ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಆಸ್ತೀಕ ಪರ್ವ
ಅಧ್ಯಾಯ 32
ಸಾರ
ಶೇಷನು ತಾಯಿಯನ್ನು ತೊರೆದು ತಪಸ್ಸು ಮಾಡಿದುದು (1-5). ಬ್ರಹ್ಮನಿಂದ ವರದಾನ (6-25).01032001 ಶೌನಕ ಉವಾಚ।
01032001a ಜಾತಾ ವೈ ಭುಜಗಾಸ್ತಾತ ವೀರ್ಯವಂತೋ ದುರಾಸದಾಃ।
01032001c ಶಾಪಂ ತಂ ತ್ವಥ ವಿಜ್ಞಾಯ ಕೃತವಂತೋ ನು ಕಿಂ ಪರಂ।।
ಶೌನಕನು ಹೇಳಿದನು: “ವೀರ್ಯವಂತ ದುರಾಸದ ನಾಗಗಳ ಕುರಿತು ತಿಳಿದುಕೊಂಡೆವು. ಶಾಪವನ್ನು ತಿಳಿದ ನಂತರ ಅವರು ಏನು ಮಾಡಿದರು?”
01032002 ಸೂತ ಉವಾಚ।
01032002a ತೇಷಾಂ ತು ಭಗವಾನ್ ಶೇಷಸ್ತ್ಯಕ್ತ್ವಾ ಕದ್ರೂಂ ಮಹಾಯಶಾಃ।
01032002c ತಪೋ ವಿಪುಲಮಾತಸ್ಥೇ ವಾಯುಭಕ್ಷೋ ಯತವ್ರತಃ।।
ಸೂತನು ಹೇಳಿದನು: “ಮಹಾಯಶ ಭಗವಾನ್ ಶೇಷನು ಕದ್ರುವನ್ನು ತೊರೆದು ಯತವ್ರತನಾಗಿ, ಗಾಳಿಯನ್ನು ಮಾತ್ರ ಸೇವಿಸುತ್ತಾ ವಿಪುಲ ತಪಸ್ಸನ್ನು ಕೈಗೊಂಡನು.
01032003a ಗಂಧಮಾದನಮಾಸಾದ್ಯ ಬದರ್ಯಾಂ ಚ ತಪೋರತಃ।
01032003c ಗೋಕರ್ಣೇ ಪುಷ್ಕರಾರಣ್ಯೇ ತಥಾ ಹಿಮವತಸ್ತಟೇ।।
ಗಂಧಮಾದನ, ಬದರಿ, ಗೋಕರ್ಣ, ಮತ್ತು ಪುಷ್ಕರಗಳ ಅರಣ್ಯಗಳಲ್ಲಿ ಮತ್ತು ಹಿಮತ್ ಪರ್ವತದಲ್ಲಿ ತಪಸ್ಸು ಮಾಡಿದನು.
01032004a ತೇಷು ತೇಷು ಚ ಪುಣ್ಯೇಷು ತೀರ್ಥೇಷ್ವಾಯತನೇಷು ಚ।
01032004c ಏಕಾಂತಶೀಲೀ ನಿಯತಃ ಸತತಂ ವಿಜಿತೇಂದ್ರಿಯಃ।।
ಈ ಎಲ್ಲ ಪುಣ್ಯ ತೀರ್ಥ-ಆಯತನಗಳಲ್ಲಿ ಏಕಾಂತಶೀಲನೂ, ನಿಯತವ್ರತನೂ, ಸತತ ಜಿತೇಂದ್ರಿಯನೂ ಆಗಿದ್ದನು.
01032005a ತಪ್ಯಮಾನಂ ತಪೋ ಘೋರಂ ತಂ ದದರ್ಶ ಪಿತಾಮಹಃ।
01032005c ಪರಿಶುಷ್ಕಮಾಂಸತ್ವಕ್ಸ್ನಾಯುಂ ಜಟಾಚೀರಧರಂ ಪ್ರಭುಂ।।
ಜಟೆ ಕಟ್ಟಿ ಹರುಕು ಬಟ್ಟೆಯನ್ನು ಧರಿಸಿ, ಚರ್ಮ-ಮಾಂಸಗಳು ಒಣಗಿಹೋಗಿ, ಘೋರ ತಪಸ್ಸನ್ನು ತಪಿಸುತ್ತಿರುವ ಆ ಪ್ರಭುವನ್ನು ಪಿತಾಮಹನು ನೋಡಿದನು.
01032006a ತಮಬ್ರವೀತ್ಸತ್ಯಧೃತಿಂ ತಪ್ಯಮಾನಂ ಪಿತಾಮಹಃ।
01032006c ಕಿಮಿದಂ ಕುರುಷೇ ಶೇಷ ಪ್ರಜಾನಾಂ ಸ್ವಸ್ತಿ ವೈ ಕುರು।।
ತಪಿಸುತ್ತಿರುವ ಸತ್ಯಧೃತಿಗೆ ಪಿತಾಮಹನು ಹೇಳಿದನು: “ಶೇಷ! ಇದೇನು ಮಾಡುತ್ತಿದ್ದೀಯೆ? ಲೋಕಕ್ಕೆ ಒಳಿತನ್ನು ಮಾಡು.
01032007a ತ್ವಂ ಹಿ ತೀವ್ರೇಣ ತಪಸಾ ಪ್ರಜಾಸ್ತಾಪಯಸೇಽನಘ।
01032007c ಬ್ರೂಹಿ ಕಾಮಂ ಚ ಮೇ ಶೇಷ ಯತ್ತೇ ಹೃದಿ ಚಿರಂ ಸ್ಥಿತಂ।।
ಅನಘ! ನಿನ್ನ ಈ ತೀವ್ರ ತಪಸ್ಸಿನಿಂದ ಲೋಕಗಳು ಸುಡುತ್ತಿವೆ. ಶೇಷ! ನಿನ್ನ ಹೃದಯದಲ್ಲಿರುವ ಬಯಕೆಯನ್ನು ನನಗೆ ಹೇಳು.”
01032008 ಶೇಷ ಉವಾಚ।
01032008a ಸೋದರ್ಯಾ ಮಮ ಸರ್ವೇ ಹಿ ಭ್ರಾತರೋ ಮಂದಚೇತಸಃ।
01032008c ಸಹ ತೈರ್ನೋತ್ಸಹೇ ವಸ್ತುಂ ತದ್ಭವಾನನುಮನ್ಯತಾಂ।।
ಶೇಷನು ಹೇಳಿದನು: “ನನ್ನ ಸಹೋದರರೆಲ್ಲರೂ ಮಂದಚೇತಸರು. ನನಗೆ ಅವರೊಡನೆ ವಾಸಿಸುವುದು ಬೇಡ. ಭಗವನ್! ಇದನ್ನೇ ನನಗೆ ಕರುಣಿಸು.
01032009a ಅಭ್ಯಸೂಯಂತಿ ಸತತಂ ಪರಸ್ಪರಮಮಿತ್ರವತ್।
01032009c ತತೋಽಹಂ ತಪ ಆತಿಷ್ಠೇ ನೈತಾನ್ಪಶ್ಯೇಯಮಿತ್ಯುತ।।
ಅವರು ಪರಸ್ಪರರಲ್ಲಿ ಸದಾ ಅಸೂಯೆ ಮತ್ತು ಶತ್ರುತ್ವದಲ್ಲಿಯೇ ನಿರತರಾಗಿದ್ದಾರೆ. ಆದುದರಿಂದಲೇ ನಾನು ತಪಸ್ಸನ್ನು ಕೈಗೊಂಡೆನು. ಅವರನ್ನು ನೋಡುವುದೂ ಬೇಡವಾಗಿದೆ.
01032010a ನ ಮರ್ಷಯಂತಿ ಸತತಂ ವಿನತಾಂ ಸಸುತಾಂ ಚ ತೇ।
01032010c ಅಸ್ಮಾಕಂ ಚಾಪರೋ ಭ್ರಾತಾ ವೈನತೇಯಃ ಪಿತಾಮಹ।।
ಪಿತಾಮಹ! ವಿನತೆ ಮತ್ತು ಅವಳ ಮಗ, ನಮ್ಮ ತಮ್ಮ, ವೈನತೇಯರಿಗೆ ಅವರು ಸದಾ ಕಷ್ಟಗಳನ್ನು ಕೊಡುತ್ತಿದ್ದಾರೆ.
01032011a ತಂ ಚ ದ್ವಿಷಂತಿ ತೇಽತ್ಯರ್ಥಂ ಸ ಚಾಪಿ ಸುಮಹಾಬಲಃ।
01032011c ವರಪ್ರದಾನಾತ್ಸ ಪಿತುಃ ಕಶ್ಯಪಸ್ಯ ಮಹಾತ್ಮನಃ।।
ತಂದೆ ಮಹಾತ್ಮ ಕಶ್ಯಪನ ವರದಾನದಿಂದ ಮಹಾಬಲನಾದ ಅವನನ್ನು ದ್ವೇಷಿಸುತ್ತಾ ಬಂದಿದ್ದಾರೆ.
01032012a ಸೋಽಹಂ ತಪಃ ಸಮಾಸ್ಥಾಯ ಮೋಕ್ಷ್ಯಾಮೀದಂ ಕಲೇವರಂ।
01032012c ಕಥಂ ಮೇ ಪ್ರೇತ್ಯಭಾವೇಽಪಿ ನ ತೈಃ ಸ್ಯಾತ್ಸಹ ಸಂಗಮಃ।।
ದೇಹದಿಂದ ಮುಕ್ತಿಯನ್ನು ಪಡೆಯಲೋಸುಗವೇ ನಾನು ಈ ತಪಸ್ಸನ್ನು ಮಾಡುತ್ತಿರುವೆನು. ಯಾವ ಕಾರಣದಿಂದಲೂ ನಾನು ಅವರೊಂದಿಗೆ ಜೀವಿಸಲು ಬಯಸುವುದಿಲ್ಲ.”
01032013 ಬ್ರಹ್ಮೋವಾಚ।
01032013a ಜಾನಾಮಿ ಶೇಷ ಸರ್ವೇಷಾಂ ಭ್ರಾತೄಣಾಂ ತೇ ವಿಚೇಷ್ಟಿತಂ।
01032013c ಮಾತುಶ್ಚಾಪ್ಯಪರಾಧಾದ್ವೈ ಭ್ರಾತೄಣಾಂ ತೇ ಮಹದ್ಭಯಂ।।
ಬ್ರಹ್ಮನು ಹೇಳಿದನು: “ಶೇಷ! ನಿನ್ನ ಸಹೋದರರ ಕುರಿತು ಎಲ್ಲವನ್ನೂ ನಾನು ತಿಳಿದಿದ್ದೇನೆ. ಅಪರಾಧಗೈದು ತಾಯಿಯಿಂದ ಪಡೆದ ಶಾಪದಿಂದ ನಿನ್ನ ಸಹೋದರರಲ್ಲಿ ಮಹಾಭಯವಿದೆ.
01032014a ಕೃತೋಽತ್ರ ಪರಿಹಾರಶ್ಚ ಪೂರ್ವಮೇವ ಭುಜಂಗಮ।
01032014c ಭ್ರಾತೄಣಾಂ ತವ ಸರ್ವೇಷಾಂ ನ ಶೋಕಂ ಕರ್ತುಮರ್ಹಸಿ।।
ಭುಜಂಗಮ! ಪೂರ್ವದಲ್ಲಿಯೇ ನಾನು ಇದಕ್ಕೆ ಪರಿಹಾರವನ್ನು ಮಾಡಿದ್ದೇನೆ. ನಿನ್ನ ಸಹೋದರರೆಲ್ಲರ ಸಲುವಾಗಿ ನೀನು ಶೋಕಿಸ ಬೇಡ.
01032015a ವೃಣೀಷ್ವ ಚ ವರಂ ಮತ್ತಃ ಶೇಷ ಯತ್ತೇಽಭಿಕಾಂಕ್ಷಿತಂ।
01032015c ದಿತ್ಸಾಮಿ ಹಿ ವರಂ ತೇಽದ್ಯ ಪ್ರೀತಿರ್ಮೇ ಪರಮಾ ತ್ವಯಿ।।
ಶೇಷ! ನಿನಗಿಷ್ಟವಾದ ಯಾವ ವರವನ್ನಾದರೂ ಕೇಳು. ನಿನ್ನಿಂದ ಪರಮ ಪ್ರೀತನಾದ ನಾನು ಇಂದು ನಿನಗೆ ವರವನ್ನು ಕೊಡುತ್ತೇನೆ.
01032016a ದಿಷ್ಟ್ಯಾ ಚ ಬುದ್ಧಿರ್ಧರ್ಮೇ ತೇ ನಿವಿಷ್ಟಾ ಪನ್ನಗೋತ್ತಮ।
01032016c ಅತೋ ಭೂಯಶ್ಚ ತೇ ಬುದ್ಧಿರ್ಧರ್ಮೇ ಭವತು ಸುಸ್ಥಿರಾ।।
ಪನ್ನಗೋತ್ತಮ! ನಿನ್ನ ಬುದ್ಧಿಯು ಧರ್ಮದಲ್ಲಿ ನಿರತವಾಗಿರುವುದನ್ನು ಗಮನಿಸಿದ್ದೇನೆ. ನಿನ್ನ ಬುದ್ಧಿಯು ಧರ್ಮದಲ್ಲಿ ಇನ್ನೂ ಸುಸ್ಥಿರವಾಗಿರಲಿ.”
01032017 ಶೇಷ ಉವಾಚ।
01032017a ಏಷ ಏವ ವರೋ ಮೇಽದ್ಯ ಕಾಂಕ್ಷಿತಃ ಪ್ರಪಿತಾಮಹ।
01032017c ಧರ್ಮೇ ಮೇ ರಮತಾಂ ಬುದ್ಧಿಃ ಶಮೇ ತಪಸಿ ಚೇಶ್ವರ।।
ಶೇಷನು ಹೇಳಿದನು: “ಪ್ರಪಿತಾಮಹ! ಈಶ್ವರ, ಧರ್ಮ ಮತ್ತು ತಪಸ್ಸಿನಲ್ಲಿ ನನ್ನ ಬುದ್ಧಿಯು ರಮಿಸುತ್ತಿರಲಿ. ಇದೇ ನನ್ನ ಬಯಕೆಯ ವರ.”
01032018 ಬ್ರಹ್ಮೋವಾಚ।
01032018a ಪ್ರೀತೋಽಸ್ಮ್ಯನೇನ ತೇ ಶೇಷ ದಮೇನ ಪ್ರಶಮೇನ ಚ।
01032018c ತ್ವಯಾ ತ್ವಿದಂ ವಚಃ ಕಾರ್ಯಂ ಮನ್ನಿಯೋಗಾತ್ಪ್ರಜಾಹಿತಂ।।
ಬ್ರಹ್ಮನು ಹೇಳಿದನು: “ಶೇಷ! ನಿನ್ನ ಈ ದಮ ಮತ್ತು ಪ್ರಶಮನಗಳಿಂದ ಪ್ರೀತನಾಗಿದ್ದೇನೆ. ಪ್ರಜಾಹಿತಕ್ಕೋಸ್ಕರ ನನ್ನ ನಿಯೋಗದಂತೆ ನಾನು ಹೇಳುವ ಈ ಕಾರ್ಯವೂ ನಿನ್ನಿಂದ ಆಗಲಿ.
01032019a ಇಮಾಂ ಮಹೀಂ ಶೈಲವನೋಪಪನ್ನಾಂ ಸಸಾಗರಾಂ ಸಾಕರಪತ್ತನಾಂ ಚ।
01032019c ತ್ವಂ ಶೇಷ ಸಮ್ಯಕ್ಚಲಿತಾಂ ಯಥಾವತ್ ಸಂಗೃಹ್ಯ ತಿಷ್ಠಸ್ವ ಯಥಾಚಲಾ ಸ್ಯಾತ್।।
ಶೇಷ! ಪರ್ವತ, ಕಣಿವೆ, ಸಾಗರ, ಪಟ್ಟಣಗಳನ್ನು ಹೊತ್ತು ಓಲಾಡುತ್ತಿರುವ ಈ ಮಹಿಯು ಅಚಲವಾಗಿರುವಂತೆ ನೀನು ಅವಳನ್ನು ಸರಿಯಾಗಿ ಹೊತ್ತಿ ನಿಲ್ಲು.”
01032020 ಶೇಷ ಉವಾಚ।
01032020a ಯಥಾಹ ದೇವೋ ವರದಃ ಪ್ರಜಾಪತಿಃ ಮಹೀಪತಿರ್ಭೂತಪತಿರ್ಜಗತ್ಪತಿಃ।
01032020c ತಥಾ ಮಹೀಂ ಧಾರಯಿತಾಸ್ಮಿ ನಿಶ್ಚಲಾಂ ಪ್ರಯಚ್ಛ ತಾಂ ಮೇ ಶಿರಸಿ ಪ್ರಜಾಪತೇ।।
ಶೇಷನು ಹೇಳಿದನು: “ದೇವ! ವರದ! ಪ್ರಜಾಪತಿ! ಮಹೀಪತಿ! ಭೂತಪತಿ! ಜಗತ್ಪತಿ! ಪ್ರಜಾಪತಿ! ನಿನ್ನ ಹೇಳಿಕೆಯಂತೆ ಈ ಮಹಿಯನ್ನು ನಿಶ್ಚಲವಾಗಿ ನನ್ನ ಶಿರದಮೇಲೆ ಹೊರುತ್ತೇನೆ.”
01032021 ಬ್ರಹ್ಮೋವಾಚ।
01032021a ಅಧೋ ಮಹೀಂ ಗಚ್ಛ ಭುಜಂಗಮೋತ್ತಮ ಸ್ವಯಂ ತವೈಷಾ ವಿವರಂ ಪ್ರದಾಸ್ಯತಿ।
01032021c ಇಮಾಂ ಧರಾಂ ಧಾರಯತಾ ತ್ವಯಾ ಹಿ ಮೇ ಮಹತ್ಪ್ರಿಯಂ ಶೇಷ ಕೃತಂ ಭವಿಷ್ಯತಿ।।
ಬ್ರಹ್ಮನು ಹೇಳಿದನು: “ಭುಜಂಗಮೋತ್ತಮ ಶೇಷ! ಮಹಿಯ ಅಡಿಯಲ್ಲಿ ಹೋಗು. ನಿನಗೆ ಅವಳೇ ದಾರಿಯನ್ನು ಮಾಡಿಕೊಡುವಳು. ಈ ಭೂಮಿಯನ್ನು ನೀನು ಹೊರುವುದರಿಂದ ನನಗೆ ಮಹಾ ಪ್ರಿಯವಾದುದನ್ನು ಮಾಡಿದಹಾಗೆ ಆಗುತ್ತದೆ.””
01032022 ಸೂತ ಉವಾಚ।
01032022a ತಥೇತಿ ಕೃತ್ವಾ ವಿವರಂ ಪ್ರವಿಶ್ಯ ಸ ಪ್ರಭುರ್ಭುವೋ ಭುಜಗವರಾಗ್ರಜಃ ಸ್ಥಿತಃ।
01032022c ಬಿಭರ್ತಿ ದೇವೀಂ ಶಿರಸಾ ಮಹೀಂ ಇಮಾಂ ಸಮುದ್ರನೇಮಿಂ ಪರಿಗೃಹ್ಯ ಸರ್ವತಃ।।
ಸೂತನು ಹೇಳಿದನು: “ನಾಗಗಳ ಅಗ್ರಜ ಆ ಪ್ರಭುವು “ಹಾಗೆಯೇ ಆಗಲಿ” ಎಂದು ಹೇಳಿ, ದರವನ್ನು ಪ್ರವೇಶಿಸಿ, ಮಹೀದೇವಿಯನ್ನು ಶಿರದ ಮೇಲೆ ಹೊತ್ತು ಈ ಸಮುದ್ರನೇಮಿಯನ್ನು ಪರಿಗ್ರಹಿಸಿದನು.”
01032023 ಬ್ರಹ್ಮೋವಾಚ।
01032023a ಶೇಷೋಽಸಿ ನಾಗೋತ್ತಮ ಧರ್ಮದೇವೋ ಮಹೀಮಿಮಾಂ ಧಾರಯಸೇ ಯದೇಕಃ।
01032023c ಅನಂತಭೋಗಃ ಪರಿಗೃಹ್ಯ ಸರ್ವಾಂ ಯಥಾಹಮೇವಂ ಬಲಭಿದ್ಯಥಾ ವಾ।।
ಬ್ರಹ್ಮನು ಹೇಳಿದನು: “ಶೇಷ! ಒಬ್ಬನೇ ಈ ಮಹಿಯನ್ನು ಧಾರಣಮಾಡಿದ ನೀನು ನಾಗಗಳಲ್ಲೆಲ್ಲಾ ಉತ್ತಮನೂ ಧರ್ಮದೇವನೂ ಆಗಿದ್ದೀಯೆ. ಇಂದ್ರ ಮತ್ತು ನಾನು ಮಾತ್ರ ಈ ಮಹಿಯನ್ನು ಹೊರಬಲ್ಲೆವು.””
01032024 ಸೂತ ಉವಾಚ।
01032024a ಅಧೋ ಭೂಮೇರ್ವಸತ್ಯೇವಂ ನಾಗೋಽನಂತಃ ಪ್ರತಾಪವಾನ್।
01032024c ಧಾರಯನ್ವಸುಧಾಮೇಕಃ ಶಾಸನಾದ್ಬ್ರಹ್ಮಣೋ ವಿಭುಃ।।
ಸೂತನು ಹೇಳಿದನು: “ಈ ರೀತಿ ವಿಭು ಬ್ರಹ್ಮನ ಶಾಸನದಂತೆ ಪ್ರತಾಪಿ ನಾಗ ಅನಂತನು ಭೂಮಿಯ ಅಡಿಯಲ್ಲಿ ವಾಸಿಸುತ್ತಾ ಒಬ್ಬನೇ ಈ ವಸುಧೆಯನ್ನು ಹೊತ್ತಿದ್ದಾನೆ.
01032025a ಸುಪರ್ಣಂ ಚ ಸಖಾಯಂ ವೈ ಭಗವಾನಮರೋತ್ತಮಃ।
01032025c ಪ್ರಾದಾದನಂತಾಯ ತದಾ ವೈನತೇಯಂ ಪಿತಾಮಹಃ।।
ಭಗವಾನ್ ಅಮರೋತ್ತಮ ಪಿತಾಮಹನು ವೈನತೇಯ ಸುಪರ್ಣನನ್ನು ಅನಂತನ ಸಖನಾಗಿ ನಿಯೋಜಿಸಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಆಸ್ತೀಕಪರ್ವಣಿ ಶೇಷವೃತ್ತಕಥನೋ ನಾಮ ದ್ವಾತ್ರಿಂಶೋಽಧ್ಯಾ ಯಃ।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಆಸ್ತೀಕಪರ್ವದಲ್ಲಿ ಶೇಷವೃತ್ತಕಥನ ಎನ್ನುವ ಮೂವತ್ತೆರಡನೇ ಅಧ್ಯಾಯವು.