ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಆಸ್ತೀಕ ಪರ್ವ
ಅಧ್ಯಾಯ 31
ಸಾರ
ಜರತ್ಕಾರು ಮತ್ತು ಸಂಕಟದಲ್ಲಿದ್ದ ಅವನ ಪಿತೃಗಳ ಸಂವಾದ (1-30).01041001 ಸೂತ ಉವಾಚ।
01041001a ಏತಸ್ಮಿನ್ನೇವ ಕಾಲೇ ತು ಜರತ್ಕಾರುರ್ಮಹಾತಪಾಃ।
01041001c ಚಚಾರ ಪೃಥಿವೀಂ ಕೃತ್ಸ್ನಾಂ ಯತ್ರಸಾಯಂಗೃಹೋ ಮುನಿಃ।।
ಸೂತನು ಹೇಳಿದನು: “ಇದೇ ಸಮಯದಲ್ಲಿ ಮಹಾತಪಸ್ವಿ ಜರತ್ಕಾರುವು ಸಾಯಂಕಾಲ ಎಲ್ಲಿರುತ್ತಾನೋ ಅಲ್ಲಿಯೇ ತಂಗುತ್ತಾ ಇಡೀ ಪೃಥ್ವಿಯಮೇಲೆ ತಿರುಗುತ್ತಿದ್ದನು.
01041002a ಚರಂದೀಕ್ಷಾಂ ಮಹಾತೇಜಾ ದುಶ್ಚರಾಮಕೃತಾತ್ಮಭಿಃ।
01041002c ತೀರ್ಥೇಷ್ವಾಪ್ಲವನಂ ಕುರ್ವನ್ಪುಣ್ಯೇಷು ವಿಚಚಾರ ಹ।।
ಮಹಾತೇಜಸ್ವಿಗಳಿಗೂ ಅಸಾಧ್ಯವೆನಿಸುವ ಕಾರ್ಯಪಾಲನೆ ಮಾಡುತ್ತಾ ಪುಣ್ಯಕ್ಷೇತ್ರಗಳಲ್ಲಿ ತೀರ್ಥಸ್ನಾನಗಳನ್ನು ಮಾಡುತ್ತಾ ಸಂಚರಿಸುತ್ತಿದ್ದನು.
01041003a ವಾಯುಭಕ್ಷೋ ನಿರಾಹಾರಃ ಶುಷ್ಯನ್ನಹರಹರ್ಮುನಿಃ।
01041003c ಸ ದದರ್ಶ ಪಿತೄನ್ಗರ್ತೇ ಲಂಬಮಾನಾನಧೋಮುಖಾನ್।।
ನಿರಾಹಾರನಾಗಿ ಕೇವಲ ಗಾಳಿಯನ್ನೇ ಸೇವಿಸುತ್ತಾ ದಿನ ದಿನವೂ ತನ್ನ ದೇಹವನ್ನು ಒಣಗಿಸುತ್ತಿದ್ದನು. ಒಮ್ಮೆ ಅವನು ಒಂದು ಬಾವಿಯಲ್ಲಿ ತಲೆಕೆಳಗಾಗಿ ನೇಲುತ್ತಿದ್ದ ತನ್ನ ಪಿತೃಗಳನ್ನು ಕಂಡನು.
01041004a ಏಕತಂತ್ವವಶಿಷ್ಠಂ ವೈ ವೀರಣಸ್ತಂಬಮಾಶ್ರಿತಾನ್।
01041004c ತಂ ಚ ತಂತುಂ ಶನೈರಾಖುಮಾದದಾನಂ ಬಿಲಾಶ್ರಯಂ।।
ಆ ಬಿಲದಲ್ಲಿಯೇ ವಾಸಿಸುತ್ತಿದ್ದ ಇಲಿಗಳು ತಿಂದು ಜೀರ್ಣವಾದ ಒಂದೇ ಒಂದು ವೀರಣದ ಬೇರನ್ನು ಹಿಡಿದು ಅವರು ನೇತಾಡುತ್ತಿದ್ದರು.
01041005a ನಿರಾಹಾರಾನ್ಕೃಶಾನ್ದೀನಾನ್ಗರ್ತೇಽಽರ್ತಾಂಸ್ತ್ರಾಣಮಿಚ್ಛತಃ।
01041005c ಉಪಸೃತ್ಯ ಸ ತಾನ್ದೀನಾನ್ದೀನರೂಪೋಽಭ್ಯಭಾಷತ।।
ಆಹಾರವಿಲ್ಲದೇ ಬಡಕಲು ಬಿದ್ದು, ಮೇಲೆ ಬರಲು ಸ್ವಲ್ಪವೂ ಶಕ್ತಿಯಿಲ್ಲದೇ ಅರ್ತ ದೀನರೂಪಿಗಳಾದ ದೀನರ ಬಳಿಬಂದು ಅವನು ಹೇಳಿದನು:
01041006a ಕೇ ಭವಂತೋಽವಲಂಬಂತೇ ವೀರಣಸ್ತಂಬಮಾಶ್ರಿತಾಃ।
01041006c ದುರ್ಬಲಂ ಖಾದಿತೈರ್ಮೂಲೈರಾಖುನಾ ಬಿಲವಾಸಿನಾ।।
“ಇದೇ ಬಿಲದಲ್ಲಿ ವಾಸಿಸುತ್ತಿರುವ ಇಲಿಯಿಂದ ತಿನ್ನಲ್ಪಟ್ಟು ದುರ್ಬಲವಾಗಿರುವ ಈ ವೀರಣದ ಬೇರನ್ನು ಹಿಡಿದು ನೇತಾಡುತ್ತಿರುವ ನೀವು ಯಾರು?
01041007a ವೀರಣಸ್ತಂಬಕೇ ಮೂಲಂ ಯದಪ್ಯೇಕಮಿಹ ಸ್ಥಿತಂ।
01041007c ತದಪ್ಯಯಂ ಶನೈರಾಖುರಾದತ್ತೇ ದಶನೈಃ ಶಿತೈಃ।।
ನೀವು ಹಿಡಿದು ನಿಂತಿರುವ ಈ ವೀರಣ ಬೇರಿನ ದಾರವು ಇಲಿಯಿಂದ ತಿನ್ನಲ್ಪಟ್ಟು ನಿಧಾನವಾಗಿ ಹರಿದುಹೋಗುತ್ತಿದೆ.
01041008a ಚೇತ್ಸ್ಯತೇಽಲ್ಪಾವಶಿಷ್ಠತ್ವಾದೇತದಪ್ಯಚಿರಾದಿವ।
01041008c ತತಃ ಸ್ಥ ಪತಿತಾರೋಽತ್ರ ಗರ್ತೇ ಅಸ್ಮಿನ್ನಧೋಮುಖಾಃ।।
ಈ ಆಳವಾದ ಬಾವಿಯಲ್ಲಿ ನೀವು ತಲೆಕೆಳಗಾಗಿ ಬೀಳುತ್ತೀರಿ ಎನ್ನುವುದಲ್ಲಿ ಸಂಶಯವೇ ಇಲ್ಲ.
01041009a ತತೋ ಮೇ ದುಃಖಮುತ್ಪನ್ನಂ ದೃಷ್ಠ್ವಾ ಯುಷ್ಮಾನಧೋಮುಖಾನ್।
01041009c ಕೃಚ್ಛ್ರಾಮಾಪದಮಾಪನ್ನಾನ್ಪ್ರಿಯಂ ಕಿಂ ಕರವಾಣಿ ವಃ।।
ಅಧೋಮುಖರಾಗಿರುವ ನಿಮ್ಮನ್ನು ನೋಡಿ ನನಗೆ ಅತೀವ ದುಃಖವಾಗುತ್ತಿದೆ. ನಿಮಗೆ ಪ್ರಿಯವಾದ ಯಾವ ಕಾರ್ಯವನ್ನು ಮಾಡಲಿ ಹೇಳಿ.
01041010a ತಪಸೋಽಸ್ಯ ಚತುರ್ಥೇನ ತೃತೀಯೇನಾಪಿ ವಾ ಪುನಃ।
01041010c ಅರ್ಧೇನ ವಾಪಿ ನಿಸ್ತರ್ತುಮಾಪದಂ ಬ್ರೂತ ಮಾಚಿರಂ।।
ನನ್ನ ತಪೋಬಲದ ಕಾಲುಭಾಗದಿಂದ ಅಥವಾ ಮೂರರಲ್ಲಿ ಒಂದು ಭಾಗ ಅಥವಾ ಅರ್ಧಭಾಗದಿಂದ ನಿಮ್ಮ ಈ ಆಪತ್ತನ್ನು ನಿವಾರಿಸಬಹುದಾದರೆ ಬೇಗ ಹೇಳಿ.
01041011a ಅಥವಾಪಿ ಸಮಗ್ರೇಣ ತರಂತು ತಪಸಾ ಮಮ।
01041011c ಭವಂತಃ ಸರ್ವ ಏವಾಸ್ಮಾತ್ಕಾಮಮೇವಂ ವಿಧೀಯತಾಂ।।
ಅಥವಾ, ನನ್ನ ಸಮಗ್ರ ತಪಸ್ಸಿನ ಬಲದಿಂದ ನಿಮ್ಮ ಈ ಎಲ್ಲ ಕಷ್ಟಗಳು ದೂರಾಗುವವೆಂದರೆ ಹೇಳಿ. ಅದಕ್ಕೂ ನಾನು ಸಿದ್ಧನಿದ್ದೇನೆ.”
01041012 ಪಿತರ ಊಚುಃ 01041012a ಋದ್ಧೋ ಭವಾನ್ಬ್ರಹ್ಮಚಾರೀ ಯೋ ನಸ್ತ್ರಾತುಮಿಹೇಚ್ಛತಿ।
01041012c ನ ತು ವಿಪ್ರಾಗ್ರ್ಯ ತಪಸಾ ಶಕ್ಯಮೇತದ್ವ್ಯಪೋಹಿತುಂ।।
ಪಿತೃಗಳು ಹೇಳಿದರು: “ಬ್ರಹ್ಮಚಾರಿ! ನಮ್ಮನ್ನು ಉದ್ಧರಿಸಲು ಬಯಸುತ್ತಿದ್ದೀಯೆ. ಆದರೆ ನಿನ್ನ ತಪಸ್ಸಿನಿಂದ ನಮ್ಮನ್ನು ಉಳಿಸಲು ಶಕ್ಯವಿಲ್ಲ.
01041013a ಅಸ್ತಿ ನಸ್ತಾತ ತಪಸಃ ಫಲಂ ಪ್ರವದತಾಂ ವರ।
01041013c ಸಂತಾನಪ್ರಕ್ಷಯಾದ್ಬ್ರಹ್ಮನ್ಪತಾಮೋ ನಿರಯೇಽಶುಚೌ।।
ಮಗು! ನಮ್ಮಲ್ಲಿ ಕೂಡ ತಪಸ್ಸಿನ ಶ್ರೇಷ್ಠ ಫಲಗಳಿವೆ. ಆದರೆ ಬ್ರಾಹ್ಮಣ! ಸಂತಾನದ ಕೊರತೆಯಿಂದಾಗಿ ನಾವು ಈ ನರಕದಲ್ಲಿ ಬೀಳುತ್ತಿದ್ದೇವೆ.
01041014a ಲಂಬತಾಮಿಹ ನಸ್ತಾತ ನ ಜ್ಞಾನಂ ಪ್ರತಿಭಾತಿ ವೈ।
01041014c ಯೇನ ತ್ವಾಂ ನಾಭಿಜಾನೀಮೋ ಲೋಕೇ ವಿಖ್ಯಾತಪೌರುಷಂ।।
ಮಗು! ಇಲ್ಲಿ ನೇತಾಡುತ್ತಿರುವ ನಮ್ಮ ಜ್ಞಾನ ಪ್ರತಿಭೆಯು ಕುಂದುತ್ತಿದೆ. ಆದುದರಿಂದ ನೀನು ಪೌರುಷದಲ್ಲಿ ಲೋಕದಲ್ಲೆಲ್ಲಾ ವಿಖ್ಯಾತನಾಗಿದ್ದರೂ ನಮಗೆ ನಿನ್ನನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ.
01041015a ಋದ್ಧೋ ಭವಾನ್ಮಹಾಭಾಗೋ ಯೋ ನಃ ಶೋಚ್ಯಾನ್ಸುದುಃಖಿತಾನ್।
01041015c ಶೋಚಸ್ಯುಪೇತ್ಯ ಕಾರುಣ್ಯಾಚ್ಛೃಣು ಯೇ ವೈ ವಯಂ ದ್ವಿಜ।।
ಮಹಾಭಾಗ ನೀನು ಪೂಜಿಸಲರ್ಹ. ಶೋಚಿಸುತ್ತಿರುವ ನಮ್ಮ ಸಮದುಃಖಿಯಾಗಿದ್ದೀಯೆ. ದ್ವಿಜ! ನಾವು ಯಾರು ಮತ್ತು ಯಾವ ಕಾರಣಕ್ಕಾಗಿ ಶೋಚಿಸುತ್ತಿದ್ದೇವೆ ಎನ್ನುವುದನ್ನು ಕೇಳು.
01041016a ಯಾಯಾವರಾ ನಾಮ ವಯಮೃಷಯಃ ಸಂಶಿತವ್ರತಾಃ।
01041016c ಲೋಕಾತ್ಪುಣ್ಯಾದಿಹ ಭ್ರಷ್ಠಾಃ ಸಂತಾನಪ್ರಕ್ಷಯಾದ್ವಿಭೋ।।
ನಾವು ಯಾಯಾವರಾ ಎಂಬ ಹೆಸರಿನ ಸಂಶಿತವ್ರತ ಋಷಿಗಳು. ಸಂತಾನವಿಲ್ಲದಿರುವ ಕಾರಣದಿಂದ ನಾವು ಪುಣ್ಯಲೋಕದಿಂದ ಭ್ರಷ್ಟರಾಗಿದ್ದೇವೆ.
01041017a ಪ್ರನಷ್ಟಂ ನಸ್ತಪಃ ಪುಣ್ಯಂ ನ ಹಿ ನಸ್ತಂತುರಸ್ತಿ ವೈ।
01041017c ಅಸ್ತಿ ತ್ವೇಕೋಽದ್ಯ ನಸ್ತಂತುಃ ಸೋಽಪಿ ನಾಸ್ತಿ ಯಥಾ ತಥಾ।।
ನಮ್ಮ ತಪಸ್ಸಿನ ಪುಣ್ಯಗಳು ಇನ್ನೂ ಸಂಪೂರ್ಣವಾಗಿ ನಶಿಸಿಹೋಗಿಲ್ಲ. ಆದುದರಿಂದ ನಮಗೆ ಈ ದಾರವಾದರೂ ಆಧಾರವಾಗಿದೆ. ಆದರೆ ಇದು ಇದ್ದರೂ ಒಂದೇ ಇಲ್ಲದಿದ್ದರೂ ಒಂದೇ.
01041018a ಮಂದಭಾಗ್ಯೋಽಲ್ಪಭಾಗ್ಯಾನಾಂ ಬಂಧುಃ ಸ ಕಿಲ ನಃ ಕುಲೇ।
01041018c ಜರತ್ಕಾರುರಿತಿ ಖ್ಯಾತೋ ವೇದವೇದಾಂಗಪಾರಗಃ।
01041018e ನಿಯತಾತ್ಮಾ ಮಹಾತ್ಮಾ ಚ ಸುವ್ರತಃ ಸುಮಹಾತಪಾಃ।।
ಮಂದಭಾಗ್ಯರಾದ ನಮ್ಮ ಕುಲದ ಏಕತ್ರ ಬಂಧುವಿನಲ್ಲಿ ನಮ್ಮ ಉಳಿದ ಅಲ್ಪಭಾಗ್ಯವಿದೆ. ಅವನು ಜರತ್ಕಾರುವೆಂದು ಖ್ಯಾತ ವೇದವೇದಾಂಗಪಾರಂಗತ, ನಿಯತಾತ್ಮ, ಸುವ್ರತ, ಸುಮಹಾತಪಸ್ವಿ ಮಹಾತ್ಮನು.
01041019a ತೇನ ಸ್ಮ ತಪಸೋ ಲೋಭಾತ್ ಕೃಚ್ಛ್ರಮಾಪಾದಿತಾ ವಯಂ।
01041019c ನ ತಸ್ಯ ಭಾರ್ಯಾ ಪುತ್ರೋ ವಾ ಬಾಂಧವೋ ವಾಸ್ತಿ ಕಶ್ಚನ।।
ಆದರೆ ಅವನ ತಪಸ್ಸಿನ ಲೋಭದಿಂದಾಗಿ ನಾವು ಈ ಪರಿಸ್ಥಿತಿಯಲ್ಲಿದ್ದೇವೆ. ಅವನಿಗೆ ಹೆಂಡತಿ, ಪುತ್ರ ಅಥವಾ ಬಾಂಧವರ್ಯಾರೂ ಇಲ್ಲ.
01041020a ತಸ್ಮಾಲ್ಲಂಬಾಮಹೇ ಗರ್ತೇ ನಷ್ಟಸಂಜ್ಞಾ ಹ್ಯನಾಥವತ್।
01041020c ಸ ವಕ್ತವ್ಯಸ್ತ್ವಯಾ ದೃಷ್ಟ್ವಾ ಅಸ್ಮಾಕಂ ನಾಥವತ್ತಯಾ।।
ಅದರಿಂದಾಗಿ ನಾವು ಹೀಗೆ ನಷ್ಟಸಂಜ್ಞರಾಗಿ ಅನಾಥರಂತೆ ಈ ಬಾವಿಯಲ್ಲಿ ನೇತಾಡುತ್ತಿದ್ದೇವೆ. ನೀನು ಅವನನ್ನು ಕಂಡರೆ ನಮ್ಮ ಮೇಲಿನ ಕರುಣೆಯಿಂದ ಅವನಿಗೆ ಇದನ್ನು ತಿಳಿಸು.
01041021a ಪಿತರಸ್ತೇಽವಲಂಬಂತೇ ಗರ್ತೇ ದೀನಾ ಅಧೋಮುಖಾಃ।
01041021c ಸಾಧು ದಾರಾನ್ಕುರುಷ್ವೇತಿ ಪ್ರಜಾಯಸ್ವೇತಿ ಚಾಭಿಭೋ।
01041021e ಕುಲತಂತುರ್ಹಿ ನಃ ಶಿಷ್ಠಸ್ತ್ವಂ ಏವೈಕಸ್ತಪೋಧನ।।
“ನಿನ್ನ ಪಿತೃಗಳು ಒಂದು ಬಾವಿಯಲ್ಲಿ ದೀನರಾಗಿ ಅಧೋಮುಖರಾಗಿ ನೇತಾಡುತ್ತಿದ್ದಾರೆ. ಸಾಧುವೇ! ಪತ್ನಿಯನ್ನು ಹೊಂದಿ, ಮಕ್ಕಳನ್ನು ಪಡೆ. ನೀನೊಬ್ಬನೇ ಅವರಿಗಿರುವ ಒಂದೇ ಒಂದು ಕುಲತಂತು.’
01041022a ಯಂ ತು ಪಶ್ಯಸಿ ನೋ ಬ್ರಹ್ಮನ್ವೀರಣಸ್ತಂಬಮಾಶ್ರಿತಾನ್।
01041022c ಏಷೋಽಸ್ಮಾಕಂ ಕುಲಸ್ತಂಬ ಆಸೀತ್ಸ್ವಕುಲವರ್ಧನಃ।।
ಬ್ರಾಹ್ಮಣ! ನಾವು ಹಿಡಿದಿರುವ ಈ ವೀರಣದ ಬೇರು ನಮ್ಮ ಕುಲವನ್ನು ಮುಂದುವರಿಸಬಹುದಾಗಿರುವ ಒಂದೇ ಒಂದು ಕುಲಸ್ತಂಭ.
01041023a ಯಾನಿ ಪಶ್ಯಸಿ ವೈ ಬ್ರಹ್ಮನ್ಮೂಲಾನೀಹಾಸ್ಯ ವೀರುಧಃ।
01041023c ಏತೇ ನಸ್ತಂತವಸ್ತಾತ ಕಾಲೇನ ಪರಿಭಕ್ಷಿತಾಃ।।
ಬ್ರಾಹ್ಮಣ! ನಿನಗೆ ಕಾಣುತ್ತಿರುವಂತೆ ಜೀರ್ಣವಾಗಿರುವ ಈ ಬೇರನ್ನು ತಿನ್ನುತ್ತಿರುವವನೇ ಕಾಲ.
01041024a ಯತ್ತ್ವೇತತ್ಪಶ್ಯಸಿ ಬ್ರಹ್ಮನ್ಮೂಲಮಸ್ಯಾರ್ಧಭಕ್ಷಿತಂ।
01041024c ತತ್ರ ಲಂಬಾಮಹೇ ಸರ್ವೇ ಸೋಽಪ್ಯೇಕಸ್ತಪ ಆಸ್ಥಿತಃ।।
ಬ್ರಾಹ್ಮಣ! ನಾವು ಹಿಡಿದು ನೇತಾಡುತ್ತಿರುವ ಅರ್ಧ ತಿಂದು ಜೀರ್ಣವಾಗಿರುವ ಈ ಬೇರೇ ತಪಸ್ಸಿನಲ್ಲಿರುವ ಅವನು.
01041025a ಯಮಾಖುಂ ಪಶ್ಯಸಿ ಬ್ರಹ್ಮನ್ಕಾಲ ಏಷ ಮಹಾಬಲಃ।
01041025c ಸ ತಂ ತಪೋರತಂ ಮಂದಂ ಶನೈಃ ಕ್ಷಪಯತೇ ತುದನ್।
01041025e ಜರತ್ಕಾರುಂ ತಪೋಲುಬ್ಧಂ ಮಂದಾತ್ಮಾನಮಚೇತಸಂ।।
ಬ್ರಹ್ಮನ್! ನೀನು ನೋಡುವ ಇಲಿಯೇ ಆ ಬಹಾಬಲಿ ಕಾಲ. ಅವನು ಮಂದಾತ್ಮ, ಅಚೇತಸ, ತಪೋಲುಬ್ಧ ಮತ್ತು ತಪೋನಿರತ ಜರತ್ಕಾರುವನ್ನು ನಿಧಾನವಾಗಿ ಭಕ್ಷಿಸುತ್ತಿದ್ದಾನೆ.
01041026a ನ ಹಿ ನಸ್ತತ್ತಪಸ್ತಸ್ಯ ತಾರಯಿಷ್ಯತಿ ಸತ್ತಮ।
01041026c ಚಿನ್ನಮೂಲಾನ್ಪರಿಭ್ರಷ್ಟಾನ್ಕಾಲೋಪಹತಚೇತಸಃ।
01041026e ನರಕಪ್ರತಿಷ್ಠಾನ್ಪಶ್ಯಾಸ್ಮಾನ್ಯಥಾ ದುಷ್ಕೃತಿನಸ್ತಥಾ।।
ಸತ್ತಮ! ಅವನ ತಪಸ್ಸು ನಮ್ಮನ್ನು ಪಾರುಮಾಡುವುದಿಲ್ಲ. ನಮ್ಮ ಮೂಲವೇ ತುಂಡಾಗಿದೆ, ಮತ್ತು ಕಾಲಾಂತರದಿಂದ ನಮ್ಮ ಮನಸ್ಸು ಗಾಯಗೊಂಡಿದೆ. ನಾವು ಹೇಗೆ ಈ ನರಕದಲ್ಲಿ ಪಾಪಿಗಳಂತೆ ಅಧೋಗತಿಗಿಳಿಯುತ್ತಿದ್ದೇವೆ ನೋಡು!
01041027a ಅಸ್ಮಾಸು ಪತಿತೇಷ್ವತ್ರ ಸಹ ಪೂರ್ವೈಃ ಪಿತಾಮಹೈಃ।
01041027c ಚಿನ್ನಃ ಕಾಲೇನ ಸೋಽಪ್ಯತ್ರ ಗಂತಾ ವೈ ನರಕಂ ತತಃ।।
ನಮ್ಮ ಪೂರ್ವ ಪಿತಾಮಹರೊಂದಿಗೆ ನಾವು ಎಂದು ಈ ಆಳದಲ್ಲಿ ಮುಳುಗುತ್ತೇವೋ ಆಗ ಅವನೂ ಕೂಡ ಕಾಲನಿಂದ ಛಿದ್ರಛಿದ್ರನಾಗಿ ನಮ್ಮೊಂದಿಗೆ ನರಕವನ್ನು ಸೇರುತ್ತಾನೆ.
01041028a ತಪೋ ವಾಪ್ಯಥವಾ ಯಜ್ಞೋ ಯಚ್ಚಾನ್ಯತ್ಪಾವನಂ ಮಹತ್।
01041028c ತತ್ಸರ್ವಂ ನ ಸಮಂ ತಾತ ಸಂತತ್ಯೇತಿ ಸತಾಂ ಮತಂ।।
ಮಗು! ತಪಸ್ಸಾಗಲೀ, ಯಜ್ಞವಾಗಲೀ ಅಥವಾ ಬೇರೆ ಯಾವುದೇ ಮಹಾ ಪುಣ್ಯಕಾರ್ಯವಾಗಲೀ - ಅವೆಲ್ಲವೂ ಸಂತತಿಗೆ ಸಮಾನವಲ್ಲ ಎನ್ನುವುದು ಸತ್ಯವಂತರ ಮತ.
01041029a ಸ ತಾತ ದೃಷ್ಟ್ವಾ ಬ್ರೂಯಾಸ್ತ್ವಂ ಜರತ್ಕಾರುಂ ತಪಸ್ವಿನಂ।
01041029c ಯಥಾದೃಷ್ಟಮಿದಂ ಚಾಸ್ಮೈ ತ್ವಯಾಖ್ಯೇಯಮಶೇಷತಃ।।
ಮಗು! ತಪಸ್ವಿ ಜರತ್ಕಾರುವನ್ನು ಕಂಡರೆ ಅವನಿಗೆ ನೀನು ಇಲ್ಲಿ ನೋಡಿದುದೆಲ್ಲವನ್ನೂ ಮತ್ತು ನಮ್ಮ ಈ ಮಾತುಗಳನ್ನೂ ಯಥಾವತ್ತಾಗಿ ಹೇಳು.
01041030a ಯಥಾ ದಾರಾನ್ಪ್ರಕುರ್ಯಾತ್ಸ ಪುತ್ರಾಂಶ್ಚೋತ್ಪಾದಯೇದ್ಯಥಾ।
01041030c ತಥಾ ಬ್ರಹ್ಮಂಸ್ತ್ವಯಾ ವಾಚ್ಯಃ ಸೋಽಸ್ಮಾಕಂ ನಾಥವತ್ತಯಾ।।
ಅವನು ಪತ್ನಿಯನ್ನು ಮಾಡಿಕೊಂಡು ಪುತ್ರನನ್ನು ಪಡೆದು ನಮ್ಮನ್ನು ರಕ್ಷಿಸಬೇಕೆಂದರೆ ಬ್ರಾಹ್ಮಣ! ನೀನು ಇದನ್ನು ಅವನಿಗೆ ತಿಳಿಸಬೇಕು.””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಆಸ್ತೀಕಪರ್ವಣಿ ಜರತ್ಕಾರುಪಿತೃದರ್ಶನೇ ಏಕಚತ್ವಾರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಆಸ್ತೀಕಪರ್ವದಲ್ಲಿ ಜರತ್ಕಾರುಪಿತೃದರ್ಶನ ಎನ್ನುವ ನಲವತ್ತೊಂದನೆಯ ಅಧ್ಯಾಯವು.