ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಆಸ್ತೀಕ ಪರ್ವ
ಅಧ್ಯಾಯ 39
ಸಾರ
ತಕ್ಷಕನು ಕಾಶ್ಯಪನನ್ನು ಹಿಂದೆ ಕಳುಹಿಸಿದುದು (1-20). ತಕ್ಷಕನು ಪರಿಕ್ಷಿತನನ್ನು ಕಚ್ಚಿ ಕೊಂದುದು (21-33).01039001 ತಕ್ಷಕ ಉವಾಚ।
01039001a ದಷ್ಟಂ ಯದಿ ಮಯೇಹ ತ್ವಂ ಶಕ್ತಃ ಕಿಂ ಚಿಚ್ಚಿಕಿತ್ಸಿತುಂ।
01039001c ತತೋ ವೃಕ್ಷಂ ಮಯಾ ದಷ್ಟಮಿಮಂ ಜೀವಯ ಕಾಶ್ಯಪ।।
ತಕ್ಷಕನು ಹೇಳಿದನು: “ಕಾಶ್ಯಪ! ನನ್ನಿಂದ ಕಚ್ಚಲ್ಪಟ್ಟ ಯಾರನ್ನೂ ನೀನು ಗುಣಪಡಿಸಬಲ್ಲೆಯೆಂದಾದರೆ ನಾನು ಕಚ್ಚುವ ಈ ವೃಕ್ಷವನ್ನು ಪುನರ್ಜೀವಗೊಳಿಸು.
01039002a ಪರಂ ಮಂತ್ರಬಲಂ ಯತ್ತೇ ತದ್ದರ್ಶಯ ಯತಸ್ವ ಚ।
01039002c ನ್ಯಗ್ರೋಧಮೇನಂ ಧಕ್ಷ್ಯಾಮಿ ಪಶ್ಯತಸ್ತೇ ದ್ವಿಜೋತ್ತಮ।।
ದ್ವಿಜೋತ್ತಮ! ನಿನ್ನ ಕಣ್ಣಮುಂದೆಯೇ ಈ ಆಲದ ಮರವನ್ನು ಸುಟ್ಟು ಭಸ್ಮಮಾಡುತ್ತೇನೆ. ಆಗ ನಿನ್ನ ವಿಶೇಷ ಮಂತ್ರಬಲವನ್ನು ತೋರಿಸು.”
01039003 ಕಾಶ್ಯಪ ಉವಾಚ।
01039003a ದಶ ನಾಗೇಂದ್ರ ವೃಕ್ಷಂ ತ್ವಂ ಯಮೇನಮಭಿಮನ್ಯಸೇ।
01039003c ಅಹಮೇನಂ ತ್ವಯಾ ದಷ್ಟಂ ಜೀವಯಿಷ್ಯೇ ಭುಜಂಗಮ।।
ಕಾಶ್ಯಪನು ಹೇಳಿದನು: “ನಾಗೇಂದ್ರ! ನಿನಗೆ ಇಷ್ಟವಾದರೆ ಈ ವೃಕ್ಷವನ್ನು ಕಚ್ಚು. ಭುಜಂಗಮ! ನೀನು ನೋಡುತ್ತಿದ್ದ ಹಾಗೆಯೇ ಅದನ್ನು ನಾನು ಬದುಕಿಸುತ್ತೇನೆ.””
01039004 ಸೂತ ಉವಾಚ।
01039004a ಏವಮುಕ್ತಃ ಸ ನಾಗೇಂದ್ರಃ ಕಾಶ್ಯಪೇನ ಮಹಾತ್ಮನಾ।
01039004c ಅದಶದ್ವೃಕ್ಷಮಭ್ಯೇತ್ಯ ನ್ಯಗ್ರೋಧಂ ಪನ್ನಗೋತ್ತಮಃ।।
ಸೂತನು ಹೇಳಿದನು: “ಮಹಾತ್ಮ ಕಾಶ್ಯಪನಿಂದ ಹೀಗೆ ಹೇಳಲ್ಪಟ್ಟ ನಾಗೇಂದ್ರ ಪನ್ನಗೋತ್ತಮನು ಅಲ್ಲಿದ್ದ ನ್ಯಗ್ರೋಧ ವೃಕ್ಷವನ್ನು ಕಚ್ಚಿದನು.
01039005a ಸ ವೃಕ್ಷಸ್ತೇನ ದಷ್ಟಃ ಸನ್ಸದ್ಯ ಏವ ಮಹಾದ್ಯುತೇ।
01039005c ಆಶೀವಿಷವಿಷೋಪೇತಃ ಪ್ರಜಜ್ವಾಲ ಸಮಂತತಃ।।
ಆ ಮಹಾದ್ಯುತಿಯಿಂದ ಕಚ್ಚಲ್ಪಟ್ಟ ವೃಕ್ಷವು ವಿಷವನ್ನುಂಡು ಎಲ್ಲಾ ಕಡೆಯಿಂದಲೂ ಸುಟ್ಟು ಉರಿಯತೊಡಗಿತು.
01039006a ತಂ ದಗ್ಧ್ವಾ ಸ ನಗಂ ನಾಗಃ ಕಾಶ್ಯಪಂ ಪುನರಬ್ರವೀತ್।
01039006c ಕುರು ಯತ್ನಂ ದ್ವಿಜಶ್ರೇಷ್ಠ ಜೀವಯೈನಂ ವನಸ್ಪತಿಂ।।
ಆ ಮರವನ್ನು ಸುಟ್ಟುಹಾಕಿದ ನಾಗನು ಕಾಶ್ಯಪನಿಗೆ ಪುನಃ ಹೇಳಿದನು: “ದ್ವಿಜಶ್ರೇಷ್ಠ! ಈ ವನಸ್ಪತಿಯನ್ನು ಜೀವಗೊಳಿಸಲು ನಿನ್ನ ಪ್ರಯತ್ನ ಮಾಡು.”
01039007a ಭಸ್ಮೀಭೂತಂ ತತೋ ವೃಕ್ಷಂ ಪನ್ನಗೇಂದ್ರಸ್ಯ ತೇಜಸಾ।
01039007c ಭಸ್ಮ ಸರ್ವಂ ಸಮಾಹೃತ್ಯ ಕಾಶ್ಯಪೋ ವಾಕ್ಯಮಬ್ರವೀತ್।।
ಪನ್ನಗೇಂದ್ರನ ತೇಜಸ್ಸಿನಿಂದ ಭಸ್ಮೀಭೂತ ಆ ವೃಕ್ಷದ ಎಲ್ಲ ಭಸ್ಮವನ್ನು ತೆಗೆದುಕೊಂಡು ಕಾಶ್ಯಪನು ಈ ವಾಕ್ಯಗಳನ್ನು ಹೇಳಿದನು:
01039008a ವಿದ್ಯಾಬಲಂ ಪನ್ನಗೇಂದ್ರ ಪಶ್ಯ ಮೇಽಸ್ಮಿನ್ವನಸ್ಪತೌ।
01039008c ಅಹಂ ಸಂಜೀವಯಾಮ್ಯೇನಂ ಪಶ್ಯತಸ್ತೇ ಭುಜಂಗಮ।।
“ಪನ್ನಗೇಂದ್ರ! ನೋಡು! ನನ್ನ ವಿದ್ಯಾಬಲದಿಂದ ಈ ವನಸ್ಪತಿಯನ್ನು ಈಗ ಸಜೀವಗೊಳಿಸುತ್ತೇನೆ. ನೋಡುತ್ತಿರು ಭುಜಂಗಮ!”
01039009a ತತಃ ಸ ಭಗವಾನ್ವಿದ್ವಾನ್ಕಾಶ್ಯಪೋ ದ್ವಿಜಸತ್ತಮಃ।
01039009c ಭಸ್ಮರಾಶೀಕೃತಂ ವೃಕ್ಷಂ ವಿದ್ಯಯಾ ಸಮಜೀವಯತ್।।
ಆಗ ಆ ಭಗವಾನ್ ವಿದ್ವಾನ್ ದ್ವಿಜಸತ್ತಮ ಕಾಶ್ಯಪನು ಭಸ್ಮದ ರಾಶಿಯಾಗಿದ್ದ ವೃಕ್ಷವನ್ನು ತನ್ನ ವಿದ್ಯೆಯಿಂದ ಸಜೀವಗೊಳಿಸಿದನು.
01039010a ಅಂಕುರಂ ತಂ ಸ ಕೃತವಾಂಸ್ತತಃ ಪರ್ಣದ್ವಯಾನ್ವಿತಂ।
01039010c ಪಲಾಶಿನಂ ಶಾಖಿನಂ ಚ ತಥಾ ವಿಟಪಿನಂ ಪುನಃ।।
ಮೊದಲು ಅವನು ಅಂಕುರವನ್ನು ಮಾಡಿದನು, ಅದಕ್ಕೆ ಎರಡು ಎಲೆಗಳನ್ನಿತ್ತನು, ಮತ್ತು ಪಲಾಶ ರೆಂಬೆಗಳನ್ನಿತ್ತು ಪುನಃ ಅದನ್ನು ಮೊದಲಿನ ಮರದಂತೆಯೇ ಮಾಡಿದನು.
01039011a ತಂ ದೃಷ್ಟ್ವಾ ಜೀವಿತಂ ವೃಕ್ಷಂ ಕಾಶ್ಯಪೇನ ಮಹಾತ್ಮನಾ।
01039011c ಉವಾಚ ತಕ್ಷಕೋ ಬ್ರಹ್ಮನ್ನೇತದತ್ಯದ್ಭುತಂ ತ್ವಯಿ।।
ಮಹಾತ್ಮ ಕಾಶ್ಯಪನಿಂದ ಜೀವಿತಗೊಂಡ ಆ ವೃಕ್ಷವನ್ನು ನೋಡಿದ ತಕ್ಷಕನು ಹೇಳಿದನು: “ಬ್ರಾಹ್ಮಣ! ನಿನ್ನ ಈ ಕೃತಿಯು ಅತ್ಯದ್ಭುತವೇ ಸರಿ.
01039012a ವಿಪ್ರೇಂದ್ರ ಯದ್ವಿಷಂ ಹನ್ಯಾ ಮಮ ವಾ ಮದ್ವಿಧಸ್ಯ ವಾ।
01039012c ಕಂ ತ್ವಮರ್ಥಮಭಿಪ್ರೇಪ್ಸುರ್ಯಾಸಿ ತತ್ರ ತಪೋಧನ।।
ವಿಪ್ರೇಂದ್ರ! ನೀನು ನನ್ನ ಈ ವಿಷ ಅಥವಾ ಬೇರೆ ಯಾವ ವಿಷವನ್ನೂ ನಾಶಪಡಿಸಬಲ್ಲೆ. ತಪೋಧನ! ನೀನು ಹೋಗುತ್ತಿರುವಲ್ಲಿ ಎಷ್ಟು ಸಂಪತ್ತನ್ನು ಅಪೇಕ್ಷಿಸುತ್ತಿದ್ದೀಯೆ?
01039013a ಯತ್ತೇಽಭಿಲಷಿತಂ ಪ್ರಾಪ್ತುಂ ಫಲಂ ತಸ್ಮಾನ್ನೃಪೋತ್ತಮಾತ್।
01039013c ಅಹಮೇವ ಪ್ರದಾಸ್ಯಾಮಿ ತತ್ತೇ ಯದ್ಯಪಿ ದುರ್ಲಭಂ।।
ನೃಪೋತ್ತಮನಿಂದ ನೀನು ಬಯಸುವ ಪರಿಹಾರವನ್ನು ಎಷ್ಟು ಕಷ್ಟವಾದರೂ ನಾನೇ ನಿನಗೆ ಕೊಡುತ್ತೇನೆ.
01039014a ವಿಪ್ರಶಾಪಾಭಿಭೂತೇ ಚ ಕ್ಷೀಣಾಯುಷಿ ನರಾಧಿಪೇ।
01039014c ಘಟಮಾನಸ್ಯ ತೇ ವಿಪ್ರ ಸಿದ್ಧಿಃ ಸಂಶಯಿತಾ ಭವೇತ್।।
ವಿಪ್ರ! ಬ್ರಾಹ್ಮಣನ ಶಾಪಕ್ಕೊಳಗಾದ ಕ್ಷೀಣಾಯುಷಿ ಆ ನರಾಧಿಪನನ್ನು ಉಳಿಸುವ ನಿನ್ನ ಪ್ರಯತ್ನ ಯಶಸ್ವಿಯಾಗುವುದು ಸಂಶಯವೇ.
01039015a ತತೋ ಯಶಃ ಪ್ರದೀಪ್ತಂ ತೇ ತ್ರಿಷು ಲೋಕೇಷು ವಿಶ್ರುತಂ।
01039015c ವಿರಷ್ಮಿರಿವ ಘರ್ಮಾಂಶುರಂತರ್ಧಾನಮಿತೋ ವ್ರಜೇತ್।।
ಅದರಿಂದ ಮೂರೂ ಲೋಕಗಳಲ್ಲಿ ವಿಶೃತ ದೇದೀಪ್ಯಮಾನ ನಿನ್ನ ಈ ಯಶಸ್ಸು ಸೂರ್ಯನಕಿರಣಗಳನ್ನು ಕಿತ್ತುಕೊಂಡರೆ ಹೇಗೋ ಹಾಗೆ ನಂದಿಹೋಗುತ್ತದೆ.”
01039016 ಕಾಶ್ಯಪ ಉವಾಚ।
01039016a ಧನಾರ್ಥೀ ಯಾಮ್ಯಹಂ ತತ್ರ ತನ್ಮೇ ದಿತ್ಸ ಭುಜಂಗಮ।
01039016c ತತೋಽಹಂ ವಿನಿವರ್ತಿಷ್ಯೇ ಗೃಹಾಯೋರಗಸತ್ತಮ।।
ಕಾಶ್ಯಪನು ಹೇಳಿದನು: “ಹಣಕ್ಕೋಸ್ಕರವೇ ನಾನು ಅಲ್ಲಿಗೆ ಹೋಗುತ್ತಿದ್ದೇನೆ. ಭುಜಂಗಮ! ಉರಗಸತ್ತಮ! ನೀನು ನನಗೆ ಅದನ್ನೇ ನೀಡುವೆಯಾದರೆ ನಿನ್ನಿಂದ ಅದನ್ನು ಸ್ವೀಕರಿಸಿ ಮನೆಗೆ ಹಿಂದಿರುಗುತ್ತೇನೆ.”
01039017 ತಕ್ಷಕ ಉವಾಚ।
01039017a ಯಾವದ್ಧನಂ ಪ್ರಾರ್ಥಯಸೇ ತಸ್ಮಾದ್ರಾಜ್ಞಸ್ತತೋಽಧಿಕಂ।
01039017c ಅಹಂ ತೇಽದ್ಯ ಪ್ರದಾಸ್ಯಾಮಿ ನಿವರ್ತಸ್ವ ದ್ವಿಜೋತ್ತಮ।।
ತಕ್ಷಕನು ಹೇಳಿದನು: “ರಾಜನಿಂದ ಎಷ್ಟು ಧನವನ್ನು ಕೇಳಬಯಸುತ್ತೀಯೋ ಅದಕ್ಕೂ ಅಧಿಕ ಧನವನ್ನು ನಾನು ನಿನಗೆ ಕೊಡುತ್ತೇನೆ. ದ್ವಿಜೋತ್ತಮ! ಹಿಂದಿರುಗು.””
01039018 ಸೂತ ಉವಾಚ।
01039018a ತಕ್ಷಕಸ್ಯ ವಚಃ ಶ್ರುತ್ವಾ ಕಾಶ್ಯಪೋ ದ್ವಿಜಸತ್ತಮಃ।
01039018c ಪ್ರದಧ್ಯೌ ಸುಮಹಾತೇಜಾ ರಾಜಾನಂ ಪ್ರತಿ ಬುದ್ಧಿಮಾನ್।।
01039019a ದಿವ್ಯಜ್ಞಾನಃ ಸ ತೇಜಸ್ವೀ ಜ್ಞಾತ್ವಾ ತಂ ನೃಪತಿಂ ತದಾ।
01039019c ಕ್ಷೀಣಾಯುಷಂ ಪಾಂಡವೇಯಮಪಾವರ್ತತ ಕಾಶ್ಯಪಃ।
01039019e ಲಬ್ಧ್ವಾ ವಿತ್ತಂ ಮುನಿವರಸ್ತಕ್ಷಕಾದ್ಯಾವದೀಪ್ಸಿತಂ।।
ಸೂತನು ಹೇಳಿದನು: “ತಕ್ಷಕನ ಮಾತುಗಳನ್ನು ಕೇಳಿದ ಮಹಾತೇಜಸ್ವಿ ಬುದ್ಧಿವಂತ ತೇಜಸ್ವಿ ದ್ವಿಜಸತ್ತಮ ಕಾಶ್ಯಪನು ರಾಜನ ಕುರಿತು ಯೋಚಿಸಿ ತನ್ನ ದಿವ್ಯಜ್ಞಾನದಿಂದ ಪಾಂಡವ ಕುಲದಲ್ಲಿ ಜನಿಸಿದ ಆ ನೃಪತಿಯು ಕ್ಷೀಣಾಯುಷಿಯೆಂದು ತಿಳಿದನು. ಆಗ ಆ ಮುನಿವರನು ತಕ್ಷಕನಿಂದ ತನಗಿಷ್ಟವಾದಷ್ಟು ವಿತ್ತವನ್ನು ಪಡೆದು ಹಿಂದಿರುಗಿದನು.
01039020a ನಿವೃತ್ತೇ ಕಾಶ್ಯಪೇ ತಸ್ಮಿನ್ಸಮಯೇನ ಮಹಾತ್ಮನಿ।
01039020c ಜಗಾಮ ತಕ್ಷಕಸ್ತೂರ್ಣಂ ನಗರಂ ನಾಗಸಾಹ್ವಯಂ।।
ಒಪ್ಪಂದದಂತೆ ಆ ಮಹಾತ್ಮ ಕಾಶ್ಯಪನು ಅಲ್ಲಿಂದ ಮರಳಲು, ತಕ್ಷಕನು ಅವಸರದಲ್ಲಿ ನಾಗಸಾಹ್ವಯ ನಗರಕ್ಕೆ ಬಂದನು.
01039021a ಅಥ ಶುಶ್ರಾವ ಗಚ್ಛನ್ಸ ತಕ್ಷಕೋ ಜಗತೀಪತಿಂ।
01039021c ಮಂತ್ರಾಗದೈರ್ವಿಷಹರೈ ರಕ್ಷ್ಯಮಾಣಂ ಪ್ರಯತ್ನತಃ।।
ಹೋಗುತ್ತಿರುವಾಗ ತಕ್ಷಕನು ಆ ಜಗತ್ಪತಿಯು ವಿಷಹರ ಮಂತ್ರೌಷಧಿಗಳಿಂದ ಬಹು ಜಾಗರೂಕನಾಗಿ ರಕ್ಷಿಸಲ್ಪಟ್ಟಿದ್ದಾನೆ ಎಂದು ಕೇಳಿದನು.
01039022a ಸ ಚಿಂತಯಾಮಾಸ ತದಾ ಮಾಯಾಯೋಗೇನ ಪಾರ್ಥಿವಃ।
01039022c ಮಯಾ ವಂಚಯಿತವ್ಯೋಽಸೌ ಕ ಉಪಾಯೋ ಭವೇದಿತಿ।।
ಆಗ ಅವನು “ರಾಜನನ್ನು ಮಾಯಾಯೋಗದಿಂದ ವಂಚಿಸಬೇಕು. ಅದರ ಉಪಾಯವಾದರೂ ಏನು?” ಎಂದು ಚಿಂತಿಸತೊಡಗಿದನು.
01039023a ತತಸ್ತಾಪಸರೂಪೇಣ ಪ್ರಾಹಿಣೋತ್ಸ ಭುಜಂಗಮಾನ್।
01039023c ಫಲಪತ್ರೋದಕಂ ಗೃಹ್ಯ ರಾಜ್ಞೇ ನಾಗೋಽಥ ತಕ್ಷಕಃ।।
ಆಗ ನಾಗ ತಕ್ಷಕನು ಕೆಲವು ಸರ್ಪಗಳನ್ನು ತಾಪಸರ ರೂಪದಲ್ಲಿ ರಾಜನಿಗೆ ಫಲ ಪತ್ರ ಉದಕಗಳನ್ನು ಕೊಟ್ಟು ಕಳುಹಿಸಿದನು.
01039024 ತಕ್ಷಕ ಉವಾಚ।
01039024a ಗಚ್ಛಧ್ವಂ ಯೂಯಮವ್ಯಗ್ರಾ ರಾಜಾನಂ ಕಾರ್ಯವತ್ತಯಾ।
01039024c ಫಲಪತ್ರೋದಕಂ ನಾಮ ಪ್ರತಿಗ್ರಾಹಯಿತುಂ ನೃಪಂ।।
ತಕ್ಷಕನು ಹೇಳಿದನು: “ರಾಜನಲ್ಲಿ ಒಂದು ಮುಖ್ಯ ಕಾರ್ಯವಿದೆಯೆಂದು ನೀವೆಲ್ಲರೂ ಅವನಲ್ಲಿ ಹೋಗಿ ರಾಜನು ಫಲಪತ್ರೋದಕಗಳನ್ನು ಸ್ವೀಕರಿಸುವಂತೆ ಒತ್ತಾಯಿಸಿ.””
01039025 ಸೂತ ಉವಾಚ।
01039025a ತೇ ತಕ್ಷಕಸಮಾದಿಷ್ಟಾಸ್ತಥಾ ಚಕ್ರುರ್ಭುಜಂಗಮಾಃ।
01039025c ಉಪನಿನ್ಯುಸ್ತಥಾ ರಾಜ್ಞೇ ದರ್ಭಾನಾಪಃ ಫಲಾನಿ ಚ।।
ಸೂತನು ಹೇಳಿದನು: “ತಕ್ಷಕನ ಮಾತಿನಂತೆ ಆ ಸರ್ಪಗಳು ರಾಜನಿಗೆ ದರ್ಭೆ, ನೀರು ಮತ್ತು ಫಲಗಳನ್ನು ಹಿಡಿದು ಹೊರಟವು.
01039026a ತಚ್ಚ ಸರ್ವಂ ಸ ರಾಜೇಂದ್ರಃ ಪ್ರತಿಜಗ್ರಾಹ ವೀರ್ಯವಾನ್।
01039026c ಕೃತ್ವಾ ಚ ತೇಷಾಂ ಕಾರ್ಯಾಣಿ ಗಮ್ಯತಾಮಿತ್ಯುವಾಚ ತಾನ್।।
ವೀರ್ಯವಾನ್ ರಾಜೇಂದ್ರನು ಅವರು ತಂದ ಸರ್ವವನ್ನೂ ಸ್ವೀಕರಿಸಿ ಅವರ ಕೆಲಸವು ಮುಗಿದ ಬಳಿಕ ಅವರಿಗೆ ಹಿಂದಿರುಗಲು ಹೇಳಿದನು.
01039027a ಗತೇಷು ತೇಷು ನಾಗೇಷು ತಾಪಸಚ್ಛದ್ಮರೂಪಿಷು।
01039027c ಅಮಾತ್ಯಾನ್ಸುಹೃದಶ್ಚೈವ ಪ್ರೋವಾಚ ಸ ನರಾಧಿಪಃ।।
ತಾಪಸರ ರೂಪ ತಳೆದಿದ್ದ ಆ ನಾಗಗಳು ಹೋದ ಬಳಿಕ ತನ್ನ ಅಮಾತ್ಯರು ಮತ್ತು ಸುಹೃದಯರಿಗೆ ಹೇಳಿದನು:
01039028a ಭಕ್ಷಯಂತು ಭವಂತೋ ವೈ ಸ್ವಾದೂನೀಮಾನಿ ಸರ್ವಶಃ।
01039028c ತಾಪಸೈರುಪನೀತಾನಿ ಫಲಾನಿ ಸಹಿತಾ ಮಯಾ।।
“ತಾಪಸರು ತಂದಿರುವ ಈ ಸ್ವಾಧಿಷ್ಟ ಫಲಗಳನ್ನು ನೀವೆಲ್ಲರೂ ನನ್ನ ಜೊತೆ ಸೇರಿ ಸೇವಿಸಿರಿ.”
01039029a ತತೋ ರಾಜಾ ಸಸಚಿವಃ ಫಲಾನ್ಯಾದಾತುಮೈಚ್ಛತ।
01039029c ಯದ್ಗೃಹೀತಂ ಫಲಂ ರಾಜ್ಞಾ ತತ್ರ ಕೃಮಿರಭೂದಣುಃ।
01039029e ಹ್ರಸ್ವಕಃ ಕೃಷ್ಣನಯನಸ್ತಾಮ್ರೋ ವರ್ಣೇನ ಶೌನಕ।।
ಶೌನಕ! ರಾಜನು ತನ್ನ ಸಚಿವರೊಂದಿಗೆ ಹಣ್ಣುಗಳನ್ನು ತಿನ್ನಲು ಬಯಸಿದಾಗ, ರಾಜನು ಹಿಡಿದ ಫಲದಲ್ಲಿ ಅಣುವಿನಷ್ಟು ಚಿಕ್ಕ, ಕಪ್ಪು ಕಣ್ಣುಗಳ ತಾಮ್ರ ವರ್ಣದ ಕ್ರಿಮಿಯೊಂದು ಕಾಣಿಸಿಕೊಂಡಿತು.
01039030a ಸ ತಂ ಗೃಹ್ಯ ನೃಪಶ್ರೇಷ್ಠಃ ಸಚಿವಾನಿದಮಬ್ರವೀತ್।
01039030c ಅಸ್ತಮಭ್ಯೇತಿ ಸವಿತಾ ವಿಷಾದದ್ಯ ನ ಮೇ ಭಯಂ।।
01039031a ಸತ್ಯವಾಗಸ್ತು ಸ ಮುನಿಃ ಕೃಮಿಕೋ ಮಾಂ ದಶತ್ವಯಂ।
01039031c ತಕ್ಷಕೋ ನಾಮ ಭೂತ್ವಾ ವೈ ತಥಾ ಪರಿಹೃತಂ ಭವೇತ್।।
ಅದನ್ನು ಹಿಡಿದ ನೃಪಶ್ರೇಷ್ಠನು ತನ್ನ ಸಚಿವರನ್ನುದ್ದೇಶಿಸಿ ಹೇಳಿದನು: “ಸೂರ್ಯಾಸ್ತವಾಗುತ್ತಿದೆ. ಇನ್ನು ನನಗೆ ವಿಷದ ಭಯವಿಲ್ಲ. ಆ ಮುನಿಯ ಮಾತನ್ನು ಸತ್ಯವಾಗಿಸಲೋಸುಗ ಈ ಕ್ರಿಮಿಯು ತಕ್ಷಕನಾಗಿ ನನ್ನನ್ನು ಕಚ್ಚಲಿ. ಈ ರೀತಿ ಸತ್ಯವನ್ನು ಸುಳ್ಳಾಗದಂತೆ ತಡೆಗಟ್ಟಲಿ!”
01039032a ತೇ ಚೈನಮನ್ವವರ್ತಂತ ಮಂತ್ರಿಣಃ ಕಾಲಚೋದಿತಾಃ।
01039032c ಏವಮುಕ್ತ್ವಾ ಸ ರಾಜೇಂದ್ರೋ ಗ್ರೀವಾಯಾಂ ಸಂನಿವೇಶ್ಯ ಹ।
01039032e ಕೃಮಿಕಂ ಪ್ರಾಹಸತ್ತೂರ್ಣಂ ಮುಮೂರ್ಷುರ್ನಷ್ಟಚೇತನಃ।।
ಕಾಲಚೋದಿತ ಮಂತ್ರಿಗಳು ಅವನ ಈ ಮಾತನ್ನು ಪ್ರಶಂಸಿಸಿದರು. ಹೀಗೆ ಹೇಳಿದ ರಾಜೇಂದ್ರನು ಜೋರಾಗಿ ನಗುತ್ತಾ ಆ ಕ್ರಿಮಿಯನ್ನು ತನ್ನ ಕುತ್ತಿಗೆಯ ಮೇಲೆ ಇಟ್ಟಾಕ್ಷಣವೇ ತನ್ನ ಚೇತನವನ್ನು ಕಳೆದುಕೊಂಡು ಮೂರ್ಛಿತನಾದನು.
01039033a ಹಸನ್ನೇವ ಚ ಭೋಗೇನ ತಕ್ಷಕೇಣಾಭಿವೇಷ್ಟಿತಃ।
01039033c ತಸ್ಮಾತ್ಫಲಾದ್ವಿನಿಷ್ಕ್ರಮ್ಯ ಯತ್ತದ್ರಾಜ್ಞೇ ನಿವೇದಿತಂ।।
ರಾಜನು ನಗುತ್ತಿರುವಾಗ ಆ ಫಲದಿಂದ ಹೊರಬಂದ ತಕ್ಷಕನು ಅವನನ್ನು ಸುತ್ತಿಹಾಕಿಕೊಂಡಿದ್ದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಆಸ್ತೀಕಪರ್ವಣಿ ತಕ್ಷಕದಂಶೇ ಏಕೋನಚತ್ವಾರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಆಸ್ತೀಕಪರ್ವದಲ್ಲಿ ತಕ್ಷಕದಂಶ ಎನ್ನುವ ಮೂವತ್ತೊಂಭತ್ತನೆಯ ಅಧ್ಯಾಯವು.