040 ಜನಮೇಜಯರಾಜ್ಯಾಭಿಷೇಕಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಆಸ್ತೀಕ ಪರ್ವ

ಅಧ್ಯಾಯ 40

ಸಾರ ಜನಮೇಜಯನ ಪಟ್ಟಾಭಿಷೇಕ ಮತ್ತು ವಿವಾಹ (1-10).

01040001 ಸೂತ ಉವಾಚ।
01040001a ತಂ ತಥಾ ಮಂತ್ರಿಣೋ ದೃಷ್ಟ್ವಾ ಭೋಗೇನ ಪರಿವೇಷ್ಟಿತಂ।
01040001c ವಿವರ್ಣವದನಾಃ ಸರ್ವೇ ರುರುದುರ್ಭೃಶದುಃಖಿತಾಃ।।

ಸೂತನು ಹೇಳಿದನು: “ಸರ್ಪವು ಸುತ್ತಿಹಾಕಿಕೊಂಡ ಅವನನ್ನು ನೋಡಿದ ಮಂತ್ರಿಗಳೆಲ್ಲರೂ ವಿವರ್ಣವದನರಾಗಿ ದುಃಖಪೀಡಿತರಾಗಿ ರೋದಿಸಿದರು.

01040002a ತಂ ತು ನಾದಂ ತತಃ ಶ್ರುತ್ವಾ ಮಂತ್ರಿಣಸ್ತೇ ಪ್ರದುದ್ರುವುಃ।
01040002c ಅಪಶ್ಯಂಶ್ಚೈವ ತೇ ಯಾಂತಮಾಕಾಶೇ ನಾಗಮದ್ಭುತಂ।।
01040003a ಸೀಮಂತಮಿವ ಕುರ್ವಾಣಂ ನಭಸಃ ಪದ್ಮವರ್ಚಸಂ।
01040003c ತಕ್ಷಕಂ ಪನ್ನಗಶ್ರೇಷ್ಠಂ ಭೃಶಂ ಶೋಕಪರಾಯಣಾಃ।।

ಅವನ ಅಟ್ಟಹಾಸವನ್ನು ಕೇಳಿದ ಮಂತ್ರಿಗಳು ಎಲ್ಲಕಡೆ ಪಲಾಯನ ಮಾಡತೊಡಗಿದರು. ಶೋಕಪರಾಯಣರಾಗಿ ಓಡುತ್ತಿರುವಾಗ ಅವರು ಆ ಅದ್ಭುತ ನಾಗ ಪನ್ನಗಶ್ರೇಷ್ಠ ತಕ್ಷಕನು ಆಕಾಶವನ್ನು ಸೀಳುತ್ತಿರುವಂತೆ ಪದ್ಮವರ್ಚಸ ರೇಖೆಯನ್ನುಂಟುಮಾಡುತ್ತಾ ಹೋಗುವುದನ್ನು ಕಂಡರು.

01040004a ತತಸ್ತು ತೇ ತದ್ಗೃಹಮಗ್ನಿನಾ ವೃತಂ ಪ್ರದೀಪ್ಯಮಾನಂ ವಿಷಜೇನ ಭೋಗಿನಃ।
01040004c ಭಯಾತ್ಪರಿತ್ಯಜ್ಯ ದಿಶಃ ಪ್ರಪೇದಿರೇ ಪಪಾತ ತಚ್ಚಾಶನಿತಾಡಿತಂ ಯಥಾ।।

ಆ ಗೃಹವು ಸರ್ಪದ ವಿಷಾಗ್ನಿಯಿಂದ ಹತ್ತಿ ಉರಿಯತೊಡಗಿತು. ಮಿಂಚು ಹೊಡೆದವನಂತೆ ಕೆಳಗುರುಳಿದ ರಾಜನನ್ನು ಅಲ್ಲಿಯೇ ಬಿಟ್ಟು ಭಯದಿಂದ ಅವರೆಲ್ಲರೂ ದಿಕ್ಕುಪಾಲಾದರು.

01040005a ತತೋ ನೃಪೇ ತಕ್ಷಕತೇಜಸಾ ಹತೇ ಪ್ರಯುಜ್ಯ ಸರ್ವಾಃ ಪರಲೋಕಸತ್ಕ್ರಿಯಾಃ।
01040005c ಶುಚಿರ್ದ್ವಿಜೋ ರಾಜಪುರೋಹಿತಸ್ತದಾ ತಥೈವ ತೇ ತಸ್ಯ ನೃಪಸ್ಯ ಮಂತ್ರಿಣಃ।।

ಈ ರೀತಿ ರಾಜನು ತಕ್ಷಕನ ತೇಜಸ್ಸಿನಿಂದ ಹತನಾದ ನಂತರ ಆ ನೃಪನ ಮಂತ್ರಿಗಳು - ಪುಣ್ಯ ದ್ವಿಜರು ಮತ್ತು ರಾಜಪುರೋಹಿತರೊಂದಿಗೆ - ಅವನ ಎಲ್ಲ ಪರಲೋಕಸತ್ಕ್ರಿಯೆಗಳನ್ನೂ ನೆರವೇರಿಸಿದರು.

01040006a ನೃಪಂ ಶಿಶುಂ ತಸ್ಯ ಸುತಂ ಪ್ರಚಕ್ರಿರೇ ಸಮೇತ್ಯ ಸರ್ವೇ ಪುರವಾಸಿನೋ ಜನಾಃ।
01040006c ನೃಪಂ ಯಮಾಹುಸ್ತಮಮಿತ್ರಘಾತಿನಂ ಕುರುಪ್ರವೀರಂ ಜನಮೇಜಯಂ ಜನಾಃ।।

ಸರ್ವ ಪುರವಾಸಿ ಜನರೂ ಸೇರಿ ಅವನ ಬಾಲಕ ಮಗನನ್ನು ರಾಜನನ್ನಾಗಿ ಮಾಡಿದರು. ಶತ್ರುಘಾತಿ ಕುರುಪ್ರವೀರ ನೃಪನನ್ನು ಜನರು ಜನಮೇಜಯನೆಂದು ಕರೆದರು.

01040007a ಸ ಬಾಲ ಏವಾರ್ಯಮತಿರ್ನೃಪೋತ್ತಮಃ ಸಹೈವ ತೈರ್ಮಂತ್ರಿಪುರೋಹಿತೈಸ್ತದಾ।
01040007c ಶಶಾಸ ರಾಜ್ಯಂ ಕುರುಪುಂಗವಾಗ್ರಜೋ ಯಥಾಸ್ಯ ವೀರಃ ಪ್ರಪಿತಾಮಹಸ್ತಥಾ।।

ಬಾಲಕನಾಗಿದ್ದರೂ ಆ ನೃಪೋತ್ತಮನು ವಿವೇಕಿಯೂ ಬುದ್ಧಿವಂತನೂ ಆಗಿದ್ದನು. ಅವನ ಮಂತ್ರಿ ಮತ್ತು ಪುರೋಹಿತರೊಡನೆ ಕುರುಪುಂಗವಾಗ್ರಜನು ತನ್ನ ವೀರ ಪ್ರಪಿತಾಮಹನಂತೆ ರಾಜ್ಯವನ್ನು ಆಳಿದನು.

01040008a ತತಸ್ತು ರಾಜಾನಮಮಿತ್ರತಾಪನಂ ಸಮೀಕ್ಷ್ಯ ತೇ ತಸ್ಯ ನೃಪಸ್ಯ ಮಂತ್ರಿಣಃ।
01040008c ಸುವರ್ಣವರ್ಮಾಣಮುಪೇತ್ಯ ಕಾಶಿಪಂ ವಪುಷ್ಟಮಾರ್ಥಂ ವರಯಾಂ ಪ್ರಚಕ್ರಮುಃ।।

ರಾಜನು ತನ್ನ ಶತ್ರುಗಳನ್ನು ತಡೆಗಟ್ಟಬಲ್ಲ ಎನ್ನುವುದನ್ನು ನೋಡಿದ ನೃಪನ ಮಂತ್ರಿಗಳು ಕಾಶೀರಾಜ ಸುವರ್ಣವರ್ಮನ ಮಗಳು ವಪುಷ್ಠಮೆಯನ್ನು ಅವನಿಗೆ ವಧುವಾಗಿ ಕೇಳಿದರು.

01040009a ತತಃ ಸ ರಾಜಾ ಪ್ರದದೌ ವಪುಷ್ಟಮಾಂ ಕುರುಪ್ರವೀರಾಯ ಪರೀಕ್ಷ್ಯ ಧರ್ಮತಃ।
01040009c ಸ ಚಾಪಿ ತಾಂ ಪ್ರಾಪ್ಯ ಮುದಾ ಯುತೋಽಭವನ್ ನ ಚಾನ್ಯನಾರೀಷು ಮನೋ ದಧೇ ಕ್ವಚಿತ್।।

ಧಾರ್ಮಿಕವಾಗಿ ಅವನನ್ನು ಪರೀಕ್ಷಿಸಿ ರಾಜನು ಕುರುಪ್ರವೀರನಿಗೆ ವಪುಷ್ಟಮೆಯನ್ನು ಕೊಟ್ಟನು. ಅವಳನ್ನು ಪಡೆದ ಅವನೂ ಕೂಡ ಸಂತಸಗೊಂಡನು. ಇದಕ್ಕೂ ಮೊದಲು ಅವನು ತನ್ನ ಮನಸ್ಸನ್ನು ಯಾರಿಗೂ ಕೊಟ್ಟಿರಲಿಲ್ಲ.

01040010a ಸರಸ್ಸು ಫುಲ್ಲೇಷು ವನೇಷು ಚೈವ ಹ ಪ್ರಸನ್ನಚೇತಾ ವಿಜಹಾರ ವೀರ್ಯವಾನ್।
01040010c ತಥಾ ಸ ರಾಜನ್ಯವರೋ ವಿಜಹ್ರಿವಾನ್ಯಥೋರ್ವಶೀಂ ಪ್ರಾಪ್ಯ ಪುರಾ ಪುರೂರವಾಃ।।

ಆ ವೀರ್ಯವಂತನು ಸರೋವರ ಮತ್ತು ಪುಷ್ಪಭರಿತ ವನಗಳಲ್ಲಿ ಪ್ರಸನ್ನ ಮನಸ್ಕನಾಗಿ ವಿಹರಿಸಿದನು. ಹಿಂದೆ ಪುರೂರವನು ಊರ್ವಶಿಯನ್ನು ಹೊಂದಿ ಹೇಗೆ ಆನಂದವನ್ನು ಅನುಭವಿಸಿದನೋ ಹಾಗೆ ಅವನೂ ಸುಖವನ್ನು ಅನುಭವಿಸಿದನು.

01040011a ವಪುಷ್ಟಮಾ ಚಾಪಿ ವರಂ ಪತಿಂ ತದಾ ಪ್ರತೀತರೂಪಂ ಸಮವಾಪ್ಯ ಭೂಮಿಪಂ।
01040011c ಭಾವೇನ ರಾಮಾ ರಮಯಾಂ ಬಭೂವ ವೈ ವಿಹಾರಕಾಲೇಷ್ವವರೋಧಸುಂದರೀ।।

ಅತೀವ ಸುಂದರಿ ವಪುಷ್ಟಮೆಯಾದರೂ ತನ್ನ ಹಾಗೆಯೇ ರೂಪವಂತನಾದ ಭೂಮಿಪ ಶ್ರೇಷ್ಠ ಪತಿಯನ್ನು ಪಡೆದು ಅಧಿಕ ಪ್ರೇಮದಿಂದ ಅವನನ್ನು ಸಂತೋಷಗೊಳಿಸಿದಳು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಆಸ್ತೀಕಪರ್ವಣಿ ಜನಮೇಜಯರಾಜ್ಯಾಭಿಷೇಕೇ ಚತ್ವಾರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತಲ್ಲಿ ಆದಿಪರ್ವದಲ್ಲಿ ಆಸ್ತೀಕಪರ್ವದಲ್ಲಿ ಜನಮೇಜಯರಾಜ್ಯಾಭಿಷೇಕ ಎನ್ನುವ ನಲ್ವತ್ತನೆಯ ಅಧ್ಯಾಯವು.