ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಆಸ್ತೀಕ ಪರ್ವ
ಅಧ್ಯಾಯ 34
ಸಾರ
ಏಲಾಪತ್ರನು ಶಾಪವಿಮೋಚನೆಯ ಉಪಾಯವನ್ನು ತಿಳಿಸಿದುದು (1-18).01034001 ಸೂತ ಉವಾಚ।
01034001a ಶ್ರುತ್ವಾ ತು ವಚನಂ ತೇಷಾಂ ಸರ್ವೇಷಾಮಿತಿ ಚೇತಿ ಚ।
01034001c ವಾಸುಕೇಶ್ಚ ವಚಃ ಶ್ರುತ್ವಾ ಏಲಾಪತ್ರೋಽಬ್ರವೀದಿದಂ।।
ಸೂತನು ಹೇಳಿದನು: “ಎಲ್ಲ ನಾಗಗಳು ಅವರವರ ಮಾತುಗಳನ್ನು ಹೇಳಿದುದನ್ನು ಮತ್ತು ವಾಸುಕಿಯ ಈ ಮಾತುಗಳನ್ನು ಕೇಳಿದ ಏಲಾಪತ್ರನು ಅವರನ್ನುದ್ದೇಶಿಸಿ ಹೇಳಿದನು:
01034002a ನ ಸ ಯಜ್ಞೋ ನ ಭವಿತಾ ನ ಸ ರಾಜಾ ತಥಾವಿಧಃ।
01034002c ಜನಮೇಜಯಃ ಪಾಂಡವೇಯೋ ಯತೋಽಸ್ಮಾಕಂ ಮಹಾಭಯಂ।।
“ವಿಧಿವಿಹಿತವಾದ ಈ ಯಜ್ಞವನ್ನಾಗಲೀ ಅಥವಾ ನಮ್ಮೆಲ್ಲರ ಈ ಮಹಾಭಯಕ್ಕೆ ಕಾರಣವಾಗಬಲ್ಲ ಪಾಂಡವೇಯ ಜನಮೇಜಯನನ್ನಾಗಲೀ ತಡೆಯಲು ಸಾಧ್ಯವಿಲ್ಲ.
01034003a ದೈವೇನೋಪಹತೋ ರಾಜನ್ಯೋ ಭವೇದಿಹ ಪೂರುಷಃ।
01034003c ಸ ದೈವಮೇವಾಶ್ರಯತೇ ನಾನ್ಯತ್ತತ್ರ ಪರಾಯಣಂ।।
ರಾಜನ್! ದೈವ ಪೀಡಿತ ಪುರುಷನು ದೈವವನ್ನು ಮಾತ್ರ ಮೊರೆಹೊಗಬೇಕೇ ವಿನಃ ಬೇರೆ ಯಾವುದೂ ಅವನ ರಕ್ಷಣೆಗೆ ಬರುವುದಿಲ್ಲ.
01034004a ತದಿದಂ ದೈವಮಸ್ಮಾಕಂ ಭಯಂ ಪನ್ನಗಸತ್ತಮಾಃ।
01034004c ದೈವಮೇವಾಶ್ರಯಾಮೋಽತ್ರ ಶೃಣುಧ್ವಂ ಚ ವಚೋ ಮಮ।।
ಪನ್ನಗಸತ್ತಮರೇ! ನಮ್ಮೆಲ್ಲರ ಈ ಭಯವೂ ಕೂಡ ದೈವದತ್ತವಾದದ್ದು. ದೈವದ ಆಶ್ರಯವು ಮಾತ್ರ ನಮಗಿರುವ ದಾರಿ. ನನ್ನ ಈ ಮಾತುಗಳನ್ನು ಕೇಳಿ.
01034005a ಅಹಂ ಶಾಪೇ ಸಮುತ್ಸೃಷ್ಟೇ ಸಮಶ್ರೌಷಂ ವಚಸ್ತದಾ।
01034005c ಮಾತುರುತ್ಸಂಗಮಾರೂಧೋ ಭಯಾತ್ಪನ್ನಗಸತ್ತಮಾಃ।।
01034006a ದೇವಾನಾಂ ಪನ್ನಗಶ್ರೇಷ್ಠಾಸ್ತೀಕ್ಷ್ಣಾಸ್ತೀಕ್ಷ್ಣಾ ಇತಿ ಪ್ರಭೋ।
01034006c ಪಿತಾಮಹಮುಪಾಗಮ್ಯ ದುಃಖಾರ್ತಾನಾಂ ಮಹಾದ್ಯುತೇ।।
ಪನ್ನಗಸತ್ತಮರೇ! ನಮ್ಮ ಕುರಿತು ಶಾಪವನ್ನು ಉಚ್ಛರಿಸಿದಾಗ ನಾನು ಭಯದಿಂದ ತಾಯಿಯ ತೊಡೆಯಮೇಲೇರಿ ಕುಳಿತುಕೊಂಡೆ. ಆಗ ನಾನು ದೇವಪ್ರಭುವು “ಇದು ಬಹಳ ತೀಕ್ಷ್ಣವಾದದ್ದು! ತೀಕ್ಷ್ಣವಾದದ್ದು!” ಎಂದು ಹೇಳುವುದನ್ನು ಕೇಳಿದೆ. ಆಗ ಆ ಮಹಾದ್ಯುತಿಗಳು ದುಃಖಾರ್ತರಾಗಿ ಪಿತಾಮಹನ ಬಳಿ ಹೋಗಿ ಹೇಳಿದರು:
01034007 ದೇವಾ ಊಚುಃ।
01034007a ಕಾ ಹಿ ಲಬ್ಧ್ವಾ ಪ್ರಿಯಾನ್ಪುತ್ರಾನ್ ಶಪೇದೇವಂ ಪಿತಾಮಹ।
01034007c ಋತೇ ಕದ್ರೂಂ ತೀಕ್ಷ್ಣರೂಪಾಂ ದೇವದೇವ ತವಾಗ್ರತಃ।।
ದೇವತೆಗಳು ಹೇಳಿದರು: “ಪಿತಾಮಹ! ದೇವದೇವ! ಕದ್ರುವನ್ನು ಬಿಟ್ಟು ಇನ್ನು ಯಾವ ತಾಯಿಯು ಪ್ರಿಯ ಪುತ್ರರನ್ನು ಹಡೆದು ಅವರನ್ನೇ ಈ ರೀತಿ ತೀಕ್ಷ್ಣವಾಗಿ ನಿನ್ನ ಮುಂದೆಯೇ ಶಪಿಸಬಹುದು?
01034008a ತಥೇತಿ ಚ ವಚಸ್ತಸ್ಯಾಸ್ತ್ವಯಾಪ್ಯುಕ್ತಂ ಪಿತಾಮಹ।
01034008c ಏತದಿಚ್ಛಾಮ ವಿಜ್ಞಾತುಂ ಕಾರಣಂ ಯನ್ನ ವಾರಿತಾ।।
ಪಿತಾಮಹ! ನೀನೂ ಕೂಡ ಹಾಗೆಯೇ ಆಗಲಿ ಎಂದು ಹೇಳಿದ್ದುದನ್ನು ಕೇಳಿದೆವು. ನೀನು ಅದನ್ನು ತಡೆಹಿಡಿಯದೇ ಇರಲು ಕಾರಣವನ್ನು ತಿಳಿಯ ಬಯಸುತ್ತೇವೆ.”
01034009 ಬ್ರಹ್ಮೋವಾಚ।
01034009a ಬಹವಃ ಪನ್ನಗಾಸ್ತೀಕ್ಷ್ಣಾ ಭೀಮವೀರ್ಯಾ ವಿಷೋಲ್ಬಣಾಃ।
01034009c ಪ್ರಜಾನಾಂ ಹಿತಕಾಮೋಽಹಂ ನ ನಿವಾರಿತವಾಂಸ್ತದಾ।।
ಬ್ರಹ್ಮನು ಹೇಳಿದನು: “ತೀಕ್ಷ್ಣರೂ ಭೀಮವೀರ್ಯರೂ ಆದ ವಿಷಭರಿತ ನಾಗಗಳು ಬಹಳವಾಗಿದ್ದಾರೆ. ಪ್ರಜೆಗಳೆಲ್ಲರ ಹಿತಾಸಕ್ತಿಯಿಂದ ನಾನು ಅವಳನ್ನು ತಡೆಯಲಿಲ್ಲ.
01034010a ಯೇ ದಂದಶೂಕಾಃ ಕ್ಷುದ್ರಾಶ್ಚ ಪಾಪಚಾರಾ ವಿಷೋಲ್ಬಣಾಃ।
01034010c ತೇಷಾಂ ವಿನಾಶೋ ಭವಿತಾ ನ ತು ಯೇ ಧರ್ಮಚಾರಿಣಃ।।
ಯಾರು ಸದಾ ಕಚ್ಚುವ ಪ್ರವೃತ್ತಿಯನ್ನು ಹೊಂದಿದ್ದಾರೋ, ಸಣ್ಣ ಸಣ್ಣ ವಿಷಯಕ್ಕೂ ಕಚ್ಚುತ್ತಾರೋ, ಹೆಚ್ಚಿನ ವಿಷವನ್ನು ಹೊಂದಿರುವರೋ ಅಂಥಹ ಪಾಪಚಾರಿಗಳು ಮಾತ್ರ ವಿನಾಶ ಹೊಂದುತ್ತಾರೆ. ಧರ್ಮಚಾರಿಗಳಲ್ಲ.
01034011a ಯನ್ನಿಮಿತ್ತಂ ಚ ಭವಿತಾ ಮೋಕ್ಷಸ್ತೇಷಾಂ ಮಹಾಭಯಾತ್।
01034011c ಪನ್ನಗಾನಾಂ ನಿಬೋಧಧ್ವಂ ತಸ್ಮಿನ್ಕಾಲೇ ತಥಾಗತೇ।।
ಆ ಕಾಲವು ಬಂದಾಗ ನಾಗಗಳು ತಮ್ಮ ಈ ಮಹಾಭಯದಿಂದ ಹೇಗೆ ಮೋಕ್ಷವನ್ನು ಹೊಂದುತ್ತಾರೆ ಎನ್ನುವುದನ್ನು ಕೇಳಿ.
01034012a ಯಾಯಾವರಕುಲೇ ಧೀಮಾನ್ಭವಿಷ್ಯತಿ ಮಹಾನೃಷಿಃ।
01034012c ಜರತ್ಕಾರುರಿತಿ ಖ್ಯಾತಸ್ತೇಜಸ್ವೀ ನಿಯತೇಂದ್ರಿಯಃ।।
ಯಾಯಾವರ ಕುಲದಲ್ಲಿ ಜರತ್ಕಾರುವೆಂದು ಖ್ಯಾತಿಗೊಳ್ಳುವ ತೇಜಸ್ವಿಯೂ ನಿಯತೇಂದ್ರಿಯನೂ ಧೀಮಂತನೂ ಆದ ಮಹಾನ್ ಋಷಿಯೊಬ್ಬನು ಹುಟ್ಟುತ್ತಾನೆ
01034013a ತಸ್ಯ ಪುತ್ರೋ ಜರತ್ಕಾರೋರುತ್ಪತ್ಸ್ಯತಿ ಮಹಾತಪಾಃ।
01034013c ಆಸ್ತೀಕೋ ನಾಮ ಯಜ್ಞಂ ಸ ಪ್ರತಿಷೇತ್ಸ್ಯತಿ ತಂ ತದಾ।
01034013e ತತ್ರ ಮೋಕ್ಷ್ಯಂತಿ ಭುಜಗಾ ಯೇ ಭವಿಷ್ಯಂತಿ ಧಾರ್ಮಿಕಾಃ।।
ಜರತ್ಕಾರುವಿನಲ್ಲಿ ಜನಿಸುವ ಅವನ ಪುತ್ರ ಆಸ್ತೀಕನೆಂಬ ಹೆಸರಿನ ಮಹಾತಪಸ್ವಿಯು ಈ ಯಜ್ಞವನ್ನು ನಿಲ್ಲಿಸಿ ಧಾರ್ಮಿಕ ನಾಗಗಳ ಬಿಡುಗಡೆಮಾಡುತ್ತಾನೆ.”
01034014 ದೇವಾ ಊಚುಃ।
01034014a ಸ ಮುನಿಪ್ರವರೋ ದೇವ ಜರತ್ಕಾರುರ್ಮಹಾತಪಾಃ।
01034014c ಕಸ್ಯಾಂ ಪುತ್ರಂ ಮಹಾತ್ಮಾನಂ ಜನಯಿಷ್ಯತಿ ವೀರ್ಯವಾನ್।।
ದೇವತೆಗಳು ಹೇಳಿದರು: “ದೇವ! ಆ ಮುನಿಪ್ರವರ ಮಹಾತಪಸ್ವಿ ಜರತ್ಕಾರುವಿನ ಮಹಾತ್ಮ ವೀರ್ಯವಂತ ಪುತ್ರನು ಯಾರಲ್ಲಿ ಜನಿಸುತ್ತಾನೆ?”
01034015 ಬ್ರಹ್ಮೋವಾಚ।
01034015a ಸನಾಮಾಯಾಂ ಸನಾಮಾ ಸ ಕನ್ಯಾಯಾಂ ದ್ವಿಜಸತ್ತಮಃ।
01034015c ಅಪತ್ಯಂ ವೀರ್ಯವಾನ್ದೇವಾ ವೀರ್ಯವಜ್ಜನಯಿಷ್ಯತಿ।।
ಬ್ರಹ್ಮನು ಹೇಳಿದನು: “ದೇವತೆಗಳೇ! ಆ ವೀರ್ಯವಂತ ದ್ವಿಜಸತ್ತಮನು ತನ್ನ ಹೆಸರನ್ನೇ ಹೊಂದಿರುವ ಪತ್ನಿಯಲ್ಲಿ ತನ್ನ ಹಾಗೆಯೇ ವೀರ್ಯವಂತ ಮಗನನ್ನು ಪಡೆಯುತ್ತಾನೆ.””
01034016 ಏಲಾಪತ್ರ ಉವಾಚ।
01034016a ಏವಮಸ್ತ್ವಿತಿ ತಂ ದೇವಾಃ ಪಿತಾಮಹಮಥಾಬ್ರುವನ್।
01034016c ಉಕ್ತ್ವಾ ಚೈವಂ ಗತಾ ದೇವಾಃ ಸ ಚ ದೇವಃ ಪಿತಾಮಹಃ।।
ಏಲಾಪತ್ರನು ಹೇಳಿದನು: “ದೇವತೆಗಳು ಪಿತಾಮಹನಿಗೆ “ಹಾಗೆಯೇ ಆಗಲಿ” ಎಂದು ಹೇಳಲು ದೇವತೆಗಳಿಗೆ ಇದನ್ನೆಲ್ಲ ಹೇಳಿದ ದೇವ ಪಿತಾಮಹನು ಹೊರಟುಹೋದನು.
01034017a ಸೋಽಹಮೇವಂ ಪ್ರಪಶ್ಯಾಮಿ ವಾಸುಕೇ ಭಗಿನೀಂ ತವ।
01034017c ಜರತ್ಕಾರುರಿತಿ ಖ್ಯಾತಾಂ ತಾಂ ತಸ್ಮೈ ಪ್ರತಿಪಾದಯ।।
01034018a ಭೈಕ್ಷವದ್ಭಿಕ್ಷಮಾಣಾಯ ನಾಗಾನಾಂ ಭಯಶಾಂತಯೇ।
01034018c ಋಷಯೇ ಸುವ್ರತಾಯ ತ್ವಮೇಷ ಮೋಕ್ಷಃ ಶ್ರುತೋ ಮಯಾ।।
ವಾಸುಕಿ! ಜರತ್ಕಾರುವೆಂದು ಖ್ಯಾತಳಾಗಿರುವ ನಿನ್ನ ತಂಗಿಯನ್ನು ನೋಡುತ್ತಿದ್ದೇನೆ. ನಾಗಗಳ ಭಯವನ್ನು ನಿವಾರಿಸಲೋಸುಗ ಅವಳನ್ನು ಪತ್ನಿಗಾಗಿ ಭಿಕ್ಷೆಬೇಡುತ್ತಾ ತಿರುಗುತ್ತಿರುವ ಆ ಸುವ್ರತ ಮುನಿಗೆ ಕೊಡು. ಅದೇ ನಮಗೆ ಮೋಕ್ಷದಾಯಕವೆಂದು ಕೇಳಿದ್ದೇನೆ.””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಆಸ್ತೀಕಪರ್ವಣಿ ಏಲಾಪತ್ರವಾಕ್ಯೋ ನಾಮ ಚತುಸ್ತ್ರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದ ಆದಿಪರ್ವದಲ್ಲಿ ಆಸ್ತೀಕಪರ್ವದಲ್ಲಿ ಏಲಾಪತ್ರವಾಕ್ಯ ಎನ್ನುವ ಮೂವತ್ನಾಲ್ಕನೇ ಅಧ್ಯಾಯವು.