ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಆಸ್ತೀಕ ಪರ್ವ
ಅಧ್ಯಾಯ 36
ಸಾರ
“ಜರಾತ್ಕಾರು”ವಿನ ಶಬ್ಧಾರ್ಥ ಮತ್ತು ಅವನ ತಪಸ್ಸು (1-7). ಪರಿಕ್ಷಿತನು ಬೇಟೆಗೆ ಹೋದಾಗ ಜಿಂಕೆಯನ್ನು ಹುಡುಕುತ್ತಾ ಋಷಿಯೋರ್ವನಿಗೆ ಅಪಮಾನಿಸಿದುದು (8-20). ಋಷಿಯ ಮಗನಿಗೆ ಈ ಅಪಮಾನದ ಕುರಿತು ತಿಳಿದುದು (21-26).01036001 ಶೌನಕ ಉವಾಚ।
01036001a ಜರತ್ಕಾರುರಿತಿ ಪ್ರೋಕ್ತಂ ಯತ್ತ್ವಯಾ ಸೂತನಂದನ।
01036001c ಇಚ್ಛಾಮ್ಯೇತದಹಂ ತಸ್ಯ ಋಷೇಃ ಶ್ರೋತುಂ ಮಹಾತ್ಮನಃ।।
01036002a ಕಿಂ ಕಾರಣಂ ಜರತ್ಕಾರೋರ್ನಾಮೈತತ್ಪ್ರಥಿತಂ ಭುವಿ।
01036002c ಜರತ್ಕಾರುನಿರುಕ್ತಂ ತ್ವಂ ಯಥಾವದ್ವಕ್ತುಮರ್ಹಸಿ।।
ಶೌನಕನು ಹೇಳಿದನು: “ಸೂತನಂದನ! ಆ ಮಹಾತ್ಮ ಋಷಿಯು ಜರತ್ಕಾರುವೆಂದು ಏಕೆ ಕರೆಯಲ್ಪಟ್ಟ ಎನ್ನುವುದನ್ನು ತಿಳಿಯಲು ಇಚ್ಛಿಸುತ್ತೇನೆ. ಯಾವ ಕಾರಣದಿಂದ ಅವನು ಈ ಭುವಿಯಲ್ಲಿ ಜರತ್ಕಾರುವೆಂದು ಪ್ರತಿಥನಾದನು? ಜರತ್ಕಾರುವಿನ ಶಬ್ದಾರ್ಥವನ್ನು ಹೇಳು.”
01036003 ಸೂತ ಉವಾಚ।
01036003a ಜರೇತಿ ಕ್ಷಯಮಾಹುರ್ವೈ ದಾರುಣಂ ಕಾರುಸಂಜ್ಞಿತಂ।
01036003c ಶರೀರಂ ಕಾರು ತಸ್ಯಾಸೀತ್ತತ್ಸ ಧೀಮಾ ಶನೈಃ ಶನೈಃ।।
01036004a ಕ್ಷಪಯಾಮಾಸ ತೀವ್ರೇಣ ತಪಸೇತ್ಯತ ಉಚ್ಯತೇ।
01036004c ಜರತ್ಕಾರುರಿತಿ ಬ್ರಹ್ಮನ್ವಾಸುಕೇರ್ಭಗಿನೀ ತಥಾ।।
ಸೂತನು ಹೇಳಿದನು: “‘ಜರ’ ಎಂದರೆ ಕ್ಷಯವಾಗುವುದು ಮತ್ತು ‘ಕಾರು’ ಎಂದರೆ ಅತಿ ದೊಡ್ಡ ದೇಹ ಎಂದು ತಿಳಿ. ಆ ಧೀಮಂತನು ತೀವ್ರ ತಪಸ್ಸಿನಿಂದ ಸ್ವಲ್ಪ ಸ್ವಲ್ಪವೇ ತನ್ನ ಅತಿ ಸ್ಥೂಲ ಕಾಯವನ್ನು ಬಡಕಲು ಮಾಡಿಕೊಂಡನೆಂದು ಹೇಳುತ್ತಾರೆ. ಬ್ರಾಹ್ಮಣ! ಇದೇ ಕಾರಣಕ್ಕಾಗಿ ವಾಸುಕಿಯ ತಂಗಿಯೂ ಜರತ್ಕಾರುವೆಂದು ಕರೆಯಲ್ಪಟ್ಟಳು.”
01036005a ಏವಮುಕ್ತಸ್ತು ಧರ್ಮಾತ್ಮಾ ಶೌನಕಃ ಪ್ರಾಹಸತ್ತದಾ।
01036005c ಉಗ್ರಶ್ರವಸಮಾಮಂತ್ರ್ಯ ಉಪಪನ್ನಮಿತಿ ಬ್ರುವನ್।।
ಇದನ್ನು ಕೇಳಿದ ಧರ್ಮಾತ್ಮ ಶೌನಕನು ಮುಗುಳ್ನಗುತ್ತಾ “ನೀನು ಹೇಳುವುದು ಸರಿ!” ಎಂದು ಉಗ್ರಶ್ರವನಿಗೆ ಹೇಳಿದನು.
01036006 ಸೂತ ಉವಾಚ।
01036006a ಅಥ ಕಾಲಸ್ಯ ಮಹತಃ ಸ ಮುನಿಃ ಸಂಶಿತವ್ರತಃ।
01036006c ತಪಸ್ಯಭಿರತೋ ಧೀಮಾನ್ನ ದಾರಾನಭ್ಯಕಾಂಕ್ಷತ।।
ಸೂತನು ಹೇಳಿದನು: “ಬಹಳಷ್ಟು ಸಮಯವು ಕಳೆಯಿತು. ಆದರೂ ತಪಸ್ಸಿನಲ್ಲಿಯೇ ನಿರತನಾದ ಆ ಸಂಶಿತವ್ರತ ಧೀಮಂತ ಮುನಿಯು ಪತ್ನಿಯನ್ನು ಬಯಸಲೇ ಇಲ್ಲ.
01036007a ಸ ಊರ್ಧ್ವರೇತಾಸ್ತಪಸಿ ಪ್ರಸಕ್ತಃ ಸ್ವಾಧ್ಯಾಯವಾನ್ವೀತಭಯಕ್ಲಮಃ ಸನ್।
01036007c ಚಚಾರ ಸರ್ವಾಂ ಪೃಥಿವೀಂ ಮಹಾತ್ಮಾ ನ ಚಾಪಿ ದಾರಾನ್ಮನಸಾಪ್ಯಕಾಂಕ್ಷತ್।।
ಆ ಮಹಾತ್ಮ ಊರ್ಧ್ವರೇತನು ಅಧ್ಯಾಯ ಮತ್ತು ತಪಸ್ಸಿನಲ್ಲಿ ಪ್ರಸಕ್ತನಾಗಿ ಸ್ವಲ್ಪಯೂ ಭಯಭೀತಿಯಿಲ್ಲದೇ ಪೃಥ್ವಿಯೆಲ್ಲವನ್ನೂ ಸಂಚರಿಸಿದನು. ಅವನ ಮನಸ್ಸಿನಲ್ಲಿ ಪತ್ನಿಗಾಗಿ ಸ್ವಲ್ಪವೂ ಬಯಕೆ ಬರಲಿಲ್ಲ.
01036008a ತತೋಽಪರಸ್ಮಿನ್ಸಂಪ್ರಾಪ್ತೇ ಕಾಲೇ ಕಸ್ಮಿಂಶ್ಚಿದೇವ ತು।
01036008c ಪರಿಕ್ಷಿದಿತಿ ವಿಖ್ಯಾತೋ ರಾಜಾ ಕೌರವವಂಶಭೃತ್।।
ಬಹಳಷ್ಟು ಸಮಯವು ಕಳೆದನಂತರ, ಕಾಲ ಪ್ರಾಪ್ತವಾದ ಹಾಗೆ, ಕೌರವ ವಂಶದಲ್ಲಿ ಪರಿಕ್ಷಿತನೆಂಬ ಖ್ಯಾತ ರಾಜನು ಜನಿಸಿದನು.
01036009a ಯಥಾ ಪಾಂಡುರ್ಮಹಾಬಾಹುರ್ಧನುರ್ಧರವರೋ ಭುವಿ।
01036009c ಬಭೂವ ಮೃಗಯಾಶೀಲಃ ಪುರಾಸ್ಯ ಪ್ರಪಿತಾಮಹಃ।।
ತನ್ನ ಪುರಾತನ ಪ್ರಪಿತಾಮಹನಂತೆ ಅವನು ಮಹಾಬಾಹುವೂ, ಭೂಮಂಡಲದ ಧನುರ್ಧರರಲ್ಲಿ ಶ್ರೇಷ್ಠನೂ ಮತ್ತು ಮೃಗಯಾಶೀಲನೂ ಆಗಿದ್ದನು.
01036010a ಮೃಗಾನ್ವಿಧ್ಯನ್ವರಾಹಾಂಶ್ಚ ತರಕ್ಷೂನ್ಮಹಿಷಾಂಸ್ತಥಾ।
01036010c ಅನ್ಯಾಂಶ್ಚ ವಿವಿಧಾನ್ವನ್ಯಾಂಶ್ಚಚಾರ ಪೃಥಿವೀಪತಿಃ।।
ಆ ಪೃಥಿವೀಪತಿಯು ಜಿಂಕೆ, ವರಾಹ, ಹಯೀನ, ಕಾಡೆಮ್ಮೆಗಳು ಮತ್ತು ಇತರ ಹಲವಾರು ವನ್ಯ ಮೃಗಗಳನ್ನು ಬೇಟೆಯಾಡುತ್ತಾ ಸಂಚರಿಸುತ್ತಿದ್ದನು.
01036011a ಸ ಕದಾಚಿನ್ಮೃಗಂ ವಿದ್ಧ್ವಾ ಬಾಣೇನ ನತಪರ್ವಣಾ।
01036011c ಪೃಷ್ಠತೋ ಧನುರಾದಾಯ ಸಸಾರ ಗಹನೇ ವನೇ।।
ಒಮ್ಮೆ ಒಂದು ಜಿಂಕೆಯನ್ನು ಬಾಣದಿಂದ ಹೊಡೆದ ಅವನು ತನ್ನ ಧನುಸ್ಸನ್ನು ಭುಜದ ಮೇಲೇರಿಸಿ ಅದರ ಹಿಂದೆ ಹೋಗುತ್ತಾ ದಟ್ಟ ವನವನ್ನು ಪ್ರವೇಶಿಸಿದನು.
01036012a ಯಥಾ ಹಿ ಭಗವಾನ್ರುದ್ರೋ ವಿದ್ಧ್ವಾ ಯಜ್ಞಮೃಗಂ ದಿವಿ।
01036012c ಅನ್ವಗಚ್ಛದ್ಧನುಷ್ಪಾಣಿಃ ಪರ್ಯನ್ವೇಷಂಸ್ತತಸ್ತತಃ।।
ಭಗವಾನ್ ರುದ್ರನು ಸ್ವರ್ಗಲೋಕದಲ್ಲಿ ಯಜ್ಞಮೃಗವನ್ನು ಅರಸಿದಂತೆ ಆ ಧನುಷ್ಪಾಣಿಯು ಅದನ್ನು ಅಲ್ಲಿ ಇಲ್ಲಿ ಅರಸ ತೊಡಗಿದನು.
01036013a ನ ಹಿ ತೇನ ಮೃಗೋ ವಿದ್ಧೋ ಜೀವನ್ಗಚ್ಛತಿ ವೈ ವನಂ।
01036013c ಪೂರ್ವರೂಪಂ ತು ತನ್ನೂನಮಾಸೀತ್ಸ್ವರ್ಗಗತಿಂ ಪ್ರತಿ।
01036013e ಪರಿಕ್ಷಿತಸ್ತಸ್ಯ ರಾಜ್ಞೋ ವಿದ್ಧೋ ಯನ್ನಷ್ಟವಾನ್ಮೃಗಃ।।
ಇದಕ್ಕೂ ಮೊದಲು ಅವನು ಹೊಡೆದ ಯಾವ ಮೃಗವೂ ಜೀವಂತವಾಗಿ ಹೋಗಿರಲಿಲ್ಲ. ಈಗ ಕಳೆದುಹೋದ ಆ ಮೃಗವು ರಾಜ ಪರೀಕ್ಷಿತನ ಸಾವನ್ನು ಸೂಚಿಸುವಂತಿತ್ತು.
01036014a ದೂರಂ ಚಾಪಹೃತಸ್ತೇನ ಮೃಗೇಣ ಸ ಮಹೀಪತಿಃ।
01036014c ಪರಿಶ್ರಾಂತಃ ಪಿಪಾಸಾರ್ತ ಆಸಸಾದ ಮುನಿಂ ವನೇ।।
01036015a ಗವಾಂ ಪ್ರಚಾರೇಷ್ವಾಸೀನಂ ವತ್ಸಾನಾಂ ಮುಖನಿಃಸೃತಂ।
01036015c ಭೂಯಿಷ್ಠಮುಪಯುಂಜಾನಂ ಫೇನಮಾಪಿಬತಾಂ ಪಯಃ।।
ಜಿಂಕೆಯನ್ನು ಹಿಂಬಾಲಿಸುತ್ತಾ ಬಹುದೂರ ಹೋದ ಮಹೀಪತಿಯು ಆಯಾಸಗೊಂಡು ಬಾಯಾರಿಕೆಯಿಂದ ಬಳಲಿ ಆ ವನದಲ್ಲಿ ಒಂದು ಗೋಶಾಲೆಯಲ್ಲಿ ಕರುಗಳು ಹಾಲು ಕುಡಿಯುವಾಗ ಅವರ ಬಾಯಿಯಿಂದ ಹೊರಚೆಲ್ಲುತ್ತಿದ್ದ ಹಾಲಿನ ನೊರೆಯನ್ನೇ ಕುಡಿಯುತ್ತಿದ್ದ ಓರ್ವ ಮುನಿಯನ್ನು ಕಂಡನು.
01036016a ತಮಭಿದ್ರುತ್ಯ ವೇಗೇನ ಸ ರಾಜಾ ಸಂಶಿತವ್ರತಂ।
01036016c ಅಪೃಚ್ಛದ್ಧನುರುದ್ಯಮ್ಯ ತಂ ಮುನಿಂ ಕ್ಷುಚ್ಛ್ರಮಾನ್ವಿತಃ।।
ವೇಗದಿಂದ ಅವನ ಬಳಿ ಬಂದು, ಧನುಸ್ಸನ್ನು ಮೇಲೇರಿಸಿ, ಹಸಿವು ಬಾಯಾರಿಕೆಗಳಿಂದ ಬಳಲುತ್ತಿದ್ದ ರಾಜನು ಆ ಸಂಶಿತವ್ರತ ಮುನಿಯನ್ನು ಕೇಳಿದನು:
01036017a ಭೋ ಭೋ ಬ್ರಹ್ಮನ್ನಹಂ ರಾಜಾ ಪರಿಕ್ಷಿದಭಿಮನ್ಯುಜಃ।
01036017c ಮಯಾ ವಿದ್ಧೋ ಮೃಗೋ ನಷ್ಟಃ ಕಚ್ಚಿತ್ತ್ವಂ ದೃಷ್ಟವಾನಸಿ।।
“ಬ್ರಾಹ್ಮಣ! ನಾನು ಅಭಿಮನ್ಯುವಿನ ಮಗ ರಾಜ ಪರಿಕ್ಷಿತ. ನನ್ನಿಂದ ಹೊಡೆಯಲ್ಪಟ್ಟ ಜಿಂಕೆಯೊಂದು ಕಳೆದು ಹೋಗಿದೆ. ನೀನು ಅದು ಎಲ್ಲಿ ಹೋಯಿತೆಂದು ಕಂಡೆಯಾ?”
01036018a ಸ ಮುನಿಸ್ತಸ್ಯ ನೋವಾಚ ಕಿಂ ಚಿನ್ಮೌನವ್ರತೇ ಸ್ಥಿತಃ।
01036018c ತಸ್ಯ ಸ್ಕಂಧೇ ಮೃತಂ ಸರ್ಪಂ ಕ್ರುದ್ಧೋ ರಾಜಾ ಸಮಾಸಜತ್।।
01036019a ಧನುಷ್ಕೋಟ್ಯಾ ಸಮುತ್ಕ್ಷಿಪ್ಯ ಸ ಚೈನಂ ಸಮುದೈಕ್ಷತ।
01036019c ನ ಚ ಕಿಂ ಚಿದುವಾಚೈನಂ ಶುಭಂ ವಾ ಯದಿ ವಾಶುಭಂ।।
ಮೌನವ್ರತ ಪಾಲಿಸುತ್ತಿದ್ದ ಆ ಮುನಿಯು ಅವನಿಗೆ ಯಾವುದೇ ಉತ್ತರವನ್ನೂ ಕೊಡಲಿಲ್ಲ. ಇದರಿಂದ ಕ್ರೋಧಿತನಾದ ರಾಜನು ತನ್ನ ಧನುಸ್ಸಿನ ಕೊನೆಯಿಂದ ಸತ್ತ ಸರ್ಪವೊಂದನ್ನು ಎತ್ತಿ ಅವನ ಕೊರಳಲ್ಲಿ ಹಾಕಿದನು. ಆಗಲೂ ಕೂಡ ಅವನು ಒಳ್ಳೆಯ ಅಥವಾ ಕೆಟ್ಟ ಯಾವ ಮಾತನ್ನೂ ಆಡಲಿಲ್ಲ.
01036020a ಸ ರಾಜಾ ಕ್ರೋಧಮುತ್ಸೃಜ್ಯ ವ್ಯಥಿತಸ್ತಂ ತಥಾಗತಂ।
01036020c ದೃಷ್ಟ್ವಾ ಜಗಾಮ ನಗರಂ ಋಷಿಸ್ತ್ವಾಸ್ತೇ ತಥೈವ ಸಃ।।
ಋಷಿಯನ್ನು ಆ ಅವಸ್ಥೆಯಲ್ಲಿ ನೋಡಿದ ರಾಜನು ಕೋಪವನ್ನು ಬಿಟ್ಟು ಬೇಸರದಿಂದ ತನ್ನ ನಗರಕ್ಕೆ ತೆರಳಿದನು.
01036021a ತರುಣಸ್ತಸ್ಯ ಪುತ್ರೋಽಭೂತ್ತಿಗ್ಮತೇಜಾ ಮಹಾತಪಾಃ।
01036021c ಶೃಂಗೀ ನಾಮ ಮಹಾಕ್ರೋಧೋ ದುಷ್ಪ್ರಸಾದೋ ಮಹಾವ್ರತಃ।।
ಅವನಿಗೆ ಮಹಾ ತೇಜಸ್ವಿ, ಮಹಾತಪಸ್ವಿ, ಮಹಾ ಕ್ರೋಧಿ, ಮಹಾವ್ರತ ಮತ್ತು ಒಲಿಸಲು ದುಷ್ಕರ ಶೃಂಗಿ ಎಂಬ ಹೆಸರಿನ ತರುಣ ಮಗನಿದ್ದನು.
01036022a ಸ ದೇವಂ ಪರಮೀಶಾನಂ ಸರ್ವಭೂತಹಿತೇ ರತಂ।
01036022c ಬ್ರಹ್ಮಾಣಮುಪತಸ್ಥೇ ವೈ ಕಾಲೇ ಕಾಲೇ ಸುಸಂಯತಃ।
01036022e ಸ ತೇನ ಸಮನುಜ್ಞಾತೋ ಬ್ರಹ್ಮಣಾ ಗೃಹಮೇಯಿವಾನ್।।
ಆ ಸರ್ವಭೂತಹಿತರತನು ಕಾಲ ಕಾಲದಲ್ಲಿ ಸುಸಂಯಮನಾಗಿ ತನ್ನ ಆಸನದಲ್ಲಿ ಕುಳಿತುಕೊಂಡು ಪರಮೀಷಾನ ಬ್ರಹ್ಮದೇವನನ್ನು ಉಪಾಸಿಸುತ್ತಿದ್ದನು. ಬ್ರಹ್ಮನ ಅಪ್ಪಣೆಯಂತೆ ಅವನು ತನ್ನ ಮನೆಗೆ ಬಂದನು.
01036023a ಸಖ್ಯೋಕ್ತಃ ಕ್ರೀಢಮಾನೇನ ಸ ತತ್ರ ಹಸತಾ ಕಿಲ।
01036023c ಸಂರಂಭೀ ಕೋಪನೋಽತೀವ ವಿಷಕಲ್ಪ ಋಷೇಃ ಸುತಃ।
01036023E ಋಷಿಪುತ್ರೇಣ ನರ್ಮಾರ್ಥಂ ಕೃಶೇನ ದ್ವಿಜಸತ್ತಮ।।
ವಿಷಸಮಾನ ಅತಿಕೋಪವನ್ನು ಹೊಂದಿದ್ದ ಆ ಋಷಿಸುತನಿಗೆ ಇನ್ನೊಬ್ಬ ಋಷಿಯ ಮಗ ಕೃಶ ಎನ್ನುವ ಸಖನು ನಗುನಗುತ್ತಾ ಹಾಸ್ಯದಲ್ಲಿ ಹೇಳಿದನು:
01036024a ತೇಜಸ್ವಿನಸ್ತವ ಪಿತಾ ತಥೈವ ಚ ತಪಸ್ವಿನಃ।
01036024c ಶವಂ ಸ್ಕಂಧೇನ ವಹತಿ ಮಾ ಶೃಂಗಿಂಗರ್ವಿತೋ ಭವ।।
“ಶೃಂಗಿ! ನಿನ್ನ ಗರ್ವವನ್ನು ಬಿಡು. ನೀನು ತಪಸ್ವಿಯೂ ತೇಜಸ್ವಿಯೂ ಆಗಿರಬಹುದು. ಆದರೆ ನಿನ್ನ ತಂದೆಯು ತನ್ನ ಹೆಗಲಮೇಲೆ ಒಂದು ಶವವನ್ನು ಹೊತ್ತಿದ್ದಾನೆ.
01036025a ವ್ಯಾಹರತ್ಸ್ವೃಷಿಪುತ್ರೇಷು ಮಾ ಸ್ಮ ಕಿಂ ಚಿದ್ವಚೋ ವದೀಃ।
01036025c ಅಸ್ಮದ್ವಿಧೇಷು ಸಿದ್ಧೇಷು ಬ್ರಹ್ಮವಿತ್ಸು ತಪಸ್ವಿಷು।।
ತಪಸ್ವಿಗಳೂ, ಸಿದ್ಧರೂ, ಬ್ರಹ್ಮವಿದರೂ ಆದ ನಮ್ಮಂತಹ ಋಷಿಪುತ್ರರಲ್ಲಿ ನೀನು ಯಾವ ವ್ಯವಹಾರವನ್ನೂ ಮಾಡಬೇಕಾಗಿಲ್ಲ.
01036026a ಕ್ವ ತೇ ಪುರುಷಮಾನಿತ್ವಂ ಕ್ವ ತೇ ವಾಚಸ್ತಥಾವಿಧಾಃ।
01036026c ದರ್ಪಜಾಃ ಪಿತರಂ ಯಸ್ತ್ವಂ ದ್ರಷ್ಟಾ ಶವಧರಂ ತಥಾ।।
ನಿನ್ನ ತಂದೆಯು ಒಂದು ಶವವನ್ನು ಹೊತ್ತಿರುವುದನ್ನು ನೋಡಿದಾಗ ನಿನ್ನ ಪುರುಷಮಾನಿತ್ವ ಎಲ್ಲಿದೆ ಮತ್ತು ನಿನ್ನ ದರ್ಪದ ಮಾತುಗಳು ಎಲ್ಲಿ ಹೋಗುತ್ತವೆ?””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಆಸ್ತೀಕಪರ್ವಣಿ ಪರಿಕ್ಷಿದುಪಖ್ಯಾನೇ ಷಟ್ತ್ರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಆಸ್ತೀಕಪರ್ವದಲ್ಲಿ ಪರಿಕ್ಷಿದುಪಖ್ಯಾನ ಎನ್ನುವ ಮೂವತ್ತಾರನೆಯ ಅಧ್ಯಾಯವು.