035 ಜರತ್ಕಾರನ್ವೇಷಣಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಆಸ್ತೀಕ ಪರ್ವ

ಅಧ್ಯಾಯ 35

ಸಾರ ವಾಸುಕಿಯು ಏಲಾಪತ್ರನು ಹೇಳಿದುದನ್ನು ಬ್ರಹ್ಮನಿಂದ ನಿರ್ದಿಷ್ಟಪಡಿಸಿಕೊಂಡು ತಂಗಿ ಜರತ್ಕಾರುವನ್ನು ನೋಡಿಕೊಳ್ಳುವುದು (1-10). ಮುನಿ ಜರತ್ಕಾರುವಿನ ಮೇಲೆ ಕಣ್ಣಿಡುವಂತೆ ಇತರ ಸರ್ಪಗಳಿಗೆ ಹೇಳಿದುದು (11-13).

01035001 ಸೂತ ಉವಾಚ।
01035001a ಏಲಾಪತ್ರಸ್ಯ ತು ವಚಃ ಶ್ರುತ್ವಾ ನಾಗಾ ದ್ವಿಜೋತ್ತಮ।
01035001c ಸರ್ವೇ ಪ್ರಹೃಷ್ಟಮನಸಃ ಸಾಧು ಸಾಧ್ವಿತ್ಯಪೂಜಯನ್।।

ಸೂತನು ಹೇಳಿದನು: “ದ್ವಿಜೋತ್ತಮ! ಏಲಾಪತ್ರನ ಈ ಮಾತುಗಳನ್ನು ಕೇಳಿದ ನಾಗಗಳೆಲ್ಲರೂ ಪ್ರಹೃಷ್ಟರಾಗಿ “ಸಾಧು! ಸಾಧು!” ಎಂದು ಉದ್ಗಾರಗೈದರು.

01035002a ತತಃ ಪ್ರಭೃತಿ ತಾಂ ಕನ್ಯಾಂ ವಾಸುಕಿಃ ಪರ್ಯರಕ್ಷತ।
01035002c ಜರತ್ಕಾರುಂ ಸ್ವಸಾರಂ ವೈ ಪರಂ ಹರ್ಷಮವಾಪ ಚ।।

ಅಂದಿನಿಂದ ವಾಸುಕಿಯು ಆ ಕನ್ಯೆ ಜರತ್ಕಾರುವನ್ನು ರಕ್ಷಿಸುತ್ತಾ ಅವಳ ಪಾಲನೆ-ಪೋಷಣೆಯಲ್ಲಿ ತುಂಬಾ ಸಂತೋಷವನ್ನು ಹೊಂದಿದನು.

01035003a ತತೋ ನಾತಿಮಹಾನ್ಕಾಲಃ ಸಮತೀತ ಇವಾಭವತ್।
01035003c ಅಥ ದೇವಾಸುರಾಃ ಸರ್ವೇ ಮಮಂಥುರ್ವರುಣಾಲಯಂ।।

ದೇವಾಸುರರೆಲ್ಲರೂ ಸೇರಿ ಸಮುದ್ರವನ್ನು ಮಥಿಸಿ ಹೆಚ್ಚು ಸಮಯವು ಕಳೆದಿರಲಿಲ್ಲ.

01035004a ತತ್ರ ನೇತ್ರಮಭೂನ್ನಾಗೋ ವಾಸುಕಿರ್ಬಲಿನಾಂ ವರಃ।
01035004c ಸಮಾಪ್ಯೈವ ಚ ತತ್ಕರ್ಮ ಪಿತಾಮಹಮುಪಾಗಮನ್।।

ಆಗ ಬಲಶಾಲಿಗಳಲ್ಲಿ ಶ್ರೇಷ್ಠ ನಾಗ ವಾಸುಕಿಯು ಕಡೆಯುವ ಹಗ್ಗವಾಗಿದ್ದನು. ಆ ಕಾರ್ಯವನ್ನು ಮುಗಿಸಿದ ಅವನು ಪಿತಾಮಹನ ಬಳಿ ಹೋದನು.

01035005a ದೇವಾ ವಾಸುಕಿನಾ ಸಾರ್ಧಂ ಪಿತಾಮಹಮಥಾಬ್ರುವನ್।
01035005c ಭಗವನ್ ಶಾಪಭೀತೋಽಯಂ ವಾಸುಕಿಸ್ತಪ್ಯತೇ ಭೃಶಂ।।

ವಾಸುಕಿಯ ಜೊತೆಗಿದ್ದ ದೇವತೆಗಳು ಪಿತಾಮಹನಲ್ಲಿ ವಿನಂತಿಸಿಕೊಂಡರು: “ಭಗವನ್! ಈ ಶಾಪಭೀತ ವಾಸುಕಿಯು ತುಂಬಾ ನೋವನ್ನು ಅನುಭವಿಸುತ್ತಿದ್ದಾನೆ.

01035006a ತಸ್ಯೇದಂ ಮಾನಸಂ ಶಲ್ಯಂ ಸಮುದ್ಧರ್ತುಂ ತ್ವಮರ್ಹಸಿ।
01035006c ಜನನ್ಯಾಃ ಶಾಪಜಂ ದೇವ ಜ್ಞಾತೀನಾಂ ಹಿತಕಾಂಕ್ಷಿಣಃ।।

ದೇವ! ಜನನಿಯ ಶಾಪದಿಂದ ತನ್ನ ಜಾತಿಯವರ ಹಿತಾಕಾಂಕ್ಷಿಯಾದ ಇವನಲ್ಲಿ ಉದ್ಭವವಾಗಿರುವ ಈ ಶಲಾಕೆಯನ್ನು ಅವನ ಮನಸ್ಸಿನಿಂದ ಕಿತ್ತೊಗೆಯಬೇಕಾಗಿದೆ.

01035007a ಹಿತೋ ಹ್ಯಯಂ ಸದಾಸ್ಮಾಕಂ ಪ್ರಿಯಕಾರೀ ಚ ನಾಗರಾಟ್।
01035007c ಕುರು ಪ್ರಸಾದಂ ದೇವೇಶ ಶಮಯಾಸ್ಯ ಮನೋಜ್ವರಂ।।

ಈ ನಾಗರಾಜನು ಸದಾ ನಮ್ಮ ಹಿತೈಷಿಯೂ ಪ್ರಿಯಕಾರಿಯೂ ಆಗಿದ್ದಾನೆ. ದೇವೇಶ! ಇವನ ಮನೋಜ್ವರವನ್ನು ಹೋಗಲಾಡಿಸುವ ಪ್ರಸಾದವನ್ನು ನೀಡು.”

01035008 ಬ್ರಹ್ಮೋವಾಚ।
01035008a ಮಯೈವೈತದ್ವಿತೀರ್ಣಂ ವೈ ವಚನಂ ಮನಸಾಮರಾಃ।
01035008c ಏಲಾಪತ್ರೇಣ ನಾಗೇನ ಯದಸ್ಯಾಭಿಹಿತಂ ಪುರಾ।।
01035009a ತತ್ಕರೋತ್ವೇಷ ನಾಗೇಂದ್ರಃ ಪ್ರಾಪ್ತಕಾಲಂ ವಚಸ್ತಥಾ।
01035009c ವಿನಶಿಷ್ಯಂತಿ ಯೇ ಪಾಪಾ ನ ತು ಯೇ ಧರ್ಮಚಾರಿಣಃ।।

ಬ್ರಹ್ಮನು ಹೇಳಿದನು: “ಅಮರರೇ! ನಿಮ್ಮ ಈ ಮಾತುಗಳನ್ನು ನಾನು ಮನಸ್ಸಿನಲ್ಲಿ ಯೋಚಿಸಿದ್ದೇನೆ. ನಾಗೇಂದ್ರನು ಸಮಯ ಬಂದಾಗ ಜರತ್ಕಾರುವಿನ ಕುರಿತು ನಾಗ ಏಲಾಪತ್ರನು ಮೊದಲು ಹೇಳಿದ ಹಾಗೆಯೇ ಮಾಡಲಿ. ಇದರಿಂದ ಧರ್ಮಚಾರಿಗಳನ್ನು ಬಿಟ್ಟು ಕೇವಲ ಪಾಪಿಗಳು ಮಾತ್ರ ವಿನಾಶಹೊಂದುತ್ತಾರೆ.

01035010a ಉತ್ಪನ್ನಃ ಸ ಜರತ್ಕಾರುಸ್ತಪಸ್ಯುಗ್ರೇ ರತೋ ದ್ವಿಜಃ।
01035010c ತಸ್ಯೈಷ ಭಗಿನೀಂ ಕಾಲೇ ಜರತ್ಕಾರುಂ ಪ್ರಯಚ್ಛತು।।

ಜರತ್ಕಾರುವು ಈಗಾಗಲೇ ಹುಟ್ಟಿದ್ದಾನೆ ಮತ್ತು ಆ ದ್ವಿಜನು ಉಗ್ರ ತಪಸ್ಸಿನಲ್ಲಿ ನಿರತನಾಗಿದ್ದಾನೆ. ಸರಿಯಾದ ಸಮಯದಲ್ಲಿ ಅವನಿಗೆ ತನ್ನ ತಂಗಿಯನ್ನು ಕೊಡಲಿ.

01035011a ಯದೇಲಾಪತ್ರೇಣ ವಚಸ್ತದೋಕ್ತಂ ಭುಜಗೇನ ಹ।
01035011c ಪನ್ನಗಾನಾಂ ಹಿತಂ ದೇವಾಸ್ತತ್ತಥಾ ನ ತದನ್ಯಥಾ।।

ದೇವತೆಗಳೇ! ನಾಗ ಏಲಾಪತ್ರನು ಹೇಳಿದುದರಲ್ಲಿಯೇ ಪನ್ನಗಗಳ ಹಿತವಿದೆ. ಬೇರೆ ಯಾವ ರೀತಿಯಲ್ಲಿಯೂ ಇಲ್ಲ.””

01035012 ಸೂತ ಉವಾಚ।
01035012a ಏತತ್ ಶ್ರುತ್ವಾ ಸ ನಾಗೇಂದ್ರಃ ಪಿತಾಮಹವಚಸ್ತದಾ।
01035012c ಸರ್ಪಾನ್ಬಹೂನ್ಜರತ್ಕಾರೌ ನಿತ್ಯಯುಕ್ತಾನ್ಸಮಾದಧತ್।।

ಸೂತನು ಹೇಳಿದನು: “ಪಿತಾಮಹನ ಈ ಮಾತುಗಳನ್ನು ಕೇಳಿದ ನಾಗೇಂದ್ರನು ಜರತ್ಕಾರುವನ್ನು ಹುಡುಕಲು ಎಲ್ಲ ಸರ್ಪಗಳಿಗೂ ಆಜ್ಞೆಯನ್ನಿತ್ತನು.

01035013a ಜರತ್ಕಾರುರ್ಯದಾ ಭಾರ್ಯಾಮಿಚ್ಛೇದ್ವರಯಿತುಂ ಪ್ರಭುಃ।
01035013c ಶೀಘ್ರಮೇತ್ಯ ಮಮಾಖ್ಯೇಯಂ ತನ್ನಃ ಶ್ರೇಯೋ ಭವಿಷ್ಯತಿ।।

“ಯಾವಾಗ ಜರತ್ಕಾರುವು ಪತ್ನಿಗಾಗಿ ಕೇಳುತ್ತಾನೋ ಆಗ ತಕ್ಷಣವೇ ನನ್ನಲ್ಲಿ ಬಂದು ಹೇಳಿ. ನಮ್ಮೆಲ್ಲರ ಶ್ರೇಯಸ್ಸು ಇದರ ಮೇಲೆಯೇ ನಿರ್ಭರವಾಗಿದೆ.””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಆಸ್ತೀಕಪರ್ವಣಿ ಜರತ್ಕಾರನ್ವೇಷಣೇ ಪಂಚತ್ರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಆಸ್ತೀಕಪರ್ವದಲ್ಲಿ ಜರತ್ಕಾರನ್ವೇಷಣ ಎನ್ನುವ ಮೂವತ್ತೈದನೆಯ ಅಧ್ಯಾಯವು.