ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಆಸ್ತೀಕ ಪರ್ವ
ಅಧ್ಯಾಯ 38
ಸಾರ
ಮಗನು ಶಾಪವನ್ನು ಹಿಂತೆಗೆದು ಕೊಳ್ಳದಿರಲು ಋಷಿಯು ಪರಿಕ್ಷಿತನಿಗೆ ಎಚ್ಚರದಿಂದಿರಲು ಹೇಳಿಕಳುಹಿಸಿದುದು (1-20). ಪರಿಕ್ಷಿತನು ತನ್ನ ರಕ್ಷಣೆಗೆ ಕ್ರಮ ಕೈಗೊಂಡಿದುದು (21-30). ಪರಿಕ್ಷಿತನನ್ನು ಉಳಿಸಲು ಬರುತ್ತಿದ್ದ ಕಾಶ್ಯಪನನ್ನು ತಕ್ಷಕನು ತಡೆದುದು (31-39).01038001 ಶೃಂಗ್ಯುವಾಚ।
01038001a ಯದ್ಯೇತತ್ಸಾಹಸಂ ತಾತ ಯದಿ ವಾ ದುಷ್ಕೃತಂ ಕೃತಂ।
01038001c ಪ್ರಿಯಂ ವಾಪ್ಯಪ್ರಿಯಂ ವಾ ತೇ ವಾಗುಕ್ತಾ ನ ಮೃಷಾ ಮಯಾ।।
ಶೃಂಗಿಯು ಹೇಳಿದನು: “ತಂದೆ! ನಾನು ಮಾಡಿದ ಕೆಲಸವು ಆತುರದಲ್ಲಿದ್ದಿರಬಹುದು ಅಥವಾ ಕೆಟ್ಟದ್ದಾಗಿರಬಹುದು. ಅದು ಪ್ರಿಯವಾಗಿರಲಿ ಅಥವಾ ಅಪ್ರಿಯವಾಗಿರಲಿ ನಾನು ಆಡಿದ ಮಾತು ಸುಳ್ಳಾಗಲಾರದು.
01038002a ನೈವಾನ್ಯಥೇದಂ ಭವಿತಾ ಪಿತರೇಷ ಬ್ರವೀಮಿ ತೇ।
01038002c ನಾಹಂ ಮೃಷಾ ಪ್ರಬ್ರವೀಮಿ ಸ್ವೈರೇಷ್ವಪಿ ಕುತಃ ಶಪನ್।।
ತಂದೆ! ನಾನು ನಿನಗೆ ಹೇಳುತ್ತೇನೆ, ಇದು ಅನ್ಯಥಾ ಅಗುವುದಿಲ್ಲ. ಶಾಪ ಕೊಡುವಾಗ ಬಿಡು, ಹಾಸ್ಯದಲ್ಲಿಯೂ ನಾನು ಸುಳ್ಳನ್ನು ಹೇಳುವುದಿಲ್ಲ.”
01038003 ಶಮೀಕ ಉವಾಚ।
01038003a ಜಾನಾಮ್ಯುಗ್ರಪ್ರಭಾವಂ ತ್ವಾಂ ಪುತ್ರ ಸತ್ಯಗಿರಂ ತಥಾ।
01038003c ನಾನೃತಂ ಹ್ಯುಕ್ತಪೂರ್ವಂ ತೇ ನೈತನ್ಮಿಥ್ಯಾ ಭವಿಷ್ಯತಿ।।
ಶಮೀಕನು ಹೇಳಿದನು: “ಪುತ್ರ! ನೀನು ಉಗ್ರಪ್ರಭಾವಿ ಮತ್ತು ಸತ್ಯವಾದಿ ಎನ್ನುವುದನ್ನು ನಾನು ತಿಳಿದಿದ್ದೇನೆ. ಈ ಹಿಂದೆ ನೀನು ಅಸತ್ಯವನ್ನು ನುಡಿಯಲೇ ಇಲ್ಲ ಮತ್ತು ಇದು ಸುಳ್ಳಾಗುವುದೇ ಇಲ್ಲ.
01038004a ಪಿತ್ರಾ ಪುತ್ರೋ ವಯಃಸ್ಥೋಽಪಿ ಸತತಂ ವಾಚ್ಯ ಏವ ತು।
01038004c ಯಥಾ ಸ್ಯಾದ್ಗುಣಸಮ್ಯುಕ್ತಃ ಪ್ರಾಪ್ನುಯಾಚ್ಚ ಮಹದ್ಯಶಃ।।
ಆದರೆ ವಯಸ್ಕನಾದರೂ ಸದ್ಗುಣಸಂಯುಕ್ತನಾಗಿ ಮಹಾ ಯಶಸ್ಸನ್ನು ಹೊಂದಬೇಕೆಂದು ಮಗನಿಗೆ ತಂದೆಯಾದವನು ಸತತ ಸಲಹೆಗಳನ್ನು ಕೊಡುತ್ತಿರಬೇಕು.
01038005a ಕಿಂ ಪುನರ್ಬಾಲ ಏವ ತ್ವಂ ತಪಸಾ ಭಾವಿತಃ ಪ್ರಭೋ।
01038005c ವರ್ಧತೇ ಚ ಪ್ರಭವತಾಂ ಕೋಪೋಽತೀವ ಮಹಾತ್ಮನಾಂ।।
ನೀನಾದರೂ ಇನ್ನೂ ಬಾಲಕನಲ್ಲವೇ? ನಿನ್ನ ತಪಸ್ಸಿನಿಂದ ಪ್ರಭಾವಿತನಾಗಿದ್ದೀಯೆ. ತೇಜಸ್ಸು ವೃದ್ಧಿಯಾದಂತೆ ಕೋಪವೂ ಅತೀವವಾಗುತ್ತದೆ.
01038006a ಸೋಽಹಂ ಪಶ್ಯಾಮಿ ವಕ್ತವ್ಯಂ ತ್ವಯಿ ಧರ್ಮಭೃತಾಂ ವರ।
01038006c ಪುತ್ರತ್ವಂ ಬಾಲತಾಂ ಚೈವ ತವಾವೇಕ್ಷ್ಯ ಚ ಸಾಹಸಂ।।
ಧಾರ್ಮಿಕರಲ್ಲಿ ಶ್ರೇಷ್ಠ! ನೀನು ನನ್ನ ಮಗ ಮತ್ತು ಇನ್ನೂ ಬಾಲಕನೆಂದು ತಿಳಿದು, ದುಡುಕಿದ ನಿನ್ನನ್ನು ಕಂಡು ನಿನಗೆ ಸಲಹೆ ನೀಡಬೇಕೆಂದು ಅನ್ನಿಸಿತು.
01038007a ಸ ತ್ವಂ ಶಮಯುತೋ ಭೂತ್ವಾ ವನ್ಯಮಾಹಾರಮಾಹರನ್।
01038007c ಚರ ಕ್ರೋಧಮಿಮಂ ತ್ಯಕ್ತ್ವಾ ನೈವಂ ಧರ್ಮಂ ಪ್ರಹಾಸ್ಯಸಿ।।
ನೀನು ಶಮಯುತನಾಗಿ ವನದಲ್ಲಿರುವ ಆಹಾರಗಳನ್ನು ಸೇವಿಸು. ಈ ಕ್ರೋಧವನ್ನು ತೊರೆದು ಧರ್ಮವನ್ನು ತೊರೆಯದೇ ನಡೆದುಕೋ.
01038008a ಕ್ರೋಧೋ ಹಿ ಧರ್ಮಂ ಹರತಿ ಯತೀನಾಂ ದುಃಖಸಂಚಿತಂ।
01038008c ತತೋ ಧರ್ಮವಿಹೀನಾನಾಂ ಗತಿರಿಷ್ಟಾ ನ ವಿದ್ಯತೇ।।
ಯತಿಗಳು ಬಹು ಕಷ್ಟ ಪಟ್ಟು ಪಡೆದ ಧರ್ಮವನ್ನು ಕ್ರೋಧವು ನಾಶಮಾಡುತ್ತದೆ. ಧರ್ಮವಿಹೀನರಿಗೆ ಅವರ ಮಾರ್ಗದ ಗುರಿಯ ಅರಿವೇ ಇರುವುದಿಲ್ಲ.
01038009a ಶಮ ಏವ ಯತೀನಾಂ ಹಿ ಕ್ಷಮಿಣಾಂ ಸಿದ್ಧಿಕಾರಕಃ।
01038009c ಕ್ಷಮಾವತಾಮಯಂ ಲೋಕಃ ಪರಶ್ಚೈವ ಕ್ಷಮಾವತಾಂ।।
ಕ್ಷಮಿಸುವ ಯತಿಗಳಿಗೆ ಶಾಂತಿಯೇ ಸಿದ್ಧಕಾರಕವು. ಕ್ಷಮಾವಂತರಿಗೆ ಈ ಲೋಕ ಮತ್ತು ಪರಲೋಕ ಎರಡರಲ್ಲಿಯೂ ಒಳ್ಳೆಯದಾಗುತ್ತದೆ.
01038010a ತಸ್ಮಾಚ್ಚರೇಥಾಃ ಸತತಂ ಕ್ಷಮಾಶೀಲೋ ಜಿತೇಂದ್ರಿಯಃ।
01038010c ಕ್ಷಮಯಾ ಪ್ರಾಪ್ಸ್ಯಸೇ ಲೋಕಾನ್ ಬ್ರಹ್ಮಣಃ ಸಮನಂತರಾನ್।।
ಆದುದರಿಂದ ನೀನು ಸತತವೂ ಕ್ಷಮಾಶೀಲನಾಗಿ ಮತ್ತು ಜಿತೇಂದ್ರಿಯನಾಗಿ ನಡೆದುಕೊಳ್ಳಬೇಕು. ಬ್ರಾಹ್ಮಣರೂ ಪಡೆಯಲಸಾಧ್ಯವಾದ ಲೋಕವನ್ನು ಕ್ಷಮೆಯಿಂದಲೇ ಪಡೆಯುತ್ತೀಯೆ.
01038011a ಮಯಾ ತು ಶಮಮಾಸ್ಥಾಯ ಯಚ್ಛಕ್ಯಂ ಕರ್ತುಮದ್ಯ ವೈ।
01038011c ತತ್ಕರಿಷ್ಯೇಽದ್ಯ ತಾತಾಹಂ ಪ್ರೇಷಯಿಷ್ಯೇ ನೃಪಾಯ ವೈ।।
ಮಗನೇ! ಶಾಂತಿಮಾರ್ಗವನ್ನು ಆರಿಸಿದ ನಾನು ನನಗೆ ಶಕ್ಯವಾದುದನ್ನು ಮಾಡುತ್ತೇನೆ. ನೃಪನಿಗೆ ನಾನು ಈ ಸಂದೇಶವನ್ನು ಕಳುಹಿಸುತ್ತೇನೆ:
01038012a ಮಮ ಪುತ್ರೇಣ ಶಪ್ತೋಽಸಿ ಬಾಲೇನಾಕೃತಬುದ್ಧಿನಾ।
01038012c ಮಮೇಮಾಂ ಧರ್ಷಣಾಂ ತ್ವತ್ತಃ ಪ್ರೇಕ್ಷ್ಯ ರಾಜನ್ನಮರ್ಷಿಣಾ।।
“ರಾಜನ್! ನೀನು ನನಗೆ ಮಾಡಿದ ಅಪಮಾನವನ್ನು ನೋಡಿ ಕೋಪಗೊಂಡ, ಬುದ್ಧಿಯು ಇನ್ನೂ ಬೆಳೆಯದ ಬಾಲಕ ನನ್ನ ಪುತ್ರನಿಂದ ನೀನು ಶಪಿಸಲ್ಪಟ್ಟಿದ್ದೀಯೆ.”””
01038013 ಸೂತ ಉವಾಚ।
01038013a ಏವಮಾದಿಶ್ಯ ಶಿಷ್ಯಂ ಸ ಪ್ರೇಷಯಾಮಾಸ ಸುವ್ರತಃ।
01038013c ಪರಿಕ್ಷಿತೇ ನೃಪತಯೇ ದಯಾಪನ್ನೋ ಮಹಾತಪಾಃ।।
ಸೂತನು ಹೇಳಿದನು: “ಆ ಸುವ್ರತ ದಯಾವಂತ ಮಹಾತಪಸ್ವಿಯು ತನ್ನ ಶಿಷ್ಯನೊಬ್ಬನಿಗೆ ಈ ರೀತಿಯ ಆದೇಶವನ್ನಿತ್ತು ನೃಪತಿ ಪರಿಕ್ಷಿತನ ಬಳಿ ಕಳುಹಿಸಿದನು.
01038014a ಸಂದಿಶ್ಯ ಕುಶಲಪ್ರಶ್ನಂ ಕಾರ್ಯವೃತ್ತಾಂತಮೇವ ಚ।
01038014c ಶಿಷ್ಯಂ ಗೌರಮುಖಂ ನಾಮ ಶೀಲವಂತಂ ಸಮಾಹಿತಂ।।
ಕುಶಲಪ್ರಶ್ನೆ ಮತ್ತು ಕಾರ್ಯ ವೃತ್ತಾಂತಗಳನ್ನೊಳಗೊಂಡ ಸಂದೇಶದೊಂದಿಗೆ ಶೀಲವಂತನಾದ ಗೌರಮುಖ ಎಂಬ ಹೆಸರಿನ ಶಿಷ್ಯನನ್ನು ಕಳುಹಿಸಿದನು.
01038015a ಸೋಽಭಿಗಮ್ಯ ತತಃ ಶೀಘ್ರಂ ನರೇಂದ್ರಂ ಕುರುವರ್ಧನಂ।
01038015c ವಿವೇಶ ಭವನಂ ರಾಜ್ಞಃ ಪೂರ್ವಂ ದ್ವಾಃಸ್ಥೈರ್ನಿವೇದಿತಃ।।
ಅವನು ಹೊರಟು ಶೀಘ್ರವಾಗಿ ಕುರುವರ್ಧಕ ನರೇಂದ್ರನ ಭವನವನ್ನು ಪ್ರವೇಶಿಸಿ ದ್ವಾರಪಾಲಕರ ಮೂಲಕ ಪೂರ್ವ ಸಂದೇಶವನ್ನು ಕಳುಹಿಸಿದನು.
01038016a ಪೂಜಿತಶ್ಚ ನರೇಂದ್ರೇಣ ದ್ವಿಜೋ ಗೌರಮುಖಸ್ತತಃ।
01038016c ಆಚಖ್ಯೌ ಪರಿವಿಶ್ರಾಂತೋ ರಾಜ್ಞೇ ಸರ್ವಮಶೇಷತಃ।
01038016e ಶಮೀಕವಚನಂ ಘೋರಂ ಯಥೋಕ್ತಂ ಮಂತ್ರಿಸಂನಿಧೌ।।
ನರೇಂದ್ರನಿಂದ ಸತ್ಕರಿಸಲ್ಪಟ್ಟ ದ್ವಿಜ ಗೌರಮುಖನು ಸ್ವಲ್ಪ ವಿಶ್ರಾಂತಿಯನ್ನು ಪಡೆದು ಶಮೀಕನ ಆ ಘೋರ ಮಾತುಗಳನ್ನು ಇದ್ದಹಾಗೆ ಏನನ್ನೂ ಬಿಡದೇ ಸರ್ವವನ್ನು ಮಂತ್ರಿಗಳ ಸನ್ನಿಧಿಯಲ್ಲಿ ರಾಜನಿಗೆ ಹೇಳಿದನು.
01038017a ಶಮೀಕೋ ನಾಮ ರಾಜೇಂದ್ರ ವಿಷಯೇ ವರ್ತತೇ ತವ।
01038017c ಋಷಿಃ ಪರಮಧರ್ಮಾತ್ಮಾ ದಾಂತಃ ಶಾಂತೋ ಮಹಾತಪಾಃ।।
“ರಾಜೇಂದ್ರ! ನಿನ್ನ ರಾಜ್ಯದಲ್ಲಿ ಶಮೀಕ ಎಂಬ ಹೆಸರಿನ ಪರಮ ಧರ್ಮಾತ್ಮ, ತನ್ನ ಭಾವೋದ್ವೇಗಗಳನ್ನು ಹಿಡಿತದಲ್ಲಿಟ್ಟುಕೊಂಡ, ಶಾಂತ ಮಹಾ ತಪಸ್ವಿ ಋಷಿಯು ವಾಸಿಸುತ್ತಿದ್ದಾನೆ.
01038018a ತಸ್ಯ ತ್ವಯಾ ನರವ್ಯಾಘ್ರ ಸರ್ಪಃ ಪ್ರಾಣೈರ್ವಿಯೋಜಿತಃ।
01038018c ಅವಸಕ್ತೋ ಧನುಷ್ಕೋಟ್ಯಾ ಸ್ಕಂಧೇ ಭರತಸತ್ತಮ।
01038018e ಕ್ಷಾಂತವಾಂಸ್ತವ ತತ್ಕರ್ಮ ಪುತ್ರಸ್ತಸ್ಯ ನ ಚಕ್ಷಮೇ।।
ನರವ್ಯಾಘ್ರ! ಭರತಸತ್ತಮ! ಅವನ ಭುಜಗಳ ಮೇಲೆ ನೀನು ಧನುಸ್ಸಿನ ತುದಿಯಿಂದ ಸತ್ತುಹೋಗಿದ್ದ ಒಂದು ಸರ್ಪವನ್ನು ಏರಿಸಿದ್ದೆ. ಅವನು ಈ ಕಾರ್ಯಗೈದ ನಿನ್ನನ್ನು ಕ್ಷಮಿಸಿದ್ದರೂ ಅವನ ಮಗನು ನಿನ್ನನ್ನು ಕ್ಷಮಿಸಲಿಲ್ಲ.
01038019a ತೇನ ಶಪ್ತೋಽಸಿ ರಾಜೇಂದ್ರ ಪಿತುರಜ್ಞಾತಮದ್ಯ ವೈ।
01038019c ತಕ್ಷಕಃ ಸಪ್ತರಾತ್ರೇಣ ಮೃತ್ಯುಸ್ತೇ ವೈ ಭವಿಷ್ಯತಿ।।
ರಾಜೇಂದ್ರ! ಅವನ ತಂದೆಗೆ ತಿಳಿಸದೆಯೇ ಅವನು ಮುಂದಿನ ಏಳು ರಾತ್ರಿಗಳಲ್ಲಿ ತಕ್ಷಕನಿಂದ ನಿನ್ನ ಮೃತ್ಯುವಾಗುತ್ತದೆ ಎಂದು ಶಪಿಸಿದ್ದಾನೆ.
01038020a ತತ್ರ ರಕ್ಷಾಂ ಕುರುಷ್ವೇತಿ ಪುನಃ ಪುನರಥಾಬ್ರವೀತ್।
01038020c ತದನ್ಯಥಾ ನ ಶಕ್ಯಂ ಚ ಕರ್ತುಂ ಕೇನ ಚಿದಪ್ಯುತ।।
ನಿನ್ನ ರಕ್ಷಣೆಯನ್ನು ಮಾಡು ಎಂದು ಪುನಃ ಪುನಃ ಕೇಳಿಕೊಂಡರೂ ಅವನ ಈ ಮಾತುಗಳನ್ನು ಯಾರಿಂದಲೂ ಸುಳ್ಳಾಗಿಸಲು ಸಾಧ್ಯವಿಲ್ಲ.
01038021a ನ ಹಿ ಶಕ್ನೋತಿ ಸಮ್ಯಂತುಂ ಪುತ್ರಂ ಕೋಪಸಮನ್ವಿತಂ।
01038021c ತತೋಽಹಂ ಪ್ರೇಷಿತಸ್ತೇನ ತವ ರಾಜನ್ ಹಿತಾರ್ಥಿನಾ।।
ತನ್ನ ಕೋಪಸಮನ್ವಿತ ಪುತ್ರನನ್ನು ಸಂಯಮಿಸಲು ಅಶಕ್ತನಾದ ಅವನು ನಿನ್ನ ಹಿತವನ್ನೇ ಬಯಸಿ ನನ್ನನ್ನು ನಿನ್ನಲ್ಲಿಗೆ ಕಳುಹಿಸಿದ್ದಾನೆ.”
01038022a ಇತಿ ಶ್ರುತ್ವಾ ವಚೋ ಘೋರಂ ಸ ರಾಜಾ ಕುರುನಂದನಃ।
01038022c ಪರ್ಯತಪ್ಯತ ತತ್ಪಾಪಂ ಕೃತ್ವಾ ರಾಜಾ ಮಹಾತಪಾಃ।।
ಈ ರೀತಿಯ ಘೋರ ಮಾತುಗಳನ್ನು ಕೇಳಿದ ಕುರುನಂದನ ಮಹಾತಪಸ್ವಿ ರಾಜನು ತಾನು ಮಾಡಿದ ಕೆಲಸಕ್ಕಾಗಿ ಬಹಳಷ್ಟು ನೊಂದನು.
01038023a ತಂ ಚ ಮೌನವ್ರತಧರಂ ಶ್ರುತ್ವಾ ಮುನಿವರಂ ತದಾ।
01038023c ಭೂಯ ಏವಾಭವದ್ರಾಜಾ ಶೋಕಸಂತಪ್ತಮಾನಸಃ।।
ಅಂದು ಮುನಿವರನು ಮೌನವ್ರತವನ್ನು ಪಾಲಿಸುತ್ತಿದ್ದನೆಂದು ಕೇಳಿ ರಾಜನು ಇನ್ನೂ ಹೆಚ್ಚು ಶೋಕಸಂತಪ್ತನಾದನು.
01038024a ಅನುಕ್ರೋಶಾತ್ಮತಾಂ ತಸ್ಯ ಶಮೀಕಸ್ಯಾವಧಾರ್ಯ ತು।
01038024c ಪರ್ಯತಪ್ಯತ ಭೂಯೋಽಪಿ ಕೃತ್ವಾ ತತ್ಕಿಲ್ಬಿಷಂ ಮುನೇಃ।।
ತನ್ನ ಮೇಲೆ ಶಮೀಕನು ತೋರಿದ ಅನುಕಂಪವನ್ನು ಮತ್ತು ಅಂದು ತಾನು ಆ ಮುನಿಗೆ ಮಾಡಿದ ಪಾಪ ಕೃತ್ಯವನ್ನು ನೆನೆಸಿಕೊಂಡು ರಾಜನು ಪರಿತಾಪಗೊಂಡನು.
01038025a ನ ಹಿ ಮೃತ್ಯುಂ ತಥಾ ರಾಜಾ ಶ್ರುತ್ವಾ ವೈ ಸೋಽನ್ವತಪ್ಯತ।
01038025c ಅಶೋಚದಮರಪ್ರಖ್ಯೋ ಯಥಾ ಕೃತ್ವೇಹ ಕರ್ಮ ತತ್।।
ಅಮರನಂತೆ ತೋರುತ್ತಿದ್ದ ಆ ರಾಜನು ತಾನು ಗೈದ ಕರ್ಮದ ಕುರಿತು ದುಃಖಿಸುವಷ್ಟು ತನ್ನ ಮೃತ್ಯುವಿನ ಕುರಿತು ಕೇಳಿದುದಕ್ಕೆ ಶೋಕಿಸಲಿಲ್ಲ.
01038026a ತತಸ್ತಂ ಪ್ರೇಷಯಾಮಾಸ ರಾಜಾ ಗೌರಮುಖಂ ತದಾ।
01038026c ಭೂಯಃ ಪ್ರಸಾದಂ ಭಗವಾನ್ಕರೋತ್ವಿತಿ ಮಮೇತಿ ವೈ।।
“ಭಗವಾನ್ ಮುನಿಯು ನನಗೆ ತೋರಿಸಿದ ದಯೆಯು ನನಗೆ ಪ್ರಸಾದವಾಗಲಿ” ಎಂದು ಹೇಳಿ ರಾಜನು ಗೌರಮುಖನನ್ನು ಕಳುಹಿಸಿಕೊಟ್ಟನು.
01038027a ತಸ್ಮಿಂಶ್ಚ ಗತಮಾತ್ರೇ ವೈ ರಾಜಾ ಗೌರಮುಖೇ ತದಾ।
01038027c ಮಂತ್ರಿಭಿರ್ಮಂತ್ರಯಾಮಾಸ ಸಹ ಸಂವಿಗ್ನಮಾನಸಃ।।
ಗೌರಮುಖನು ಹೊರಟುಹೋದೊಡನೆಯೇ ರಾಜನು ಸಂವಿಗ್ನ ಮನಸ್ಕನಾಗಿ ಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಿದನು.
01038028a ನಿಶ್ಚಿತ್ಯ ಮಂತ್ರಿಭಿಶ್ಚೈವ ಸಹಿತೋ ಮಂತ್ರತತ್ತ್ವವಿತ್।
01038028c ಪ್ರಾಸಾದಂ ಕಾರಯಾಮಾಸ ಏಕಸ್ತಂಭಂ ಸುರಕ್ಷಿತಂ।।
ಮಂತ್ರಿಗಳೊಂದಿಗೆ ಸಮಾಲೋಚಿಸಿ ಒಂದು ಸ್ತಂಭದಮೇಲೆ ಸುರಕ್ಷಿತ ಭವನವನ್ನು ಕಟ್ಟಲು ನಿಶ್ಚಯಿಸಿದನು.
01038029a ರಕ್ಷಾಂ ಚ ವಿದಧೇ ತತ್ರ ಭಿಷಜಶ್ಚೌಷಧಾನಿ ಚ।
01038029c ಬ್ರಾಹ್ಮಣಾನ್ಸಿದ್ಧಮಂತ್ರಾಂಶ್ಚ ಸರ್ವತೋ ವೈ ನ್ಯವೇಶಯತ್।।
ತನ್ನ ರಕ್ಷಣೆಗೆಂದು ಸುತ್ತಲೂ ವೈದ್ಯರು, ಔಷಧಗಳು, ಬ್ರಾಹ್ಮಣರು ಮತ್ತು ಮಂತ್ರಸಿದ್ಧಿಯಾದವರನ್ನು ಇರಿಸಿದನು.
01038030a ರಾಜಕಾರ್ಯಾಣಿ ತತ್ರಸ್ಥಃ ಸರ್ವಾಣ್ಯೇವಾಕರೋಚ್ಚ ಸಃ।
01038030c ಮಂತ್ರಿಭಿಃ ಸಹ ಧರ್ಮಜ್ಞಃ ಸಮಂತಾತ್ಪರಿರಕ್ಷಿತಃ।।
ಈ ರೀತಿ ಎಲ್ಲ ಕಡೆಯಿಂದಲೂ ರಕ್ಷಣೆಯನ್ನು ಪಡೆದು ಅವನು ಅಲ್ಲಿಯೇ ಎಲ್ಲ ಮಂತ್ರಿಗಳು ಮತ್ತು ಧರ್ಮಜ್ಞರಿಂದ ಸುತ್ತುವರೆಯಲ್ಪಟ್ಟು ರಾಜಕಾರ್ಯಗಳನ್ನು ನೆರವೇರಿಸುತ್ತಿದ್ದನು.
01038031a ಪ್ರಾಪ್ತೇ ತು ದಿವಸೇ ತಸ್ಮಿನ್ಸಪ್ತಮೇ ದ್ವಿಜಸತ್ತಮ।
01038031c ಕಾಶ್ಯಪೋಽಭ್ಯಾಗಮದ್ವಿದ್ವಾಂಸ್ತಂ ರಾಜಾನಂ ಚಿಕಿತ್ಸಿತುಂ।।
ಆ ಏಳನೆಯು ದಿನವು ಪ್ರಾಪ್ತವಾದಾಗ ದ್ವಿಜಸತ್ತಮನೂ ವಿದ್ವಾಂಸನೂ ಆದ ಕಾಶ್ಯಪನೋರ್ವನು ರಾಜನಿಗೆ ಚಿಕಿತ್ಸೆಕೊಡುವ ಉದ್ದೇಶದಿಂದ ಬರುತ್ತಿದ್ದನು.
01038032a ಶ್ರುತಂ ಹಿ ತೇನ ತದಭೂದದ್ಯ ತಂ ರಾಜಸತ್ತಮಂ।
01038032c ತಕ್ಷಕಃ ಪನ್ನಗಶ್ರೇಷ್ಠೋ ನೇಷ್ಯತೇ ಯಮಸಾದನಂ।।
ಪನ್ನಗಶ್ರೇಷ್ಟ ತಕ್ಷಕನು ಆ ರಾಜಸತ್ತಮನನ್ನು ಯಮಸಾದನಕ್ಕೆ ಒಯ್ಯುತ್ತಾನೆ ಎನ್ನುವುದನ್ನು ಮತ್ತು ಅಲ್ಲಿಯವರೆಗೆ ನಡೆದುದೆಲ್ಲವನ್ನೂ ಅವನು ಕೇಳಿದ್ದನು.
01038033a ತಂ ದಷ್ಟಂ ಪನ್ನಗೇಂದ್ರೇಣ ಕರಿಷ್ಯೇಽಹಮಪಜ್ವರಂ।
01038033c ತತ್ರ ಮೇಽರ್ಥಶ್ಚ ಧರ್ಮಶ್ಚ ಭವಿತೇತಿ ವಿಚಿಂತಯನ್।।
ಪನ್ನಗೇಂದ್ರನು ಕಚ್ಚಿದಾಗ ಅವನನ್ನು ನಾನು ಗುಣಪಡಿಸುತ್ತೇನೆ ಮತ್ತು ಇದರಿಂದ ನಾನು ಧರ್ಮ ಮತ್ತು ಅರ್ಥ ಇವೆರಡನ್ನೂ ಗಳಿಸಬಲ್ಲೆ ಎಂದು ಅವನು ಯೋಚಿಸಿದ್ದನು.
01038034a ತಂ ದದರ್ಶ ಸ ನಾಗೇಂದ್ರಸ್ತಕ್ಷಕಃ ಕಾಶ್ಯಪಂ ಪಥಿ।
01038034c ಗಚ್ಛಂತಮೇಕಮನಸಂ ದ್ವಿಜೋ ಭೂತ್ವಾ ವಯೋತಿಗಃ।।
ಏಕಮನಸ್ಕನಾಗಿ ಹೋಗುತ್ತಿದ್ದ ಕಾಶ್ಯಪನನ್ನು ನೋಡಿದ ನಾಗೇಂದ್ರ ತಕ್ಷಕನು ಓರ್ವ ಬ್ರಾಹ್ಮಣನ ರೂಪತಾಳಿ ಅವನ ಎದಿರು ಬಂದನು.
01038035a ತಮಬ್ರವೀತ್ಪನ್ನಗೇಂದ್ರಃ ಕಾಶ್ಯಪಂ ಮುನಿಪುಂಗವಂ।
01038035c ಕ್ವ ಭವಾಂಸ್ತ್ವರಿತೋ ಯಾತಿ ಕಿಂ ಚ ಕಾರ್ಯಂ ಚಿಕೀರ್ಷತಿ।।
ಪನ್ನಗೇಂದ್ರನು ಮುನಿಪುಂಗವ ಕಾಶ್ಯಪನಿಗೆ ಕೇಳಿದನು: “ಇಷ್ಟೊಂದು ವೇಗದಲ್ಲಿ ಎಲ್ಲಿಗೆ ಹೋಗುತ್ತಿರುವೆ ಮತ್ತು ಅಲ್ಲಿ ಹೋಗಿ ಏನು ಮಾಡುತ್ತೀಯೆ?”
01038036 ಕಾಶ್ಯಪ ಉವಾಚ।
01038036a ನೃಪಂ ಕುರುಕುಲೋತ್ಪನ್ನಂ ಪರಿಕ್ಷಿತಮರಿಂದಮಂ।
01038036c ತಕ್ಷಕಃ ಪನ್ನಗಶ್ರೇಷ್ಥಸ್ತೇಜಸಾದ್ಯ ಪ್ರಧಕ್ಷ್ಯತಿ।।
ಕಾಶ್ಯಪನು ಹೇಳಿದನು: “ಕುರುಕುಲೋತ್ಮನ್ನ ಅರಿಂದಮ ನೃಪ ಪರಿಕ್ಷಿತನನ್ನು ಇಂದು ಪನ್ನಗಶ್ರೇಷ್ಠ ತಕ್ಷಕನು ಕಚ್ಚಲಿದ್ದಾನೆ.
01038037a ತಂ ದಷ್ಟಂ ಪನ್ನಗೇಂದ್ರೇಣ ತೇನಾಗ್ನಿಸಮತೇಜಸಾ।
01038037c ಪಾಂಡವಾನಾಂ ಕುಲಕರಂ ರಾಜಾನಮಮಿತೌಜಸಂ।
01038037e ಗಚ್ಛಾಮಿ ಸೌಮ್ಯ ತ್ವರಿತಂ ಸದ್ಯಃ ಕರ್ತುಮಪಜ್ವರಂ।।
ಸೌಮ್ಯ! ಅಗ್ನಿಸಮಾನ ತೇಜಸ್ಸನ್ನುಳ್ಳ ಪನ್ನಗೇಂದ್ರನಿಂದ ಕಚ್ಚಲ್ಪಡುವ ಪಾಂಡವರ ಕುಲಕರ, ಅಮಿತತೇಜಸ ರಾಜನನ್ನು ಉಳಿಸಲೋಸುಗ ನಾನು ಈ ಅವಸರದಲ್ಲಿ ಹೋಗುತ್ತಿದ್ದೇನೆ.”
01038038 ತಕ್ಷಕ ಉವಾಚ।
01038038a ಅಹಂ ಸ ತಕ್ಷಕೋ ಬ್ರಹ್ಮಂಸ್ತಂ ಧಕ್ಷ್ಯಾಮಿ ಮಹೀಪತಿಂ।
01038038c ನಿವರ್ತಸ್ವ ನ ಶಕ್ತಸ್ತ್ವಂ ಮಯಾ ದಷ್ಟಂ ಚಿಕಿತ್ಸಿತುಂ।।
ತಕ್ಷಕನು ಹೇಳಿದನು: “ಬ್ರಾಹ್ಮಣ! ಆ ಮಹೀಪತಿಯನ್ನು ಸಾಯಿಸುವ ತಕ್ಷಕನೇ ನಾನು. ಹಿಂದಿರುಗು. ನನ್ನಿಂದ ಕಚ್ಚಲ್ಪಟ್ಟವರಿಗೆ ನೀನು ಚಿಕಿತ್ಸೆ ನೀಡಲಾರೆ.”
01038039 ಕಾಶ್ಯಪ ಉವಾಚ।
01038039a ಅಹಂ ತಂ ನೃಪತಿಂ ನಾಗ ತ್ವಯಾ ದಷ್ಟಮಪಜ್ವರಂ।
01038039c ಕರಿಷ್ಯ ಇತಿ ಮೇ ಬುದ್ಧಿರ್ವಿದ್ಯಾಬಲಮುಪಾಶ್ರಿತಃ।।
ಕಾಶ್ಯಪನು ಹೇಳಿದನು: “ನಾಗ! ವಿದ್ಯಾಬಲನಾದ ನಾನು ನೀನು ಕಚ್ಚುವ ಆ ನೃಪತಿಗೆ ಉಪಚಾರ ನೀಡಬಲ್ಲೆ ಎಂದು ನಾನು ಧೃಢವಾಗಿ ನಂಬಿದ್ದೇನೆ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಆಸ್ತೀಕಪರ್ವಣಿ ಕಶ್ಯಪಾಗಮನೇ ಅಷ್ಟತ್ರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಆಸ್ತೀಕಪರ್ವದಲ್ಲಿ ಕಶ್ಯಪಾಗಮನ ಎನ್ನುವ ಮೂವತ್ತೆಂಟನೆಯ ಅಧ್ಯಾಯವು.