ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಆಸ್ತೀಕ ಪರ್ವ
ಅಧ್ಯಾಯ 33
ಸಾರ
ಕದ್ರುವಿನ ಶಾಪದಿಂದ ತಪ್ಪಿಸಿಕೊಳ್ಳಲು ವಾಸುಕಿಯು ಇತರ ನಾಗಗಳೊಂದಿಗೆ ಸಮಾಲೋಚನೆ ಮಾಡುವುದು (1-5). ನಾಗಗಳ ಸಲಹೆಗಳು (6-31).01033001 ಸೂತ ಉವಾಚ।
01033001a ಮಾತುಃ ಸಕಾಶಾತ್ತಂ ಶಾಪಂ ಶ್ರುತ್ವಾ ಪನ್ನಗಸತ್ತಮಃ।
01033001c ವಾಸುಕಿಶ್ಚಿಂತಯಾಮಾಸ ಶಾಪೋಽಯಂ ನ ಭವೇತ್ಕಥಂ।।
ಸೂತನು ಹೇಳಿದನು: “ತಾಯಿಯ ಶಾಪವನ್ನು ಕೇಳಿದ ತಕ್ಷಣವೇ ಪನ್ನಗ ಸತ್ತಮ ವಾಸುಕಿಯು ಈ ಶಾಪವು ಘಟಿಸದ ಹಾಗೆ ಏನು ಮಾಡಬೇಕು ಎಂದು ಚಿಂತಿಸತೊಡಗಿದನು.
01033002a ತತಃ ಸ ಮಂತ್ರಯಾಮಾಸ ಭ್ರಾತೃಭಿಃ ಸಹ ಸರ್ವಶಃ।
01033002c ಐರಾವತಪ್ರಭೃತಿಭಿರ್ಯೇ ಸ್ಮ ಧರ್ಮಪರಾಯಣಾಃ।।
ಆಗ ಅವನು ಧರ್ಮಪರಾಯಣ ಐರಾವತನೇ ಮೊದಲಾದ ತನ್ನ ಸರ್ವ ಸಹೋದರರೊಡನೆ ಮಂತ್ರಾಲೋಚನೆ ಮಾಡಿದನು.
01033003 ವಾಸುಕಿರುವಾಚ।
01033003a ಅಯಂ ಶಾಪೋ ಯಥೋದ್ದಿಷ್ಟೋ ವಿದಿತಂ ವಸ್ತಥಾನಘಾಃ।
01033003c ತಸ್ಯ ಶಾಪಸ್ಯ ಮೋಕ್ಷಾರ್ಥಂ ಮಂತ್ರಯಿತ್ವಾ ಯತಾಮಹೇ।।
ವಾಸುಕಿಯು ಹೇಳಿದನು: “ಅನಘರೇ! ನಮ್ಮ ಮೇಲಿರುವ ಶಾಪದ ಕುರಿತು ನಿಮಗೆಲ್ಲ ತಿಳಿದೇ ಇದೆ. ಈ ಶಾಪದಿಂದ ಮೋಕ್ಷವನ್ನು ಹೊಂದಲು ಪ್ರಯತ್ನವನ್ನೇನಾದರೂ ಮಾಡಬೇಕು.
01033004a ಸರ್ವೇಷಾಮೇವ ಶಾಪಾನಾಂ ಪ್ರತಿಘಾತೋ ಹಿ ವಿದ್ಯತೇ।
01033004c ನ ತು ಮಾತ್ರಾಭಿಶಪ್ತಾನಾಂ ಮೋಕ್ಷೋ ವಿದ್ಯೇತ ಪನ್ನಗಾಃ।।
ಎಲ್ಲ ರೀತಿಯ ಶಾಪಗಳಿಗೆ ವಿಮೋಚನೆ ಎನ್ನುವುದು ಇದೆ ಎಂದು ತಿಳಿದಿದ್ದೇವೆ. ಆದರೆ ನಾಗಗಳೇ! ತಾಯಿಯ ಅಭಿಶಾಪಕ್ಕೆ ಮೋಕ್ಷವೇ ಇಲ್ಲವೆಂದು ಹೇಳುತ್ತಾರೆ.
01033005a ಅವ್ಯಯಸ್ಯಾಪ್ರಮೇಯಸ್ಯ ಸತ್ಯಸ್ಯ ಚ ತಥಾಗ್ರತಃ।
01033005c ಶಪ್ತಾ ಇತ್ಯೇವ ಮೇ ಶ್ರುತ್ವಾ ಜಾಯತೇ ಹೃದಿ ವೇಪಥುಃ।।
ಅವ್ಯಯ, ಅಪ್ರಮೇಯ, ಮತ್ತು ಸತ್ಯನ ಮುಂದೆಯೇ ಈ ಶಾಪವನ್ನು ಉಚ್ಛರಿಸಲಾಯಿತು ಎಂದು ತಿಳಿದು ನನ್ನ ಹೃದಯವು ನಡುಗುತ್ತಿದೆ.
01033006a ನೂನಂ ಸರ್ವವಿನಾಶೋಽಯಮಸ್ಮಾಕಂ ಸಮುದಾಹೃತಃ।
01033006c ನ ಹ್ಯೇನಾಂ ಸೋಽವ್ಯಯೋ ದೇವಃ ಶಪಂತೀಂ ಪ್ರತ್ಯಷೇಧಯತ್।।
ನಮ್ಮೆಲ್ಲರ ವಿನಾಶವು ಹತ್ತಿರವಾಗುತ್ತಿರಬೇಕು. ಇಲ್ಲವಾದರೆ ಆ ಅವ್ಯಯ ದೇವನು ಈ ರೀತಿ ಶಪಿಸುವುವವಳನ್ನು ತಡೆಯುತ್ತಿದ್ದ.
01033007a ತಸ್ಮಾತ್ಸಮ್ಮಂತ್ರಯಾಮೋಽತ್ರ ಭುಜಗಾನಾಮನಾಮಯಂ।
01033007c ಯಥಾ ಭವೇತ ಸರ್ವೇಷಾಂ ಮಾ ನಃ ಕಾಲೋಽತ್ಯಗಾದಯಂ।।
01033008a ಅಪಿ ಮಂತ್ರಯಮಾಣಾ ಹಿ ಹೇತುಂ ಪಶ್ಯಾಮ ಮೋಕ್ಷಣೇ।
ಆದ್ದರಿಂದ ಹೆಚ್ಚು ಕಾಲ ಹರಣ ಮಾಡದೇ ಸರ್ವ ನಾಗಗಳ ಒಳಿತಿನ ಕುರಿತು ಮಂತ್ರಾಲೋಚನೆ ಮಾಡೋಣ.
01033008c ಯಥಾ ನಷ್ಟಂ ಪುರಾ ದೇವಾ ಗೂಧಮಗ್ನಿಂ ಗುಹಾಗತಂ।।
01033009a ಯಥಾ ಸ ಯಜ್ಞೋ ನ ಭವೇದ್ಯಥಾ ವಾಪಿ ಪರಾಭವೇತ್।
01033009c ಜನಮೇಜಯಸ್ಯ ಸರ್ಪಾಣಾಂ ವಿನಾಶಕರಣಾಯ ಹಿ।।
ಸರ್ಪಗಳ ವಿನಾಶಹೇತುವಾಗುವ ಜನಮೇಜಯನ ಆ ಯಜ್ಞವೇ ನಡೆಯದಂತೆ ಏನನ್ನಾದರೂ ಮಾಡಬೇಕು.””
01033010 ಸೂತ ಉವಾಚ।
01033010a ತಥೇತ್ಯುಕ್ತ್ವಾ ತು ತೇ ಸರ್ವೇ ಕಾದ್ರವೇಯಾಃ ಸಮಾಗತಾಃ।
01033010c ಸಮಯಂ ಚಕ್ರಿರೇ ತತ್ರ ಮಂತ್ರಬುದ್ಧಿವಿಶಾರದಾಃ।।
ಸೂತನು ಹೇಳಿದನು: “ಈ ಮಾತುಗಳನ್ನು ಕೇಳಿ ಅಲ್ಲಿ ನೆರೆದಿದ್ದ ಕದ್ರುವಿನ ಮಂತ್ರಬುದ್ಧಿವಿಶಾರದ ಮಕ್ಕಳು ತಮ್ಮ ತಮ್ಮ ಸೂಚನೆಗಳನ್ನಿತ್ತರು.
01033011a ಏಕೇ ತತ್ರಾಬ್ರುವನ್ನಾಗಾ ವಯಂ ಭೂತ್ವಾ ದ್ವಿಜರ್ಷಭಾಃ।
01033011c ಜನಮೇಜಯಂ ತಂ ಭಿಕ್ಷಾಮೋ ಯಜ್ಞಸ್ತೇ ನ ಭವೇದಿತಿ।।
ಅವರಲ್ಲಿ ಒಬ್ಬ ನಾಗನು ಹೇಳಿದನು: “ನಾವು ಬ್ರಾಹ್ಮಣ ವೇಷ ಧರಿಸಿ ಜನಮೇಜಯನಲ್ಲಿ ಹೋಗಿ ಈ ಯಜ್ಞವನ್ನು ಕೈಗೊಳ್ಳಬೇಡ ಎಂದು ಬೇಡಿಕೊಳ್ಳೋಣ.”
01033012a ಅಪರೇ ತ್ವಬ್ರುವನ್ನಾಗಾಸ್ತತ್ರ ಪಂಡಿತಮಾನಿನಃ।
01033012c ಮಂತ್ರಿಣೋಽಸ್ಯ ವಯಂ ಸರ್ವೇ ಭವಿಷ್ಯಾಮಃ ಸುಸಮ್ಮತಾಃ।।
ಇತರ ನಾಗಗಳು, ತಮ್ಮನ್ನು ತಾವೇ ಪಂಡಿತರೆಂದು ಪರಿಗಣಿಸಿ ಹೇಳಿದವು: “ನಾವೆಲ್ಲರೂ ಅವನ ಸುಸಮ್ಮತಿಗಳನ್ನೀಯುವ ಮಂತ್ರಿಗಳಾಗೋಣ.
01033013a ಸ ನಃ ಪ್ರಕ್ಷ್ಯತಿ ಸರ್ವೇಷು ಕಾರ್ಯೇಷ್ವರ್ಥವಿನಿಶ್ಚಯಂ।
01033013c ತತ್ರ ಬುದ್ಧಿಂ ಪ್ರವಕ್ಷ್ಯಾಮೋ ಯಥಾ ಯಜ್ಞೋ ನಿವರ್ತತೇ।।
ಆಗ ಅವನು ಸರ್ವ ಕಾರ್ಯ ವಿಷಯಗಳಲ್ಲಿ ನಮ್ಮ ಸಲಹೆಗಳನ್ನು ಕೇಳುತ್ತಾನೆ. ಆಗ ಬುದ್ಧಿಯನ್ನು ಬಳಸಿ ಈ ಯಜ್ಞವು ನಡೆಯದಂತೆ ನೋಡಿಕೊಳ್ಳಬಹುದು.
01033014a ಸ ನೋ ಬಹುಮತಾನ್ರಾಜಾ ಬುದ್ಧ್ವಾ ಬುದ್ಧಿಮತಾಂ ವರಃ।
01033014c ಯಜ್ಞಾರ್ಥಂ ಪ್ರಕ್ಷ್ಯತಿ ವ್ಯಕ್ತಂ ನೇತಿ ವಕ್ಷ್ಯಾಮಹೇ ವಯಂ।।
ಬುದ್ಧಿವಂತರಲ್ಲಿ ಶ್ರೇಷ್ಠ ಆ ರಾಜನು ಯಜ್ಞದ ವಿಷಯದಲ್ಲಿ ನಮ್ಮ ಅಭಿಪ್ರಾಯಗಳನ್ನು ಕೇಳಿಯೇ ಕೇಳುತ್ತಾನೆ. ಆಗ ಅದನ್ನು ಮಾಡಬೇಡ ಎಂದು ಹೇಳೋಣ.
01033015a ದರ್ಶಯಂತೋ ಬಹೂನ್ದೋಷಾನ್ಪ್ರೇತ್ಯ ಚೇಹ ಚ ದಾರುಣಾನ್।
01033015c ಹೇತುಭಿಃ ಕಾರಣೈಶ್ಚೈವ ಯಥಾ ಯಜ್ಞೋ ಭವೇನ್ನ ಸಃ।।
ಇಹದಲ್ಲಿಯೂ ಪರದಲ್ಲಿಯೂ ಅದರಿಂದುಂಟಾಗುವ ದಾರುಣ ದೋಷಗಳನ್ನು ತೋರಿಸಿಕೊಡೋಣ. ಇದರ ಕಾರಣ-ಪರಿಣಾಮಗಳೆರಡನ್ನೂ ತಿಳಿಸಿ ಹೇಳಿ ಯಜ್ಞವು ನಡೆಯದಂತೆ ಮಾಡೋಣ.
01033016a ಅಥವಾ ಯ ಉಪಾಧ್ಯಾಯಃ ಕ್ರತೌ ತಸ್ಮಿನ್ಭವಿಷ್ಯತಿ।
01033016c ಸರ್ಪಸತ್ರವಿಧಾನಜ್ಞೋ ರಾಜಕಾರ್ಯಹಿತೇ ರತಃ।।
01033017a ತಂ ಗತ್ವಾ ದಶತಾಂ ಕಶ್ಚಿದ್ಭುಜಗಃ ಸ ಮರಿಷ್ಯತಿ।
01033017c ತಸ್ಮಿನ್ ಹತೇ ಯಜ್ಞಕರೇ ಕ್ರತುಃ ಸ ನ ಭವಿಷ್ಯತಿ।।
ಅಥವಾ ನಮ್ಮಲ್ಲೊಬ್ಬ ನಾಗನು ರಾಜಕಾರ್ಯಹಿತರತ ಸರ್ಪಸತ್ರದ ವಿಧಾನವನ್ನು ತಿಳಿದಿರುವ, ಕ್ರತುವಿನ ಉಪಾಧ್ಯಾಯನೊಬ್ಬನನ್ನು ಕಚ್ಚಿ ಸಾಯಿಸಲಿ. ಯಜ್ಞಕರ್ತೃವಾದ ಅವನು ತೀರಿಕೊಂಡಾಗ ಯಜ್ಞವು ಮುಂದುವರೆಯಲಾರದು.
01033018a ಯೇ ಚಾನ್ಯೇ ಸರ್ಪಸತ್ರಜ್ಞಾ ಭವಿಷ್ಯಂತ್ಯಸ್ಯ ಋತ್ವಿಜಃ।
01033018c ತಾಂಶ್ಚ ಸರ್ವಾನ್ದಶಿಷ್ಯಾಮಃ ಕೃತಮೇವಂ ಭವಿಷ್ಯತಿ।।
ಇಲ್ಲವಾದರೆ ಸರ್ಪಸತ್ರವನ್ನು ತಿಳಿದಿರುವ ಮತ್ತು ಮುಂದೆ ಅದರ ಋತ್ವಿಜರಾಗಬಲ್ಲ ಎಲ್ಲರನ್ನೂ ಕಚ್ಚಿ ಸಾಯಿಸೋಣ. ಈ ರೀತಿ ನಮ್ಮ ಉದ್ದೇಶವನ್ನು ಪೂರೈಸಿಕೊಳ್ಳಬಹುದು.”
01033019a ತತ್ರಾಪರೇಽಮಂತ್ರಯಂತ ಧರ್ಮಾತ್ಮಾನೋ ಭುಜಂಗಮಾಃ।
01033019c ಅಬುದ್ಧಿರೇಷಾ ಯುಷ್ಮಾಕಂ ಬ್ರಹ್ಮಹತ್ಯಾ ನ ಶೋಭನಾ।।
ಅಲ್ಲಿಯೇ ಮಂತ್ರಾಲೋಚನೆಯಲ್ಲಿ ಕುಳಿತಿದ್ದ ಒಬ್ಬ ಧರ್ಮಾತ್ಮ ನಾಗನು ಹೇಳಿದನು: “ನಿನ್ನ ಈ ಮಾತುಗಳು ಅಬುದ್ಧಿಯವು. ಬ್ರಹ್ಮ ಹತ್ಯೆ ಒಳ್ಳೆಯದಲ್ಲ.
01033020a ಸಮ್ಯಕ್ಸದ್ಧರ್ಮಮೂಲಾ ಹಿ ವ್ಯಸನೇ ಶಾಂತಿರುತ್ತಮಾ।
01033020c ಅಧರ್ಮೋತ್ತರತಾ ನಾಮ ಕೃತ್ಸ್ನಂ ವ್ಯಾಪಾದಯೇಜ್ಜಗತ್।।
ಸಮ್ಯಕ್ ಸದ್ಧರ್ಮವೇ ವ್ಯಸನದಲ್ಲಿರುವವರಿಗೆ ಉತ್ತಮ ಶಾಂತಿಯ ಮೂಲ. ಅಧರ್ಮವು ಇಡೀ ಜಗತ್ತನ್ನೇ ನಾಶಪಡಿಸುತ್ತದೆ.”
01033021a ಅಪರೇ ತ್ವಬ್ರುವನ್ನಾಗಾಃ ಸಮಿದ್ಧಂ ಜಾತವೇದಸಂ।
01033021c ವರ್ಷೈರ್ನಿರ್ವಾಪಯಿಷ್ಯಾಮೋ ಮೇಘಾ ಭೂತ್ವಾ ಸವಿದ್ಯುತಃ।।
ಇತರ ನಾಗಗಳು ಹೇಳಿದವು: “ನಾವೆಲ್ಲರೂ ಮಿಂಚಿನಿಂದ ಕೂಡಿದ ಕಪ್ಪು ಮೋಡಗಳಾಗಿ ಜೋರಾಗಿ ಮಳೆಸುರಿಸಿ ಯಜ್ಞೇಶ್ವರನನ್ನು ಆರಿಸಿಬಿಡೋಣ.”
01033022a ಸ್ರುಃ ಭಾಂಡಂ ನಿಶಿ ಗತ್ವಾ ವಾ ಅಪರೇ ಭುಜಗೋತ್ತಮಾಃ।
01033022c ಪ್ರಮತ್ತಾನಾಂ ಹರಂತ್ವಾಶು ವಿಘ್ನ ಏವಂ ಭವಿಷ್ಯತಿ।।
ಇನ್ನೊಬ್ಬ ಭುಜಗೋತ್ತಮನು ಹೇಳಿದನು: “ರಾತ್ರಿಯಲ್ಲಿ ಹೋಗಿ ಯಜ್ಞದ ಆಹುತಿಗಳನ್ನು ತುಂಬಿಟ್ಟಿದ್ದ ಪಾತ್ರೆಗಳನ್ನು ಕದ್ದು ತರೋಣ. ಈ ರೀತಿ ಅದಕ್ಕೆ ವಿಘ್ನವುಂಟಾಗುತ್ತದೆ.
01033023a ಯಜ್ಞೇ ವಾ ಭುಜಗಾಸ್ತಸ್ಮಿನ್ ಶತಶೋಽಥ ಸಹಸ್ರಶಃ।
01033023c ಜನಂ ದಶಂತು ವೈ ಸರ್ವಮೇವಂ ತ್ರಾಸೋ ಭವಿಷ್ಯತಿ।।
ಅಥವಾ, ನೂರಾರು ಸಹಸ್ರಾರು ನಾಗಗಳು ಅಲ್ಲಿಗೆ ಹೋಗಿ ನೆರೆದಿದ್ದ ಜನರೆಲ್ಲರನ್ನೂ ಕಚ್ಚಿ ಭಯೋತ್ಪಾದನೆ ಮಾಡೋಣ.
01033024a ಅಥವಾ ಸಂಸ್ಕೃತಂ ಭೋಜ್ಯಂ ದೂಷಯಂತು ಭುಜಂಗಮಾಃ।
01033024c ಸ್ವೇನ ಮೂತ್ರಪುರೀಷೇಣ ಸರ್ವಭೋಜ್ಯವಿನಾಶಿನಾ।।
ಅಥವಾ ಮಡಿಯಾಗಿದ್ದ ಆಹಾರವನ್ನು ನಾಗಗಳ ಮೂತ್ರ ಮಲಗಳಿಂದ ಮೈಲಿಗೆ ಮಾಡಿ ಆಹಾರವೆಲ್ಲವನ್ನೂ ನಾಶಮಾಡೋಣ.”
01033025a ಅಪರೇ ತ್ವಬ್ರುವಂಸ್ತತ್ರ ಋತ್ವಿಜೋಽಸ್ಯ ಭವಾಮಹೇ।
01033025c ಯಜ್ಞವಿಘ್ನಂ ಕರಿಷ್ಯಾಮೋ ದೀಯತಾಂ ದಕ್ಷಿಣಾ ಇತಿ।
01033025e ವಶ್ಯತಾಂ ಚ ಗತೋಽಸೌ ನಃ ಕರಿಷ್ಯತಿ ಯಥೇಪ್ಷಿತಂ।।
ಇನ್ನು ಕೆಲವರು ಹೇಳಿದರು: “ನಾವೆಲ್ಲರೂ ಋತ್ವಿಜರಾಗಿ ಅವನ ಬಳಿ ಹೋಗೋಣ. ದಕ್ಷಿಣೆಯನ್ನು ಕೊಡು ಎಂದು ಯಜ್ಞದಲ್ಲಿ ವಿಘ್ನವನ್ನು ಉಂಟುಮಾಡೋಣ. ಅವನು ನಮ್ಮ ವಶದಲ್ಲಿರುವುದರಿಂದ ನಾವು ಕೇಳಿದುದೆಲ್ಲವನ್ನೂ ಅವನು ಮಾಡುವನು.”
01033026a ಅಪರೇ ತ್ವಬ್ರುವಂಸ್ತತ್ರ ಜಲೇ ಪ್ರಕ್ರೀಡಿತಂ ನೃಪಂ।
01033026c ಗೃಹಮಾನೀಯ ಬಧ್ನೀಮಃ ಕ್ರತುರೇವಂ ಭವೇನ್ನ ಸಃ।।
ಅಲ್ಲಿದ್ಡವರಲ್ಲಿ ಇನ್ನೊಬ್ಬನು ಹೇಳಿದನು: “ಜಲಕ್ರೀಡೆಯಲ್ಲಿ ತೊಡಗಿರುವಾಗ ರಾಜನನ್ನು ನಮ್ಮ ಮನೆಗೆ ಕರೆದುಕೊಂಡು ಹೋಗಿ ಬಂಧನದಲ್ಲಿ ಇಡೋಣ. ಹೀಗೆ ಯಜ್ಞವೇ ನಡೆಯುವುದಿಲ್ಲ.”
01033027a ಅಪರೇ ತ್ವಬ್ರುವಂಸ್ತತ್ರ ನಾಗಾಃ ಸುಕೃತಕಾರಿಣಃ।
01033027c ದಶಾಮೈನಂ ಪ್ರಗೃಹ್ಯಾಶು ಕೃತಮೇವಂ ಭವಿಷ್ಯತಿ।
01033027e ಚಿನ್ನಂ ಮೂಲಮನರ್ಥಾನಾಂ ಮೃತೇ ತಸ್ಮಿನ್ಭವಿಷ್ಯತಿ।।
ಅಲ್ಲಿ ಕೆಲವು ಸುಕೃತಕಾರಿ ನಾಗಗಳಿದ್ದರು. ಅವರು ಹೇಳಿದರು: “ತಕ್ಷಣವೇ ಹೋಗಿ ಅವನನ್ನು ಹಿಡಿದು ಕಚ್ಚಿಬಿಡುವುದರಿಂದ ಎಲ್ಲವೂ ಮುಕ್ತಾಯವಾಗುತ್ತದೆ. ಒಮ್ಮೆ ಅವನು ಸತ್ತನೆಂದಾದರೆ ನಮ್ಮೆಲ್ಲರ ಕಷ್ಟಗಳ ಮೂಲವೇ ಕಡಿದು ಹೋದಂತೆ.
01033028a ಏಷಾ ವೈ ನೈಷ್ಟಿಕೀ ಬುದ್ಧಿಃ ಸರ್ವೇಷಾಮೇವ ಸಮ್ಮತಾ।
01033028c ಯಥಾ ವಾ ಮನ್ಯಸೇ ರಾಜಂಸ್ತತ್ ಕ್ಷಿಪ್ರಂ ಸಂವಿಧೀಯತಾಂ।।
ಇದೇ ನಮ್ಮ ಅಂತಿಮ ಸೂಚನೆ ಮತ್ತು ಇದಕ್ಕೆ ನಮ್ಮೆಲ್ಲರ ಸಮ್ಮತಿಯಿದೆ. ರಾಜನ್! ನಿನ್ನ ಒಪ್ಪಿಗೆಯಿದ್ದರೆ ಕೂಡಲೇ ಇದನ್ನು ಕಾರ್ಯಗತಗೊಳಿಸೋಣ.”
01033029a ಇತ್ಯುಕ್ತ್ವಾ ಸಮುದೈಕ್ಷಂತ ವಾಸುಕಿಂ ಪನ್ನಗೇಶ್ವರಂ।
01033029c ವಾಸುಕಿಶ್ಚಾಪಿ ಸಂಚಿಂತ್ಯ ತಾನುವಾಚ ಭುಜಂಗಮಾನ್।।
ಹೀಗೆ ಹೇಳಿ ಅವರೆಲ್ಲರೂ ಪನ್ನಗೇಶ್ವರ ವಾಸುಕಿಯತ್ತ ನೋಡಿದರು. ವಾಸುಕಿಯಾದರೂ ಸ್ವಲ್ಪ ಹೊತ್ತು ಯೋಚಿಸಿ ಆ ಭುಜಂಗರಿಗೆ ಹೇಳಿದನು:
01033030a ನೈಷಾ ವೋ ನೈಷ್ಟಿಕೀ ಬುದ್ಧಿರ್ಮತಾ ಕರ್ತುಂ ಭುಜಂಗಮಾಃ।
01033030c ಸರ್ವೇಷಾಮೇವ ಮೇ ಬುದ್ಧಿಃ ಪನ್ನಗಾನಾಂ ನ ರೋಚತೇ।।
“ಭುಜಂಗಮರೇ! ನಿಮ್ಮ ಅಂತಿಮ ಸಲಹೆಯು ಕಾರ್ಯಗತಗೊಳಿಸಲು ಯೋಗ್ಯವಾದುದಲ್ಲ. ಪನ್ನಗಗಳಲ್ಲಿ ಯಾರ ಉಪಾಯವೂ ನನಗೆ ಇಷ್ಟವಾಗಲಿಲ್ಲ.
01033031a ಕಿಂ ತ್ವತ್ರ ಸಂವಿಧಾತವ್ಯಂ ಭವತಾಂ ಯದ್ಭವೇದ್ಧಿತಂ।
01033031c ಅನೇನಾಹಂ ಭೃಶಂ ತಪ್ಯೇ ಗುಣದೋಷೌ ಮದಾಶ್ರಯೌ।।
ನಿಮ್ಮೆಲ್ಲರ ಒಳಿತಿಗಾಗಿ ಈಗ ಮಾಡಲಿಕ್ಕಾದರೂ ಏನಿದೆ? ಇದೇ ನನ್ನನ್ನು ಚಿಂತೆಗೊಳಪಡಿಸುತ್ತಿದೆ. ಉಳ್ಳೆಯದಾದರೂ ನನ್ನದೇ ಕೆಟ್ಟದ್ದಾದರೂ ನನ್ನದೇ.””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಆಸ್ತೀಕಪರ್ವಣಿ ವಾಸುಕ್ಯಾದಿಮಂತ್ರಣೋ ನಾಮ ತ್ರಯಸ್ತ್ರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಆಸ್ತೀಕಪರ್ವದಲ್ಲಿ ವಾಸುಕ್ಯಾದಿಮಂತ್ರಣ ಎನ್ನುವ ಮೂವತ್ತ್ಮೂರನೆಯ ಅಧ್ಯಾಯವು.