030 ಸುಪರ್ಣಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಆಸ್ತೀಕ ಪರ್ವ

ಅಧ್ಯಾಯ 30

ಸಾರ

ಗರುಡನು ಇಂದ್ರನ ಮಿತ್ರತ್ವವನ್ನು ಸ್ವೀಕರಿಸಿದುದು (1-5). ಗರುಡನಿಗೆ ಇಂದ್ರನ ವರದಾನ (6-10). ಗರುಡನು ಅಮೃತವನ್ನು ಸರ್ಪಗಳಿಗೆ ಒಪ್ಪಿಸುವುದು, ಇಂದ್ರನು ಅದನ್ನು ಅಪಹರಿಸುವುದು (11-22).

01030001 ಗರುಡ ಉವಾಚ।
01030001a ಸಖ್ಯಂ ಮೇಽಸ್ತು ತ್ವಯಾ ದೇವ ಯಥೇಚ್ಛಸಿ ಪುರಂದರ।
01030001c ಬಲಂ ತು ಮಮ ಜಾನೀಹಿ ಮಹಚ್ಚಾಸಹ್ಯಮೇವ ಚ।।

ಗರುಡನು ಹೇಳಿದನು: “ಪುರಂದರ! ನಿನ್ನ ಬಯಕೆಯಂತೆ ನಮ್ಮೀರ್ವರಲ್ಲಿ ಸಖ್ಯವಿರಲಿ. ನನ್ನ ಬಲವು ಮಹತ್ತರ ಮತ್ತು ಅಸಹನೀಯ ಎಂದು ತಿಳಿ.

01030002a ಕಾಮಂ ನೈತತ್ಪ್ರಶಂಸಂತಿ ಸಂತಃ ಸ್ವಬಲಸಂಸ್ತವಂ।
01030002c ಗುಣಸಂಕೀರ್ತನಂ ಚಾಪಿ ಸ್ವಯಮೇವ ಶತಕ್ರತೋ।।

ಶತಕ್ರತು! ತನ್ನನ್ನು ತಾನೇ ಹೊಗಳಿಕೊಳ್ಳುವುದನ್ನು ಮತ್ತು ತನ್ನ ಬಲವನ್ನು ತಾನೇ ಪ್ರಶಂಸೆ ಮಾಡುವುದನ್ನು ಸಂತರು ಒಪ್ಪಿಕೊಳ್ಳುವುದಿಲ್ಲ.

01030003a ಸಖೇತಿ ಕೃತ್ವಾ ತು ಸಖೇ ಪೃಷ್ಟೋ ವಕ್ಷ್ಯಾಮ್ಯಹಂ ತ್ವಯಾ।
01030003c ನ ಹ್ಯಾತ್ಮಸ್ತವಸಮ್ಯುಕ್ತಂ ವಕ್ತವ್ಯಮನಿಮಿತ್ತತಃ।।

ಸಖ! ನಾವೀರ್ವರೂ ಈಗ ಸ್ನೇಹಿತರಾದುದರಿಂದ ನೀನು ಕೇಳಿದೆಯೆಂದು ಸ್ವ ಸ್ತುತಿಯು ಒಳ್ಳೆಯದಲ್ಲದಿದ್ದರೂ ಹೇಳುತ್ತಿದ್ದೇನೆ.

01030004a ಸಪರ್ವತವನಾಮುರ್ವೀಂ ಸಸಾಗರವನಾಮಿಮಾಂ।
01030004c ಪಕ್ಷನಾಡ್ಯೈಕಯಾ ಶಕ್ರ ತ್ವಾಂ ಚೈವಾತ್ರಾವಲಂಬಿನಂ।।

ಶಕ್ರ! ನಾನು ಪರ್ವತ, ಸಮುದ್ರ, ವನ ಮತ್ತು ನಿನ್ನನ್ನೂ ಸೇರಿ ಈ ಭೂಮಿಯನ್ನು ನನ್ನ ರೆಕ್ಕೆಯ ಒಂದು ಪುಕ್ಕದ ಮೇಲೆ ಹೊರಬಲ್ಲೆ.

01030005a ಸರ್ವಾನ್ಸಂಪಿಂಡಿತಾನ್ವಾಪಿ ಲೋಕಾನ್ಸಸ್ಥಾಣುಜಂಗಮಾನ್।
01030005c ವಹೇಯಮಪರಿಶ್ರಾಂತೋ ವಿದ್ಧೀದಂ ಮೇ ಮಹದ್ಬಲಂ।।

ಸರ್ವ ಲೋಕಗಳನ್ನೂ ಅವುಗಳಲ್ಲಿರುವ ಸ್ಥಾಣು ಜಂಗಮಗಳನ್ನೂ ಸೇರಿ ಆಯಾಸವಿಲ್ಲದೇ ಹೊರಬಲ್ಲೆ. ಇದು ನನ್ನ ಮಹಾ ಬಲವೆಂದು ತಿಳಿ.””

01030006 ಸೂತ ಉವಾಚ।
01030006a ಇತ್ಯುಕ್ತವಚನಂ ವೀರಂ ಕಿರಿಟೀ ಶ್ರೀಮತಾಂ ವರಃ।
01030006c ಆಹ ಶೌನಕ ದೇವೇಂದ್ರಃ ಸರ್ವಭೂತಹಿತಃ ಪ್ರಭುಃ।।

ಸೂತನು ಹೇಳಿದನು: “ಶೌನಕ! ವೀರನ ಈ ಮಾತುಗಳಿಗೆ ಶ್ರೀಮಂತ ಶ್ರೇಷ್ಠ ವೀರ ಕಿರೀಟೀ ಸರ್ವಭೂತಹಿತ ಪ್ರಭು ದೇವೇಂದ್ರನು ಉತ್ತರಿಸಿದನು:

01030007a ಪ್ರತಿಗೃಹ್ಯತಾಮಿದಾನೀಂ ಮೇ ಸಖ್ಯಮಾನಂತ್ಯಮುತ್ತಮಂ।
01030007c ನ ಕಾರ್ಯಂ ತವ ಸೋಮೇನ ಮಮ ಸೋಮಃ ಪ್ರದೀಯತಾಂ।
01030007e ಅಸ್ಮಾಂಸ್ತೇ ಹಿ ಪ್ರಬಾಧೇಯುರ್ಯೇಭ್ಯೋ ದದ್ಯಾದ್ಭವಾನಿಮಂ।।

“ನಿರಂತರವೂ ಉತ್ತಮವೂ ಆದ ನನ್ನ ಈ ಸಖ್ಯವನ್ನು ಪ್ರತಿಗ್ರಹಿಸು. ನಿನಗೆ ಸೋಮವು ಯಾವ ಪ್ರಯೋಜನಕ್ಕೂ ಬಾರದಿದ್ದರೆ ಸೋಮವನ್ನು ನನಗೆ ಹಿಂದಿರುಗಿಸು. ನೀನು ಇದನ್ನು ಯಾರಿಗೆ ಕೊಡುತ್ತೀಯೋ ಅವರು ನಮ್ಮ ಜೊತೆ ಯಾವಾಗಲೂ ಹೊಡೆದಾಡುತ್ತಾರೆ.”

01030008 ಗರುಡ ಉವಾಚ।
01030008a ಕಿಂಚಿತ್ಕಾರಣಮುದ್ದಿಶ್ಯ ಸೋಮೋಽಯಂ ನೀಯತೇ ಮಯಾ।
01030008c ನ ದಾಸ್ಯಾಮಿ ಸಮಾದಾತುಂ ಸೋಮಂ ಕಸ್ಮೈ ಚಿದಪ್ಯಹಂ।।

ಗರುಡನು ಹೇಳಿದನು: “ಯಾವುದೋ ಒಂದು ಉದ್ದೇಶದಿಂದ ನಾನು ಈ ಸೋಮವನ್ನು ಒಯ್ಯುತ್ತಿದ್ದೇನೆ. ಈ ಸೋಮವನ್ನು ನಾನು ಯಾರಿಗೂ ಕುಡಿಯಲು ಕೊಡುವುದಿಲ್ಲ.

01030009a ಯತ್ರೇಮಂ ತು ಸಹಸ್ರಾಕ್ಷ ನಿಕ್ಷಿಪೇಯಮಹಂ ಸ್ವಯಂ।
01030009c ತ್ವಮಾದಾಯ ತತಸ್ತೂರ್ಣಂ ಹರೇಥಾಸ್ತ್ರಿದಶೇಶ್ವರ।।

ಸಹಸ್ರಾಕ್ಷ! ತ್ರಿದಶೇಶ್ವರ! ನಾನು ಇದನ್ನು ಕೆಳಗೆ ಇಟ್ಟಕೂಡಲೇ ಅದನ್ನು ನೀನು ಸ್ವತಃ ಅಪಹರಿಸಿ ತೆಗೆದುಕೊಂಡು ಹೋಗು.”

01030010 ಶಕ್ರ ಉವಾಚ।
01030010a ವಾಕ್ಯೇನಾನೇನ ತುಷ್ಟೋಽಹಂ ಯತ್ತ್ವಯೋಕ್ತಮಿಹಾಂಡಜ।
01030010c ಯದಿಚ್ಛಸಿ ವರಂ ಮತ್ತಸ್ತದ್ಗೃಹಾಣ ಖಗೋತ್ತಮ।।

ಶಕ್ರನು ಹೇಳಿದನು: “ಅಂಡಜ! ನಿನ್ನ ಈ ಮಾತುಗಳಿಂದ ನಾನು ಸಂತುಷ್ಟನಾಗಿದ್ದೇನೆ. ಖಗೋತ್ತಮ! ನನ್ನಿಂದ ನಿನಗಿಷ್ಟವಾದ ವರವನ್ನು ಪಡೆದುಕೋ.””

01030011 ಸೂತ ಉವಾಚ।
01030011a ಇತ್ಯುಕ್ತಃ ಪ್ರತ್ಯುವಾಚೇದಂ ಕದ್ರೂಪುತ್ರಾನನುಸ್ಮರನ್।
01030011c ಸ್ಮೃತ್ವಾ ಚೈವೋಪಧಿಕೃತಂ ಮಾತುರ್ದಾಸ್ಯನಿಮಿತ್ತತಃ।।

ಸೂತನು ಹೇಳಿದನು: “ಈ ರೀತಿ ಕೇಳಲ್ಪಟ್ಟಾಗ ಅವನು ಕದ್ರುವಿನ ಮಕ್ಕಳನ್ನೂ ಮತ್ತು ಅವರ ಮೋಸದಿಂದ ತನ್ನ ತಾಯಿಗಾದ ದಾಸತ್ವವನ್ನೂ ನೆನೆಸಿಕೊಂಡು ಹೇಳಿದನು:

01030012a ಈಶೋಽಹಮಪಿ ಸರ್ವಸ್ಯ ಕರಿಷ್ಯಾಮಿ ತು ತೇಽರ್ಥಿತಾಂ।
01030012c ಭವೇಯುರ್ಭುಜಗಾಃ ಶಕ್ರ ಮಮ ಭಕ್ಷ್ಯಾ ಮಹಾಬಲಾಃ।।

“ಶಕ್ರ! ನಾನು ಎಲ್ಲವನ್ನು ಮಾಡಲು ಶಕ್ಯನಿದ್ದರೂ ನೀನು ಹೇಳಿದೆಯೆಂದು ಕೇಳುತ್ತಿದ್ದೇನೆ. ಮಹಾಬಲ ನಾಗಗಳು ನನ್ನ ಆಹಾರವಾಗಲಿ.”

01030013a ತಥೇತ್ಯುಕ್ತ್ವಾನ್ವಗಚ್ಛತ್ತಂ ತತೋ ದಾನವಸೂದನಃ।
01030013c ಹರಿಷ್ಯಾಮಿ ವಿನಿಕ್ಷಿಪ್ತಂ ಸೋಮಮಿತ್ಯನುಭಾಷ್ಯ ತಂ।।

“ಹಾಗೆಯೇ ಆಗಲಿ. ನೀನು ಸೋಮವನ್ನು ಕೆಳಗಿಟ್ಟಕೂಡಲೇ ನಾನು ಅಪಹರಿಸುತ್ತೇನೆ!”ಎಂದು ಹೇಳಿ ಆ ದಾನವ ಸೂದನನು ಹೊರಟುಹೋದನು.

01030014a ಆಜಗಾಮ ತತಸ್ತೂರ್ಣಂ ಸುಪರ್ಣೋ ಮಾತುರಂತಿಕಂ।
01030014c ಅಥ ಸರ್ಪಾನುವಾಚೇದಂ ಸರ್ವಾನ್ಪರಮಹೃಷ್ಟವತ್।।

ತಕ್ಷಣವೇ ಸುಪರ್ಣನು ವೇಗವಾಗಿ ತನ್ನ ತಾಯಿಯ ಬಳಿ ಬಂದು ಪರಮ ಹರ್ಷಿತನಾಗಿ ಸರ್ವ ಸರ್ಪಗಳಿಗೂ ಹೇಳಿದನು:

01030015a ಇದಮಾನೀತಮಮೃತಂ ನಿಕ್ಷೇಪ್ಸ್ಯಾಮಿ ಕುಶೇಷು ವಃ।
01030015c ಸ್ನಾತಾ ಮಂಗಲಸಮ್ಯುಕ್ತಾಸ್ತತಃ ಪ್ರಾಶ್ನೀತ ಪನ್ನಗಾಃ।।

“ಇಗೋ ನಾನು ಅಮೃತವನ್ನು ತಂದಿದ್ದೇನೆ. ಕುಶಗಳ ಮಧ್ಯೆ ಇಡುತ್ತಿದ್ದೇನೆ. ಪನ್ನಗಗಳೇ! ಮಂಗಳ ಸ್ನಾನವನ್ನು ಮಾಡಿ ಇದನ್ನು ಕುಡಿಯಿರಿ.

01030016a ಅದಾಸೀ ಚೈವ ಮಾತೇಯಮದ್ಯಪ್ರಭೃತಿ ಚಾಸ್ತು ಮೇ।
01030016c ಯಥೋಕ್ತಂ ಭವತಾಮೇತದ್ವಚೋ ಮೇ ಪ್ರತಿಪಾದಿತಂ।।

ನೀವು ನನಗೆ ಹೇಳಿದುದನ್ನು ನಾನು ಮಾಡಿದ್ದೇನೆ. ನೀವು ಮಾತುಕೊಟ್ಟಹಾಗೆ ಇಂದಿನಿಂದ ನನ್ನ ತಾಯಿಯು ಅದಾಸಿಯಾಗುತ್ತಾಳೆ.”

01030017a ತತಃ ಸ್ನಾತುಂ ಗತಾಃ ಸರ್ಪಾಃ ಪ್ರತ್ಯುಕ್ತ್ವಾ ತಂ ತಥೇತ್ಯುತ।
01030017c ಶಕ್ರೋಽಪ್ಯಮೃತಮಾಕ್ಷಿಪ್ಯ ಜಗಾಮ ತ್ರಿದಿವಂ ಪುನಃ।।

“ಹಾಗೆಯೇ ಆಗಲಿ!” ಎಂದು ಸರ್ಪಗಳು ಸ್ನಾನಕ್ಕೆಂದು ಹೋದವು. ಆಗ ಶಕ್ರನು ಅಮೃತವನ್ನು ಎತ್ತಿಕೊಂಡು ಪುನಃ ಸ್ವರ್ಗಕ್ಕೆ ಕೊಂಡೊಯ್ದನು.

01030018a ಅಥಾಗತಾಸ್ತಮುದ್ದೇಶಂ ಸರ್ಪಾಃ ಸೋಮಾರ್ಥಿನಸ್ತದಾ।
01030018c ಸ್ನಾತಾಶ್ಚ ಕೃತಜಪ್ಯಾಶ್ಚ ಪ್ರಹೃಷ್ಟಾಃ ಕೃತಮಂಗಲಾಃ।।

ಸ್ನಾನ, ಜಪ ಮತ್ತು ಮಂಗಲ ಕಾರ್ಯಗಳನ್ನು ಮುಗಿಸಿ ಪ್ರಹೃಷ್ಟರಾಗಿ ಸೋಮಾರ್ಥಿ ಸರ್ಪಗಳು ಆ ಸ್ಥಳಕ್ಕೆ ಹಿಂದಿರುಗಿದರು.

01030019a ತದ್ವಿಜ್ಞಾಯ ಹೃತಂ ಸರ್ಪಾಃ ಪ್ರತಿಮಾಯಾಕೃತಂ ಚ ತತ್।
01030019c ಸೋಮಸ್ಥಾನಮಿದಂ ಚೇತಿ ದರ್ಭಾಂಸ್ತೇ ಲಿಲಿಹುಸ್ತದಾ।।

ಸೋಮವನ್ನು ಇರಿಸಿದ್ದ ದರ್ಭೆಗಳು ಖಾಲಿಯಾಗಿದ್ದುದನ್ನು ಸರ್ಪಗಳು ಕಂಡು ಮೋಸದಿಂದ ಅದನ್ನು ಕೊಂಡೊಯ್ಯಲಾಗಿದೆ ಎಂದು ತಿಳಿದರು.

01030020a ತತೋ ದ್ವೈಧೀಕೃತಾ ಜಿಹ್ವಾ ಸರ್ಪಾಣಾಂ ತೇನ ಕರ್ಮಣಾ।
01030020c ಅಭವಂಶ್ಚಾಮೃತಸ್ಪರ್ಶಾದ್ದರ್ಭಾಸ್ತೇಽಥ ಪವಿತ್ರಿಣಃ।।

ಆಗ ಅವರು ಅಮೃತವನ್ನು ಇಟ್ಟಿದ್ದ ದರ್ಭೆಗಳನ್ನು ನೆಕ್ಕ ತೊಡಗಿದರು ಮತ್ತು ಇದರಿಂದ ಅವುಗಳ ನಾಲಿಗೆಗಳು ಸೀಳಿಹೋದವು. ಇದೇ ಕಾರಣದಿಂದಲೇ ದರ್ಭೆಗಳು ಪವಿತ್ರವೆನಿಸಿಕೊಂಡವು.

01030021a ತತಃ ಸುಪರ್ಣಃ ಪರಮಪ್ರಹೃಷ್ಟವಾನ್ ವಿಹೃತ್ಯ ಮಾತ್ರಾ ಸಹ ತತ್ರ ಕಾನನೇ।
01030021c ಭುಜಂಗಭಕ್ಷಃ ಪರಮಾರ್ಚಿತಃ ಖಗೈಃ ಅಹೀನಕೀರ್ತಿರ್ವಿನತಾಮನಂದಯತ್।।

ನಂತರ ಸುಪರ್ಣನು ಪರಮ ಹರ್ಷಿತನಾಗಿ ತನ್ನ ತಾಯಿಯೊಂದಿಗೆ ಆ ಕಾನನದಲ್ಲಿ ವಾಸಿಸಿದನು. ಸರ್ಪಗಳನ್ನು ಭಕ್ಷಿಸುವುದರ ಮೂಲಕ ಮತ್ತು ಇನ್ನೂ ಇತರ ಮಹಾಕಾರ್ಯಗಳನ್ನು ಎಸಗುವುದರ ಮೂಲಕ ಎಲ್ಲ ಪಕ್ಷಿಗಳಿಂದ ಪೂಜಿಸಲ್ಪಟ್ಟ ಗರುಡನು ತನ್ನ ತಾಯಿಯನ್ನು ಸಂತಸಗೊಳಿಸಿದನು.

01030022a ಇಮಾಂ ಕಥಾಂ ಯಃ ಶೃಣುಯಾನ್ನರಃ ಸದಾ ಪಥೇತ ವಾ ದ್ವಿಜಜನಮುಖ್ಯಸಂಸದಿ।
01030022c ಅಸಂಶಯಂ ತ್ರಿದಿವಮಿಯಾತ್ಸ ಪುಣ್ಯಭಾಗ್ ಮಹಾತ್ಮನಃ ಪತಗಪತೇಃ ಪ್ರಕೀರ್ತನಾತ್।।

ಈ ಕಥೆಯನ್ನು ಯಾವ ನರನು ಕೇಳುತ್ತಾನೋ ಅಥವಾ ಮುಖ್ಯ ದ್ವಿಜನರ ಸನ್ನಿದಿಯಲ್ಲಿ ಸದಾ ಓದುತ್ತಾನೋ ಅವನು ಗರುಡನ ಸಂಕೀರ್ತನೆಯಿಂದ ನಿಸ್ಸಂಶಯವಾಗಿ ಪುಣ್ಯವಂತನಾಗಿ ಸ್ವರ್ಗವನ್ನು ಸೇರುತ್ತಾನೆ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಆಸ್ತೀಕಪರ್ವಣಿ ಸುಪರ್ಣೇ ತ್ರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದ ಆದಿಪರ್ವದಲ್ಲಿ ಆಸ್ತೀಕಪರ್ವದಲ್ಲಿ ಸುಪರ್ಣದಲ್ಲಿ ಮೂವತ್ತನೆಯ ಅಧ್ಯಾಯವು.