಾಃ।।
ಆದರೆ ಪಿತಾಮಹರೇ! ಶಕುಂತ ಪಕ್ಷಿಗಳಂತೆ ನೇತಾಡುತ್ತಿರುವ ನಿಮ್ಮನ್ನು ನೋಡಿ ನನ್ನ ಬುದ್ಧಿಯು ಬ್ರಹ್ಮಚರ್ಯದಿಂದ ಹಿಂದಿರುಗಿದೆ.
01042006a ಕರಿಷ್ಯೇ ವಃ ಪ್ರಿಯಂ ಕಾಮಂ ನಿವೇಕ್ಷ್ಯೇ ನಾತ್ರ ಸಂಶಯಃ।
01042006c ಸನಾಮ್ನೀಂ ಯದ್ಯಹಂ ಕನ್ಯಾಮುಪಲಪ್ಸ್ಯೇ ಕದಾಚನ।।
01042007a ಭವಿಷ್ಯತಿ ಚ ಯಾ ಕಾಚಿದ್ ಭೈಕ್ಷವತ್ಸ್ವಯಮುದ್ಯತಾ।
01042007c ಪ್ರತಿಗ್ರಹೀತಾ ತಾಮಸ್ಮಿ ನ ಭರೇಯಂ ಚ ಯಾಮಹಂ।।
ನಿಮಗೆ ಪ್ರಿಯ ಕಾರ್ಯವನ್ನು ನಿಸ್ಸಂಶಯವಾಗಿಯೂ ಮಾಡುತ್ತೇನೆ - ನನ್ನ ಹೆಸರನ್ನೇ ಹೊಂದಿರುವ ಕನ್ಯೆ ಯಾರಾದರೂ ನನಗೆ ದೊರೆತರೆ, ಯಾರಾದರೂ ಅವಳನ್ನು ನನಗೆ ಸ್ವಯಂ ಬಂದು ಭಿಕ್ಷಾರೂಪದಲ್ಲಿ ಕೊಟ್ಟರೆ, ಮತ್ತು ನಾನು ಪಾಲನೆ ಮಾಡಬೇಕಾಗಿಲ್ಲದವಳು ಸಿಕ್ಕರೆ ಅವಳನ್ನು ಪತ್ನಿಯನ್ನಾಗಿ ಸ್ವೀಕರಿಸುತ್ತೇನೆ.
01042008a ಏವಂವಿಧಮಹಂ ಕುರ್ಯಾಂ ನಿವೇಶಂ ಪ್ರಾಪ್ನುಯಾಂ ಯದಿ।
01042008c ಅನ್ಯಥಾ ನ ಕರಿಷ್ಯೇ ತು ಸತ್ಯಮೇತತ್ಪಿತಾಮಹಾಃ।।
ಪಿತಾಮಹರೇ! ಈ ವಿಧದಲ್ಲಿ ಮಾತ್ರ ನಾನು ಮದುವೆಯಾಗುತ್ತೇನೆ. ಅನ್ಯಥಾ ನಾನು ಮದುವೆ ಮಾಡಿಕೊಳ್ಳುವುದಿಲ್ಲ. ನಾನು ಸತ್ಯವನ್ನೇ ನುಡಿಯುತ್ತಿದ್ದೇನೆ.””
01042009 ಸೂತ ಉವಾಚ 01042009a ಏವಮುಕ್ತ್ವಾ ತು ಸ ಪಿತೄಂಶ್ಚಚಾರ ಪೃಥಿವೀಂ ಮುನಿಃ।
01042009c ನ ಚ ಸ್ಮ ಲಭತೇ ಭಾರ್ಯಾಂ ವೃದ್ಧೋಽಯಮಿತಿ ಶೌನಕ।।
ಸೂತನು ಹೇಳಿದನು: “ತನ್ನ ಪಿತೃಗಳಿಗೆ ಹೀಗೆ ಹೇಳಿದ ಮುನಿಯು ಇಡೀ ಪೃಥ್ವಿಯನ್ನು ಸಂಚರಿಸಿದನು. ಶೌನಕ! ಮುದುಕನಾಗಿದ್ದಾನೆಂದು ಅವನಿಗೆ ಪತ್ನಿಯೇ ದೊರೆಯಲಿಲ್ಲ.
01042010a ಯದಾ ನಿರ್ವೇದಮಾಪನ್ನಃ ಪಿತೃಭಿಶ್ಚೋದಿತಸ್ತಥಾ।
01042010c ತದಾರಣ್ಯಂ ಸ ಗತ್ವೋಚ್ಚೈಶ್ಚುಕ್ರೋಶ ಭೃಶದುಃಖಿತಃ।।
ಒಮ್ಮೆ ಅವನು ತನ್ನ ಪಿತೃಗಳ ಕಾರ್ಯವನ್ನು ನೆರವೇರಿಸಲು ಅಸಮರ್ಥನಾದೆನೆಂದು ನಿರಾಶೆಗೊಂಡು, ಒಂದು ಮಹದಾರಣ್ಯವನ್ನು ಹೊಕ್ಕು ದುಃಖದಿಂದ ಪೀಡಿತನಾಗಿ ಜೋರಾಗಿ ಕೂಗಿಕೊಂಡನು:
01042011a ಯಾನಿ ಭೂತಾನಿ ಸಂತೀಹ ಸ್ಥಾವರಾಣಿ ಚರಾಣಿ ಚ।
01042011c ಅಂತರ್ಹಿತಾನಿ ವಾ ಯಾನಿ ತಾನಿ ಶೃಣ್ವಂತು ಮೇ ವಚಃ।।
“ಇಲ್ಲಿರುವ ಚಲಿಸುವ ಮತ್ತು ಚಲಿಸದೇ ಇರುವ, ಕಾಣುವ ಮತ್ತು ಕಾಣದೇ ಇರುವ ಎಲ್ಲರೂ ನನ್ನ ಈ ಮಾತುಗಳನ್ನು ಕೇಳಿ.
01042012a ಉಗ್ರೇ ತಪಸಿ ವರ್ತಂತಂ ಪಿತರಶ್ಚೋದಯಂತಿ ಮಾಂ।
01042012c ನಿವಿಶಸ್ವೇತಿ ದುಃಖಾರ್ತಾಸ್ತೇಷಾಂ ಪ್ರಿಯಚಿಕೀರ್ಷಯಾ।।
ಉಗ್ರತಪಸ್ಸಿನಲ್ಲಿ ನಿರತನಾದ ನಾನು ನನ್ನ ದುಃಖಾರ್ತ ಪಿತೃಗಳ ಅಪ್ಪಣೆಯಂತೆ ಅವರಿಗೆ ಪ್ರಿಯಕಾರ್ಯವನ್ನು ಮಾಡಲು ಹೊರಟಿದ್ದೇನೆ.
01042013a ನಿವೇಶಾರ್ಥ್ಯಖಿಲಾಂ ಭೂಮಿಂ ಕನ್ಯಾಭೈಕ್ಷಂ ಚರಾಮಿ ಭೋಃ।
01042013c ದರಿದ್ರೋ ದುಃಖಶೀಲಶ್ಚ ಪಿತೃಭಿಃ ಸಂನಿಯೋಜಿತಃ।।
ಪಿತೃಗಳ ಸೂಚನೆಯಂತೆ ದರಿದ್ರ ಮತ್ತು ದುಃಖಶೀಲನಾದ ನಾನು ಇಡೀ ಭೂಮಿಯನ್ನು ಕನ್ಯಾಭಿಕ್ಷಾರ್ಚನೆ ಮಡುತ್ತಾ ತಿರುಗುತ್ತಿದ್ದೇನೆ.
01042014a ಯಸ್ಯ ಕನ್ಯಾಸ್ತಿ ಭೂತಸ್ಯ ಯೇ ಮಯೇಹ ಪ್ರಕೀರ್ತಿತಾಃ।
01042014c ತೇ ಮೇ ಕನ್ಯಾಂ ಪ್ರಯಚ್ಛಂತು ಚರತಃ ಸರ್ವತೋದಿಶಂ।।
ಇಲ್ಲಿ ನನ್ನ ಕೂಗು ಕೇಳುತ್ತಿರುವ ಯಾರಲ್ಲಿಯಾದರೂ ಓರ್ವ ಕನ್ಯೆಯಿದ್ದರೆ ಸರ್ವ ದಿಶೆಯಲ್ಲಿ ತಿರುಗುತ್ತಿರುವ ನನಗೆ ಅವಳನ್ನು ನೀಡಿ.
01042015a ಮಮ ಕನ್ಯಾ ಸನಾಮ್ನೀ ಯಾ ಭೈಕ್ಷವಚ್ಚೋದ್ಯತಾ ಭವೇತ್।
01042015c ಭರೇಯಂ ಚೈವ ಯಾಂ ನಾಹಂ ತಾಂ ಮೇ ಕನ್ಯಾಂ ಪ್ರಯಚ್ಛತ।।
ನನ್ನ ಹೆಸರನ್ನೇ ಹೊಂದಿರುವ ಕನ್ಯೆಯನ್ನು ಭಿಕ್ಷೆಯಾಗಿ ಕೊಡಿ. ನಾನು ಪಾಲಿಸಬೇಕಾಗಿರದ ಕನ್ಯೆಯನ್ನು ನೀಡಿ.”
01042016a ತತಸ್ತೇ ಪನ್ನಗಾ ಯೇ ವೈ ಜರತ್ಕಾರೌ ಸಮಾಹಿತಾಃ।
01042016c ತಾಮಾದಾಯ ಪ್ರವೃತ್ತಿಂ ತೇ ವಾಸುಕೇಃ ಪ್ರತ್ಯವೇದಯನ್।।
ಆಗ ಜರತ್ಕಾರುವಿನ ಮೇಲೆ ಕಣ್ಣಿಟ್ಟಿದ್ದ ಪನ್ನಗಗಳು ಅವನ ಪ್ರವೃತ್ತಿಯನ್ನು ವಾಸುಕಿಗೆ ಬಂದು ವರದಿಮಾಡಿದರು.
01042017a ತೇಷಾಂ ಶ್ರುತ್ವಾ ಸ ನಾಗೇಂದ್ರಃ ಕನ್ಯಾಂ ತಾಂ ಸಮಲಂಕೃತಾಂ।
01042017c ಪ್ರಗೃಹ್ಯಾರಣ್ಯಮಗಮತ್ಸಮೀಪಂ ತಸ್ಯ ಪನ್ನಗಃ।।
ಅವರನ್ನು ಕೇಳಿದ ಆ ಪನ್ನಗ ನಾಗೇಂದ್ರನು ಸಮಲಂಕೃತ ಕನ್ಯೆಯನ್ನು ಕರೆದುಕೊಂಡು ಆ ಅರಣ್ಯದಲ್ಲಿ ಅವನ ಸಮೀಪ ಬಂದನು.
01042018a ತತ್ರ ತಾಂ ಭೈಕ್ಷವತ್ಕನ್ಯಾಂ ಪ್ರಾದಾತ್ತಸ್ಮೈ ಮಹಾತ್ಮನೇ।
01042018c ನಾಗೇಂದ್ರೋ ವಾಸುಕಿರ್ಬ್ರಹ್ಮನ್ನ ಸ ತಾಂ ಪ್ರತ್ಯಗೃಹ್ಣತ।।
ಬಾಹ್ಮಣ! ನಾಗೇಂದ್ರ ವಾಸುಕಿಯು ಅ ಕನ್ಯೆಯನ್ನು ಮಹಾತ್ಮನಿಗೆ ಭಿಕ್ಷವಾಗಿತ್ತರೂ ಅವನು ಅವಳನ್ನು ತಕ್ಷಣವೇ ಸ್ವೀಕರಿಸಲಿಲ್ಲ.
01042019a ಅಸನಾಮೇತಿ ವೈ ಮತ್ವಾ ಭರಣೇ ಚಾವಿಚಾರಿತೇ।
01042019c ಮೋಕ್ಷಭಾವೇ ಸ್ಥಿತಶ್ಚಾಪಿ ದ್ವಂದ್ವೀಭೂತಃ ಪರಿಗ್ರಹೇ।।
ತನ್ನ ಹೆಸರನ್ನೇ ಅವಳು ಹೊಂದಿರಲಿಕ್ಕಿಲ್ಲ ಮತ್ತು ಅವಳನ್ನು ಪಾಲಿಸುವವರು ಯಾರು ಎಂದು ಅನುಮಾನಿಸಿ ದ್ವಂದ್ವೀಭೂತನಾಗಿ ಅವಳನ್ನು ಸ್ವೀಕರಿಸಲು ಹಿಂಜರಿದನು.
01042020a ತತೋ ನಾಮ ಸ ಕನ್ಯಾಯಾಃ ಪಪ್ರಚ್ಛ ಭೃಗುನಂದನ।
01042020c ವಾಸುಕೇ ಭರಣಂ ಚಾಸ್ಯಾ ನ ಕುರ್ಯಾಮಿತ್ಯುವಾಚ ಹ।।
ಭೃಗುನಂದನ! ಆಗ ಅವನು ವಾಸುಕಿಗೆ ಆ ಕನ್ಯೆಯ ಹೆಸರೇನೆಂದು ಕೇಳಿ ನಾನು ಅವಳ ಜೀವನವನ್ನು ನೋಡಿಕೊಳ್ಳುವುದಿಲ್ಲ ಎಂದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಆಸ್ತೀಕಪರ್ವಣಿ ವಾಸುಕಿಜರತ್ಕಾರುಸಮಾಗಮೇ ದ್ವಿಚತ್ವಾರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಆಸ್ತೀಕಪರ್ವದಲ್ಲಿ ವಾಸುಕಿಜರತ್ಕಾಕರುಸಮಾಗಮಃ ಎನ್ನುವ ನಲ್ವತ್ತೆರಡನೆಯ ಅಧ್ಯಾಯವು.